ಸಂಜೀವಿನಿ- 5 — ಹಾಸ್ಟೆಲಿನ ಒಳಗೆ ಬಲಗಾಲಿಟ್ಟದ್ದಾಯ್ತು
ಹಿಂದಿನ ಅಧ್ಯಾಯದಲ್ಲಿ…
ಪ್ರಮಥನ ಜೊತೆಗಿನ ಭೇಟಿಯ ನಂತರ ಪುನರಳಿಗೆ ಹಳೆಯ ನೆನಪುಗಳು ಮರುಕಳಿಸುತ್ತವೆ. ಪಿಯುಸಿ ನಲ್ಲಿ ಚೆನ್ನಾಗಿ ಅಂಕಗಳೊಂದಿಗೆ ಪಾಸಾಗಿ ಮುಂದೇನು ಮಾಡಬೇಕೆಂದು ಗೊಂದಲಕ್ಕೊಳಗಾಗುತ್ತಾಳೆ. ಕರ್ಣ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿದ್ದರಿಂದ ತಾನು ಸಹ ಬೆಂಗಳೂರಿಗೆ ಸಿಈಟಿ ಕೋನ್ಸೆಲ್ಲಿಂಗ್ ಗೆ ಹೋಗುತ್ತಾಳೆ. ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಇ & ಇ ಸಿಗುತ್ತದೆ. ರಜೆಗಳು ಮುಗಿದು ಕಾಲೇಜು ಶುರುವಾಗುವ ಹಿಂದಿನ ದಿನ, ಭಾರವಾದ ಮನಸಿನಿಂದ ಅಮ್ಮನನ್ನು ಬಿಟ್ಟು ದಾವಣಗೆರೆಗೆ ಮುಂದಿನ ವಿದ್ಯಾಭ್ಯಾಸಕ್ಕೆಂದು ತೆರಳುತ್ತಾಳೆ.
ಮುಂದೆ ಓದಿ…
ನನ್ನ ಕರೆದೊಯ್ಯಲು ಸ್ಟೇಷನ್ ಗೆ ಕಿಟ್ಟು ಮಾಮ ಬಂದಿದ್ದರು. ಹಾಸ್ಟೆಲ್ ವರೆಗೂ ಬಂದು ವಾರ್ಡನ್ ಪರಿಚಯ ಮಾಡಿಸಿ ನನ್ನ ರೂಮಿನಲ್ಲಿ ಸಾಮಾನುಗಳನ್ನು ಎತ್ತಿಟ್ಟು ನಂತರ ಹೊರಟರು. ಅವರಾದರೂ ಇದ್ದಾರಲ್ಲ ಎಂಬುದೊಂದೇ ನೆಮ್ಮದಿ.
ಕಿಟ್ಟು ಮಾಮ ಹೋದ ನಂತರ ಮನಸು ಖಾಲಿಯಾದಂತೆನಿಸಿತು . ನನ್ನ ರೂಮ್ ಮುಂದೆ ನಿಂತುಕೊಂಡು ಹಾಸ್ಟೆಲನ್ನು ಅವಲೋಕಿಸತೊಡಗಿದೆ.
ಪ್ರಶಾಂತವಾಗಿತ್ತು. ಆಯತಾಕಾರದಲ್ಲಿ ಎದುರು ಬದುರಾಗಿ ನಿರ್ಮಿಸಿದ ಕೋಣೆಗಳು, ಸುಮಾರು ಏಳೆಂಟು ರೂಂಗಳಿರಬಹುದೇನೋ….. ಅಷ್ಟೇ. ಒಂದು ಮೂಲೆಯಲ್ಲಿ ಹೆಚ್ಚಿನ ಶೌಚಾಲಯ ಮತ್ತು ಸ್ನಾನ ಗೃಹಗಳು. ಅಚ್ಚು ಕಟ್ಟಾಗಿತ್ತು ಎಲ್ಲವು. ಮಧ್ಯೆ ಓಪನ್ ರೂಫ್. ನಾವಿದ್ದುದು ಫಸ್ಟ್ ಫ್ಲೋರ್ ನಲ್ಲಿ. ಕೆಳಗಡೆ ಇದೆ ತರಹದ ನಿರ್ಮಾಣದಲ್ಲಿ ಕಟ್ಟಿದ ವೃದ್ದಾಶ್ರಮ. ನನ್ನ ರೂಂ ಒಳಗಡೆ ಬಂದೆ. ಒಂದರ ಪಕ್ಕ ಮತ್ತೊಂದರಂತೆ ಮೂರೂ ಮಂಚಗಳಿದ್ದವು. ಎರಡು ಮಂಚಗಳ ನಡುವೆ ಒಬ್ಬರು ನಡೆದುಕೊಂಡು ಹೋಗುವಷ್ಟು ಜಾಗವಿತ್ತು. ಮಂಚಗಳಿಗೆ ಎದುರಾಗಿ ಒಬ್ಬೊಬ್ಬರಿಗೂ ತಲಾ ಒಂದರಂತೆ ಒಟ್ಟು ಮೂರೂ ಕಪಾಟುಗಳು. ಇನ್ನೆರಡು ಮಂಚಗಳಲ್ಲಿ ಅದಾಗಲೇ ಯಾರೋ ಇದ್ದರೆಂದು ಅಸ್ತವ್ಯಸ್ತವಾದ ಹೊದಿಕೆ, ತಲೆದಿಂಬುಗಳು ಹೇಳುತ್ತಿದ್ದವು. ಕಪಾಟುಗಳ ಪಕ್ಕಕ್ಕೆ ಒಂದು ಸ್ಟಡಿ ಟೇಬಲ್ ಮತ್ತು ಕುರ್ಚಿ. ಮಂಚಗಳಿಂದ ಕೊಂಚ ದೂರಕ್ಕೆ ಗ್ಯಾಸ್ ಕಟ್ಟೆಯಿತ್ತು ಕಿಟಕಿಗೆ ಹತ್ತಿರವಾಗಿ. ಕಟ್ಟೆಯ ಮೇಲೆ ಎಲೆಕ್ಟ್ರಿಕ್ ಸ್ಟವ್, ಕುಡಿದಿಟ್ಟ ಚಹಾ ಕಪ್ ಗಳು ಕಾಣಿಸುತ್ತಿದ್ದವು. ನನ್ನ ಬ್ಯಾಗ್ ಗಳನ್ನೂ ಮಂಚದ ಕೆಳಗೆ ತೂರಿ ಮಂಚದ ಮೇಲೆ ಕುಳಿತುಕೊಂಡೆ. ಒಂಟಿ ಎಂಬ ಭಾವನೆ. ಅಮ್ಮ ನೆನಪಾಗುತ್ತಿದ್ದರು. ಬಂದಾಗಿನಿಂದ ಅಮ್ಮನ ಜೊತೆ ಮಾತನಾಡಿರಲಿಲ್ಲ. ನಾನು ಸುರಕ್ಷಿತವಾಗಿ ಬಂದು ತಲುಪಿದ್ದಾಗಿ ಕಿಟ್ಟು ಮಾಮ ತಮ್ಮ ಮೊಬೈಲಿನಿಂದ ಕಾಲ್ ಮಾಡಿ ಹೇಳಿದ್ದರು. ಆಚೆ ವರಾಂಡಕ್ಕೆ ಬಂದು ರಸ್ತೆಗೆ ಮುಖ ಮಾಡಿದ ಕಿಟಕಿಯಲ್ಲಿ ಇಣುಕಿದೆ, ದೂರ ರಸ್ತೆಯವರೆಗೂ ಕಾಯಿನ್ ಬೂತ್ ಹುಡುಕುವ ಪ್ರಯತ್ನದಲ್ಲಿ….. ಹಾಸ್ಟೆಲ್ ಪಕ್ಕದಲ್ಲೇ ಚಿಕ್ಕ ಟೀ ಅಂಗಡಿ ಕಾಣಿಸಿತು ಅಲ್ಲಿ ಇದ್ದರೂ ಇರಬಹುದೆಂದು ಊಹಿಸಿದೆ. ರೂಂ ಗೆ ಬೀಗ ಹಾಕಲು ನನ್ನ ಬಳಿ ಕೀಲಿ ಕೈ ಇರಲಿಲ್ಲ. ವಾರ್ಡನ್ ಆಫೀಸ್ ಗೆ ಹೋಗಿ ಸ್ಪೇರ್ ಕೀ ತೆಗೆದುಕೊಂಡು ನನ್ನ ಪರ್ಸ್ ಎತ್ತಿಕೊಂಡು ರೂಂ ಗೆ ಬೀಗ ಹಾಕಿ ಹೊರಟೆ.
ನನ್ನ ಊಹೆಯಂತೆಯೇ ಅಲ್ಲಿ ಕಾಯಿನ್ ಬಾಕ್ಸ್ ಇತ್ತು. ಮನೆಯ ನಂಬರ್ ಡಯಲ್ ಮಾಡಿದೆ. ಹಲೋ ಎಂದ ಅಮ್ಮನ ದ್ವನಿ ಕೇಳಿ ಕಣ್ಣಿರು ತಂತಾನೆ ಉದುರಿತು. ನಾನು ಅಳುತ್ತಿರುವುದು ಗೊತ್ತಾದರೆ ಮೊದಲೇ ಬೇಜಾರಾಗಿರುವ ಅಮ್ಮ ಇನ್ನೂ ಹೆಚ್ಚು ಬೇಜಾರು ಮಾಡಿಕೊಳ್ಳುತ್ತಾರೆಂದು ಅಳು ನುಂಗಿಕೊಂಡು ಮಾತನಾಡಿದೆ. ಆದರೆ ಅಮ್ಮನ ದ್ವನಿಯಲ್ಲಿಯೇ ಗೊತ್ತಾಗುತ್ತಿತ್ತು ಅವರು ನನ್ನಂತೆಯೇ ಅಳು ನುಂಗಲು ಯತ್ನಿಸುತ್ತಿದ್ದಾರೆಂದು. ಹಾಸ್ಟೆಲ್ ಪಕ್ಕವೇ ಫೋನ್ ಇದೆ, ದಿನವು ಕಾಲ್ ಮಾಡುತ್ತೇನೆ ಎಂದು ಹೇಳಿದಾಗ ಅಮ್ಮನಿಗೆ ಕೊಂಚ ಸಮಾಧಾನ. ಮರಳಿ ರೂಮಿಗೆ ಬಂದಾಗಲೂ ಎರಡು ಮಂಚಗಳು ಮೊದಲಿನ ಸ್ಥಿತಿಯಲ್ಲಿಯೇ ಇದ್ದವು. ಮಾರನೆ ದಿನದಿಂದ ಕಾಲೇಜು ಶುರುವಾಗುವುದರಲ್ಲಿತ್ತು. ನನ್ನ ಎಲ್ಲ ವಸ್ತುಗಳನ್ನು ಜೋಡಿಸಿಕೊಳ್ಳತೊಡಗಿದೆ. ಬಟ್ಟೆಗಳು ಪುಸ್ತಕಗಳನ್ನು ಕಪಾಟಿನಲ್ಲಿ ಜೋಡಿಸಿ ಇಟ್ಟೆ. ಹಾಸ್ಟೆಲ್ ನಲ್ಲಿ ಹಾಕಿಕೊಳ್ಳಲು ಬಟ್ಟೆಗಳು, ಮಾರನೆ ದಿನ ಕಾಲೇಜಿಗೆ ಹೊಸ ಚುಡಿದಾರ ಎಲ್ಲವನ್ನು ಮಂಚದ ಒಂದು ಬದಿಗೆ ನೇತು ಹಾಕಿದೆ. ಬಟ್ಟೆ ಬದಲಾಯಿಸಲೆಂದು ಹಿಂಜರಿಯುತ್ತಲೇ ಬಾಥರೂಮಿಗೆ ಹೋದೆ. ಬೇರೆಯವರ ಬಾಥರೂಮುಗಳೆಂದರೆ ಅದೇನೋ ಮನಸಿಗೆ ಒಂಥರಾ ಕಿರಿಕಿರಿ . ಆದರೆ ಇದು ಶುಚಿಯಾಗಿದ್ದರಿಂದ ನನ್ನ ಹಿಂಜರಿಕೆ ಹೊರಟು ಹೋಯಿತು.
ಮಂಚಕ್ಕೆ ಕೇವಲ ಬೆಡ್ , ದಿಂಬು ಮಾತ್ರ ಇತ್ತು. ನಾನು ಬೇಡ ಎಂದರೂ ಒತ್ತಾಯ ಮಾಡಿ ಅಮ್ಮ ಬೆಡ್ ಶೀಟ್ ಮತ್ತು ದಿಂಬಿನ ಕವರುಗಳನ್ನು ಹಾಕಿದ್ದರು. ಅಮ್ಮನಿಗೆ ಎಲ್ಲ ಗೊತ್ತಿರುತ್ತದೆ. ಪ್ರೀತಿಯ ಅಮ್ಮನಿಗೊಂದು ಥ್ಯಾಂಕ್ಸ್ ಹೇಳಿ ಎಲ್ಲವನ್ನು ಝಾಡಿಸಿ ಹೊದಿಕೆ ಹಾಸಿ, ದಿಂಬಿಗೆ ಕವರ್ ಹಾಕಿ ಇಟ್ಟೆ.
ಗಂಟೆ 5 ಆಗಿತ್ತು. ಬೆಳಗ್ಗೆ ಹೊರಡುವಾಗ ಊಟ ಮಾಡಿದ್ದು ಬಿಟ್ಟರೆ ನಂತರ ಏನು ತಿಂದಿರಲಿಲ್ಲ. ಅಮ್ಮ ಟ್ರೈನಿನಲ್ಲಿ ತಿನ್ನಲು ಕಟ್ಟಿ ಕೊಟ್ಟಿದ್ದ ಚಿತ್ರಾನ್ನ ಡಬ್ಬದಲ್ಲಿ ಹಾಗೆ ಇತ್ತು. ಈಗ ಹೊಟ್ಟೆ ಚಿರಗುಟ್ಟತೊಡಗಿತ್ತು. ಬ್ಯಾಗ್ ತೆಗೆದು ಬೇಸನ ಉಂಡಿ ತಿಂದೆ. ನಂತರ ಏನು ಮಾಡಲು ತೋಚದೆ ಆಚೆ ಬಂದು ಕೆಳಗಡೆ ನೋಡುತ್ತಾ ನಿಂತೆ. ಅಜ್ಜಿಯೊಬ್ಬರು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರು. ನಾನು ಹಾಗೆ ನಿಂತಿರುವಾಗ ಹುಡುಗಿಯೊಬ್ಬಳು ಬಂದಳು. ಸೀರೆ ಉಟ್ಟಿದ್ದಳು. ತುಂಬಿಕೊಂಡ ಅವಳ ಕೆನ್ನೆ ಕೆಂಪು ಕೆಂಪಗೆ ಇತ್ತು. ಮುಖದಲ್ಲಿ ಸೌಮ್ಯವಾದ ಗಂಭೀರ ಕಳೆ. ನೋಡಿದರೆ ಮತ್ತೆ ತಿರುಗಿ ನೋಡಬೇಕೆಂಬ ಸುಂದರಿ. ಬಂದವಳೇ ನೇರ ಹೋಗಿ ನಮ್ಮ ರೂಂ ಮುಂದೆ ನಿಂತು ಹ್ಯಾಂಡ್ ಬ್ಯಾಗಿನಲ್ಲಿ ಕೀಗಾಗಿ ತಡಕಾಡತೊಡಗಿದಳು. ನಾನು ಇನ್ನೇನು ಅವಳನ್ನು ಹೋಗಿ ಮಾತನಾಡಿಸಬೇಕೆನ್ನುವಷ್ಟರಲ್ಲಿ ಅವಳ ಫೋನ್ ಸದ್ದಾಯಿತು. ಅತ್ತ ಕಡೆ ಅವಳ ಅಕ್ಕ ಎಂದು ತೋರಿತು. ಅವರಿಗೆ ಹೇಳುತ್ತಿದ್ದಳು ಕೀ ಸಿಗುತ್ತಿಲ್ಲವೆಂದು. ನಾನು ಮಧ್ಯೆ ಹೋಗಿ ಮಾತನಾಡಿಸಿದರೆ ಏನೆಂದುಕೊಳ್ಳುತ್ತಾಳೋ ಎಂದು ಸುಮ್ಮನಾದೆ. ಇಷ್ಟೊತ್ತು ರೂಂ ಚಿಲಕದ ಕಡೆಗೆ ಗಮನ ಕೊಟ್ಟಿರದ ಅವಳು ಈಗ ಬರಿ ಚಿಲಕವಿದ್ದುದನ್ನು ನೋಡಿ ಗಾಬರಿಯಾದಳು. ಮತ್ತೆ ಕಾಲ್ ಮಾಡುತ್ತೇನೆ ಎಂದು ಹೇಳುತ್ತಾ ಬಾಗಿಲು ತೆಗೆದು ಒಳ ನಡೆದಳು. ನಾನು ಅವಳ ಹಿಂದೆಯೇ ಹೋದೆ. ಸುತ್ತಲು ಕಣ್ಣಾಡಿಸಿದ ಅವಳಿಗೆ ಖಾಲಿ ಮಂಚ ಮೊದಲಿನಂತಿರದೆ ಹೊಸ ರೂಮೇಟ್ ನ ಆಗಮನವನ್ನು ಸಾರುತ್ತಿತ್ತು. ಹಿಂದಿನಿಂದ ನಾನು ಮೆಲ್ಲಗೆ ಹೈ ಎಂದೆ.
ಹಿಂದೆ ತಿರುಗಿ ನನ್ನ ನೋಡಿ ನಸು ನಗುತ್ತ ನುಡಿದಳು.
“ಓಹ ನೀವಾ ಬಂದಿದ್ದು. ವಾರ್ಡನ್ ಹೇಳಿದ್ದರು ನೀವು ಇವತ್ತು ಬರ್ತೀರಾ ಅಂತ. ಆದ್ರೆ ನನಗೆ ಸೌಮ್ಯ ಎಲ್ಲಿ ಬೆಳಗ್ಗೆ ಬೀಗ ಹಾಕ್ದೆ ಹಾಗೆ ಹೋದಳೆನೋ ಅಂತ ಗಾಬರಿಯಾಯ್ತು” ಎಂದಳು.
ನನ್ನ ಇನ್ನೊಬ್ಬ ರೂಮೇಟ್ ಹೆಸರು ಸೌಮ್ಯ ಎಂದು ತಿಳಿಯಿತು.
“ನನ್ನ ಹೆಸರು ಪುನರ್ವಸು. ಬಿಡಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿದೆ. ನಾ ರೂಮಿಗೆ ಬಂದಾಗ ಸುಮಾರು 4 ಗಂಟೆಯಾಗಿತ್ತು“.
“ಪುನರ್ವಸು.. ತುಂಬಾ ಮುದ್ದಾಗಿದೆ ಹೆಸರು. ನಾನು ಆಶಾ ಅಂತ ಟೀಚರ್ ಆಗಿ ಕೆಲಸ ಮಾಡ್ತಿದೀನಿ.”
ಅವಳ ಮುಖದಲ್ಲಿದ್ದ ಗಂಭಿರ್ಯತೆಯ ಅರ್ಥವಾಯಿತು.
ನನ್ನ ವಿವರಗಳನ್ನು ಕೇಳುತ್ತ ಅವಳು ಹ್ಯಾಂಡ್ ಬ್ಯಾಗನ್ನು ತನ್ನ ಮಂಚದ ಮೇಲಿಟ್ಟು ತಲೆ ಕೂದಲನ್ನು ಮೇಲಕ್ಕೆ ಹಾಕಿ ಕ್ಲಿಪ್ ಹಾಕಿಕೊಂಡಳು. ಬಟ್ಟೆಗಳನ್ನು ಎತ್ತಿಕೊಂಡು ಬದಲಾಯಿಸಲೆಂದು ಬಾಥರೂಮಿಗೆ ಹೋದಳು. ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳಿಗೆ ಪಾಠ ಮಾಡಿ ಪ್ರವೀಣತೆಯಿದ್ದ ಆಕೆ ನನ್ನೊಂದಿಗೆ ನಗು ನಗುತ್ತ ಚೆನ್ನಾಗಿಯೇ ಮಾತನಾಡಿದಳು. ನನಗೆ ಏನೋ ಒಂದು ರೀತಿಯ ಮುಜುಗರ. ಅದೂ ಅಲ್ಲದೆ ಅವಳು ಟೀಚರ್ ಎಂದು ಗೊತ್ತಾದ ಮೇಲೆ ಇನ್ನೂ ಹೆಚ್ಚಿನ ಮುಜುಗರ. ಸ್ವಲ್ಪ ಹೊತ್ತು ಮಾತನಾಡಿದ ನಂತರ ಅವಳು ಫೋನಿನಲ್ಲಿ ಮಾತನಾಡುತ್ತ ಆಚೆ ಹೋದಳು. ಬಹುಶಃ ತನ್ನ ಅಕ್ಕನಿಗೆ ಇರಬಹುದು. ಮತ್ತೆ ನಾನು ಒಂಟಿ. ಸೌಮ್ಯ ಎನ್ನುವವಳು ಹೇಗಿರಬಹುದೋ… ಅವಳಾದರೂ ನನ್ನ ತರಹ ವಿದ್ಯಾರ್ಥಿನಿಯಾಗಿದ್ದರೆ ಒಳ್ಳೆಯದಿರುತ್ತದೆ ಎಂದು ಯೋಚಿಸುತ್ತ ಹಾಗೆ ಮಂಚದ ಮೇಲೆ ಉರುಳಿದೆ.
ಸಂಜೆಯಾಗತೊಡಗಿದ ಹಾಗೆ ಇಷ್ಟೊತ್ತು ಬೀಗ ಹಾಕಿದ್ದ ಎಲ್ಲ ರೂಮಿನ ಬಾಗಿಲುಗಳು ತೆರೆಯತೊಡಗಿದವು. ಪ್ರಶಾಂತವಾಗಿದ್ದ ಹಾಸ್ಟೆಲ್ “ಹೌದೇನೆ“.. “ಏನು ಗೊತ್ತ” ಎಂದೆಲ್ಲ ಮಾತುಗಳಿಂದ ಗಿಜಿ ಗಿಜಿ ಎನ್ನತೊಡಗಿತು. ಆಶಾ ಫೋನಿನಲ್ಲಿ ಮಾತು ಮುಗಿಸಿ ಬಂದು ಏನೋ ಬರೆಯಲು ಕೂತಳು. ಅವಳು ಬಂದಿದ್ದರಿಂದ ನಾನು ಎದ್ದು ಕುಳಿತೆ. ಅಷ್ಟರಲ್ಲೇ ಯಾರೋ ಇನ್ನೊಬ್ಬ ಹುಡುಗಿ ಬಂದು ಸೌಮ್ಯಳ ಮಂಚದ ಮೇಲೆ ಕುಳಿತಳು. ಪಕ್ಕದ ರೂಂ ಎಂದೆನಿಸಿತು. ಬಂದವಳೇ ನನ್ನೊಂದಿಗೆ ಮಾತಿಗಿಳಿದಳು. ನನ್ನ ಹೆಸರು, ಊರು ಎಲ್ಲ ಪ್ರವರ ಕೇಳಿ ನಾನು ಕೇಳದೆಯೇ ತನ್ನ ಬಗ್ಗೆಯೂ ಹೇಳಿಕೊಂಡಳು. ಆಶಾ ಅವಳ ಮಾತಿಗೆಲ್ಲ ಬರಿ ಹುಂ, ಊಹುಂ ಎಂದುತ್ತರಿಸುತ್ತಿದ್ದಳು. ಮಾತಿನ ಮಲ್ಲಿ ಎಂದೆನಿಸಿತು. ಆದರೆ ಸಮಯ ಕಳೆಯದೆ ಬೋರ್ ಹೊಡೆಯುತ್ತಿದ್ದ ನನಗೆ ಆಕೆ ಆಶಾಗಿಂತ ಹೆಚ್ಚು ಅಪ್ಯಾಯಮಾನವಾಗಿ ಕಂಡಳು. ಅವಳ ಹೆಸರು ರಂಜಿತಾ.
“ಎಲ್ಲರ ಪರಿಚಯ ಮಾಡಿಸುತ್ತೇನೆ ಬಾ” ಎಂದು ನನ್ನ ಕೈ ಹಿಡಿದು ಎಳೆದುಕೊಂಡು ಹೋದಳು ರಂಜಿತಾ.
ನನ್ನ ಪಕ್ಕದ ರೂಮಿನಲ್ಲಿ ರಂಜಿತಾ ಮತ್ತು ಸುನೀತಾ. ಸುನೀತಾ ಇನ್ನೂ ಬಂದಿರಲಿಲ್ಲ. ನಮ್ಮ ರೂಮಿಗಿಂತ ಚಿಕ್ಕದಾಗಿದ್ದರಿಂದ ಅಲ್ಲಿ ಕೇವಲ ಎರಡು ಮಂಚಕ್ಕಷ್ಟೇ ಜಾಗವಿತ್ತು. ಸುನೀತಾ ಯಾವುದೋ ಪ್ರೈವೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ರಂಜಿತಾ ಓದುತ್ತಿದ್ದಳು. ಅವರ ಪಕ್ಕದ ರೂಮನಲ್ಲಿ ಮೆಡಿಕಲ್ ಓದುತ್ತಿರುವ ಭಾಗ್ಯ. ಭಾಗ್ಯ ಡಬಲ್ ದುಡ್ಡು ಕೊಟ್ಟು ಯಾರ ಜೊತೆಯೂ ಶೇರ್ ಮಾಡದೆ ತಾನೊಬ್ಬಳೆ ವಾಸಿಸುತ್ತಿದ್ದಳು. ನೋಡಿದರೆ ಗೊತ್ತಾಗುತ್ತಿತ್ತು ಸಿರಿವಂತೆ ಎಂದು. ಅವಳ ರೂಮನಲ್ಲಿ ಕುಕ್ಕರ್ ಮತ್ತು ಅಡಿಗೆಗೆ ಬೇಕಾದ ಪಾತ್ರೆಗಳು, ಗ್ಯಾಸ್ ಸ್ಟವ್ ಎಲ್ಲ ಇತ್ತು. ನಮ್ಮನ್ನು ಮಾತನಾಡಿಸಲು ಅವಳೇನು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಅವಳ ರೂಮನಿಂದ ಆಚೆ ಬರುವಾಗ ಅವಳು ಮೂಡಿ ಎಂದು ರಂಜಿತ ಕಿವಿಯಲ್ಲಿ ಪಿಸುಗುಟ್ಟಿದಳು. ಹಾಗೆ ಎಲ್ಲರ ರೂಮಿಗೂ ಕರೆದೊಯ್ದಳು. ಕೆಲವರು ಇನ್ನೂ ಹಿಂತಿರುಗಿರಲಿಲ್ಲ.
ನಾನು ಕೆಳಗಡೆ ವೃದ್ದಾಶ್ರಮಕ್ಕೆ ಹೋಗೋಣವೆಂದೆ. ಬಂದಾಗಿನಿಂದಲೂ ಏನೋ ಕುತೂಹಲ ಅವರನ್ನೆಲ್ಲ ಮಾತನಾಡಿಸಲು. ಅಜ್ಜಿಯರು ಮಾತು ಶುರು ಮಾಡಿದರೆ ನಿಲ್ಲಿಸುವುದಿಲ್ಲ ಎಂದೆನ್ನುತ್ತ ಕೆಳಗೆ ಕರೆದೊಯ್ದಳು ರಂಜಿತಾ. ಬೇರೆ ವೃದ್ದಾಶ್ರಮಗಳಂತೆ ಎಲ್ಲರನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕದೆ ಒಂದೊಂದು ಕೋಣೆಯಲ್ಲಿ ಇಬ್ಬರು ಅಜ್ಜಿಯರು ವಾಸಿಸುವಂತೆ ಮಾಡಿದ್ದರು. ಅವರವರ ಕೋಣೆಯಲ್ಲಿ ಪ್ರತ್ಯೇಕವಾಗಿ ಟಿವಿ, ಮಂಚ ಎಲ್ಲವು ಇದ್ದವು. ಒಂದು ದೊಡ್ಡ ಕೋಣೆಯನ್ನು ಅಡುಗೆ ಕೋಣೆಯನ್ನಾಗಿ ಪರಿವರ್ತಿಸಿದ್ದರು. ಅವರಿಗೆಲ್ಲ ಒಬ್ಬ ಅಡಿಗೆಯವಳು. ಓಡಾಡಲು ಸಶಕ್ತರಾಗಿದ್ದ ಅಜ್ಜಿಯರೆಲ್ಲ ತರಕಾರಿ ಹೆಚ್ಚಿಕೊಡುವುದು, ಪಾತ್ರೆಗಳನ್ನು ತೊಳೆಯುವುದು ಹೀಗೆ ತಮ್ಮ ಕೈಲಾದಷ್ಟು ಅಡಿಗೆಯವಳಿಗೆ ಸಹಾಯ ಮಾಡುತ್ತಿದ್ದರು. ನಾವು ನೇರ ಅಡುಗೆ ಮನೆಗೆ ಹೋದೆವು. ಸಂಜೆಯಾದ್ದರಿಂದ ಹಲವು ಅಜ್ಜಿಯರು ಅಲ್ಲಿರುತ್ತಾರೆಂಬ ರಂಜಿತಾಳ ಊಹೆ ನಿಜವಾಗಿತ್ತು. ಒಂದಿಬ್ಬರು ತರಕಾರಿ ಹೆಚ್ಚುತ್ತಿದ್ದರು. ಒಂದಿಬ್ಬರು ಚಪಾತಿ ಮಾಡುತ್ತಿದ್ದರೆ ಇನ್ನಿಬ್ಬರು ಬೇಯಿಸುತ್ತಿದ್ದರು. ಸ್ವಲ್ಪ ದೂರದಲ್ಲಿ ನಾಲ್ಕೈದು ಜನ ಸೇರಿ ಸೊಪ್ಪು ಬಿಡಿಸುತ್ತಿದ್ದರು. ಮೆಂತ್ಯ ಸೊಪ್ಪಿನಂತೆ ಕಂಡಿತು. ರಂಜಿತಾ ಮಧ್ಯೆ ನಿಂತು ಎಲ್ಲರ ಗಮನ ಸೆಳೆಯಲು “ಪ್ರೀತಿಯ ಅಜ್ಜಿಯರೇ” ಎಂದು ಶುರು ಮಾಡಿದಳು. ಕೆಲಸ ಮಾಡುತ್ತಲೇ ಎಲ್ಲರು ಅವಳತ್ತ ತಿರುಗಿದರು. ಭಾಷಣದ ಶೈಲಿಯಲ್ಲಿ ಶುರುವಾದ ಅವಳ ಮಾತು ನನ್ನ ಪರಿಚಯದೊಂದಿಗೆ ಮುಕ್ತಾಯಗೊಂಡಿತು. ಅಜ್ಜಿಯೊಬ್ಬರು ಅವಳನ್ನು ಕರೆದಿದ್ದರಿಂದ ಬಂದೆ ಬಂದೆ ಎನ್ನುತ್ತಾ ಅವರತ್ತ ಓಡಿದಳು. ನಾನು ಮೆಂತ್ಯ ಸೊಪ್ಪು ಬಿಡಿಸುತ್ತಿದ್ದ ಗುಂಪಿನತ್ತ ಹೋಗಿ ಕುಳಿತೆ.
ಎಂದಿಗೂ ವೃದ್ದಾಶ್ರಮವನ್ನೇ ನೋಡಿರದ ನನ್ನ ಕಲ್ಪನೆಯ ವೃದ್ದಾಶ್ರಮವೇ ಬೇರೆಯಿತ್ತು. ಸಾಲು ಮಂಚಗಳು, ವಟಗುಟ್ಟುತ್ತಿರುವ ಮುದುಕರು, ಶುಚಿತ್ವವಿಲ್ಲದೆ ಎಲ್ಲೆಲ್ಲಿಯೂ ಹಾರಾಡುವ ನೊಣಗಳು, ವಾಸನೆ…. ಹೀಗೆ ಸಿನಿಮಾ ಕಾದಂಬರಿಗಳನ್ನು ಓದಿ ನನ್ನ ಕಲ್ಪನೆಯ ವೃದ್ದಾಶ್ರಮ ಚಿತ್ರಿತವಾಗಿತ್ತು. ಆದರೆ ಇಲ್ಲಿನ ಚಿತ್ರಣವೇ ಬೇರೆ. ಯಾರ ಮುಖದಲ್ಲೂ ಅಸಮಾಧಾನ, ಚಿಂತೆ, ಅತೃಪ್ತಿಯಿರಲಿಲ್ಲ. ಎಲ್ಲರು ಒಂದೇ ಮನೆಯವರಂತೆ ಇದ್ದರು. ಅವರಿಗೆಲ್ಲ 15 ದಿನಗಳಿಗೊಮ್ಮೆ ಡಾಕ್ಟರ ಚೆಕ್ಕಪ ಇರುತ್ತದೆ ಎಂದು ರಂಜಿತಾ ಹೇಳಿದಳು. ಇದರ ಖರ್ಚು ವೆಚ್ಚವನ್ನು ನಮ್ಮ ಹಾಸ್ಟೆಲಿನಿಂದ ಬರುತ್ತಿದ್ದ ದುಡ್ಡಿನ ಜೊತೆಗೆ ನಗರದ ದಾನಿಗಳು ನೀಡಿದ ದುಡ್ಡನ್ನು ಸೇರಿಸಿ ನಿರ್ವಹಿಸುತ್ತಿದ್ದರು. ಅದೂ ಅಲ್ಲದೆ ಒಂದಷ್ಟು ಅಜ್ಜಿಯರಿಗೆ ಪೆನ್ಷನ್ ಬರುತ್ತಿತ್ತಂತೆ. ಅದರಲ್ಲಿ ತಮಗೆ ತಿಳಿದಷ್ಟು ಹಣವನ್ನು ವೃದ್ಧಾಶ್ರಮಕ್ಕೆ ನೀಡಿ ಉಳಿದ ದುಡ್ಡಿನಲ್ಲಿ ಹಣ್ಣು ಹಂಪಲುಗಳನ್ನು ತಂದಿಟ್ಟುಕೊಳ್ಳುತ್ತಿದ್ದರು. ವ್ಯವಸ್ತೆಯೆಲ್ಲ ಚೆನ್ನಾಗಿತ್ತು. ಎಲ್ಲರು ಸುಖವಾಗಿದ್ದರು ನೆಮ್ಮದಿಯಿಂದ.
(ಮುಂದುವರೆಯುವುದು…)