ಬಿರಿದ ಮಲ್ಲಿಗೆಯ ಕಂಪಿನ ತಂಪು ಅಮ್ಮನ ಮಡಿಲು: ಅಮ್ಮಂದಿರ ದಿನದ ವಿಶೇಷ
ಹೀಗೊಂದು ದೃಶ್ಯ..
ಅಳುತ್ತಿದ್ದ ಮಗುವನ್ನು ಸಂತೈಸಿ, ಮುದ್ದು ಮಾಡಿ, ಊಟ ಮಾಡಿಸಿ, ಊಟ ಮಾಡುವಾಗ ಕಪಟ ಹಠ ಮಾಡುತ್ತಾ ತಿನ್ನುವುದಿಲ್ಲವೆಂದು ಮುಷ್ಕರ ಹೂಡಿದ ಕಂದನಿಗೆ ಬಾನಲ್ಲಿನ ಚಂದ್ರನನ್ನು ಭುವಿಗೆ ಕರೆಸಿ ಮಾಮನನ್ನಾಗಿ ಪರಿಚಯಿಸಿ , ನಕ್ಷತ್ರಗಳ ಕೈಗಿತ್ತು ಮಾಲೆಗಳ ಪೋಣಿಸಿ, ವೀರ ಶೂರರ ಕತೆ ಹೇಳಿ ದೇಶಾಭಿಮಾನ ಬಿತ್ತಿ, ಕಂದನ ಹೊಟ್ಟೆ ತುಂಬಿದ್ದನ್ನು ಮತ್ತೆ ಮತ್ತೆ ಖಾತ್ರಿ ಪಡಿಸಿಕೊಂಡು, ಅನ್ನ ಚೆಲ್ಲಿಕೊಂಡಿದ್ದ ಬಟ್ಟೆಗಳ ಬದಲಾಯಿಸಿ , ಒಂದಷ್ಟು ಆಟದ ಸಾಮಾನುಗಳನ್ನು ಕಂದನ ಮುಂದೆ ಹರವಿ ಮನೆಗೆಲಸಕ್ಕೆ ತೊಡಗುತ್ತಾಳೆ, ಅರ್ಧ ಕಣ್ಣು ಕೆಲಸದ ಮೇಲೆ ಇದ್ದರೆ ಇನ್ನು ಒಂದೂವರೆ ಕಣ್ಣು ಬೆಳದಿಂಗಳಿನಂತೆ ತನ್ನ ಬಾಳು ತುಂಬಿದ ಕಂದನ ಮೇಲೆ. ಇವಳು ಕೆಲಸ ಮುಗಿಸಿ ಉಸ್ಸಪ್ಪ ಎಂದು ಬರುವಷ್ಟರಲ್ಲಿ ಒಂದು ಗಂಟೆಯ ಹಿಂದೆಯಷ್ಟೇ ಬದಲಾಯಿಸಿದ ಬಟ್ಟೆ ಮತ್ತೆ ಕೊಳಕಾಗಿದೆ, ಗುಡಿಸಿ ಓರಣಗೊಳಿಸಿದ್ದ ಮನೆ ಮತ್ತೆ ಹರವಿದೆ, ಎತ್ತ ನೋಡಿದರು ಚಲ್ಲಾಪಿಲ್ಲಿಯಾಗಿ ಬಿದ್ದ ಆಟದ ಸಾಮಾನುಗಳು, ಅಡುಗೆ ಮನೆಯ ಸೌಟು, ಇಕ್ಕಳಗಳೆಲ್ಲ ಇಲ್ಲಿ ಬಂದು ಕೂತಿವೆ.. ಅಮ್ಮ ಎಲ್ಲಿ ಬೈಯ್ಯುವಳೋ ಎಂದು ಅಪರಾಧಿ ಮನೋಭಾವದಲ್ಲಿ ಪಿಳಿ ಪಿಳಿ ಕಣ್ಣು ಬಿಟ್ಟು ತನ್ನನ್ನೇ ನೋಡುತ್ತ ಕುಳಿತ ತುಂಟ ಕೃಷ್ಣನ ಎತ್ತಿ ಮುದ್ದಿಡುತ್ತಾಳೆ. ಪ್ರೀತಿಯಿಂದ ಬಿಗಿದಪ್ಪುತ್ತಾಳೆ. ‘ನನ್ನ ಬಂಗಾರ ನೀನು’ ಎನ್ನುತ್ತಾ ಸಿಹಿ ಮುತ್ತುಗಳನ್ನಿಡುತ್ತಾಳೆ. ಮತ್ತೆ ಮನೆಯೆಲ್ಲ ಒಪ್ಪಗೊಳಿಸಿ, ಮಗುವಿನ ಬಟ್ಟೆ ಬದಲಾಯಿಸಿ, ಹಾಲು ಕುಡಿಸಿ, ಅಂಗಳಕ್ಕೆ ಕರೆದೊಯ್ಯುತ್ತಾಳೆ ಜಗತ್ತನ್ನು ಪರಿಚಯಿಸಲು..
ಮತ್ತೊಂದು ದೃಶ್ಯ..
ಮನೆ ಮಂದಿಯೆಲ್ಲ ನಿನ್ನೆಯಷ್ಟೇ ದೂರದ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಪ್ರಯಾಣದ ಆಯಾಸದಲ್ಲಿ ಅಪ್ಪ, ನೀರು ಬದಲಾಗಿ ಮೂಗು ಕಟ್ಟಿಕೊಂಡು ಮಲಗಿದ ಮನೆ ಮಗಳು, ಸ್ನೇಹಿತರನ್ನು ಮಾತನಾಡಿಸಿ ಬಹಳ ದಿನವಾಯಿತು ಎಂದು ಊರು ಸುತ್ತಲು ಹೋದ ಮನೆಮಗ… ಅಮ್ಮ ಮಾತ್ರ ಅಡುಗೆಮನೆಯಲ್ಲಿ ಎಲ್ಲರ ಊಟದ ತಯಾರಿಯಲ್ಲಿ ತೊಡಗಿದ್ದಾಳೆ. ಮಕ್ಕಳು ಮನೆಯೂಟ ತಿಂದು ಅದೆಷ್ಟೋ ದಿನವಾಯಿತು ಎಂದುಕೊಳ್ಳುತ್ತ ಹೃದಯದಲ್ಲಿ ಉಕ್ಕುತ್ತಿದ್ದ ಮಮತೆಯನ್ನೂ ಸೇರಿಸಿ ಅಡುಗೆ ಮಾಡುತ್ತಿದ್ದಾಳೆ. ಆಗಾಗ ಸಹಾಯಕ್ಕೆ ಕರೆಯುವ ಗಂಡನ ಸೇವೆಯನ್ನು ಬೇಸರಿಸಿಕೊಳ್ಳದೆ ಮಾಡುತ್ತಿದ್ದಾಳೆ. ಮಗಳ ತಲೆನೋವಿಗೆ ಬಾಮ್ ಹಚ್ಚಿ ಮಸಾಜ್ ಮಾಡುತ್ತಾಳೆ. ಆಕೆಗೂ ಆಯಾಸವಿದೆ, ಗಂಟಲು ಕೆರೆದಂತಾಗಿ ನೆಗಡಿ ಬರುವ ಸೂಚನೆಯಿದೆ, ಸ್ವಲ್ಪ ಹೊತ್ತು ಮಲಗು ಎಂದು ದೇಹದ ಸರ್ವ ಅಂಗಾಂಗಳು ಹೇಳುತ್ತಿವೆ. ಆದರೆ ತಾನು ಮಲಗಿದರೆ ಅಡುಗೆ ಮಾಡುವವರಾರು, ಮನೆ ಸ್ವಚ್ಛ ಮಾಡುವವರಾರು.. ಒಂದು ವಾರದ ಕಾಲ ಪ್ರವಾಸದಲ್ಲಿ ಬಳಸಿದ ಬಟ್ಟೆಗಳನ್ನು ಒಗೆದು ಒಣಗಿಸುವವರಾರು.. ದಣಿವರಿಯದ ಧರಿತ್ರಿಯಂತೆ ಅವಳು. ಜಗತ್ತು ಹೇಗೆ ಇರಲಿ.. ತನ್ನ ಕೆಲಸ ತಾನು ಮಾಡುವವಳೇ..
ಮಗದೊಂದು ದೃಶ್ಯ..
ಮೂವರು ಚಿಕ್ಕ ವಯಸ್ಸಿನ ಮಕ್ಕಳು. ಯಾರ ಸಹಾಯವು ಇಲ್ಲದೆ ಒಬ್ಬಳೇ ಅವರೆಲ್ಲರನ್ನು ಸಾಕಬೇಕಾದ ಪರಿಸ್ಥಿತಿ. ಮನೆಗೆಲಸ, ಕಂಪನಿ ಕೆಲಸ ಹೀಗೆ ಎರಡು ನೊಗಗಳ ಭಾರವನ್ನು ಒಬ್ಬಳೇ ಎಳೆಯುತ್ತಿದ್ದಾಳೆ. ಇವಳನ್ನು ನೋಡಿ ಹೆಮ್ಮೆ ಪಡದೆ ಮೂದಲಿಸಿದ್ದೆ ಹೆಚ್ಚು ಸುತ್ತಲಿನ ಸಮಾಜ. ಆದರೂ ಅವಳು ತಲೆ ಕೆಡಿಸಿಕೊಂಡಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ತನ್ನ ಭೂತವನ್ನು ಆಹುತಿ ನೀಡಿದ್ದಾಳೆ. ಮಕ್ಕಳಿಗಾಗಿಯೇ ಬದುಕುತ್ತಿದ್ದಾಳೆ, ಭರವಸೆಯಿಂದಿದ್ದಾಳೆ.
ಈ ಎಲ್ಲ ದೃಶ್ಯಗಳು ನಿತ್ಯವು ನಮ್ಮ ಕಣ್ಣ ಮುಂದೆ ನಡೆಯುವಂತಹ ದೈನಂದಿನ ಲೈವ್ ಧಾರಾವಾಹಿಗಳು. ಇವರೆಲ್ಲ ಅಮ್ಮಂದಿರು! ಸೂಪರ್ ಹೀರೋಗಳು! ದೊಡ್ಡ ದೊಡ್ಡ ಕಟ್ಟಡಗಳನ್ನು ಬೀಳಿಸುತ್ತ , ಕಾರುಗಳನ್ನು ಅತಿ ವೇಗದಲ್ಲಿ ಓಡಿಸಿ ವೈರಿಗಳನ್ನು ಒಂದೇ ಉಸಿರಿನಲ್ಲಿ ಗಾಳಿಯಲ್ಲಿ ಊದಿ ಸದೆ ಬಡಿಯುತ್ತಾರಲ್ಲ ಸಿನಿಮಾ ಸೂಪರ್ ಹೀರೋಗಳು ಅವರಲ್ಲ ಇವರು! ತಮ್ಮ ಮಕ್ಕಳನ್ನು ದೊಡ್ಡ ವಿಪತ್ತಿನಿಂದ ಕಾಪಾಡುವವರು, ಜೀವನದಲ್ಲಿ ಅತಿ ವೇಗದಲ್ಲಿ ಹೋಗಿ ಹಾನಿ ಮಾಡಿಕೊಳ್ಳದಿರಲಿ ಎಂದು ಹೆಜ್ಜೆ ಹೆಜ್ಜೆಗು ಮಕ್ಕಳನ್ನು ಕಾಯುವ ನಮ್ಮ ಪ್ರಾಣರಕ್ಷಕರು. ಇಲ್ಲಿ ಪ್ರೀತಿಯೇ ಮಾಂತ್ರಿಕ ಕೋಲು ಕರುಳು ಬಳ್ಳಿಯ ಸಂಬಂಧವೇ ಸೂಪರ್ ಪಾವರ್. ನಮ್ಮನ್ನೆಲ್ಲ ಕಣ್ಣ ರೆಪ್ಪೆಯಂತೆ ಸಲುಹಿ, ಹೃದಯದಲ್ಲಿ ಬೆಚ್ಚಗೆ ಕಾಪಿಟ್ಟು ತಮ್ಮ ಉಸಿರಿರುವರೆಗೂ ಕಾಳಜಿ ಮಾಡುವ, ಬರಿ ಪ್ರೀತಿಯನ್ನೇ ಧಾರೆಯೆರುವ ಕರುಣಾ ಮೂರ್ತಿಗಳು. ಅಮ್ಮನ ಪಾತ್ರವೇ ಅಂಥದ್ದು. ಮಾತೃ ಹೃದಯವೇ ಅಂಥದ್ದು. ಎಲ್ಲ ಕಡೆಯೂ ಇರಲಾಗದ ದೇವರು ಅಮ್ಮನೆಂಬ ಜೀವವನ್ನು ಸೃಷ್ಟಿಸಿದನಂತೆ. ನಮ್ಮೆಲ್ಲರ ಜೀವನದ ತುಂಬಾ ಅಮ್ಮ ಆವರಿಸಿಕೊಂಡಿದ್ದಾಳೆ ಸೂರ್ಯೋದಯದ ಸಮಯದಲ್ಲಿ ಆಗಸದ ತುಂಬ ಹಬ್ಬಿಕೊಳ್ಳುವ ಹೊಂಬಣ್ಣದಂತೆ.
ಮಗಳು ಎರಡನೇ ತಾಯಿಯಂತೆ ಎಂದು ಬಹಳಷ್ಟು ಜನರು ಹೇಳುವುದನ್ನು ಕೇಳಿದ್ದೇನೆ. ಇನ್ನು ನಡೆಯಲು ಕಲಿಯದೇ ಇರುವ, ತೊದಲು ಮಾತನಾಡುವ, ಜಗತ್ತನ್ನು ಈಗಷ್ಟೆ ಇಂಚು ಇಂಚಾಗಿ ನೋಡಲು ಶುರು ಮಾಡಿದ ಆ ಪುಟ್ಟ ಮಗು ಅಪ್ಪನಿಗೆ ನೀರು ಕುಡಿಸುತ್ತದೆ, ಅಮ್ಮನಿಗೆ ತಿನ್ನಿಸುತ್ತದೆ, ಅಪ್ಪ ಅಮ್ಮ ಅತ್ತರೆ ತಾನು ಅಳುತ್ತದೆ, ಯಾರಾದರೂ ಅಮ್ಮನಿಗೆ ಬೈದರೆ ತಾನು ಮೂತಿ ಸಣ್ಣ ಮಾಡಿಕೊಳ್ಳುತ್ತದೆ. ಥೇಟ್ ಅಮ್ಮನಂತೆಯೇ.. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅಮ್ಮನ ಅಂತಃಕರಣ ಬೆಳೆಯಲು ಶುರುವಾಗಿರುತ್ತದೆ. ತಮ್ಮ ಗೊಂಬೆಗಳಿಗೆ ತಿನ್ನಿಸುವ, ತನ್ನ ಪುಟ್ಟ ಪುಟ್ಟ ಫ್ರಾಕ್ ಗಳನ್ನೂ ಅದಕ್ಕೆ ತೊಡಿಸಿ ಸಂತಸ ಪಡುವ, ಸ್ನಾನ ಮಾಡಿಸುವ, ಮಡಿಲಲ್ಲಿ ಮಲಗಿಸಿ ಲಾಲಿ ಹಾಡುವ, ಅಲಂಕಾರ ಮಾಡುವ ಹಲವು ಕೆಲಸಗಳು. ತನ್ನಮ್ಮ ತನಗೆ ಮಾಡುವಂತೆಯೇ.. ಥೇಟ್ ಅಮ್ಮನಂತೆಯೇ..
ಈ ಅಮ್ಮ ಎನ್ನುವ ಪದವಿದೆಯಲ್ಲ ಅದುವೇ ಅದ್ಭುತ. ಆ ಪದಕ್ಕಿರುವ ತೂಕವೇ ಭೂಮಿಯ ತೂಕಕ್ಕೆ ಸಮ. ಲಂಕೇಶರ ಕವಿತೆ ನೆನಪಾಗುತ್ತದೆ
‘ನನ್ನಮ್ಮ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪಾತ್ರದಾಹರವು, ಬಿಳಿಯ ಹೂ ಹಬ್ಬ
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಳಕ ..’
ಅಮ್ಮನೆಂಬ ನೆಲದಲ್ಲಿ ಸದಾ ಬೆಳಗುವ ಸೂರ್ಯ, ಕಣ್ಣು ಮನಸಿಗೆ ತಂಪನ್ನೀಯುವ ಹಸಿರು, ಹುಣ್ಣಿಮೆಯ ಬೆಳದಿಂಗಳಿನಂತಹ ಮಮತೆ, ಉಕ್ಕಿ ಹರಿಯುವ ವಾತ್ಸಲ್ಯ, ಜೀವನದ ಮೊದಲ ಪಾಠ ಶುರುವಾಗುವುದು ಅಮ್ಮನಿಂದ, ಭಯವಾದಾಗ ಕೂಗುವುದೇ ಅಮ್ಮಾ ಎಂದು, ದುಃಖದಲ್ಲಿದ್ದಾಗ ನೆನಪಾಗುವುದೇ ಅಮ್ಮನ ಸಾಂಗತ್ಯ.
ಬರಿ ಮನುಷ್ಯರಷ್ಟೇ ಅಲ್ಲ.. ಪ್ರಾಣಿಗಳಲ್ಲೂ ಈ ಅಮ್ಮನೆಂಬ ಪ್ರಾಣಿ ಜೀವಿಸುತ್ತಿದ್ದಾಳೆ. ಇಡೀ ಭೂಮಿಯಲ್ಲೇ ಹಬ್ಬಿಕೊಂಡಿದ್ದಾಳೆ. ಎಷ್ಟೋ ವಿಡಿಯೋ ಗಳಲ್ಲಿ ನೋಡುತ್ತೇವೆ ಪ್ರಾಣಿಗಳು ತಮ್ಮ ಮಕ್ಕಳ ರಕ್ಷಣೆಯನ್ನು ಮಾಡಿ ಚಿಂವಗುಡುತ್ತಿರುವ ಜೀವಗಳನ್ನು ಲಾಲಿಸಿ ಪಾಲಿಸುವುದನ್ನು. ನಿಮಗೆಲ್ಲ ನೆನಪಿರಬಹುದು ನಾನು ಸ್ವಲ್ಪ ದಿನಗಳ ಹಿಂದೆ ಹಂಸವೊಂದು ಮರಿಮಾಡುವ ಪ್ರಕ್ರಿಯೆ ಬಗ್ಗೆ ಬರೆದಿದ್ದೆ. ಹಂಸ ಅಥವಾ ಬಾತುಕೋಳಿ (ಯಾವುದೇ ಕೋಳಿ ಜಾತಿಗೆ ಸೇರಿದ) ಮೊಟ್ಟೆಯಿಟ್ಟ ಮೇಲೆ ಅವುಗಳಿಗೆ ಕಾವು ಕೊಡಲೆಂದು ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತದೆ. ಹಗಲು ರಾತ್ರಿ ಹೀಗೆ ಸತತವಾಗಿ ಹಲವು ದಿನಗಳ ಕಾಲ ಒಂದೇ ಸಮನೆ ಬೇಸರಿಸಿಕೊಳ್ಳದೆ ದಣಿವಿಲ್ಲದೆ ಕೂರುವ ಹಂಸ ಎಂತಹ ಮಳೆ ಗಾಳಿಗೂ ಜಗ್ಗುವುದಿಲ್ಲ, ಹಿಂದೆ ಸರಿಯುವುದಿಲ್ಲ. ನಮ್ಮನೆಯ ಹತ್ತಿರವೇ ಇದ್ದ ಕೆರೆಯಲ್ಲಿ ಓಡಾಡುತ್ತಿದ್ದ ಹಂಸ ಮೊಟ್ಟೆಯಿಟ್ಟಾಗ ಈ ಪ್ರಕ್ರಿಯೆಯನ್ನು ಕಣ್ಣಾರೆ ನೋಡುವ ಭಾಗ್ಯ ನನ್ನದಾಯಿತು. ಸುಮಾರು ಮೂರು ವಾರಗಳು ಕುಳಿತಿತ್ತು ಹಂಸ. ಅದರ ಸುತ್ತ ಮುತ್ತ ಜನ ಓಡಾಡಿದರೆ ಅವರನ್ನೆಲ್ಲ ಹೆದರಿಸಿ ಓಡಿಸುತ್ತಿತ್ತು. ನಮ್ಮನ್ನೆಲ್ಲ ೯ ತಿಂಗಳು ಹೊಟ್ಟೆಯಲ್ಲಿ ಹೊತ್ತು ನೋವನ್ನು ನುಂಗಿ ಈ ಭೂಮಿಗೆ ಬಿಟ್ಟಳಲ್ಲ ನಮ್ಮಮ್ಮ ಸೇಮ್ ಟು ಸೇಮ್ ಹಾಗೆಯೇ.. ನೋಡಿ ಆ ಪ್ರಾಣಿಗಳಲ್ಲೂ ತಾಯಿ ಹೇಗೆ ಜವಾಬ್ದಾರಿಯಿಂದ, ಮಮತೆಯಿಂದ ತನ್ನ ಪಾತ್ರವನ್ನು ನಿಭಾಯಿಸುತ್ತಾಳೆಂದು. ಮೂರು ವಾರಗಳ ನಂತರ ಓಡಾಡುತ್ತಿದ್ದ ಪುಟ್ಟ ಪುಟ್ಟ ಮರಿಗಳನ್ನು, ಅವುಗಳ ಜೊತೆ ಕತ್ತು ಬಳುಕಿಸುತ್ತ ಓಡಾಡುತ್ತಿದ್ದ ಹಂಸವನ್ನು ನೋಡಿ ನನ್ನ ಸ್ನೇಹಿತೆಗೆ ಮಕ್ಕಳಾದಾಗ ಖುಷಿಯಾದಷ್ಟೇ ಎದೆ ತುಂಬಿ ಬಂತು.
ಮಕ್ಕಳು ಚೂರೇ ಚೂರು ಸಾಧಿಸಲಿ ಊರ ತುಂಬಾ ಹೇಳಿಕೊಂಡು ಓಡಾಡುವ ಅಮ್ಮಂದಿರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಎಲ್ಲರನ್ನು ಕಳೆದುಕೊಂಡರೂ ನೆನಪಿಟ್ಟುಕೊಂಡಿರಿ ಅಮ್ಮನೆಂಬ ಜೀವ ಸದಾ ನಿಮ್ಮ ಜೊತೆಗಿರುತ್ತದೆ. ನಿಮ್ಮಸಂಬಂಧಿಕರಿಗೆ, ಸ್ನೇಹಿತರಿಗೆ ಕೊನೆಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದೆ ಹೋದಾಗಲೂ ನೆನಪಿಡಿ ನಿಮ್ಮಮ್ಮನಿಗೆ ನಿಮ್ಮ ಮೇಲೆ ಬತ್ತದ ನಂಬಿಕೆ. ಮತ್ತೆ ಹುರುದುಂಬಿಸಿ, ಇದೆಲ್ಲ ಯಾವ ಲೆಕ್ಕ ಎಂದು ನಿಮ್ಮನ್ನು ಹೊಗಳಿ ಬೀಳದಂತೆ ಸಂಭಾಳಿಸುವುದು ಅಮ್ಮ ಮಾತ್ರ. ಜಗತ್ತು ಎಷ್ಟೇ ಜರಿದರು ನಿಮ್ಮ ಪರ ವಾದಿಸುವ ಏಕೈಕ ಜೀವ ಅಮ್ಮ.
ಇವತ್ತು ಆ ಮಾತೃ ಹೃದಯಗಳ ದಿನವಂತೆ. ಬೇಕು ಬೇಡಗಳ ತಿಳುವಳಿಕೆಯನ್ನು ನೀಡಿ, ಸರಿ ತಪ್ಪುಗಳ ಪಾಠ ಕಲಿಸಿ ನಮ್ಮನ್ನು ಮನುಷ್ಯರನ್ನಾಗಿ ಮಾಡಿದ ಅಮ್ಮನಿಗೆ ‘ಅಮ್ಮಂದಿರ ದಿನ’ ದ ಶುಭಾಶಯಗಳು. ನಾನು ಮುದುಕಿಯಾದರೂ ಅಮ್ಮ ನನ್ನ ಜೊತೆಗಿರಬೇಕು. ಯೌಟ್ಯೂಬ್, ಇನ್ಸ್ಟಾಗ್ರಾಮ್ ನೋಡಿ ಎಷ್ಟೇ ತಹರೇವಾರಿಯಾಗಿ ಅಡುಗೆ ಮಾಡಿದರೂ ‘ಈ ಚಟ್ನಿ ಪುಡಿ ಹೆಂಗಮ್ಮಾ ಮಾಡೋದು’ ‘ಮೆಣಸಿನಕಾಯಿ ಸಾರು ಮಾಡೋದು ಹೆಂಗೆ ಅಂತ ಹೇಳು’ ಎಂದು ಕೇಳಲು ಅಮ್ಮ ಬೇಕೇ ಬೇಕು. ನನ್ನ ಪುಟ್ಟ ಪುಟ್ಟ ಖುಷಿಯನ್ನು ಬೆಟ್ಟದಷ್ಟು ಸಂಭ್ರಮಿಸಲು ಅಮ್ಮನಿರಬೇಕು, ನನ್ನ ನಗುಮುಖದಲ್ಲಿನ ದುಃಖವನ್ನು ಕಾಣಲು ವಿಫಲವಾದ ಜಗತ್ತಿಲ್ಲದೆ ಹೋದರು ನಡೆದೀತು ‘ಯಾಕೆ ಸಪ್ಪಗಿದ್ದಿ’ ನಡೆಯುವಾಗ ಎಡವಿದರೆ ಬೀಳದಂತೆ ನೋಡಿಕೊಳ್ಳಲು, ಕಿರುಬೆರಳ ಆಸರೆಯಾಗಿ ಮುನ್ನಡೆಯಲು, ನನ್ನೆಲ್ಲ ಗೊಂದಲದ ಪ್ರಶ್ನೆಗಳಿಗೆ ಉತ್ತರಿಸಲು, ನನಗಾಗಿಯೇ ಬೇಸಗೆಯಲ್ಲಿ ಸಂಡಿಗೆಗಳನ್ನು ಮಾಡಲು, ಸೀರೆಯುಟ್ಟು ಊರು ಸುತ್ತಿ ಮನೆಗೆ ಬಂದಾಗ ದೃಷ್ಟಿ ತೆಗೆಯಲು, ಜೀವನಪೂರ್ತಿ ಅಮ್ಮನಿರಬೇಕು.
ಈ ಲೇಖನ ಎಲ್ಲ ಅಮ್ಮಂದಿರಿಗೆ ಸಮರ್ಪಿತ. ಎಲ್ಲ ಮಾತೃ ಹೃದಯಗಳಿಗೆ ಅರ್ಪಣೆ.
ವಿಶೇಷವಾಗಿ ನನ್ನ ಫಲವತ್ತಾದ ಕಪ್ಪು ನೆಲ ನನ್ನಮ್ಮನಿಗೆ.
ಎಲ್ಲರಿಗು ಅಮ್ಮಂದಿರ ದಿನದ ಶುಭಾಶಯಗಳು.