ಮಹಿಳಾ ದಿನದ ಏಳು ವಿಶೇಷ ಸಾಧಕಿಯರು #SheInspiresUs: ಹುಲ್ಲಾಗು_ಬೆಟ್ಟದಡಿ (12)
ವಿಶ್ವ ಮಹಿಳಾ ದಿನಂದಂದು ನಮ್ಮ ಪ್ರಧಾನ ಮಂತ್ರಿ ತಮ್ಮ ಟ್ವಿಟ್ಟರ್ ಖಾತೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರಿಗೆ ವರ್ಗಾಯಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಮಾರ್ಚ್ ೮ ರಂದು ೭ ಜನ ಮಹಿಳಾಮಣಿಗಳು, ಸ್ವತಃ ಪ್ರಧಾನ ಮಂತ್ರಿಯಿಂದ ಆರಿಸಲ್ಪಟ್ಟ ಸಾಧಕಿಯರು, ಸಮಾಜದಲ್ಲಿ ಬದಲಾವಣೆಯನ್ನು ತಂದ ಮತ್ತು ಬದಲಾವಣೆಗಾಗಿ ಶ್ರಮಿಸುತ್ತಿರುವ ಮಹಿಳೆಯರು ಆ ಒಂದು ದಿನ ನರೇಂದ್ರ ಮೋದಿಯವರ ಅಧಿಕೃತ ಖಾತೆಯಿಂದ ತಮ್ಮ ಕತೆಯನ್ನು ಹಂಚಿಕೊಂಡರು. ಅವರ ಕತೆಗಳನ್ನು ಒಟ್ಟಿಗೆ ಸೇರಿಸಿ ನಿಮ್ಮ ಮುಂದಿಡುವ ಕೆಲಸಕ್ಕೆ ಅಂತೂ ಇಂತೂ ಮಹೂರ್ತ ಬಂತು ನೋಡಿ.. ಬದಲಾವಣೆ ಸಣ್ಣದಿರಲಿ ದೊಡ್ಡದಿರಲಿ ಅದು ಯಾವತ್ತಿಗೂ ಬದಲಾವಣೆಯೇ.. ನಮ್ಮಲ್ಲಿ ಎಷ್ಟೋ ಜನ ನನ್ನೊಬ್ಬನಿಂದ ಆಗುವುದೇನಿದೆ? ನಾನೊಬ್ಬ ನೀರನ್ನು ಮಿತವಾಗಿ ಬಳಸಿದರೇನಂತೆ ಜಾಗತಿಕ ಮಟ್ಟದಲ್ಲಿ ನೀರಿನ ದುರ್ಬಳಕೆ ತಪ್ಪುವುದೇ? ಎಂದೆಲ್ಲ ಅಂದುಕೊಳ್ಳುವುದೇ ಹೆಚ್ಚು. ಸ್ವಪರಿವರ್ತನೆಯಿಂದ ವಿಶ್ವ ಪರಿವರ್ತನೆ ಎಂಬ ಮಾತನ್ನು ನಾವೆಲ್ಲಾ ನೆನಪಿಟ್ಟುಕೊಳ್ಳಬೇಕು. ಒಬ್ಬರಿಂದ ಹತ್ತು ಜನ ಬದಲಾದರೆ ಅದೇ ಪರಿವರ್ತನೆ ಅಲ್ಲವೇ? ಈ ಮಹಿಳಾಮಣಿಗಳು ಆ ಸಾಲಿಗೆ ಸೇರಿದವರು. ಅದಕ್ಕಾಗಿಯೇ ಇಂದು ಅವರ ಸಾಧನೆಯನ್ನು ಪ್ರಧಾನ ಮಂತ್ರಿಯೇ ಗುರುತಿಸುವಂತಾಯಿತು. ಹೆಚ್ಚು ತಿಳಿಯಲು ಮುಂದೆ ಓದಿ…
1) ಹಸಿವನ್ನು ನೀಗಿಸುವ ಪಣ ತೊಟ್ಟಿರುವ ಮಾತೃ ಹೃದಯ – ಸ್ನೇಹಾ ಮೋಹನದಾಸ್
ಚೆನ್ನೈ ಮೂಲದ ಸ್ನೇಹಾಳಿಗೆ ಚಿಕ್ಕವಳಿದ್ದಾಗ ತನ್ನಮ್ಮ ಅನಾಥ ಮಕ್ಕಳನ್ನು ಮನೆಗೆ ಕರೆದು ಊಟ ಹಾಕುತ್ತಿದ್ದ ನೆನಪು. ಹುಟ್ಟುಹಬ್ಬ, ಹಬ್ಬ ಹರಿದಿನ ಹೀಗೆ ವಿಶೇಷ ದಿನಗಳಲ್ಲಿ ಅಮ್ಮನ ಈ ಕೃತಿಯನ್ನು ನೋಡುತ್ತಲೇ ಬೆಳೆದ ಸ್ನೇಹಾಳಿಗೆ ತಾನು ಹಾಗೆ ಹಸಿವು ನೀಗಿಸುವ ಕೆಲಸ ಮಾಡಬೇಕು ಎಂಬ ಮಹಾದಾಸೆಯಿತ್ತು. ಅದರ ಫಲವೇ Foodbank India. ಇದರ ಮೂಲಕ ಹಸಿವೆಯಿಂದ ಬಳಲುವ ಜನರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ ಊಟವನ್ನು ಸರಬರಾಜು ಮಾಡುವ ಗುರಿಯನ್ನಿಟ್ಟುಕೊಂಡು ಕೆಲಸ ಶುರು ಮಾಡಿದಳು ಸ್ನೇಹ. ಹಲವಾರು ಸ್ವಯಂಸೇವಕರು ಸ್ನೇಹಾಳ ಈ ಮಹೋನ್ನತ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸಹಾಯ ಮಾಡಲು ಮುಂದೆ ಬರುವವರ ಹತ್ತಿರ ದುಡ್ಡಿನ ಬದಲಾಗಿ ಅಡುಗೆಗೆ ಬೇಕಾದ ಸಾಮಾನುಗಳನ್ನು ಸಂಗ್ರಹಿಸುತ್ತಾರೆ. ಎಲ್ಲರು ಒಟ್ಟಿಗೆ ಅಡುಗೆ ಮಾಡಿ, ಡಬ್ಬಿಗಳಲ್ಲಿ ಹಾಕಿ ಗಲ್ಲಿ ಗಲ್ಲಿಗಳನ್ನು ಸುತ್ತುತ್ತಾ ಆಹಾರ ವಿತರಿಸುತ್ತಾರೆ. ದಾನಗಳಲ್ಲಿ ಮಹಾದಾನ ಅನ್ನದಾನ ಎಂಬ ಮಾತಿದೆ. ಅನ್ನದ ಋಣ ಎಲ್ಲದಕ್ಕಿಂತಲೂ ದೊಡ್ಡದು ಎಂದು ಹೇಳುತ್ತಾರೆ. ಕಾರಣ ಅನ್ನಕ್ಕಿರುವ ಬೆಲೆ. ಹಸಿವೆಯಿಂದ ಬಳುವವನಿಗೆ ತುತ್ತು ಅನ್ನವೇ ಹೊಟ್ಟೆ ತಣಿಸುವುದು ಮತ್ತು ಅದು ಬಹಳ ಪುಣ್ಯದ ಕೆಲಸ. ತಮ್ಮ ಈ ಸಾಧನೆಯ ಮೂಲಕ ಸ್ಪೂರ್ತಿಗೆ ಕಾರಣವಾಗಿರುವ ಸ್ನೇಹ ಎಲ್ಲರಿಗೂ ಹೇಳುವುದಿಷ್ಟೇ “ಕನಿಷ್ಠ ಒಬ್ಬರ ಹಸಿವನ್ನಾದರೂ ನೀಗಿಸುವ ಪ್ರಯತ್ನ ಮಾಡಿ. ಇದರಿಂದ ಹಸಿವಿನ ಕೊರತೆಯನ್ನು ನೀಗಿಸಬಹುದು”.
https://twitter.com/narendramodi/status/1236509753892671488
2) ಅಂಗಗಳು ಊನವಾದರೂ ಬದುಕನ್ನು ಕಟ್ಟಿಕೊಂಡ ದಿಟ್ಟೆ – ಮಾಳವಿಕಾ ಅಯ್ಯರ್
ಮಾಳವಿಕಾ ೧೩ ವರ್ಷದವಳಿದ್ದಾಗ ಮನೆಯ ಹತ್ತಿರ ಸಂಭವಿಸಿದ ಗ್ರಾನೈಡ್ ಸ್ಪೋಟದಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡಳು. ಜೊತೆಗೆ ಕಾಲುಗಳಿಗೂ ಹಲವಾರು ಗಾಯಗಳಾಗಿ ಸುಮಾರು ೧೮ ತಿಂಗಳುಗಳ ಕಾಲ ಮಾಳವಿಕಾ ಆಸ್ಪತ್ರೆಯಲ್ಲಿ ಇರಬೇಕಾಯಿತು. ಗಂಟೆಗಟ್ಟಲೆ ನಡೆದ ಶಸ್ತ್ರಚಿಕಿತ್ಸೆಗಳು, ನೋವು ನಿವಾರಕ ಔಷಧಿಗಳು, ಚುಚ್ಚುಮದ್ದುಗಳು, ಮಾತ್ರೆಗಳು ಹೀಗೆ ನೋವಿನ ಪ್ರತಿಯೊಂದು ಹಂತವನ್ನು ಅನುಭವಿಸಿದ ಮಾಳವಿಕಾಳಿಗೆ ಮುಂದಿನ ಜೀವನ ಅಷ್ಟು ಸುಲಭವಾಗಿರಲಿಲ್ಲ. ಹುಟ್ಟು ಅಂಗವಿಕಲತೆಗೂ ಅಪಘಾತಗಳಿಂದ ಸಂಭವಿಸುವ ಅಂಗವಿಕಲತೆಗೂ ಬಹಳ ವ್ಯತ್ಯಾಸವಿದೆ. ಮೊದಲನೆಯ ವಿಧದಲ್ಲಿ ಬದುಕು ಎಲ್ಲವನ್ನು ತಾನಾಗೇ ಕಲಿಸುತ್ತದೆ. ಎರಡನೆಯ ವಿಧದಲ್ಲಿ ಅಪಘಾತಕ್ಕೀಡಾದವನೇ ಎಲ್ಲವನ್ನು ಕಲಿಯಬೇಕಾಗುತ್ತದೆ. ಅದೊಂಥರಾ ಕೊಟ್ಟು ಕಸಿದುಕೊಂಡಂತೆ. ರುಚಿ ತೋರಿಸಿ ಕಿತ್ತುಕೊಂಡಂತೆ. ಕೈನ ಯಾವುದೋ ಒಂದು ಬೆರಳಿಗೆ ಗಾಯವಾದಲ್ಲಿ ನಮಗೆ ಆ ಬೆರಳಿಲ್ಲದೆ ಕೆಲಸ ಸಾಧಿಸುವುದು ಕಷ್ಟವಾಗಿರುತ್ತದೆ. ಅಸಾಧ್ಯವೆಂಬಂತೆ ತೋರುತ್ತದೆ. ಅಂತಹುದರಲ್ಲಿ ಇಡೀ ಕೈಗಳು ಹೋದಾಗ ಮಾಳವಿಕಾಗೆ ಹೇಗಾಗಿರಬೇಡ? ಆದರೆ ಮಾಳವಿಕಾ ಇದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತನ್ನ ಬದುಕನ್ನು ರೂಪಿಸಿಕೊಂಡಳು, ಮೊದಲಿಗಿಂತ ಚಂದವಾಗಿ. ಎಲ್ಲಕ್ಕಿಂತಲೂ ಮುಖ್ಯವಾದದ್ದು ವಿದ್ಯೆ ಎಂದರಿತುಕೊಂಡ ಮಾಳವಿಕಾ ತನ್ನ ಅಸಾಮಾನ್ಯ ದೈಹಿಕ ನೋವಿನ ಜೊತೆಗೆ ತನಗೆ ಕೈ ಇಲ್ಲ, ಇನ್ನು ಮುಂದೆ ಬರೆಯಲಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳುತ್ತಲೇ ಬೇರೆಯವರ ಸಹಾಯದಿಂದ ಹತ್ತನೇ ತರಗತಿಯ ಪರೀಕ್ಷೆ ಬರೆದಳು. ಕೇವಲ ಮೂರೇ ಮೂರು ತಿಂಗಳುಗಳ ಸಿದ್ಧತೆ ನಡೆಸಿದ್ದರೂ ಫಲಿತಾಂಶ ಬಂದಿದ್ದು ೯೭%!! ಅಲ್ಲಿಂದ ಮಾಳವಿಕಾ ಹಿಂದೆ ತಿರುಗಿ ನೋಡಲಿಲ್ಲ. ತನಗಾದ ನೋವಿಗೆ, ನಷ್ಟಕ್ಕೆ ಕಣ್ಣೀರಿಡಲಿಲ್ಲ. ಅವತ್ತು ಆ ಅಪಘಾತದಲ್ಲಿ ತಾನು ಬದುಕುಳಿದಿದ್ದೇ ತನ್ನ ಅದೃಷ್ಟವೆಂದು ಭಾವಿಸಿ ಮೊದಲು ತಾನು ಏನೆಲ್ಲಾ ಮಾಡಲು, ಓದಲು ಸಾಧ್ಯವಿತ್ತೋ ಅದನ್ನೆಲ್ಲ ಮಾಡಿದಳು. ಕೈಗಳನ್ನು ಕಳೆದುಕೊಂಡಿದ್ದು ಊನವೆಂದು ಭಾವಿಸಲೇ ಇಲ್ಲ. ಅಂಗವಿಕಲರಲ್ಲಿ ಅದರಲ್ಲೂ ಯುವ ಅಂಗವಿಕಲರಲ್ಲಿ ಶಿಕ್ಷಣದ ಅರಿವು ಮತ್ತು ಎಲ್ಲರನ್ನು ಒಂದೇ ತೆರನಾಗಿ ನೋಡುವ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾಳೆ ಮಾಳವಿಕಾ. ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ತಮ್ಮ ಭಾಷಣದ ಮೂಲಕ ಅಂಗವೈಕಲ್ಯತೆಯ ಬಗ್ಗೆ ಮತ್ತು ಅವರು ನಮ್ಮಂತೆಯೇ ಮನುಷ್ಯರು ಎಂಬ ಸಂದೇಶವನ್ನು ಸಾರುತ್ತಿದ್ದಾಳೆ. ಇದರ ಪರಿಣಾಮವಾಗಿ ೨೦೧೮ ರಲ್ಲಿ ಭಾರತದ ಅಧ್ಯಕ್ಶರಾದಂತಹ ಶ್ರೀ ರಾಮನಾಥ್ ಕೊವಿಂದ್ ಅವರಿಂದ ಪ್ರತಿಷ್ಠಿತ ‘ನಾರಿ ಶಕ್ತಿ’ ಪ್ರಶಸ್ತಿ ಮಾಳವಿಕಾ ಅವರಿಗೆ ದಕ್ಕಿದೆ.
https://twitter.com/narendramodi/status/1236524595081097216
3) ಸಾಂಪ್ರದಾಯಿಕ ಕರಕೌಶಲತೆಯನ್ನು ಉದ್ಯಮವನ್ನಾಗಿಸಿಕೊಂಡ ಆರಿಫಾ
ಕಾಶ್ಮೀರದ ಶ್ರೀನಗರದ ನಿವಾಸಿ ಆರಿಫಾ ಕ್ರಾಫ್ಟ್ ಮ್ಯಾನೇಜ್ಮೆಂಟ್ ಓದುತ್ತಿದ್ದ ಸಮಯವದು. ಇವರಿಗೆ ತರಬೇತಿಗೆಂದು ಕುಶಲಕರ್ಮಿಗಳ ಮನೆಗೆ ಕರೆದೊಯ್ಯುತ್ತಿದ್ದರು. ಇವರು ಹೋಗುತ್ತಿದ್ದ ಮನೆಗಳಲ್ಲಿ ಕಲೆಯ ಶ್ರೀಮಂತಿಕೆಯಿತ್ತೇ ವಿನಃ ಕಲಾವಿದರ ಬದುಕು ಹೇಳಿಕೊಳ್ಳುವಂತಿರಲಿಲ್ಲ. ಬಟ್ಟೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುವಂತಹ ವಿಶಿಷ್ಟವಾದ ‘ನಮದಾ’ ಹೆಸರಿನ ಕಲೆ ಅದು. ಲಾಭದ ಮಾತಂತೂ ದೂರವೇ ಉಳಿಯಿತು ಅವರು ಹಾಕಿದ್ದ ಶ್ರಮಕ್ಕೆ ಸಿಗಬೇಕಾದಂತಹ ವೇತನ ಸಿಗುತ್ತಿರಲಿಲ್ಲ. ಸರಿಯಾದ ಬೆಲೆ ಸಿಗದ ಕಾರಣಕ್ಕೆ ಹಲವರು ಈ ಕೆಲಸ ಬಿಟ್ಟು ಇನ್ನಿತರ ಕೆಲಸಗಳ ಕಡೆಗೆ ಮುಖ ಮಾಡಿದ್ದರು. ಮೊದಲೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ರಫ್ತಾಗುತ್ತಿದ್ದ ನಮದಾ ಬಟ್ಟೆ ಇಳಿಮುಖ ಕಂಡಿತ್ತು. ದಿನವಿಡೀ ಕೆಲಸ ಮಾಡಿದರು ಮಹಿಳೆಯರಿಗೆ ಸಿಗುತ್ತಿದ್ದುದು ಹೆಚ್ಚೆಂದರೆ ೫೦ ರೂಪಾಯಿಗಳು. ಇದನ್ನೆಲ್ಲಾ ನೋಡಿದ ಆರಿಫಾ ಕಾಶ್ಮೀರದ ಕಲಾವಿದರಿಗಾಗಿ, ಕಾಶ್ಮೀರಕ್ಕಾಗಿ, ನಶಿಸಿ ಹೋಗುತ್ತಿರುವ ಕಲೆಗಾಗಿ ಏನನ್ನಾದರೂ ಮಾಡಲೇಬೇಕೆಂದು ನಿರ್ಧಾರ ಮಾಡಿದಳು. ಆಧುನಿಕ ಜಗತ್ತಿಗೆ ಒಗ್ಗುವಂತಹ, ಈಗಿನ ಜನರ ಅಭಿರುಚಿಗೆ ತಕ್ಕಂತೆ ನಮದಾ ಕಲೆಯನ್ನುಪಯೋಗಿಸಿ ಜಮಖಾನೆ ಮತ್ತು ಇನ್ನು ಅನೇಕ ವಿಧಗಳನ್ನು ತಯಾರಿಸಿ ದೆಹಲಿಯ ಕುಶಲಕರ್ಮಿಗಳ ಮೇಳದಲ್ಲಿ ಪ್ರದರ್ಶಿಸಿದರು. ಬಹಳಷ್ಟು ಜನರಿಂದ ಮೆಚ್ಚುಗೆ ಪಡೆದು ಒಳ್ಳೆಯ ಬೇಡಿಕೆ ಬಂದುದರಿಂದ ಆರಿಫಾ ಇದನ್ನೇ ಉದ್ಯಮವಾಗಿಸಿಕೊಂಡು ಇವತ್ತು ಹಲವಾರು ಮಹಿಳೆಯರಿಗೆ ಕೆಲಸ ನೀಡಿ ಒಳ್ಳೆಯ ವೇತನ ನೀಡುತ್ತಿದ್ದಾಳೆ. ಕೆಲಸ ಸಿಗುತ್ತಿಲ್ಲವೆಂದು ಅಲೆಯುವ ಯುವಜನರಿಗೆ ಆರಿಫಾ ಹೇಳುವುದಿಷ್ಟೇ “ಕೆಲಸವನ್ನು ಸೃಷ್ಟಿಸಿಕೊಂಡು ಅದರಲ್ಲಿ ಯಶಸ್ವಿಯಾಗಿ ಇನ್ನು ಹಲವರಿಗೆ ಕೆಲಸ ನೀಡುವಂತಾಗಿ”
https://twitter.com/narendramodi/status/1236539882027139072
4) ಬಂಜಾರಾ ಹಸ್ತಕಲೆಯ ನಿಪುಣೆ – ವಿಜಯಾ ಪವಾರ್
ಭಾರತ ದೇಶ ಅನೇಕ ಕರಕೌಶಲಗಳಿಗೆ ಹೆಸರುವಾಸಿ. ಚನ್ನಪಟ್ಟಣದ ಬೊಂಬೆಗಳು, ಬಿದಿರು ಬುಟ್ಟಿಗಳು, ಮಡಿಕೆ ಹಣತೆಗಳು, ಕೌದಿಗಳು, ಗಣೇಶನ ಮೂರ್ತಿಗಳು ಹೀಗೆ ಹಲವು ಕಲೆಯ ವಿಧಗಳು. ದುಃಖಕರ ಸಂಗತಿಯೆಂದರೆ ಆಧುನಿಕತೆಯ ಅಬ್ಬರದಲ್ಲಿ ಬಹುತೇಕ ಕಲೆಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ. ಕಲಾಕಾರರು ತಮ್ಮ ವಂಶಪಾರ್ಯಾಂಪರ ವೃತ್ತಿಯನ್ನು ಬಿಟ್ಟು ಹೊಟ್ಟೆ ಬಟ್ಟೆಗೆ ಸಾಕಾಗುವಂತಹ ಕೆಲಸವನ್ನು ಹುಡುಕಿಕೊಳ್ಳುತ್ತಿದ್ದಾರೆ ಹೀಗೆ ನಮಗೆ ಗೊತ್ತಿಲ್ಲದೇ ಎಷ್ಟೋ ಕಲೆಗಳು ಸತ್ತೇ ಹೋಗಿವೆ. ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಆದದ್ದು ಇದೇ. ಬಂಜಾರಾ ಎಂಬುದು ಅಲ್ಲಿನ ಎಲ್ಲ ಮನೆಗಳಲ್ಲೂ ಅನಾದಿಯಿಂದ ಬಂದಂತಹ ಹಸ್ತಕಲೆ. ಸೂಜಿ ದಾರದಿಂದ ಬಟ್ಟೆಗಳ ಮೇಲೆ ಕನ್ನಡಿಯನ್ನು ಜೋಡಿಸಿ ಚಿತ್ತಾರವನ್ನು ಮೂಡಿಸುವ ಈ ಕಲೆಗೆ ನಾಜೂಕಿನ ಜೊತೆಗೆ ಗಂಟೆಗಟ್ಟಲೆ ಕುಳಿತುಕೊಂಡು ಹೆಣೆಯುವ ತಾಳ್ಮೆ ಬೇಕು. ವಿಜಯಾ ಅವರ ಅಮ್ಮ, ಅಜ್ಜಿ ಕೂಡ ಬಂಜಾರಾ ಹಸ್ತಕಲೆಯಲ್ಲಿ ಪರಿಣಿತರು. ಮದುವೆಯಾದ ಮೇಲೆ ಗಂಡನ ಪ್ರೋತ್ಸಾಹದಿಂದ ಈ ಕಲೆಯನ್ನು ಇನ್ನು ಚೆನ್ನಾಗಿ ಕಲಿತ ವಿಜಯಾ ಅದರಲ್ಲೇ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಳು. ಸತತ ನಾಲ್ಕು ವರ್ಷಗಳ ಕಾಲ ಸಾಂಪ್ರದಾಯಿಕ ಉಡುಗೆಗಳನ್ನೆಲ್ಲ ಸಿದ್ದಪಡಿಸಿ ೨೦೦೪ ರಲ್ಲಿ ಒಂದು NGO ತೆರೆದರು. ಮಹಿಳೆಯರಿಗೆಂದೇ ಶುರುವಾದ ಈ NGO ಗೆ ತನ್ನೂರಿನ ಬಂಜಾರಾ ಹಸ್ತಕಲೆ ತಿಳಿದಿದ್ದ ಎಲ್ಲ ಮಹಿಳೆಯರನ್ನು ವಿಜಯಾ ಕರೆ ತಂದಳು. ಆಸಕ್ತಿಯಿರುವವರಿಗೆ ತರಬೇತಿಯನ್ನು ನೀಡಲಾಯಿತು. ಸುದ್ದಿ ತಿಳಿದ ಸುತ್ತ ಮುತ್ತಲ ಊರಿನ ಹೆಂಗಸರು ಸಹ ಇಲ್ಲಿಗೆ ಬರತೊಡಗಿದರು. ಇಲ್ಲಿ ಸಿದ್ದ ಪಡಿಸಿದ ವಸ್ತ್ರಗಳನ್ನು ಖಾದಿಯ ಮತ್ತು ಇನ್ನಿತರ ಮೇಳಗಳಲ್ಲಿ ಪ್ರದರ್ಶಿಸಿ ಮಾರುತ್ತಾರೆ. ಇದರಿಂದ ಮಹಿಳೆಯರಿಗೆ ದುಡಿಯಲು ಮತ್ತು ತಮ್ಮ ಕಲೆಯನ್ನು ಸರಿಯಾದ ಕಡೆ ಉಪಯೋಗಿಸಲು ಅನುಕೂಲವಾಗಿದೆ. ಇದರ ಜೊತೆಗೆ ಬಂಜಾರಾ ಹಸ್ತಕಲೆ ಕೂಡ ಮುಂದಿನ ತಲೆಮಾರಿಗೆ ಬಳುವಳಿಯಾಗಿ ಸಾಗುತ್ತಿದೆ.
https://twitter.com/narendramodi/status/1236570399967596544
5) ನೀರನ್ನು ಸಂರಕ್ಷಿಸುತ್ತಿರುವ ಜಲ ಯೋಧೆ – ಕಲ್ಪನಾ
ಕೆಲವೊಮ್ಮೆ ಸಣ್ಣ ಪ್ರಯತ್ನಗಳು ದೊಡ್ಡ ಬದಲಾವಣೆಯನ್ನೇ ಮಾಡಬಹುದು. ಇತ್ತೀಚಿಗೆ ನಾವು ನಂದಿನಿ ಹಾಲಿನ ಪ್ಯಾಕೆಟ್ಟಿನ ತುದಿಯನ್ನು ಹೇಗೆ ಯುಕ್ತಿಯಿಂದ ಕತ್ತರಿಸಿ ಸಣ್ಣ ಪ್ಲಾಸ್ಟಿಕ್ ತುಂಡು ಪರಿಸರದಲ್ಲಿ ಕಳೆದು ಹೋಗುವುದನ್ನು ತಪ್ಪಿಸಬಹುದೆಂದು ನೋಡಿದ್ದೆವು. ಹೇಳಲು ಹೊರಟರೆ ಎಷ್ಟು ಸಣ್ಣ ಕೆಲಸವಿದು.. ಆದರೆ ಇವತ್ತು ಪ್ರತಿಯೊಂದು ಮನೆಗಳಲ್ಲಿ ದಿನಕ್ಕೆ ಅದೆಷ್ಟೋ ನಂದಿನಿ ಪ್ಯಾಕೆಟ್ಟುಗಳನ್ನು ತರುತ್ತಾರೆ. ಲೆಕ್ಕವಿಲ್ಲದಷ್ಟು ಅದೆಷ್ಟೋ ಸಣ್ಣ ತುಂಡುಗಳು ಕಸದಲ್ಲಿ ಸೇರಿ ವಿಂಗಡಣೆ ಮಾಡುವವರ ಕೈಗಳಿಂದ ತಪ್ಪಿಸಿಕೊಂಡು ಬಿಡುತ್ತವೆ ಅಲ್ಲವೇ? ಮಾರುಕಟ್ಟೆಗೆ ನಮ್ಮದೇ ಚೀಲಗಳನ್ನು ತೆಗೆದುಕೊಂಡು ಹೋಗುವುದಿರಬಹುದು, ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ಕಿನ ಡಬ್ಬಗಳಲ್ಲಿ ಮಾರುವ ಆಹಾರ ಇತ್ಯಾದಿಗಳನ್ನು ಕೊಳ್ಳುವುದನ್ನು ನಿಲ್ಲಿಸುವುದಿರಬಹುದು, ಪಕ್ಷಿಗಳಿಗೆ ನೀರಿಡುವ ಕೆಲಸವಿರಬಹುದು ಇವೆಲ್ಲವೂ ನಮಗಾಗಿ, ನಮ್ಮ ಮುಂದಿನ ಭವಿಷ್ಯಕ್ಕಾಗಿ, ಪರಿಸರಕ್ಕಾಗಿ ಮಾಡುವ ಸಣ್ಣ ಸಣ್ಣ ಕಾರ್ಯಗಳು. ಇಂತಹುದೇ ಒಂದು ಸಣ್ಣ ಕಾರ್ಯದಿಂದ ಮನೆ ಮಾತಾಗಿ, ಮೊನ್ನೆ ಪ್ರಧಾನ ಮಂತ್ರಿಯವರ ಟ್ವಿಟ್ಟರ್ ಅಕೌಂಟ್ ಹ್ಯಾಂಡಲ್ ಮಾಡಿದ ಮಹಿಳೆ ಕಲ್ಪನಾ. ಅಪಾರ್ಟ್ಮೆಂಟಿನಲ್ಲಿ ಇರುವ ಬಹುತೇಕರಿಗೆ ಗೊತ್ತು ನೀರಿನ ಟ್ಯಾಂಕರ್ ಗಳಿಲ್ಲದೆ ಕೆಲಸವಿಲ್ಲ ಎಂದು. ಪ್ರತಿ ತಿಂಗಳ ಒಟ್ಟು ನಿರ್ವಹಣಾ ಶುಲ್ಕದಲ್ಲಿ ಈ ವಾಟರ್ ಟ್ಯಾಂಕರ್ ಗಳ ಲೆಕ್ಕವೇ ಬಹುಪಾಲಿರುತ್ತದೆ. ಇದನ್ನು ಗಮನಿಸಿದ ಕಲ್ಪನಾ ತಮ್ಮ ಹೊಸ ಮನೆಯಲ್ಲಿ ಒಂದು ಹನಿಯು ಕೂಡ ಪೋಲಾಗದಂತೆ ನೋಡಿಕೊಳ್ಳುತ್ತಾರೆ. Arcitecture ಓದಿದ್ದ ಕಲ್ಪನಾಗೆ ಮಳೆನೀರಿನ ಸಂಗ್ರಹಣೆಗೆ, ಜವಾಬ್ದಾರಿಯುತ ನಿರ್ವಹಣೆಗೆ ಸೂಕ್ತವಾಗುವಂತೆ ಮನೆ ಕಟ್ಟಿಸುವುದು ಕಷ್ಟವಾಗಿರಲಿಲ್ಲ. ತಮ್ಮ ಮನೆಯಲ್ಲಿ ಇದನ್ನು ಅಳವಡಿಸಿ ಅದರ ಲಾಭವನ್ನು ಕಂಡುಕೊಂಡ ಕಲ್ಪನಾ ಇತರರಿಗೂ ಅದರ ಮಹತ್ವವನ್ನು ತಿಳಿಸುತ್ತಾರೆ, ಇದರಿಂದ ಅವರಿದ್ದ ಕಮ್ಯೂನಿಟಿ ೨೦೧೬ ರ ಬೇಸಗೆಯಲ್ಲಿ ಒಂದು ಟ್ಯಾಂಕರ್ ನ್ನು ಸಹ ತರಿಸದೆ ತಾವು ಸಂಗ್ರಹಿಸಿದ, ಉಳಿಸಿದ ನೀರಿನಿಂದಲೇ ಜೀವನ ಸಾಗಿಸಿದರು. ಒಂದು ವೇಳೆ ಈ ವಿಧವನ್ನು ಎಲ್ಲ ಅಪಾರ್ಟ್ಮೆಂಟ್ ನವರು ಅಳವಡಿಸಿಕೊಂಡರೆ ಅದೆಷ್ಟು ನೀರು ಉಳಿಸಬಹುದಲ್ಲವೇ? ಅಡುಗೆ ಮನೆಯಲ್ಲಿ ಬಹುಪಾಲು ಮಹಿಳೆಯರೇ ಕೆಲಸ ಮಾಡುವುದರಿಂದ ಈ ಕಾರ್ಯದಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ ಎಂದು ಕಲ್ಪನಾ ಹೇಳುತ್ತಾರೆ. ಆಸಕ್ತಿಯಿರುವವರು ಮುಂದೆ ಬಂದು ಕಲ್ಪನಾ ಅವರನ್ನು ಸಂಪರ್ಕಿಸಿ ತಮ್ಮ ಮನೆಗಳಲ್ಲೂ ಈ ವಿಧಾನವನ್ನು ಅಳವಡಿಸಿಕೊಂಡು ನೀರಿನ ಸಮಸ್ಯೆಯಿಂದ ಪಾರಾಗಬಹುದು.
https://twitter.com/narendramodi/status/1236556246003511297
6) ಸ್ವಚ್ಛತೆಯ ಗುರಿಯನ್ನು ಮುಟ್ಟಿದ ಛಲಗಾತಿ ಕಲಾವತಿ ದೇವಿ
ಸ್ವಚ್ಛ ಭಾರತ ಅಭಿಯಾನ ಶುರುವಾಗಿ ವರುಷಗಳೇ ಕಳೆಯಿತು. ಇಡೀ ದೇಶವೇ ಜಾಗೃತವಾದರೂ ಒಂದಷ್ಟು ಜನ ಇನ್ನೂ ಸುಧಾರಿಸಿಲ್ಲ, ಅಲ್ಲಲ್ಲಿ ಉಗುಳುತ್ತಾರೆ, ಮೂತ್ರ ವಿಸರ್ಜಿಸುತ್ತಾರೆ, ಪ್ಲಾಸ್ಟಿಕ್ ಬಿಸಾಡುತ್ತಾರೆ, ತಿಂದು ಕಸವನ್ನು ಅಲ್ಲಿಯೇ ಹಾಕುತ್ತಾರೆ ಹೀಗೆ ಹೋದಲ್ಲೆಲ್ಲ ತಮ್ಮ ಕೆಟ್ಟ ಹೆಜ್ಜೆ ಗುರುತನ್ನು ಮೂಡಿಸಿರುತ್ತಾರೆ. ಎಲ್ಲಿಯವರೆಗೆ ಇಂತಹವರು ಸುಧಾರಿಸಲು ಆಗುವುದಿಲ್ಲವೋ ಅಲ್ಲಿಯವರೆಗೆ ಸ್ವಚ್ಛ ಭಾರತದ ಕನಸು ನನಸಾಗುವುದು ಅಸಾಧ್ಯ. ಎಷ್ಟು ಅಂತ ಹಿಂದೆಯಿಂದ ಹೋಗಿ ಸ್ವಚ್ಛ ಮಾಡುತ್ತೀರಿ? ಮತ್ತೆ ಮಾರನೇ ದಿನ ಬಂದು ಸ್ವಚ್ಛ ಮಾಡಿದ ಜಾಗದಲ್ಲೇ ಕಸ ಬಿಸಾಕಿ ಹೋಗುತ್ತಾರೆ. ತಮ್ಮ ಮನೆಯ ಕಸವನ್ನು ಬೇರೆಯವರ ಅಂಗಳದಲ್ಲಿ ಚೆಲ್ಲುವ ದರಿದ್ರ ಮನಸುಗಳು ಇರುವವರೆಗೂ ಅಭಿವೃದ್ಧಿ ಹೇಗಾದೀತು ಹೇಳಿ? ಕಲಾವತಿ ಬೆಳೆದದ್ದು ಇಂತಹದೇ ದರಿದ್ರ ಸ್ಥಳದಲ್ಲಿ. ಎಲ್ಲಿ ನೋಡಿದರು ಕಸ, ಕಸದ ರಾಶಿ.. ಶೌಚಾಲಯವಿಲ್ಲ, ಸ್ವಚ್ಚ ಕುಡಿಯುವ ನೀರಿಲ್ಲ, ಅಲ್ಲೇ ಸ್ನಾನ ಅಲ್ಲೇ ಬಟ್ಟೆ ಒಗೆಯುವುದು, ಕ್ರೀಮಿ ಕೀಟಗಳ ಆಗರವಾಗಿತ್ತು ಆ ಪ್ರದೇಶ.. ಕೈಲಾಗದು ಎಂದು ಎಲ್ಲರಂತೆ ಸುಮ್ಮನೆ ಕೂರದೆ ಕಲಾವತಿ ದೇವಿ ತಾನಿದ್ದ ಪ್ರದೇಶದ ಸ್ವಚ್ಚತೆಗೆ ಮುಂದಾಗುತ್ತಾಳೆ. ಮನೆ ಮನೆಗೆ ಹೋಗಿ ಎಲ್ಲರಿಗು ತಿಳಿ ಹೇಳುತ್ತಾಳೆ. ಇದು ಅಷ್ಟು ಸುಲಭವಿರಲಿಲ್ಲ, ಈ ತಿಳಿ ಹೇಳುವ ಕೆಲಸ, ಅರ್ಥ ಮಾಡಿಸುವ ಕೆಲಸ ಸುಮಾರು ೨ ವರ್ಷಗಳ ಕಾಲ ನಡೆಯಿತು. ಆಕೆಯೇನೂ ಯುವತಿ ಅಲ್ಲ ಸುಮಾರು ೬೦ ಕ್ಕಿಂತಲೂ ಹೆಚ್ಚೇ ಇರಬಹುದು ವಯಸು ಕಲಾವತಿ ದೇವಿಗೆ. ಅಂತೂ ಇಂತೂ ಜನಗಳಿಗೆ ಅರ್ಥವಾದಾಗ ಶೌಚಾಲಯದ ನಿರ್ಮಾಣಕ್ಕಾಗಿ ೫೦, ೧೦೦ ಹೀಗೆ ಪ್ರತಿಯೊಬ್ಬರಿಂದಲೂ ಹಣ ಸಂಗ್ರಹಿಸುತ್ತಾಳೆ. ಇದಕ್ಕೆ ಒಂದು ವರ್ಷ ಸಮಯ ಬೇಕಾಯಿತು. ಪರಿಣಾಮವಾಗಿ ಕಲಾವತಿ ದೇವಿ ಇತರರೊಂದಿಗೆ ಸೇರಿ ೫೫ ಸೀಟುಗಳ ಶೌಚಾಲಯ ಮತ್ತು ೧೧೦೦೦ ಲೀಟರಗಳ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಾಣ ಮಾಡುತ್ತಾರೆ. ಗುರಿ ಸಾಧಿಸುವ ಹಾದಿಯಲ್ಲಿ ಯಾವತ್ತೂ ಹಿಂದೆ ತಿರುಗಿ ನೋಡಬಾರದು, ಆಡುವವರು ಆಡಿಕೊಳ್ಳಲಿ ಆದರೆ ನಾವು ಮಾತ್ರ ಗುರಿಯನ್ನು ಸಾಧಿಸುವ ಉದ್ದೇಶವನ್ನಷ್ಟೇ ಹೊಂದಿರಬೇಕೆಂದು ಕಲಾವತಿ ದೇವಿಯ ಸಂದೇಶ.
https://twitter.com/narendramodi/status/1236585661475373058
7) ಮನೆಯಲ್ಲೇ ಕೃಷಿ ಕಾಯಕದಲ್ಲಿ ತೊಡಗಿರುವ ವೀಣಾ ದೇವಿ
ಮನೆಯಲ್ಲೇ ಮಲಗುವ ಪಲ್ಲಂಗದ ಕೆಳಗೆ ಒಂದು ಕಿಲೋ ಮಶ್ರೂಮನೊಂದಿಗೆ ವೀಣಾಳ ಕೃಷಿಕಾರ್ಯ ಶುರುವಾಯಿತು. ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಇವಳ ಹತ್ತಿರ ಎಕರೆಗಟ್ಟಲೆ ಹೊಲವಾಗಲಿ ಮನೆಯ ಮುಂದೆ ದೊಡ್ಡ ಪ್ರಾಂಗಣವಾಗಲಿ ಇರಲಿಲ್ಲ. ಹೀಗೆ ಒಂದು ಕಿಲೊನೊಂದಿಗೆ ಶುರುವಾದ ಮಶ್ರೂಮ್ ವ್ಯವಸಾಯ ಕೋಣೆಯ ನಾಲ್ಕು ದಿಕ್ಕಿಗೂ ಹಬ್ಬಿತು. ತನ್ನದೇ ಚಿಕ್ಕಕೋಣೆಯಲ್ಲಿ ಇದ್ದಷ್ಟೇ ಜಾಗವನ್ನು ಸದುಪಯೋಗಿಸಿಕೊಂಡು ವೀಣಾ ಫಲವತ್ತಾದ ಮಶ್ರೂಮ ಬೆಳೆದಳು. ಇದನ್ನು ಗುರುತಿಸಿದ ಬಿಹಾರ ಸರಕಾರ ಈಕೆಗೆ ಪ್ರಶಸ್ತಿ ನೀಡಿ ಗೌರವಿಸಿತು. ಸರಪಂಚಳಾದ ವೀಣಾ ಸುತ್ತಲಿನ ೨೦ ಹಳ್ಳಿಗಳ ಮಹಿಳೆಯರಿಗೆ ಮನೆಯಲ್ಲೇ ಮಶ್ರೂಮ ಬೆಳೆಯುವುದರ ಬಗ್ಗೆ, ವಿಧಿ ವಿಧಾನಗಳ ಬಗ್ಗೆ ತರಬೇತಿ ನೀಡಿದಳು. ಇವತ್ತು ಮುಂಗೊರನ ಹಲವಾರು ಜನ ಮಹಿಳೆಯರು ಮಶ್ರೂಮ ಬೆಳೆಯುವ ಕಾಯಕದಲ್ಲಿ ತೊಡಗಿದ್ದಾರೆ ಮತ್ತು ತಮ್ಮ ಹೊಟ್ಟೆ ಬಟ್ಟೆಯನ್ನು ತಾವೇ ಸಂಪಾದಿಸುತ್ತಿದ್ದಾರೆ.
https://twitter.com/narendramodi/status/1236601043921715200
ನಿಮ್ಮ ಪ್ರತಿಭೆ ಏನೇ ಇರಬಹುದು, ಕಲ್ಪನೆ ಸಣ್ಣದೇ ಆಗಿರಬಹುದು, ಬೇಕಾದ ಸವಲತ್ತುಗಳು ಇಲ್ಲದಿರಬಹುದು ಯಾವುದಕ್ಕೂ ಹೆಜ್ಜೆ ಹಿಂದೆ ಹಾಕದಿರಿ. ಧೈರ್ಯದಿಂದ ಮನಸು ಮಾಡಿ ಮತ್ತು ಆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಿ. ಒಂದು ಹೆಜ್ಜೆ ಸಾವಿರ ಹೆಜ್ಜೆ ಇಡುವ ಆತ್ಮವಿಶ್ವಾಸ ತರುತ್ತದೆ. ಸವಲತ್ತುಗಳು, ಅವಕಾಶಗಳು, ಮೆಚ್ಚುಗೆಗಳು ತಾನಾಗಿಯೇ ಒಲಿದು ಬರುತ್ತವೆ. ಬೇಕಾಗಿರುವುದಿಷ್ಟೇ ದೃಢ ವಿಶ್ವಾಸ, ಪರಿಶ್ರಮ ಮತ್ತು ತಾಳ್ಮೆ!