ಮಾಂಗಲ್ಯಮ್ ತಂತು ನಾನೇನ ಮಮ್ ಜೀವನ ಹೇತುನಾ…
ನಮ್ಮ ದೇಶದಲ್ಲಿ ಮದುವೆಗೆ ಅನಾದಿ ಕಾಲದಿಂದಲೂ ಪವಿತ್ರ ಸ್ಥಾನವಿದೆ. ರಾಮಾಯಣ ಮಹಾಭಾರತದಂತಹ ಮಹಾನ ಗ್ರಂಥಗಳು ಮದುವೆಯ ಮೌಲ್ಯವನ್ನು ಪ್ರಾಮುಖ್ಯತೆಯನ್ನು ಅತ್ಯಂತ ಅರ್ಥವತ್ತಾಗಿ ಸಕಾರಣಗಳೊಂದಿಗೆ ತಿಳಿಸಿ ಕೊಡುತ್ತವೆ. ಪಾತಿವ್ರತ್ಯ ಮುರಿದ ಅಹಲ್ಯೆಗೆ ಗೌತಮ ಮುನಿಗಳು ಶಾಪ ಕೊಡುವುದಾಗಿರಬಹುದು, ಮದುವೆಗೂ ಮೊದಲು ಸೂರ್ಯ ದೇವನಿಂದ ಮಗುವನ್ನ ಪಡೆದ ಕುಂತಿ, ಸಮಾಜಕ್ಕೆ ಹೆದರಿ ಅದನ್ನು ನದಿಯಲ್ಲಿ ತೇಲಿಬಿಟ್ಟ ಕತೆಯಾಗಿರಬಹುದು, ಸಾವಿತ್ರಿ ಯಮನಿಂದ ತನ್ನ ಗಂಡನನ್ನು ಬದುಕಿಸಿಕೊಂಡ ಕತೆಯಿರಬಹುದು, ಸತ್ಯನಾರಾಯಣ ಕತೆಯಲ್ಲಿ ಬರುವ ಬಹುತೇಕ ಉಪಕತೆಗಳಲ್ಲಿ ಮದುವೆಗೆ ಸಂಬಂಧಿಸಿದಂತಹ ಸನ್ನಿವೇಶಗಳು ಕಾಣಿಸುವಂತದ್ದಾಗಿರಬಹುದು… ಸನ್ನಿವೇಶ, ನೈತಿಕತೆ ಏನೇ ಇರಲಿ ಪುರಾಣಗಳಲ್ಲಿ ಮದುವೆ ಎಂಬ ಭಾಂದವ್ಯವನ್ನು ತುಸು ಹೆಚ್ಚೆ ಎತ್ತಿ ಹಿಡಿದಿದ್ದಾರೆ.
Photo by Jaggu Dada on Unsplash
ಶಿವನ ಜೊತೆ ಪಾರ್ವತಿ, ರಾಮನ ಜೊತೆ ಸೀತೆ, ಕೃಷ್ಣನ ಜೊತೆ ರುಕ್ಮಿಣಿ, ವಿಷ್ಣುವಿನ ಜೊತೆ ಲಕ್ಷ್ಮಿ, ಶ್ರೀನಿವಾಸನ ಜೊತೆ ಪದ್ಮಾವತಿ… ಹೀಗೆ ನಾವು ಪೂಜಿಸುವುದು ಜೋಡಿ ದೇವರುಗಳನ್ನೇ.. ಗಂಗೆಗೆ ಕರುಣೆ ತೋರಿಸಿ ಜಟೆಯಲ್ಲಿ ಇಟ್ಟುಕೊಂಡನಾದರೂ ಪಾರ್ವತಿಯಿಲ್ಲದ ಶಿವ ಶವವಿದ್ದಂತೆ ಎಂಬ ಮಾತಿದೆ. ಧನಸ್ಸನ್ನು ಮುರಿದ ರಾಮ, ತಂದೆ ದಶರಥ ಸೀತೆಯ ಜನ್ಮ, ಜಾತಿಯ ಬಗ್ಗೆ ಅನುಮಾನ ಪಡುತ್ತಿದ್ದ ಸಂದರ್ಭದಲ್ಲಿ ‘ಸೀತೆಯೊಂದಿಗೆ ನನ್ನ ಪಾಣಿಗ್ರಹಣ ಆಗಿ ಹೋಗಿದೆ’ ಎಂದು ಹೇಳುತ್ತಾನೆ. ೧೬೦೦೦ ಗೋಪಿಕೆಯರ ಮತ್ತು ರಾಧೆಯ ಪ್ರಿಯಕರ ಕೃಷ್ಣ ಮದುವೆಯಾಗಿದ್ದು ರುಕ್ಮಿಣಿ ಮತ್ತು ಸತ್ಯಭಾಮೆಯರನ್ನು ಮಾತ್ರ. ಲೋಕಕ್ಕೆ ಸಂಪತ್ತಿನ ದೇವತೆಯಾದರು ಗಂಡನಿಗೆ ಹೆಂಡತಿಯಾಗಿ ತನ್ನ ಕರ್ತವ್ಯ ನಿಭಾಯಿಸುವ ಲಕ್ಷ್ಮಿ. ಈ ಎಲ್ಲ ಸಂಧರ್ಭಗಳಲ್ಲೂ ನಮಗೆ ಕಾಣುವ ಒಂದೇ ಒಂದು ಸಾಮಾನ್ಯ ಅಂಶವೆಂದರೆ ಮದುವೆಗಿರುವ ಮಹತ್ವ.
ಮದುವೆಯೆಂದರೆ ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳನ್ನು ಒಂದು ಮಾಡಿ ಒಂದೇ ಪಥದಲ್ಲಿ ಸಾಗುವಂತೆ ಮಾಡುವುದು. ಅಲ್ಲಿಂದ ಅವನಿಗೆ ಅವಳು, ಅವಳಿಗೆ ಅವನು… ಇಬ್ಬರ ಹವ್ಯಾಸಗಳು ಬೇರೆ, ಗುಣಗಳು ಬೇರೆ, ಅಭಿಪ್ರಾಯಗಳು ಬೇರೆ, ಇಷ್ಟ- ಕಷ್ಟಗಳು ಬೇರೆ… ಆದರೆ ಅವನು ಎಡವಿದಾಗ ಕೈ ಹಿಡಿದು ಮುನ್ನಡೆಸಲು, ಅವಳು ಅತ್ತಾಗ ಎದೆಗೆ ಒರಗಿಸಿಕೊಂಡು ಸಂತೈಸಲು ಆ ಮೂರು ಗಂಟಿನ ಬಂಧವೊಂದು ಸಾಕು. ಸ್ನೇಹಿತರು, ಬಂಧು- ಪರಿವಾರದವರು ದೂರಾದರು ಗಂಡ ಹೆಂಡತಿ ಒಬ್ಬರಿಗೊಬ್ಬರು ಬೆನ್ನುಲುಬಾಗಿ ನಿಂತರೆ ಎಂತಹ ಕಷ್ಟಗಳೇ ಬಂದರು ಸೈರಿಸಬಹುದು, ಮುಗ್ಗರಿಸಿದ್ದರೂ ಮತ್ತೆ ಓಡಬಹುದು. ಹಣೆಬರಹ ಚೆನ್ನಾಗಿರದಿದ್ದರೆ ಭಿನ್ನಾಭಿಪ್ರಾಯಗಳು ಬಂದು ಡೈವೋರ್ಸ್ ಪಡೆಯುವ ಜೋಡಿಗಳೇನು ಕಮ್ಮಿಯಿಲ್ಲ. ಏನೇ ಭಿನ್ನಾಭಿಪ್ರಾಯ, ಅಸಮಾಧಾನ ಇದ್ದರು ಕೂತು ಬಗೆ ಹರಿಸಿಕೊಂಡು, ಕೊನೆಯವರೆಗೂ ಆಸರೆಯಾಗಿ ಬಾಳಬೇಕೆಂಬುದನ್ನೇ ಪುರೋಹಿತರ ಮಂತ್ರಗಳ ಮೂಲಕ ಹೇಳುತ್ತಾರಲ್ಲವೆ…
ವಿದೇಶಗಳಲ್ಲಿ ಮದುವೆಯೆಂದರೆ ಒಂದು ದೊಡ್ಡ ಸಂಗತಿ. ನಮ್ಮಲ್ಲಿಯಂತೆ ಅರೇಂಜ್ಡ್ ಮ್ಯಾರೇಜ್ ಗಳು ಇಲ್ಲಿ ನಡೆಯುವುದಿಲ್ಲ. ಎಷ್ಟೋ ದಿನಗಳ ಕಾಲ ಪ್ರೀತಿಸಿ, ಜೊತೆಗೆ ಬದುಕಿ ಕೊನೆಗೆ ಮದುವೆಯಾಗಬೇಕೆನ್ನಿಸಿದರೆ ಮದುವೆ. ಸಾಕೆನ್ನಿಸಿದರೆ ಅವನ ದಾರಿ ಅವನಿಗೆ, ಅವಳ ದಾರಿ ಅವಳಿಗೆ… ಅವರಿಗೆ ಮದುವೆಯೆಂದರೆ ಒಂದು ದೊಡ್ಡ ಜವಾಬ್ದಾರಿ, ಅವಶ್ಯಕತೆ ಇಲ್ಲದ ಭಾರವನ್ನುಹೊತ್ತುಕೊಂಡಂತೆ. ಮಕ್ಕಳು ಸಂಸಾರವೆಂಬ ಜಂಜಾಟದಲ್ಲಿ ಸಿಲುಕಿ ಹಾಕಿಕೊಳ್ಳಲು ಬಹುತೇಕ ಜನರಿಗೆ ಇಷ್ಟವಿರುವುದಿಲ್ಲ. ನಮಗೋ ಮದುವೆ ಅನ್ನುವುದು ಬೇಸಿಕ್ ನೆಸೆಸಿಟಿ. ಓದು ಮುಗಿದು ಕೆಲಸ ಸಿಕ್ಕ ಮೇಲೆ ನಾವು ಬೇಡವೆಂದರೂ ನೆರೆಮನೆಯ ಜನಕ್ಕೆ ನಮಗಿಂತಲೂ ಹೆಚ್ಚಿನ ಸಂಭ್ರಮ ನಮ್ಮ ಮದುವೆಯ ಬಗ್ಗೆ. ಮದುವೆಯಾಗದ ಹುಡುಗ ಹುಡುಗಿಯರು ಇತರರ ಮದುವೆಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಲು ನೋಡುತ್ತಾರೆ. ಅಪ್ಪಿ ತಪ್ಪಿ ಹೋದರೋ ಮುಗಿಯಿತು ಅವರಿಗೆ ಗೊತ್ತಿಲ್ಲದಂತೆ ಅವರ ಜಾತಕ ವಿಲೇವಾರಿಯಾಗಿರುತ್ತದೆ.
ವಿದೇಶಗಳ ಬಗ್ಗೆ ಹೇಳಿದೆನಲ್ಲ… ಅವರಿಗೆ ಡೈವೋರ್ಸ್ ಅನ್ನುವುದು ದೊಡ್ಡ ವಿಷಯವೇ ಅಲ್ಲ. ಬೆಳಿಗ್ಗೆ ಡೈವೋರ್ಸ್ ಆದರೆ ಸಂಜೆ ಹೊತ್ತಿಗೆ ಇನ್ನೊಂದು ರಿಲೇಷನ್ಶಿಪ್ ಸಿಕ್ಕಿರುತ್ತದೆ. ದುಃಖ ಮರೆಯಲು ಹೋದಾಗ ಬಾರಿನಲ್ಲಿ ತನ್ನಂತೆಯೇ ದುಃಖ ಮರೆಯಲು ಬಂದ ಇನ್ನೊಬ್ಬರ ಜೊತೆ ಆದರೂ ಆದೀತು. ಹೇಳಲಾಗುವುದಿಲ್ಲ. ಆದರೆ ನಮ್ಮಲ್ಲಿ ಹಾಗಿಲ್ಲ. ಮದುವೆಯೇನಾದರೂ ಮುರಿಯುವ ಲಕ್ಷಣಗಳು ಕಾಣಿಸಿದರೆ ತೇಪೆ ಹಾಕಿ ಸರಿಪಡಿಸುವ ಕೆಲಸ ಶುರುವಾಗುತ್ತದೆ. ಎಷ್ಟೇ ಕಷ್ಟವಾದರು ಹಲ್ಲು ಕಚ್ಚಿ ಬಾಳಬೇಕೆಂಬುದು ಹಿರಿಯರು ನಮಗೆ ಹೇಳಿಕೊಡುವ ಮೊದಲ ಪಾಠ. ಒಂದು ವೇಳೆ ಡೈವೋರ್ಸ್ ಏನಾದರೂ ಆದರೆ ಸಮಾಜದ ದೃಷ್ಟಿಯೇ ಬದಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದ್ದರೂ ಪೂರ್ತಿಯಾಗಿ ನಶಿಸಲು ಇನ್ನು ಸಮಯ ಬೇಕು.
ಡೈವೋರ್ಸ್ ನಂತೆಯೇ ಎರಡನೇ ಮದುವೆ ನಮ್ಮಲ್ಲಿ ಇನ್ನು ಟ್ಯಾಬೂ ಸಂಗತಿ. ಸಮಾಜ ಓಪನ್ ಮೈಂಡೆಡ್ ಆಗುತ್ತಿದ್ದರು ನಮ್ಮ ಮಡಿ ಮನಸುಗಳೇ ಇದಕ್ಕೆ ಒಪ್ಪುವುದಿಲ್ಲ. ಒಬ್ಬನೇ/ಒಬ್ಬಳೇ ಜೀವನ ಸಂಗಾತಿಯ ಪರಿಕಲ್ಪನೆ ನಮ್ಮಲ್ಲಿ ಆಳವಾಗಿ ಬೇರೂರಿದೆ. ಏಕಪತ್ನಿವೃತಸ್ತ ಶ್ರೀರಾಮನನ್ನು ಹಲವು ಸನ್ನಿವೇಶಗಳಲ್ಲಿ ಉದಾಹರಣೆಯಾಗಿ ಬಳಸುತ್ತಾರೆ. ಹೆಂಡತಿ/ಗಂಡ ತೊರೆದ ನಂತರ ಹಲವರು ಒಂಟಿಯಾಗಿ ತಮ್ಮ ಬದುಕನ್ನು ಸಾಗಿಸುತ್ತಾರೆ. ಇನ್ನೊಂದು ಮದುವೆಯಾಗುವ ಅವಕಾಶಗಳು ಇದ್ದರು ‘ಧರ್ಮೇಚ ಅರ್ಥೇಚ ಕಾಮೇಚ’ ಎಂದು ಅಗ್ನಿಸಾಕ್ಷಿಯಾಗಿ ವರಿಸಿದ ಮೊದಲ ಬಂಧವನ್ನು ಮರೆಯದೆ ನೆನಪುಗಳಲ್ಲಿ ಜೀವಿಸುವ ಮನಸುಗಳೇ ಹೆಚ್ಚು. ತನ್ನ ತಾಯಿಗೆ ತಾನೇ ಮುಂದೆ ನಿಂತು ಇನ್ನೊಂದು ಮದುವೆ ಮಾಡಿಸಿದ ರಾಜಸ್ಥಾನದ ಹುಡುಗಿಯೊಬ್ಬಳ ಕತೆ ಮಧ್ಯೆ ಸುದ್ದಿಯಾಗಿತ್ತು. ಹೀಗೆ ಅಲ್ಲೊಂದು ಇಲ್ಲೊಂದು ನಡೆಯುವ ಪ್ರಕರಣಗಳು ದೊಡ್ಡದಾಗಿ ಸುದ್ದಿಯಾಗುವುದನ್ನು ನೋಡಿದರೆ ನಾವಿನ್ನು ಈ ವಿಷಯದಲ್ಲಿ ಬಹಳ ಹಿಂದುಳಿದ್ದೇವೆ.
ಐದು ಗಂಡಂದಿರನ್ನು ಪಡೆದ ದ್ರೌಪದಿಯಂತೆ ಭಾರತದ ಕೆಲವು ಹಳ್ಳಿಗಳಲ್ಲಿ ಬಹುಪತಿತ್ವ ಪದ್ಧತಿ ಇದೆಯಂತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಬಹುಪತ್ನಿತ್ವ ರಾಜ ಮಹಾರಾಜರುಗಳ ಕಾಲದಲ್ಲಿ ಪ್ರಚಲಿತವಾಗಿತ್ತು. ಯುದ್ಧದಲ್ಲಿ ಗೆದ್ದರೆ ಸಂಪತ್ತಿನ ಜೊತೆಗೆ ಅಲ್ಲಿನ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಬರುತ್ತಿದ್ದರು. ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದು ಇನ್ನೊಂದು ಮದುವೆಯಾಗುತ್ತಿದ್ದರು. ಮದುವೆಯ ವಿಷಯದಲ್ಲಿ ಹಲವು ರಾಜರುಗಳಿಗೆ ತಾವು ಮಾಡಿದ್ದೆ ಕಾನೂನಾಗಿತ್ತು. ಹಿರಿಯ ರಾಣಿ ಕಿರಿಯ ರಾಣಿಯರೆಂಬ ಪದವಿಗಳಿದ್ದವು.
ಕುವೆಂಪುರವರು ಮಂತ್ರ ಮಾಂಗಲ್ಯವೆಂಬ ಸರಳ ಮದುವೆಯ ವಿಧಾನವನ್ನು ಪರಿಚಯಿಸಿದರು. ಈ ವಿಧಿಯ ಪ್ರಕಾರ ಮದುವೆಗೆ ಯಾವುದೇ ಆಚರಣೆಗಳಾಗಲಿ, ಮಂತ್ರಗಳಾಗಲಿ, ಮಹೂರ್ತವಾಗಲಿ, ಆಡಂಬರವಾಗಲಿ ಬೇಕಿಲ್ಲ. ಗಂಡು ಹೆಣ್ಣು ಪರಸ್ಪರ ಒಟ್ಟಿಗೆ ಬಾಳುವ ನಿರ್ಧಾರ ತೆಗೆದುಕೊಂಡರೆ ಮುಗಿಯಿತು. ಇಂದು ಮದುವೆಯೆಂಬುದು ಪ್ರತಿಷ್ಠೆಯ ವಿಷಯವಾಗಿದೆ. ತಹರೇವಾರಿ ಆಮಂತ್ರಣ ಪತ್ರಿಕೆಗಳು, ಮದುವೆ ಥೀಮ್, ಅಲಂಕಾರ, ಉಡುಗೊರೆ ಎಂದು ಜನ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ. ಮದುವೆಯನ್ನು ಬಿಸಿನೆಸ್ ಆಗಿ ಮಾಡಿಕೊಂಡ ಜನ ರಾಶಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಸ್ಟೇಜ್ ಡೆಕೋರೇಷನ್ ಅಂತೆ, ಮೆಹಂದಿ ಹಾಕುವುದಂತೆ, ಮದುಮಗಳ ಅಲಂಕಾರವಂತೆ, ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ, ಊಟದ ವ್ಯವಸ್ಥೆ ಎಲ್ಲವು ದುಬಾರಿಯಾಗಿದೆ. ಮಧ್ಯಮ ವರ್ಗದ ಜನತೆಗೆ ಹೆಣ್ಣುಮಗಳ ಮದುವೆ ಮಾಡುವುದೇ ಜೀವನದ ಪರಮ ಧ್ಯೇಯ. ಬೆಂಗಳೂರಿನಲ್ಲಂತೂ ಸಾಮಾನ್ಯ ಜನ ಮದುವೆಯಾಗುವ ಹಾಗೆ ಇಲ್ಲ. ಪ್ಯಾಲೇಸ್ ಗ್ರೌಂಡಗಳಲ್ಲಿ ನಡೆಯುವ ಮದುವೆಯ ದುಂದುವೆಚ್ಚ ನೋಡಬೇಕು. ಅಬ್ಬಾ!
ಸಂಸಾರದ ಅನುಭವಗಳನ್ನು ತಮ್ಮ ಪದಗಳಲ್ಲಿ ವರ್ಣಿಸಿ ‘ಸಖೀಗೀತೆ’ಯನ್ನು ಬರೆದಿದ್ದಾರೆ ಬೇಂದ್ರೆಯವರು. ಮದುವೆಯ ದಿನದ ಸಂಜೆಯ ಸಂಭ್ರಮದಿಂದ ಶುರುವಾಗುವ ಈ ಗೀತೆ ಪ್ರಾರಂಭದ ಹುಮ್ಮಸ್ಸು, ಹೊಸದರ ಹೊಸತನ ಇತ್ಯಾದಿಗಳನ್ನು ಬಿಡಿಬಿಡಿಯಾಗಿ ತೋರಿಸುತ್ತದೆ.
“ಬಾಳಿನ ಬೆಂಕಿಗೆ ಮೈ ಬೆಂದು ಮನ ನೊಂದು
ಬಲುಮೆಯ ಒಲುಮೆಯ ಕುಲುಮೆಯಲೇ
ತಾಳಿಕೆ ಬರುವಂಥ ಉಕ್ಕಾಗಿ ಬರುತಿರೆ
ಮುಕ್ಕಾದ ಮೊನೆಯೀಗ ಮೊಸೆಯುತಿದೆ
ಮಿನುಗುವ ಮಿಂಚಾಗಿ ಮಿಂಚಿನ ಕೈ ಧಾರೆ
ಕಣ್ಣೀರಲಾಗಾಗ ತೊಳೆಯುತಿರೆ
ನನಗು ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೆ” ಎಂದು ಬರೆಯುತ್ತಾರೆ.
‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎಂಬ ಮಾತಿದೆ. ಮನಸ್ಸನ್ನು ಅರಿತು ನಡೆಯುವ ಸಂಗಾತಿ ಸಿಗಲು ಪುಣ್ಯ ಮಾಡಿರಬೇಕು. ಅಪರಿಚಿತ ವ್ಯಕ್ತಿಯೊಂದಿಗೆ ಬಂಧ ಬೆಸೆದುಕೊಳ್ಳಲು ಧೈರ್ಯ, ಸಹನೆ, ತಾಳ್ಮೆ ಎಲ್ಲವು ಇರಬೇಕು. ಒಮ್ಮೆ ಮದುವೆಯಾದರೆ ಮುಗಿಯಿತು. ಆದ್ದರಿಂದ ಯೋಚಿಸಿ ಮದುವೆಯಾಗಿ. ಈಗಾಗಲೇ ಮದುವೆಯಾಗಿದ್ದರೆ ದೇವರು ಒಳ್ಳೆಯದು ಮಾಡಲಿ.