ಕಾಡಿನ ಗರ್ಭದೊಳಗೆ ಬಂಧಿಯಾದಾಗ – ಹೀಗೊಂದು ಚಾರಣದ ಅನುಭವ
ಆಗಾಗ ದೂರದ ಪ್ರಯಾಣಕ್ಕೆ ಹೋಗುತ್ತಿದ್ದರೆ ನಮ್ಮಿಬ್ಬರಿಗೂ ಖುಷಿ. ಪ್ರವಾಸದಲ್ಲಿ ಕಂಡಷ್ಟು ಸಂತೋಷ, ಸಂತೃಪ್ತಿಯನ್ನು ಇನ್ನಾವುದರಲ್ಲಿಯೂ ಕಂಡಿಲ್ಲ ನಾನು. ಬರವಣಿಗೆ, ಓದಿನಲ್ಲಿ ಸಿಗುವ ಖುಷಿಗಿಂತ ಒಂದು ಮುಷ್ಟಿ ಹೆಚ್ಚೆಂದೇ ಹೇಳಬಹುದು. ಕಾರಣವಿಷ್ಟೇ… ಓದಿನಲ್ಲಾಗಲಿ, ಬರವಣಿಗೆಯಲ್ಲಾಗಲಿ ನನ್ನದೊಂದು ಕಲ್ಪನೆಯ ಲೋಕ ತೆರೆದುಕೊಳ್ಳುತ್ತದೆ. ನಾನೇ ಆ ಲೋಕದ ನಿರ್ಮಾತೃ. ನನಗೆ ಬೇಕಾದ ಹಾಗೆ ನನ್ನ ಪರಿಧಿಯಲ್ಲಿ ಈ ಲೋಕ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಪ್ರತಿ ಬಾರಿ ಹೊಸ ಜಾಗವನ್ನು, ನಿಸರ್ಗದ ರಮಣೀಯತೆಯನ್ನು ನೋಡಿದಾಗಲೆಲ್ಲ ಆ ಪರಿಧಿ ದೊಡ್ಡದಾಗುತ್ತ ಹೋಗುತ್ತದೆ. ಅಂದರೆ ಬರವಣಿಗೆಗೂ ಓದಿಗೂ ಬೇಕಾದ ಕಲ್ಪನೆಯನ್ನು, ಅನುಭವದ ಸರಕನ್ನು ಒದಗಿಸುತ್ತಿರುವುದು ಪ್ರವಾಸವೆಂದು ನನ್ನ ಭಾವನೆ.
ಅದು ಶರತ್ಕಾಲದ ಆರಂಭ.. ಬೇಸಿಗೆಗೆ ವಿದಾಯ ಹೇಳುವ, ಚಳಿಗಾಲಕ್ಕೆ ಮುನ್ನುಡಿ ಬರೆಯುವ ಬೆಚ್ಚನೆಯ ಕಾಲ. ಇಲ್ಲಿ ಬಿರು ಬೇಸಿಗೆಯಿಲ್ಲ, ಗಡ ಗಡನೆ ನಡುಗಿಸುವ ಚಳಿಯಿಲ್ಲ.. ಚೂರು ಚಳಿಯೆನ್ನಿಸಿದರು ಬೆಚ್ಚಗಿನ ಉಡುಗೆಯಲ್ಲಿ ಬಿಸಿ ಬಿಸಿ ಚಹಾ ಸವಿಯುತ್ತಿದ್ದರೆ ಅಮ್ಮನ ಮಡಿಲಿನಲ್ಲಿ ಕಾಣಸಿಗುವ ಆಪ್ತತೆಯನ್ನು ಕಟ್ಟಿಕೊಡುವ ಕಾಲ. ನಾವಿಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳುತ್ತ ಇದ್ದರೆ ಹೊರಗಡೆ ಮರಗಳು ಬೆತ್ತಲಾಗುತ್ತಿರುತ್ತವೆ. ಹೌದು.. ಶರತ್ಕಾಲ ಬಂತೆಂದರೆ ಸಾಕು ಎಲೆಗಳೆಲ್ಲ ಉದುರಲು ಶುರು ಮಾಡುತ್ತವೆ. ವಸಂತಕಾಲದವರೆಗೂ ಹೀಗೆ ಬೆತ್ತಲಾಗಿಯೇ ನಿಲ್ಲುವ ಮರಗಳಿಗೆ ಚಳಿ ತಾಗುವುದೇ ಇಲ್ಲವೆನೋ..
ಉದುರುವ ಮುನ್ನ ಎಲೆಗಳ ಹಸಿರು ಬಣ್ಣ ಮಾಯವಾಗಿ ಹಳದಿ, ಕೆಂಪು, ನೇರಳೆ ಬಣ್ಣಗಳು ಮೂಡಿರುತ್ತವೆ. ರಂಗೋಲಿಯ ಚಿತ್ತಾರದಂತೆ.. ಮರಗಳೆಲ್ಲ ಅರಿಷಿಣ, ಕುಂಕುಮದಿಂದ ಶೋಭಿತಳಾದ ಮುತ್ತೈದೆಯಂತೆ ಕಾಣಿಸಲಾರಂಭಿಸುತ್ತವೆ. ಸಾಲು ಸಾಲು ಬಣ್ಣ ಬಣ್ಣದ ಸೀರೆ ಉಟ್ಟ ಮರಗಳು ಮದನಾರಿಯರಷ್ಟು ಸುಂದರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಹೀಗೆ ಕೆಲವು ಪ್ರದೇಶಗಳು ಶರತ್ಕಾಲದ ಬಣ್ಣಗಳಿಗೇ ಪ್ರಸಿದ್ಧಿ. ಅದನ್ನು ನೋಡಲೆಂದು ಹಲವರು ನೂರಾರು ಮೈಲುಗಳಿಂದ ಬರುತ್ತಾರೆ. ಶರತ್ಕಾಲವನ್ನು ಸಂಭ್ರಮಿಸುತ್ತಾರೆ. ಕಳೆದ ವರುಷ ನಾವು ಇಲ್ಲೆ ಹತ್ತಿರದ ಡೋರ್ ಕೌಂಟಿ ಎಂಬಲ್ಲಿಗೆ ಶರತ್ಕಾಲದ ಬಣ್ಣಗಳನ್ನು ನೋಡಲು ಹೋಗಿದ್ದೆವು. ಈ ಬಾರಿ ಮಿಷಿಗನ್ ಗೆ ಹೋಗಬೇಕೆಂದು ತೀರ್ಮಾನಿಸಿ ಸಕಲ ಸನ್ನದ್ಧರಾಗಿ ಹೊರಟೆವು. ನಾವು ವಾಸಿಸುವ ಊರಿನಿಂದ ಸುಮಾರು 10 ಗಂಟೆಗಳ ಕಾರ್ ಪ್ರಯಾಣ. ಒಂದೈದು ಗಂಟೆಗಳ ಪ್ರಯಾಣದ ನಂತರ ರಾತ್ರಿ ಹೋಟಲ್ ಒಂದರಲ್ಲಿ ತಂಗಿ ಮರುದಿನ ಬೆಳಿಗ್ಗೆ ಮತ್ತೆ ಪ್ರಯಾಣ ಮುಂದುವರೆಸಿದೆವು.
ಮಿಷಿಗನ್ ಆರಂಭವಾಗುತ್ತಿದ್ದಂತೆ ಬಣ್ಣ ಬಣ್ಣದ ಮರಗಳು ಕಾಣಿಸಲಾರಂಭಿಸಿದವು. ದೂರದ ಪರ್ವತವಂತೂ ಕಣ್ಣಿಗೆ ಹಬ್ಬ. ಯಾರೋ ಚಿತ್ತಾರ ಬರೆದಂತೆ. ಕಣ್ಣು ಹಾಯಿಸಿದಷ್ಟು ದೂರದಲ್ಲಿ ಕೆಂಪು ಹಳದಿ ಬಣ್ಣಗಳು. ರಸ್ತೆಗಳ ಇಕ್ಕೆಲಗಳಲ್ಲಿ ಬಣ್ಣ ಹೊದ್ದ ಮರಗಳ ಸಾಲು. ಗಾಳಿಯಲ್ಲಿ ಬಳುಕುತ್ತಾ ಹಾರಾಡುತ್ತಿದ್ದ ತರಗೆಲೆಗಳು ಮೆಲ್ಲ ಮೆಲ್ಲನೆ ಧರೆಗಿಳಿಯುತ್ತ ನಮ್ಮ ಕಾರಿನ ಮೇಲೆ ಬಂದು ಬೀಳುತ್ತ ನಮ್ಮನ್ನು ಸ್ವಾಗತಿಸುತ್ತಿದ್ದವು. ಹೀಗೆ ನೆಲಕ್ಕಪ್ಪಳಿಸಿದ ಎಲೆಗಳು ಥೇಟ್ ಸ್ವರ್ಗದ ಪ್ರವೇಶದ್ವಾರದಲ್ಲಿ ಕಾಣಸಿಗುವ ಹೂ ಹಾಸಿಗೆಯಂತೆ.. ಈಗಷ್ಟೇ ಶರತ್ಕಾಲ ಶುರುವಾಗಿದ್ದರಿಂದ ಎಲೆಗಳು ಇನ್ನು ಉದುರಲು ಶುರು ಮಾಡಿರಲಿಲ್ಲ. ಹಾಗಾಗಿ ದಟ್ಟನೆಯ ಎಲೆಗಳಿಂದ ಕೂಡಿದ ಮರಗಳನ್ನು ನೋಡುವ ಸೌಭಾಗ್ಯ ನಮಗೆ.
ಚಾಪೆಲ್ ಬೀಚ್ ಎಂಬಲ್ಲಿಗೆ ಮದ್ಯಾಹ್ನ ಸುಮಾರು 2 ಗಂಟೆಗೆ ತಲುಪಿದೆವು. ಇದಕ್ಕು ಮೊದಲು ನಾನು ನಿಮಗೆ ಅಮೆರಿಕಾದ ಕಾಡುಗಳ ಬಗ್ಗೆ ಹೇಳಬೇಕು. ಅಮೆರಿಕಾ ವನ್ಯಸಂಪತ್ತಿನಿಂದ ಸಮೃದ್ಧವಾದ ರಾಷ್ಟ್ರ. ಸಣ್ಣ ಮತ್ತು ದೊಡ್ಡ ಕಾಡುಗಳು, ಉದ್ಯಾನವನಗಳು, ಜಲಪಾತಗಳು ಇಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಈ ಕಾಡುಗಳ ಒಳಗೆ ಹೋಗಲು ಟ್ರೆಲ್ ಅಂದರೆ ಸಣ್ಣದಾದ ನಡೆದುಕೊಂಡು ಅಥವಾ ಸೈಕಲ್ ಮೇಲೆ ಹೋಗಬಹುದಾದಂತಹ ದಾರಿಗಳಿರುತ್ತವೆ. ಸಣ್ಣ ಕಾಡಾಗಿದ್ದಲ್ಲಿ 3-4 ಮೈಲು, ದೊಡ್ಡದಾದರೆ 10 ಮೈಲುಗಳಿಗಿಂತಲೂ ಉದ್ದದ ದಾರಿಗಳು. ಬೇಸಿಗೆಯಲ್ಲಿ ಹೆಚ್ಚಾಗಿ ಇಂತಹ ಸ್ಥಳಗಳಿಗೆ ಭೇಟಿ ನೀಡುವ ಜನರು ಈ ಕಾಡಿನ ಒಳಗಿನ ಪ್ರಯಾಣವನ್ನು ಆನಂದಿಸುತ್ತಾರೆ. ಈ ಕಾಡುಗಳು ಬೇಸಿಗೆಯಲ್ಲಿ ಒಂದು ತರಹದ ಅನುಭವವನ್ನು ನೀಡಿದರೆ ಶರತ್ಕಾಲದಲ್ಲಿ ಬೇರೆಯದೇ ಉಲ್ಲಾಸವನ್ನು ಒದಗಿಸುತ್ತವೆ. ಕಾಡಿನ ಮಧ್ಯೆ ಬಣ್ಣಗಳ ಸೊಬಗನ್ನು ಆಸ್ವಾದಿಸುತ್ತ ನಡೆಯುವ ಸಂಭ್ರಮವೇ ಬೇರೆ.
ಹೀಗೆ ನಾವು ಹೋಗಿದ್ದು ಸುಮಾರು 7 ಮೈಲುಗಳಷ್ಟು ನಡಿಗೆಯ ನಂತರ ಕಾಣಸಿಗುವ ಚಾಪೆಲ್ ಬೀಚ್ ನ್ನು ನೋಡಲು.. ಕಾಡಿನೊಳಗೆ ಪ್ರವೇಶಿಸುವ ಮುನ್ನವೇ ಕಾಡಿನ ನಕ್ಷೆ, ನೋಡಬಹುದಾದಂತಹ ಸ್ಥಳಗಳು, ಜಲಪಾತಗಳು ಸಿಗುವ ದಿಕ್ಕು ಇತ್ಯಾದಿ ಮಾಹಿತಿಯನ್ನು ಬೋರ್ಡ್ ಒಂದರ ಮೇಲೆ ಹಾಕಿದ್ದರು. ಒಮ್ಮೆ ಒಳಗೆ ಹೋದರೆ ಮುಗಿಯಿತು ಕೇವಲ ದಿಕ್ಕು ತೋರಿಸುವ ಬೋರ್ಡ್ ಗಳು ಎರಡು ಮೂರು ಮೈಲಿಗೊಂದರಂತೆ ಸಿಗುವುದನ್ನು ಹೊರತು ಪಡಿಸಿದರೆ ದಾರಿಯ ಬಗ್ಗೆ ಅಥವಾ ಕಾಡಿನ ಯಾವುದೇ ಮಾಹಿತಿಯನ್ನು ತಿಳಿಸುವ ಯಾವುದೇ ಮೂಲಗಳು ಸಿಗುವುದಿಲ್ಲ. ಗೂಗಲ್ ಮ್ಯಾಪ್ಸ್ ಇರುತ್ತಾದರು ದಾರಿಯ ಪೂರ್ಣ ಮಾಹಿತಿ ಇರುವುದಿಲ್ಲ.
ಹೀಗಾಗಿ ನಾವು ಎಲ್ಲವನ್ನು ಸವಿವರವಾಗಿ ಓದುತ್ತಾ ನಿಂತಿದ್ದೆವು. ಕಾಡಿನಲ್ಲಿ ಕರಡಿಗಳಿವೆ, ತಿಂಡಿ ತಿನಿಸುಗಳನ್ನು ತೆಗೆದಾಗ ಜೋಪಾನ ಎಂದೆಲ್ಲ ಬರೆದಿತ್ತು. ನಮ್ಮ ಪಕ್ಕದಲ್ಲಿಯೇ ನಿಂತಿದ್ದ ಅಜ್ಜಿಯೊಬ್ಬಳು ‘OMG Bears’ ಎಂದು ಉದ್ಗರಿಸಿದಳು. ಕಾಡಿನಲ್ಲಿ ಅಲೆದಾಡಿ ಆಚೆ ಬರುತ್ತಿದ್ದವನೊಬ್ಬ ‘ಹೌದು.. ನನ್ನ ಕಣ್ಣಿಗೂ ಕಾಣಿಸಿತು’ ಎಂದು ಹೇಳುತ್ತ ನಮ್ಮ ಪಕ್ಕದಿಂದಲೇ ಸಾಗಿ ಹೋದ. ಕೇಳಿದ ನಮಗೆ ಢವಢವ.. ನಿಜ ಹೇಳಿದನೋ ಅಥವಾ ನಮ್ಮನ್ನು ಹೆದರಿಸಲೆಂದೇ ಹಾಗೆ ಹೇಳಿದನೋ ಗೊತ್ತಿಲ್ಲ. ಕರಡಿ ಇರಲಿ ಬಿಡಲಿ ನಾವಂತೂ ಒಳಗೆ ಹೋಗಬೇಕಲ್ಲ.. ಒಂದಷ್ಟು ತಿನಿಸುಗಳು, ನೀರಿನ ಬಾಟಲಿಯನ್ನು ಬೆನ್ನಿಗೇರಿಸಿದ್ದ ಬ್ಯಾಗಿಗೆ ಹಾಕಿ, ಚಳಿಯಿದ್ದುದರಿಂದ ಜಾಕೆಟ್, ಗ್ಲೋವ್ಸ್ ಇತ್ಯಾದಿಗಳನ್ನು ಹಾಕಿಕೊಂಡು ಕಾಡಿನ ಒಳ ಹೊಕ್ಕೆವು.
ಸಾಮಾನ್ಯವಾಗಿ ಸಣ್ಣ ಕಾಡಾದಲ್ಲಿ ನಮ್ಮ ಮುಂದೆ ಹೋಗುತ್ತಿರುವ ಜನರು ಕಾಣಿಸುತ್ತಿರುತ್ತಾರೆ ಇಲ್ಲವೇ ಹಿಂದೆ ಬರುತ್ತಿರುವವರ ಮಾತನ ಸದ್ದು ಕೇಳಿಸುತ್ತಿರುತ್ತದೆ. ಈ ಕಾಡಿನ ಪ್ರಮಾಣ ಬಲು ದೊಡ್ಡದು. ಮುಗಿಲು ಚುಂಬಿಸುವಂತಿದ್ದ ಬೃಹದಾಕಾರದ ಮರಗಳಿಂದ ದಟ್ಟವಾಗಿತ್ತು. ಹೀಗಾಗಿ ಜನರು ಕಾಣಿಸುತ್ತಲೂ ಇರಲಿಲ್ಲ ಯಾವ ಸದ್ದು ಸಹ ಕೇಳಿ ಬರುತ್ತಿರಲಿಲ್ಲ. ಇಡೀ ಪ್ರಪಂಚದಲ್ಲಿ ನಾವಿಬ್ಬರೇ ಏನೋ ಎಂಬಂತೆ.. ಅಲ್ಲಲ್ಲಿ ಹಕ್ಕಿಗಳ ಕೂಹು ಶಬ್ದ, ಅಳಿಲುಮರಿ ಒಣಗಿದ ಎಲೆಗಳ ಮೇಲೆ ಓಡಿದ ಶಬ್ದ, ನಮ್ಮ ಕಾಲ್ನಡಿಗೆಯ ಶಬ್ದ ಬಿಟ್ಟರೆ ಕಾಡು ಪ್ರಶಾಂತವಾಗಿತ್ತು. ಕಾಡಿನ ಒಳ ಹೋದಂತೆ ಮರಗಳ ಮಧ್ಯೆ ಚಳಿ ಕಡಿಮೆಯಾಗಿತ್ತು.. ಮರಗಳಲ್ಲಿ ಈಗಷ್ಟೇ ಹಳದಿ ಬಣ್ಣ ಆವರಿಸಿಕೊಳ್ಳುತ್ತಿತ್ತು. ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿತ್ತು ಇಡೀ ಕಾಡು. ನಾವು ನಡೆಯುತ್ತಿದ್ದ ದಾರಿಯೇನೂ ಕ್ಲಿಷ್ಟವಾಗಿರಲಿಲ್ಲ. ಹಾಗಾಗಿ ಯಾವುದೇ ಅಡೆತಡೆಯಿಲ್ಲದೆ ಪೃಕೃತಿಯನ್ನು, ಶುದ್ಧ ಗಾಳಿಯ ಆಹ್ಲಾದತೆಯನ್ನು ಸವಿಯುತ್ತ ಸಾಗಿದ್ದೆವು.
ಮುಂದೇನಿರಬಹುದು ಎಂದುಕೊಳ್ಳುತ್ತ ಸಾಗಿದ ನಮಗೆ ಮೊದಲು ಕಂಡಿದ್ದು ಚಾಪೆಲ್ ಫಾಲ್ಸ್. ಇಷ್ಟೊತ್ತು ಸದ್ದಿಲ್ಲದೆ ಉಸಿರಾಡುತ್ತಿದ್ದ ಕಾಡಿಗೆ ಇದ್ದಕ್ಕಿದ್ದ ಹಾಗೆ ಜೀವ ಬಂತು. ಅದೆಲ್ಲಿದ್ದರೋ ಜನರು ಫಾಲ್ಸ್ ನ ಮುಂದೆ ಒಮ್ಮೆಲೆ ಪ್ರತ್ಯಕ್ಷವಾದರು. ದೂರದ ಅಷ್ಟೇನೂ ಎತ್ತರವಲ್ಲದ ಕಲ್ಲುಗಳ ಮೇಲಿಂದ ನೀರು ತೊರೆತೊರೆಯಾಗಿ ಇಳಿದು ಬರುತ್ತಿತ್ತು. ಸೀರೆಯುಟ್ಟ ಬಾಲೆ ನೆರಿಗೆ ಚಿಮ್ಮಿಸುತ್ತ ಬರುವಂತೆ ಹರಿಯುತ್ತಿದ್ದ ನೀರಿಗೆ ಕಾಲ್ಗೆಜ್ಜೆಯಂತಹ ಸದ್ದು. ಒಂದೇ ಧಿಮಿತದಲ್ಲಿ ಭುವಿಗಿಳಿಯುತ್ತಿದ್ದ ನೀರು ನಿಲ್ಲದೆ ಒಂದೇ ವೇಗದಲ್ಲಿ ಸಾಗಿತ್ತು. ಥೇಟ್ ಬೇಂದ್ರೆಯವರ ಗಂಗಾವತಾರಣದಲ್ಲಿ ಬರುವ ‘ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ’ ಗಂಗೆಯಂತೆ…
ಸರಿ.. ಅಲ್ಲಿ ಸ್ವಲ್ಪ ಹೊತ್ತು ಕಳೆದು ಮುಂದೆ ಸಾಗಿದೆವು. ಮತ್ತೆ ಜನರು ಮಾಯವಾದರು. ನಾವಿಬ್ಬರೇ.. ಈಗ ಇತರೆ ಸದ್ದುಗಳ ಜೊತೆಗೆ ನೀರಿನ ಸದ್ದು ಸಹ ವಾತಾವರಣದಲ್ಲಿ ಸಮ್ಮಿಳಿತಗೊಂಡು ಇನ್ನು ಸುಂದರವಾಗಿತ್ತು. ಸ್ವತಃ ದೇವರೇ ಬಂದು ಬಲು ಅಸ್ಥೆಯಿಂದ ಈ ಚಿತ್ರವನ್ನು ಬಿಡಿಸಿದಂತೆ... ಕಾಲುಗಳು ಆಯಾಸವನ್ನು ಲೆಕ್ಕಿಸದೆ ಮುಂದೆ ಸಾಗಿದ್ದವು. ಈ ಕಾಡು ತನ್ನ ಮಡಿಲಲ್ಲಿ ಇನ್ನು ಅದೇನನ್ನು ಬಚ್ಚಿಟ್ಟಿಕೊಂಡಿದೆಯೋ ಎಂದು ನೋಡುವ ತವಕ.. ಕಣ್ಣು ಹಾಯಿಸಿದಷ್ಟು ದೂರ ಹರಡಿಕೊಂಡಿದ್ದ, ಮುಗಿಲಿನವರೆಗೂ ಚಾಚಿಕೊಂಡಿದ್ದ, ಆಗಸವೇ ಕಾಣದಷ್ಟು ಹಳದಿ ಹಸಿರುಮಯವಾಗಿದ್ದ ಈ ನಿಸರ್ಗ ಒಮ್ಮಿಂದೊಮ್ಮೆಲೇ ಭೂಮಿಯನ್ನು ತೊರೆದು ವಿಶಾಲ ಸಮುದ್ರವಾಗುವ ಸೋಜಿಗವನ್ನು ಅನುಭವಿಸುವ ಹಂಬಲ…
ಸುಮಾರು ಅರ್ಧ ಮೈಲಿನಷ್ಟು ನಡೆದು ಬಂದಾಗ ಕಾಣಿಸಿದ್ದು ಮಗದೊಂದು ದೊಡ್ಡ ಜಲಪಾತ. ಇದು ತುಸು ದೂರದಲ್ಲಿದ್ದ ಬೆಟ್ಟಗಳ ಮಧ್ಯೆಯಿಂದ ಭುವಿಗೆ ಜಾರುತ್ತಿತ್ತು. ಹಳದಿ ಬಣ್ಣದ ನಡುವೆ ಶುಭ್ರ ಹಾಲಿನ ನೊರೆಯಂತಹ ನೀರು… ಎಷ್ಟು ನೋಡಿದರೂ ಸಾಲದು.. ಯಾರ ಹಂಗಿಲ್ಲದೆ, ಯಾರಿಂದ ಏನನ್ನೂ ಬಯಸದೆ ತನ್ನ ಪಾಡಿಗೆ ತಾನಿದ್ದು ಮನುಷ್ಯಪ್ರಾಣಿಗೆ ಸದಾ ಸಂತೋಷವನ್ನೇ ನೀಡುವ ಪ್ರಕೃತಿಯನ್ನು ನೋಡುತ್ತಿದ್ದರೆ ಮನಸು ತುಂಬಿ ಬರುತ್ತಿತ್ತು. ಯಾರಿಗು ಯಾವ ಉಪಕಾರವನ್ನೇ ಮಾಡದೆ, ತನ್ನ ಸ್ವಾರ್ಥದಲ್ಲೇ ಜೀವನ ಸಾಗಿಸುತ್ತ, ಕೇವಲ ತನ್ನ ಬಗ್ಗೆಯೇ ಯೋಚಿಸುವವನೆಂದರೆ ಮನುಷ್ಯನೊಬ್ಬನೆನೋ…
ಅಲ್ಲಿಂದ ಹೊರಡಲು ಮನಸಾಗುತ್ತಿರಲಿಲ್ಲ. ಅಭೀ ನಾ ಜಾವೋ ಛೋಡ್ ಕೆ ಏ ದಿಲ್ ಅಭಿ ಭರಾ ನಹಿ ಹಾಡಿನ ನಿಜವಾದ ಭಾವ ಅನುಭವಕ್ಕೆ ಬಂದಂತೆ.. ಆಗಲೇ 4 ಗಂಟೆಯಾಗಿತ್ತು. ನಾವಿಗಾಗಲೇ ಸುಮಾರು 2 ಮೈಲಿಗಳಷ್ಟು ಸಾಗಿ ಬಂದಿದ್ದೇವು… ಮುಂದೆ ೫ ಮೈಲುಗಳ ಕಾಡಿನ ಯಾನ ಬಾಕಿಯಿತ್ತು. ಬಂದ ದಾರಿಯಿಂದಲೇ ಮತ್ತೆ ಮರಳಿ ಹೋಗುವುದೋ ಅಥವಾ ಒಂದು ಪೂರ್ತಿ ಸುತ್ತು ಹಾಕಿ ಹೋಗುವುದೋ ಎಂಬುದು ನಮ್ಮ ಮುಂದಿದ್ದ ಪ್ರಶ್ನೆ. ಪೂರ್ತಿ ಸುತ್ತು ಹಾಕುವುದಾದರೆ ೫ ಮೈಲು ನಡೆಯಲೆಬೇಕು.. ಇಲ್ಲವಾದಲ್ಲಿ ೨ ಮೈಲುನಡೆದರೆ ನಮ್ಮ ಈ ಪ್ರಯಾಣ ಅಂತ್ಯಗೊಳ್ಳುತ್ತದೆ. ಮುಂದೆ ನೋಡಿದರೆ ಕಿರಿದಾದ ದಾರಿ, ಮರಗಳನ್ನು ಹೊರತು ಪಡಿಸಿದರೆ ಬೇರೆನು ಕಾಣುತ್ತಿರಲಿಲ್ಲ. ಆದದ್ದಾಗಲಿ ಎಂದು ಹೊರಟೆವು..
ಹಿಂದಿನ ದಿನ ಮಳೆಯಾಗಿದ್ದರಿಂದ ಅಲ್ಲಲ್ಲಿ ನೆಲ ಹಸಿಯಾಗಿತ್ತು. ಉರುಳಿ ಬಿದ್ದ ಮರಗಳ ಅಳಿದುಳಿದ ಕಾಂಡದ ಮೇಲೆ ಕೇಸರಿ ಬಣ್ಣದ ಅಣಬೆಗಳು ತಲೆ ಎತ್ತಿದ್ದವು. ಸಾಮಾನ್ಯವಾಗಿ ಕಂದು ಅಥವಾ ಬಿಳಿ ಬಣ್ಣದ ಅಣಬೆಗಳಿರುತ್ತವೆ ಅಥವಾ ನಾನು ನೋಡಿದ್ದು ಕೇವಲ ಆ ಬಣ್ಣದವು. ಕೇಸರಿ ಬಣ್ಣದ ಅಣಬೆಗಳನ್ನು ನೋಡಿ ಆಶ್ಚರ್ಯವಾದರೂ ಕಾಡು ತನ್ನೊಳಗೆ ಬಚ್ಚಿಟ್ಟುಕೊಂಡ ಚೆಲುವಿಕೆ ಮತ್ತದೇ ಉಲ್ಲಾಸವನ್ನು ಹುಟ್ಟಿಸಿತು. ದಾರಿಯಲ್ಲಿ ಬಿದ್ದ ದೊಡ್ಡ ಗಾತ್ರದ ಮರಗಳನ್ನು ದಾಟುತ್ತ, ಪ್ರತಿಯೊಂದು ಮರದ ವಿಭಿನ್ನತೆಯನ್ನು ಗಮನಿಸುತ್ತ, ನಮ್ಮಲ್ಲೇ ಮಾತನಾಡಿಕೊಳ್ಳುತ್ತ, ಆಶ್ಚರ್ಯಗೊಳ್ಳುತ್ತ, ಸಂಭ್ರಮಿಸುತ್ತ ಸಾಗಿದ್ದೆವು.
ಈಗ ಕಾಲುಗಳಿಗೆ ತುಸು ಆಯಾಸದ ಭಾವ. ಎಲ್ಲಿಯೂ ನಿಲ್ಲದೆ, ಕೂರದೆ ಒಂದೇ ಸಮ ನಡೆಯುತ್ತಿದ್ದರಿಂದ ಬೆನ್ನಿಗೆ ಹಾಕಿದ ಚೀಲ ತುಸು ಭಾರವೆನಿಸತೊಡಗಿತ್ತು. ಇನ್ನೇನು ಬಂದಿತು ಎಂಬ ಭರವಸೆಯಲ್ಲಿ ಇದಾವುದನ್ನು ಹಚ್ಚಿಕೊಳ್ಳದೆ ನಡೆದಿದ್ದೆವು.
ಹತ್ತು ನಿಮಿಷಗಳಾಯಿತು.. ಹತ್ತು ಹದಿನೈದಾಯಿತು.. ಹದಿನೈದು ಇಪ್ಪತ್ತಾಯಿತು... ಸುಮಾರು ಅರ್ಧ ಗಂಟೆ ಕಳೆದರೂ ಯಾವುದೇ ಜಲಪಾತ ಅಥವಾ ತಿರುವು ನಮಗೆ ಕಾಣಲಿಲ್ಲ. ಮಧ್ಯೆ ಒಂದೊಂದು ಕಡೆ ಮಳೆಯ ನೀರು ನಿಂತಿದ್ದರಿಂದ ದಾಟಿಕೊಂಡು ಹೋಗಲು ಅಡಚಣೆಯಾಗುತ್ತಿತ್ತು. ಮರದ ಬೊಡ್ಡೆಗಳ ಸಹಾಯದಿಂದ ಕಾಲಿಗೆ ನೀರು ತಾಕದಂತೆ ದಾಟುವುದು ದೂರದಿಂದ ನೋಡಿದವರಿಗೆ ಸರ್ಕಸ್ಸಿನಲ್ಲಿ ಹಗ್ಗದ ಮೇಲೆ ನಡೆದಂತೆ ಕಾಣಿಸುತ್ತಿತ್ತೇನೋ.. ಆದರೆ ನಮ್ಮನ್ನು ನೋಡಲು ಬೇರೆ ಯಾವ ಮನುಷ್ಯರೂ ಇರಲಿಲ್ಲ ಸುತ್ತ ಮುತ್ತ..
ಸ್ವಲ್ಪ ದೂರ ನಡೆದ ಮೇಲೆ ಗಂಡ ಹೆಂಡತಿ ತಮ್ಮ ಮಕ್ಕಳೊಂದಿಗೆ ಹೋಗುತ್ತಿರುವುದು ಕಂಡಿತು. ಅಬ್ಬಾ! ಅಂತೂ ಜನರಿದ್ದಾರಲ್ಲ ಎಂಬ ಸಮಾಧಾನ.. ಆ ಹುಡುಗರೋ ಸುಮ್ಮನೆ ಹೋಗದೆ ನಿಂತ ನೀರಿನಲ್ಲಿ ಜಿಗಿಯುತ್ತ, ಇಲ್ಲದ ಸಾಹಸಗಳನ್ನು ಮಾಡುತ್ತ ನಡೆಯುತ್ತಿದ್ದರು. ನಾವು ಅವರಿಗಿಂತ ವೇಗವಾಗಿದ್ದರಿಂದ ಅವರನ್ನು ಹಿಂದೆ ಹಾಕಲೇ ಬೇಕಾಯಿತು. ನಮ್ಮ ಹಿಂದೆ ಇನ್ನೊಬ್ಬರಿದ್ದಾರಲ್ಲ ಎಂಬ ಸಮಾಧಾನವೇ ಕಾಲುಗಳ ನೋವನ್ನು ಮರೆಸಿ ಇನ್ನು ಜೋರಾಗಿ ಹೆಜ್ಜೆ ಹಾಕಲು ಧೈರ್ಯ ಕೊಟ್ಟಿತ್ತು.
ನಡುನಡುವೆ ಚಾಕೊಲೇಟ್, ನೀರು ಇತ್ಯಾದಿಗಳನ್ನು ತಿನ್ನುತ್ತ ಆಯಾಸ ಪರಿಹರಿಸಿಕೊಳ್ಳುತ್ತಿದ್ದರೂ ದಣಿವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇತ್ತು. ಸಲೀಸಾದ ದಾರಿಯಾದರೆ ಒಂದೇ ಸಮನೆ ನಡೆಯುತ್ತಿರಬಹುದು ಆದರೆ ಮಧ್ಯೆ ಸಿಗುತ್ತಿದ್ದ ಕೆಸರು, ನೀರು, ಹಸಿಯಾದ ಜಾರುತ್ತಿದ್ದ ನೆಲ ಇತ್ಯಾದಿಗಳು ಅಡ್ಡಿಯಾಗಿದ್ದವು.
ತುಸು ದೂರ ನಡೆದ ನಂತರ ಮರಗಳ ಸಾಂದ್ರತೆ ಕಡಿಮೆಯಾಗಿ ದೂರದಲ್ಲಿ ನೀಲಾಗಸ ಕಾಣಲಾರಂಭಿಸಿದಾಗಿ ನಮಗೆ ಉಸಿರು ಬಂದಂತಾಯಿತು. ಅಂತೂ ಇಂತೂ ಚಾಪೆಲ್ ಬೀಚ್ ಬಂದು ಸೇರಿದ್ದೆವು! ಅಲ್ಲಿ ಇನ್ನು ಒಂದಷ್ಟು ಜನ ಸಿಕ್ಕರು. ಕಣ್ಣು ಹಾಯಿಸಿದಷ್ಟು ಕಾಣಿಸುತ್ತಿದ್ದ ನೀರು. ದೂರದಲ್ಲಿ ಕಾಣಿಸುತ್ತಿದ್ದ ದ್ವೀಪದಲ್ಲಿ ಶರತ್ಕಾಲದ ಹಬ್ಬ. ಸಮುದ್ರದ ಅಕ್ಕ ಪಕ್ಕಕ್ಕೂ ಮರಗಳು.. ಈ ಚೆಲುವನ್ನು ದ್ವಿಗುಣಗೊಳಿಸಿದ ಎಲೆಗಳ ಬಣ್ಣ.. ಆಹ್ಲಾದಕರವಾಗಿ ಮುಖಕ್ಕೆ ರಾಚುತ್ತಿದ್ದ ತಂಗಾಳಿ, ಒಂದಷ್ಟು ಜನರ ವಾವ್ ಉದ್ಗಾರಗಳನ್ನು ಹೊರತು ಪಡಿಸಿದರೆ ಪ್ರಶಾಂತವಾಗಿದ್ದ ವಾತಾವರಣ.. ಯಾವುದೋ ಋಷಿಯ ತಪಸ್ಸಿಗೆ ಭಂಗ ಬರದಂತೆ ಇಡೀ ಪರಿಸರ ಮೆಲ್ಲನೆ ಉಸಿರಾಡುತ್ತಿದ್ದಂತೆ ತೋರುತ್ತಿತ್ತು.
ಅಲ್ಲಿ ಬೃಹಾದಾಕಾರದ ಕಲ್ಲಿನ ಮೇಲೊಂದು ಮರ… ತನ್ನ ಬೇರುಗಳನ್ನು ಕಲ್ಲಿನ ಸುತ್ತ ಹರಡಿಸಿ ಹಸಿವು ಬಾಯಾರಿಕೆ ನೀಗಿಸಿಕೊಳ್ಳಲು ಆಚೆಗಿದ್ದ ಮಣ್ಣಿನವರೆಗೂ ಚಾಚಿತ್ತು. ಕೊನೆಯ ಉಸಿರಿರುವರೆಗೂ ಹೋರಾಡುವೆನೆಂಬ ಕೆಚ್ಚಿನಲ್ಲಿ.. ಕೆಲವರಿಗೆ ದೇವರು ಎಲ್ಲವನ್ನು ಕೊಡುತ್ತಾನೆ.. ಕೈ ಚಾಚಿದರೆ ಆಕಾಶವೇ ಸಿಗುವಷ್ಟು ಸುಖ ಅವರ ಕಾಲ ಬಳಿ ಬಿದ್ದಿರುತ್ತದೆ. ಇನ್ನು ಕೆಲವರಿಗೆ ಜೀವನದುದ್ದಕ್ಕೂ ಬರಿ ಕೊರತೆಗಳೇ.. ಪ್ರತಿಯೊಂದನ್ನು ದಕ್ಕಿಸಿಕೊಳ್ಳಲು ಹೆಣಗಾಡಬೇಕು, ಜೀವ ತೇಯಬೇಕು, ಅದರ ಮಹತ್ವ ತಿಳಿದುಕೊಳ್ಳಬೇಕು, ಪ್ರತಿ ಕ್ಷಣ ಪ್ರಾರ್ಥಿಸಬೇಕು, ಅದೊಂದು ದಕ್ಕಿದರೆ ಜೀವಮಾನವಿಡೀ ಯಾವ ತಪ್ಪನ್ನು ಮಾಡುವುದಿಲ್ಲ ನೀ ಹೇಳಿದಂತೆ ಕೇಳುತ್ತೇನೆ ಎಂದು ದೇವರಲ್ಲಿ ಮೊರೆಯಿಡಬೇಕು.. ಆಗಷ್ಟೇ ಪ್ರಾಪ್ತಿ ಸಾಧ್ಯ… ಅಂತಹವರ ಸಾಲಿಗೆ ಸೇರಿದ ಮರ ಇದು. ಸುತ್ತಲಿದ್ದ ಮರಗಳಿಗೆ ಯಾವುದೇ ತೊಂದರೆ ಇಲ್ಲದೆ ಸಿಗುತ್ತಿದ್ದ ನೀರು, ಆಹಾರ ಈ ಮರದ ಪಾಲಿಗೆ ಕಷ್ಟದ ಕೆಲಸ. ತನ್ನ ಸರ್ವಾಂಗಗಳನ್ನು ಚಾಚಿ ದಕ್ಕಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮರಣ ಖಂಡಿತ. ಮಾಡು ಇಲ್ಲವೇ ಮಡಿ ಎಂಬಂತೆ..
ನಾವು ಹಾಗೆ ನೋಡುತ್ತ ನಿಂತಿದ್ದಾಗ ನಮ್ಮ ಹಿಂದೆ ಇದ್ದ ಕುಟುಂಬ ಸಹ ಬಂದು ಸೇರಿತು. ಈಗ ಸುಮಾರು ೧೦-೧೫ ಜನರಿದ್ದರು ಅಲ್ಲಿ.. ನಾವು ನೋಡಿದ ನಕ್ಷೆಯ ಪ್ರಕಾರ ಚಾಪೆಲ್ ಬೀಚ್ ನಂತರ ನೋಡಬಹುದಾದಂತೇನು ಇರಲಿಲ್ಲ. ಹಾಗಾಗಿ ಇನ್ನು ಉಳಿದ ದಾರಿಯನ್ನು ಕ್ರಯಿಸಬೇಕಾಗಿದ್ದು ಮರಳಿ ಹೋಗಲು.. ಅತ್ತ ಸಮುದ್ರ ಇತ್ತ ನದಿ ಮಧ್ಯೆಯೊಂದು ಸೇತುವೆ.. ಆ ಸೇತುವೆಯ ಮೇಲೆ ನಿಂತರೆ ಸಮುದ್ರದ ಮಧ್ಯೆ ನಿಂತ ಅನುಭವ.. ಸುತ್ತಲೂ ನೀರು.. ಒಂದೇ ಸಮನೆ, ಸದ್ದಿಲ್ಲದೆ ಏಕಾಗ್ರತೆಯಲ್ಲಿ, ಸಮುದ್ರ ಸೇರುವ ಗತ್ತಿನಲ್ಲಿ ಹರಿಯುತ್ತಿದ್ದ ನೀರು…
ನಮ್ಮ ಜೊತೆ ಇದ್ದವರೆಲ್ಲ ಅಲ್ಲಲ್ಲಿ ಗುಂಪುಗಳಾಗಿದ್ದರು. ಆ ಹುಡುಗರಲ್ಲಿ ಒಬ್ಬ ಕಲ್ಲಿನ ತುತ್ತ ತುದಿಗೆ ಹೋಗಿ ಬಗ್ಗಿ ನೋಡುತ್ತಿದ್ದ. ಅವನನ್ನು ಹಿಂದಕ್ಕೆ ಎಳೆಯುತ್ತಿದ್ದ ಅವನ ಅಪ್ಪ.. ಮತ್ತೊಬ್ಬ ತನ್ನ ಜೊತೆಗಿದ್ದ ಹುಡುಗಿಯ ಫೋಟೊ ತೆಗೆಯುತ್ತಿದ್ದ. ಇಬ್ಬರು ಹುಡುಗಿಯರು ಸುಮ್ಮನೆ ನಿಂತು ಪ್ರಕೃತಿಯನ್ನು ಆಹ್ಲಾದಿಸುತ್ತಿದ್ದರು.
ಅಲ್ಲಿಂದ ಹೊರಡಬೇಕೆಂದು ತೀರ್ಮಾನಿಸಿ ಎಲ್ಲರನ್ನು ಬಿಟ್ಟು ಹೊರಟೆವು. ಈ ದಾರಿ ಇನ್ನು ಕಡಿದಾಗಿತ್ತು. ಸ್ವಲ್ಪ ದೂರ ನಡೆದ ಮೇಲೆ ಟೆಂಟ್ ಏರಿಯಾ ಬಂತು. ಈ ದಟ್ಟ ಕಾಡಿನ ಮಧ್ಯೆ, ಬೃಹತ ಸಮುದ್ರದ ಪಕ್ಕದಲ್ಲಿ ಅಲ್ಲಲ್ಲಿ ಒಬ್ಬಂಟಿಯಾಗಿ ಕಂಡು ಬಂದ ಟೆಂಟುಗಳು.. ಮನುಷ್ಯರಾರು ಕಾಣಿಸಲಿಲ್ಲ.. ಜನ ಅದ್ಹೇಗೆ ಇಲ್ಲಿ ವಾಸಿಸುತ್ತಾರೋ ಎಂದುಕೊಳ್ಳುತ್ತ ನಡೆದವು. ಸಂಜೆಯ ಕತ್ತಲು ಆವರಿಸಿಕೊಳ್ಳುತ್ತಿತ್ತು. ಕತ್ತಲಾದ ಮೇಲೆ ಈ ಕಾಡಿನಿಂದ ಹೊರ ಹೋಗುವುದು ಕಷ್ಟ ಎಂಬ ಢವಢವ.
ಮ್ಯಾಪ್ಸ್ ಇನ್ನು ಒಂದೆರಡು ಮೈಲು ನಡೆದರೆ ನಾವು ನಮ್ಮ ಕಾರ್ ಇರುವ ಸ್ಥಳಕ್ಕೆ ತಲುಪುತ್ತೇವೆ ಎಂದು ತೋರಿಸಿದ್ದರಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಒಗ್ಗೊಡಿಸಿಕೊಂಡು ನಡೆಯತೊಡಗಿದೆವು. ಸುತ್ತಲೂ ಕಾಡು.. ಆಗಾಗ ಕೇಳಿ ಬರುತ್ತಿದ್ದ ಹಕ್ಕಿಗಳ ಕುಹೂ ಇಂಚರ, ಒಣಗಿದ ಎಲೆಗಳ ಮೇಲೆ ಅಳಿಲುಗಳು ಓಡಾಡಿದಾಗ ಆಗುತ್ತಿದ್ದ ಚರ ಪರ ಸದ್ದನ್ನು ಹೊರತು ಪಡಿಸಿದರೆ ಬೇರೆ ಯಾವ ಶಬ್ದವು ಅಲ್ಲಿರಲಿಲ್ಲ. ಶಬ್ದದ ಜಗತ್ತಿನಿಂದ ಬಹು ದೂರ ಎಲ್ಲಿಯೋ ಬಂದಿದ್ದೇವೆನೋ ಎಂಬ ಭಾಸ. ಈ ಕಾಡಲ್ಲೇ ಉಳಿದು ಬಿಟ್ಟರೆ ಹೊರಗಿನವರಿಗೆ ನಮ್ಮ ಸುಳಿವು ಸಹ ಗೊತ್ತಾಗುವುದಿಲ್ಲ ಎಂಬ ಸಣ್ಣ ಅಳಲು.
ಹೆಜ್ಜೆಗಳು ಸಾಗುತ್ತಿದ್ದವು. ದಾರಿ ಮುಗಿಯುವ ಸೂಚನೆಯಂತೂ ಕಾಣಲಿಲ್ಲ. ಅಲ್ಲಲ್ಲಿ ಸಣ್ಣ ತಿರುವುಗಳನ್ನು ಬಿಟ್ಟರೆ ರಕ್ಕಸನ ನಾಲಿಗೆಯಂತೆ ಉದ್ದಕ್ಕೆ ಚಾಚಿಕೊಂಡಿತ್ತು ದಾರಿ. ನಾವೆಷ್ಟು ವೇಗವಾಗಿ ನಡೆಯುತ್ತಿದ್ದೇವೆಂದರೆ ನಮ್ಮ ಸುತ್ತಲೂ ಹಬ್ಬಿಕೊಂಡಿದ್ದ ಪ್ರಕೃತಿಯನ್ನು ಆಸ್ವಾದಿಸುತ್ತ ನಿಂತರೆ ಇನ್ನು ತಡವಾಗುವುದೇನೋ ಎಂಬಂತೆ. ಇಲ್ಲಿಂದ ಹೊರ ಹೋದರೆ ಮತ್ತೆ ಅದೇ ಯಾಂತ್ರಿಕ ಜೀವನ, ಕೆಲಸ, ಆಫೀಸ್, ಪ್ರಾಜೆಕ್ಟ್ ಅಂತೆಲ್ಲ ಗೊತ್ತಿದ್ದರೂ ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡು ಪೇಚಾಡುವುದು ನಮಗೆ ಬೇಕಿರಲಿಲ್ಲ. ಅದರಲ್ಲೂ ಇಲ್ಲಿ ಕರಡಿಗಳಿವೆ ಎಂಬ ಎಚ್ಚರಿಕೆಯ ನೋಟೀಸ್ ನ್ನು ನೋಡಿದ್ದೆವಲ್ಲ..
ನಾವು ನಡೆಯಲು ಶುರು ಮಾಡಿ ಎರಡು ಗಂಟೆಗಳ ಮೇಲಾಗಿತ್ತು. ಎಲ್ಲಿಯೂ ನಿಲ್ಲದೆ, ಕೂತು ವಿಶ್ರಾಂತಿ ತೆಗೆದುಕೊಳ್ಳದೆ ಒಂದೇ ಸಮನೆ ನಡೆಯುತ್ತಿದ್ದರಿಂದ ಕಾಲುಗಳ ಜೊತೆ ಬೆನ್ನು ಸಹ ನೋಯಲಾರಂಭಿಸಿತ್ತು. ನಾವು ದಾರಿ ತಪ್ಪಿಸಿಕೊಂಡೆವೇನೋ ಎಂಬ ಭಯ ಬೇರೆ. ಆದರೆ ಗೂಗಲ್ ಮ್ಯಾಪ್ಸ್ ನ ಧೈರ್ಯದ ಮೇಲೆ ಇನ್ನೇನು ಬರಬಹುದು, ಇನ್ನೇನು ಬಂದಿತು, ಇನ್ನೇನು ಈ ಯಾನ ಮುಗಿಯಿತು ಎಂದುಕೊಳ್ಳುತ್ತ, ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಾ ನಡೆದಿದ್ದೆವು.
ಒಬ್ಬರೇ ನಡೆದುಕೊಂಡು ಹೋಗಬಹುದಾದಂತಹ ಕಿರಿದಾದ ದಾರಿಯಾದ್ದರಿಂದ ನಾನು ಮುಂದೆ, ನನ್ನ ಹಿಂದೆ ಸಮರ್ಥ್. ನಾನಂತೂ ಆದಷ್ಟು ಬೇಗ ಎಲ್ಲಿಂದ ಹೊರ ಹೋದರೆ ಸಾಕು ಎಂದುಕೊಳ್ಳುತ್ತ ವೇಗವಾಗಿ ನಡೆಯುತ್ತಿದ್ದೆ. ಒಮ್ಮೆಲೇ ನನ್ನ ಹಿಂದೆ ಕೇಳಿ ಬರುತ್ತಿದ್ದ ಹೆಜ್ಜೆಯೇ ಸಪ್ಪಳ ನಿಂತಿತು. ಅದು ಅರಿವಾಗುವ ಹೊತ್ತಿಗೆ ಶ್ ಶ್ ಎಂದು ಹಿಂದೆ ಕೂಗಿದ್ದು ಕೇಳಿಸಿ ನಿಂತೆ. ನನ್ನ ಮನಸಿನಲ್ಲಿ ಆಗಲೇ ಲೆಕ್ಕವಿಲ್ಲದಷ್ಟು ವಿಚಾರಗಳು ಬಂದು ನಮಗೀಗ ಎದುರಾಗಬಹುದಾದಂತಹ ಅಪಾಯಗಳ ಟೀಸರ್ ನನ್ನ ಕಣ್ಣ ಮುಂದೆ ಬಂದಂತೆ. ನಿಂತಲ್ಲೇ ಮೆಲ್ಲನೆ ತಿರುಗಿದೆ. ‘ಇಲ್ಲಿ ಬಾ’ ಎಂದು ಸನ್ನೆ ಮಾಡಿದಾಗ ನನಗೆ ಖಾತ್ರಿಯಾಗಿ ಹೋಯಿತು. ಅಲ್ಲೆಲ್ಲೋ ಮರದ ಮರೆಯಲ್ಲಿ ಕುಳಿತ ಕರಡಿ ಇವರ ಕಣ್ಣಿಗೆ ಬಿದ್ದಿರಬಹುದು ಎಂದು. ನಾವು ಸದ್ದು ಮಾಡದಿದ್ದರೂ ಅದಕ್ಕೆ ಮನುಷ್ಯರ ವಾಸನೆ ಬಂದೇ ಬರುತ್ತದಲ್ಲವೇ.. ನಮ್ಮ ಮೇಲೆ ಆಕ್ರಮಣ ಮಾಡಿದರೆ? ನಾವು ಆದಷ್ಟು ಬೇಗ ಇಲ್ಲಿಂದ ಹೋಗಬೇಕೆಲ್ಲವೇ? ಅದು ಬಿಟ್ಟು ಇಲ್ಲಿ ನಿಂತು ಅದನ್ನೆನಕ್ಕೆ ನೋಡಬೇಕು? ಅಪಾಯವನ್ನು ಯಾರಾದರೂ ತಾವೇ ತಲೆಯ ಮೇಲೆ ಹಾಕಿಕೊಳ್ಳುತ್ತಾರೆಯೇ ? ಹೀಗೆ ಪ್ರಶ್ನೆಗಳ ಸರಮಾಲೆ ನನ್ನಲ್ಲಿ.. ಮೆಲ್ಲನೆ ಒಂದೆರಡು ಹಿಜ್ಜೆ ಹಿಂದೆ ಹೋದೆ. ಅಲ್ಲಿ ನೋಡು ಎಂದು ತೋರಿಸಿದಾಗ ನೋಡಲೋ ಬೇಡವೋ ಎಂಬಂತೆ ನಿಧಾನವಾಗಿ ಕತ್ತು ತಿರುಗಿಸಿ ಭಯದಲ್ಲಿ ನೋಡಿದವಳಿಗೆ ಕಂಡದ್ದು ಜಿಂಕೆ! ನಮ್ಮ ಇರುವು ಅದಕ್ಕೆ ಗೊತ್ತಾಗಿರಲಿಲ್ಲ. ತನ್ನ ಪಾಡಿಗೆ ತಾನು ಮರಗಳ ಮಧ್ಯೆ ನಿಂತುಕೊಂಡಿತ್ತು. ಸುತ್ತಲೂ ಬೆಳೆದ ಹುಲ್ಲಿನ ನಡುವೆ ನಿಂತಿದ್ದ ಅದರ ತಲೆ ಮಾತ್ರ ಕಾಣಿಸುತ್ತಿತ್ತು. ವ್ಹಾ! ಕಲಾವಿದನ ಕುಂಚದಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಂತಿತ್ತು. ಆ ಕಾಡಿನ ಮಧ್ಯೆ ಹೀಗೆ ಅಕಸ್ಮಾತ್ತಾಗಿ ಕಂಡ ಆ ಜೀವವನ್ನು ಕಂಡು ನಮಗೆ ಹೇಳತೀರದಷ್ಟು ಸಂಭ್ರಮ. ಇನ್ನು ಆ ಬಂಗಾರದ ಜಿಂಕೆಯನ್ನು ಕಂಡ ಸೀತೆಗೆ ಹೇಗಾಗಿರಬೇಡ? ಅವಳು ಆ ಜಿಂಕೆ ಬೇಕೆಂದು ಹಠ ಹಿಡಿಯದೇ ಹೋಗಿದ್ದಲ್ಲಿ ರಾಮಾಯಣವೇ ಆಗುತ್ತಿರಲಿಲ್ಲ ಎಂದು ವಾದ ಮಾಡುವವರಲ್ಲಿ ನಾನು ಒಬ್ಬಳು. ಆದರೆ ನನಗೆ ಆ ಕ್ಷಣಕ್ಕೆ ಅರಿವಾಗಿದ್ದು ಕಾಡಿನ ಮೋಹಕತೆ ಎಂತಹವರನ್ನು ಸೆಳೆಯಬಲ್ಲದು. ಆ ಜಿಂಕೆಯ ಚಿತ್ರ ಇನ್ನು ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.
ಅದಕ್ಕೆ ತೊಂದರೆ ಕೊಡದೆ, ಸದ್ದು ಮಾಡದೆ ಅಲ್ಲಿಂದ ಮತ್ತೆ ಸಾಗಿತು ನಮ್ಮ ಪಯಣ. ಚೂರೇ ಚೂರು ಬೆಳಕಿತ್ತು ಈಗ. ಸೂರ್ಯಾಸ್ತವಾಯಿತೇನೋ.. ಸೂರ್ಯ ಇಣುಕಲು ಆಸ್ಪದವೇ ಇಲ್ಲದಂತೆ ದಟ್ಟವಾಗಿತ್ತು ಆ ಕಾಡು. ನಾವು ಖಂಡಿತ ದಾರಿ ತಪ್ಪಿಸಿಕೊಂಡು ಕಾಡಿನಲ್ಲೇ ಅಲೆಯುತ್ತಿದ್ದೇವೆ ಎಂದು ನಂಗಂತೂ ಖಾತ್ರಿಯಾಗಿ ಹೋಯಿತು. ನಾವು ಸರಿಯಾದ ದಾರಿಯಲ್ಲೇ ಇದ್ದರೆ ಇಷ್ಟೊತ್ತು ನಡೆದರೆ ಒಬ್ಬರಾದರು ಸಿಗಬೇಕಲ್ಲವೇ? ಇನ್ನೇನು ನಡೆಯಲು ಆಗುವುದೇ ಇಲ್ಲವೇನೋ ಎನ್ನುವಷ್ಟು ಕಾಲು ನೋವು. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ರಾತ್ರಿಯಾಗುವ ಭಯ. ಯಾಕಾದರೂ ಒಳಗೆ ಬಂದೆವೋ.. ಆ ಫಾಲ್ಸ್ ನೋಡಿ ಮರಳಿ ಹೋಗಿದ್ದರೆ ಇಷ್ಟೊತ್ತಿಗೆ ನಾವು ಕಾರಿನಲ್ಲಿ ಹೊರಟಿರುತ್ತಿದ್ದೆವು, ಇಷ್ಟು ದೂರ ನಡೆದು ಬಂದರು ಒಂದು ಜಲಪಾತವಾಗಲಿ, ಬಂಡೆಗಲ್ಲಾಗಲಿ ನಮಗೆ ಕಾಣಲಿಲ್ಲ. ಬರಿ ಕಾಡು. ನಮ್ಮನ್ನು ತನ್ನ ಗರ್ಭದೊಳಗೆ ನುಂಗಿದ್ದ ಕಾಡು!
ಸಮರ್ಥ ಬಹಳ ಖುಷಿಯಲ್ಲಿ, ಉತ್ಸಾಹದಲ್ಲಿ ಆ ಸಮಯವನ್ನು, ಆ ಪ್ರಯಾಣವನ್ನು ಅನುಭವಿಸುತ್ತ ಬರುತ್ತಿದ್ದರು. ಆದರೆ ನನಗೆ ಚಿಂತೆ, ಅಧೈರ್ಯ, ಭಯ, ಸುಸ್ತು, ಇನ್ನು ಅದೆಷ್ಟು ನಡೆಯಬೇಕಪ್ಪ ಎಂಬ ಅನಿವಾರ್ಯತೆ ಎಲ್ಲವು ಕಾಡತೊಡಗಿದ್ದವು. ನಾನು ಅಳುವುದೊಂದು ಬಾಕಿಯಿತ್ತು. ಸುಮಾರು ಅರ್ಧ ಗಂಟೆಯ ನಂತರ ದಾರಿಯ ತಿರುವಿನಲ್ಲಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದುದು ಕಾಣಿಸಿತು. ಅಬ್ಬಾ! ದಾರಿ ಸರಿಯಾಗಿದೆ ಎಂದು ನಿರಾಳ. ನಮ್ಮ ಜೊತೆಗೆ ಒಬ್ಬರಾದರು ಇದ್ದಾರಲ್ಲ ಎಂಬ ಸಮಾಧಾನ. ಅವರು ವೇಗವಾಗಿ ಹೋಗುತ್ತಿದ್ದರಿಂದ ನಾವು ನಡೆದಂತೆಲ್ಲ ಅವರು ತಿರುವಿನಲ್ಲಿ ಕಣ್ಮರೆಯಾಗುತ್ತಿದ್ದರು. ಅವರನ್ನು ಕೂಡಲೆಂದೇ ಇನ್ನು ವೇಗವಾಗಿ ಹೆಜ್ಜೆ ಹಾಕಿ ಸುಮಾರು ಇಪ್ಪತ್ತು ನಿಮಿಷಗಳ ನಂತರ ನಾವು ಅವರ ಹಿಂದಿದ್ದೆವು. ಅವರನ್ನು ನೋಡಿದರೆ ನುರಿತ ಚಾರಣಿಗರಂತೆ ಕಂಡರು. ಅವರಿಗೂ ಈ ಮುಗಿಯದ ದಾರಿಯ ಬಗ್ಗೆ ಆತಂಕವಿತ್ತು. ‘I’m getting a bad feeling about this’ ಎಂದು ಆಕೆ ಹೇಳುತ್ತಿದ್ದಳು. ಮುಂದೆ ಸಿಕ್ಕ ದಾರಿ ಇನ್ನು ದುರ್ಲಭ.. ಮೈಲುಗಟ್ಟಲೆ ಕೆಸರು, ಜಾರುತ್ತಿದ್ದ ನೆಲ, ಮಡುಗಟ್ಟಲೆ ನಿಂತ ನೀರು, ಅಡ್ಡ ಬಿದ್ದ ಮರದ ದಿಮ್ಮಿಗಳು.. ಮೊದಲೇ ಸುಸ್ತಾಗಿದ್ದ ನಮಗೆ ಇದೆಲ್ಲವನ್ನು ದಾಟಿ ನಡೆಯುವುದು ಚಕ್ರವ್ಯೂಹದಿಂದ ಹೊರಬರಲು ಅಭಿಮನ್ಯು ಹರಸಾಹಸ ಪಟ್ಟ ಹಾಗಾಗಿತ್ತು.
ಅಷ್ಟೊತ್ತಿಗೆ ಸಂಪೂರ್ಣ ಕತ್ತಲಾಗಿ ಬಿಟ್ಟಿತು. ಸುಮಾರು ಮೂರುವರೆ ಗಂಟೆಗಳ ಮೇಲಾಗಿತ್ತು ನಾವು ನಡೆಯಲು ಶುರು ಮಾಡಿ. ನಮ್ಮ ಬಳಿ ಟಾರ್ಚ್ ಅಥವಾ ಈ ಕಾಡಿನ ಒಳಗೆ ಸಿಕ್ಕಿ ಹಾಕಿಕೊಂಡರೆ ಬೇಕಾದಂತಹ ಯಾವ ಪರಿಕರಗಳು ಇರಲಿಲ್ಲ. ನನ್ನ ಮೊಬೈಲ್ ಅಂತೂ ಸ್ವಿಚ್ ಆಫ್ ಆಗಿತ್ತು. ಸಮರ್ಥ್ ಮೊಬೈಲ್ ನಲ್ಲಿ ೫೦% ರಷ್ಟು ಬ್ಯಾಟರಿ ಇದ್ದುದರಿಂದ ಅದರ ಟಾರ್ಚ್ ಬೆಳಕಿನಲ್ಲಿ ಹೆಜ್ಜೆ ಹಾಕತೊಡಗಿದವು. ಆ ಕಿರಿದಾದ ದಾರಿಯು ಕಾಣಿಸುತ್ತಿರಲಿಲ್ಲ. ನಮ್ಮದೇ ಅಂದಾಜಿನಲ್ಲಿ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತ, ಕೈ ಹಿಡಿದುಕೊಂಡು ಆಗಿದ್ದಾಗಲಿ ಎಂದು ಧೈರ್ಯ ತಂದುಕೊಂಡು ನಡೆದೆವು. ಮಧ್ಯೆ ನಾನು ಕಾಲು ಜಾರಿ ಬಿದ್ದು ಕೈ ಪರಚಿಕೊಂಡಿದ್ದು ಆಯ್ತು. ನಮ್ಮ ಜೊತೆಗಿದ್ದವರು ಹಿಂದುಳಿದಿದ್ದರು. ಸ್ವಲ್ಪ ಮುಂದೆ ಹೋದ ಮೇಲೆ ಇನ್ನು ಒಂದು ನಾಲ್ಕು ಜನ ಕಣ್ಣಿಗೆ ಕಂಡರು. ಅದರಲ್ಲಿ ಒಬ್ಬಳು ಹುಡುಗಿ ನಡೆದು ನಡೆದು ಸೋತು ಹೋಗಿ ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತ ನಡೆಯುತ್ತಿದ್ದಳಾದ್ದರಿಂದ ಉಳಿದವರು ಅವಳೊಂದಿಗೆ ನಿಧಾನವಾಗಿ ಬರುತ್ತಿದ್ದರು.
ಯಾರನ್ನು ನೋಡುವ ಸ್ಥಿತಿಯಲ್ಲಾಗಲಿ, ಮಾತನಾಡಿಸುವ ಸ್ಥಿತಿಯಲ್ಲಾಗಲಿ ನಾವಿರಲಿಲ್ಲ. ನಮ್ಮದು ಹೆಚ್ಚು ಕಡಿಮೆ ಅದೇ ಸ್ಥಿತಿ.. ಅಲ್ಲಿದ್ದ ಪ್ರತಿಯೊಬ್ಬರದು ಅದೇ ಪರಿಸ್ಥಿತಿ.. ಏನೋ ಕಾಡಿನಿಂದ ಹೊರಗೆ ಹೋಗಬೇಕೆಂಬ ಆಶೆಯಲ್ಲಿ ಎಲ್ಲರು ಹೆಜ್ಜೆ ಹಾಕುತ್ತಿದ್ದರು. ಸುಮಾರು ಅರ್ಧ ಗಂಟೆಯ ನಂತರ ನಮಗೆ ದೂರದಲ್ಲಿ ಬೆಳಕು ಕಾಣಿಸಿತು.. ಸಮೀಪಕ್ಕೆ ಹೋದಾಗ ದಾರಿಯ ಅಂಚಿಗೆ ನಿಲ್ಲಿಸಿದ್ದ ಕಾರು ವ್ಯಾನುಗಳು ಕಾಣತೊಡಗಿದವು. ಅಬ್ಬಾ! ಆ ಕ್ಷಣದಲ್ಲಿ ನಮಗಾಗಿದ್ದ ಖುಷಿ ಅಷ್ಟಿಟ್ಟಲ್ಲ. ಅಂತೂ ನಮ್ಮ ವನವಾಸ ಮುಗಿಯುತಲ್ಲಾ ಎಂದು ನೆಮ್ಮದಿ.
ಶರತ್ಕಾಲದ ಬಣ್ಣಗಳನ್ನು ತುಂಬಿಕೊಂಡ ಕಾಡಿನ ಮಧ್ಯೆ ಹೆಜ್ಜೆ ಹಾಕಿದ್ದು, ಮಧ್ಯೆ ನೋಡಿದಂತಹ ಸಮುದ್ರ, ಜಲಪಾತಗಳು, ಗದ್ದಲದ ಲೋಕದಿಂದ ದೂರವಾಗಿ ನಾವಿಬ್ಬರೇ ಕಾಡಿನಲ್ಲಿ ನಡೆದದ್ದು, ಅನೀರಿಕ್ಷಿತವಾಗಿ ಕಾಣಿಸಿದ ಆ ಜಿಂಕೆ, ಕಾಡಿನ ಸೊಬಗು, ಪ್ರಶಾಂತತೆ ಹೀಗೆ ಎಲ್ಲವು ವರ್ಣಿಸಲು ಆಗದಷ್ಟು ಸುಂದರ. ಒದ್ದೆ ನೆಲದಲ್ಲಿ ಮೂಡಿದ ಜೋಡಿ ಹೆಜ್ಜೆಗಳು ಸಪ್ತಪದಿಯಷ್ಟೇ ಪವಿತ್ರ. ಹೀಗೆ ಆ ದಿನ ಎಂದು ಮರೆಯಲು ಆಗದಂತಹ ನೆನಪೊಂದು ನಮ್ಮ ಜೋಳಿಗೆಗೆ ಸೇರ್ಪಡೆಯಾಯಿತು.