ಇಡೀ ಜೀವನ ಬಲಿ ತೆಗೆದುಕೊಂಡ ಆ ಎರಡು ಹೆಜ್ಜೆಗಳು
ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ಸರಬ್ಜಿತ್ ಚಿತ್ರ ನೋಡಿದೆ. ಯಾಕೋ ತುಂಬಾ ಬೇಜಾರಾಯಿತು. ನನಗೆ ನಿಜ ಜೀವನದ ಕತೆಗಳು ಸಿನಿಮಾ ಆಗಿ ತೆರೆಯ ಮೇಲೆ ಬಂದಾಗ ಕೂತುಹಲಕ್ಕಿಂತ ಹೆಚ್ಚಾಗಿ ಸತ್ಯ ತಿಳಿಯುವ ಹಂಬಲ. ಎಷ್ಟೋ ಚಿತ್ರಗಳು ಇರುವ ಸತ್ಯವನ್ನು ಮರೆಮಾಚಿ ಇನ್ನೇನನ್ನೋ ತೋರಿಸುತ್ತವೆ. ಕೆಲವು ನಿರ್ದೇಶಕರು ನಿಜ ಚಿತ್ರಣವನ್ನು ತೋರಿಸಿ ಗೊತ್ತಿಲ್ಲದ ಎಷ್ಟೋ ಸಂಗತಿಗಳನ್ನು ತೆರೆಯ ಮೇಲೆ ತರುತ್ತಾರೆ. ಅಂತಹ ನಿರ್ದೇಶಕರ ಸಾಲಿನಲ್ಲಿ ಸರಬಜೀತ ಚಿತ್ರ ನಿರ್ದೇಶಿಸಿದ ಒಮಂಗ್ ಕುಮಾರ್ ಒಬ್ಬರು .
ಇತ್ತೀಚಿಗೆ ಬಿಡುಗಡೆಯಾದ ರಾಝಿ ಚಿತ್ರ ನೋಡಿರಬಹುದು ನೀವೆಲ್ಲ. ಭಾರತದ ಗೂಢಚಾರರು ಪಾಕಿಸ್ತಾನದಲ್ಲಿ ಅನುಭವಿಸುವ ಬೇಗುದಿಗಳು ಅಷ್ಟಿಷ್ಟಲ್ಲ. ಅಪ್ಪಿ ತಪ್ಪಿ ಸಿಕ್ಕಿ ಹಾಕಿಕೊಂಡರೆ ಮುಗಿಯಿತು. ಅವರನ್ನು ಆ ಕಾರ್ಯಕ್ಕೆ ಕಳುಹಿಸಿದ ದೇಶ ಅವರು ಗೊತ್ತೇ ಇಲ್ಲವೆಂದು ಹೇಳಿ ಕೈ ತೊಳೆದುಕೊಂಡು ಬಿಡುತ್ತದೆ. ಆ ಕಡೆ ಜೈಲಿನಲ್ಲಿ ತಪ್ಪು ಒಪ್ಪಿಕೊಳ್ಳುವವರೆಗೆ ಚಿತ್ರಹಿಂಸೆ. ಇತ್ತ ಸಾಯಲು ಆಗದ ಅತ್ತ ಬದುಕಲು ಆಗದ ಅತಿ ಹೀನ ಸ್ಥಿತಿ ಅವರದ್ದು.. ಈಗ ನಾನು ಹೇಳ ಹೊರಟಿರುವುದು ಪಾಕಿಸ್ತಾನದ ಜೈಲಿನಲ್ಲಿ 21 ವರುಷಗಳ ಕಾಲ ಹಿಂಸೆ ಅನುಭವಿಸಿ ಕೊನೆಗೆ ಶವವಾಗಿ ಮರಳಿದ ಸರಬ್ಜಿತ್ ನ ಕಥೆ.
PC: Google
ಗೂಗಲ್ ಮ್ಯಾಪ್ಸ್ ತೆಗೆದು ಭಾರತ ದೇಶದ ನಕ್ಷೆಯಲ್ಲಿ ಪಂಜಾಬನ್ನು ನೋಡಿದಾಗ ತರಣ ತಾರಣ ಎಂಬ ಜಿಲ್ಲೆಯೊಂದು ಕಾಣಿಸುತ್ತದೆ . ಈ ಜಿಲ್ಲೆಗೆ ಸೇರಿದ ಭಿಖಿವಿಂದ್ ಎನ್ನುವ ಸಣ್ಣ ಹಳ್ಳಿ ಪಾಕಿಸ್ತಾನ ಗಡಿಯ ಪಕ್ಕದಲ್ಲಿಯೇ ಇದ್ದು, ಅಲ್ಲಿಂದ ಗಡಿ ದಾಟಿ ಹೋದರೆ ಪಾಕಿಸ್ತಾನದ ಲಾಹೋರ್ ಶುರುವಾಗುತ್ತದೆ. ಈ ಗಡಿಯಲ್ಲಿ ಎಲೆಕ್ಟ್ರಿಕ್ ತಂತಿ ಬೇಲಿಗಳಾಗಲಿ, ಕಾವಲು ಕಾಯುತ್ತಿರುವ ಸೈನಿಕರಾಗಲಿ, ಸ್ಮಶಾನ ಮೌನವಾಗಲಿ ಇಲ್ಲ. ಎರಡು ದೇಶಗಳನ್ನು ಬೇರ್ಪಡಿಸಲು ಮೈಲಿಗಲ್ಲುಗಳಂತಹ ಕಲ್ಲುಗಳಷ್ಟೇ ಗುರುತಿಗೆ ಆಧಾರ .
ಹೀಗಾಗಿ ಭಿಖಿವಿಂದ್ ಊರ ಜನರಿಗೆ ತಮ್ಮ ಪಕ್ಕದಲ್ಲಿ ಪಾಕಿಸ್ತಾನದ ಜನರಿದ್ದಾರೆ, ಪಾಕಿಸ್ತಾನ ದೇಶವಿದೆ ಎಂಬುದಕ್ಕಿಂತ ತಮ್ಮಂತೆಯೇ ಬಟ್ಟೆ ಹಾಕಿದ, ತಮ್ಮಂತೆಯೇ ಉಸಿರಾಡುವ, ತಾವು ತಿನ್ನುವಂತಹ ಆಹಾರವನ್ನು ತಿನ್ನುವ ಜನರಿದ್ದಾರೆ ಎಂಬ ಭಾವನೆ.
ಸರಬ್ಜಿತ್ ಎಂಬಾತ ಭಿಖಿವಿಂದ ಊರಿನ ನಿವಾಸಿ. ವಯಸಾದ ಅಪ್ಪ, ಎರಡು ವರುಷದ ಹೆಣ್ಣು ಮಗು, ಗರ್ಭಿಣಿ ಹೆಂಡತಿ, ಗಂಡನನ್ನು ಬಿಟ್ಟು ಇವರ ಜೊತೆ ಬದುಕುತ್ತಿರುವ ಅಕ್ಕ, ಇದು ಸರಬ್ಜಿತ್ ನ ಸಂಸಾರ. ಅಕ್ಕನಿಗೆ ತಮ್ಮನೆಂದರೆ ಪ್ರಾಣ. ಸರಬ್ಜಿತ್ ಕೂಡ ಅಕ್ಕ ಹೇಳಿದ ಮಾತನ್ನು ತೆಗೆದು ಹಾಕುತ್ತಿರಲಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಸುಖಿ ಸಂಸಾರ.
ಒಂದು ದಿನ ಸರಬ್ಜಿತ್ ನ ಗೆಳೆಯ ಆತನನ್ನು ಊರ ಹೊರಗಿನ ಹೊಲಕ್ಕೆ ಕರೆ ತರುತ್ತಾನೆ. ಗೆಳೆಯರೆಲ್ಲ ಸೇರಿ ಕಂಠಪೂರ್ತಿ ಕುಡಿದು ಮಲಗಿದಾಗ ಮಧ್ಯರಾತ್ರಿ ಒಮ್ಮೆಲೇ ಸರಬ್ಜಿತ್ ನಿಗೆ ತನ್ನ ಮನೆಯ ನೆನಪಾಗುತ್ತದೆ. ರಾತ್ರಿ ಮನೆಗೆ ಹೋಗದಿದ್ದರೆ ಬೈಯ್ಯುವ ಅಕ್ಕನ ನೆನಪಾಗಿ ಕುಡಿದ ಮತ್ತಿನಲ್ಲಿಯೇ ಅಲ್ಲಿಂದ ಎದ್ದು ಹೊರಡುತ್ತಾನೆ. ದಿನವೂ ಚೆನ್ನಾಗಿ ಓಡುವ ಗಾಡಿ ಯಾಕೋ ಶುರುವಾಗುವುದೇ ಇಲ್ಲ ಅಥವಾ ಕುಡಿದ ಮತ್ತಿನಲ್ಲಿ ಇವನಿಗೆ ಗಾಡಿ ಸ್ಟಾರ್ಟ್ ಮಾಡಲು ಬರಲಿಲ್ಲವೇನೋ..
ಹಾಗೆ ತೂರಾಡುತ್ತ ನಡೆದುಕೊಂಡು ಹೋಗುವಾಗ ಕತ್ತಲಲ್ಲಿ ಮನೆಯ ದಾರಿ ತಪ್ಪುತ್ತದೆ. ದಿಕ್ಕುಗಾಣದೆ ಎತ್ತೆತ್ತಲೋ ನಡೆಯುತ್ತಾ ಗಡಿ ದಾಟಿ ಪಾಕಿಸ್ತಾನಕ್ಕೆ ಕಾಲಿಟ್ಟು ಬಿಡುತ್ತಾನೆ ! ನಾಲ್ಕು ಹೆಜ್ಜೆ ಇಟ್ಟಿರಲಿಕ್ಕಿಲ್ಲ ಆ ಕಡೆಯಿಂದ ಬಂದ ಪಾಕಿಸ್ತಾನದ ಸೈನಿಕರು ಇವನು ಭಾರತದ ಪತ್ತೇದಾರ ಎಂದುಕೊಂಡು, ಬೇಡಿ ಹಾಕಿ ಎಳೆದುಕೊಂಡು ಹೋಗುವಾಗ ಸರಬ್ಜಿತ್ ನಿಗೆ ತಾನು ಬೀಳುತ್ತಿರುವುದು ಆಳದ ಕಂದಕದಲ್ಲಿ ಎಂಬ ಅರಿವಿರುವುದಿಲ್ಲ.
ಮುಂದೆ ನಡೆದಿದ್ದೆಲ್ಲವೂ ದುರಂತ. ನಾಲ್ಕು ಅಡಿಯ ಪೆಟ್ಟಿಗೆಯಲ್ಲಿ ಸರಬ್ಜಿತ್ ನನ್ನು ಕೂಡಿ ಹಾಕಿ ಕತ್ತಲ ಕೋಣೆಯೊಳಗೆ ಇರಿಸುತ್ತಾರೆ. ಮುದುರಿಕೊಂಡು ಮಲಗಿದ ಸರಬ್ಜಿತನಿಗೆ ಹೊರಗಡೆಯಿಂದ ಕೇಳಿಸುತ್ತಿರುವ ಚೀತ್ಕಾರ, ಆಕ್ರಂದನ, ನಮ್ಮನ್ನು ಬಿಟ್ಟು ಬಿಡಿ ಎಂಬ ಕೂಗುಗಳು. ಮೊದಲ ಕೆಲವು ದಿನಗಳಂತೂ ಊಟ ನೀರು ಯಾವುದು ಇಲ್ಲ. ಒಂದು ಎರಡು ಎಲ್ಲವು ಆ ನಾಲ್ಕಡಿಯ ಪೆಟ್ಟಿಗೆಯಲ್ಲೇ. ಆಗಾಗ ಬರುವ ಸೈನಿಕರಿಂದ ನೀನು ರಜತ್ ಸಿಂಗ್ ಹೌದೋ ಅಲ್ಲವೋ ಎಂಬ ಬೆದರಿಕೆಯ ಪ್ರಶ್ನೆ. ನಾನು ಸರಬ್ಜಿತ್ ಎಂದರೆ ಮತ್ತೆ ಪೆಟ್ಟಿಗೆ ಮುಚ್ಚಿ ಬೀಗ ಹಾಕಿ ಅವರು ಹೊರಟು ಹೋದ ಹೆಜ್ಜೆಗಳ ಸದ್ದು. ಪೆಟ್ಟಿಗೆಯಲ್ಲಿ ಬಿಟ್ಟ ಇಲಿಗಳು ಮೈ ಮೇಲೆಲ್ಲಾ ಓಡಾಡುವಾಗ ಇವನು ಚೀರಾಡುತ್ತಿದ್ದರೆ ಹೊರಗಡೆಯಿಂದ ಗಹಗಹಿಸಿ ನಗುವ ಸದ್ದು. ದಿನಕ್ಕೊಮ್ಮೆ ಸಂದಿಯೊಳಗಿಂದ ಬಿಸಾಡುವ ಒಣ ರೊಟ್ಟಿ, ಹನಿ ನೀರು.
ಹೀಗೆ 9 ತಿಂಗಳು ಕಳೆಯುತ್ತದೆ. ಪ್ರತಿ ಬಾರಿ ರಜತ್ ಸಿಂಗ್ ನ ಹೆಸರು ಕೇಳಿ ಸರಬ್ಜಿತನ ತಲೆ ಕೆಟ್ಟು ಹೋಗಿರುತ್ತದೆ. ಪೆಟ್ಟಿಗೆಯೊಳಗಿನ ಅವಸ್ಥೆಯಂತೂ ಹೇಳಲಸಾಧ್ಯ. ರಜತ್ ಸಿಂಗ್ ಎಂದು ಒಪ್ಪಿಕೊಂಡರೆ ಈ ನರಕದಿಂದ ಪಾರಾಗಬಹುದು ಎಂದು ಸೈನಿಕನೊಬ್ಬ ಹೇಳಿದಾಗ ಮನೆಗೆ ಮರಳುವ ಆಸೆಯಲ್ಲಿ, ಪೆಟ್ಟಿಗೆಯಿಂದ ಹೊರಗೆ ಬರುವ ಸಂಭ್ರಮದಲ್ಲಿ ತನ್ನ ಹೆಸರು ರಜತ್ ಸಿಂಗ್ ಎಂದು ಒಪ್ಪಿಕೊಂಡು ಬಿಡುತ್ತಾನೆ ಸರಬ್ಜಿತ್!
ಇತ್ತ ಒಮ್ಮಿಂದೊಮ್ಮೆಲೆ ಮಾಯವಾದ ಸರಬ್ಜಿತನಿಗೋಸ್ಕರ ಇಡೀ ಹಳ್ಳಿಯೇ ಹುಡುಕಾಡುತ್ತದೆ. ಅವನು ಪಾಕಿಸ್ತಾನದ ಕತ್ತಲು ಕೋಣೆಯಲ್ಲಿ ಅನುಭವಿಸುತ್ತಿರುವ ಕಾರ್ಪಣ್ಯದ ಕಲ್ಪನೆಯಂತೂ ಯಾರಿಗೂ ಇಲ್ಲ. 9 ತಿಂಗಳುಗಳ ನಂತರ ಬಂದ ಸರಬ್ಜಿತ್ ನ ಪತ್ರ ಈ ಎಲ್ಲ ವಿಷಯವನ್ನು ಅರುಹಿದಾಗ ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ ಅವನ ಹೆಂಡತಿ, ಅಕ್ಕನಿಗೆ ಪಕ್ಕದಲ್ಲಿಯೇ ಇದ್ದ ಪಾಕಿಸ್ತಾನದವರೆಗೂ ಕೈ ಚಾಚುವುದು ದುರ್ಲಭವಾಗಿ ಕಾಣಿಸುತ್ತದೆ. ಪೊಲೀಸ್, ಎಂ.ಎಲ್.ಎ, ಮಂತ್ರಿ, ಶಾಸಕರ ಬಳಿ ಪ್ರತಿದಿನ ಓಡಾಡಿದರು ಯಾವುದೇ ಪ್ರಯೋಜನವಾಗುವುದಿಲ್ಲ.
ಪೊಲೀಸರೆದುರು ರಜತ್ ಸಿಂಗ್ ಎಂದು ಒಪ್ಪಿಕೊಂಡ ಸರಬ್ಜಿತ್ ನಿಗೆ ಪಾಕಿಸ್ತಾನದ ನ್ಯಾಯಾಲಯದಿಂದ ಗಲ್ಲು ಶಿಕ್ಷೆಯ ತೀರ್ಪು. ಕತ್ತಲು ಕೋಣೆಯ ಅಂಧಕಾರದಲ್ಲಿ ನೆಗ್ಗಿದ ಅಲ್ಲ್ಯೂಮಿನಿಯಂ ತಟ್ಟೆ ಹಿಡಿದು, ಯಾರಾದರೂ ಬಂದು ಬಾಗಿಲು ತೆಗೆದಾಗ ಸಿಗುವ ಚೂರೇ ಚೂರು ಸೂರ್ಯನ ಕಿರಣಗಳಿಗಾಗಿ ಕಾಯುತ್ತ ಕೂತ ಸರಬ್ಜಿತನಿಗೆ ಯೌವ್ವನ ಸದ್ದಿಲ್ಲದೇ ಕಳೆದು ಹೋಗುತ್ತಿರುವುದರ ಅರಿವಾಗುವುದಿಲ್ಲ. ಅವನ ಎರಡು ವರುಷದ ಮಗು ಈಗ ಹದಿನೈದರ ಪೋರಿ. ಎರಡನೇ ಮಗು ಹೆಣ್ಣು ಎಂದು ಅಕ್ಕನ ಪತ್ರದಿಂದ ಗೊತ್ತಾಗಿದ್ದಷ್ಟೇ. ನೋಡಲು ಹೇಗಿರಬಹುದೆಂದು ಊಹಿಸಿ ಊಹಿಸಿ ಸೋತಿದ್ದಾನೆ ಸರಬ್ಜಿತ. ಪತ್ರ ವ್ಯವಹಾರ ನಿಂತು ಎಷ್ಟೋ ವರುಷಗಳ ಮೇಲಾಯಿತು. ಕುಟುಂಬಕ್ಕೆ ಇವನು ಬದುಕಿದ್ದಾನೋ ಇಲ್ಲವೋ ಎಂಬುದು ಸಹ ಗೊತ್ತಿಲ್ಲ. ನಮಾಜು ಮಾಡಿದರೆ, ಕುರಾನ್ ಓದಿದರೆ, ಮುಸ್ಲಿಂ ಧರ್ಮಕ್ಕೆ ಪರಿವರ್ತನೆ ಹೊಂದಿದರೆ ಪೊಲೀಸರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಎಷ್ಟೋ ಜನ ಹೇಳಿದರು ಸರಬ್ಜಿತನಿಗೆ ತನ್ನ ಧರ್ಮ ಬಿಡಲು ಇಷ್ಟವಿಲ್ಲ.
ಪ್ರಧಾನ ಮಂತ್ರಿಯನ್ನು ಭೇಟಿಯಾಗಿ ತಮ್ಮನನ್ನು ಬಿಡಿಸಿಕೊಂಡು ಬರಲು ಹೆಣಗಾಡುತ್ತಿರುವ ಸರಬ್ಜಿತನ ಅಕ್ಕ ದಿಲಬೀರ್ ಳ ಪ್ರಯತ್ನ ಕೈಗೂಡುವುದಿಲ್ಲ. ಕೊನೆಗೆ ರಸ್ತೆಯ ಮಧ್ಯದಲ್ಲಿಯೇ ‘ನನ್ನ ತಮ್ಮ ಪಾತಕಿಯಲ್ಲ’ ಎಂಬ ಫಲಕ ಹಿಡಿದು ಪ್ರತಿಭಟನೆಗೆ ಕೂರುತ್ತಾಳೆ. ಪತ್ರಿಕೆಯವರ, ಸರ್ಕಾರದ ಗಮನ ಸೆಳೆಯಲು ತಿಂಗಳುಗಳೇ ಬೇಕಾಗುತ್ತವೆ. ಅಂತೂ ಇಂತೂ ಮಣಿದ ಸರಕಾರ ಸರಬ್ಜಿತನ ಕುಟುಂಬದವರಿಗೆಲ್ಲ ಪಾಕಿಸ್ತಾನಕ್ಕೆ ವೀಸಾ ಮಾಡಿಸಿ ಕೊಟ್ಟು ಸರಬ್ಜಿತನನ್ನು ಭೇಟಿಯಾಗುವ ಅವಕಾಶ ನೀಡುತ್ತಾರೆ. ಅವನಿಗಿಷ್ಟದ ಹಾಗಲಕಾಯಿ ಪಲ್ಯ ಮಾಡಿಕೊಂಡು ಬಲು ಸಂಭ್ರಮದಿಂದ ಹೊರಡುತ್ತದೆ ಇಡಿ ಕುಟುಂಬ.
ಮನೆಯವರು ಬರುತ್ತಾರೆಂದು ಗೊತ್ತಾದಾಗ ಸರಬ್ಜಿತನಿಗೆ ಎಲ್ಲಿಲ್ಲದ ಹಿಗ್ಗು. ಕೊಳಚೆಯಂತಿದ್ದ ಆ ಜೈಲು ಕೋಣೆಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಾನೆ. ಹರಿದು ಹೋದ ಬಟ್ಟೆಗಳನ್ನು ಒಗೆದುಕೊಂಡು, ವರುಷಗಳ ಕಾಲ ನೀರು ಕಂಡಿರದ ಮುಖವನ್ನು ತೊಳೆದು, ಬೊಗಸೆಯಲ್ಲಿ ಹಿಡಿದ ನೀರಿನಲ್ಲಿ ಮುಖವನ್ನು ನೋಡಲು ಯತ್ನಿಸಿ ಕತ್ತಲೆಯಲ್ಲಿ ತನ್ನ ಪ್ರತಿಬಿಂಬ ಕಾಣದೆ ನಿರಾಶನಾಗುತ್ತಾನೆ.. ಕತ್ತಲ ಕೋಣೆಯ ಆಚೆ ಹೆಜ್ಜೆ ಸಪ್ಪಳವಾದಾಗಲೆಲ್ಲ ತನ್ನವರು ಬಂದರೆಂದು ಪುಳಕ. ಅವನ ಮನೆಯವರನ್ನೆಲ್ಲ ಜೈಲಿನ ಒಳಗೆ ಬಿಡಲು ಪಾಕಿಸ್ತಾನದ ಪೊಲೀಸರಿಂದ ಎಲ್ಲಿಲ್ಲದ ನಿಬಂಧನೆಗಳು. ಅವನ ಹೆಂಡತಿಯ ಕುಂಕುಮ ಅಳಿಸಿ, ತಲೆಯ ಮೇಲೆ ದುಪ್ಪಟ್ಟ ಹೊದೆಸಿ, ಇಡಿ ಮೈ ಪರೀಕ್ಷಿಸಿ ಕೇವಲ 47 ನಿಮಿಷಗಳ ಕಾಲ ಒಳಗೆ ಬಿಡುತ್ತಾರೆ. ತಪ್ಪೇ ಮಾಡದ ಮನುಷ್ಯನನ್ನು, 15 ವರ್ಷಗಳಿಂದ ಕತ್ತಲಲ್ಲಿ ಕೊಳೆಯುತ್ತಿರುವನನ್ನು, ಯೌವ್ವನವನ್ನು ಇಂಚಿಂಚಾಗಿ ಜೈಲಿನಿ ಕಂಬಿಯ ಹಿಂದೆ ಕಳೆದವನನ್ನು ನೋಡಲು ಕೇವಲ 47 ನಿಮಿಷಗಳ ಅವಧಿಯಿತ್ತು!!
ಈ ರಜತ ಸಿಂಗ್ ಎಂಬಾತ ಪಾಕಿಸ್ತಾನದಲ್ಲಿ ಬಾಂಬುಗಳನ್ನು ನೆಟ್ಟು ಮುಗ್ಧ ಜೀವಿಗಳನ್ನು ಕೊಂದ ಪಾತಕಿ. ತನ್ನ ಹಣ, ಅಧಿಕಾರ, ಸಂಚಿನಿಂದ ಪಾರಾಗಿ ಐಷಾರಾಮಿ ಜೀವನ ನಡೆಸುತ್ತ ತನ್ನ ಪಾಪದ ಹೊರೆಯನ್ನು ಬೇರೆಯವರ ಮೇಲೆ ಹಾಕಿ ಬದುಕುತ್ತಿರುವ ಮಹಾವಂಚಕ. ಕೇವಲ ಸರಬ್ಜಿತ ಅಷ್ಟೇ ಅಲ್ಲ.. ಇವನಂತಹ ಎಷ್ಟೋ ನಿರಪರಾಧಿಗಳು ಯಾರದೋ ಹೆಸರನ್ನು ತಮ್ಮ ಮೇಲೆ ಹೇರಿಕೊಂಡು ಶಿಕ್ಷೆ ಅನುಭವಿಸುತ್ತಿದ್ದಾರೆ. ಭಾರತ-ಪಾಕಿಸ್ತಾನ್ ಎಂಬ ದ್ವೇಷದ ದಳ್ಳುರಿಯಲ್ಲಿ ಬಲಿಯಾಗುತ್ತಿರುವವರು ಮಾತ್ರ ತಪ್ಪೇ ಮಾಡಿರದ ಸಾಮಾನ್ಯ ಜನರು. ಅಕ್ಕ ದಿಲಬೀರ್ ಕೌರ್ ಬಂದಾಗ ಸರಬ್ಜಿತ ಪಾಕಿಸ್ತಾನದ ಹುಡುಗನೊಬ್ಬನ ಬಗ್ಗೆ ಹೇಳುತ್ತಾನೆ. ಈ ಹುಡುಗ ದೆಹಲಿ ರೈಲು ನಿಲ್ದಾಣದಲ್ಲಿ ಅಪ್ಪ ಅಮ್ಮನಿಂದ ತಪ್ಪಿಸಿಕೊಂಡು ಸದ್ಯ ತಿಹಾರದ ಜೈಲಿನಲ್ಲಿ 18 ವರ್ಷಗಳಿಂದ ಬಂಧಿ. ನಿನ್ನ ಹೇಗೆ ಬಿಡಿಸಿಕೊಳ್ಳಲಿ ಎಂದು ಅಕ್ಕ ಅಳುವಾಗ ತಿಹಾರದ ಜೈಲಿನಿಂದ ಆ ಹುಡುಗನನ್ನು ಬಿಡಿಸಿ ಅವನಲ್ಲೇ ನಿನ್ನ ತಮ್ಮನನ್ನು ಕಾಣು ಎಂದು ಹೇಳುತ್ತಾನೆ ಸರಬ್ಜಿತ.
ಸರಬ್ಜಿತನನ್ನು ನೇಣಿಗೆ ಹಾಕುವ ದಿನಾಂಕವನ್ನು ಪಾಕಿಸ್ತಾನದ ಸರಕಾರ ಮುಂದೂಡುತ್ತಲೇ ಇರುತ್ತದೆ. ಕಾರಣ ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಅಜ್ಮಲ್ ಕಸಬನ ವಿಚಾರಣೆ ಭಾರತದ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುತ್ತದೆ. ಇಲ್ಲಿ ತೆಗೆದುಕೊಳ್ಳುವ ತೀರ್ಪಿನ ಆಧಾರದ ಮೇಲೆ ಅಲ್ಲಿ ಬಂಧಿಯಾದ ಕೈದಿಗಳ/ನಿರಪರಾಧಿಗಳಿಗೆ ಶಿಕ್ಷೆಯ ಉಪಚಾರ. ಪಾಕಿಸ್ತಾನದ ಜನರಿಗೆ ರಜತ್ ಸಿಂಗ್ ನಿಜವಾದ ಅಪರಾಧಿ ಎಂದಾಗಲಿ, ಸರಬ್ಜಿತ ಅರಿವಿಲ್ಲದೆ ಗಡಿ ದಾಟಿ ಸೆರೆ ಸಿಕ್ಕ ಮುಗ್ಧ ಎಂದಾಗಲಿ ಗೊತ್ತಿಲ್ಲ. ಭಾರತದಲ್ಲಿ ಅವನ ಪರ ಪ್ರತಿಭಟನೆಗಳು ಹೆಚ್ಚಾದಷ್ಟು ಪಾಕಿಸ್ತಾನದಲ್ಲಿ ಅವನ ವಿರುದ್ಧದ ಪ್ರತಿಭಟನೆಗಳು. ರಜತ್ ಸಿಂಗ್ ಮಾಡಿದ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟ 27 ಕುಟುಂಬದವರಿಂದ ಸಹಿ ಹಾಕಿಸಿಕೊಂಡು ಬಂದರೆ ಸರಬ್ಜಿತನನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರಕಾರ ದಿಲಬೀರ್ ಗೆ ಹೇಳುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಕೇವಲ ಒಬ್ಬನೇ ಒಬ್ಬ ಬಂದು ಸಹಿ ಹಾಕಿದಾಗ ದಿಲಬೀರ್ ಇನ್ನೇನು ಮಾಡಲು ತೋಚದೆ ಹತಾಶಳಾಗುತ್ತಾಳೆ.
ಪಾಕಿಸ್ತಾನದ ವಕೀಲನೊಬ್ಬ ಸರಬ್ಜಿತನ ಪರ ನಿಲ್ಲುತ್ತಾನೆ. ಇದೇ ಕಾರಣಕ್ಕೆ ಇವನ ವಿರುದ್ಧ ಪ್ರತಿಭಟನೆಗಳು, ಬೈಕ್ ಸುಡುವುದು, ಬೆದರಿಕೆ ಹಾಕುವುದು ಇನ್ನು ಏನೇನೋ.. ಹಿಂದುಸ್ತಾನದವರೆಲ್ಲ ವೈರಿಗಳಲ್ಲ ಪಾಕಿಸ್ತಾನದವರೆಲ್ಲ ಆತಂಕವಾದಿಗಳಲ್ಲ ಎಂದು ದಿಲಬೀರ್ ಅಸಹಾಯಕತೆಯಿಂದ ಚೀರುವಾಗ ಹೃದಯ ನೋವಿನಿಂದ ಹಿಂಡಿ ಹಿಪ್ಪೆಯಾಗುವದಂತು ಖಚಿತ. ಒಮ್ಮೆ ಅವನಿಗೆ ಗಲ್ಲು ಶಿಕ್ಷೆ ಎಂದೋ ಇನ್ನೊಮ್ಮೆ ದಿನಾಂಕ ಮುಂದೂಡಲಾಗಿದೆಯೆಂದೋ ಹೇಳುತ್ತಾ 20 ವರುಷಗಳೇ ಜೈಲು ಕಂಬಿಗಳ ಹಿಂದೆ ಕರಗಿ ಹೋಗುತ್ತವೆ.
ಎಲ್ಲ ದಾರಿಗಳು ಮುಚ್ಚಿದಾಗ ದಿಲಬೀರಳಿಗೆ ಇದ್ದ ಸಣ್ಣ ಭರವಸೆಯೂ ಸತ್ತು ಬೂದಿಯಾಗುತ್ತದೆ. . ಕುಡಿದ ಅಮಲಿನಲ್ಲಿ ಗಡಿ ದಾಟಿ ಎರಡು ಹೆಜ್ಜೆ ಹೋದ ಸರಬಜೀತ, ರಾಜಕೀಯ, ದ್ವೇಷ, ದಂಗೆ, ನೀಚತನದ ಕೂಪದಲ್ಲಿ ಬಿದ್ದು ತನ್ನ ಹಿಂದಿನ ಜೀವನಕ್ಕೆ ಮರಳಲಾಗದಷ್ಟು ದೂರದ ದಾರಿಯನ್ನು ಕ್ರಮಿಸಿ ಬಿಟ್ಟಿರುತ್ತಾನೆ. ಹಳೆಯ ಜೀವನ, ಸ್ನೇಹಿತರು, ಹುಟ್ಟಿ ಬೆಳೆದ ಊರು, ಹೆಂಡತಿ-ಮಕ್ಕಳು, ಅಪ್ಪ, ಅಕ್ಕ, ಸಾಕಿದ ಪಾರಿವಾಳಗಳು ಎಲ್ಲವು ನೆನಪಿನಿಂದಲೂ ಮಾಸಿ ಹೋಗಿವೆ. ಆ ನಾಲ್ಕು ಗೋಡೆಯ ಮಧ್ಯೆ , ವರುಷಗಳ ಕಾಲ ಸೂರ್ಯನನ್ನೇ ಕಾಣದೆ, ಒಣ ರೊಟ್ಟಿ ತಿಂದು, ಕೆಟ್ಟ ವಾಸನೆಯ ಮಧ್ಯದಲ್ಲಿ ತನ್ನ ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡಿದ್ದೆ ಹೆಚ್ಚು ಅವನು.
ಒಂದು ದಿನ ಅಚಾನಕ್ಕಾಗಿ ಸರಬ್ಜಿತ ನನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿರುವುದಾಗಿ ಟಿವಿಗಳಲ್ಲಿ ಸುದ್ದಿ ಬರುತ್ತದೆ. ಅವನ ಕುಟುಂಬದವರ ಸಂತೋಷಕ್ಕೆ ಮೇರೆಯೇ ಇಲ್ಲ. ಮನೆ ಸಿಂಗರಿಸಿ, ಡೋಲು ಬಾರಿಸಿ, ಊರ ಪ್ರವೇಶದ್ವಾರಕ್ಕೆ ತೋರಣ ಕಟ್ಟಿ ಇಡಿ ಊರಿಗೆ ಊರೇ ಸರಬ್ಜಿತನ ಆಗಮನಕ್ಕೆ ದಾರಿ ಕಾಯುತ್ತದೆ. ಹಲವರು ಅವನನ್ನು ಇದಿರುಗೊಳ್ಳಲೆಂದು ಅಮೃತಸರದ ಅಟ್ಟಾರಿ ಬೋರ್ಡೆರಿನ ಮುಂದೆ ಜನ ಭಾರತದ ಧ್ವಜ ಹಿಡಿದುಕೊಂಡು ಕಾಯುತ್ತಾರೆ. ಅವನ ಹೆಂಡತಿಯಂತೂ ಕಣ್ಣು ಪಿಳುಕಿಸಿದರೆ ಎಲ್ಲಿ ಗಂಡ ಬರುವ ದೃಶ್ಯ ತಪ್ಪಿ ಹೋಗುತ್ತದೋ ಎಂಬಂತೆ ಬಿಟ್ಟ ಕಣ್ಣು ಬಿಡದಂತೆ ಕಾಯುತ್ತಿರುತ್ತಾಳೆ. ಆದರೆ ಆಚೆ ಬಂದಿದ್ದು 20 ವರುಷಕ್ಕೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿ ಬಂಧಿಯಾದ ಭಾರತದ ಗೂಡಾಚಾರ ಸುರ್ಜಿತ!! ಮತ್ತೆ ಅದೇ ರಾಜಕೀಯದ ವಿಕೃತ ಆಟ ಸರಬ್ಜಿತನ ಬಾಳಲ್ಲಿ.
ಅತ್ತ ಕಡೆ ಜೈಲಿನಲ್ಲಿ ಇತರೆ ಖೈದಿಗಳಿಂದ ಸರಬ್ಜಿತನ ಮೇಲೆ ಮಾರಣಾಂತಿಕ ಹಲ್ಲೆ. ಆಸೆಯೊಂದೇ ಉಳಿದಿದ್ದ ಆ ದೇಹ ಘೋರ ಹೊಡೆತ ತಾಳಲಾಗದೆ ಕೋಮಾ ಸ್ಥಿತಿಗೆ ತಲಪುತ್ತದೆ. ಅವನಿಗೆ ಭಾರತದ್ಲಲಿಯೇ ಚಿಕಿತ್ಸೆ ಕೊಡಿಸುವಂತೆ ದಿಲಬೀರ್ ಪರಿಪರಿಯಾಗಿ ಬೇಡಿಕೊಂಡರು ಕೇಳುವವರಿಲ್ಲ. ಕೊನೆಗೆ ಅಂತೂ ಇಂತೂ ಸರಬ್ಜಿತ ತನ್ನ ಊರಿಗೆ ಸಕಲ ರಾಜ ಮರ್ಯಾದೆಗಳಿಂದ ಮರಳುತ್ತಾನೆ, ಶವವಾಗಿ!
ಸರಬ್ಜಿತ್ ನಾಗಿ ಅಭಿನಯಿಸಿದ ರಣದೀಪ್ ಹೂಡಾ ಈ ಪಾತ್ರಕ್ಕಾಗಿ ಕೇವಲ 28 ದಿನಗಳಲ್ಲೇ 18 ಕೆಜಿ ಕಡಿಮೆ ಮಾಡಿಕೊಂಡಿದ್ದರಂತೆ!! ಭಿಖಿವಿಂದ್ ನಲ್ಲಿ ಸ್ವಚ್ಚಂದ ಹಕ್ಕಿಯಂತೆ ಹಾರಾಡುವ ರಣದೀಪ್ ಗು ಜೈಲಿನಲ್ಲಿ ಹಲ್ಲುಗಟ್ಟಿ, ಕಣ್ಣುಜ್ಜುತ್ತಾ ಬೆಳುಕು ನೋಡುವ ರಣದೀಪ್ ಗು ಎಲ್ಲಿಯ ಹೋಲಿಕೆ! ಅಭಿನಯವೆಂದರೆ ಹೀಗಿರಬೇಕು. ಆದರೇನು ಮಾಡುವುದು ನಮ್ಮ ದೇಶದಲ್ಲಿ ಅಭಿನಯಕ್ಕೆ ಜಾಗವಿಲ್ಲ. ಅಭಿನಯದ ಗಂಧ ಗಾಳಿ ಗೊತ್ತಿಲ್ಲದ, ನಗು, ಅಳು, ಮುನಿಸು, ಅಸಹಾಯಕತೆ ಎಲ್ಲದಕ್ಕೂ ಒಂದೇ ಅಭಿವ್ಯಕ್ತಿಯ ಮನುಷ್ಯನಿಗೆ ಸೂಪರ್ ಸ್ಟಾರ್ ಮರ್ಯಾದೆ…..
ದಿಲಬೀರ್ ಅಂದರೆ ಸರಬ್ಜಿತ್ ನ ಅಕ್ಕನ ಪಾತ್ರ ವಹಿಸಿದ ಐಶ್ವರ್ಯ ರೈ ರಣದೀಪ್ ಮುಂದೆ ತುಸು ಸಪ್ಪೆಯಾಗಿ ಕಂಡರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇನ್ನು ಅದೆಷ್ಟೋ ಜನರು ಎರಡು ದೇಶದ ಜೈಲುಗಳಲ್ಲಿ ಕೊಳೆಯುತ್ತಲೇ ಇದ್ದಾರೆ. ನಮ್ಮವರು ಪಾಕಿಸ್ತಾನದವರು ಎನ್ನುವ ಪ್ರಶ್ನೆ ಬೇಕಿಲ್ಲ ಇಲ್ಲಿ. ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆಯಾಗಲೇಬೇಕು. ಆದರೆ ಒಬ್ಬ ನಿರಪರಾಧಿ ಯಾವುದೋ ಕಾರಣಕ್ಕೆ ಶಿಕ್ಷೆ ಅನುಭವಿಸುತ್ತಿದ್ದರೆ ಅದಕ್ಕಿಂತ ಘೋರ ಮತ್ತೊಂದಿಲ್ಲ. ಈ ಬಾಂಬ್ ಸ್ಫೋಟಗಳಲ್ಲಿ ಎಷ್ಟೋ ಮುಗ್ದರು, ಮಕ್ಕಳು ಬಲಿಯಾಗುತ್ತಲೇ ಇದ್ದಾರೆ. ಅವರನ್ನು ಕಳೆದುಕೊಂಡ ಕುಟುಂಬಗಳ ಪರಿಸ್ಥಿತಿ? ದ್ವೇಷದ ಆಚೆ ಬದುಕಿದೆ, ಭಯೋತ್ಪಾದನೆಯನ್ನು ಮೀರಿದ ಮನುಷ್ಯತ್ವವೊಂದಿದೆ. ನಮ್ಮ ಕೈಯಲ್ಲಿ ಭಯೋತ್ಪಾದನೆಯನ್ನಂತೂ ಮಟ್ಟ ಹಾಕಲು ಸಾಧ್ಯವಿಲ್ಲ. ಅದೊಂದು ಸಾಂಕ್ರಾಮಿಕ ರೋಗದಂತೆ. ಕನಿಷ್ಠಪಕ್ಷ ಮನುಷ್ಯರನ್ನು ಮನುಷ್ಯರಂತೆಯೇ ನೋಡೋಣ.