ಸಾವಿನ ನಂತರವೂ ಆಕೆ ತನ್ನ ಡೈರಿಯಲ್ಲಿ ಬದುಕಿದ್ದಳು: ಹುಲ್ಲಾಗು ಬೆಟ್ಟದಡಿ (2)
ಅದು ಎರಡನೇ ಮಹಾಯುದ್ಧದ ಕಾಲ (ಸೆಪ್ಟೆಂಬರ್ 1, 1939 – ಸೆಪ್ಟೆಂಬರ್ 2, 1945). ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲ ಎರಡು ಗುಂಪುಗಳಾಗಿ ವಿಭಜಿಸಿಕೊಂಡು ಕಾದಾಡಿದ ಯುದ್ಧಕಾಂಡ. 30 ದೇಶಗಳ ಸುಮಾರು 100 ಮಿಲಿಯನ್ ಜನರು ಈ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದ್ದರು.
ಹಾಲೋಕಾಸ್ಟ್ ಎಂಬುದು ಎರಡನೇ ಮಹಾಯುದ್ಧದ ದಾರುಣ ಘಟನೆ. ಹಾಲೋಕಾಸ್ಟ್ ಎಂದರೆ ಸಾಮೂಹಿಕವಾಗಿ ಜನಗಳನ್ನು ಕೊಲ್ಲುವುದು!
ಜೆರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ಜೂನ್ 1929 ರಲ್ಲಿ ಹುಟ್ಟಿದ ಆನ್ ಫ್ರಾಂಕ್, ತನ್ನ ಬಹುಪಾಲು ಜೀವನವನ್ನು ನೆದರ್ಲಾಂಡಿನ ಆಂಸ್ಟರ್ಡ್ಯಾಮ್ ನಲ್ಲಿ ಕಳೆದಳು. ಯಹೂದಿ ಕುಟುಂಬದಲ್ಲಿ ಜನಿಸಿದ ಈಕೆ ಅಪ್ಪ, ಅಮ್ಮ ಮತ್ತು ಅಕ್ಕನೊಂದಿಗೆ ವಾಸಿಸುತ್ತಿದ್ದಳು. ಅಪ್ಪ ಒಟ್ಟೋ ನ ಪರಿಶ್ರಮದಿಂದ ಕುಟುಂಬದ ಪರಿಸ್ಥಿತಿ ಚೆನ್ನಾಗಿಯೇ ಇತ್ತು. ಒಟ್ಟೋ ತನ್ನದೇ ಆದ ಕಂಪನಿಯನ್ನು ತೆರೆದು ಹಲವರನ್ನು ಕೆಲಸಕ್ಕಿಟ್ಟುಕೊಂಡಿದ್ದ.
1940 ರಲ್ಲಿ ಜರ್ಮನಿ ನೆದರ್ಲ್ಯಾಂಡ್ ನ್ನು ಆಕ್ರಮಿಸಿಕೊಂಡಿತು. ಯಹೂದಿಗಳ ಪಾಲಿಗೆ ಅತ್ಯಂತ ಘೋರವಾದ ಪರಿಸ್ಥಿತಿ ನಿರ್ಮಾಣವಾಯಿತು. ಇವರಿಗೆಂದೇ ಕಠಿಣ ಕಾಯ್ದೆ ಕಾನೂನುಗಳನ್ನು ನಾಝಿಗಳು ಹೊರಡಿಸಿದರು. ಯಹೂದಿಗಳು ಸರಕಾರಿ ಸಾರಿಗೆಯನ್ನು ಉಪಯೋಗಿಸುವಂತಿರಲಿಲ್ಲ. ಎಲ್ಲರೊಂದಿಗೆ ಶಾಲೆಗೇ ಹೋಗುವಂತಿರಲಿಲ್ಲ. ತಮ್ಮದೇ ಶಾಲೆಯನ್ನು ತೆರೆದುಕೊಳ್ಳಬೇಕಾಯಿತು. ಇವರ ಒಡೆತನದ ಉದ್ಯಮಗಳನ್ನೆಲ್ಲ ವಶ ಪಡಿಸಿಕೊಳ್ಳಲು ಆರಂಭಿಸಿದರು. ಒಟ್ಟೋ ತನ್ನ ಕಂಪನಿಯನ್ನು ಮಾರಬೇಕಾಗಿ ಬಂತು. ಪೌರತ್ವವನ್ನು ಕಸಿದುಕೊಂಡು ಎಲ್ಲಿಯೂ ಹೋಗದಂತೆ ಬಂಧಿಸಿ ಬಿಟ್ಟರು.
ಈ ಮಹಾಯುದ್ಧದಲ್ಲಿ ಜೆರ್ಮನ್ ದೇಶ, ಜುಡೆನರಿಂ ಎಂದರೆ ಯಹೂದಿಗಳನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು, ಯಹೂದಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ನಾಮ ಮಾಡಬೇಕೆಂಬ ಆದೇಶ ಹೊರಡಿಸಿತು. ಹಾಲೋಕಾಸ್ಟ್ ಪರಿಣಾಮ ಪರಿಣಾಮ ಜೀವ ತೆತ್ತ ಯೆಹೂದಿಗಳ ಸಂಖ್ಯೆ 6ಮಿಲಿಯನ್ ಕ್ಕೂ ಹೆಚ್ಚು!!
ಈ ಹಾಲೊಕ್ಯಾಸ್ಟಿನಿಂದ ತಪ್ಪಿಸಿಕೊಳ್ಳಲು ಸತತ 2 ವರ್ಷಗಳ ಕಾಲ ಯಾರಿಗೂ ಕಾಣಿಸದಂತೆ ಅಡಗಿ ಕುಳಿತು, ತನ್ನ ಬೇಗುದಿಗಳನ್ನು ಡೈರಿಯಲ್ಲಿ ಬರೆದಿಟ್ಟ 13 ವರುಷದ ಹುಡುಗಿಯೊಬ್ಬಳ ಕತೆಯಿದು.
12 ಜೂನ್ 1942 ರಂದು ಆನ್ ಗೆ ತನ್ನ 13 ನೇ ವರುಷದ ಹುಟ್ಟು ಹಬ್ಬಕ್ಕಾಗಿ ಡೈರಿಯೊಂದು ಉಡುಗೊರೆಯಾಗಿ ಸಿಕ್ಕಿತು. ಕೆಂಪು ಮತ್ತು ಬಿಳಿ ಚೌಕಗಳ, ಬಟ್ಟೆಯ ಹೊದಿಕೆಯಿದ್ದ, ಪುಟ್ಟದೊಂದು ಲಾಕ್ ಇದ್ದ ಡೈರಿ ಅದು. ಈ ಡೈರಿ ಕೈಗೆ ಬಂದ ತಕ್ಷಣ ಆನ್ ಬರೆಯಲು ಆರಂಭಿಸಿದಳು.
ಅದಾಗಲೇ ಆಂಸ್ಟರ್ಡ್ಯಾಮ್ ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದ ನಾಝಿಗಳ ದರಬಾರು ಮಿತಿ ಮೀರಿತ್ತು. ತುತ್ತು ಕೂಳಿಗೂ ಪರದಾಡುವ, ಕಂಡ ಕಂಡಲ್ಲಿ ಯಹೂದಿಗಳನ್ನು ಕೊಲ್ಲುವ ಘೋರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಮತ್ತಷ್ಟು ಗಂಭೀರವಾದಾಗ ಆನ್ ಳ ತಂದೆ ತನ್ನ ಇಡೀ ಕುಟುಂಬದೊಂದಿಗೆ ಅಡಗಿಕೊಳ್ಳುವ ನಿರ್ಧಾರ ಮಾಡಿದ.
ಎಲ್ಲವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಯಾರಿಗೂ ಗೊತ್ತಾಗದಂತೆ ಕಣ್ಮರೆಯಾಗಬೇಕಿತ್ತು. ಪಾತಾಳದಲ್ಲಿ ಅಡಗಿದರು ಹುಡುಕಿ ತೆಗೆಯುವಷ್ಟು ಪ್ರಬಲವಾಗಿತ್ತು ನಾಝಿ ಗುಂಪು. ಮನೆಯಲ್ಲಿ ತಾವು ಸ್ವಿಟ್ಜರ್ಲ್ಯಾಂಡ್ ಗೆ ಹೋಗುತ್ತಿದ್ದೇವೆ ಎಂದು ಸುಳ್ಳು ಪತ್ರವೊಂದನ್ನು ಬರೆದಿಟ್ಟು ಇದ್ದ ಸ್ಥಿತಿಯಲ್ಲಿಯೇ ಇಡೀ ಕುಟುಂಬ ರಾತ್ರೋ ರಾತ್ರಿ ಹೊರಟಿತು. ಎಷ್ಟೋ ಕಿಲೋಮೀಟರ್ ವರೆಗೆ ನಡೆದುಕೊಂಡೇ ದಾರಿ ಸವೆಸಿದರು.
ಆನ್ ಳ ತಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಮೂರು ಜನ ಇವರೊಂದಿಗಿದ್ದರು. ಇವರು ಅಡಗಿ ಕುಳಿತದ್ದು ಮೂರಂತಸ್ತಿನ ದೊಡ್ಡ ಮನೆ. ಹೊರ ಜಗತ್ತಿಗೂ ಇವರಿಗೂ ಇದ್ದ ಏಕೈಕ ಕೊಂಡಿಯೆಂದರೆ ಆ ಮೂರು ಜನ ಕೆಲಸಗಾರರು. ಅವರೇ ಇವರ ಎಲ್ಲ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಇವರನ್ನೆಲ್ಲ ರಕ್ಷಿಸುವುದರ ಜೊತೆಗೆ ಅಡುಗೆ ಇತ್ಯಾದಿ ಕೆಲಸಗಳ ಜವಾಬ್ದಾರಿ ಅವರದಾಗಿತ್ತು. ಸಿಕ್ಕಿ ಬಿದ್ದರೆ ಸಾವು ಕಟ್ಟಿಟ್ಟದ್ದು ಎಂಬ ಅರಿವಿದ್ದುದರಿಂದ ಭಯದಲ್ಲೇ ರಾತ್ರಿ ಹಗಲುಗಳನ್ನು ಕಳೆಯುತ್ತಿತ್ತು ಆನ್ ಕುಟುಂಬ.
ಕೆಲವು ದಿನಗಳ ನಂತರ ಇನ್ನೊಂದು ಕುಟುಂಬ ಇವರನ್ನು ಜೊತೆಗೂಡಿದರು. ಆನ್ ಳಿಗೆ ಹೊಸ ಜನ ಬಂದಿದ್ದು ಖುಷಿಯಾಗಿತ್ತಾದರೂ ಎಲ್ಲರನ್ನು ನೋಡಿಕೊಂಡು, ಊಟ-ನೀರು ಇತ್ಯಾದಿಗಳನ್ನು ಪೂರೈಸುವುದು ಬರು ಬರುತ್ತಾ ಕಠಿಣವಾಯಿತು. ಚಿಕ್ಕ ಕೋಣೆಯಲ್ಲಿ ಇನ್ನೊಬ್ಬರ ಜೊತೆ ವಾಸಿಸುವುದು, ಆಹಾರದ ವಿಷಯದಲ್ಲಿಆಗುತ್ತಿದ್ದ ಭೇದ ಭಾವ, ಪೀಟರ್ ಜೊತೆಗಿನ ಸ್ನೇಹ ಎಲ್ಲವನ್ನು 13 ವರ್ಷದ ಹುಡುಗಿ ತನ್ನ ಡೈರಿಯಲ್ಲಿ ಒಂದನ್ನು ಬಿಡದಂತೆ ಬರೆಯುತ್ತ ಹೋದಳು.
ಪ್ರಾಣ ರಕ್ಷಣೆಗಾಗಿ ಮಾಡಿಕೊಂಡ ಈ ತಾತ್ಕಾಲಿಕ ಸಿದ್ಧತೆಯಿಂದ ಆನ್ ಳ ಕುಟುಂಬ ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾದರು. ಮೊದಲೆಲ್ಲ ಕೆಲಸದಲ್ಲಿ ಮುಳುಗಿರುತ್ತಿದ್ದ ಅಪ್ಪನ ಜೊತೆ ಈಗ ಹೆಚ್ಚು ಸಮಯ ಕಳೆದಳು ಆನ್. ಶುರುವಾತಿನಲ್ಲಿ ಅಕ್ಕನ ಮೇಲೆ ಇದ್ದ ಹೊಟ್ಟೆಕಿಚ್ಚು ಹಾಳೆಗಳು ತಿರುವಿದಂತೆಲ್ಲ ಕಡಿಮೆಯಾಗಿ ತನ್ನ ಅಕ್ಕನನ್ನು ಹೊಗಳುವ ಮಟ್ಟಿಗೆ ಬದಲಾಯಿತು ಆನ್ ಳ ಸ್ವಭಾವ.
ಹಾಗೆ ಅಮ್ಮನ ಬಗ್ಗೆಯೂ ಸಹ. ಆನ್ ಳಿಗೆ ಅಮ್ಮ ತನ್ನನ್ನು ದ್ವೇಷಿಸುತ್ತಾಳೆ, ಮೂದಲಿಸುತ್ತಾಳೆ, ವ್ಯಂಗ್ಯವಾಗಿ ಮಾತನಾಡುತ್ತಾಳೆ, ಅವಳು ನನ್ನ ಅಮ್ಮ ಅಲ್ಲವೇ ಅಲ್ಲ ಎಂದು ಬರೆದುಕೊಂಡಿದ್ದ ಆನ್ ದಿನಗಳು ಕಳೆದಂತೆ ಪ್ರೌಢಳಾಗಿ ಯೋಚಿಸುತ್ತಾಳೆ. ಅಮ್ಮನ ಬಗ್ಗೆ ಹೀಗೆಲ್ಲ ಯೋಚಿಸಲು ನಿನಗೆ ಮನಸಾದರೂ ಹೇಗೆ ಬಂತು ಎಂದು ಪ್ರಶ್ನಿಸಿಕೊಳ್ಳುವ ಆನ್ ತನ್ನ ಮತ್ತು ಅಮ್ಮನ ನಡುವಿನ ತಪ್ಪು ತಿಳುವಳಿಕೆಗೆ ಅಮ್ಮನ ತಪ್ಪು ಎಷ್ಟಿದೆಯೋ ಅಷ್ಟೇ ತಪ್ಪು ತನ್ನದು ಇದೆ ಎಂದು ಬರೆಯುತ್ತಾಳೆ .
ಹೊರ ಜಗತ್ತಿನಿಂದ ಸಂಪೂರ್ಣವಾಗಿ ದೂರವಿದ್ದ ಆನ್ ಗೆ ತನ್ನ ಡೈರಿಯೇ ಶಾಲೆ ಪುಸ್ತಕ ಪಾಠ ಎಲ್ಲ. ತನ್ನ ಬಹುಪಾಲು ಸಮಯವನ್ನು ಡೈರಿ ಬರೆಯುವುದರಲ್ಲಿ, ಬರೆದುದನ್ನು ತಿದ್ದುವುದರಲ್ಲಿ ತೊಡಗಿಸಿಕೊಳ್ಳುತ್ತಾಳೆ. ತನ್ನ ಬರವಣಿಗೆಯ ಶೈಲಿಯ ಬಗ್ಗೆ ಆನ್ ಗೆ ಹೆಮ್ಮೆಯಿತ್ತು. ಮುಂದೊಂದು ದಿನ ಪತ್ರಕರ್ತೆಯಾಗಬೇಕು ಎಂಬ ಆಸೆಯಿದ್ದ ಆಕೆ ಕಾದಂಬರಿ, ಪುಸ್ತಕಗಳನ್ನು ಬರೆಯಲು ಆಗಲಿಲ್ಲವೆಂದರೂ ತನಗೋಸ್ಕರ ಬರೆಯಬೇಕೆಂಬ ಬಯಕೆ ಅವಳದ್ದು. ‘ನಾನು ಸತ್ತ ನಂತರವೂ ಬದುಕಬೇಕು. ಎಲ್ಲರ ಜೀವನದಲ್ಲೂ ನಾನು ಖುಷಿ ತರಬೇಕು, ನಾನು ಯಾವತ್ತೂ ಭೇಟಿಯಾಗದ ಜನರ ಜೀವನದಲ್ಲೂ ಸಹ. ನನ್ನನ್ನು ನಾನು ತಿಳಿದುಕೊಳ್ಳಲು, ನನ್ನನ್ನು ವ್ಯಕ್ತ ಪಡಿಸಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ ದೇವರಿಗೆ ನನ್ನ ಧನ್ಯವಾದ. ನಾನು ಬರೆದಾಗಲೆಲ್ಲ ಹಗುರಳಾಗುತ್ತೇನೆ. ನನ್ನ ದುಃಖ ಕಡಿಮೆಯಾಗುತ್ತದೆ . ನಾನು ಯಾವತ್ತಾದರೂ ಪತ್ರಕರ್ತೆ ಅಥವಾ ದೊಡ್ಡ ಲೇಖಕಿಯಾಗಬಲ್ಲೆನೇ‘ ಎಂದೆಲ್ಲ ಬರೆಯುತ್ತಾಳೆ.
ಡೈರಿಯಲ್ಲಿ ಅವಳು ಕೊನೆಯದಾಗಿ ಬರೆದದ್ದು 1 ಆಗಸ್ಟ್ 1944 ರಂದು.
ಮುಂದೇನಾಯಿತು?
ಇವರು ಅಡಗಿದ್ದ ಜಾಗ ತಿಳಿದಿದ್ದ ಪೈಕಿ ಯಾರು ಪೊಲೀಸರಿಗೆ ಮಾಹಿತಿ ತಿಳಿಸಿದರೋ ಗೊತ್ತಿಲ್ಲ . 4ನೇ ಆಗಸ್ಟ್, ಜರ್ಮನ್ ಪೊಲೀಸ್ ಪಡೆ ಇವರಿದ್ದ ಗುಪ್ತ ಸ್ಥಳವನ್ನು ಪತ್ತೆ ಹಚ್ಚಿ ಎಲ್ಲರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಚೇರಿಗೆ ಕರೆದೊಯ್ದರು. ಇವರೆಲ್ಲ ಅಡಗಿ ಕುಳಿತ್ತಿದ್ದರಿಂದ ಇವರನ್ನು ಅಪರಾಧಿಗಳು ಎಂದು ಪೊಲೀಸರು ಪರಿಗಣಿಸಿದರು. ಜನರಿಂದ ತುಂಬಿ ತುಳುಕುತ್ತಿದ್ದ ಜೈಲಿಗೆ ಇವರನ್ನೆಲ್ಲ ಸಾಗಿಸಿದರು. ಅಷ್ಟೊತ್ತಿಗಾಗಲೇ 100000 ಯಹೂದಿಗಳ ಕೊಲೆಯಾಗಿತ್ತು.
ಇವರನ್ನು ಸೆಪ್ಟೆಂಬರ್ 1944 ರಂದು ಆಶ್ಚವಿಟ್ಜ್ ಎಂಬ ನಾಝಿ ಕೇಂದ್ರಕ್ಕೆ ಕರೆ ತಂದರು. ಅಲ್ಲಿ ಗಂಡಸರನ್ನು ಹೆಂಗಸರು ಮತ್ತು ಮಕ್ಕಳಿಂದ ಬೇರ್ಪಡಿಸಲಾಯಿತು. ಗಟ್ಟಿ ಮುಟ್ಟಾಗಿದ್ದವರನ್ನು ಕ್ಯಾಂಪಿನಲ್ಲಿ ಆಳು ಕಾಳುಗಳಂತೆ ಕೆಲಸಕ್ಕಿಟ್ಟುಕೊಂಡರು. ವಯಸಾದವರು, ಅಶಕ್ತರು, 15 ವರುಷಕ್ಕೂ ಕೆಳಗಿನ ಮಕ್ಕಳನ್ನು ಗ್ಯಾಸ್ ಚೇಂಬರ್ ಗೆ ಕಳುಹಿಸಿದರು. ಈ ಗ್ಯಾಸ್ ಚೇಂಬರ್ ಎಂದರೆ ವಿಷಯುಕ್ತ ಗ್ಯಾಸ್ ಇರುವ ಚೇಂಬರಿನಲ್ಲಿ ಜನರನ್ನು ಸಾಯಿಸಲೆಂದು ಬಿಡುತ್ತಿದ್ದರು. ಅಲ್ಲಿ ಉಸಿರಾಡಲು ಗಾಳಿಯು ಇಲ್ಲದೆ ಜನ ವಿಷಯುಕ್ತ ಅನಿಲ ಸೇವಿಸಿ ವಿಲ ವಿಲ ಒದ್ದಾಡುತ್ತ ಪ್ರಾಣ ಬಿಡುತ್ತಿದ್ದರು.
ಮೂರು ತಿಂಗಳ ಹಿಂದೆಯಷ್ಟೇ 15ಕ್ಕೆ ತಿರುಗಿದ್ದ ಆನ್ ಅದೃಷ್ಟವಶಾತ ಬದುಕುಳಿದಳು. ತನ್ನ ಅಪ್ಪ, ಜೊತೆಗಿದ್ದವರೆಲ್ಲ ಕೊಲೆಯಾಗಿ ಹೋದರೆಂದೇ ಆನ್ ತಿಳಿದಿದ್ದಳು. ನಾಝಿ ಕ್ಯಾಂಪಿನಲ್ಲಿ ಆನ್ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. 15 ವರ್ಷದ ಅವಳನ್ನು ಸೋಂಕು ನಿವಾರಣೆಯ ಕಾರಣದಿಂದ ಬರಿ ಬೆತ್ತಲೆಯಾಗಿಸಿದರು, ತಲೆ ಬೋಳಿಸಿದರು, ಅವಳನ್ನು ಗುರುತಿಸಲು ಕೈ ಮೇಲೆ ನಂಬರಿನ ಟಾಟೂ ಹಾಕಲಾಯಿತು.
ಅಪ್ಪ ಸತ್ತು ಹೋದನೆಂದೇ ತಿಳಿದ ಆನ್ ಅಮ್ಮ ಮತ್ತು ಅಕ್ಕನ ಜೊತೆ ಅತಿ ದಯನೀಯವಾದ ಸ್ಥಿತಿಯಲ್ಲಿ ಬದುಕುತ್ತಿದ್ದಳು. ಸ್ಕ್ಯಾಬಿಸ್ ರೋಗ ಬಂದಾಗ ಅವಳನ್ನು ಅಕ್ಕನ ಜೊತೆಗೆ ಇಲಿ ಹೆಗ್ಗಣಗಳಿಂದ ತುಂಬಿದ ಕತ್ತಲ ಕೋಣೆಯೊಳಗೆ ಬಿಟ್ಟರು. ಅಮ್ಮ ಮಾತ್ರ ತಾನು ತಿನ್ನದೇ ಉಳಿಸಿದ ಬ್ರೆಡ್ಡಿನ ತುಂಡನ್ನು ಆ ಕೋಣೆಯ ಕೆಳಗಿದ್ದ ತೂತಿನೊಳಗಿಂದ ತಳ್ಳಿ ಮಕ್ಕಳನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಿದ್ದಳು. ನಂತರ ಈ ಕ್ಯಾಂಪಿನಲ್ಲಿ ಜನದಟ್ಟಣೆ ಮಿತಿ ಮೀರಿದಾಗ ಆನ್ ಮತ್ತು ಅವಳ ಅಕ್ಕಳನ್ನು ಬೇರೆ ಕ್ಯಾಂಪಿಗೆ ವರ್ಗಾಯಿಸಿದರು. ಹಳೆಯ ಕ್ಯಾಂಪಿನಲ್ಲಿಯೇ ಉಳಿದ ಆನ್ ಳ ತಾಯಿ ಒಂದು ದಿನ ಹಸಿವಿನಿಂದ ಸತ್ತು ಹೋದಳಂತೆ.
ಸರಿಯಾದ ಆಹಾರ, ರಕ್ಷಣೆ, ಪೋಷಣೆ ಇಲ್ಲದ ಈ ಹೊಸ ಕ್ಯಾಂಪಿನಲ್ಲಿ ಹಲವರು ರೋಗಗಳಿಂದಲೇ ಸತ್ತು ಹೋದರು. ಟೈಫಾಯಿಡ್ ಮತ್ತಿತರ ರೋಗಗಳಲ್ಲಿ ಆನ್ ಹೇಗೆ ಸಾವನ್ನಪ್ಪಿದಳು ಎಂಬುದು ತಿಳಿಯದ ವಿಷಯ. ಬಹುಶಃ ಒಂದು ವರ್ಷ ಆನ್ ಕ್ಯಾಂಪಿನಲ್ಲಿ ಬದುಕಿದ್ದಳೇನೋ.. ಅಷ್ಟೇ.. ಅಷ್ಟೊತ್ತಿಗಾಗಲೇ ಎರಡನೇ ಮಹಾಯುದ್ಧದ ಬೆಂಕಿ ತಣ್ಣಗಾಗಿತ್ತು. ಅಳಿದುಳಿದ ಯಹೂದಿಗಳಿಗೆ ವಿಮೋಚನೆಯೇನೋ ಸಿಕ್ಕಿತು. ಆದರೆ ಆನ್ ಮತ್ತು ಅವಳ ಅಕ್ಕ ಇದ್ದ ಕ್ಯಾಂಪನ್ನು ರೋಗ ಹರಡುವ ಭೀತಿಯಿಂದ ಸುಟ್ಟು ಹಾಕಾಲಾಯಿತು. ಸಾವಿರಾರು ಹೆಣಗಳನ್ನು ಏಕಕಾಲದಲ್ಲಿ ಸುಟ್ಟು ಅದೊಂದು ಸ್ಮಶಾನವೇ ಆಗಿ ಹೋಯಿತು.
ಈ ಎಲ್ಲವನ್ನು ಗೆದ್ದು ಬಂದಿದ್ದು ಆನ್ ಳ ತಂದೆ. ತನ್ನ ಹೆಂಡತಿ ಮಕ್ಕಳ ಹುಡುಕಾಟದಲ್ಲಿದ್ದ ಇವನಿಗೆ ಸಿಕ್ಕಿದ್ದು ಆನ್ ಳ ಡೈರಿ ಮಾತ್ರ. ತನ್ನ ಮಗಳು ಪ್ರತಿಯೊಂದು ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದನ್ನು ಓದಿದ ಅವನು ಮೊದಮೊದಲು ನಂಬಲೇ ಇಲ್ಲ. ಎಲ್ಲವನ್ನು ತನ್ನೊಳಗೆ ಇಟ್ಟುಕೊಂಡು ಬದುಕಿದ ಮಗಳ ಭಾವನೆಗಳ ಆಳ ಅವನಿಗೆ ಗೊತ್ತಾದಾಗ ಆನ್ ಅವನನ್ನು ತೊರೆದು ಹೊರಟು ಹೋಗಿಯಾಗಿತ್ತು.
ಆನ್ ತನ್ನ ಡೈರಿಯಲ್ಲಿ ಲೇಖಕಿಯಾಗಬೇಕು ಎಂದು ಪದೇ ಪದೇ ಬರೆದಿದ್ದನ್ನು ನೋಡಿ ಅವಳ ತಂದೆ ಒಟ್ಟೋ ಇದನ್ನು ಪ್ರಕಟಿಸಲು ನಿರ್ಧರಿಸಿದ. ಮಗಳು ಬರೆದಿದ್ದು ವ್ಯಯಕ್ತಿಕವಾಗಿದ್ದರು ಲೇಖಕಿಯಾಗುವ ಅವಳ ಕನಸನ್ನು, ಯಹೂದಿಗಳು ಅನುಭವಿಸಿದ ತಲ್ಲಣಗಳನ್ನು ಅವಳ ಮೂಲಕವೇ ಪ್ರಪಂಚಕ್ಕೆ ಹೇಳುವ ಇರಾದೆ ಅವನದಾಗಿತ್ತು. ಕೆಲವು ಪತ್ರಿಕೆಗಳಲ್ಲಿ ಇದು ಸಂಕ್ಷಿಪ್ತವಾಗಿ ಪ್ರಕಟವಾಯಿತಾದರೂ ಪುಸ್ತಕವಾಗಿ ಪ್ರಕಟಿಸಲು ಯಾರು ಮುಂದೆ ಬರಲಿಲ್ಲ. ಒಂದಾದ ಮೇಲೊಂದರಂತೆ ಸತತ 15 ಪ್ರಕಾಶಕರು ಆನ್ ಳ ಡೈರಿಯನ್ನು ತಿರಸ್ಕರಿಸಿದರು.
1952 ರಲ್ಲಿ ದಿ ಡೈರಿ ಆಫ್ ಆ ಯಂಗ್ ಗರ್ಲ್ ಎಂಬ ಹೆಸರಿನಿಂದ ಅಮೆರಿಕಾದಲ್ಲಿ ಪ್ರಕಟವಾದ ಆನ್ ಳ ಡೈರಿ ಲಕ್ಷಾಂತರ ಓದುಗರಿಂದ ಮೆಚ್ಚುಗೆ ಪಡೆಯಿತು. ಅದಾದ ನಂತರ ಹಲವು ದೇಶಗಳಲ್ಲಿ, ಭಾಷೆಗಳಲ್ಲಿ ಆನ್ ಳ ಡೈರಿ ಪ್ರಕಟವಾಗಿ, ಇದನ್ನೇ ಆಧಾರವಾಗಿಟ್ಟುಕೊಂಡು ಅನೇಕ ಸಿನಿಮಾಗಳು, ಕಿರುಚಿತ್ರಗಳನ್ನು ಸಹ ಮಾಡಿದರು.
ಲೇಖಕಿಯಾಗಬೇಕು, ಪರಿಚಯ ಇಲ್ಲದ ಜನರಿಗೂ ಪರಿಚಯವಾಗಬೇಕು, ಸತ್ತ ನಂತರವೂ ಬದುಕಬೇಕೆಂಬ ಆನ್ ಳ ಆಸೆ ಕೊನೆಗೂ ಈಡೇರಿತು. ಇಂದಿಗೂ ಆನ್ ಜೀವಂತವಾಗಿದ್ದಾಳೆ ಡೈರಿ ಆಫ್ ಅ ಯಂಗ್ ಗರ್ಲ್ ಪುಸ್ತಕದಲ್ಲಿ.