ರಾಧಾ ಕೃಷ್ಣರ ಪತ್ರ ಸಲ್ಲಾಪ
♥♥♥ ರಾಧೆಗೆ ಕೃಷ್ಣನ ಪ್ರೇಮ ಸಂದೇಶ
ಪ್ರೀತಿಯ ರಾಧೆ,
ಯಮುನೆಯ ತಟವೇಕೋ ಭಾವನೆಗಳೇ ಇಲ್ಲದೆ ನಿಶ್ಚಲವಾಗಿದೆ. ನದಿಯ ತರಂಗಗಳಿರಲಿ, ಮರದ ಮೇಲೆ ಪ್ರೇಮ ಸಲ್ಲಾಪ ನಡೆಸುವ ಹಕ್ಕಿಗಳ ಚಿಲಿಪಿಲಿಯ ಸದ್ದೂ ಇಂದಿಲ್ಲ. ಪ್ರತಿದಿನ ರಾಶಿ ಹೂವುಗಳನ್ನು ಮುದ್ದಿಸುವ ಚಿಟ್ಟೆಯಿಂದು ಹಸಿರು ಹುಲ್ಲಿನ ಮೇಲೆ ತನ್ನದೇ ಯೋಚನೆಗಳಲ್ಲಿ ಚಿಂತಾಕ್ರಾಂತವಾಗಿದೆ. ತರು ಲತೆಗಳಲ್ಲಿ ಲವಲವಿಕೆಯಿಲ್ಲ, ಹೂವುಗಳ ಕಂಗಳಲಿ ಹೊಳಪಿಲ್ಲ, ಗಾಳಿಯಲಿ ಆಹ್ಲಾದತೆಯಿಲ್ಲ… ಎಲ್ಲವು ನಿನ್ನ ಬರುವಿಕೆಗೆ ಕಾದು ಕಾದು ಸೋತಂತಿದೆ. ಇಷ್ಟೊತ್ತು ಕಾಯ್ದು ನೇಸರ ಈಗಷ್ಟೆ ಮನೆಗೆ ಹೊರಟಿದ್ದಾನೆ.
ಹೇಳು ರಾಧೆ ನೀನೇಕೆ ಬರಲಿಲ್ಲ… ನನ್ನೆಲ್ಲ ಕನಸುಗಳನ್ನು ಹೊತ್ತು ತಂದಿದ್ದೆ. ನಿನ್ನ ಕಂಗಳ ಕಾಂತಿಯಲಿ ತುಸು ಮಿನುಗೋಣವೆಂದು ಬಂದಿದ್ದೆ. ಆಪ್ತತೆಯೊಂದನ್ನು ನನ್ನಲ್ಲೇ ಬಂಧಿಸಿ ಪ್ರಣಯದೂರಿನ ತೇರಿಗೆ ನಾ ಸಿದ್ಧವಾಗಿದ್ದೆ. ಆದರೆ ನೀ ಬರಲೇ ಇಲ್ಲ..
ಹಿಂದೊಮ್ಮೆ ಇದೆ ಯಮುನೆಯ ಒಡಲಲ್ಲಿ ಕೂಡಿ ಮಿಂದ ನೆನಪು, ಮಲ್ಲೆ, ಜಾಜಿ, ಸಂಪಿಗೆಗಳಿಂದ ನಿನ್ನನ್ನಲಂಕರಿಸಿದ ನೆನಪು, ಇದೆ ಹೂವುಗಳು ನಮ್ಮ ಸರಸ ನೋಡಿ ನಾಚಿ ನೀರಾಗಿದ್ದವು. ಸೂರ್ಯನಂತೂ ಬಾನೆಲ್ಲ ರಂಗೇರಿಸಿದ್ದ. ಪ್ರಪಂಚದ ಪರಿವೆ ಇಲ್ಲದೆ, ನನ್ನೊಳು ನಾನಿಲ್ಲದೇ ನಿನ್ನಲ್ಲೊಂದಾಗಿದ್ದೆ. ಅದೊಂದು ಅಲೌಕಿಕ ಅನುಭೂತಿ, ದಿವ್ಯ ಮೌನದ ಸಂತೃಪ್ತಿ, ಜಗತ್ತೆಲ್ಲ ಸುಂದರವಾಗಿ ಕಂಡ ಅತಿ ಪ್ರೀತಿ.
ಮತ್ತದೇ ಭಾವನೆಗಳಲ್ಲಿ ತೇಲಾಡುವ ಬಯಕೆಯಲಿ ನಾನಿದ್ದೆ. ಸ್ವರ್ಗವನ್ನು ಧರೆಗಿಳಿಸುವ ಎಂದು ಕಾಯುತ್ತಿದ್ದೆ. ನಾನಷ್ಟೇ ಅಲ್ಲ… ಯಮುನೆಗೂ ನಿನ್ನ ಸಾಂಗತ್ಯ ಬೇಕಿತ್ತು.. ನಿನ್ನ ಆ ಕೋಮಲ, ಹೊಳಪಿನ, ಮೃದು ಚರ್ಮವನ್ನೊಮ್ಮೆ ಸ್ಪರ್ಶಿಸಬೇಕು ಎಂದು ಹೇಳಿದಾಗ ಯಮುನೆ ತಲೆಯಲ್ಲಾಡಿಸಿದ್ದಳು. ಸೋಜಿಗವಾಗುತ್ತದೆ ಕೆಲವೊಮ್ಮೆ… ನಿನ್ನಲ್ಲೇ ಪರವಶನಾದ ನನ್ನ ಬಗ್ಗೆ… ಸಾಲು ಗೋಪಿಕೆಯರಲ್ಲಿ ಕಾಣದ ಅಂದವನ್ನು ನಿನ್ನಲ್ಲಿ ಕಾಣುವ ನನ್ನ ಕಣ್ಣುಗಳ ಬಗ್ಗೆ.. ಈ ಮನ ಸೂರೆಯಾದದ್ದು ನಿನ್ನ ಅಂದಕ್ಕಲ್ಲ. ಬಳುಕಿನ ಮೈ ಮಾಟಕ್ಕಲ್ಲ. ಉಕ್ಕಿ ಹರಿಯುತ್ತಿರುವ ಆ ನಿನ್ನ ಯೌವ್ವನಕ್ಕಲ್ಲ. ನಿನ್ನ ಕಣ್ಣುಗಳೇ ಸಾಕು ನನ್ನ ನಿನ್ನೆದೆ ಕೋಟೆಯೊಳಗೆ ಬಂಧಿಸಿ ದಿಗ್ಬಂದನ ಹಾಕಲು.. ನಾ ಖೈದಿ ಆದರೂ ಪರವಾಗಿಲ್ಲ. ಆ ಬಂಧನವೇ ನನಗೆ ಪರಮಸುಖ.
ಇಷ್ಟೊಂದು ಆಕರ್ಷಿಸಬೇಡ ಹೆಣ್ಣೇ… ಲೋಕ ಉದ್ಧಾರಕ ನಾನು. ನೋಡು ಹೇಗೆ ನಿನ್ನ ವಿರಹದಲ್ಲಿ ದಾಸನಾಗಿ ದಿಕ್ಕು ಕಾಣದೆ ದಿಗ್ಭ್ರಾಂತನಾಗಿರುವೆ. ನಿನ್ನ ನೆನಪುಗಳ ಶಾಖದಲ್ಲಿ ಬೆಂದು ನಾ ನಲುಗಿ ಹೋಗುವ ಮುನ್ನ ಒಮ್ಮೆ ಬಂದು ಬಿಡು. ‘ಹೇ ಕೃಷ್ಣ‘ ಎಂದು ನಿನ್ನ ಚಿಗುರು ಕೈಗಳಲ್ಲಿ ನನ್ನ ಮುಖವನ್ನೆತ್ತಿ ಮುದ್ದಿಸಿ ಬಿಡು. ಕಾಯುತ್ತಿರುತ್ತೇನೆ ಇದೆ ಯಮುನೆಯ ತಟದಲ್ಲಿ…
ಎಂದೆಂದಿಗೂ ನಿನ್ನವ,
ಕೃಷ್ಣ
ರಾಧೆಯ ಪ್ರತ್ಯುತ್ತರ ♥♥♥
ನನ್ನೆದೆಯ ದೊರೆ,-
ಅದೆಷ್ಟು ಸುಂದರ ನೀ ಬರೆದ ಸಾಲುಗಳು.. ಪ್ರೀತಿಯ ಸಾಗರ ನನ್ನೊಳಗೆ ಉಕ್ಕಿ ಹರಿದಂತೆ. ಅದರೊಳು ಮೀಯುತ್ತ ನಾ ಪಾವನಳಾದೆ ಕೃಷ್ಣ. ಈ ಜನ್ಮಕ್ಕೆ ಬೇರೆ ಇನ್ನೇನು ಬೇಕು ಹೇಳು.. ಅಂದು ನಾನೇಕೆ ಬರಲಿಲ್ಲವೆಂದು ನೀ ಕೇಳಿದ್ದೆ. ಗೊತ್ತೇ ಕೃಷ್ಣ.. ಇಂತಹುದೇ ಅಗಣಿತ ಸಂಜೆಗಳನ್ನು ನಿನಗಾಗಿ ಕಾಯುತ್ತ ನಾ ಕೊರಗಿದ್ದೇನೆ, ಕೊರಗುತ್ತೇನೆ. ಒಂದೇ ಒಂದು ದಿನಕ್ಕೆ ನಿನಗೆ ಅದೆಷ್ಟು ವೇದನೆಯಾಗಿದೆಯಲ್ಲವೇ ಕೃಷ್ಣ… ಆ ವೇದನೆ ನನ್ನಲ್ಲಿಯೇ ಮರಗಟ್ಟಿ ಹೋಗಿದೆ, ನನ್ನನ್ನೇ ಇಡಿಯಾಗಿ ಆವರಿಸಿಕೊಂಡಿದೆ. ಅಷ್ಟು ಕಾದಿದ್ದೇನೆ ನಿನಗಾಗಿ.
ನೀನು ಹುಣ್ಣಿಮೆಗೊಮ್ಮೆ ಬರುವ ಪೂರ್ಣಚಂದ್ರನಂತೆ. ಬಂದ ದಿನ ನನ್ನೆದೆಯಲ್ಲೆಲ್ಲ ಬೆಳದಿಂಗಳು, ನದಿಯ ತೀರದ ನಿಶ್ಶಬ್ದ, ಸಂತೃಪ್ತಿಯ ಸೆಲೆ, ಸಂಪ್ರೀತಿಯ ಹೊಳೆ. ಆದರೆ ಹುಣ್ಣಿಮೆಯಿರದ ದಿನಗಳಿವೆಯಲ್ಲ ಕೃಷ್ಣ, ಅದೇ ಅಮಾವಾಸ್ಯೆಗಳು… ನನ್ನೆಲ್ಲ ಚೇತನಗಳಿಗೂ ಕಗ್ಗತ್ತಲು, ಏಕಾಂಗಿತನದ ಹೊಯ್ದಾಟ, ಹುಚ್ಚು ಭಾವನೆಗಳೆಲ್ಲ ಸೇರಿ ನನ್ನ ಹಿಂಡಿ ಹಿಪ್ಪೆ ಮಾಡುತ್ತವೆ. ನಿನಗೊಮ್ಮೆ ತೋರಿಸಬೇಕಿತ್ತು ಆ ಕತ್ತಲನ್ನು. ಕಪ್ಪು ಮೌನವನ್ನು. ವಿರಹದಲ್ಲಿ ಕಾಯುವ ಬೇಗುದಿಯನ್ನು. ಅದಕ್ಕೆ ಬರಲಿಲ್ಲ ನಾನು..
ಕೋಪಿಸಿಕೊಳ್ಳಬೇಡ ಕೃಷ್ಣ. ಇನ್ನೆಂದು ಹೀಗೆ ಮಾಡುವುದಿಲ್ಲ. ನೀನು ಸದಾ ಬೆಳಗುತ್ತಿರಬೇಕು. ದೀಪದ ಬೆಳಕಷ್ಟೇ ಶುಭ್ರವಾಗಿ ಪ್ರೀತಿಸುವ ನೀನ್ನಲ್ಲಿ ಪ್ರೀತಿಯ ಸೆಲೆ ಎಂದು ಬತ್ತಬಾರದು. ತುಂಟ ಪೋರನಾಗಿ, ರಸಿಕ ಪ್ರೇಮಿಯಾಗಿ, ಪ್ರಾಮಾಣಿಕ ಪ್ರಣಯಿಯಾಗಿ, ಲೋಕ ಉದ್ಧಾರಕನಾಗಿ ಮೆರೆಯಬೇಕು. ನೀ ಎಲ್ಲೇ ಇದ್ದರು ಈ ರಾಧೆ ನಿನಗೋಸ್ಕರ ಪ್ರಾರ್ಥಿಸುತ್ತಿರುತ್ತಾಳೆ, ಕಾಯುತ್ತಿರುತ್ತಾಳೆ, ಹುಣ್ಣಿಮೆಗಾಗಿ ಬದುಕುತ್ತಿರುತ್ತಾಳೆ. ರಾಶಿ ಬಯಕೆಗಳನ್ನು ಮನದಲ್ಲಿ ಕಟ್ಟಿಟ್ಟು ಸದಾ ಮೇಲು ನಗುತ್ತಿರುತ್ತಾಳೆ.
ನಿನಗೋ ಸಾವಿರಾರು ಗೋಪಿಕೆಯರು. ಆದರೆ ರಾತ್ರಿ ಮಲಗುವಾಗ ನಿನ್ನ ನೆನಪಲ್ಲಿ ಈ ರಾಧೆಯೊಬ್ಬಳೇ ಇರಲಿ. ಸಂಕಟ ನೋವುಗಳಾದಾಗ ಕಣ್ಣೊರೆಸಲು ಈ ರಾಧೆಯ ನೆನಪಾಗಲಿ. ನಿನ್ನ ಸುಖದಲ್ಲಿ ನಾ ಭಾಗಿಯಾಗಲಾರೆ ಕೃಷ್ಣ. ಸುಖವೆಲ್ಲ ನಿನಗೆ ಇರಲಿ. ನಿಟ್ಟುಸಿರುಗಳೆಲ್ಲ ನನ್ನ ಅಂಗಳದಲ್ಲಿಯೇ ಸುಟ್ಟು ಬೂದಿಯಾಗಲಿ.
ಮುಂದೆ ಮತ್ತೊಂದು ಸಂಜೆಯಲಿ ಯಮುನೆಯ ಸೆರಗಿನಂಚಿನಲಿ ಸೇರಿ ಸುಖಿಸೋಣ. ಹೂವು ದುಂಬಿಗಳೆಲ್ಲ ಮತ್ಸರಿಸುವಂತೆ ಪ್ರೇಮ ಗಾನದಲಿ ಮೈ ಮರೆಯೋಣ. ಎಂದಿನಂತೆ ನಾ ಪ್ರತಿದಿನ ಕಾಯುವೆ ಕೃಷ್ಣ. ಹುಣ್ಣಿಮೆಯ ಬೆಳದಿಂಗಳಾಗಿ ನೀ ಬಾ….
ನಿನ್ನ ಮನದೊಡತಿ,
ರಾಧೆ.