ದೀಪಾವಳಿ ಎಂದರೆ ಬರಿ ಪಟಾಕಿ ಹೊಡೆಯುವುದಲ್ಲ……
ದೀಪಾವಳಿಗೆ ಪಟಾಕಿಗಳನ್ನು ಹೊಡೆಯಬಾರದೆಂದು ದೆಹಲಿಯ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿತ್ತು. ಪರಿಸರದ ಮೇಲಿನ ಕಾಳಜಿಯಿಂದ ಕಳೆದ ವರ್ಷದವರೆಗೂ ಪಟಾಕಿಯನ್ನೇ ಮುಟ್ಟದ ಎಷ್ಟೊ ಜನ ಹಿಂದುಗಳು ಈ ಸುದ್ದಿ ಕೇಳಿದ ನಂತರ ಈ ವರ್ಷ ಏನಾದರಾಗಲೀ ಪಟಾಕಿ ಹೊಡೆದೆ ತೀರುತ್ತೆವೆ ಎನ್ನುವ ಮಟ್ಟಿಗೆ ಕೆರಳಿದ್ದಂತು ಸತ್ಯ. ಗಣೇಶ ಹಬ್ಬವಾಗಲಿ, ಹೋಳಿಯಾಗಲಿ, ದೀಪಾವಳಿಯಾಗಲಿ ನಮ್ಮಿಂದ ಪರಿಸರದ ನಾಶವಾಗಬಾರದು ಎಂಬ ಅರಿವು ಬಹುತೇಕರಲ್ಲಿ ಇದೆ. ಕಳೆದ ಗಣೇಶ ಚತುರ್ಥಿಗೆ ಹಲವರು ಮಣ್ಣಿನ ಗಣೇಶನ ಮೂರ್ತಿಯನ್ನು ತಂದು ತಮ್ಮ ಪರಿಸರ ಪ್ರೇಮ ಪಸರಿಸಿದ್ದರು. ಇಬ್ಬರು ಚಿಕ್ಕಮಕ್ಕಳು ಕೆಸರೆರಚುತ್ತ್ತಿದ್ದಾಗ ಒಬ್ಬನನ್ನು ಹಿಡಿದು ‘ಕೆಸರೆರಚುವುದು ತಪ್ಪು‘ ಎಂದು ಕಟ್ಟುನಿಟ್ಟಾಗಿ ಹೇಳಿದರೆ ತನಗಾಗುತ್ತಿರುವ ಅನ್ಯಾಯವನ್ನು ಕಂಡು ಆ ಹುಡುಗ ಕೆರಳುವುದರಲ್ಲಿ ಆಶ್ಚರ್ಯವೇನಿಲ್ಲ. ನಮ್ಮೆಲ್ಲರಿಗು ಒಂದೇ ಪರಿಸರ. ಪರಿಸರ ಎಲ್ಲರನ್ನು ಮನುಷ್ಯರಂತೆ ನೋಡುತ್ತದೆಯೇ ವಿನಃ ಜಾತಿ ವರ್ಗಗಳಿಂದ ಪ್ರತ್ಯೇಕಿಸುವುದಿಲ್ಲ. ಇಷ್ಟೆಲ್ಲ ಪೀಠಿಕೆ ಏಕೆಂದರೆ ನಾನೀಗ ಹೇಳ ಹೊರಟಿರುವುದು ನನ್ನ ದೀಪಾವಳಿಯ ಅನುಭವದ ಬಗ್ಗೆ.
ನಮ್ಮ ಮನೆಯಲ್ಲಿ ಪ್ರತಿ ಹಬ್ಬದಲ್ಲೂ ಪೂಜೆ, ಆಚರಣೆಗಳು, ನೇಮ, ಮಡಿ. ಮೈಲಿಗೆ, ನೈವೇದ್ಯ ಎಲ್ಲವು ತುಸು ಹೆಚ್ಚೇ. ಪ್ರತಿ ಹಬ್ಬದಲ್ಲು ದೇವರಿಗೆ ಪೂಜೆ ಮಾಡುವುದಾದರೆ ನಮ್ಮನ್ನು ಪೂಜೆ ಮಾಡುವ ಹಬ್ಬ ಯಾಕಿಲ್ಲ ಎಂದು ಚಿಕ್ಕವಳಿದ್ದಾಗ ಯೋಚಿಸುತ್ತಿದ್ದೆ. ಕಾಲಕ್ರಮೇಣ ಅರಿವಾಗಿದ್ದೆ ದೀಪಾವಳಿ ಎಂದರೆ ಮನುಷ್ಯರ ಹಬ್ಬವೆಂದು. ಅಕ್ಕನ ತದಿಗೆಗೆ ಹೆಣ್ಣುಮಕ್ಕಳಿಗೆ ಆರತಿ, ಭಾವನ ತದಿಗೆಗೆ ಗಂಡು ಮಕ್ಕಳಿಗೆ ಆರುತಿ, ನರಕ ಚತುರ್ದಶಿ ದಿನ ಮನೆಯವರಿಗೆಲ್ಲರಿಗು ಆರತಿ.. ಹೀಗೆ ಸಾಲು ಆರತಿಗಳ ಹಬ್ಬ ದೀಪಾವಳಿ.
ಪ್ರತಿ ದೀಪಾವಳಿಗೆ ನಮ್ಮ ಅಜ್ಜನ(ಅಮ್ಮನ ತವರುಮನೆ) ಮನೆಗೆ ನಮ್ಮ ಸವಾರಿ. ಸದಾ ತಾವಿಬ್ಬರೆ ಇರುತ್ತಿದ್ದ ಮನೆ, ಮಕ್ಕಳು ಮೊಮ್ಮಕ್ಕಳಿಂದ ತುಂಬುವುದನ್ನು ಕಂಡು ಅಜ್ಜ ಅಜ್ಜಿಗೆ ತಮ್ಮ ವಯಸ್ಸೇ ಮರೆತು ಹೋಗುತ್ತಿತ್ತು. ಅಜ್ಜನಿದ್ದ ಹಳ್ಳಿಯಲ್ಲಿ ಬ್ರಾಹ್ಮಣರ ಕೇವಲ 8 ಮನೆಗಳು. ಈ 8 ಮನೆಗಳಲ್ಲಿಯೇ ದೀಪಾವಳಿಯ ದಿನ ನಸುಮುಂಜಾನೆ ಯಾರು ಮೊದಲು ಪಟಾಕಿ ಹೊಡೆಯುತ್ತಾರೆ ಎಂದು ಪೈಪೋಟಿ. ನಾನು ಮತ್ತು ನನ್ನ ಕಸಿನ್ಸ್ ಬೆಳಿಗ್ಗೆ 5 ಗಂಟೆಗೆ ಎದ್ದು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಪಟಾಕಿ ಹಚ್ಚುತ್ತಿದ್ದುದು…. ತರಾತುರಿಯಲ್ಲಿ ಪಟಾಕಿ ಸರ ಹರಿದು ಊದಿನಕಡ್ಡಿಯಿಂದ ಇನ್ನೇನು ಹಚ್ಚಿಯೇ ಬಿಡುತ್ತೇವೆ ಎನ್ನುವ ಆತುರದಲ್ಲಿದ್ದಾಗ ಢಂ ಎಂದು ಬೇರೆಯವರ ಮನೆಯಿಂದ ಶಬ್ದ ಕೇಳಿಸಿಬಿಟ್ಟರೆ ಮುಗಿಯಿತು!! ಅದೊಂದು ತರಹ ಮಾನಭಂಗವಾದಂತಹ ಲೆಕ್ಕ ನಮಗೆಲ್ಲ. ನಮ್ಮದೇ ಮೊದಲ ಪಟಾಕಿಯಾದರೆ ವಿಶ್ವ ಗೆದ್ದಂತಹ ಸಂತೋಷ. ನಂತರ ಹೊಸ ಬಟ್ಟೆ ಹಾಕಿಕೊಂಡು ಆರತಿಗೆ ಅಣಿಯಾಗುತ್ತಿದ್ದೆವು. ಹಬ್ಬಕ್ಕೆ ತಂದ ಹೊಸ ಬಟ್ಟೆಗಳನ್ನು ಎಲ್ಲರ ಮುಂದೆ ಹಾಕಿಕೊಂಡು ಸಂಭ್ರಮಿಸುವುದರಲ್ಲಿಯೇ ಹಬ್ಬದ ಮಜಾ ಇರತ್ತಿದ್ದುದು. ಹೆಂಗಸರೆಲ್ಲ ಆರತಿ ಮಾಡಲು ನಿಂತರೆ ಗಂಡಸರು ಮತ್ತು ನಾವೆಲ್ಲ ಮಕ್ಕಳು ಕೆಳಗಡೆ ಚಾಪೆಯ ಮೇಲೆ ಸಾಲಾಗಿ ಕುಳಿತುಕೊಳ್ಳುತ್ತಿದ್ದೆವು. ನಾವಷ್ಟೇ ಅಲ್ಲದೆ ಉಳಿದೆಲ್ಲ ಮನೆಯವರು ನಮ್ಮ ಮನೆಗೆ ಆರತಿಗೆ ಬಂದಿರುತ್ತಿದ್ದರು. ತಲೆಗೆ ಚೂರು ಎಣ್ಣೆ ಹಚ್ಚಿ ‘ತಾರೆ ನೀರೆ ನೀಲದ ಆರುತಿ ತಾರೆ‘ ಎಂದು ಹಾಡು ಹೇಳುತ್ತಾ ಆರುತಿ ಮಾಡಿ, ಕೈಯಲ್ಲಿ ಅಡಿಕೆ ಬೆಟ್ಟ ಮತ್ತು ಮಂತ್ರಾಕ್ಷತೆಯನ್ನು ಕೊಟ್ಟು ಮರಳಿ ಆರುತಿ ತಟ್ಟೆಗೆ ಹಾಕಲು ಹೇಳುತ್ತಿದ್ದರು. ತಟ್ಟೆಗೆ ತಾ ಹೆಚ್ಚು ನಾ ಹೆಚ್ಚು ಎಂದು ದುಡ್ಡು ಹಾಕಲು ಪೈಪೋಟಿ ಇರುತ್ತಿತ್ತು ದೊಡ್ಡವರಲ್ಲಿ. ಅದಾದ ನಂತರ ಸಕ್ಕರೆ ತಿಂದು ದೇವರಿಗೆ, ಮನೆ ಹಿರಿಯರಿಗೆ ನಮಸ್ಕಾರ ಮಾಡುತ್ತಿದ್ದೆವು. ಅಲ್ಲಿಂದ ಮುಂದಿನ ಮನೆಗೆ ನಮ್ಮೆಲ್ಲರ ಸವಾರಿ. ಅಲ್ಲಿ ಮತ್ತೆ ಇದೇ show repeat . ಹೀಗೆ 8 ಮನೆಗಳಿಗೆ ಹೋಗಿ 8 ಸಾರಿ ಆರುತಿ ಮಾಡಿಸಿಕೊಂಡು 8 ಬಾರಿ ಸಿಹಿ ತಿಂದು ಅವರಿವರ ಮನೆಯಲ್ಲಿ ತಂದಿದ್ದ ಸುರು ಸುರು ಬತ್ತಿ ಹಚ್ಚಿ ಮನೆಗೆ ಮರಳುವ ಹೊತ್ತಿಗೆ ಬರೊಬ್ಬರಿ 10 ಗಂಟೆ.
ನಂತರ ನಮ್ಮ ಎಣ್ಣೆ ಸ್ನಾನದ ತಯಾರಿ. ಅಜ್ಜನ ಮನೆಯಲ್ಲಿ ನೀರು ಕಾಯಿಸಲು ಕಟ್ಟಿಗೆಯ ಒಲೆ ಮತ್ತು ಹಂಡೆ. ಗೀಸರಗಳು ಬಂದಿದ್ದರೂ ಪುರಾತನ ಪದ್ಧತಿಗಳಿನ್ನು ಜೀವಂತವಾಗಿದ್ದವು. ಹಿಂದಿನ ದಿನ (ನೀರು ತುಂಬುವ ಹಬ್ಬ) ಮಹಾಲಿಂಗನ ಬಳ್ಳಿಯನ್ನು ಹಂಡೆಗೆ ಸುತ್ತಿ ಇಟ್ಟಿರುತ್ತಿದ್ದರು.
ಈ ಮಹಾಲಿಂಗನ ಬಳ್ಳಿ ಎಂದರೆ ಇಂಗ್ಲೀಷಿನಲ್ಲಿ Lollipop climber , ಕುಂಬಳಕಾಯಿ ಸಸ್ಯ ಜಾತಿಗೆ ಸೇರಿದ್ದು. ಹಣ್ಣಾದಾಗ ಕೆಂಪು ಬಣ್ಣದಲ್ಲಿರುವ ಈ ಹಣ್ಣನ್ನು ಒಡೆದರೆ ಒಳಗಡೆ ಬಿಳಿ ರಸ ಮಧ್ಯೆ ಬೀಜವೊಂದಿರುತ್ತದೆ. ಈ ಬೀಜ ಥೇಟ ಶಿವನ ಲಿಂಗದಂತೆಯೇ ಕಾಣುವುದರಿಂದ ಈ ಬಳ್ಳಿಗೆ ‘ಮಹಾಲಿಂಗನ ಬಳ್ಳಿ‘ ಎಂದು ಹೆಸರು.ದೀಪಾವಳಿಯ ನೀರು ತುಂಬುವ ಹಬ್ಬದಂದು ಮನೆಯ ಎಲ್ಲ ನೀರನ್ನು ಬರಿದು ಮಾಡಿ ಹೊಸ ನೀರನ್ನು ತುಂಬಿ ನೀರು ಕಾಯಿಸುವ ಹಂಡೆಗೆ ಈ ಬಳ್ಳಿಯನ್ನು ಸುತ್ತುತ್ತಾರೆ. ಇರಲಿ…. ಎಣ್ಣೆ ಸ್ನಾನದ ವಿಷಯಕ್ಕೆ ಬರೋಣ. ನಮ್ಮ ಮಾಮಿ ಬಿಸಿ ಎಣ್ಣೆಯಿಂದ ತಲೆಗೆ ತಿಕ್ಕುತ್ತಿದ್ದರೆ ಜಗತ್ತಿನ ಎಲ್ಲ ಸುಖವು ಅದರ ಮುಂದೆ ಗೌಣ. ನಾವು ಒಬ್ಬರಾದ ಮೇಲೆ ಒಬ್ಬರಂತೆ ತಲೆ ತಿಕ್ಕಿಸಿಕೊಳ್ಳಲು queue ನಿಲ್ಲುತ್ತಿದ್ದೆವು. ಚೆನ್ನಾಗಿ massage ಮಾಡಿಸಿಕೊಂಡು ಹದವಾದ ಬಿಸಿ ನೀರಿನಿಂದ ಸ್ನಾನ ಮಾಡಿ ಬಂದರೆ ಆಹಾ….!!! ಅನುಭವಿಸಿಯೇ ಸವಿಯಬೇಕು. ನಂತರ ಅಜ್ಜಿಯ ಪ್ರೀತಿಯ ಅಡುಗೆ ನಮ್ಮನ್ನು ಕಾಯುತ್ತಿತ್ತು.
ಏನೇ ಹೇಳಿ… ಹಳೆಯ ಕಾಲದ ಆ ಸಂಭ್ರಮ, ಸೊಬಗು ಇಂದಿನ ಆಧುನಿಕತೆಯಲ್ಲಿಲ್ಲ. ಸಂಜೆ ಎಲ್ಲರ ಮನೆಯ ಮುಂದೆ ಮಿನುಗುತ್ತಿದ್ದ ದೀಪಗಳು, ಮನೆಯ ಮಾಳಿಗೆಗೆ ತೂಗು ಹಾಕುತ್ತಿದ್ದ ಕಾರ್ತಿಕ ಬುಟ್ಟಿ, ಬಣ್ಣ ಬಣ್ಣದ ಸುರು ಸುರು ಬತ್ತಿಗಳು ಎಲ್ಲವನ್ನು ಮಿಸ್ ಮಾಡಿಕೊಳ್ತಿನಿ. ಮೊದಲಿನಿಂದಲು ಆಚರಿಸಿಕೊಂಡ ಬಂದ ಈ ದೀಪಾವಳಿ style ಇನ್ನು ಹಾಗೆಯೇ ಇದೆ. ಅಜ್ಜನ ಮನೆಯಿಂದ ಮಾವನ ಮನೆಗೆ ಲೋಕೆಷನ್ change ಆಗಿದ್ದು ಬಿಟ್ಟರೆ ಇನ್ನೆಲ್ಲವು ಸೇಮ್ ಟು ಸೇಮ್. ಆರತಿ ಮಾಡಿದ ಹೆಣ್ಣು ಮಕ್ಕಳಿಗೆ ಗಂಡನ ಹೆಸರು ಕೇಳುವ ಪದ್ಧತಿ. ಬರಿ ಹೆಸರು ಹೇಳುವಂತಿಲ್ಲ, ಏನಾದರು ಪ್ರಾಸ ಬದ್ಧವಾಗಿ ಹೇಳಬೇಕು. ಹೆಂಗಸರೆನೊ ತರಾವರಿ ಒಗಟುಗಳಿಂದ ತಯಾರಾಗಿರುತ್ತಿದ್ದರು. ಗಂಡಸರಿಗೂ ತಪ್ಪಿದ್ದಲ್ಲ… ನಮ್ಮ ಮಾವ ‘ರೋಸ್ ಇಸ್ ರೆಡ್ —- ಇಸ್ ವೆರಿ ಗುಡ್‘ ಎಂದು ಚಟಾಕಿ ಹಾರಿಸುತ್ತಿದ್ದರು.
ಹೀಗೆ ದೀಪಾವಳಿ ಎಂದರೆ ಯಾವಾಗ ಬರುತ್ತದೋ ಎಂದು ವರ್ಷಪೂರ್ತಿ ಕೌತುಕದಿಂದ ಕಾಯಿಸುತ್ತಿದ್ದ ಹಬ್ಬ. ದೀಪಾವಳಿ ಎಂದರೆ ಬರಿ ಪಟಾಕಿಗಳಲ್ಲ. ಮದುವೆಯ ಮೊದಲ ದೀಪಾವಳಿಗೆ ಮಾವನ ಮನೆಗೆ ಹೋಗುವ ಅಳಿಯನ ನಾಚಿಕೆ, ದೀಪ ಹಚ್ಚಿ ಅದರ ಬೆಳಕಿನಲ್ಲಿ ಮಿನುಗುವ ಕುವರಿಯ ಕಣ್ಣ ಹೊಳಪು, ಹೊಸ ಬಟ್ಟೆ ತೊಟ್ಟು ಕಷ್ಟಗಳನ್ನೆಲ್ಲಾ ಮರೆತು ನಗುವ ನಗು ದೀಪಾವಳಿ. ಚಕ್ಕುಲಿ, ಉಂಡಿ, ಚೂಡಾ, ಅವಲಕ್ಕಿಗಳನ್ನು ಮುಕ್ಕುವ ಹಬ್ಬ ದೀಪಾವಳಿ. ನರಕಾಸುರನನ್ನು ಕೊಂದು ಕತ್ತಲೆಯನ್ನು ಕೊನೆಗಾಣಿಸಿದ ಹಬ್ಬ ದೀಪಾವಳಿ, ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನ ದೀಪಾವಳಿ.
ಈ ವರುಷ ವಿಡಿಯೋ ಕಾಲ್ ನಲ್ಲಿ ನಮ್ಮ ದೀಪಾವಳಿ ಆರುತಿಯಾಗಬಹುದೇನೊ ನೋಡೊಣ.
ಎಲ್ಲರಿಗು ದೀಪಾವಳಿ ಹಬ್ಬದ ಶುಭಾಷಯಗಳು.
ಸಂಜೋತಾ ,
ತುಂಬಾ ಸುಂದರವಾದ ಬರಹ. ಹಬ್ಬದ ಸಡಗರವನ್ನು ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು! ಬದಲಾಗುತ್ತಿರುವ ವಿಷಯಗಳ ಅಳವಡಣೆಯೊಂದಿಗೆ ಕಾಲಾಯ ತಸ್ಮೈನಮಃ ಎನ್ನುವಂತೆ ಬಲವಂತವಾಗಿ ಅಜವಾಬ್ದಾರತೆಯ ನಡುವಳಿಕೆಯಿಂದ ನಮ್ಮನು ನಾವೇ ಇವುಗಳಿಂದ ದೂರ ಮಾಡಿಕೊಳ್ಳುವಂತಾಗಿದೆ. ಒಂದು ಕ್ಷಣ ಕತ್ತು ತಿರುಗಿಸಿ ಆ ಸಿಹಿನೆನಪಿನೆಡೆಗೆ ಗಮನ ಹರಿಸಿದಾಗ ಅಯ್ಯೋ ಯಾಕೆ ಎಲ್ಲವೂ ಬದಲಾಗುತ್ತಿದೆ? ಮೊದಲಿನ ಹಾಗೆಯೇ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅನ್ನೋ ಭಾವನೆ ಕಾಡುತ್ತೆ. ಏನೆ ಆದರೂ ಅದು ನೆನಪು ಮಾತ್ರ ಅನ್ನುವ ನಿಜ ನವಿರಾದ ನೋವಿನೊಂದಿಗೆ ನೆನಪುಗಳನ್ನು ಪ್ರಶಂಸಿಸುವಂತೆ ಕೂಡ ಮಾಡುತ್ತೆ!
ನಿಮ್ಮ ಬರಹ ಸುಂದರವಾಗಿದೆ!
ನಿಜ. ಆಧುನಿಕತೆಯತ್ತ ಎಷ್ಟೇ ವಾಲಿದರೂ ಮನಸಿನಲ್ಲಿ ಚಿರಾಯುವಾಗಿ ಉಳಿಯುವುದು ಹಳೆಯ ನೆನಪುಗಳೇ. ಧನ್ಯವಾದಗಳು 🙂