ಸಂಜೀವಿನಿ-2 — ಅವನನ್ನೊಮ್ಮೆ ಕಾಣುವಾಸೆ..
ಹಿಂದಿನ ಅಧ್ಯಾಯದಲ್ಲಿ…
ಸೀನು ಮಾವನ ಮನೆ ಗೃಹ ಪ್ರವೇಶಕ್ಕೆ ಬಂದ 'ಪುನರ', ಕರ್ಣನ ಆಹ್ವಾನದಿಂದ ತನ್ನ ಹುಡುಗ ಬರಬಹುದೆಂದು ಕಾಯುತ್ತಾಳೆ, ಕರ್ಣನ ಸ್ನೇಹಿತರ ಗುಂಪಿನಲ್ಲಿ ತನ್ನ ಹುಡುಗನನ್ನು ಹುಡುಕುತ್ತಾಳೆ. ಅವನು ಬಂದಿಲ್ಲವೆಂದು ಗೊತ್ತಾದಾಗ ಅಧೀರಳಾಗುತ್ತಾಳೆ. ಪ್ರಾಣಕ್ಕೆ ಪ್ರಾಣ ಆದ ಅವನು ಪ್ರೇಮಿಗಳ ದಿನದಂದು ಒಂದು ಸಂದೇಶವನ್ನು ಕಳಿಸದೆ ಹೋದದ್ದಕ್ಕೆ ಮನಸು ನುಚ್ಚು ನೂರಾಗುತ್ತದೆ. ಮಲಗಿದರು ಮಲಗಲು ಬಿಡದ ಕನಸೊಂದು ಕಾಡುತ್ತದೆ..
ಮುಂದೆ ಓದಿ…
ಬೆಳಿಗ್ಗೆ ಎದ್ದೇಳುವ ಹೊತ್ತಿಗೆ ತುಂಬಾ ಸಮಯವಾಗಿತ್ತು. ಏನಾದ್ರು ರಿಪ್ಲೈ ಬಂದಿದೆಯಾ ಅಂತ ಮೊಬೈಲ್ ನೋಡಿದೆ. ಊಹೂ…. ಏನು ಪ್ರತಿಕ್ರಿಯೆ ಇಲ್ಲ ಆ ಕಡೆಯಿಂದ .
ನಾನ್ಯಾಕೆ ಇವನಿಗೆ ಇಷ್ಟೊಂದು ಕೊರಗುತ್ತಿದ್ದೇನೆ, ಅವನಾಗೇ ನನ್ನ ದೂರ ತಳ್ಳುತ್ತಿದ್ದಾನೆ, ನನ್ನದೇನು ತಪ್ಪಿಲ್ಲ ಇದರಲ್ಲಿ… ನಾನು ಅವನಿಗೆ ಮೆಸೇಜ, ಕಾಲ್ ಏನೂ ಮಾಡುವುದಿಲ್ಲ , ಅವನನ್ನು ನೆನಪಿಸಿಕೊಳ್ಳುವುದೂ ಇಲ್ಲ ಎಂದು ನಿರ್ಧಾರ ಮಾಡಿ ಮೊಬೈಲ್ ಮೂಲೆಗೆಸೆದು ಅಡುಗೆ ಮನೆಗೆ ಹೋದೆ. ಅಮ್ಮ, ಅಜ್ಜಿ , ಅಜ್ಜ ಎಲ್ಲಾ ಊರಿಗೆ ಹೊರಡಲು ಸಿದ್ದವಾಗುತ್ತಿದ್ದರು. ನನಗೆ ಎಲ್ಲಿಗೂ ಹೋಗಲು ಮನಸಿಲ್ಲ, ಇಲ್ಲಿಯೇ ಇರಬೇಕು ಎಂತಲೂ ಅನ್ನಿಸುತ್ತಿಲ್ಲ. ಸುಮ್ಮನೆ ಅವರೆಲ್ಲ ಸಿದ್ದವಾಗುತ್ತಿರುವುದನ್ನು ನೋಡುತ್ತಾ ಕುಳಿತೆ. ಅಮ್ಮನಿಗೆನೋ ಸಂಶಯ ನನ್ನ ಮೇಲೆ, ಬೆಳಗ್ಗೆಯಿಂದ ಎರಡು ಮೂರು ಸಾರಿ ಕೇಳಿದ್ದರು ‘ವಸು ಹುಶಾರಿಲ್ಲವೇನೆ ‘ ಅಂತ.
ಅಮ್ಮನ ಮುಂದೆ ಎಲ್ಲವನ್ನು ಹೇಳಿ ಗೊಳೋ ಅಂತ ಅತ್ತು ಬಿಕ್ಕುತ್ತ ಅವರ ಮಡಿಲಲ್ಲಿ ಮಲಗೋಣ ಎಂದೆನಿಸುತ್ತಿತ್ತು. ಆದರೆ ಎಲ್ಲರು ಖುಷಿಯಾಗಿರುವಾಗ ನನ್ನ ದುಖವನ್ನೇಕೆ ಹರಡಬೇಕು ಎಂದು ಸುಮ್ಮನಿದ್ದೆ. ನಾನು ಸುಮ್ಮನೆ ಕುಳಿತದ್ದನ್ನು ನೋಡಿ ಅಮ್ಮ ಕೇಳಿದರು.
“ಯಾಕೆ ಪುಟ್ಟ ಬರಲ್ಲ್ವಊರಿಗೆ”….
ಹು ಎಂದು ಹೇಳಿ ನನ್ನ ಬಟ್ಟೆ ಎಲ್ಲ ಜೋಡಿಸಿಕೊಳ್ಳತೊಡಗಿದೆ. ಅಷ್ಟರಲ್ಲೇ ಮಹತಿ ಬಂದು ಸ್ವಲ್ಪ ದಿನ ಇರು ಎಂದು ಬಲವಂತ ಮಾಡತೊಡಗಿದಳು. ಸೀನು ಮಾವ ಸಹ ‘ಹೇಗೂ ರಜೆ ಇದೆಯಲ್ಲ ಒಂದೆರಡು ದಿನ ಇದ್ದು ಹೋಗು’ ಅಂದಿದಕ್ಕೆ ಅಮ್ಮನ ಮುಖ ನೋಡಿದೆ. ನನ್ನ ಬುದ್ಧಿಯಂತು ಕೆಲಸ ಮಾಡುವುದನ್ನೇ ಮರೆತಿತ್ತು. ಎಲ್ಲಿದ್ದರೂ ಅವನ ನೆನಪುಗಳಿಂದ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿ. ಕೊರುಗುವುದೇ ಜೀವನದ ಧ್ಯೇಯವಾದಂತಿತ್ತು. ಇಷ್ಟು ದಿನ ಯಾವತ್ತಾದರೂ ಒಂದು ದಿನ ಅವನಿಂದ ಮೆಸೇಜ ಅಥವಾ ಕಾಲ್ ಬರಬಹುದು ಎನ್ನುವ ಆಸೆ ಆದರೂ ಇತ್ತು. ಆದರೆ ಈಗ ಅದು ಸತ್ತೋಗಿದೆ. ಅಮ್ಮ ‘ಸರಿ ಇದ್ದ್ಬಿಟ್ಟು ಬಾ’ ಎಂದಿದಕ್ಕೆ ಮತ್ತೆ ಅದೇ ಮೊದಲಿದ್ದ ಭಂಗಿಯಲ್ಲಿ ಸುಮ್ಮನೆ ಕುಳಿತೆ. ಅಮ್ಮ ವಿಚಿತ್ರವಾಗಿ ನೋಡಿದರು ನನ್ನತ್ತ.
ಎಲ್ಲರನ್ನು ಕಳಿಸಿ, ತಕ್ಕಮಟ್ಟಿಗೆ ಮನೆ ಸ್ವಚ್ಚ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗಿತ್ತು.
ನಾನು ಅವನನ್ನು ನೋಡಿಯೇ ಇಲ್ಲ. ಅವನು ಹೇಗಿರಬಹುದೆಂಬ ಕಲ್ಪನೆಯಷ್ಟೇ ನನ್ನೊಂದಿಗಿರುವುದು. ಇಷ್ಟು ದಿನ ನನ್ನ ಭಾವನೆಗಳನ್ನು ಹಂಚಿಕೊಂಡ ವ್ಯಕ್ತಿ ನೋಡಲು ಹೇಗಿದ್ದ, ಮುಂದೊಂದು ದಿನ ನನಗರಿವಿಲ್ಲದಂತೆ ಅವನು ನನ್ನ ಎದುರಿಗೆ ಬಂದಾಗ ಈತನೊಂದಿಗೆ ನನಗೆ ಮೊದಲ ಬಾರಿಗೆ ಪ್ರೇಮಾಂಕುರವಾಗಿತ್ತು, ಹಗಲು ರಾತ್ರಿಯೆನ್ನದೆ ಫೋನಿನಲ್ಲಿ ಇಬ್ಬರು ಮಾತನಾಡಿದ್ದೆವು ಎಂದೆಲ್ಲ ನೆನಪಾಗಬೇಕಲ್ಲವೇ.. ಅವನು ಎದುರಿಗೆ ಬಂದರೂ ಗುರುತಿಸದೆ ಅಪರಿಚಿತರಂತೆ ಹೋಗುವ ಅವಸ್ಥೆ ಯಾಕೆ.. . ಅವನನ್ನೊಮ್ಮೆ ನೋಡಬೇಕೆಂದು ತವಕವಾಗುತ್ತಿತ್ತು. ಮನಸು ಹೇಳಿತು… ಕೊನೆ ಬಾರಿ ಅವನಿಗೆ ಮೆಸೇಜ ಮಾಡು, ಇದಕ್ಕೂ ಯಾವುದು ಪ್ರತಿಕ್ರಿಯೆ ಬರಲಿಲ್ಲ ಎಂದರೆ ಅವನು ನಿನ್ನ ಜೀವನದ ರಂಗಮಂಚದಲ್ಲಿ ಮುಗಿದ ಪಾತ್ರ ಎಂದುಕೊಂಡು ಸುಮ್ಮನಾಗಿ ಬಿಡು.
ಮೊಬೈಲ್ ಎತ್ತಿಕೊಂಡು ಟೈಪ್ ಮಾಡಿದೆ…
“ಹೃದಯದಲಿ ನಿ ಬಿತ್ತಿ ಹೋದ ಅನುರಾಗ
ಬೆಳೆದು ಹೆಮ್ಮರವಾಗಿದೆ ಈಗ
ಪರಿತಪಿಸುತಿಹೆನು ಒಳಗೊಳಗೇ
ಸಿಗಲಾರೆಯ ಗೆಳೆಯ ನೀನೊಂದು ಗಳಿಗೆ “
ಒಂದೇ ಒಂದು ಬಾರಿ ಭೇಟಿ ಆಗೋಣ, ನನಗೆ ನನ್ನ ಮೊದಲ ಪ್ರೀತಿ ಹೇಗಿತ್ತು ಅಂತ ನೋಡುವ ಅವಕಾಶವನ್ನಾದರೂ ಕೊಡು”..
ಮೆಸೇಜ ಕಳಿಸಿದ ನಂತರ ಕಣ್ಣಾಲಿಗಳನ್ನು ತುಂಬುತ್ತ ನಿಟ್ಟುಸಿರೊಂದು ಭಾರವಾಗಿ ಹೊರ ಬಂತು.
ಮಹತಿಗೆ ರಜ ಇರಲಿಲ್ಲವಾದ್ದರಿಂದ ಅವಳು ಯಾವಾಗಲೂ ಸ್ಕೂಲ್, ಟ್ಯೂಷನ್ ಅಂತೆಲ್ಲ ಬ್ಯುಸಿ ಆಗಿರುತ್ತಿದ್ದಳು. ಸೀನು ಮಾವ, ಮಾಮಿ ಕೆಲಸಕ್ಕೆ ಹೋಗುತ್ತಿದ್ದರಿಂದ ನಾನು, ಕರ್ಣ ಇಬ್ಬರೇ ಮನೆಯಲ್ಲಿ . ಇಡಿ ದಿನ TV ನೋಡಿಕೊಂಡು , ವಿಡಿಯೋ ಗೇಮ್ಸ್ ಆಡಿಕೊಂಡು ಸಮಯ ಕಳೆಯುತ್ತಿದ್ದೆವು. ಹೀಗೆ ಎರಡು ಮೂರೂ ದಿನ ಕಳೆಯಿತು, ನನ್ನಂತೆಯೇ ನನ್ನ ಮೊಬೈಲ್ ಸಹ ಉಸಿರಾಡುವುದನ್ನು ಮರೆತಿತ್ತು. ಪ್ರಮಥ ಇದ್ದಾಗ ನಡೆಯುತ್ತಿದ್ದ ಬಿಟ್ಟು ಬಿಡದ ಚಾಟಗಳು , ದೀರ್ಘವಾದ ಫೋನ್ ಕರೆಗಳು ಯಾವುದು ಈಗ ಇರಲಿಲ್ಲ. ನನ್ನ ಮೆಸೇಜಿಗೆ ಅವನಿಂದ ಏನು ರಿಪ್ಲೈ ಬಂದಿರಲಿಲ್ಲ. ಅವನಿಂದ ಯಾವ ಪ್ರತಿಕ್ರಿಯೆ ಬರುವುದಿಲ್ಲ ಎಂದು ಗೊತ್ತಿದ್ದರು ಹಾಳು ಮನಸು ನನ್ನ ಸಂದೇಶಕ್ಕೆ ಉತ್ತರವನ್ನು ಬಯಸಿ ಆಗಾಗ ಮೊಬೈಲ್ ನೋಡುವಂತೆ ಮಾಡುತ್ತಿತ್ತು. ಅಂದು ಭಾನುವಾರವಾದ್ದರಿಂದ ಎಲ್ಲರು ಮನೆಯಲ್ಲೇ ಇದ್ದರು. ನಾವೆಲ್ಲಾ ‘ನಮ್ಮೂರ ಮಂದಾರ ಹೂವೆ’ ಸಿನಿಮಾ ನೋಡುತ್ತಾ ಕುಳಿತ್ತಿದ್ದೆವು. ನನ್ನ ಮೊಬೈಲ್ ಸದ್ದಾಯಿತು. ಪ್ರಮಥನ ಹೆಸರು ಫ್ಲ್ಯಾಶ್ ಆಗುತ್ತಿತ್ತು ಮೊಬೈಲ್ ಸ್ಕ್ರೀನಿನ ಮೇಲೆ. ಗಕ್ಕನೆ ಎತ್ತಿಕೊಂಡು ತೆಗೆದು ನೋಡಿದಾಗ ಒಂದು ಸಾಲಿತ್ತು.
“ಸರಿ ಭೇಟಿ ಆಗೋಣ “
ಬರಗಾಲದ ಬಿರು ಬಿಸಿಲಲ್ಲಿ ಮಳೆಯಾಗಿ ನೀ ಬಂದೆ
ನನ್ನೇ ನಾ ಮರೆತು ಭುವಿಯಾಗಿ ನಾ ಮಿಂದೆ
ಬಡಿದೆಬ್ಬಿಸಿದೆ ಮರೆತಿದ್ದ ಆ ಸವಿನೆನಪುಗಳನು
ಎಂದೆಂದಿಗೂ ನೀ ನನ್ನವನೇ ಎಂಬ ಭಾವವನು
ಅವನು ನನಗೆ ರಿಪ್ಲೈ ಮಾಡುತ್ತಾನೆ ಎಂದೆಣಿಸಿರಲಿಲ್ಲ. ಈಗ ಅವನ ಉತ್ತರ ನೋಡಿ ನನಗೆ ಅದಮ್ಯ ಖುಶಿಯಾಯಿತು. ಕುಣಿಯಬೇಕೆನಿಸುತ್ತಿತ್ತು. ನನ್ನ ಪ್ರೀತಿ ಮತ್ತೆ ಚಿಗುರುವ ಮುನ್ಸೂಚನೆ ಇದು. ನಂಗೊತ್ತು ಅವನಿಗೆ ನನ್ನ ಬಿಟ್ಟು ಇರಲಾಗುವುದಿಲ್ಲ. ಬಿಟ್ಟಿರಲಾರದಂತಹ ಪ್ರೀತಿ ನಮ್ಮದು. ಅದು ಆತ್ಮಗಳ ಬೆಸುಗೆ. ನಾವಿಬ್ಬರು ಭೇಟಿಯಾಗಿ ಮಾತನಾಡಿದರೆ ಎಲ್ಲವೂ ಸರಿ ಹೋಗುತ್ತದೆ ಮೊದಲಿನಂತೆ. ನನ್ನ ಕನಸಿನೊಂದಿಗೆ ನನ್ನ ಮೊದಲ ಭೇಟಿಯಿದು. ನನ್ನ ಮೊದಲ ಪ್ರೀತಿಯನ್ನು ಕಣ್ಣು ತುಂಬಾ ನೋಡುವ ಅವಕಾಶ. ನನ್ನ ಜೀವನದಲ್ಲೇ ಮೊದಲ ಬಾರಿಗೆ ಹುಡುಗನೊಬ್ಬನನ್ನು ಭೇಟಿಯಾಗಲು ಹೊರಟಿದ್ದೆ.. ಎಲ್ಲಿ, ಹೇಗೆ, ಯಾವಾಗ ಒಂದು ತಿಳಿಯಲಿಲ್ಲ. ಈ ಊರು ನನಗೆ ಅಪರಿಚಿತವಾದ್ದರಿಂದ ಎಲ್ಲೇ ಹೋದರು ಕರ್ಣ ಅಥವಾ ಮಹತಿಯನ್ನ ಕರೆದೊಯ್ಯಬೇಕು. ಮಹತಿಗೆ ಇದೆಲ್ಲ ಗೊತ್ತಿಲ್ಲ, ಇನ್ನು ಚಿಕ್ಕವಳು. ಕರ್ಣನೆ ಸರಿ.. ಆದರೆ ಎಲ್ಲರ ಮುಂದೆ ಅವನನ್ನು ಕೇಳುವ ಹಾಗಿಲ್ಲ. ಹೊರಗಡೆ ಕರೆದರೆ ಹಿಂದೆಯಿಂದ ಮಹತಿ ಕೂಡ ಬರುತ್ತಾಳೆ. ಅವನು ನನ್ನ ಪಕ್ಕದಲ್ಲೇ ಕುಳಿತಿದ್ದರೂ ಮೆಸೇಜ ಮಾಡಿದೆ. ಅವನಿಗೆ ನಮ್ಮ ಇತ್ತೀಚಿನ ಬೆಳವಣಿಗೆ (ಪ್ರೀತಿ , ಮಾತು ಬಿಟ್ಟಿದ್ದು) ಎಲ್ಲ ಗೊತ್ತಿರಲಿಲ್ಲವಾದ್ದರಿಂದ ಪ್ರಮಥನ ಜೊತೆಗಿನ ಭೇಟಿ ಅವಶ್ಯವಿಲ್ಲ ಎನ್ನುವ ಧಾಟಿಯಿತ್ತು ಅವನಲ್ಲಿ. ನನ್ನ ಹಟಮಾರಿ ಪ್ರೀತಿ ನನ್ನ ಮಾತೇ ಕೇಳುವುದಿಲ್ಲ ಇನ್ನು ಕರ್ಣ ಯಾವ ಲೆಕ್ಕ. ಸುಮಾರು ಒಂದು ಗಂಟೆಯ ದೀರ್ಘ ಸಂದೇಶಗಳ ಚಕಿಮಕಿಯ ನಂತರ ನಾನು ಕರ್ಣನನ್ನು ಒಪ್ಪಿಸುವುದರಲ್ಲಿ ಸಫಲಳಾದೆ. ಈ ಭರಾಟೆಯಲ್ಲಿ ಸಿನಿಮಾ ಮುಗಿದು ಎಲ್ಲರು ಎದ್ದು ಹೋಗಿದ್ದರೂ ನಾವಿಬ್ಬರು ಮಾತ್ರ ಅದೇ ಸ್ತಿತಿಯಲ್ಲಿ ಕೂತಿದ್ದೆವು. ಮಾರನೆ ದಿನ 10 .30 ಕ್ಕೆ ನಾನು ಕರ್ಣನ ಜೊತೆ ಬರುವುದಾಗಿ ಪ್ರಮಥನಿಗೆ ಮೆಸೇಜ ಮಾಡಿದೆ. ಸ್ವಲ್ಪ ಹೊತ್ತಿನ ನಂತರ ಅವನಿಂದ ಸಂದೇಶ ಬಂತು. ಕಾವೇರಿ ಕೆಫೆನಲ್ಲಿ ಸಿಗೋಣ ಎಂದು. ನನ್ನ ಮನಸಲ್ಲಿ ಬಣ್ಣ ಬಣ್ಣದ ಪಾತರಗಿತ್ತಿಗಳು ಹಾರಡೋಕೆ ಶುರು ಮಾಡಿದ್ದವು. ಏನೋ ಒಂದು ತರಹದ ಭಯ, ಉದ್ವೇಗ , ಗೊಂದಲ ನನ್ನನ್ನಾವರಿಸಿಕೊಂಡಿದ್ದವು. ನಾಳೆ ಹೇಗೆ ಅವನನ್ನು ಎದುರಿಸುವುದು, ಏನೆಲ್ಲ ಮಾತಾಡುವುದು, ಹೇಗೆ ಮಾತು ಶುರು ಮಾಡುವುದು ಎಂದು ಯೋಚನೆ ಮಾಡುತ್ತಾ ರಾತ್ರಿಯಾಗಿದ್ದೆ ಗೊತ್ತಾಗಲಿಲ್ಲ. ಮಲಗಿದಾಗ ಎಂದಿನಂತೆ ಕಾಡುವ ಕನಸುಗಳು…
‘ಗಾಢ ಕೆಂಪು ಬಣ್ಣದ ಡ್ರೆಸ್ ಹಾಕಿಕೊಂಡ ನಾನು ಧರೆಗಿಳಿದ ಕಿನ್ನರಿಯ ಹಾಗೆ ಕಾಣುತ್ತಿದ್ದೆ. ಅವನನ್ನು ನೋಡಲೆಂದು ಓಡಿ ಓಡಿ ಹೋಗುತ್ತಿದ್ದೆ. ಓಡುತ್ತಿರುವಾಗ ಎದುರಿಗೆ ಸಿಕ್ಕಿದ್ದು ವಿಶಾಲವಾದ, ಕಣ್ಣು ಹಾಯಿಸಿದಷ್ಟು ನೀರಿದ್ದ ನೀಲಿ ಸಮುದ್ರ. ಅದನ್ನು ದಾಟಿಕೊಂಡು ಮುಂದೆ ಬಂದರೆ ಬೃಹತ ಮರಗಳಿಂದ ಕೂಡಿದ ದೊಡ್ಡ ಕಾಡು. ನಾನು ಯಾವುದಕ್ಕೂ ಹಿಂಜರಿಯಲಿಲ್ಲ. ಕಾಡಿನಲ್ಲಿ ದಾರಿ ಸವೆಸಲೆಂದು ಬೇಗ ಬೇಗ ನಡೆಯುತ್ತಿದ್ದೆ. ಮುಳ್ಳು ಕಂಟಿಗಳು ಮೈಗೆಲ್ಲ ಪರಚುತ್ತ ಗಾಯಗಳನ್ನುಂಟು ಮಾಡುತ್ತಿದ್ದವು. ಕೈ ಕಾಲುಗಳಲ್ಲಿ ಪರಚಿದ ಗಾಯಗಳಾಗಿ ರಕ್ತ ಒಸರುತ್ತಿತ್ತು. ಹಾಗೆ ಮುಂದೆ ಹೋದಾಗ ಎದುರಾದದ್ದು ಸಿಂಹ. ನನಗೆ ಗಾಬರಿಯಾಗಿ ಒಂದು ದೊಡ್ಡ ಮರದ ಹಿಂದೆ ಅವಿತುಕೊಂಡೆ. ಒಂದೆರಡು ನಿಮಿಷಗಳ ನಂತರ ಇಣುಕಿ ನೋಡಿದಾಗ ಮೊದಲಿದ್ದ ಜಾಗದಲ್ಲಿ ಸಿಂಹವಿರಲಿಲ್ಲ. ಆದರೆ ನನ್ನ ಹಿಂದೆ ಯಾರೋ ಉಸಿರಾಡಿದಂತಾಗುತ್ತಿತ್ತು. ತಿರುಗಿ ನೋಡಿದಾಗ ನನ್ನ ಬೆನ್ನ ಹಿಂದೆಯೇ ಸಿಂಹ ಕುಳಿತಿತ್ತು, ಗಾಬರಿಯಲ್ಲಿ ನನಗೆ ಸಾಧ್ಯವಾದಷ್ಟು ವೇಗದಲ್ಲಿ ತಿರುಗಿಯೂ ನೋಡದೆ ಓಡಿದೆ. ನನ್ನ ಶಕ್ತಿಯೆಲ್ಲ ಉಡುಗಿ ಇನ್ನೊಂದು ಹೆಜ್ಜೆ ಇಡಲು ಸಹ ಸಾಧ್ಯವಾಗದೆ ಕುಸಿದು ಬಿದ್ದೆ. ಬಳಲಿಕೆಯಿಂದ ಬಾಯಾರುತ್ತಿತ್ತು. ಉಸಿರಾಡಲು ಸಹ ಆಗುತ್ತಿರಲಿಲ್ಲ. ಒಮ್ಮಿಂದೊಮ್ಮೆಲೆ ನಾನಿದ್ದ ಪ್ರದೇಶವೆಲ್ಲ ಪ್ರಭಾವಳಿಗಳಿಂದ ತುಂಬಿ ಬೆಳ್ಳಗೆ ಬೆಳಕಾಯಿತು. ಕಾಡು ಮಾಯವಾಗಿ ಬಗೆಬಗೆಯ ವರ್ಣ ಚಿತ್ತಾರದ ಹೂವಿನ ಗಿಡಗಳು ನಳನಳಿಸಿದವು. ನನ್ನ ಮೈಯಿಂದ ಜಿನುಗುತ್ತಿದ್ದ ರಕ್ತ , ನನ್ನ ಮುಖದಲ್ಲಿದ್ದ ಬಳಲಿಕೆ ಮಾಯವಾಗಿ ನಾನು ಮೊದಲಿನಂತೆ ಸುಂದರವಾಗಿ ಕಂಗೊಳಿಸತೊಡಗಿದೆ. ನಾ ಕಾಲಿಟ್ಟ ಜಾಗದಿಂದ ದೂರ ರಸ್ತೆಯವರೆಗೂ ನೆಲದ ಮೇಲೆ ಗುಲಾಬಿ ಹೂವಿನ ಪಕಳೆಗಳು ಹಾಸಿಗೆ ಹಾಸಿದವು. ದೂರದಿಂದ ಅವನು ಬರುತ್ತಿರುವುದು ಕಾಣಿಸಿತು. ನನ್ನ ಮೈಯೆಲ್ಲಾ ಝಂ ಎಂದು ವಿದ್ಯುತ್ ಸಂಚಾರವಾದಂತಾಯಿತು. ಸಿನಿಮಾ ಹೀರೋನಂತೆ ಅವನು ಬರುತ್ತಿದ್ದ ಠೀವಿ, ಗತ್ತು, ಗಮ್ಮತ್ತು ಕಣ್ಣನ್ನು ಸೆಳೆಯುತ್ತಿದ್ದವು. ನಸುನಗುತ್ತಾ ನನ್ನೆಡೆಗೆ ಬಂದು ನನ್ನ ಮುಂಗುರಳನ್ನು ಸರಿಸುತ್ತ ನನ್ನ ಕಣ್ಣುಗಳನ್ನೇ ನೋಡತೊಡಗಿದ. ಅವನ ಎದೆಗೆ ಒರಗಿದೆ. ಎಲ್ಲಿಲ್ಲದ ಶಾಂತಿ ನೆಮ್ಮದಿ ಚೇತರಿಕೆ. ಇವನೊನೊಬ್ಬನಿದ್ದರೆ ಸಾಕು ನನ್ನ ನೋವುಗಳೆಲ್ಲ ಪರಿಹಾರ ಎಂಬ ಭಾವ’.
(ಮುಂದುವರೆಯುವುದು….)