ಸಾವಿರಾರು ವರ್ಷಗಟ್ಟಲೇ ಬದುಕಿ ಬಾಳುತ್ತಿರುವ ಅಮರ ಮರದ ಕತೆ
ಮನುಷ್ಯನ ಜೀವಿತಾವಧಿಯನ್ನು ಸರಾಸರಿಯಾಗಿ ಎಂಬತ್ತರಿಂದ ತೊಂಬತ್ತು ವರ್ಷಗಳು ಎಂದುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ಅರವತ್ತು ದಾಟುವುದು ಸಹ ಸಂದೇಹವೇ.. ಇರಲಿ. ಚೂರು ಆಶಾವಾದಿಗಳಾಗೋಣ. ಈ ನೂರು ವರ್ಷದ ಬಾಳ್ವೆಗೆ ನಾವು ಏನೆಲ್ಲ ಮಾಡ್ತೀವಿ? ಮನೆ, ಕಾರು, ಬಂಗಲೆ, ಎಸ್ಟೇಟ್, ಬ್ಯುಸಿನೆಸ್ ಅಂತೆಲ್ಲ ಆದಷ್ಟು ಆಸ್ತಿ ಮಾಡಿಡಲು ಜೀವನಪೂರ್ತಿ ದುಡಿಯುತ್ತೇವೆ. ಇದ್ದುಳ್ಳವರು ಪ್ರೈವೇಟ್ ಜೆಟ್, ಐಲ್ಯಾಂಡಿನಲ್ಲಿ ಜಾಗ ಇತ್ಯಾದಿಗಳನ್ನೂ ಕೊಳ್ಳುತ್ತಾರೆ. ಇತ್ತೀಚಿಗೆ ಇಲಾನ್ ಮಸ್ಕ್ ನ ದಯೆಯಿಂದ ಆಕಾಶಕ್ಕೆ ಹೋಗಿ ಬರುವುದು ಸಹ ದುಡ್ಡಿದ್ದವರಿಗೆ ಸಾಧ್ಯವಾಗಿದೆ. ಇನ್ನು ಚಂದ್ರನ ಮೇಲೆ ಜಾಗ ಕೊಳ್ಳುವ ದಿನಗಳು ಬಹಳ ದೂರವೇನಿಲ್ಲ. ನೂರು ವರ್ಷದ ಖಾತ್ರಿಯೂ ಇಲ್ಲದ ಮನುಷ್ಯ ಸಾವಿರಾರು ವರ್ಷಗಟ್ಟಲೇ ಈ ಭೂಮಿಯ ಮೇಲೆ ಬದುಕುತ್ತೇನೆ ಎಂಬಂತೆ ಆಸ್ತಿ ಮಾಡುತ್ತಾನೆ. ಬರಿ ಆಸ್ತಿಯೊಂದೇ ಅಲ್ಲ, ದ್ವೇಷ, ಅಸೂಯೆ, ಸಂಬಂಧಗಳಲ್ಲಿ ಬಿರುಕು, ಕೊಲೆ, ದರೋಡೆ ಎಲ್ಲವೂ ನಡೆಯುವುದು ಮನುಷ್ಯನ ಅತಿಯಾದ ಆಸೆಯಿಂದ. ನಮ್ಮಂತೆಯೇ ಪ್ರಾಣಿಗಳು, ಕ್ರೀಮಿ, ಕೀಟಗಳು, ಮರಗಳು, ನದಿ, ಸಮುದ್ರಗಳು ಈ ಭೂಮಿಯ ಒಂದು ಭಾಗ. ಮನುಷ್ಯನಾದ ಮಾತ್ರಕ್ಕೆ, ಕೈ ಕಾಲು ಆಡುತ್ತವೆ ಎಂಬ ಮಾತ್ರಕ್ಕೆ ನಾವು ಇಲ್ಲಿ ಸರ್ವಾಧಿಕಾರ ಚಲಾಯಿಸ ಹೋದರೆ ನಾಳೆ ಅದೇ ನಮಗೆ ಕುತ್ತಾಗುತ್ತದೆ. ನಾಳೆ ಏಕೆ? ಈಗ ಕೋರೋನಾ ಬಂದಿಲ್ಲವೇ? ಯಾರಿಂದ? ಮನುಷ್ಯನ ದುರಾಸೆಯಿಂದ. ಅನುಭವಿಸುತ್ತಿರುವುದು ಮನುಷ್ಯನೇ, ಅರ್ಥಾತ ನಾವೇ!
ಇದೆಲ್ಲ ಪೀಠಿಕೆ ಯಾಕಂದ್ರೆ ನಾನು 2000 ವರ್ಷಗಳಷ್ಟು ಹಳೆಯ ಮರ ನೋಡಿದಾಗ ಅನ್ನಿಸಿದ್ದುದು. ನಾವೇನಾದರೂ ಈ ಮರದ ಹಾಗೆ ಸಾವಿರಾರು ವರ್ಷಗಳ ಕಾಲ ಬದುಕಿದ್ದಿದ್ದರೆ ಏನ್ ಕತೆ ಅಂತ. ಮನುಷ್ಯನ ಈ ದುರಾಸೆಯ ಆಳ ಅರಿತ ದೇವರು ಅದಕ್ಕೆ ಅಂತಲೇ ಮನುಷ್ಯನಿಗೆ ಬರಿ ನೂರು ವರ್ಷ ಕೊಟ್ಟ ಕೈ ತೊಳೆದುಕೊಂಡ ಎಂದು ನನಗನ್ನಿಸುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಬಹಳಷ್ಟು ಹಳೆಯ ಮರಗಳಿವೆ. ಇಲ್ಲಿ ಸಿಗ್ವಿಯಾ (sequoia) ಮರಗಳು ಹೇರಳವಾಗಿ ಬೆಳೆದಿವೆ. ಮುಗಿಲು ಮುಟ್ಟುವಷ್ಟು ಎತ್ತರದ ಈ ಮರ ದಪ್ಪನೆಯ ಒಂದೇ ಒಂದು ಕಾಂಡದ ಮೇಲೆ ಉದ್ದಕ್ಕೆ ಬೆಳೆದು ತುದಿಯಲ್ಲಿ ಸಣ್ಣ ಪುಟ್ಟ ಟೊಂಗೆಗಳಲ್ಲಿ ಎಲೆಗಳನ್ನು ಹೊಂದಿರುತ್ತದೆ. ಈ ಮರಗಳಿಗೆ ಕಡಿಮೆಯೆಂದರೂ 2000 ವರ್ಷಗಳಷ್ಟು ಆಯಸ್ಸು! ಕೆಲವು ಮರಗಳು ತಮ್ಮ ದಪ್ಪನೆಯ ಕಾಂಡದ ವಿಸ್ತೀರ್ಣಕ್ಕೆ ಪ್ರಸಿದ್ಧವಾಗಿರುವಂತಹ ಮರಗಳು.
ಸಿಗ್ವಿಯಾ ನ್ಯಾಷನಲ್ ಪಾರ್ಕ್ (sequoia national park) ಎನ್ನುವ ಹೆಸರಿನ ಕಾಡು ಸ್ಯಾನ್ ಫ್ರಾನ್ಸಿಸ್ಕೋನಿಂದ ಆಗ್ನೇಯ ದಿಕ್ಕಿಗೆ ಸುಮಾರು ಐದು ಗಂಟೆಗಳ ದಾರಿ. ಇಲ್ಲಿ ಬಹಳಷ್ಟು ಸಿಗ್ವಿಯಾ ಮರಗಳು ಕಾಣಿಸುತ್ತವೆ. ವಿಸ್ತಾರದ ಲೆಕ್ಕದಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡದಾದ General Sherman ಮರ ಇರುವುದು ಈ ಕಾಡಿನಲ್ಲಿಯೇ. 2021 ರ ಬೇಸಿಗೆಯಲ್ಲಿ ಕ್ಯಾಲಿಫೋರ್ನಿಯಾದ ಕಾಡುಗಳಿಗೆ ಬೆಂಕಿ ಹತ್ತಿದ್ದಾಗ ಸಿಗ್ವಿಯಾ ಪಾರ್ಕ್ ಕೂಡ ಈ ಬೆಂಕಿಯ ಅಟ್ಟಹಾಸಕ್ಕೆ ಒಳಗಾಗಿತ್ತು. ಆ ಸಂದರ್ಭದಲ್ಲಿ ಈ ಐತಿಹಾಸಿಕ ಮರ ಸುಟ್ಟು ಹೋಗಬಾರದೆಂದು ಅರಣ್ಯಧಿಕಾರಿಗಳು General Sherman ಮರಕ್ಕೆ ಸಿಲ್ವರ್ ಹಾಳೆ ಸುತ್ತಿ ರಕ್ಷಿಸುವ ಸಫಲ ಯತ್ನ ಮಾಡಿದ್ದರು. ಹೀಗೆ ವರ್ಷಗಳ ಕಾಲ ರಕ್ಷಿಸಿಟ್ಟುಕೊಂಡು ಬಂದಿರುವ ಬಹಳಷ್ಟು ಮರಗಳು ಕ್ಯಾಲಿಫೋರ್ನಿಯಾದ ಮಡಿಲಲ್ಲಿವೆ.
ಬೈಬಲ್ ನಲ್ಲಿ Methuselah 969 ವರ್ಷಗಳ ಕಾಲ ಬದುಕಿದ ಮಾಹಿತಿಯಿದೆಯಂತೆ. ಹಾಗಾಗಿ ತುಂಬಾ ಹಳೆಯ ವಸ್ತು, ಜೀವಿ, ಅಥವಾ ಮರಕ್ಕೆ Methuselah ಎಂದು ಹೇಳುವ ಪರಿಪಾಠವಿದೆ ಇಲ್ಲಿ. ಕ್ಯಾಲಿಫೋರ್ನಿಯಾದ ಬಿಳಿ ಬೆಟ್ಟಗಳ (white mountains) ಮಧ್ಯದಲ್ಲಿ 4,771 ವರ್ಷಗಳಷ್ಟು ಹಳೆಯ ಮರವಿದೆ. ಎಷ್ಟೋ ನಾಗರಿಕತೆಗಳಿಗಿಂತ ಮೊದಲು ಹುಟ್ಟಿದ ಒಂದು ಮರ ಇನ್ನೂ ಹಾಗೆಯೇ ಇದೆಯೆಂದರೆ ಆಶ್ಚರ್ಯವಲ್ಲವೇ? ಈಜಿಪ್ತಿನ ಪಿರ್ಯಾಮಿಡ್ ಗಳಿಗಿಂತಲೂ ಹಳೆಯ ಮರವಂತೆ ಇದು. ಅದಕ್ಕೆ ಇದನ್ನು Methuselah tree ಎಂದು ಕರೆಯುತ್ತಾರೆ. ಈ ಮರವನ್ನು ಸುಮ್ಮನೆ ಹೋಗಿ ನೋಡಿಕೊಂಡು ಬಂದೆವೆಂದರೆ ಸಧ್ಯವಿಲ್ಲ. ಯಾಕೆಂದರೆ ಇದರ ಜಾಗ ಇಲ್ಲೇ ಎಂದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಜನರಿಂದ ರಕ್ಷಿಸಲೆಂದೇ ಇದರ ಜಾಗವನ್ನು ರಹಸ್ಯವಾಗಿಟ್ಟಿದ್ದಾರೆ. ಅದೂ ಮೀರಿ ಹೋಗಬೇಕೆಂದರೆ ಏನಾದರೂ ಅಪಾಯ ಸಂಭವಿಸಿದಲ್ಲಿ ನಾವೇ ಹೊಣೆ ಎಂಬುದನ್ನು ತಲೆಯಲ್ಲಿಟ್ಟುಕೊಂಡು ಹೋಗಬೇಕು. ಯಾಕೆಂದರೆ ಈ ಮರವನ್ನು ಹುಡುಕಿಕೊಂಡು ಹೋಗುವ ಅವಕಾಶವಿದೆಯಾದರೂ ಕಾಡಿನ ಮಧ್ಯದಲ್ಲಿ ನೆಟ್ವರ್ಕ್ ಬರದೇ ಹೋಗಿ ಏನಾದರೂ ತೊಂದರೆಯಾದರೆ ಯಾರೂ ಸಹಾಯಕ್ಕೆ ಬರದ ಪರಿಸ್ಥಿತಿ ಎದುರಾಗಬಹುದು.
ಈ ಮರಗಳ ಆಯಸ್ಸನ್ನು ಕಾಂಡದ ಒಳಗಿರುವ ಸುತ್ತುಗಳ ಸಹಾಯದಿಂದ ಎಣಿಸುತ್ತಾರೆಂದು ನನಗೆ ಗೊತ್ತಿತ್ತು. ಆದರೆ ಈ ಸಾವಿರಾರು ವರ್ಷಗಟ್ಟಲೇ ಬದುಕಿರುವ ಈ ಹಲವು ಮರಗಳನ್ನು ಕಡಿಯದೇ ಹೇಗೆ ಅವುಗಳ ಆಯಸ್ಸನ್ನು ಹೇಗೆ ನಿರ್ಧರಿಸಿದರು ಎನ್ನುವುದು ನನ್ನ ಕುತೂಹಲ. ಗೂಗಲ್ ಮಾಡಿ ನೋಡಿದಾಗ ತಿಳಿಯಿತು, ಸಂಶೋಧಕರ ಬಳಿ increment borer ಎನ್ನುವ ಹೆಸರಿನ ಉಪಕರಣವೊಂದಿರುತ್ತದೆ. ಇದರಿಂದ ಮರದ ಚೂರು ತುಂಡನ್ನು ಅದರ ಸಾರ ಬರುವಂತೆ ಕತ್ತರಿಸಿ ನಂತರ ಅದರ ಮೂಲಕ ಮರದ ಆಯಸ್ಸು ಮತ್ತು ಬೆಳವಣಿಗೆಯ ವಿಧಾನವನ್ನು ಕಂಡುಕೊಳ್ಳುತ್ತಾರೆ.
ಈ 4000 ವರ್ಷ ಹಳೆಯ Methuselah tree ನೋಡಬೇಕೆಂದು ಮ್ಯಾಪ್ಸ್ ನಲ್ಲಿ ಹುಡುಕಿದಾಗ ನನಗೆ ಕಂಡಿದ್ದು ಇನ್ನೊಂದು 2000 ವರ್ಷಗಳಷ್ಟು ಹಳೆಯ Methuselah tree. ಮನೆಯಿಂದ ಅರ್ಧ ಗಂಟೆಯ ದಾರಿ. ಹಾಗಾಗಿ ನೋಡಿಕೊಂಡು ಬರಲೆಂದು ಹೊರಟೆವು. ರಸ್ತೆಯ ಪಕ್ಕದಲ್ಲಿಯೇ ನಿಂತಿರುವ ಈ ಮರದ ಬಳಿಗೆ ಅಂದರೆ ಒಳಗೆ ಹೋಗಲು ಗೇಟ್ ನಿರ್ಮಿಸಿದ್ದಾರೆ. ಹೋಗುವ ಮೊದಲೇ ಮರದ ಆಯಸ್ಸು, ಎತ್ತರ, ಕಾಂಡದ ವಿಸ್ತೀರ್ಣ ಇತ್ಯಾದಿಗಳನ್ನು ವಿವರಿಸುವ ಬೋರ್ಡ್ ಇದೆ. 2000 ವರ್ಷಗಳಿಂದ ಈ ಮರ ಇನ್ನೂ ಉಸಿರಾಡುತ್ತಿದೆಯಲ್ಲ ಎಂಬುದೇ ಸೋಜಿಗ. ಮರದ ಬೊಡ್ಡೆ ಚಳಿಗೆ ಸುಲಿಯುವ ಚರ್ಮದಂತೆ ಪಕಳೆ ಪಕಳೆಯಾಗಿ ಬಿಚ್ಚುತ್ತಿದೆಯಾದರೂ ಈ ದೈತ್ಯ ಮರಕ್ಕೆ ಅದೆಲ್ಲ ಲೆಕ್ಕವೇ ಅಲ್ಲ. ದೂರದಿಂದ ಅದರ ಕೆಳಗೆ ನಿಂತ ನಮ್ಮನ್ನು ನೋಡಿದರೆ ಇಡೀ ಮರದ ಮುಂದೆ ನಾವು ಸಣ್ಣ ಅಳಿಲಿನ ಹಾಗೆ ಕಾಣುತ್ತೇವೆ..
ನನಗೆ ಈ ಅಮೆರಿಕದವರ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ, ಪೋಷಿಸುವ ಮತ್ತು ಗೌರವಿಸುವ ಪರಿ ಬಹಳ ಇಷ್ಟವಾಗುತ್ತದೆ. ಯಾವ ಜಾಗಕ್ಕೆ ಹೋದರೂ ಅದು ಮೊದಲು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಬಿಟ್ಟು ಬರಬೇಕೆಂಬ ನಿಯಮವನ್ನು ಯಥಾವತ್ತಾಗಿ ಪಾಲಿಸುತ್ತಾರೆ. ಹಾಗಾಗಿ ಕಾಡುಗಳು, ನದಿಗಳು, ಕರಾವಳಿಗಳು ಎಷ್ಟೇ ಅಧಿಕ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರೂ ಮೊದಲಿನ ಹಾಗೆ ಇರುತ್ತವೆ. ಹಾಗಂತ ಇಲ್ಲಿ ಎಲ್ಲರೂ ಒಳ್ಳೆಯವರಂತೇನಲ್ಲ. ಇಲ್ಲಿಯೂ ಯಾವುದಾದರೂ ಕಾರ್ಯಕ್ರಮ ಮುಗಿದ ನಂತರ ಕಸದ ಗುಡ್ಡೆಗಳು ಯಥೇಚ್ಛವಾಗಿ ಬಿದ್ದಿರುತ್ತವೆ. ಆದರೆ ಬಹುತೇಕ ಜನ ನಿಯಮ ಪರಿಪಾಲನೆ ಮಾಡುತ್ತರೆ. ನಾಯಿಗಳನ್ನು ವಿಹಾರಕ್ಕೆ ಕರೆತಂದರೆ ಜೊತೆಯಲ್ಲಿಯೇ ಅದರ ಹೊಲಸನ್ನು ಬಳಿಯಲು ಚೀಲವನ್ನೂ ತರುತ್ತಾರೆ. ಎಷ್ಟೇ ದಟ್ಟ ಕಾಡಿನ ಟ್ರೆಲ್ಸ್ ಹಿಡಿದು ಹೋದರೂ ಎಲ್ಲಿಯೂ ಹೊಲಸಿನಲ್ಲಿ ಕಾಲಿಟ್ಟೆವೆನ್ನುವ ಭಯ ಇರುವುದಿಲ್ಲ. ತಿಳಿ ನೀರಿನ ಸಮುದ್ರದಲ್ಲಿ ಪ್ಲಾಸ್ಟಿಕ್, ಕಸ, ಕಡ್ಡಿ ಕಾಣಿಸುವುದಿಲ್ಲ. ಕ್ಯಾಂಪಿಂಗ್ ಎಂದು ಬಂದು, ಊಟ, ತಿಂಡಿ ಇತ್ಯಾದಿಗಳನ್ನು ಬೇಯಿಸಿಕೊಂಡು ತಿಂದರೂ ಕೊನೆಗೆ ಎಲ್ಲವನ್ನು ಕಸದ ಚೀಲದಲ್ಲಿ ತುಂಬಿಸಿ ಆ ಜಾಗದಲ್ಲಿ ಅವರು ಬಂದ ಕುರುಹು ಸಹ ಇಲ್ಲದಷ್ಟು ಸ್ವಚ್ಛವಾಗಿ ಬಿಟ್ಟು ಹೋಗುತ್ತಾರೆ. ಯಾವುದೇ ದೇಶ ಸ್ವಚ್ಛವಾಗಬೇಕೆಂದರೆ ಅದು ಅಲ್ಲಿ ವಾಸಿಸುವ ಜನರ ಅರಿವಿಗೆ ಬರುವ ತನಕ ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಜನರಿಂದಲೇ ಸುಧಾರಣೆ ಸಾಧ್ಯ. ಹಾಗಂತ ನಾನು ವಿದೇಶವನ್ನು ಪಟ್ಟಕ್ಕೇರಿಸಿ ನಮ್ಮ ದೇಶವನ್ನು ತೆಗಳುತ್ತಿದ್ದೇನೆ ಎಂದುಕೊಳ್ಳಬೇಡಿ. ಕಹಿಯಾದ ಸತ್ಯ ಸಂಗತಿ ಹೇಳುತ್ತಿದ್ದೇನೆ. 12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿ ಹೂವು ಮೊನ್ನೆ(2021) ಬೇಸಿಗೆಯಲ್ಲಿ ಅರಳಿತ್ತು. ಎಕರೆಗಟ್ಟಲೇ ಅರಳಿದ ಈ ಹೂವುಗಳನ್ನು ಫೋಟೊನಲ್ಲಿ ನೋಡಿದಾಗಲೇ ಮನಸು ಅರಳಿತ್ತು, ಇನ್ನೂ ಪ್ರತ್ಯಕ್ಷವಾಗಿ ನೋಡಿದರೆ ಅದೆಷ್ಟು ಚೆಂದವಿದ್ದವೋ.. ಆದರೆ ಕೆಲವೇ ದಿನಗಳಲ್ಲಿ ಅಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ, ಜನರು ತಿಂದು ಬಿಸಾಕಿದ್ದೆಲ್ಲ ಸೇರಿ ಕಸ ತುಂಬಿಕೊಂಡಿತ್ತಂತೆ. ಅಷ್ಟೇ ಅಲ್ಲದೇ ಮೊದ ಮೊದಲು ರಾಶಿ ರಾಶಿಯಾಗಿ ಅರಳಿದ್ದ ಹೂವುಗಳು ಜನರ ದಟ್ಟಣೆ ಹೆಚ್ಚಾದಂತೆ ಕಡಿಮೆಯಾಗತೊಡಗಿದವು. ಇದು ಜನರು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಹೋದುದರ ಪರಿಣಾಮ. ಬರೀ ಭಾರತದಲ್ಲಷ್ಟೇ ಅಲ್ಲ, ಇಲ್ಲಿಯೂ ಹಾಗೆ ಕಸ ಹರಡುವ ನಮ್ಮ ಜನರಿದ್ದಾರೆ. ಇಲ್ಲಿಯ ದಿನಸಿ ಅಂಗಡಿಗಳಾದ ವಾಲಮಾರ್ಟ್, ಸೇಫವೇ ಇತ್ಯಾದಿಗಳ ಮುಂದೆ ಇರುವಷ್ಟು ಸ್ವಚ್ಛತೆ ಇಂಡಿಯನ್ ಸ್ಟೋರ್ ಗಳ ಮುಂದಿರುವುದಿಲ್ಲ. ಒಳಗೆ ಇಟ್ಟಿರುವ ಪ್ಲಾಸ್ಟಿಕ್ ಚೀಲಗಳು ಹೊರಗೆ ಅಲ್ಲೊಂದು ಇಲ್ಲೊಂದು ಬಿದ್ದಿರುತ್ತವೆ. ಯಾರೋ ಅರ್ಧ ತಿಂದ ಐಸ್ಕ್ರೀಮ್ ನ್ನು ಕಪ್ ಸಮೇತ ಕಾರು ನಿಲ್ಲಿಸುವ ಪಾರ್ಕಿಂಗ್ ಜಾಗದಲ್ಲಿ ಬಿಟ್ಟು ಹೋಗಿರುತ್ತಾರೆ. ರಸೀದಿಗಳು ಗಾಳಿಗೆ ಹಾರಾಡುತ್ತಿರುತ್ತವೆ. ಇನ್ನು ಇವರು ಭಾರತಕ್ಕೆ ಹೋದರೆ ನಿಂತಲ್ಲೆಲ್ಲ ಕಸದ ರಾಶಿಯನ್ನು ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಅಂತಹವರನ್ನು ಕಂಡಾಗಲೆಲ್ಲ ಮೈ ಉರಿಯುತ್ತದೆ. ಎಲ್ಲಿಯೇ ಇರಿ, ಭಾರತದಲ್ಲೇ ಇರಿ ಅಥವಾ ಇನ್ನಾವುದೇ ವಿದೇಶದಲ್ಲಿಯೇ ಇರಿ, ಜೊತೆಗೊಂದು ಕಸದ ಚೀಲವನ್ನು ಇಟ್ಟುಕೊಂಡಿರಿ. ನಾಳೆ ನಮ್ಮ ಮಕ್ಕಳಿಗೆ ನಾವು ಸುಂದರ ಪ್ರವಾಸಿ ತಾಣಗಳನ್ನು, ಸ್ವಚ್ಛ ಕುಡಿಯುವ ನೀರನ್ನು, ಶುದ್ಧ ಉಸಿರಾಡುವ ಗಾಳಿಯನ್ನು ಬಿಟ್ಟು ಹೋಗಬೇಕೆಂಬ ಸತ್ಯ ನೆನಪಿರಲಿ.