ಕನಸೊಂದನ್ನು ಪ್ರಕಟಿಸುತ್ತಿರುವೆ…..
ಕನಸುಗಳಿಗೆ ಕೊನೆಯಿಲ್ಲ, ಆಸೆಗಳಿಗೆ ಮಿತಿಯಿಲ್ಲ, ಬದುಕ ಹೆಣೆಯುವ ಜೀವಕೆ ಯಾರ ಹಂಗಿಲ್ಲ ಅಂಕೆಯಿಲ್ಲ. ಸ್ವಲ್ಪ ದಿನಗಳ ಹಿಂದೆ (ಬಹುಶಃ ತಿಂಗಳುಗಳೇ ಕಳೆದವೆನೋ) ನನ್ನ ಕಾದಂಬರಿಯ ಮೊದಲ ಅಧ್ಯಾಯವನ್ನು ಇಲ್ಲಿ ಹಾಕಿದ್ದೆ. ಸುಮಾರು ಜನ ಓದಿ Like, comment ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಈ ವರ್ಷದ ಕೊನೆಯಲ್ಲಿ ಅಂದರೆ ಈ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನನ್ನ ಕಾದಂಬರಿಯನ್ನು ಪ್ರಕಟ ಮಾಡಿ ಮುಗಿಸಿಬಿಡಬೇಕೆಂಬ ಅದಮ್ಯ ಹಂಬಲವಿತ್ತು. ಆದರೆ ನಾನು ಅಂದುಕೊಂಡಷ್ಟು ಸರಳವಿರಲಿಲ್ಲ ಈ ಕೆಲಸ. ನಾನು ಸಂಧಿಸಿದ ಎಲ್ಲ ಪ್ರಕಾಶನದವರು ಮುಂದಿನ ಒಂದು ವರ್ಷದವರೆಗೂ ಬೇರೆ ಲೇಖಕರ ಪುಸ್ತಕಗಳ ಪ್ರಕಟಣೆಯಲ್ಲಿ ನಿರತರಾಗಿದ್ದರಿಂದ ನನ್ನ ಕಾದಂಬರಿ ಹೊರಬರಲು ಇನ್ನು ವರುಷವಾದರೂ ಬೇಕು. ನಾನು ಹೊಸಬಳಾದ್ದರಿಂದ ಪ್ರಕಾಶನ ಸಿಗುವುದು ಸ್ವಲ್ಪ ಕಷ್ಟವೇ. ದುಡ್ಡಿದ್ದರೆ ಎಲ್ಲವನ್ನು ಸಾಧಿಸಬಹುದಾದ ಈ ಜಗತ್ತಿನಲ್ಲಿ ನನ್ನ ಕಾದಂಬರಿಯನ್ನು ಹೊರತರುವುದು ಅಷ್ಟೊಂದು ಕಷ್ಟವೇನಲ್ಲ. ಆದರೆ ಆ ತರಹ ಹೊರ ಬಂದ ಕಾದಂಬರಿಯ ಬವಣೆಯೆನು? ಪುಸ್ತಕದ ಅಂಗಡಿಯಲ್ಲಿ ಓದುಗರು ನನ್ನ ಕಾದಂಬರಿ ಎತ್ತಿಕೊಂಡು ಹಿಂದೆ ಮುಂದೆ ತಿರುಗಿಸಿ ನೋಡಿ ‘ಯಾರಿದು ಸಂಜೋತಾ’ ಎಂದು ತಲೆ ಕೆಡಿಸಿಕೊಂಡು, ನೆನಪಾಗದೆ ಮತ್ತೆ ಪುಸ್ತಕವನ್ನು ಇದ್ದ ಜಾಗದಲ್ಲಿಯೇ ಇಟ್ಟು ಮರಳಿದರೆ ಏನು ಚೆನ್ನ..
ಅದಕ್ಕೆ ನನ್ನನ್ನು ನಾನು ತಿದ್ದಿಕೊಳ್ಳುವ ಪ್ರಯತ್ನದಲ್ಲಿ, ನನ್ನನ್ನು ಕೆಲವರಾದರೂ ಗುರುತಿಸಲಿ ಎಂಬ ಹಂಬಲದಲ್ಲಿ ನನ್ನ ಕಾದಂಬರಿಯನ್ನು quora ಕನ್ನಡ ಬಳಗ , facebook ಮತ್ತು ನನ್ನ ಸ್ವಂತ ಬ್ಲಾಗಿನಲ್ಲಿ ಏಕಕಾಲಕ್ಕೆ ಪ್ರಕಟಿಸಲು ನಿರ್ಧರಿಸಿದ್ದೇನೆ. ಪ್ರತಿ ಸೋಮವಾರ ನನ್ನ ಒಂದೊಂದು ಅಧ್ಯಾಯವನ್ನು ಪ್ರಕಟಿಸುವ ಇರಾದೆಯಿದೆ. ನಿಮ್ಮೆಲ್ಲರಿಗೂ ಮೆಚ್ಚುಗೆಯಾಗುತ್ತದೆ ಎನ್ನುವ ಅದ್ಭುತ ಸಂಕಲ್ಪವಿದೆ.
ಇದು ನನ್ನ ಮೊದಲ ಕಾದಂಬರಿ.. ನನ್ನ ಮೊದಲ ಪ್ರೀತಿಯಷ್ಟೇ ಮೆಚ್ಚು.. ನನ್ನ ‘ಸಂಜೀವಿನಿ’ ಮುಂದಿನ ಸೋಮವಾರದಿಂದ ಅಂಬೆಗಾಲಿಡಲಿದೆ…
ನಿಮ್ಮಗಳ ಪ್ರೋತ್ಸಾಹದೊಂದಿಗೆ,