ಸದಾ ತುಂಬಿ ಹರಿಯುವ ಚೆಲುವಿನ ಐಸಿರಿ ‘ನಯಾಗರ’ – ಪ್ರವಾಸ ಲೇಖನ
ಅದು 2019 ರ ಬೇಸಗೆಯ ಸಮಯ. ಇಲ್ಲಿ ನಾವಿರುವ ಊರಿನ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಹಿಮಾಲಯದ ಸಹೋದರಿ! ಅಷ್ಟು ಚಳಿ ಇಲ್ಲಿ. ನರನಾಡಿಗಳನ್ನು ನಡುಗಿಸುವ ಚಳಿ. ಅಕ್ಟೋಬರ್ ಬಂತೆಂದರೆ ಸಾಕು ಚಳಿಯ ಅಬ್ಬರ ಶುರುವಾಗುತ್ತದೆ. ಯಾವುದಕ್ಕೂ ಬಗ್ಗದೆ ಯಾರಿಗೂ ಸೊಲ್ಲದೆ ಮುಂದಿನ ಸತತ ಐದು ತಿಂಗಳುಗಳ ಕಾಲ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವಾಗ ನಮ್ಮಂತಹ ಸಾಮಾನ್ಯರ ಬದುಕು ಮಂಜುಗಡ್ಡೆಯೊಳಗೆ ಹೆಪ್ಪುಗಟ್ಟಿದಂತೆ. ಹೀಗಾಗಿ ಶಬರಿ ರಾಮನಿಗೆ ಕಾದದ್ದಕ್ಕಿಂತ ಒಂದು ತೂಕದ ಹೆಚ್ಚಿನ ಕಾತರದಿಂದ ನಾವು ಬೇಸಿಗೆಗಾಗಿ ಕಾಯುತ್ತೇವೆ. ಬೇಸಿಗೆ ಬಂತೆಂದರೆ ಸಾಕು ಬಿಲದೊಳಗಿನ ಇರುವೆಗಳಂತೆ ಜನ ಮನೆ ಬಿಟ್ಟು ಹೊರ ಬರತೊಡಗುತ್ತಾರೆ. ಸಂಜೆಯ ವಿಹಾರಗಳಿಗೆ ಆಹ್ಲಾದತೆ ಬರುತ್ತದೆ. ಗುಂಪು ಹರಟೆಗಳು ಕಾಣ ಸಿಗುತ್ತವೆ. ಧೂಳು ತಿನ್ನುತ್ತ ಕೂತಿರುವ ಸೈಕಲಗಳು ಮೈ ಮುರಿಯುತ್ತ ಆಚೆ ಬರತೊಡಗುತ್ತವೆ. ಪ್ರವಾಸವೆಂಬ ಪದ ಮತ್ತೆ ಮತ್ತೆ ಕೇಳಿ ಬರುತ್ತದೆ. ಬರಿ ಮನುಷ್ಯರಿಗಷ್ಟೇ ಅಲ್ಲ.. ನಮ್ಮೂರಿನ ಪ್ರಾಣಿ, ಪಕ್ಷಿ, ಕೆರೆಗಳಿಗೂ ಬಿಸಿಲೆಂದರೆ ಹುಮ್ಮಸ್ಸು, ಬಿಸಿಲೆಂದರೆ ಯೌವ್ವನ.
ಹಾಗಾಗಿ ಅಮೆರಿಕಾಕ್ಕೆ ತಂದೆ ತಾಯಿಯನ್ನು ಕರೆ ತಂದು ಈ ದೇಶವನ್ನು ತೋರಿಸಬೇಕೆಂದರೆ ಅದು ಬೇಸಿಗೆಗಾಲದಲ್ಲಿ ಮಾತ್ರ ಸಾಧ್ಯ. ನಮ್ಮೂರಿನ ಚಳಿಗೆ ಮುದ್ದೆಯಾಗುವ ಅವರಿಗೆ ಇಷ್ಟೊಂದು ಚಳಿಯ ಅಭ್ಯಾಸವೆಲ್ಲಿರುತ್ತದೆ? ಎಲ್ಲಾ ಕಡೆಯೂ ಹೀಗೆ ಅಂತಿಲ್ಲ. ಡಲ್ಲಾಸ್, ಕ್ಯಾಲಿಫೋರ್ನಿಯಾ ಅಂತಹ ಊರುಗಳೆಲ್ಲ ನಮ್ಮ ಬೆಂಗಳೂರಿದ್ದಂತೆ. ಅಲ್ಲೆಲ್ಲ ಚಳಿಗಾಲದಲ್ಲಿ ಚಳಿ ಹಬ್ಬುತ್ತಾದರೂ ಪ್ರಮಾಣ ಕಡಿಮೆ. ಅವರೆಲ್ಲ ಪುಣ್ಯವಂತರು ಬಿಡಿ.. ನಾವಿರುವ ಊರಿನ ಚಳಿಯ ತಾಪಮಾನವನ್ನು ಕೇಳಿ ನಡುಗುತ್ತಾರೆ ಅವರು!
೨೦೧೯ರ ಆಗಸ್ಟ್ ನಲ್ಲಿ ಸಮರ್ಥನ ಅಪ್ಪ ಅಮ್ಮ ಅಂದರೆ ನನ್ನ ಅತ್ತೆ ಮಾವನ ಜೊತೆಗೆ ನಮ್ಮಮ್ಮನೂ ಬೆರಗುಗಣ್ಣುಗಳಿಂದ ಅಮೆರಿಕಾಕ್ಕೆ ಬಂದಿಳಿದಿದ್ದಳು. ಅವರ ವಿಮಾನದ ಅನುಭವವನ್ನು ಹೇಳಬೇಕು ನಿಮಗೆಲ್ಲ. ಈ ಮೊದಲು ವಿಮಾನವನ್ನೇ ನೋಡಿರದ ಮೂವರು ಈಗ ವಿಮಾನ ಹತ್ತಿ ಇಪ್ಪತ್ತನಾಲ್ಕು ಗಂಟೆಗಳ ಪ್ರಯಾಣ ಮುಗಿಸಿ ಅಪರಿಚಿತ ದೇಶಕ್ಕೆ ಬರುವವರಿದ್ದರು. ಮೂವರು ಒಟ್ಟಿಗೆ ಬರುತ್ತಿದ್ದರಿಂದ ಜೊತೆಗೆ ವೀಲ್ಚೇರ್ ವ್ಯವಸ್ಥೆ ಮಾಡಿಸಿದ್ದರಿಂದ ಸುರಕ್ಷಿತವಾಗಿ ಬಂದಿಳಿಯುತ್ತಾರೆ ಎನ್ನುವ ಧೈರ್ಯ ಇತ್ತಾದರೂ ಆಗಾಗ ಬಂದು ಹೆದರಿಸುತ್ತಿದ್ದ ಭಯ. ಮೂವರಲ್ಲಿ ನಮ್ಮಮ್ಮನಿಗೆ ಒಂಚೂರು ಧೈರ್ಯ ಜಾಸ್ತಿ. ಕಿತ್ತೂರು ಚೆನ್ನಮ್ಮ ಅವಳು. ಹಾಗಾಗಿ ಟೆಕ್ನಿಕಲ್ ಸಮಸ್ಯೆ ಬಂದಾಗ ನಮ್ಮತ್ತೆ, ಧೈರ್ಯದ ವಿಷಯ ಬಂದಾಗ ನಮ್ಮಮ್ಮ, ಮಾರಲ್ ಸಪೋರ್ಟಿಗಾಗಿ ಮಾವ ಎಂದು ನಾನೇ ಅವರಿಗೆಲ್ಲ ಟ್ಯಾಗ್ ಕೊಟ್ಟು ಬಿಟ್ಟಿದ್ದೆ.
ನಮ್ಮ ಬೆಂಗಳೂರು ಆದ್ದರಿಂದ ಅಲ್ಲಿ ಸಮಸ್ಯೆಯಾದರೂ ಹೇಗೋ ಸುಧಾರಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿತ್ತು. ಅಲ್ಲಿಂದ ಮುಂದೆ ದೆಹಲಿ ನಂತರ ಅಮೇರಿಕಾದ ಫ್ಲೈಟ್. ನಮಗೆ ಗೊತ್ತಿದ್ದ ಜ್ಞಾನವನ್ನೆಲ್ಲ ಇಂಚಿಂಚಾಗಿ ಧಾರೆಯೆರೆದಿದ್ದೆವು. ನಾನಂತೂ ಕನ್ನಡದಲ್ಲಿ ಸ್ಟೆಪ್ ಬೈ ಸ್ಟೆಪ್ ಪಿಪಿಟಿ ತಯಾರಿಸಿ ಕಳುಹಿಸಿದ್ದೆ. ಹೊರಡುವ ಒಂದು ತಿಂಗಳಿಗೂ ಮೊದಲೇ ತರಬೇತಿ ಶುರುವಾಗಿತ್ತು. ವೀಸಾ, ಗೇಟ್ ಪಾಸ್, ಚೆಕ್ ಇನ್, ಕ್ಯಾರಿ ಆನ್, ಟೇಕ್ ಆಫ್, ಗೇಟ್ ನಂಬರ್, ಇಮ್ಮಿಗ್ರೇಷನ್ ಇತ್ಯಾದಿಗಳ ಬಾಯಿಪಾಠ ನಡೆದಿತ್ತು. ಒಂಬತ್ತರ ಮಗ್ಗಿ ಒಪ್ಪಿಸುವ ಶಾಲೆಯ ಪುಟ್ಟ ಪೋರಿಯಂತೆ ನಮ್ಮಮ್ಮ ಪ್ರತಿದಿನ ನನಗೆ ಈ ಎಲ್ಲ ಪದಗಳ ಅರ್ಥ, ಬಳಕೆಯನ್ನೆಲ್ಲ ವಿವರಿಸುತ್ತಿದ್ದಳು. ಸಾಮಾನ್ಯವಾಗಿ ಚೆಕ್-ಇನ್ ಮಾಡುವಾಗ ನಮ್ಮ ಲಗೇಜಿನಲ್ಲಿ ಬ್ಯಾಟರಿ, ಊದಿನಕಡ್ಡಿ, ಬೆಂಕಿಪಟ್ಟಣ ಇತ್ಯಾದಿ ವಸ್ತುಗಳಿವೆಯೇ ಎಂದು ಕೇಳುವುದು ವಿಮಾನ ಕಂಪನಿಯವರ ನಿಯಮ. ಆ ತರಹದ ವಸ್ತುಗಳನ್ನು ಹಾಕಬೇಡಿ ಎಂದು ಹೇಳಿ, ಅಲ್ಲಿ ಅವರು ಕೇಳಿದಾಗ ಇಲ್ಲ ಎಂದು ಹೇಳಬೇಕು ಎಂದು ನಮ್ಮ ಆಜ್ಞೆಯಾಗಿತ್ತು. ನಾನು ಹೇಳಿ ಕೊಟ್ಟದ್ದು ಎಷ್ಟು ಮನದಟ್ಟಾಗಿತ್ತೆಂದರೆ ಅವತ್ತು ಬರುವ ದಿನ (ನಾವು ಸಹ ಅವರ ಜೊತೆ ವಿಡಿಯೋ ಕಾಲಿನಲ್ಲಿಯೇ ಇದ್ದೆವು) ಚೆಕ್-ಇನ್ ಸಮಯದಲ್ಲಿ ಆತ ಇನ್ನು ಪ್ರಶ್ನೆಯನ್ನು ಮುಗಿಸುವ ಮುಂಚೆಯೇ ನಮ್ಮಮ್ಮ ಇಲ್ಲ ಇಲ್ಲ ಇಲ್ಲ ಎಂದು ಹೇಳಲು ಶುರು ಮಾಡಿ ಬಿಟ್ಟಿದ್ದಳು!
ಎಲ್ಲ ಹಂತಗಳನ್ನು ಮುಗಿಸಿ ಅವರು ವಿಮಾನ ಹತ್ತಿದಾಗ ನಾವು ನಿಟ್ಟುಸಿರೊಂದನ್ನು ಬಿಟ್ಟೆವಾದರೂ ನೆಮ್ಮದಿಯಿಂದ ಮಲಗುವಂತಿರಲಿಲ್ಲ. ಇಲ್ಲಿ ಅಮೆರಿಕಾಕ್ಕೆ ಬಂದಿಳಿದ ಮೇಲೆ ಇನ್ನು ಹೆಚ್ಚಿನ ಹಂತಗಳಿದ್ದವು. ಇಮ್ಮಿಗ್ರೇಷನ್ ಫಾರಂ ಭರ್ತಿ ಮಾಡುವುದು, ಅಧಿಕಾರಿಯೊಬ್ಬನ ಜೊತೆ ಮಾತುಕತೆ, ಲಗೇಜ್ ಸಂಗ್ರಹಿಸುವ ಕೆಲಸ ಅಷ್ಟೇ ಅಲ್ಲದೆ ಎಲ್ಲವು ಇಂಗ್ಲಿಷ್ ಭಾಷೆಯಲ್ಲಿ, ಅವರಿಗೆ ಗೊತ್ತಿರದ ಭಾಷೆಯಲ್ಲಿದ್ದುದರಿಂದ ಅವರಿಗಿಂತ ಹೆಚ್ಚು ನಾವೇ ಆತಂಕದಲ್ಲಿದ್ದೆವು. ಈ ಹಿಂದೆ ಸಮರ್ಥನ ಸೋದರತ್ತೆ, ಮಾವ ಮಗನನ್ನು ನೋಡಲೆಂದು ಅಮೆರಿಕಾಕ್ಕೆ ಬಂದಿಳಿದಾಗ ಏನೋ ಸಮಸ್ಯೆಯಾಗಿ ಅವರನ್ನು ನಾಲ್ಕು ಗಂಟೆಗಳ ಕಾಲ ಅಲ್ಲಿಯೇ ಕೂರಿಸಿಕೊಂಡು ಬಿಟ್ಟಿದ್ದರಂತೆ. ನಂತರ ಭಾರತೀಯ ಭಾಷೆ ಬರುವಂತವನನ್ನು ಹುಡುಕಿ ಅವನ ಮೂಲಕ ಅವರೊಡನೆ ಮಾತನಾಡಿದ ನಂತರವೇ ಅವರನ್ನು ಬಿಟ್ಟದ್ದು. ಈ ತರಹದ ಕತೆಗಳನ್ನೆಲ್ಲ ಕೇಳಿದ ಮೇಲೆ ಅವರು ಮನೆಗೆ ಬಂದಿಳಿಯುವವರೆಗೂ ಸಮಾಧಾನವೇ ಇರುವುದಿಲ್ಲ.
ದೆಹಲಿ ತಲುಪಿದಾಗ ಇನ್ನೊಂದು ನಿಟ್ಟುಸಿರು. ಇನ್ನೇನು ಹನ್ನೆರಡು ಗಂಟೆಗಳ ದಾರಿ ಬಂದು ಬಿಡುತ್ತಾರೆ ಎನ್ನುವ ಸಮಾಧಾನ. ಇನ್ನೂ ಹನ್ನೆರಡು ಗಂಟೆಗಳಿವೆಯಲ್ಲ ಎಂಬ ಚಡಪಡಿಕೆ. ಅದೊಂದು ತರಹದ ಮಿಶ್ರ ಭಾವ. ಒಂದೆಡೆ ಪುಳಕ ಮತ್ತೊಂದೆಡೆ ಕಳವಳ. ಒಂದೆಡೆ ಕಾತರ ಮತ್ತೊಂದೆಡೆ ಗಾಬರಿ. ಅವರು ಬರುತ್ತಿದ್ದುದು ಶಿಕ್ಯಾಗೋ ಏರ್ಪೋರ್ಟ್, ನಾವಿರುವ ಊರಿನಿಂದ ಎರಡು ಗಂಟೆಯ ದಾರಿ. ಅವರನ್ನು ಕರೆದುಕೊಂಡು ಬರಲು ಹೋಗಬೇಕಿತ್ತು. ವಿಮಾನ ಬಂದು ತಲುಪುವುದಕ್ಕೆ ಇನ್ನು ಮೂರು ಮೂರುವರೆ ಗಂಟೆಗಳ ಸಮಯವಿತ್ತು. ಆಗ ನಮಗೆ ನಸು ಮುಂಜಾನೆ ನಾಲ್ಕು ಗಂಟೆ. ನಾವು ಕಾಯ್ದರೆ ನಡೆಯುತ್ತದೆ ಆದರೆ ಅವರು ಕಾಯಬಾರದು ಎಂದು ಆಗಲೇ ಹೊರಟೆವು. ವಿಮಾನದಲ್ಲಿ ಊಟವೆಲ್ಲ ಸರಿಯಾಗಿರುತ್ತದೋ ಇಲ್ಲವೋ ಎಂದು ಯೋಚಿಸಿ ಪುಲಾವ್ ಅಂತಹದ್ದನ್ನು ಸಿದ್ಧ ಪಡಿಸಿ ಜೊತೆಗೆ ಸಾಕಷ್ಟು ತಿಂಡಿಗಳ ಜೊತೆಗೆ ಅವರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದೆವು. ಅರೈವಲ್ಸ್ ಎಂಬ ಹಣೆಪಟ್ಟಿ ಹೊತ್ತ ಮುಚ್ಚಿದ ಬಾಗಿಲಿನ ಮುಂದೆ ನಿಂತು ಕಾಯುತ್ತಿದ್ದೆವು. ಏರ್ ಇಂಡಿಯಾ ಆದ್ದರಿಂದ ಅದರಲ್ಲಿ ಬರುವ ಬಹುತೇಕರು ಅಪ್ಪ ಅಮ್ಮಂದಿರೇ (ವಯಸಾದವರು!) ಇರುತ್ತಾರೆ. ಹಾಗಾಗಿ ನಮ್ಮೊಡನೆ ಅನೇಕ ಭಾರತೀಯರು ತಮ್ಮ ಪೋಷಕರಿಗಾಗಿ ಕಾಯುತ್ತಿದ್ದರು. ವಿಮಾನ ಬಂದು ತಲುಪಿದೆ ಎಂದು ಗೂಗಲ್ ಅಂಕಲ್ ಹೇಳಿದ. ಮುಚ್ಚಿದ ಬಾಗಿಲಿನ ಹಿಂದೆ ಏನು ನಡೆಯುತ್ತಿದೆಯೋ ಎಂದು ಕಲ್ಪಿಸಿಕೊಳ್ಳುತ್ತಾ ಇನ್ನೇನು ಬಾಗಿಲು ತೆಗೆದು ನಮ್ಮವರು ಬರುತ್ತಾರೆ ಎಂದು ಪುಳಕಗೊಳ್ಳುತ್ತ ಒಂದು ಕಾಲಿನಿಂದ ಇನ್ನೊಂದು ಕಾಲಿಗೆ ದೇಹದ ತೂಕವನ್ನು ವರ್ಗಾಯಿಸುತ್ತ ನಿಂತಿದ್ದೆವು ನಾವಿಬ್ಬರು.
ನಿಧಾನವಾಗಿ ಬಾಗಿಲು ತೆಗೆಯಿತು. ಮೊದಲು ಕಂಡಿದ್ದು ವೀಲ್ ಚೇರಿನಲ್ಲಿ ಕುಳಿತು, ತನ್ನೆದುರಿಗೆ ಒಮ್ಮೆಲೇ ತೆರೆದುಕೊಂಡ ಈ ಹೊಸ ಜಗತ್ತನ್ನು ಪಿಳಿ ಪಿಳಿ ನೋಡುತ್ತಾ, ಕಳೆದು ಹೋಗಿದ್ದ ಅಮ್ಮನ ವಯಸ್ಸಿನ ಅಮ್ಮ. ಚೇರನ್ನು ತಳ್ಳಿಕೊಂಡು ಬಂದ ಏರಲೈನ್ಸ್ ಹುಡುಗಿ ಸ್ವಲ್ಪ ಮುಂದೆ ಬಂದು ಆ ತಾಯಿಯ ಸಂಬಂಧಿಕರಿಗಾಗಿ ಹುಡುಕಾಡುತ್ತಿರುವಾಗಲೇ ಅಜ್ಜಿ… ಎಂದು ಕೂಗಿದ ಪುಟ್ಟ ಕಂದಮ್ಮನ ಕೂಗು ಕೇಳಿಸಿತು. ಇಷ್ಟೊತ್ತು ಸಂತೆಯಲ್ಲಿ ಕಳೆದು ಹೋದ ಮಗುವಿನಂತೆ ಗಾಬರಿಯಲ್ಲಿ ನೋಡುತ್ತಿದ್ದ ಆ ಹೆಂಗಸಿನ ಮುಖದಲ್ಲಿ ಈಗ ಮಲ್ಲಿಗೆಯ ನಗು. ಅಲ್ಲಿಗೆ ಒಬ್ಬ ತಾಯಿ, ಅತ್ತೆ, ಅಜ್ಜಿ ತನ್ನವರ ಬಳಿ ಬಂದು ಸೇರಿಕೊಂಡಳು. ನಿಧಾನವಾಗಿ ಬಾಗಿಲು ಪೂರ್ಣವಾಗಿ ತೆರೆದುಕೊಂಡಿತು. ಈಗ ಎರಡೆರಡು ವೀಲ್ ಚೇರಗಳು ಅಲ್ಲಿಂದ ಆಚೆ ಬರತೊಡಗಿದವು. ಅಷ್ಟು ದೂರದಿಂದ ಬಂದು ತಮ್ಮವರನ್ನು ಕಂಡು ಹಿಗ್ಗುತ್ತಿರುವ ಅವರ ಸಂತಸವನ್ನು ನೋಡುವುದೇ ಒಂದು ಹಬ್ಬವಾಗಿತ್ತು. ಎಷ್ಟೊಂದು ಜನರು ಬಂದರು. ಆದರೆ ನಮ್ಮವರ ಸುದ್ದಿಯೇ ಇಲ್ಲ! ಮಾವನವರಿಗೆ ಅವಸರ ಜಾಸ್ತಿ. ವೀಲ್ ಚೇರಿನವರನ್ನು ಎಲ್ಲರು ಇಳಿದು ಹೋದ ನಂತರ ಕೊನೆಯಲ್ಲಿ ಕರೆ ತರುತ್ತಾರಾದ್ದರಿಂದ ಇವರೆಲ್ಲಿ ಕೊನೆಯವರೆಗೆ ಕೂರದೆ ಮೊದಲೇ ಇಳಿದು, ಮುಂದೆ ಎಲ್ಲಿ ಹೋಗಬೇಕೆಂದು ಗೊತ್ತಾಗದೆ ವಿಮಾನ ನಿಲ್ದಾಣದಲ್ಲೇ ಅಲೆದಾಡುತ್ತಿರುವರೇನೋ.. ಅಥವಾ ಸ್ಕ್ಯಾನ್ ಮಾಡುವಾಗ ಲಗೇಜಿನಲ್ಲಿ ಏನನ್ನೋ ನೋಡಿ ಇವರನ್ನು ತಡೆ ಹಿಡಿದಿದ್ದರೆ? ಹೀಗೆ ಏನೇನೋ ಯೋಚನೆಗಳು.
ಸುಮಾರು ಅರ್ಧ ಗಂಟೆ ಕಳೆದರೂ ಮೂರು ಜನರಲ್ಲಿ ಒಬ್ಬರೂ ಆಚೆ ಬರಲಿಲ್ಲ. ಇಷ್ಟೊತ್ತು ಗಿಜಿಗುಡುತ್ತಿದ್ದ ಆ ಪ್ರದೇಶ ಈಗ ಖಾಲಿಯಾಗತೊಡಗಿತ್ತು. ಕಾಯುತ್ತಿದ್ದ ಇನ್ನು ಕೆಲವರಿದ್ದರಷ್ಟೇ.. ಸಮಾಧಾನವಾಗದೆ ಈಗಷ್ಟೇ ಯಾರನ್ನೋ ಬಿಟ್ಟು ಹೋಗುತ್ತಿದ್ದ ಆ ಹುಡುಗಿಯ ಬಳಿ ವಿಚಾರಿಸಿದೆವು. ಅವಳಿಗೇನು ನಮ್ಮ ಹಾಗೆ ಚಿಂತೆಯೇ? ‘ದೇ ವಿಲ್ ಕಮ್. ಪ್ಲೀಸ್ ವೇಟ್’ ಎಂದು ಹೇಳಿ ಹೋಗಿಯೇ ಬಿಟ್ಟಳು. ವೆಟ್ ಮಾಡುವುದನ್ನು ಬಿಟ್ಟು ಉಳಿದಿತ್ತಾದರೂ ಏನು? ಬಂದ ತಕ್ಷಣ ಏರ್ಪೋರ್ಟ್ ವೈಫೈಗೆ ಕನೆಕ್ಟ್ ಮಾಡಿಕೊಂಡರೆ ನಾವು ನಿಮಗೆ ಕಾಲ್ ಮಾಡಬಹುದು ಎಂದು ಪದೇ ಪದೇ ಹೇಳಿದ್ದರೂ ಈಗ ಗದ್ದಲದಲ್ಲಿ ಮರೆತಿದ್ದರೇನೋ.. ನಮ್ಮ ಕರೆಯು ಅವರಿಗೆ ತಲುಪುತ್ತಿರಲಿಲ್ಲ. ಹಾಗಾಗಿ ಕಾಯದೆ ಬೇರೆ ವಿಧಿಯಿರಲಿಲ್ಲ. ಅಷ್ಟೊತ್ತಿಗಾಗಲೇ ನಾವು ಕಾದು ನಿಂತು ಸುಮಾರು ಎರಡು ಗಂಟೆಯಾಗಿತ್ತು. ದೇವರೇ ಏನು ತೊಂದರೆ ಬಾರದ ಹಾಗೆ ಅವರನ್ನು ಹೂವಿನ ಹಾಗೆ ತಂದಿಳಿಸು ಎಂದು ದೇವರನ್ನು ನೆನೆಯುತ್ತಿರುವಾಗಲೇ ಬಾಗಿಲ ಹಿಂದೆ ಹಸಿರು ಸೀರೆಯುಟ್ಟು ಸ್ವೆಟರ್ ಹಾಕಿ, ಮುಖದಲ್ಲಿ ದಣಿವನ್ನೇ ಹೊತ್ತು ಕುಳಿತಿದ್ದ ಅಮ್ಮನ ಮುಖ ಕಂಡಿತು. ಒಮ್ಮೆಲೇ ಹೋದ ಚೇತನ ಬಂದಂತಾಯಿತು. ಅವಳಿಗೂ ನಾನು ಕಾಣಿಸಿದೆನೆನೋ.. ತನ್ನನ್ನು ತಳ್ಳಿಕೊಂಡು ಬರುತ್ತಿದ್ದ ವ್ಹೀಲಚೇರ್ ಹುಡುಗಿಯ ಬಳಿ ನನ್ನೆಡೆಗೆ ಕೈ ಮಾಡಿ ತೋರಿಸುತ್ತಿದ್ದಳು ಅಮ್ಮ! ಅಮ್ಮನ ಹಿಂದೆ ಅತ್ತೆ ಮಾವ ಇಬ್ಬರು ಬಂದು ಎಲ್ಲ ಲಗೇಜುಗಳ ಸಮೇತ ಏನು ತೊಂದರೆಯಿಲ್ಲದೆ ಬಂದು ಸೇರಿದಾಗ ನೆಮ್ಮದಿಯ ನಿಟ್ಟುಸಿರೊಂದು ಹೊರ ಬಂತು.
ಇಲ್ಲಿ ಅವರಿಗೆ ಎಲ್ಲವು ಹೊಸದು. ಮನೆ ತುಂಬ ಹಾಕಿದ್ದ ಕಾರ್ಪೆಟ್ಟಿನಿಂದ ಅಡುಗೆ ಮಾಡಲು ಬಳಸುತ್ತಿದ್ದ ಎಲೆಕ್ಟ್ರಿಕ್ ಕ್ವಾಯ್ಲ್ ಗಳವರೆಗೂ ಎಲ್ಲವು ಹೊಸದು. ಊರಿನಲ್ಲಿ ಬಕೆಟ್ಟಿನಲ್ಲಿ ಸ್ನಾನ ಮಾಡುವ ಅವರಿಗೆ ಬಾತ್ ಟಬ್ ತೋರಿಸಿ ಶವರ್ ನಲ್ಲಿ ಸ್ನಾನ ಎಂದಾಗ ಅವರು ಕಕ್ಕಾಬಿಕ್ಕಿ. ಕಾರ್ಪೆಟ್ ಇದ್ದುದರಿಂದ ಇಲ್ಲಿ ದಿನ ಕಸ ಹೊಡೆಯುವ ಹಾಗಿಲ್ಲ, ವಾರಕ್ಕೊಮ್ಮೆ ಅಥವಾ ತುಂಬಾ ಕಸ ಬಿದ್ದಾಗ ವ್ಯಾಕ್ಯೂಮ್ ಮಾಡಿದರಾಯೊತು ಎಂದು ಹೇಳಿದರೆ ದಿನ ಬಗ್ಗಿ ಅಂಗಳದ ಕಸ ಹೊಡೆಯುವ ಅವರಿಗೆ ಅಮೆರಿಕದಲ್ಲಿ ಬಾಳುವವರ ಮೇಲೆ ಅಸೂಯೆ. ಅವರಿಗೆ ಹೊಂದಿಕೊಳ್ಳಲು ಸುಮಾರು ಹದಿನೈದು ದಿನಗಳೇ ಬೇಕಾದವು. ಎರಡೂವರೆ ತಿಂಗಳಷ್ಟು ಅವಧಿಯಿದ್ದುದರಿಂದ ಆದಷ್ಟು ಅಮೆರಿಕಾ ಸುತ್ತಿಸಬೇಕೆಂಬುದು ನಮ್ಮ ಆಸೆ. ಹಾಗಾಗಿ ಅವರು ಬಂದ ಒಂದು ತಿಂಗಳಿನ ನಂತರ ಬಾಡಿಗೆ ಕಾರಿನಲ್ಲಿ ನಯಾಗರಕ್ಕೆ ಹೊರಟೆವು. ಇಲ್ಲಿ ಹೊರಗಡೆ ಪಿಜ್ಜಾ ಬರ್ಗರ್ ಸಿಕ್ಕಿದಷ್ಟು ಸುಲಭವಾಗಿ ನಮ್ಮ ಭಾರತೀಯ ಊಟ ಸಿಗುವುದಿಲ್ಲ. ಇತ್ತೀಚಿಗೆ ಬಹುತೇಕ ಎಲ್ಲ ಕಡೆಯೂ ಇಂಡಿಯನ್ ರೆಸ್ಟೋರೆಂಟ್ ಗಳು ಕಾಣಿಸುತ್ತಾವಾದರೂ ಪ್ರವಾಸಕ್ಕೆ ಹೋದಾಗ ಮೂರೂ ಹೊತ್ತು ಅವುಗಳಿರುವೆಡೆಯಲ್ಲಿ ಓಡಾಡತೊಡಗಿದರೆ ಹೋದ ಸ್ಥಳಗಳನ್ನು ನೋಡುವುದನ್ನು ಬಿಟ್ಟು ಬರಿ ಊಟ ತಿಂಡಿಗೆ ಅಲೆದಾಡಬೇಕಾಗುತ್ತದೆ. ಅದೂ ಅಲ್ಲದೆ ಹೊರಗಡೆ ಏನನ್ನೂ ತಿನ್ನದ ನಮ್ಮಮ್ಮನ ಮಡಿವಂತಿಕೆ. ಜೊತೆಗೆ ಪಿಜ್ಜಾ ಎಂದರೆ ಚಪಾತಿ ಮೇಲೆ ಪಲ್ಯ ಹಾಕಿಕೊಂಡು ತಿಂದಂತೆ ಎಂಬ ಮೂದಲಿಕೆ!
ಇದೆಲ್ಲದರ ಗೊಡವೆಯೇ ಬೇಡ ಎಂದು ನಾನು ನಾಲ್ಕು ದಿನಗಳ ಕಾಲ ಊಟಕ್ಕೆ ಬೇಕಾದ ಸರಂಜಾಮುಗಳನ್ನು ಎತ್ತಿಕೊಂಡು, ಇನ್ಸ್ಟಂಟ್ ಪಾಟ್ ಎಂಬ ಡಿಜಿಟಲ್ ಕುಕ್ಕರ್ ನ್ನು ಎತ್ತಿಕೊಂಡು ಸಾಸಿವೆ, ಜೀರಿಗೆ, ಅರಿಶಿನಗಳ ಜೊತೆಗೆ ನಾಲ್ಕು ದಿನಗಳಿಗೆ ಬೇಕಾದಷ್ಟು ರೇಷನ್ ತೆಗೆದುಕೊಂಡು ಸರ್ವ ಸನ್ನದ್ಧಳಾಗಿ ಹೋಗಿದ್ದೆ. ಅಲ್ಲಿ ಬೆಳಿಗ್ಗೆ ತಿಂಡಿ ತಿಂದು, ಮಧ್ಯಾಹ್ನದ ಊಟವನ್ನು ಡಬ್ಬಕ್ಕೆ ಹಾಕಿಕೊಂಡು ಹೊರಟು ರಾತ್ರಿ ಇಳಿದುಕೊಂಡ ಹೋಟೆಲಿಗೆ ಬಂದು ಅಡುಗೆ ಮಾಡಿಕೊಂಡು ಊಟ ಮಾಡುವುದು ಎಂದಾಗಿತ್ತು. ಅದೂ ಅಲ್ಲದೇ ಅಮ್ಮ ನಾನು ಸೇರಿ ಐವತ್ತಕ್ಕಿಂತ ಹೆಚ್ಚೇ ಚಪಾತಿ ಮಾಡಿ ಕಟ್ಟಿಕೊಂಡಿದ್ದೆವು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಉಳಿಯಿತು ಎಂಬುದು ಬೇರೆ ವಿಚಾರ.
ಸಹಸ್ರಾರು ಲೀಟರಗಟ್ಟಲೇ ನೀರಿನಿಂದ ತುಂಬಿ ಹರಿಯುವ ನಯಾಗರ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿರುತ್ತದೆ. ನಮ್ಮ ಅದೃಷ್ಟ, ನಾವು ಹೋದ ಸಮಯದಲ್ಲಿ ಜನದಟ್ಟಣೆಯಿರಲಿಲ್ಲ. ವೀರಾವೇಶದಲ್ಲಿ ಧುಮ್ಮಿಕ್ಕಿ ಹರಿಯುವ ಶುಭ್ರ ಹಾಲಿನಂತಹ ನೀರು. ಪಾರ್ಕಿನೊಳಗೆ ಕಾಲಿಟ್ಟ ಕೂಡಲೇ ದೂರದಲ್ಲಿ ಧುಮುಕುತ್ತಿರುವ ನೀರಿನ ಶಬ್ದ ಕೇಳತೊಡಗುತ್ತದೆ. ಅದೊಂದು ತರಹದ ಸುಶ್ರಾವ್ಯ ನಾದ. ಶಾಂತಿಯ ಮೂಲ. ಅಮೇರಿಕ, ಕೆನಡಾ ಎರಡು ದೇಶದ ಗಡಿ ಭಾಗದಲ್ಲಿ ಮೂರು ಜಲಪಾತಗಳಾಗಿ ಹಬ್ಬಿರುವ ಈ ಸುಂದರ ಜಲಕಾವ್ಯವನ್ನು ಈ ತಟದಿಂದ ನಿಂತು ನೋಡಿದರೆ ಆ ಕಡೆಯ ಕೆನಡಾ ಭಾಗದ ಜಲಪಾತದಲ್ಲಿ ವಿಹರಿಸುತ್ತಿರುವ ಬೋಟ್, ಅದರಲ್ಲಿನ ಜನರೆಲ್ಲ ಕಾಣಿಸುತ್ತಾರೆ. ನಾವಿರುವ ಕಡೆಯಿಂದ ಅಂದರೆ ಅಮೆರಿಕಾದಲ್ಲಿ ಚಿಕ್ಕ ಜಲಪಾತಗಳಾದ ಅಮೆರಿಕನ್ ಫಾಲ್ಸ್ ಮತ್ತು ಬ್ರೈಡಲ್ ವೆಲ್ ಫಾಲ್ಸ್ ಕಾಣಿಸುವುದರಿಂದ ಕೆನಡಾಕ್ಕೆ ಹೋಲಿಸಿದರೆ ಜಲಪಾತದ ನೋಟ ಏನೇನೂ ಅಲ್ಲ. ಕೆನಡಾ ಕಡೆಯಿಂದ ಮೂರನೇಯದ್ದು ಬೃಹತ ಜಲಪಾತವಾದ ಹಾರ್ಸ್ ಶೂ ಫಾಲ್ಸ್ ಕಾಣಿಸುತ್ತದೆಯಾದ್ದರಿಂದ ಇಲ್ಲಿಗಿಂತ ಹತ್ತು ಪಟ್ಟು ಮನೋಹರವಾಗಿ, ಭವ್ಯವಾಗಿ ಕಾಣಿಸುತ್ತದೆ. ಹಾಗಾಗಿ ಬಹುತೇಕ ಜನ ನಯಾಗರ ನೋಡಲು ಕೆನಡಾಕ್ಕೆ ಹೋಗುತ್ತಾರೆ. ಇಷ್ಟು ದೊಡ್ಡ ಜಲಪಾತ ಹೇಗೆ ಹುಟ್ಟಿತೆಂಬ ಕತೆಯಿದೆ. ಬೃಹತ ಪ್ರಮಾಣದ ಮಂಜುಗಡ್ಡೆ ಕರಗಿ ತಗ್ಗುಗಳಲ್ಲಿ ನೀರು ತುಂಬಿಕೊಂಡು, ಎತ್ತರದಿಂದ ಧುಮ್ಮಿಕ್ಕಿ ನಿರ್ಮಾಣವಾದ ಕೆರೆ, ಜಲಪಾತವೇ ನಯಾಗರ.
1870 ರ ಸಮಯದಲ್ಲಿ ಜಲಪಾತವನ್ನು ಇಷ್ಟು ಸುಲಭವಾಗಿ ನೋಡುವ ಅವಕಾಶಗಳಿರಲಿಲ್ಲ. ಈ ಜಾಗದ ಸುತ್ತಲೂ ಫ್ಯಾಕ್ಟರಿ, ಪ್ರೈವೇಟ್ ಆಸ್ತಿ ಪಾಸ್ತಿಗಳಿದ್ದುದರಿಂದ ಎಲ್ಲರು ಅಲ್ಲಿಗೆ ಹೋಗುವ ಹಾಗಿರಲಿಲ್ಲ. ಅಲ್ಲಿರುವ ಮನೆಗಳ ಮಾಲೀಕರಿಗೆ ದುಡ್ಡು ಕೊಟ್ಟು ಅವರ ಮನೆಯ ಬಾಲ್ಕನಿಯ ಮೂಲಕವೋ, ಗಾಜಿನ ಕಿಟಕಿಯ ಮೂಲಕವೋ ತುಂಬಿ ಹರಿಯುತ್ತಿದ್ದ ಜಲಪಾತವನ್ನು ನೋಡಬೇಕಿತ್ತು. ಇದನ್ನೊಂದು ಪಬ್ಲಿಕ್ ಪಾರ್ಕ್ ಮಾಡಬೇಕೆಂದು ಆಗಿನ ಹಲವರು ಚಳುವಳಿ ನಡೆಸಿದ್ದರಿಂದ ಈಗ ನಮಗೆ ಸುಲಭವಾಗಿ ಯಾವುದೇ ಟಿಕೆಟ್ ಅಥವಾ ಹಣದ ಅವಶ್ಯಕತೆಯಿಲ್ಲದೆ ಜಲಪಾತವನ್ನು ಎಷ್ಟು ಹತ್ತಿರದಿಂದ ಸಾಧ್ಯವೋ ಅಷ್ಟು ಹತ್ತಿರದಿಂದ ನೋಡಬಹುದಾಗಿದೆ.
ಮೊದಲ ದಿನ ನಾವು ಪಾರ್ಕಿನ ಸುತ್ತ ಮುತ್ತ ಓಡಾಡಿ, ಜಲಪಾತದ ಹತ್ತಿರ ನಿಂತಿದ್ದಾಗ ಮುಖಕ್ಕೆ ರಾಚುತ್ತಿದ್ದ ತುಂತುರು ಹನಿಗಳನ್ನು ಆಸ್ವಾದಿಸುತ್ತ, ಆ ಭವ್ಯ ಸೌಂದರ್ಯವನ್ನು ಕಣ್ಣಿನಲ್ಲೇ ತುಂಬಿಕೊಳ್ಳುತ್ತ, ಎಷ್ಟೊತ್ತು ನೋಡಿದರು ತೃಪ್ತಿ ಹೊಂದದ ಮನಸ್ಸನ್ನು ಸಂಭಾಳಿಸುತ್ತ ಇಡೀ ದಿನ ಕಳೆದೆವು. ಮಾರನೇ ದಿನ ಬೋಟ್ ರೈಡ್ ಒಂದನ್ನು ಬುಕ್ ಮಾಡಿದ್ದೆವು. ಈ ಬೋಟಿನ ಮೂಲಕ ಸುಮಾರು ಮೂನ್ನುರು ಮೀಟರಗಳಷ್ಟು ಅಗಲವಿರುವ, ನೂರು ಅಡಿ ಎತ್ತರದಿಂದ ಧುಮ್ಮಿಕ್ಕುವ ಅಮೆರಿಕನ್ ಫಾಲ್ಸ್ ಬುಡದವರೆಗೂ ಹೋಗಬಹುದು. ಆ ದೈತ್ಯ ಫಾಲ್ಸ್ ಅಡಿಯಲ್ಲಿ ಹೋಗುವುದೆಂದರೆ ಸಾಮಾನ್ಯವೇ? ನಮಗೆ ಮೊದಲೇ ರೈನ್ ಕೋಟ್ ಇತ್ಯಾದಿಗಳನ್ನು ಕೊಟ್ಟಿರುತ್ತಾರೆ. ನೀರು ಬೀಳುವ ಶಬ್ದ ಇಷ್ಟು ಜೋರಾಗಿರುತ್ತದೆಂದರೆ ನಾವು ಪರಸ್ಪರ ಮಾತನಾಡಿದ್ದು ಒಂಚೂರು ಕೇಳುವುದಿಲ್ಲ. ಒಂದೇ ಸಮನೆ ಬೀಳುವ ತುಂತುರು ಮಳೆಯ ಹಾಗೆ ಮೇಲಿನಿಂದ ಕೆಳಗೆ ಬಿದ್ದ ಜಲಧಿಯ ರಭಸದಿಂದ ನೀರು ಚಿಮ್ಮುವುದರಿಂದ ಕಣ್ಣು ತೆಗೆಯಲೂ ಆಗುವುದಿಲ್ಲ. ಅದೊಂದು ತರಹದ ದಿವ್ಯ ಧ್ಯಾನ. ಕಣ್ಣನ್ನು ತೆಗೆಯದೆ ಯಾರೊಡನೆಯೂ ಮಾತನಾಡದೆ ಆ ಸೃಷ್ಟಿ ಸೌಂದರ್ಯವನ್ನು ಬಗೆದುಕೊಂಡು ಕಾಪಿಟ್ಟುಕೊಳ್ಳಬೇಕು. ಮುಂದೊಮ್ಮೆ ಯಾಂತ್ರಿಕ ಜೀವನದಿಂದ ಬೇಸತ್ತಾಗ ಕಣ್ಣ ಮುಚ್ಚಿ ಅದನ್ನು ಹೆಕ್ಕಿದಾಗ ನೆಮ್ಮದಿಗೆ ಅದು ದಕ್ಕಬೇಕು.
ಅಮೆರಿಕಾ ಕಡೆಯಲ್ಲಿ ಎರಡು ಫಾಲ್ಸ್ ಬರುತ್ತವೆ ಎಂದು ಹೇಳಿದೆನಲ್ಲ. ಈಗ ನಾವು ಹೋಗಿದ್ದು ಎರಡರಲ್ಲಿಯೇ ತುಸು ದೊಡ್ಡದಾದದ್ದು. ಇನ್ನು ಮೂರನೇ ಫಾಲ್ಸ್ ನ ಅಡಿಗೂ ಹೋಗಬಹುದು. ಅಲ್ಲಿಗೆ ಹೋಗಲು ಯಾವುದೇ ಬೋಟ್ ಬೇಕಿಲ್ಲ. ಕಾಲು ನಡಿಗೆಯಲ್ಲಿಯೇ ಹೋಗಬಹುದು. ಈ ಅನುಭವ ಇನ್ನು ಚೆನ್ನ. ಯಾಕೆಂದರೆ ಇಲ್ಲಿ ಜಲಪಾತದ ಅಡಿಯಲ್ಲಿ ನಿಲ್ಲಬಹುದು, ಕುಣಿಯಬಹುದು, ಖುಷಿಯಲ್ಲಿ ತೇಲಬಹುದು… ತಲೆಯೆತ್ತಿ ಮೇಲೆ ನೋಡಿದರೆ ದೈತ್ಯಾಕಾರದ ಬಿಳಿಯ ಬಣ್ಣದ ನೀರಿನ ಆವಳಿ. ಅದರ ಶಬ್ದಕ್ಕೆ ಹೆಚ್ಚಾದ ಎದೆಯ ಬಡಿತ, ಕಣ್ಣು ತೆರೆಯಲು ಬಾರದಂತಹ ತುಂತುರು, ಮೈ ಮನಗಳ ಮೇಲೆಲ್ಲಾ ಪನ್ನೀರಿನ ಸಿಂಪಡಣೆ..
ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ಡ್ರೈವಿಂಗ್ ಬಗ್ಗೆಯೂ ಹೇಳಲೇಬೇಕು. ಇಲ್ಲಿ ಅಮೆರಿಕಕ್ಕೆ ಬಂದ ಮೇಲೆ ಕಾರು, ಡ್ರೈವಿಂಗ್ ಎಲ್ಲವು ಸಾಮಾನ್ಯವಲ್ಲವೇ.. ಹಾಗಾಗಿ ನಾನು ಡ್ರೈವಿಂಗ್ ಕಲಿತೆ. ಟೂ ವೀಲರ್ ಸಹಿತ ಓಡಿಸಲು ಬರದವಳು ಈಗ ನಾಲ್ಕು ಗಾಲಿಯ ವಾಹನವೊಂದಕ್ಕೆ ದಿಕ್ಕು ತೋರಿಸುವ ದೇವರಾಗಿದ್ದೆ. ನಾನು ಕಲಿಯಲು ಶುರು ಮಾಡಿ ಕೆಲವು ತಿಂಗಳಾಗಿತ್ತೇನೋ ಅಷ್ಟೇ. ಆಗಲೇ ಅಮ್ಮ, ಅತ್ತೆ, ಮಾವ ಎಲ್ಲರು ಬಂದಿದ್ದು. ಅವರು ಗಾಡಿಯಲ್ಲಿ ಕೂತಿದ್ದಾಗ ಆಗಾಗ ಓಡಿಸುತ್ತಿದ್ದೆ. ಯಾರು ನಂಬಿದರೂ ನಮ್ಮಮ್ಮನಿಗೆ ಮಾತ್ರ ನನ್ನ ಮೇಲೆ ನಂಬಿಕೆಯಿಲ್ಲ. ನಾನು ಓಡಿಸುವಾಗಲೆಲ್ಲ ಶಿವಬಾಬಾ ಶಿವಬಾಬಾ ಎನ್ನುತ್ತಾ ನನ್ನ ಮುಂದೆಯೇ ದೇವರಿಗೆ ಕೈ ಮುಗಿಯುತ್ತ ಕೂತಿರುತ್ತಿದ್ದಳು. ಒಮ್ಮೆ ಹೈವೇ ಮೇಲೆ ಓಡಿಸುವಾಗ ಅಲ್ಲಿ ರಸ್ತೆ ನಿರ್ಮಾಣದ ಕೆಲಸ ನಡೆಯುತ್ತಿದ್ದರಿಂದ ರಸ್ತೆ ಹದಗೆಟ್ಟಿತ್ತು. ಸಮರ್ಥ ಓಡಿಸುವಾಗ ಚೆನ್ನಾಗಿಯೇ ಇದ್ದ ರೋಡು ನಾನು ಶುರು ಮಾಡಿದ ಮೇಲೆಯೇ ಹದಗೆಡಬೇಕೇ? ಸ್ವಾಭಾವಿಕವಾಗಿಯೇ ಕಾರು ಮೇಲೆ ಕೆಳಗೆ ಕುಣಿಯುತ್ತಿತ್ತು. ಆದರೆ ನಮ್ಮಮ್ಮನಿಗೆ ಮಾತ್ರ ಹದಗೆಟ್ಟ ರಸ್ತೆಗಿಂತ ನನ್ನ ಮೇಲೆ ಅಪನಂಬಿಕೆ. ನಾನೇ ಸರಿಯಾಗಿ ಓಡಿಸುತ್ತಿಲ್ಲವೆಂದು ಅವಳ ಭಾವನೆ!
ಮರಳಿ ಬರುವಾಗ ಎಂಟು ಗಂಟೆಗಳ ಕಾರ ಡ್ರೈವ್ ಆದ್ದರಿಂದ ಸಮರ್ಥನಿಗೆ ಚೂರು ವಿಶ್ರಾಂತಿ ಕೊಡುವ ಉದ್ದೇಶದಿಂದ ನಾನು ಓಡಿಸುತ್ತೇನೆ ಎಂದು ಹೇಳಿದೆ. ಸಂಜೆಯಾಗಿತ್ತು. ಕತ್ತಲು ಕವಿಯುತ್ತಿತ್ತು. ಹೈವೇ ಬಿಟ್ಟು ಒಳಗೆ ಹೋಗಲೆಂದು ಎಕ್ಸಿಟ್ ತೆಗೆದುಕೊಳ್ಳಬೇಕಿದ್ದರಿಂದ ನಾನು ಕಾರನ್ನು ಎಡಕ್ಕೆ ತೆಗೆದುಕೊಂಡು ಜೋರಾಗಿ ಬ್ರೇಕ್ ಹಾಕಿ ಎಪ್ಪತ್ತರಲ್ಲಿ ಓಡುತ್ತಿದ್ದ ಕಾರನ್ನು ಒಮ್ಮೆಲೇ ನಲವತ್ತಕ್ಕೆ ತಂದೆ. ಹಿಂದೆ ಇದ್ದವರೆಲ್ಲ ಮುಗ್ಗರಿಸಿ ಇನ್ನೇನು ಕತೆ ಮುಗಿದೇ ಹೋಯಿತು ಎಂದುಕೊಂಡು ರಾಮ ಕೃಷ್ಣನ ಜಪ ಶುರು ಮಾಡಿ ಬಿಟ್ಟಿದ್ದರು!
ಅಲ್ಲಿ ನ್ಯೂಯಾರ್ಕಿನಲ್ಲಿ ಬಾಡಿಗೆ ಕಾರು ಓಡಿಸುವಾಗ ನಡೆದ ಇನ್ನೊಂದು ಘಟನೆ. ಕಾರುಗಳೆಂದರೆ ಅಡುಗೆ ಮನೆಗಳಿದ್ದಂತೆ. ನಮ್ಮದಾಗಿದ್ದರೆ ಮಾತ್ರ ಹೆಚ್ಚು ಪರಿಣಾಮಕಾರಿ. ಈಗಷ್ಟೇ ಕಾರು ಕಲಿತಿದ್ದ ನನಗೆ ನಮ್ಮ ಕಾರಿನ ಜೊತೆ ಮಾತ್ರ ಸಲುಗೆಯಿತ್ತು. ಅದರ ಉದ್ದ ಅಗಲದ ಸರಿಯಾದ ಕಲ್ಪನೆಯಿದ್ದುದರಿಂದ ಅದಕ್ಕೆ ಹೊಂದಿಕೊಂಡಿದ್ದೆ. ಬಾಡಿಗೆ ಕಾರನ್ನು ಓಡಿಸಲು ಶುರು ಮಾಡಿದಾಗ ಅದೂ ನ್ಯೂಯಾರ್ಕಿನಂತಹ ಜನದಟ್ಟಣೆಯ ಊರಿನಲ್ಲಿ ಎಕ್ಸಲರೇಟರ್ ಮೇಲೆ ಕಾಲಿಟ್ಟ ಕೂಡಲೇ ಭಯ ಶುರುವಾಯಿತು. ಕಾರು ಓಡಿಸುವುದರಲ್ಲಿ ಸಮರ್ಥನದು ಎತ್ತಿದ ಕೈ. ಎಂತಹ ರಾತ್ರಿಯೇ ಇರಲಿ, ಹತ್ತು ಹನ್ನೆರಡು ಗಂಟೆಗಳ ದಾರಿಯೇ ಇರಲಿ ಚೂರು ತಪ್ಪಿಲ್ಲದೆ ನಿರಾಯಾಸವಾಗಿ ಓಡಿಸುತ್ತಾರೆ. ಹಾಗಾಗಿ ನಾನು ಓಡಿಸುವಾಗ ಅಷ್ಟೊಂದು ಪರಿಪೂರ್ಣತೆಯಿಲ್ಲದಿದ್ದರೂ ಆದಷ್ಟು ತಪ್ಪುಗಳಾಗದಂತೆ ಓಡಿಸು ಎನ್ನುವುದು ಅವರ ನಿರಂತರ ಬೇಡಿಕೆ (ಆಜ್ಞೆ!). ಅವತ್ತು ನಾನು ಓಡಿಸುವಾಗ ಇಲ್ಲಿರುವ ನಿಯಮಗಳನ್ನು ತಪ್ಪಿದಾಗಲೆಲ್ಲ ಹಾಗೆ ಮಾಡು, ಹೀಗೆ ಮಾಡಬಾರದಿತ್ತು, ಅಲ್ಲಿ ಬ್ರೇಕ್ ಹಾಕು, ಇಲ್ಲಿ ನಿಲ್ಲಿಸು, ರೈಟ್ ಹೋಗುವಾಗ ಸ್ವಲ್ಪ ಹೊತ್ತು ನಿಂತು ನಂತರ ಹೋಗು (ರೋಡ್ ಖಾಲಿಯಿದ್ದರೂ!) ಹೀಗೆ ನನಗೆ ಪದೇ ಪದೇ ರೂಲ್ಸ್ ನೆನಪಿಸುವುದರಲ್ಲಿ ನಿರತವಾದ ಸಮರ್ಥ ಮಾತುಗಳನ್ನು ಕೇಳಿ ಹಿಂದೆ ಕುಳಿತವರೆಲ್ಲ ನನಗೆ ಕಾರು ಬರುವುದೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟರು! ನನಗೆ ಕಾರು ಬರುತ್ತದೆ ಎಂದು ಪ್ರಮಾಣ ಮಾಡಿ ಹೇಳಿದರೂ ಅವರಾರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅಮೆರಿಕಾದಿಂದ ಹೊರಡುವಾಗ ನಮ್ಮ ಮಾವ ‘ಸಾವಕಾಶ ಕಲಿ ಕಾರು..’ ಎಂದು ಹೇಳಿ ಹೋಗಿದ್ದರು. ಅಂದರೆ ಅವರ ಪಾಲಿಗೆ ನಾನಿನ್ನೂ ಕಾರು ಕಲಿತಿಲ್ಲ ಎಂದಾಯಿತು!
ಒಮ್ಮೆಯಾದರೂ ಜೋಗದ ಬಂಡಿ ನೋಡಬೇಕು ಎಂದು ಹಾಡಿದ್ದಾರಲ್ಲ ಅಣ್ಣಾವ್ರು ಹಾಗೆಯೇ ಒಮ್ಮೆಯಾದರೂ ನಯಾಗರ ನೋಡಬೇಕು. ಆ ದೈತ್ಯ ಸೌಂದರ್ಯದ ಮುಂದೆ, ತನ್ನೊಳಗೆ ಅದ್ಭುತವನ್ನು ನಿರ್ಮಿಸುವ ನಿಸರ್ಗದ ಮುಂದೆ ನಾವೆಲ್ಲಾ ತೃಣಮಾತ್ರರು ಎನ್ನುವ ಸತ್ಯದ ಅರಿವಾಗುತ್ತದೆ.