ಸಿನಿಮಾಗಳು ಜನರ ಮನಸಿನ ಮೇಲೆ ದೊಡ್ಡ ಪರಿಣಾಮ ಬೀರುವ ಸಂವಹನ ಮಾಧ್ಯಮಗಳು!
ಸಿನಿಮಾ ಚೆನ್ನಾಗಿರಲಿ ಬಿಡಲಿ, ಅದನ್ನು ನೋಡಿದ ನಂತರ ಕನಿಷ್ಠ ಒಂದೆರಡು ಗಂಟೆಗಳಾದರೂ ಅದರ ಪ್ರಭಾವ ನಮ್ಮ ಮೇಲಿರುತ್ತದೆ. ಪಾತ್ರಗಳು, ಕತೆಯ ಹಂದರ, ನಿರೂಪಣಾ ಶೈಲಿ, ಹಾಡುಗಳು, ದೃಶ್ಯಗಳು, ಸಂಭಾಷಣೆಗಳು, ಪಾತ್ರವರ್ಗ ಹೀಗೆ ಪ್ರತಿಯೊಂದು ಗಮನಕ್ಕೆ ಬರುತ್ತದೆ. ಇಷ್ಟವಾಗದೇ ಹೋದರು ಯಾವ ವಿಷಯ ಇಷ್ಟವಾಗದೇ ಹೋಯಿತು ಎನ್ನುವ ಅಂಶವಂತೂ ಮನದಲ್ಲಿ ಅಚ್ಚಾಗಿರುತ್ತದೆ. ಎರಡು-ಮೂರು ಗಂಟೆಗಳ ಕಾಲ ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುವ, ಹೊಸ ಹೊಸ ವ್ಯಕ್ತಿಗಳಿಗೆ ಪರಿಚಯ ಮಾಡಿಸುವ, ಯಾವತ್ತು ಕೇಳಿರದ ಕತೆಗಳನ್ನು ಹೇಳುವ ಸಿನಿಮಾಗಳು ಮನುಷ್ಯ ಈ ಒತ್ತಡದ ಬದುಕಿನಿಂದ ದೂರವಾಗಲು ಕಂಡುಕೊಂಡಿರುವ ಬಲು ದೊಡ್ಡ ಮನರಂಜನಾ ಸಾಧನಗಳು. ಒಂದು ಸಿನಿಮಾ ನೋಡಿದರೆ ಸಾಕು ವಾರದಿಂದ ತಲೆ ತಿನ್ನುತ್ತಿರುವ ಬಾಸ್ ನ ಗೊಣಗಾಟ ಮರೆತು ಹೋಗಿರುತ್ತದೆ, ಮನೆಯಲ್ಲಿ ನಡೆದ ಜಗಳದ ನೆನಪು ಮರೆಯಾಗಿರುತ್ತದೆ. ನಮ್ಮನ್ನು ಮೈ ಮರೆಸುವ, ನಾಯಕನ ಧೀಮಂತ ಗುಣಕ್ಕೆ ಮನಸೂರೆಗೊಳ್ಳುವ, ನಾಯಕಿಯ ಹೊಳಪು ಕಣ್ಣುಗಳಲ್ಲಿ ಕಳೆದು ಹೋಗುವ, ಚೆಂದದ ಹಾಡಿನ ಸಾಲನ್ನು ಮತ್ತೆ ಮತ್ತೆ ಗುನುಗುನಿಸುವಂತೆ ಮಾಡುವ, ಕಾಮಿಡಿಯನ್ ಹೇಳುವ ಸಂಭಾಷಣೆಯನ್ನು ನೆನೆಸುತ್ತ ಮತ್ತೆ ಮತ್ತೆ ನಗಿಸುವ, ದೃಶ್ಯಗಳಲ್ಲಿ ಕಂಡು ಬಂದ ಸುಂದರ ಜಾಗಕ್ಕೆ ಒಮ್ಮೆ ಹೋಗಬೇಕೆನ್ನುವ ಬಯಕೆಯನ್ನು ಹುಟ್ಟಿಸುವ ಶಕ್ತಿ ಸಿನಿಮಾಗಿದೆ. ಎಲ್ಲೆಲ್ಲಿಂದಲೋ ಪದಗಳನ್ನು ಹೆಕ್ಕಿ ತಂದು ನೂರು ಪುಟದ ಪುಸ್ತಕವನ್ನು ಬರೆದರೂ ಜನರಿಗೆ ತಲುಪದ ಸಂದೇಶ ಸಿನಿಮಾದ ಒಂದೇ ಒಂದು ಡೈಲಾಗ್ ನ ಮೂಲಕ ಲಕ್ಷಾಂತರ ಜನಕ್ಕೆ ತಲುಪುತ್ತದೆ. ಅಷ್ಟು ದೊಡ್ಡ ಶಕ್ತಿ ದೃಶ್ಯ ಮಾಧ್ಯಮಕ್ಕಿದೆ.
ನಾವೆಲ್ಲ ರಾಜಕುಮಾರ್ ಅವರ ಚಿತ್ರಗಳನ್ನು ನೋಡುತ್ತ ಬೆಳೆದವರು. ರಾಜಕುಮಾರ್ ಸಿಗರೇಟ್ ಸೇದುವುದನ್ನು ಬಿಡಿ, ಯಾವೊಂದು ಚಿತ್ರದಲ್ಲಿಯೂ ರಾಜಕುಮಾರ್ ಕೈಯಲ್ಲಿ ಸಿಗರೇಟ್ ಇರುವುದನ್ನು ನೋಡಿದ ನೆನಪು ಸಹ ಇಲ್ಲ ನನಗೆ. ತಮ್ಮನ್ನು ಹಿಂಬಾಲಿಸುವ ಲಕ್ಷಾಂತರ ಅಭಿಮಾನಿಗಳು ತಮ್ಮನ್ನು ಅನುಕರಿಸುತ್ತಾರೆ, ತಮ್ಮ ಪಾತ್ರಗಳಿಂದ ಪ್ರಭಾವ ಹೊಂದುತ್ತಾರೆ ಎನ್ನುವ ಅರಿವು ರಾಜಕುಮಾರ್ ಅವರಿಗಿತ್ತು. ಅವರ ಚಿತ್ರಗಳನ್ನು ನೋಡಿದರೆ ಬದುಕುವ ದಾರಿ ತಿಳಿಯುತ್ತದೆ. ಯೋಗ, ಪ್ರಾಣಾಯಾಮ, ಸತತ ಪರಿಶ್ರಮಗಳ ಮಹತ್ವ ಕಾಣಿಸುತ್ತದೆ. ಅವರ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ನಗರಗಳಲ್ಲಿನ ಕೆಲಸವನ್ನು ಬಿಟ್ಟು ಹಳ್ಳಿಗೆ ಹಿಂದುರಿಗಿ ಕೃಷಿಯಲ್ಲಿ ತೊಡಗಿದವರಿದ್ದಾರೆ. ಅವರ ಎರಡು ಕನಸು ಚಿತ್ರವನ್ನು ನೋಡಿ ಅದೆಷ್ಟೋ ಜನಕ್ಕೆ ನಿಜವಾದ ಪ್ರೀತಿಯ ಅರಿವಾಗಿದೆ. ಸಂಪತ್ತಿಗೆ ಸವಾಲ್ ಚಿತ್ರವನ್ನು ನೋಡಿ ತಮ್ಮ ಜೀವನವನ್ನು ಬದಲಾಯಿಸಿಕೊಂಡವರಿದ್ದಾರೆ. ಜೀವನ ಚೈತ್ರ ಸಿನಿಮಾ ನೋಡಿ ಸಾರಾಯಿ ಅಂಗಡಿಗಳು ಮುಚ್ಚಿದ ಉದಾಹರಣೆಗಳು ಇವೆ. ಎಂತಹ ಮಹಾಗ್ರಂಥಗಳನ್ನು ಓದಿದರೂ ಅರ್ಥವಾಗದ ದಾನದ ಮಹಿಮೆ ಕಸ್ತೂರಿ ನಿವಾಸ ನೋಡಿದ ನಂತರ ಸಲೀಸಾಗಿ ಮನ ಮುಟ್ಟಿತೆಂದರೆ ಅದಕ್ಕೆ ರಾಜಕುಮಾರ್ ಅವರು ಆಯ್ದುಕೊಳ್ಳುತ್ತಿದ್ದ ಪಾತ್ರಗಳು, ತಮ್ಮ ಪಾತ್ರದ ಬಗ್ಗೆ, ಪಾತ್ರದ ಮೂಲಕ ಜನರಿಗೆ ವಿನಿಮಯವಾಗಿವ ಸಂದೇಶದ ಬಗ್ಗೆ ತೆಗೆದುಕೊಳ್ಳುತ್ತಿದ್ದ ಮುನ್ನೆಚ್ಚರಿಕೆಗಳೇ ಸಾಕ್ಷಿ.
ಹಾಗಂತ ಎಲ್ಲರೂ ರಾಜಕುಮಾರ್ ತರಹ ಆಗಬೇಕಂತಿಲ್ಲ (ಆಗವುದೂ ಸಹ ಅಸಾಧ್ಯ!). ಕಾಲಮಾನಕ್ಕೆ ತಕ್ಕಂತೆ ಸಿನಿಮಾದ ವಸ್ತು-ಶೈಲಿ ಬದಲಾಗುತ್ತಾ ಹೋಗುತ್ತದೆ. ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಕಂಡಿರದೇ ಇರುವ ವಿಸ್ಮಯಗಳನ್ನು ತೋರಿಸುವ ಕಾಲ ಇದು. ಹಾಗಿರುವಾಗ ಯಾವುದೋ ಒಂದು ನಿಯಮಕ್ಕೆ ಬದ್ಧವಾಗಿ ಕೂತಿದ್ದರೆ ಅದು ಮೂರ್ಖತನವೆಂದು ಸಿನಿಮಾ ತಯಾರಕರು ಹೇಳಿದಾಗ ಒಪ್ಪಿಕೊಳ್ಳದೆ ನಮಗೆ ಬೇರೆ ವಿಧಿಯಿಲ್ಲ. ಆದರೆ ಎಲ್ಲದಕ್ಕೂ ಒಂದು ಲಕ್ಷ್ಮಣ ರೇಖೆಯಿದೆ. ಆ ಗೆರೆ ದಾಟಿ ಹೋದರೆ ಹೋದವರಿಗೆ ಅಪಾಯ! ಮೊನ್ನೆಯಷ್ಟೇ ಕೆಜಿಎಫ್ ಟ್ರೇಲರ್ ಬಿಡುಗಡೆಯಾದಾಗ ಯಶ್ ಕಬ್ಬಿಣದ ಸಲಾಕೆಯಿಂದ ಸಿಗರೇಟ್ ಹಚ್ಚಿಕೊಳ್ಳುವುದನ್ನು ನೋಡಿ ವಾಹ್ ಎಂದು ಮೆಚ್ಚಿಕೊಂಡವರು ನಾವು. ಅಷ್ಟೇ ಯಾಕೆ.. ಶಿವರಾಜಕುಮಾರ್ ಓಂ ಚಿತ್ರದಲ್ಲಿ ಸಿಗರೇಟ್ ಸೇದುವುದನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋದ ಮಂದಿಯಿದ್ದಾರೆ.
ನಮ್ಮ ನೆಚ್ಚಿನ ನಾಯಕ ಏನೇ ಮಾಡಲಿ.. ಸಿಗರೇಟ್ ಸೇದಲಿ, ಕೆಲಸವಿಲ್ಲದೆ ಅಲೆಯಲಿ ಅಥವಾ ಕಂಠಮಟ್ಟದವರೆಗೆ ಕುಡಿಯಲಿ.. ನಾವು ಮೆಚ್ಚಿಕೊಳ್ಳುತ್ತೇವೆ. ಮತ್ತೆ ಮತ್ತೆ ನೋಡುತ್ತೆವೆ. ಕಾರಣ ನಾಯಕನ ಮೇಲಿರುವ ಅಭಿಮಾನ. ಆದರೆ ಕೆಲವರಿಗಷ್ಟೇ ಅದು ಕೇವಲ ಸಿನಿಮಾ ಎನ್ನುವ ಅರಿವು, ತಿಳುವಳಿಕೆಯಿರುತ್ತದೆ. ಹಲವರು ನಾಯಕನ ಪ್ರಭಾವಕ್ಕೆ ಒಳಗಾಗಿ ಅವನಂತೆ ಕೂದಲು ಕತ್ತರಿಸಿಕೊಳ್ಳುತ್ತಾರೆ, ಅವನ ಫೈಟಿಂಗ್ ಶೈಲಿಯನ್ನು ಅನುಕರಿಸುತ್ತಾರೆ, ಅವನು ಹಚ್ಚಿದಂತೆಯೇ ಸಿಗರೇಟ್ ಹಚ್ಚಿ ಹೊಗೆ ಎಳೆದು ತಾವು ಅವನಂತೆಯೇ ಎನ್ನುವ ಭ್ರಮೆಯಲ್ಲಿ ತೇಲಾಡುತ್ತಾರೆ. ಹಾಗಿರುವಾಗ ತನ್ನ ಅಭಿಮಾನಿಗಳ ದಾರಿ ತಪ್ಪಿಸದಂತೆ ನಿಗಾ ವಹಿಸುವುದು ಪ್ರತಿಯೊಬ್ಬ ನಾಯಕನ ಜವಾಬ್ದಾರಿ!
ಇತ್ತೀಚಿಗೆ ಅಭಿಮಾನ ಅಂಧ ಅಭಿಮಾನವಾಗಿ ಬದಲಾಗುತ್ತಿದೆ. ಅವರವರದೇ ಸಂಘಗಳು ಹುಟ್ಟಿಕೊಂಡು ಒಂದು ಗುಂಪನ್ನು ಕಂಡರೆ ಇನ್ನೊಂದು ಗುಂಪಿಗೆ ಆಗಿ ಬರುವುದಿಲ್ಲ. ನಟ-ನಟಿಯರು ಅಲ್ಲೆಲ್ಲೋ ಕುಳಿತು ಹೇಳುವ ಮಾತಿಗೆ ಇಲ್ಲಿ ವಾಗ್ವಾದ, ಘರ್ಷಣೆಗಳಾಗುತ್ತವೆ. ತಿಳಿಗೇಡಿ ಜನ ಹೊಡೆದಾಡುತ್ತಾರೆ. ಎಲ್ಲರನ್ನು ಗೌರವಪೂರ್ವಕವಾಗಿ ಕಾಣುವ ಮನಸ್ಥಿತಿಯೇ ಕಾಣೆಯಾಗುತ್ತಿದೆ. ಮೊನ್ನೆ ಜಗ್ಗೇಶರವರ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಯಾವತ್ತೋ ಟ್ವಿಟ್ಟರಿನಲ್ಲಿ ದರ್ಶನ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಜನ ನನ್ನ ಅಕೌಂಟಿಗೆ ಲಗ್ಗೆಯಿಟ್ಟು ಬಾಯಿಗೆ ಬಂದಂತೆ ನಿಂದಿಸಿ ನಾನು ಎರಡು ದಿನಗಳ ಕಾಲ ಪ್ರೊಫೈಲ್ ಲಾಕ್ ಮಾಡಿದ ಸ್ವಂತ ಅನುಭವವೂ ನನಗಿದೆ. ಈ ಬೆಳವಣಿಗೆ ಕನ್ನಡ ಸಿನಿಮಾರಂಗಕ್ಕೆ ಒಳ್ಳೆಯದಲ್ಲ. ಇದರಲ್ಲಿ ನಟರ ತಪ್ಪಿದೆ ಎಂದಲ್ಲ. ಆದರೆ ಈ ವಿಷಯದ ಬಗ್ಗೆ ಚಿತ್ರರಂಗದ ನಿರ್ಲಕ್ಶ್ಯವಂತೂ ಖಂಡಿತವಾಗಿಯೂ ಇದೆ!
ಸಿನಿಮಾ ಒಂದರಲ್ಲಿ ಹೋಮ ನಡೆಸುತ್ತಿರುವ ಅರ್ಚಕರ ಮೇಲೆ ಕಾಲಿಡುವ ದೃಶ್ಯದ ಬಗ್ಗೆ ಇತ್ತೀಚಿಗೆ ಹಲವು ಚರ್ಚೆಗಳಾದವು. ಒಂದು ಸಿನಿಮಾವನ್ನು ಸಿನಿಮಾದ ಹಾಗೆಯೇ ನೋಡಿ ಎನ್ನುವ ಸಲಹೆಗಳು ಸಹ ಕೇಳಿ ಬಂದವು. ಆದರೆ ಲಕ್ಷ್ಮಣ ರೇಖೆಯ ನೆನಪಿದೆಯಲ್ಲವೇ? ಸಣ್ಣ ಮಕ್ಕಳ ಜೊತೆ ಸೇರಿ ಸಿನಿಮಾ ನೋಡ ಹೋದರೆ ನಾವು ಅವರಿಗೆ ಯಾವ ತರಹದ ಅಡಿಪಾಯ ಹಾಕಿ ಕೊಡುತ್ತಿದ್ದೇವೆ? ಆ ಒಂದು ದೃಶ್ಯ ಧೀರ್ಘ ಕಾಲದವರೆಗೂ ಕಣ್ಣ ಮುಂದೆ ಕಟ್ಟಿರುತ್ತದೆ. ಇನ್ನು ಆ ಚಿತ್ರದ ಒಂದು ಫೇಮಸ್ (ಹೌದು ಲಕ್ಷಾಂತರ ಜನ ಕೇಳಿ ಮೆಚ್ಚಿಕೊಂದಿರುವ ಹಾಡು!) ಹಾಡಿನಲ್ಲಿ ಬರುವ ದೃಶ್ಯಗಳಂತೂ ನಾಯಕ, ನಾಯಕಿಯ ಮೇಲೆ ಇಡೀ ಜನಸಮೂಹದ ಮುಂದೆ harras ಮಾಡಿದ ರೀತಿಯಲ್ಲಿದೆ. ಆ ಹಾಡನ್ನೇ ಮತ್ತೆ ಮತ್ತೆ ನೋಡುವ, ಕೇಳುವ ಯುವಸಮೂಹದ ಮೇಲೆ ಆ ಹಾಡಿನ ಸಾಹಿತ್ಯ, ದೃಶ್ಯ ಎಂತಹ ಪರಿಣಾಮವನ್ನು ಬೀರಬಹುದೆನ್ನುವ ಸಣ್ಣ ಆಲೋಚನೆ ನಾಯಕ, ನಾಯಕಿಗಾಗಲೀ, ಹಾಡು ಬರೆದು, ಹಾಡಿದವರಿಗಾಗಲೀ, ನಿರ್ದೇಶಕ, ನಿರ್ಮಾಪಕರಿಗಾಗಲೀ ಇಲ್ಲದೇ ಹೋಗಿದ್ದು ವಿಪರ್ಯಾಸ.
ನಾವು ಏನೇ ಮಾಡಿದರೂ ನಡೆಯುತ್ತದೆ. ಏನು ತೋರಿಸಿದರೂ ಜನ ನೋಡುತ್ತಾರೆ ಎನ್ನುವ ಅಹಂಕಾರ ಸಿನಿಮಾ ತಯಾರಕರಲ್ಲಿ ಇತ್ತೀಚಿಗೆ ಪ್ರಬಲವಾಗಿ ಕಾಣಿಸುತ್ತಿದೆ. ಬರಿ ಇದೊಂದೇ ಸಿನಿಮಾ ಅಲ್ಲ.. ಹಲವು ಸಿನಿಮಾಗಳು ಇದೇ ರೀತಿಯಾಗಿ ಅಪದ್ಧ ಸಂದೇಶವನ್ನು ರವಾನೆ ಮಾಡುವುದರಲ್ಲಿ ನಿರತವಾಗಿ ಬಿಟ್ಟಿವೆ. ಒಳ್ಳೆಯ ಸಿನಿಮಾಗಳು ಇಲ್ಲ ಅಂತಲ್ಲ. ಇತ್ತೀಚಿನ ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಬ್ಯುಟಿಫುಲ್ ಮನಸುಗಳು, ಕವಲುದಾರಿಯಂತಹ ಚಿತ್ರಗಳು ಇದ್ದಾವೆ. ಆದರೆ ಅನಿಷ್ಟ ಪ್ರಭಾವ ಬೀರುವ ಚಿತ್ರಗಳ, ಹಾಡಿನ ಸಾಹಿತ್ಯದ, ದೃಶ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಶೋಚನೀಯ.
ಮೊದಲಿನ ಹಾಗೆ ಜನ ಯಾವುದೋ ಒಂದು ಸಂದೇಶಕ್ಕಾಗಿ ಸಿನಿಮಾಗಳನ್ನು ನೋಡುವುದಿಲ್ಲ. ಕಾಲ ಬದಲಾಗಿದೆ ಹೌದು. ಆ ಕಾಲದ ಹಾಗೆ ಈಗ ಸಿನಿಮಾ ನೋಡಿ ಜೀವನವನ್ನು ಬದಲಾಯಿಸಿಕೊಳ್ಳುವ, ಜೀವನದ ಮೇಲೆ ಪ್ರಭಾವ ಬೀರಿದ ಸುದ್ದಿಗಳು ಕಡಿಮೆ. ಕಾರಣ ಈಗ ಜನ ಮನರಂಜನೆಗೆಂದೇ ಸಿನಿಮಾ ನೋಡುತ್ತಾರೆ. ಎರಡು ಗಂಟೆಗಳ ಕಾಲ ಮನಸು ಚಿಂತೆ ದುಗುಡಗಳನ್ನು ಮರೆತು ರಿಲ್ಯಾಕ್ಸ್ ಆದರೆ ಸಾಕು. ಅದ್ಭುತವಾದ ಫೈಟಿಂಗ್ ದೃಶ್ಯಗಳು, ಮೈ ನವಿರೇಳಿಸುವ ಸಂಭಾಷಣೆಗಳು, ಚೆಂದದ ನಾಯಕಿ, ಸಿಕ್ಸ್ ಪ್ಯಾಕಿನ ನಾಯಕ ಇದ್ದರೆ ಸಾಕು.. ಆದರೆ ಎಲ್ಲದಕ್ಕೂ ಒಂದು ಲಕ್ಷ್ಮಣ ರೇಖೆಯಿದೆ! ಅತಿರೇಕಕ್ಕೆ ಹೋದರೆ ಯಾರೇ ಆಗಲಿ ಖಂಡಿಸಿಯೇ ತೀರುತ್ತಾರೆ. ರಂಗಿತರಂಗ ನೋಡಿ ಬೆನ್ನು ತಟ್ಟಿದ ಕನ್ನಡಿಗರು ರಾಜರಥ ಚಿತ್ರದಲ್ಲಿನ ದೃಶ್ಯಗಳನ್ನು ಖಂಡಿಸಲಿಲ್ಲವೇ? ಹಾಗೆ! ನಟ-ನಟಿಯರ ಸಿನಿಮಾದಾಚೆಗಿನ ವ್ಯಕ್ತಿತ್ವಕ್ಕಿಂತ ಸಿನಿಮಾಗಳಲ್ಲಿ ಕಾಣಿಸುವ ವ್ಯಕ್ತಿತ್ವ ಜನರನ್ನು ತೀಕ್ಷ್ಣವಾಗಿ ತಲುಪುತ್ತದೆ. ಮನೆಯಲ್ಲಿ ಹೋಮ ಹವನ ಮಾಡಿ ಸಿನಿಮಾಗಳಲ್ಲಿ ಅರ್ಚಕರನ್ನು ಒದೆಯುವುದು ಯಾವ ರೀತಿಯ ವ್ಯಕ್ತಿತ್ವ?
ಎಲ್ಲದಕ್ಕೂ ಅದರದೇ ಆದ ಇತಿ ಮಿತಿಗಳಿವೆ. ನಟ ನಟಿಯರು ಹೀಗೆ ಇರಬೇಕು, ಮಾದರಿ ವ್ಯಕ್ತಿತ್ವವನ್ನು ಹೊಂದಿರಬೇಕು ಎಂದೇನಿಲ್ಲ. ಅವರು ನಮ್ಮ ನಿಮ್ಮಂತೆಯೇ ಮನುಷ್ಯರು. ಅವಗುಣಗಳನ್ನು ಹೊಂದಿದವರು. ಇದು ಅವರ ವೈಯಕ್ತಿಕ ಜೀವನದ ಪ್ರಶ್ನೆಯಲ್ಲ. ಸಿನಿಮಾಗಳಲ್ಲಿ ತೋರಿಸುವ ದೃಶ್ಯಗಳ ಬಗ್ಗೆ ಕೊಂಚ ನಿಗಾ ವಹಿಸಿದರೆ ಸಾಕು. ಯುವಕರು, ಮಕ್ಕಳು ಅಡ್ಡ ದಾರಿ ಹಿಡಿಯದಂತೆ ಜಾಗರೂಕತೆ ವಹಿಸಿದ ಪುಣ್ಯ ಅವರಿಗೆ ದಕ್ಕುತ್ತದೆ. ಕಮರ್ಶಿಯಲ್ ಸಿನಿಮಾಗಳನ್ನೇ ಮಾಡಿ.. ಅಡ್ಡಿಯಿಲ್ಲ. ಆದರೆ ಯಾವುದನ್ನು ಎಷ್ಟೆಷ್ಟು ತೋರಿಸಬೇಕೋ ಅಷ್ಟು ತೋರಿಸಿದರೆ ಸಾಕು. ಗಲಭೆಗೆ ಕಾರಣವಾಗುವ, ಜನರ ಭಾವನೆಗಳನ್ನು ಪ್ರಚೋದಿಸುವ, ಸೂಕ್ಷ್ಮ ವಿಚಾರಗಳಿಗೆ ಧಕ್ಕೆ ತರುವಂತಹ, ಯಾವುದೋ ಒಂದು ಸಮುದಾಯವನ್ನು ತುಳಿಯುವ, ದ್ವೇಷ ದಳ್ಳುರಿಗಳನ್ನು ಹಬ್ಬಿಸುವ ಕಂಟೆಂಟ್ ನ್ನು ಕಡಿತಗೊಳಿಸಿದರೆ ಎಲ್ಲರಿಗೂ ನೆಮ್ಮದಿ.
ಲೇಖನದ ಆಶಯ ಹಾಗೂ ವಿಷಯ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾಗಿದೆ. ಉತ್ತಮ ಬರಹ.
ಲೇಖನವು ಸಿನಿಮಾದ ನಿಜ ಅಂಶವನ್ನು ಎತ್ತಿ ತೋರಿಸಿದೆ
ಧನ್ಯವಾದ 🙂