ಹೆಸರಿನ ಮೇಲೊಂದು ಆಳವಾದ ಅಧ್ಯಯನ…
ಹುಟ್ಟಿದ ಮೇಲೆ ಹೆಸರೊಂದು ಇರಬೇಕು. ಹೆಸರಿಗೊಂದು ಅರ್ಥವೂ ಇರಲೇಬೇಕು. ನಮ್ಮ ಅಜ್ಜಂದಿರ ಕಾಲದಲ್ಲಿ ಜನ ಹೆಸರಿಡಲು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಜ್ಜನ ಹೆಸರು ಮೊಮ್ಮಗನಿಗೆ ಖಾಯಂ ಆಗಿರುತ್ತಿತ್ತು. ಇನ್ನು ಕೆಲವರು ಮನೆ ದೇವರ ಹೆಸರನ್ನೇ ಮಕ್ಕಳಿಗೆ ಇಡುತ್ತಿದ್ದರು. ಅವರ ಹೆಸರನ್ನು ಕರೆದಂತೆಯು ಆಯಿತು, ದೇವರ ನಾಮ ಸ್ಮರಣೆಯಾದ ಹಾಗೂ ಆಯಿತು. ಸ್ವರ್ಗದಲ್ಲಿ ಒಂದು ಕೋಣೆಯಂತೂ ಖಂಡಿತ. ಒಂದೇ ಏಟಿಗೆ ಎರಡು ಕಾಯಿ ಹೊಡೆವ ಉಪಾಯ. ‘ನಾರಾಯಣ, ಶ್ರೀಕಂಠ, ಶಿವ, ಕೃಷ್ಣ, ಶ್ರೀಹರಿ, ವಿಷ್ಣು, ನೀಲಕಂಠ, ವಿಠ್ಠಲ, ಪಾಂಡುರಂಗ, ಅರ್ಜುನ, ಹನುಮಂತ, ಭೀಮಸೇನ, ಶ್ರೀದೇವಿ, ಪಾರ್ವತೀ, ಲಕ್ಷ್ಮಿ, ರಾಜೇಶ್ವರಿ,ಮಹೇಶ್ವರಿ’ ಹೀಗೆ ಹಲವು ದೇವರ ಹೆಸರುಗಳು ಇನ್ನು ಪ್ರಚಲಿತವಾಗಿವೆ. ಕಾಲ ಎಷ್ಟೇ ಬದಲಾದರು ಜನ ದೇವರ ಹೆಸರುಗಳನ್ನು ಇಡುವುದು ತಪ್ಪುವುದಿಲ್ಲ. ಆದರೆ ನಮ್ಮ ಉತ್ತರ ಕರ್ನಾಟಕದಲ್ಲಿ ದೇವರ ಹೆಸರುಗಳನ್ನು ಇಡುವುದು ಒಂಥರಾ ಹಿಂಸೆಯೇ ಸರಿ. ಏಕೆ ಎಂದು ಕೇಳಿ… ನಮಗೆ ಹೆಸರನ್ನು ಪೂರ್ತಿಯಾಗಿ ಕರೆದು ಅಭ್ಯಾಸವೇ ಇಲ್ಲ. ನಮ್ಮ ರಕ್ತದಲ್ಲೇ ಅದು ಬಂದಿಲ್ಲ. ಹುಡುಗರ ಹೆಸರನ್ನು ತುಂಡರಿಸಿ ಅದಕ್ಕೊಂದು ಮಂಗನ ಬಾಲ ಹಚ್ಚುವುದು, ಹುಡುಗಿಯ ಹೆಸರಾದರೆ ಇ ಕಾರ ಹಾಕಿ ಕೂಗುವುದು ನಮಗೆ ವಂಶ ಪಾರಂಪರ್ಯವಾಗಿ ಬಂದ ಗುಣ. ‘ನಾಗ್ಯಾ, ಬಸ್ಯಾ, ರೂಪಿ, ನೇತ್ರೀ’… ಸಂತೆಯಲ್ಲಿ ನಿಂತರೆ ಈ ತರಹದ ಹಲವಾರು ಹೆಸರಿನ ಕೂಗುಗಳು ಕೇಳಿಸುತ್ತವೆ. ಹೀಗಾಗಿ ದೇವರ ಹೆಸರಿನ ಸ್ನೇಹಿತರಿದ್ದರೆ ನಮಗೆ ಧರ್ಮಸಂಕಟ. ಅತ್ತ ಪೂರ್ತಿ ಹೆಸರಿನಿಂದ ಕರೆಯುವ ಹಾಗು ಇಲ್ಲ ಇತ್ತ ಮಂಗನ ಬಾಲ ಸೇರಿಸಿಕೊಳ್ಳುವ ಹಾಗೂ ಇಲ್ಲ.
ಸ್ವಲ್ಪ ಹಿಂದೆ ಹೋದರೆ ‘ಕಲ್ಲಪ್ಪ, ಮಲ್ಲಪ್ಪ, ಫಕೀರಪ್ಪ, ಸಣ್ಣಪ್ಪ, ಅಣ್ಣಯ್ಯ, ದೊಡ್ಡಪ್ಪ, ತಿಪ್ಪಯ್ಯ, ದೊಡ್ಡಣ್ಣ, ಕಮಲವ್ವ, ಶಾಂತವ್ವ’ ಇಂತಹ ಹೆಸರುಗಳು ಬಲು ಪ್ರತೀತಿ. ಈ ಹೆಸರಿರುವವರನ್ನು ಕೂಗುವುದು ತುಂಬಾ ಸರಳ. ಸ್ನೇಹಿತರಿಗೆ ಸರಾಗವಾಗಿ ಬಂದರೆ ಮನೆಯವರಿಗೂ ನಾಲಿಗೆ ಹೊರಳಿಸುವ ತಾಪತ್ರಯಗಳಿಲ್ಲದೆ ಕರೆಯಲ್ಪಡುವ ಹೆಸರುಗಳು. ನಾನು ಚಿಕ್ಕವಳಿದ್ದಾಗ ನಮ್ಮ ಮನೆಯ ಪಕ್ಕದ ಮನೆಯ ಹುಡುಗಿಯ ಹೆಸರು ‘ಬಾಳವ್ವ’. ಚೆನ್ನಾಗಿ ಬಾಳಿ ಬದುಕಲಿ ಎಂದು ಅವರ ತಂದೆ ತಾಯಿ ಆ ಹೆಸರಿಟ್ಟಿದ್ದರೇನೋ… ಆಗ ನಾನಿನ್ನು ಶಾಲೆಯಲ್ಲಿ ಓದುತ್ತಿದ್ದೆ. ಬಾಳವ್ವ ಪಿಯುಸಿ ನಲ್ಲಿ ವಿಜ್ಞಾನವನ್ನು ಆಯ್ದುಕೊಂಡು ಚೆನ್ನಾಗಿ ಓದಿ ಪಾಸಾದಳು. ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಎಂ.ಎಂ.ಬಿ.ಎಸ್ ಸೇರಿದಳು. ಊರಿಗೆ ಆಗಾಗ ಬರುತ್ತಿದ್ದ ಬಾಳವ್ವ ತನ್ನ ಗೋಳನ್ನು ಹೇಳಿಕೊಳ್ಳುತ್ತಿದ್ದಳು. ತನ್ನ ಸ್ನೇಹಿತರೆಲ್ಲ ತನ್ನನ್ನು ಹೆಸರಿನಿಂದ ಅಣಗಿಸಿತ್ತಿರುವುದಕ್ಕಾಗಿ ಅವಳಿಗೆ ಬೇಜಾರು. ಮುಂದೊಂದು ದಿನ ಬಾಳವ್ವ ತನ್ನ ಹೆಸರನ್ನು ಬದಲಿಸಿಕೊಂಡಳು. ಹಲವರು ಈ ತರಹದ ಹೆಸರುಗಳಿಂದ ಮುಜುಗರಕ್ಕೊಳಗಾಗಿ ತಮ್ಮ ಹೆಸರನ್ನು ಬದಲಿಸಿಕೊಂಡ ಸಾಕಷ್ಟು ಘಟನೆಗಳಿವೆ. ಶಬ್ದಾನುಸಾರ ಈ ಹೆಸರುಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ ಸ್ಮಾಲ್ ಫಾದರ್ (ಸಣ್ಣಪ್ಪ), ಬ್ರದರ್ ಫಾದರ್ (ಅಣ್ಣಪ್ಪ), ಸ್ಮಾಲ್ ಬ್ರದರ್ ಬಿಗ್ ಬ್ರದರ್ (ತಮ್ಮಣ್ಣ) ಎಂಬ ಅನರ್ಥಗಳಾಗುತ್ತವೆ.
‘ಗಿರೀಶ, ರಮೇಶ, ಸುರೇಶ, ಮಹೇಶ, ಸತೀಶ, ವೆಂಕಟೇಶ’ ಎಂಬ ಒಂದಷ್ಟು ಹೆಸರುಗಳು… ಈಶನೆಂದರೆ ಒಡೆಯ. ಗಿರಿಗಳ ಒಡೆಯ ಗಿರೀಶ, ಪಾರ್ವತಿಯ ಇನ್ನೊಂದು ಹೆಸರು ಉಮಾ ಹಾಗಾಗಿ ಉಮೆಯ ಒಡೆಯ ಉಮೇಶ ಅಂದರೆ ಶಿವ… ಶಿವನಿಗೆ ಈಶನೆಂದೂ ಹೆಸರಿದೆ… ಜಗತ್ತಿಗೆ ಒಡೆಯನಲ್ಲವೇ… ನದಿಗಳ ಹೆಸರು ‘ಗಂಗಾ, ವರದ, ಕಾವೇರಿ, ಗೋದಾವರಿ. ಸಿಂಧು, ನರ್ಮದಾ, ನೇತ್ರಾ’.. ಮಾಸಗಳ ಹೆಸರು ‘ಚೈತ್ರ, ವೈಶಾಖ, ಕಾರ್ತಿಕ’ … ಋತುಗಳ ಹೆಸರು ‘ಗ್ರಿಶ್ಮಾ, ವಸಂತ’ ಹೀಗೆ ನಮ್ಮ ಸಂಸ್ಕೃತಿಯ ಸೊಗಡನ್ನು ಸಹ ಹೆಸರಾಗಿಸಿ ಪಸರಿಸಬಹುದು. ಒಂದಷ್ಟು ಜನರಿಗೆ ಮನೆಯಲ್ಲಿ ಕರೆಯುವ ಹೆಸರೇ ನಿಜವಾದ ಹೆಸರಿಗಿಂತ ಹೆಚ್ಚು ಪ್ರಚಲಿತವಾಗಿರುತ್ತದೆ. ನನಗೆ ಗೊತ್ತಿರುವ ಒಬ್ಬರ ನಿಕ್ಕನೇಮ್ ಬೇಬಿ. ಬೇಬಿ ಬೆಳೆದು ಮದುವೆಯಾಗಿ ಈಗ ಮೊಮ್ಮಕ್ಕಳಾಗಿ ಅಜ್ಜಿಯಾಗಿದ್ದರು ಎಲ್ಲರು ಅವರನ್ನು ಕರೆಯುವುದು ಬೇಬಿ ಎಂದೇ. ಅವರ ಮೊಮ್ಮಗು ಕೂಡ ಅವರನ್ನು ಬೇಬಿ ಅಜ್ಜಿ ಎಂದೇ ಕರೆಯುತ್ತದೆ.
ಇಲ್ಲಿಗೆ ಮುಗಿಯುವುದಿಲ್ಲ ಹೆಸರಿನ ಪುರಾಣ. ಹೆಸರಿಲ್ಲದ ಮನುಷ್ಯನಿದ್ದಾನೆಯೇ… ಹುಟ್ಟಿದ ಮೇಲೆ ಹೆಸರೊಂದು ಇರಲೇಬೇಕು. ನನ್ನ ಹೆಸರಿನ ಅರ್ಥ ನನಗೆ ಎಷ್ಟೋ ವರ್ಷಗಳವರೆಗೂ ಗೊತ್ತಿರಲಿಲ್ಲ. ಬುದ್ಧಿ ಬಂದ ನಂತರ ನಾನೇ ನನ್ನ ಹೆಸರಿನ ಅರ್ಥವನ್ನು ಹುಡುಕತೊಡಗಿದೆ. ಹುಬ್ಬಳ್ಳಿಯಲ್ಲಿ ‘ಸಂಜೋತಾ’ ಎಂಬ ಹೆಸರಿನ ಚಿತ್ರ ಮಂದಿರವೊಂದಿದೆ. ಅದನ್ನು ಆಧಾರವಾಗಿಟ್ಟುಕೊಂಡು ನನಗೆ ನಮ್ಮಮ್ಮ ಈ ಹೆಸರಿಟ್ಟದ್ದು. ಕನ್ನಡದಲ್ಲಿ ಎಷ್ಟೇ ಹುಡುಕಿದರೂ ನನ್ನ ಹೆಸರಿಗೆ ಅರ್ಥ ಸಿಕ್ಕಲಿಲ್ಲ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಭಾಂದವ್ಯ ಕಲ್ಪಿಸುವ ಉದ್ದೇಶದಿಂದ ‘ಸಮಝೋತಾ ಎಕ್ಸ್ಪ್ರೆಸ್’ ಎಂಬ ಹೆಸರಿನ ಟ್ರೈನ್ ಒಂದು 1976 ರಲ್ಲಿ ಶುರುವಾಗಿತ್ತು. ಎರಡು ದೇಶಗಳ ಮಧ್ಯೆ ಸಂಪರ್ಕ ಕಲ್ಪಿಸುವ ಮೊತ್ತ ಮೊದಲ ಸಂಚಾರ ವ್ಯವಸ್ಥೆ ಇದಾಗಿತ್ತು. ಒಂದಷ್ಟು ಜನರು ಬಹುಶಃ ಇದೇ ನನ್ನ ಹೆಸರಿನ ಮೂಲವಿರಬಹುದು ಎಂದು ಹೇಳಿದರು. ಹಾಗಾಗಿ ನನ್ನ ಹೆಸರಿನ ಅರ್ಥ ಒಪ್ಪಂದ ಎಂದು ಒಂದಷ್ಟು ಕಾಲ ನಾನೂ ಸಹ ನಂಬಿದ್ದೆ. ಹಿಂದಿ ಸಿನಿಮಾಗಳನ್ನು ನೋಡುವ ಅಭ್ಯಾಸ ಶುರುವಾದ ನಂತರ ಹಿಂದಿಯ ಒಂದೆರಡು ಸಂಭಾಷಣೆಗಳಲ್ಲಿ ನನ್ನ ಹೆಸರು ಬಂದಿದ್ದನ್ನು ಗಮನಿಸಿದೆ. ಅದರಲ್ಲಿ ಒಂದು ನನ್ನ ಮೆಚ್ಚಿನ ನಟ ಶಾರುಖ್ ಖಾನ್ ಅಭಿನಯದ ನನ್ನ ಅತಿ ಮೆಚ್ಚಿನ ಚಿತ್ರಗಳಲ್ಲಿ ಒಂದಾದ ಕುಚ್ ಕುಚ್ ಹೋತ ಹೈ ಚಿತ್ರದ ಹಾಡಿನಲ್ಲಿ ಬರುವ ಸಾಲು. ‘ತನ್ಹಾಯಿ ಮೇ ದಿಲ್, ಯಾದೇಂ ಸಂಜೋತಾ ಹೈ… ಕ್ಯಾ ಕರೋ ಹೈ ಕುಚ್ ಕುಚ್ ಹೋತ ಹೈ’…. ಆಗ ನನ್ನ ಹೆಸರಿನ ಅರ್ಥ ಸಂಗ್ರಹ ಎಂದು ಗೊತ್ತಾಯಿತು. ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದಲ್ಲಿ ಇನ್ನೊಂದು ಮೆಲೋಡಿ ಹಾಡು ಬರುತ್ತದೆ. ‘ತು ಜಾನೇ ನಾ….’ ಇದರಲ್ಲೂ ನನ್ನ ಹೆಸರಿದೆ ‘ದಿಲ್ ಭೀ ಏ ರೊತಾ ಹೈ, ಸಪನೆ ಸಂಜೋತಾ ಹೈ’ ಎಂದು…
ಮಧ್ಯೆ ಒಂದಷ್ಟು ಜನರು ಹೊಸ ಹೆಸರುಗಳನ್ನು ಹುಡುಕಲು ಮಹಾಭಾರತ, ರಾಮಾಯಣಗಳನ್ನೆಲ್ಲ ಜಾಲಾಡಲು ಶುರು ಮಾಡಿಕೊಂಡಿದ್ದರು. ಗೊತ್ತೇ ಇರದ ಎಷ್ಟೋ ಪುರಾಣದ ಹೆಸರುಗಳು ಆಚೆ ಬಂದವು. ಸಂಸ್ಕೃತಿ ಮತ್ತು ಆಧುನಿಕತೆಗಳಿಂದ ಮೇಳೈಸಿದ ಈ ಹೆಸರುಗಳು ಕೇಳಲು ಚಂದ, ಅವುಗಳ ಅರ್ಥವೂ ಪರಮಾನಂದ. ‘ಪಾರ್ಥ, ಕರ್ಣ, ಅಗಸ್ತ್ಯ, ದ್ರೋಣ, ಕುಶ, ಮಂಥರಾ, ವಿರಾಟ’ ಇನ್ನು ಹಲವು ಚಂದ ಚಂದ ಹೆಸರುಗಳು ನಮ್ಮ ಪುರಾಣದಲ್ಲುಂಟು. ಹೆಕ್ಕಿ ತೆಗೆಯಬೇಕಷ್ಟೆ. ಹೆಸರಿನಲ್ಲೇನಿದೆ… ರಾಮ ಎಂದು ಹೆಸರಿಟ್ಟುಕೊಂಡವನು ರಾವಣನಂತೆ ವರ್ತಿಸಿದರೆ ಹೆಸರಿನದೇನು ತಪ್ಪು ಅಥವಾ ದ್ರೌಪದಿ ಎಂದು ಹೆಸರಿಟ್ಟುಕೊಂಡರೆ ಐದು ಜನರನ್ನು ಮದುವೆ ಆಗುತ್ತಾಳೆ ಎಂದೇ…. ಪುರಾಣದ ಹೆಸರುಗಳನ್ನಿಟ್ಟುಕೊಂಡರೆ ನಮ್ಮ ಸಮಾಜ ಆ ಪಾತ್ರದ ಗುಣ, ನಡತೆಯೊಂದಿಗೆ ನಮ್ಮ ನಡೆ ನುಡಿಯೊಂದಿಗೆ ಹೋಲಿಸಲು ಶುರು ಮಾಡುತ್ತದೆ. ಹೆಸರಿಗಾದರು ಮರ್ಯಾದೆ ಕೊಡು ಎಂದು ಜನ ಭೋದಿಸುತ್ತಾರೆ. ಹೆಸರಿನ ಮೇಲೆ ನೀರಿಕ್ಷೆಗಳು ಸಹ ಬೆಳೆಯುತ್ತವೆ.
ಇತ್ತೀಚಿಗೆ ಗಂಡ ಹೆಂಡತಿಯ ಹೆಸರುಗಳನ್ನು ಬೆರೆಸಿ ಮಕ್ಕಳಿಗೆ ಹೆಸರಿಡುವುದು ಒಂದು ತರಹ ಟ್ರೆಂಡ್ ಆಗುತ್ತಿದೆ. ಬಾಲಿವುಡ್ ನಟ ಶಾಹಿದ್ ಕಪೂರ ಮತ್ತು ಮೀರಾ ತಮ್ಮ ಮಗಳಿಗೆ ‘ಮಿಶಾ’ ಎಂದು ಹೆಸರಿಟ್ಟಿದ್ದಾರೆ. ರಿತೇಶ ಮತ್ತು ಜೆನೆಲಿಯಾ ಸಹ ತಮ್ಮ ಮೊದಲ ಮಗನಿಗೆ ರಿಯಾನ್ ಎಂದು ನಾಮಕರಣ ಮಾಡಿದ್ದಾರೆ. ನನ್ನ ಸ್ನೇಹಿತೆಗೆ ಮೊನ್ನೆಯಷ್ಟೇ ಹೆಣ್ಣು ಮಗುವಾಯಿತು. ತಂದೆಯ ಹೆಸರು ಶಮೀಮ ತಾಯಿಯ ಹೆಸರು ರೇಷ್ಮಾ.. ಎರಡನ್ನು ಬೆರೆಸಿ ಮಗಳಿಗೆ ಅವರು ಇಟ್ಟ ಹೆಸರು ‘ಸೇಹರಿಶ್’. ಇದಕ್ಕೇನು ಅರ್ಥ ಎಂದು ಕೇಳಿದಾಗ ಗೊತ್ತಿಲ್ಲ ಅಂದಳು ನನ್ನ ಸ್ನೇಹಿತೆ. ಆ ಮಗು ಬೆಳೆದು ದೊಡ್ಡವಳಾದ ಮೇಲೆ ನನ್ನ ತರಹ ಹೆಸರಿನ ಅರ್ಥ ಹುಡುಕುತ್ತ ಅರ್ಧ ಜೀವನ ಕಳೆಯಬೇಕೆ ಎಂದು ಖೇದವಾಯಿತು. ನಿಮ್ಮ ಪ್ರೀತಿಯ ಭಾರ ಮಗುವಿನ ಮೇಲೇಕೆ.. ಚೆನ್ನಾಗಿರುವ ಹೆಸರನ್ನೇ ಇಡಬಹುದಲ್ಲವೇ.. ಎರಡನೇ ಮಗುವಿಗೆ ಎಲ್ಲಿಂದ ಹೆಸರು ಹುಡುಕುವುದು.. ಆ ಮಗುವಿಗೆ ಬೇರೆ ಏನಾದರೂ ಹೆಸರಿಟ್ಟರೆ ಮೊದಲನೇ ಮಗುವಿಗೆ ಹೆಚ್ಚು ಪ್ರೀತಿ ಎಂದು ಅವನು/ಅವಳು ದೊಡ್ಡವರಾದಾಗ ಅಂದುಕೊಳ್ಳುವುದಿಲ್ಲವೇ…. ಇರಲಿ ಬಿಡಿ ಅವರವರ ಭಾವಕ್ಕೆ.. ನಮಗ್ಯಾಕೆ ಊರ ಉಸಾಬರಿ ಅಲ್ಲವೇ…
ನನಗೆ ಹೆಸರು ತಮಾಷೆಯಾಗಿ ಕಂಡಿದ್ದು ಅಮೆರಿಕಾಗೆ ಬಂದ ಮೇಲೆ… ಇವರಿಗೆಲ್ಲ ನಮ್ಮ ತರಹ ಹೆಸರು ಹೀಗೆ ಇರಬೇಕೆಂಬ ಯಾವುದೇ ಚೌಕಟ್ಟುಗಳಿಲ್ಲ. ‘ಎಲೆವನ್, ಸೆವೆನ್, ಫಿನ್’ ಹೀಗೆ ಸಂಖ್ಯೆಯನ್ನೇ ಹೆಸರಾಗಿ ಇಡುತ್ತಾರೆ. ಇನ್ನು ‘ಸಮ್ಮರ್, ಕ್ರಿಸ್ತಮಸ್, ವಿಂಟರ್’ ಎಂಬೆಲ್ಲ ಹೆಸರುಗಳಿವೆ. ಅದರಲ್ಲೇನಿದೆ… ನಮ್ಮಲ್ಲಿ ದೀಪಾವಳಿಯ ‘ದೀಪ’, ಗಣೇಶ ಚತುರ್ಥಿಯ ‘ಗಣೇಶ’ ಎಂಬ ಹೆಸರುಗಳಿಲ್ಲವೇ… ಆದರೂ ‘ಬೇಸಿಗೆಕಾಲ, ಮಳೆಗಾಲ’ ಎಂದು ಯಾರಾದ್ರೂ ಹೆಸರಿಡುತ್ತಾರೆಯೇ??? ವಸಂತ ಋತುವಿನ ಉದಾಹರಣೆ ಕೊಡಲು ಬರಬೇಡಿ!
ನಿಮಗೆ ಗೊತ್ತೇ.. ಒಂದಷ್ಟು ದೇಶಗಳಲ್ಲಿ ಹೆಸರಿಗೆಂದೇ ಕೆಲವೊಂದು ಕಾನೂನುಗಳಿವೆ. ಜೆರ್ಮನಿಯಲ್ಲಿ ನಿಮ್ಮ ಮಗುವಿನ ಹೆಸರು ಮೊದಲು ವೈಟಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸಿನಲ್ಲಿ ಅಪ್ಪ್ರುವ ಆಗಬೇಕು. ಅವರೇನಾದರೂ ತಿರಸ್ಕರಿಸಿದರೆ ಇನ್ನೊಂದು ಹೆಸರನ್ನು ಸೂಚಿಸಬೇಕು. ಸ್ವೀಡನ್ನಿನಲ್ಲಿಯೂ ಇದೆ ತರಹದ ಕಾನೂನು ಇದೆ. ಇಲ್ಲಿ ನೀವು ಒಂದೇ ಒಂದು ಬಾರಿ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಹಾಗೇ ಬದಲಾಯಿಸಿಕೊಂಡರು ಸಹ ಮೊದಲ ಹೆಸರಿನ ‘ಹೆಸರು’ ಬದಲಾಯಿಸಿಕೊಂಡ ಹೆಸರಿನಲ್ಲಿ ಇರಲೇಬೇಕು. ಒಂದು ವೇಳೆ ನಿಮ್ಮ ಹೆಸರು ಜಾನ್ ಎಂದಾಗಿದ್ದು ನಂತರ ಜಾಕ್ ಎಂದು ಬದಲಾಯಿಸಿಕೊಂಡಲ್ಲಿ ನಿಮ್ಮ ಹೆಸರು ‘ಜಾನ್ ಜಾಕ್’ ಎಂದಾಗುತ್ತದೆ. ಡೆನ್ಮಾರ್ಕಿನಲ್ಲಿ ಈ ಕಾನೂನು ಚೂರು ಬಿಗಿಯಾಗಿಯೇ ಇದೆ. ಇಲ್ಲಿ ತಂದೆ ತಾಯಿಗಳು ತಮ್ಮ ಮನ ಬಂದಂತೆ ಫ್ಯಾನ್ಸಿ ನೇಮ್ ಇಡುವ ಹಾಗಿಲ್ಲ. 7000 ಗಂಡು ಮತ್ತು ಹೆಣ್ಣು ಹೆಸರಿರುವ ಪಟ್ಟಿಯೊಂದನ್ನು ನೀಡುತ್ತಾರೆ. ಇದರಿಂದಲೇ ನಿಮ್ಮ ಮಗುವಿನ ಹೆಸರನ್ನು ಆಯ್ದುಕೊಳ್ಳಬೇಕು. ಒಂದು ವೇಳೆ ಇದರಲ್ಲಿ ಇಲ್ಲದ ಹೆಸರು ಬೇಕಾದಲ್ಲಿ ಚುರ್ಚಿನಿಂದ ವಿಶೇಷ ಅನುಮತಿಯನ್ನು ಪಡೆದು ನಂತರ ಅದು ಸರಕಾರದಿಂದ ಒಪ್ಪಿಗೆಯಾಗಬೇಕು. ಐಸ್ಲ್ಯಾಂಡಿನಲ್ಲಿ ನಮಗಿಷ್ಟವಾದ ಹೆಸರಿಗೆ ಶುಲ್ಕ ಕೊಡಬೇಕು. ನಂತರ ಈ ಹೆಸರು ಹಲವಾರು ಪರೀಕ್ಷೆಗಳನ್ನು ಪಾಸು ಮಾಡಿದರೆ ಮಾತ್ರ ಅನುಮತಿ ಸಿಗುತ್ತದೆ.
ಏನೇ ಇರಲಿ… ವ್ಯಕ್ತಿತ್ವ, ಸಾಧನೆಯಿಂದ ಹೆಸರು ಪ್ರಸಿದ್ದಿ ಆಗಬೇಕೆ ವಿನಃ ಹೆಸರಿನಿಂದ ಪ್ರಸಿದ್ದಿ ಆಗುವುದಲ್ಲ. ಸಚಿನ ಎಂಬ ಹೆಸರಿಗೆ ಮೆರಗು ತಂದು ಕೊಟ್ಟಿದ್ದು ಸಚಿನ್ ತೆಂಡೂಲ್ಕರ್. ಸಚಿನ ಎಂದು ಹೆಸರಿಟ್ಟುಕೊಂಡಿರುವವರೆಲ್ಲ ತೆಂಡೂಲ್ಕರ ಆಗಲು ಸಾಧ್ಯವಿಲ್ಲ. ರಾಹುಲ ಎಂದು ಹೆಸರಿಟ್ಟುಕೊಂಡರೆ ಆಯ್ಕೆ ನಿಮ್ಮದು. ರಾಹುಲ್ ದ್ರಾವಿಡ್ ಆಗಬೇಕೋ, ರಾಹುಲ್ ಗಾಂಧಿ ಆಗಬೇಕೋ ಅಥವಾ ನಿಮ್ಮ ಹೆಸರೇ ಇನ್ನೊಂದು ಹೆಸರಿರುವ ರಾಹುಲ ಆಗಬೇಕೋ ನಿರ್ಧರಿಸಿ. ಹೆಸರಿನಲ್ಲೇನಿದೆ ಎಂದು ಮೂಗು ಮುರಿಯಬೇಡಿ. ಹೆಸರಿಗೆ ಇರುವ ತೂಕ ತುಸು ಹೆಚ್ಚೇ… ಫೇಸ್ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಹೆಸರೇ ಮೊದಲು ಇಂಪ್ರೆಸ್ ಮಾಡುವುದು. ನನಗೆ ಮೊನ್ನೆಯಷ್ಟೇ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು . ಆ ಪ್ರೊಫೈಲ್ ಹೆಸರು ‘ನಾಯಿ’. ಫೋಟೋ ಸಹ ನಾಯಿಯದೇ ಇತ್ತು. ಇದ್ಯಾವುದೋ ತುಂಬಾ ಮಾಡ್ರನ್ ಎಜುಕೇಟೆಡ್ ನಾಯಿ ಎಂದುಕೊಂಡೆ.
ದುಡ್ಡು ಮಾಡಿದರೆ ಒಂದು ದಿನ ಎಲ್ಲವು ಖಾಲಿಯಾಗಬಹುದು. ಆದ್ದರಿಂದ ಹೆಸರು ಮಾಡಿ. ನೀವು ಮಣ್ಣಾದರು ನಿಮ್ಮ ಹೆಸರು ಹಸಿರಾಗಿರುತ್ತದೆ.
ವಾವ್…. ಎಷ್ಟೊಂದು ಆಯಾಮಗಳನ್ನು ತೆರೆದಿಟ್ಟಿದ್ದೀರಿ… ಚೆನ್ನಾಗಿ ನಿರೂಪಿತವಾಗಿದೆ.. ದೇಶ ವಿದೇಶಗಳ ಪದ್ದತಿಗಳನ್ನು ತಿಳಿಸಿದ್ದು ಸಕ್ಕತ್…!!
ಧನ್ಯವಾದಗಳು 🙂
Lekhana tumba chennagide.
Thank you 🙂