ಸಂಜೀವಿನಿ-1 — ಶಬರಿಯಂತೆ ಕಾಯ್ದೆ
ಮಗುವೊಂದು ಚೆಂಡಿನೊಡನೆ ಆಟವಾಡುತ್ತಿತ್ತು, ತನಗಿಂತಲೂ ದೊಡ್ಡದಾದ ಚೆಂಡನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಹಸದಲ್ಲಿ. ಅದು ಸಾಧ್ಯವಾಗದೆ ಚೆಂಡು ಕೈ ಜಾರಿ ಉರುಳುತ್ತಾ ಹೋಯಿತು ಅಂಗಳದತ್ತ. ಅದರ ಹಿಂದೆ ಮಗು ಕೂಡ ಓಡಿತು. ನಾನು ಮಾತ್ರ ಒಂದು ಗಂಟೆಯ ಹಿಂದೆ ಯಾವ ಸ್ತಿತಿಯಲ್ಲಿ ಕುಳಿತಿದ್ದೆನೋ ಈಗಲೂ ಅದೇ ಸ್ತಿತಿಯಲ್ಲಿದ್ದೆ. ಕಣ್ಣು ಬುದ್ಧಿ ಎರಡನ್ನು ಬಿಟ್ಟು ದೇಹದ ಬೇರೆ ಯಾವ ಭಾಗಗಳು ಚಲಿಸುತ್ತಿರಲಿಲ್ಲ.
‘ವಸು ನಿನ್ನ ಅಮ್ಮ ಹುಡುಕುತ್ತಾ ಇದ್ದಾರೆ’ ಎಂದು ಸಹನಾ ಬಂದು ಹೇಳಿದಾಗಾ ಎದ್ದು ಹೋಗಲೋ ಬೇಡವೋ ಅಂತ ಯೋಚನೆ ಮಾಡುತ್ತಾ ಹಾಗೆ ಕುಳಿತೆ. ಒಂದು ಕ್ಷಣ ಯೋಚನೆಗಳ ಮಧ್ಯೆ ಅಮ್ಮ ಬಂದು ಮರೆಯಾದರೂ ಮನಸು ಮತ್ತೆ ಅವನ ಕಡೆಗೆ ಎಳೆಯುತ್ತಿತ್ತು. ನಿಜವಾಗಿಯೂ ಇವತ್ತು ಅವನು ಬರಬಹುದಾ, ಇಷ್ಟು ದಿನ ನಾನು ಕಂಡ ಕನಸಿನಂತೆ ನನಗೆ ಸರಪ್ರೈಜ್ ಇದೆಯಾ, ಅಕಸ್ಮಾತ ಬರುವುದಾದರೆ ಯಾರ ಜೊತೆ ಬರಬಹುದು, ಅವನಿಗೆ ಮನೆ ವಿಳಾಸ ಬೇರೆ ಗೊತ್ತಿಲ್ಲ, ನೋಡೋಕೆ ಹೇಗೆ ಇರಬಹುದು… ಅದು ಇದು…ತಲೆ ತುಂಬಾ ಯೋಚನೆಗಳು…..!!!! ನನಗೆ ಯಾವುದರಲ್ಲಿಯೂ ಮನಸಿಲ್ಲ, ಅಮ್ಮ ಬೆಳಗ್ಗೆಯಿಂದ ಕೇಳುತ್ತಲೇ ಇದ್ದಾರೆ ‘ಯಾಕೆ ಮುಖ ಸಪ್ಪೆ ಮಾಡಿಕೊಂಡು ಕೂತಿದ್ದಿಯಾ’ ಅಂತ. ನಿರಾಸಕ್ತಿಯಿಂದಲೇ ಕಾಲೆಳೆದುಕೊಂಡು ಅಮ್ಮನನ್ನುರುಸುತ್ತಾ ಹೊರಟೆ. ಎಲ್ಲಿ ನೋಡಿದರಲ್ಲಿ ಜನ, ಯಾರ ಹತ್ತಿರ ಹೋದರೂ ಏನಾದರೊಂದು ಕೆಲಸ ಇದ್ದೆ ಇರುತ್ತದೆ. ಆದರೆ ಕೆಲಸದಲ್ಲಿ ತೊಡಗಿದರೆ ಈ ಎಲ್ಲ ಯೋಚನೆಗಳಿಂದ ಮುಕ್ತಿ ಸಿಗಬಹುದು. ಗೃಹಪ್ರವೇಶದ ಸಿದ್ದತೆಗಾಗಿ ಎಲ್ಲರು ಒಂದಿಲ್ಲೊಂದು ಕೆಲಸ ಮಾಡುತ್ತಾ ಇದ್ದರು. ಸೀನು ಮಾಮಿ ಅಡುಗೆ ಮನೆಯಲ್ಲಿ ಎಲ್ಲರಿಗು ಬೆಳಗಿನ ತಿಂಡಿಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುತ್ತಿದ್ದರೆ, ಚಿಕ್ಕಮ್ಮ ಪಕ್ಕದ ಕೋಣೆಯಲ್ಲಿ ಹೋಮಕ್ಕೆ ಅಣಿ ಮಾಡುತ್ತಿದ್ದರು. ಅಜ್ಜಿ ಹಿಂದೆ ಕೈ ಕಟ್ಟಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಚಿಕ್ಕಮ್ಮನಿಗೆ ಹೋಮಕ್ಕೆ ಬೇಕಾದ ಸಲಕರಣೆಗಳ ಬಗ್ಗೆ ಹೇಳುತ್ತಿದ್ದರು. ಹಸಿವಾದಂತಾಗುತ್ತಿತ್ತು. ಅಗೋ ಅಲ್ಲಿ ಅಮ್ಮ.. ಅತಿಥಿಗಳಿಗೆ ಉಡುಗೊರೆಗೆಂದು ತಂದಿದ್ದ ಸೀರೆ, ಶರ್ಟುಗಳನ್ನು ಕವರ್ ಒಳಗಡೆ ಹಾಕಿ ಅದರ ಮೇಲೆ ಆಯಾ ಸಂಬಂಧಿಗಳ ಹೆಸರು ಬರೆದು ಇಡುತ್ತಿದ್ದರು. ನನ್ನ ನೋಡಿ ‘ಇನ್ನು ರೆಡಿ ಆಗಿಲ್ಲವೇನೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಹೋಮ ಶುರುವಾಗತ್ತೆ’ ಎಂದರು. ಹಸಿವಾಗಿದೆ ಎಂದು ಹೇಳಿದರೆ ತಟ್ಟೆ ತುಂಬಾ ಕೊಟ್ಟು ತಿನ್ನಲು ಒತ್ತಾಯ ಮಾಡುತ್ತಾರೆಂದು ತಿನ್ನಲು ಏನಾದರು ಹುಡುಕುತ್ತ ಹಾಗೆ ನಿಂತೆ. ಬೇಸನ ಉಂಡಿ ಸಿಕ್ಕಿತು, ಅದನ್ನೇ ತಿನ್ನುತ್ತ ಮಹತಿ, ಸಹನಾರನ್ನು ಹುಡುಕಿಕೊಂಡೆ ಹೊರಟೆ.
ಸ್ವಲ್ಪ ದೂರದಲ್ಲಿ ಮಾರುತಿ & ಸನ್ಸ್ ಅಂಗಡಿ ಮುಂದೆ ಅಜ್ಜ ಕಾಣಿಸಿದರು. ಮದುವೆ ಮುಂಜಿವೆಗೆ ಬಾಡಿಗೆಗೆ ಪಾತ್ರೆ, ಅಡಿಗೆ ಸಲಕರಣೆಗಳನ್ನು ಕೊಡುವ ಅಂಗಡಿ ಅದು. ಗೃಹಪ್ರವೇಶದ ಮಧ್ಯಾಹ್ನದ ಭೋಜನದ ತಯಾರಿಗಾಗಿ ಅಡಿಗೆಯವರನ್ನು ಕರೆಸಿದ್ದರು. ಟೆರೇಸ್ ಮೇಲೆ ಊಟದ ವ್ಯವಸ್ತೆಯಾಗಿತ್ತು. ಅದಕ್ಕೆ ಈ ಅಂಗಡಿಯಿಂದ ಪಾತ್ರೆಗಳು, ಮೇಜು, ಕುರ್ಚಿಗಳನ್ನೆಲ್ಲ ಬಾಡಿಗೆಗೆ ತೆಗೆದುಕೊಂಡು ಟೆರೇಸ್ ಮೇಲೆ ಸೀನು ಮಾಮ,ಕಿಟ್ಟು ಮಾಮ, ಕರ್ಣ ಇಡುತ್ತಿದ್ದರು. ಮಹತಿ ಮತ್ತು ಸಹನಾ ಎಲ್ಲಿಗೆ ಹೋಗಿರಬಹುದು ಎಂದು ಯೋಚಿಸುತ್ತ ನಾನು ನನ್ನ ಕೈಲಾದಷ್ಟು ವಸ್ತುಗಳನ್ನು ಟೆರೇಸಿಗೆ ತೆಗೆದುಕೊಂಡು ಹೋಗಿ ಇಟ್ಟೆ.
ಕೆಳಗೆ ಬಂದು ಮನೆ ಸುತ್ತಲೆಲ್ಲ ಹುಡುಕಾಡಿದಾಗ ಮಹತಿ ಮತ್ತು ಸಹನಾ ಮನೆ ಮುಂದೆ ರಂಗೋಲಿ ಬಿಡಿಸುತ್ತಿದ್ದುದು ಕಾಣಿಸಿತು. ಅವರು ಮುಗಿಸುವವರೆಗೂ ಕಾದು ನಂತರ ನಾವೆಲ್ಲಾ ಸೀತತ್ತೆ ಮನೆಗೆ ಹೊರೆಟೆವು ರೆಡಿ ಆಗಲು. ನನಗೆ ಆತುರಾತುರವಾಗಿ ತಯಾರಾಗಿ ಮತ್ತೆ ಮನೆಗೆ ಹೋಗುವ ಚಡಪಡಿಕೆ. ತಡವಾದರೆ ಅವನು ಬಂದು ನನಗೋಸ್ಕರ ಕಾಯುತ್ತ ಕೂತಿರಬೇಕಾಗುತ್ತದೆ. ಅವನು ನನ್ನ ಗುರುತು ಹಿಡಿಯಬಹುದಾ…. ಫೋಟೋ ನೋಡಿದ್ದಾನಲ್ಲವ.. ಅವನಿಗೆ ನನ್ನ ಗುರುತು ಹಿಡಿಯೋಕೆ ಕಷ್ಟ ಆಗಬಾರದು ಎಂದು ಆ ಫೋಟೋನಲ್ಲಿ ಹಾಕಿದ್ದ ಆಕಾಶ ಬಣ್ಣದ ಡ್ರೆಸ್ ಹಾಕಿಕೊಂಡೆ.
ನಾನು, ಸಹನಾ ರೆಡಿ ಆಗಿ ಸುಮಾರು ಇಪ್ಪತ್ತು ನಿಮಿಷಗಳಾದರೂ ಮಹತಿಯ ತಯಾರಿ ಮುಗಿಯಲಿಲ್ಲ. ಮೂರು ನಾಲ್ಕು ಲಿಪಸ್ಟಿಕ್ ಹಿಡಿದುಕೊಂಡು ಯಾವುದನ್ನು ಹಚ್ಚಿಕೊಳ್ಳುವುದೆಂದು ಕನ್ಫ್ಯೂಸ್ ಮಾಡಿಕೊಂಡು ಕೂತಿದ್ದಳು. ಪಿಂಕ್ ಚೆನ್ನಾಗಿದೆ ಎಂದು ಹೇಳಿದಾಗಾ ಕೊನೆಗೂ ಡಿಸೈಡ ಮಾಡಿ ತನ್ನ ಅಲಂಕಾರ ಮುಗಿಸಿದಳು. ಅಂತೂ ಸುಮಾರು ಒಂದು ಗಂಟೆಯ ನಂತರ ಹೊರಟೆವು. ತುಂಬಾ ದೂರ ಏನಿಲ್ಲ ಸೀತತ್ತೆ ಮತ್ತೆ ಸೀನು ಮಾಮನ ಹೊಸ ಮನೆಯ ದಾರಿ. ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಆಯಿತು. ಹಾಗೆ ನಡೆದುಕೊಂಡು ಹೋಗುತ್ತಿರುವಾಗ ಶ್ರೇಯಸ ಬಂದ ಬೈಕಿನಲ್ಲಿ, ಅವನ ಹಿಂದೆ ಯಾರೋ ಇನ್ನೊಬ್ಬ ಹುಡುಗ. ಅವನ ಮುಖ ನೋಡಲು ಭಯವಾಯಿತು. ಅವನೇ ಪ್ರಮಥ ಆಗಿದ್ದರೆ…… ಶ್ರೇಯಸನಿಂದಾನೆ ಅಲ್ಲವೇ ನನಗೆ ಅವನ ಪರಿಚಯವಾಗಿದ್ದು. ನಮ್ಮನ್ನು ನೋಡಿ ಶ್ರೇಯಸ ನಮ್ಮ ಪಕ್ಕ ಬೈಕ ನಿಲ್ಲಿಸಿದ. ನನ್ನೆದೆ ಜೋರಾಗಿ ಹೊಡೆದುಕೊಳ್ಳಲು ಶುರು ಮಾಡಿತು. ಶ್ರೇಯಸ ಮಹತಿಯನ್ನು ಮಾತನಾಡಿಸಿ ಹೊಸ ಮನೆಗೆ ದಾರಿ ಕೇಳಿದ.. ನನಗೆ ಅಲ್ಲಿ ನಿಲ್ಲಲು ಧೈರ್ಯ ಬರದೆ ಮಹತಿ, ಸಹನಾರನ್ನು ಬಿಟ್ಟು ಜೋರಾಗಿ ಹೆಜ್ಜೆ ಹಾಕುತ್ತ ಮನೆ ಕಡೆ ಹೊರಟೆ.
ಮನೆ ಸೇರುವ ಹೊತ್ತಿಗೆ ಇನ್ನು ಸುಮಾರು ಜನ ಬಂದಾಗಿತ್ತು. ವಾಸ್ತು ಶಾಂತಿ ಹೋಮ ಶುರುವಾಗಿತ್ತು . ಸೀನು ಮಾವ, ಮಾಮಿ ಹೋಮದ ಮುಂದೆ ಕುಳಿತಿದ್ದರು. ಅಮ್ಮ ಚಿಕ್ಕಮ್ಮ ಬಂದವರಿಗೆಲ್ಲ ಪಾನಕ ಸರಬರಾಜು ಮಾಡುತ್ತಿದ್ದರು. ಜನ ಜಾಸ್ತಿ ಇದ್ದುದರಿಂದ ನಾನು ಅವರ ಜೊತೆ ಕೈ ಜೋಡಿಸಿದೆ. ಮನೆ ಹೊರಗಡೆ ಹಾಕಿದ್ದ ಸೋಫಾ, ಕುರ್ಚಿಗಳ ಮೇಲೆ ಗಂಡಸರೆಲ್ಲ ವಿರಾಜಮಾನರಾಗಿ ಹರಟೆ ಹೊಡೆಯುತ್ತಿದ್ದರು. ಹೆಂಗಸರು ಮನೆಯ ಒಳಗಡೆ ಕುಳಿತು ತಮ್ಮದೇ ಲೋಕದಲ್ಲಿ ಮೈ ಮರೆತಿದ್ದರು. ಮಕ್ಕಳೆಲ್ಲ ಅಲ್ಲಿ ಇಲ್ಲಿ ಓಡಾಡುತ್ತ ಗಲಾಟೆ ಮಾಡುತ್ತಿದ್ದರು. ಒಟ್ಟಿನಲ್ಲಿ ಮನೆ ಗಿಜಿ ಗಿಜಿ ಎನ್ನುತಿತ್ತು. ನಾನು ಪಾನಕ ಕೊಡುವಾಗ ಒಂದಷ್ಟು ಜನ ಆಂಟಿಯರು ನನ್ನ ವಿವರ ಕೇಳುತ್ತಿದ್ದರು ಅಮ್ಮನ ಹತ್ತಿರ. ಇವರಿಗೆಲ್ಲ ಗಂಡು ಹೆಣ್ಣು ಹುಡುಕುವುದು ಬಿಟ್ಟು ಮಾಡಲು ಬೇರೆ ಕೆಲಸವೇ ಇಲ್ಲ. ಇನ್ನು ಒಂದಷ್ಟು ಜನ ನಾ ಹಾಕಿದ್ದ ಬಳೆ, ನನ್ನ ಉದ್ದದ ಜಡೆ ನೋಡಿ ಚೆನ್ನಾಗಿದೆ ಎಂದು ಹೇಳುತ್ತಿದ್ದರು. ಎಲ್ಲರಿಗು ನನ್ನ ನಗುವೇ ಉತ್ತರ. ಮತ್ತೆ ಯಾರೋ ಒಂದಷ್ಟು ಜನ ಕರ್ಣನ ಸ್ನೇಹಿತರು ಬಂದ ಹಾಗಾಯಿತು. ಆಚೆ ಹೋಗಿ ನೋಡಲೇ ಅವನು ಬಂದಿರಬಹುದಾ ಅಂತ.. ಆಕಸ್ಮಾತ ಎಲ್ಲರ ಎದುರು ಮಾತನಾಡಿಸಿ ಬಿಟ್ಟರೆ ಏನು ಮಾಡುವುದು ಎಂದುಕೊಂಡು ಸುಮ್ಮನಾದೆ. ಅವನಿಗೋಸ್ಕರ ಶಬರಿಯಂತೆ ಕಾಯುತ್ತಿದ್ದರೂ ಅವನನ್ನು ಎದುರಿಸುವ ಗುಂಡಿಗೆ ಇರಲಿಲ್ಲ.
ಹೋಮ ಮುಗಿದು ಊಟದ ಸಮಯವಾಯಿತು.ಬಫೆ ಊಟವಾದ್ದರಿಂದ ನಾವೇ ಮನೆಯವರೇ ನಿಂತು ಎಲ್ಲರಿಗು ಬಡಿಸಬೇಕಿತ್ತು. ತಟ್ಟೆ, ಬಟ್ಟಲು, ಚಮಚಗಳು, ಉಪ್ಪಿನಕಾಯಿ, ಬಣ್ಣ ಬಣ್ಣದ ಸಂಡಿಗೆಗಳು, ದಾಳಿಂಬೆ ಕೋಸಂಬರಿ, ಅನಾನಸ ರಸ, ಜಾಮೂನು, ಚಿರೋಟ, ಬಿಸಿ ಬೇಳೆ ಬಾತ, ಕೊನೆಗೆ ಮಜ್ಜಿಗೆ. ಎಲ್ಲವನ್ನು ಟೇಬಲ್ ಮೇಲೆ ಸಾಲಾಗಿ ಇಟ್ಟಿದ್ದರು. ನಾನು, ಮಹತಿ, ಸಹನಾ, ಕಿಟ್ಟು ಮಾಮ ಹೀಗೆ ಎಲ್ಲರು ಒಂದೊಂದು ಪದಾರ್ಥದ ಮುಂದೆ ನಿಂತುಕೊಂಡೆವು. ಜಾಮುನಿನ ಮುಂದೆ ನಾನು..
ಕರ್ಣನ ಸ್ನೇಹಿತರೆಲ್ಲ ಆಗಾಗ ಮನೆಗೆ ಬರುತ್ತಿದ್ದರಿಂದ ನನಗೆ ಅವರೆಲ್ಲರ ಮುಖ ಪರಿಚಯವಿತ್ತು. ಈಗ ಬಂದಿದ್ದವರಲ್ಲಿ ಒಬ್ಬ ಮಾತ್ರ ನನಗೆ ಗೊತ್ತಿಲ್ಲದವನಿದ್ದ. ಅವನ ಹೆಸರು ತಿಳಿಯುವ ಕುತೂಹಲ. ಮಹತಿಗೇನಾದರೂ ಗೊತ್ತಿರಬಹುದಾ ಎಂದು ಅವಳ ಹತ್ತಿರ ವಿಚಾರಿಸಿದೆ. ಅವಳಿಗೂ ಗೊತ್ತಿರಲಿಲ್ಲ. ನನಗೆ ಅವನೇ ಪ್ರಮಥ ಇರಬಹುದೆಂದೆನಿಸಿತು. ಅವರೆಲ್ಲರೂ ಅಲ್ಲೆಲ್ಲೋ ಗಲಾಟೆ ಮಾಡುತ್ತಾ ಕುಳಿತಿದ್ದರು. ಕಿರುಗಣ್ಣಿನಲ್ಲಿ ಆಗಾಗ ಅವನತ್ತ ನೋಡುವ ಬಯಕೆ. ನನ್ನ ದೃಷ್ಟಿಯ ಜೊತೆಗೆ ಅವನ ದೃಷ್ಟಿ ಬೇರೆಯಬಹುದೇನೋ. ನನ್ನನ್ನರಸುವ ಕಣ್ಣುಗಳಿಗೆ ನಿಧಿಯಾಗುವ ಬಯಕೆ ಥಕ ಥಕ ಕುಣಿಯುತ್ತಿತ್ತು. ಅವನೇ ಪ್ರಮಥ ಆಗಿದ್ದರೆ ಇಷ್ಟೊತ್ತಿಗೆ ನನ್ನ ಮಾತನಾಡಿಸುತ್ತಿದ್ದ, ಮಾತನಾಡಲು ಸಾಧ್ಯವಾಗದಿದ್ದರೂ ಕೊನೆ ಪಕ್ಷ ನನ್ನತ್ತ ನೋಡಿ ನಗುತ್ತಿದ್ದ. ನಾನೇ ಅವನ ಪುನರ ಎಂದು ಗೊತ್ತಾಗಿಲ್ಲವೆ ಅವನಿಗೆ.
‘ನಿನ್ನ ಮಾತು, ಮುನಿಸು, ನಗು, ಪ್ರೀತಿ
ಎಲ್ಲ ನೆನಪಾಗುತಿದೆ
ಕೊನೆಯಿಲ್ಲದ ನಿನ್ನ ನೀರೀಕ್ಷಣೆಯಲಿ
ಜೀವನವೇ ಬರಡಾಗುತಿದೆ’
ಎಲ್ಲರು ಸರದಿಯ ಪ್ರಕಾರ ಬಂದು ಹಾಕಿಸಿಕೊಂಡು ಹೋಗುತ್ತಿದ್ದರು. ನಿಂತು ನಿಂತು ನನ್ನ ಕಾಲು ನೋಯುತ್ತಿತ್ತು. ಮಹತಿ, ಸಹನಾ ಅದಾಗಲೇ ಇನ್ನ್ಯಾರಿಗೋ ಬಡಿಸುವ ಕೆಲಸ ಹಸ್ತಾಂತರಿಸಿ ಹೊರಟಾಗಿತ್ತು . ನಾನು ಮಾತ್ರ ಅವನು ಬರುತ್ತಾನೆ, ನನ್ನತ್ತ ನೋಡಿ ನಗುತ್ತಾನೆ, ಯಾರಿಗೂ ಕೇಳಿಸದಂತೆ ಮೆಲ್ಲನೆ hi ಹೇಳುತ್ತಾನೆ ಎಂದೆಲ್ಲ ಕನಸು ಕಾಣುತ್ತ ನಿಂತಿದ್ದೆ.
ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ಊಟ ಮಾಡಾಯಿತು. ಕರ್ಣನ ಸ್ನೇಹಿತರು ಸರದಿ ಸಾಲಿನಲ್ಲಿ ಬಂದು ಊಟ ಹಾಕಿಸಿಕೊಳ್ಳತೊಡಗಿದರು. ಅವನು ಜಾಮೂನಿಗಾಗಿ ಬಂದಾಗ ಅವನ ಮುಖ ನೋಡಿದೆ. ಆದರೆ ಅವನು ನನ್ನತ್ತ ನೋಡಲೇ ಇಲ್ಲ. ಯಾಕಿವನು ಇಷ್ಟೊಂದು ಕಾಡಿಸುತ್ತಿದ್ದಾನೆ. ಅವನಿಗೆರಡು ಜಾಮೂನು ಹಾಕಿದೆ. ಅವನ ಹಿಂದೆ ನಿಂತಿದ್ದವ ನನ್ನ ಮುಖ ನೋಡಿದ. ಎಲ್ಲರಿಗೂ ಒಂದೊಂದೇ ಜಾಮೂನು ಹಾಕಿದ ನಾನು ಅವನಿಗೆ ಮಾತ್ರ ಎರಡು ಹಾಕಿದ್ದೇಕೆ ಎಂದು. ಆದರೆ ಅವನು ಮಾತ್ರ ಯಾವುದನ್ನು ಗಮನಿಸದೆ ಎಲ್ಲವನ್ನು ಹಾಕಿಸಿಕೊಂಡು ಹೋದ. ಅವರೆಲ್ಲ ಎರಡನೇ ಬಾರಿ ಬಂದು ಹಾಕಿಸಿಕೊಂಡರು. ಆಗಲು ಆ ಹುಡುಗ ನನ್ನತ್ತ ನೋಡಲಿಲ್ಲ, ಮಾತನಾಡಿಸಲು ಇಲ್ಲ, ಯಾವ ಸಂಜ್ಞೆಯನ್ನು ಮಾಡಲಿಲ್ಲ. ನನಗನ್ನಿಸಿತು ಅವನು ಪ್ರಮಥ ಆಗಿರಲಿಕ್ಕಿಲ್ಲವೆಂದು. ನಾನೇ ಅವರ ಹತ್ತಿರ ಹೋದೆ. ಗುಂಪಿನಲ್ಲಿದ್ದ ಕರ್ಣನನ್ನು ಕರೆಯುತ್ತ ಅವನನ್ನು ನೋಡಲು ಯತ್ನಿಸಿದೆ. ಅವನು ಇನ್ನೊಬ್ಬನ ಜೊತೆ ಏನೋ ಮಾತಾಡುತ್ತ ಕುಳಿತಿದ್ದ.
ಕರ್ಣ ಬಂದವನೇ ‘ಏನು’ ಎಂದು ಕೇಳಿದ. ಬೇಗ ಬೇಗ ಮಾತು ಮುಗಿಸಿ ತನ್ನ ಸ್ನೇಹಿತರತ್ತ ಮರಳುವ ತರಾತುರಿಯಿತ್ತು ಅವನ ಧ್ವನಿಯಲ್ಲಿ.
‘ಅಲ್ಲಿ ಸ್ಕೈ ಬ್ಲೂ ಶರ್ಟ್ ಹಾಕ್ಕೊಂಡು ಕೂತಿರೋ ಹುಡುಗನ ಹೆಸರೇನು?’ ಎಂದೆ.
‘ನಿಂಗ್ಯಾಕೆ’ ಸ್ವಲ್ಪ ಖಾರವಾಗೇ ಕೇಳಿದ.
‘ಹೇಳೋ… ಅವನ್ಯಾರು ಅಂತ ನಂಗೆ ಗೊತ್ತಿಲ್ಲ’
‘ಅವನು ಯಾರಾದ್ರೇ ನಿಂಗೇನು. ಇನ್ನು ಊಟ ಮಾಡಿಲ್ಲ ಅಲ್ಲ್ವಾ ನೀನು. ಹೋಗಿ ಊಟ ಮಾಡು’ ಎಂದು ಹೇಳಿ ಹೊರಡಲುನುವಾದ.
‘ಹೇ.. ಪ್ಲೀಸ್ ಹೇಳೋ….’ ಗೋಗರೆದೆ.
‘ಸಾಗರ ಅಂತ. ಏನು ಮಾಡ್ತಿಯಾ ಹೆಸರು ತುಗೊಂಡು’ ಎಂದು ರೇಗಿದವನೇ ಹೋದ.
ನನ್ನ ಮನಸಿನ ನೋವು, ತೊಳಲಾಟ ಇವನಿಗೇನು ಗೊತ್ತು. ಈಗ ಸ್ವಲ್ಪ ಸ್ವಲ್ಪ ಖಾತ್ರಿ ಆಗುತ್ತಿದೆ, ಅವನು ಬಂದಿಲ್ಲ, ಬರೋದು ಇಲ್ಲ.. ಇದ್ದಿದ್ದ ಒಂದು ಸಣ್ಣ ಭರವಸೇನು ಕ್ಷೀಣವಾಗುತ್ತಿದೆ. ಒಂದು ತಿಂಗಳಿನಿಂದ ನನ್ನ ಜೊತೆ ಮಾತನಾಡಿಲ್ಲ ಅವನು. ‘ನನ್ನ ಮರೆತು ಬಿಡು’ ಎಂದು ಹೇಳಿದ್ದೆ ಕೊನೆ…. ಆದರೆ ನನ್ನ ಬುದ್ದಿಗೆ ಅದೇನು ಕವಿದಿತ್ತೋ ಅವನು ಹೇಳಿದ್ದನ್ನು ತಮಾಷೆ ಎಂದುಕೊಂಡೆ.. ಈ ದಿನ ವ್ಯಾಲೆಂಟೈನ್ಸ್ ಡೇಗೆ ನನಗೆ surprise ಕೊಡೋಕೆ ಇಷ್ಟೆಲ್ಲಾ ನಾಟಕ ಮಾಡುತ್ತಿದ್ದಾನೆ ಅಂತ ತಿಳಿದು ಏನೇನೋ ಕನಸು ಕಂಡೆ.
ಆದರೆ ಇದು ನಮ್ಮಿಬ್ಬರಿಗೂ ಮೊದಲ ಪ್ರೇಮಿಗಳ ದಿನ, ಪ್ರೀತಿಸುವವರಿಗಾಗಿಯೇ ಇರುವ ಪ್ರೀತಿಯ ದಿನ. ನಾವಿಬ್ಬರು ಅದೆಷ್ಟು ಸಲ ಮಾತಾಡಿಲ್ಲ ಈ ದಿನದ ಬಗ್ಗೆ ಹೇಗೆಲ್ಲ ಭವ್ಯವಾಗಿ ಆಚರಿಸಬೇಕೆಂದು. ಪ್ರಮಥ ಅವತ್ತು ಹೇಳಿದ್ದ ‘ನಾನು ನಿನ್ನ ನೋಡೋಕೆ ವ್ಯಾಲೆಂಟೈನ್ಸ್ ದಿನ ದಾವಣಗೆರೆಗೆ ಬರ್ತೀನಿ. ನೀನು ವೈಟ್ ಚುಡಿದಾರ ಹಾಕ್ಕೊಂಡು ನನ್ನ ನೋಡೋಕೆ ಬರಬೇಕು. ಆಮೇಲೆ ನಾವಿಬ್ಬರು ಸೇರಿ ಸುತ್ತಾಡೋಣ. ನೋಡದೇನೆ ಪ್ರೀತಿಸಿ ವ್ಯಾಲೆಂಟೈನ್ಸ್ ದಿನ ಭೇಟಿ ಮಾಡೋ ಪ್ರೇಮಿಗಳು ಬಹುಶಃ ಈ ಜಗತ್ತಲ್ಲಿ ನಾವೇ ಮೊದ್ಲು’
ಆಕಾಶದಗಲ ಪ್ರೀತಿಸಿದವನು ಅದು ಹೇಗೆ ಇವತ್ತಿನ ದಿನ ಒಂದು ವಿಶ್ ಕೂಡ ಮಾಡದೆ ಈ ರೀತಿ ಕಲ್ಲಾಗಲು ಸಾಧ್ಯ. ನಿಜವಾಗಿಯೂ ನನ್ನನ್ನು ಮರೆತು ಬಿಟ್ಟನಾ. ಅಥವಾ ನಾನೇ ವಿಶ್ ಮಾಡಲಿ ಎಂದು ಕಾಯುತ್ತಿರಬಹುದಾ. ಯೋಚನೆ ಬಂದಿದ್ದೆ ತಡ, ನನಗರಿವಿಲ್ಲದಂತೆ ನನ್ನ ಕೈ ಮೊಬೈಲಿನಲ್ಲಿ ಅವನ ನಂಬರ್ ತೆಗೆದು ಡೈಲ್ ಮಾಡಿತು.
‘ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ಚ ಆಫ್ ಮಾಡಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪುನಃ ಪ್ರಯತ್ನಿಸಿ’ ಅವನಿಗೆ ಕರೆ ಮಾಡಿ ಮಾಡಿ ಇದನ್ನು ಲೆಕ್ಕವಿಲ್ಲದಷ್ಟು ಬಾರಿ ಕೇಳಿದ್ದಿದೆ. ಇವತ್ತು ಅದನ್ನೇ ನೀರಿಕ್ಷಿಸುತ್ತಿದ್ದೆ. ಫೋನ್ ರಿಂಗ್ ಆಗುತ್ತದೆಂದು ಎಣಿಸಿರಲಿಲ್ಲ. ರಿಂಗ್ ಆಗತೊಡನೆ ಕಳೆದು ಹೋದ ನನ್ನ ಸಂತೋಷ ಮತ್ತೆ ಸಿಕ್ಕಂತಾಯಿತು. ಮನ ಖುಷಿಯಲ್ಲಿ ನೆಗೆಯತೊಡಗಿತ್ತು. ಅವನ ಧ್ವನಿ ಕೇಳಲು ಹಂಬಲಿಸುತ್ತಿದ್ದೆ.. ಅತ್ತ ಕಡೆ ರಿಂಗ್ ಆಗುತ್ತಿದ್ದರೆ ಈ ನಂಬರ್ ಬೇರೆ ಯಾರಾದರು ತೆಗೆದುಕೊಂಡಿರಬಹುದು ಎಂಬ ಯೋಚನೆಯು ಬಂತು. ಆದರೆ ಕರೆ ಮಾಡುವುದನ್ನು ನಿಲ್ಲಸಲಿಲ್ಲ. 2-3 ಸಾರಿ ಪ್ರಯತ್ನಿಸಿದರೂ ಆ ಕಡೆಯಿಂದ ಉತ್ತರವಿರಲಿಲ್ಲ.
ಮೆಸೇಜ ಮಾಡಿದೆ..
” ನೀನೊಂದು ಕಲ್ಲು. ನನ್ನ ಪ್ರೀತಿ ಕಸಿದುಕೊಂಡು ಈಗ ಕಳ್ಳನಂತೆ ತಲೆ ಮರೆಸಿಕೊಳ್ಳುತ್ತಿರುವ ಅಪರಾಧಿ!.
ಈ ದಿನ ನಿನಗಾಗಿ, ನಿನ್ನ ಒಂದು ಮೆಸೇಜಿಗಾಗಿ ಹುಚ್ಚಿಯಂತೆ ಕಾಯುತ್ತಿದ್ದೆ.
ಪ್ರೇಮಿಗಳ ದಿನದ ಶುಭಾಶಯಗಳು”.
ಯಾವತ್ತು ಇಷ್ಟೊಂದು ದುಖ ಆಗಿರಲಿಲ್ಲ ನನಗೆ. ಇವತ್ತು ಮಾತ್ರ ತಡೆದುಕೊಳ್ಳಲಾರದಷ್ಟು ದುಖ, ಮನೆ ತುಂಬಾ ಜನರಿದ್ದರೂ ನಾನು ಒಂಟಿ ಎಂಬ ದುಖ.. ದುಖ ಉಮ್ಮಳಿಸಿ ಬರುತ್ತಿತ್ತು. ಯಾರದಾದರು ಮುಂದೆ ಹೇಳಿಕೊಂಡು ಮನಸು ಹಗುರ ಮಾಡಿಕೊಳ್ಳೋಣವೆಂದರೆ ಯಾರಿದ್ದಾರೆ.. ಕರ್ಣನ ಮುಂದೆ ಹೇಳಿದರೆ ‘ನಾ ಮೊದಲೇ ಹೇಳಿದ್ದೆ, ಆದರೂ ನನ್ನ ಮಾತು ಕೇಳದೆ ಅವನನ್ನು ನಂಬಿದೆ. ಈಗ ಅನುಭವಿಸು’ ಎನ್ನುತ್ತಾನೆ. ರಾಧಾಗೆ ಫೋನ್ ಮಾಡಿದೆ. ನನ್ನಷ್ಟೇ ಅವಳಿಗೂ ಕಾತರತೆಯಿತ್ತು ನಮ್ಮಿಬ್ಬರ ಭೇಟಿಯ ಬಗ್ಗೆ. ಅವಳು ಹಲೋ ಎಂದ ತಕ್ಷಣ ನನ್ನ ಅಳು ಒತ್ತರಿಸಿ ಬಂತು. ಬಿಕ್ಕುತ್ತಲೇ ಅವಳಿಗೆಲ್ಲ ಹೇಳಿದೆ. ಈ ಬಿಲ್ಡಿಂಗಿನಿಂದ ಜಿಗಿದು ಬಿಡುತ್ತೇನೆ ಎಂದೆಲ್ಲ ಹುಚ್ಚುಚ್ಚಾಗಿ ಮಾತಾಡಿದಾಗ ಅವಳು ಹೆದರಿ ‘ಒಬ್ಬಳೇ ಇರಬೇಡ, ದಾವಣಗೆರೆಗೆ ಬಾ ಆಮೇಲೆ ಯೋಚನೆ ಮಾಡೋಣ ಒಬ್ಬಳೇ ಮಾತ್ರ ಇರಬೇಡ ‘ ಎಂದಳು.
‘ನಯನದ ಅಂಚಲಿ ತುಳುಕುವ ಹನಿಗಳು ಹೇಳಿವೆ
ಬಾರೆಯಾ ಗೆಳೆಯನೇ ಎಂದು ಭಾರದಿ ಕೇಳಿವೆ
ನೋವಿನ ಸಮಯದಿ ಮರೆಯದೆ ನನ್ನಯ
ಹೆಸರನು ಒಮ್ಮೆ ನೀ ಕೂಗು
ನಾ ಬಂದು ನಿನ್ನ ಸೇರುವೆ ‘
ಅವಳ ಜೊತೆ ಮಾತು ಮುಗಿಸಿದ ನಂತರ ತಲೆ ತುಂಬಾನೇ ನೋಯುತ್ತಿತ್ತು. ಜನರ ಗಲಾಟೆ ಜೊತೆಗೆ ಅವನ ನೆನಪುಗಳು ಸೇರಿ ಪ್ರಾಣ ಕಿತ್ತು ಬರುವಷ್ಟು ಹಿಂಸೆ ಕೊಡುತ್ತಿದ್ದವು. ಅಷ್ಟೊತ್ತಿಗಾಗಲೇ ಬಂದ ಅತಿಥಿಗಳೆಲ್ಲ ಹೋಗಾಗಿತ್ತು. ಹತ್ತಿರದ ಸಂಬಧಿಕರು ಮಾತ್ರ ಉಳಿದುಕೊಂಡಿದ್ದರು. ಎಲ್ಲರು ಅಲ್ಲಲ್ಲಿ ಗುಂಪುಗಳಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.. ನಾನು ಯಾರೊಡನೆಯೂ ಮಾತನಾಡದೆ ರೂಮಿಗೆ ಹೋಗಿ ಮಲಗಿದೆ. ಸುಸ್ತು, ಬೇಜಾರು, ಸಂಕಟ ಎಲ್ಲ ಸೇರಿ ಹೇಗೋ ನಿದ್ದೆ ಬಂತು.. ಆದರೆ ಏನೇನೋ ವಿಚಿತ್ರ ಕನಸು..
‘ಕಪ್ಪು ಮೋಡಗಳಿಂದ ತುಂಬಿದ ಆಕಾಶ, ಬೀದಿ ದೀಪಗಳಿಲ್ಲದ ನಿರ್ಜನವಾದ ರಸ್ತೆ.. ಎತ್ತ ನೋಡಿದರು ಗಾಢ ಅಂಧಕಾರ. ಜನನಿಬಿಡವಾಗಿ ಇಡೀ ಪರಿಸರ ಶೋಚನೀಯವಾಗಿತ್ತು. ಯಾರೋ ಅಪರಿಚಿತ ಹುಡುಗಿಯೊಬ್ಬಳು ರಸ್ತೆಯಲ್ಲಿ ಏನನ್ನೋ ಹುಡುಕುತ್ತ ಅಲೆಯುತ್ತಿದ್ದಳು. ಕತ್ತಲೆಯಲ್ಲಿ ನೆಲದ ಮೇಲೆ ಕೈಯಾಡಿಸುತ್ತ ತಡಕಾಡುತ್ತಿದ್ದಳು. ಒಂದೇ ಜಾಗದಲ್ಲಿ ಸುಮಾರು ಹೊತ್ತು ಹುಡುಕಿದ ನಂತರ ಬೇರೆ ಜಾಗದಲ್ಲಿ ಹುಡುಕತೊಡಗಿದಳು. ಅವಳ ಮುಖದಲ್ಲಿ ಅಸಹಾಯಕತೆಯಿತ್ತು. ಅವಳ ಸುತ್ತ ಬೆಕ್ಕೊಂದು ಕೀರಲು ಧ್ವನಿಯಲ್ಲಿ ಅರಚುತ್ತಾ ಓಡಾಡುತ್ತಿತ್ತು. ಅವಳು ಮಾತ್ರ ಹುಡುಕುತ್ತಲೇ ಇದ್ದಳು.. ಹುಡುಕುತ್ತಲೇ ಇದ್ದಳು..’
Summarizing the whole day event in the name of the dream in the last paragraph was wonderful.
Thank you 🙂