ಎಲ್ಲರಿಗು ನಮಸ್ಕಾರ,
ನಾನು ಸಂಜೋತಾ ಪುರೋಹಿತ. ನಮ್ಮೂರು ಹಾಗು ನನಗಿಷ್ಟವಾದ ಊರು ಧಾರವಾಡ. ಶಿಕ್ಷಣವಾಗಿದ್ದು ರಾಯಬಾಗ, ಕಿತ್ತೂರು, ಧಾರವಾಡ ಮತ್ತು ದಾವಣಗೆರೆಯಲ್ಲಿ. ಇಂಜಿನಿಯರಿಂಗ್ ಪದವಿಯ ನಂತರ ಕೆಲಸದ ನಿಮಿತ್ತ ಮಹಾನಗರಿ ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ಬಂದು ಸೇರಿಕೊಂಡೆ. ಮೂರು ವರುಷಗಳ ಕೆಲಸದ ನಂತರ ಯುಕೆ ಗೆ ಒಂದು ವರುಷದ ಮಟ್ಟಿಗೆ ಹೋಗಿ ಬಂದೆ. ಪ್ರೀತಿಯ ಹುಡುಗನೊಡನೆ ಮದುವೆಯು ಆಯಿತು. 10 ವರುಷಗಳ ಪ್ರೀತಿ ಇಂದಿಗೂ ಮೊದಲನೇ ದಿನದಷ್ಟೇ ಹೊಸದಾಗಿದೆ, ಹಸಿರಾಗಿದೆ. ಈಗ ಗಂಡನೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದೇನೆ. ಇದಿಷ್ಟು ನನ್ನ ಸ್ವವಿವರ.
ನಾನು ಚಿಕ್ಕವಳಿದ್ದಾಗ ನಮ್ಮಮ್ಮ ಕಾದಂಬರಿಗಳನ್ನು ಓದುತ್ತಿದ್ದರು. ನಾನಾಗ ೬ ನೇ ತರಗತಿಯಲ್ಲಿದ್ದೆನೇನೋ.. ಅಮ್ಮ ತಂದಿಡುತ್ತಿದ್ದ ಪುಸ್ತಕಗಳನ್ನು ನಾನು ಓದಲು ಶುರು ಮಾಡಿದೆ. ಆ ವಯಸಿನಲ್ಲಿ ಕಾದಂಬರಿಗಳನ್ನು ಓದುವುದು ಒಳ್ಳೆಯದಲ್ಲವೆಂದು ಅಮ್ಮ ಸದಾ ಬುದ್ಧಿ ಹೇಳುತ್ತಿದ್ದರು. ನನ್ನ ಕಣ್ಣಿಗೆ ಕಾದಂಬರಿಗಳು ಕಾಣಿಸದಂತೆ ಬಚ್ಚಿಡುತ್ತಿದ್ದರು. ಆದರೂ ಅವರ ಕಣ್ಣು ತಪ್ಪಿಸಿ ಪಠ್ಯ ಪುಸ್ತಕಗಳನ್ನು ಓದುತ್ತಿರುವಂತೆ ನಟಿಸುತ್ತಾ ಅದರೊಳಗೆ ಕಾದಂಬರಿ ಇಟ್ಟು ಓದುತ್ತಿದ್ದ ಟಪೋರಿ ನಾನು. ನಂತರ ವಿದ್ಯಾಭ್ಯಾಸದ ಪರಿಣಾಮವಾಗಿ ಓದುವ ಗೀಳು ಕಡಿಮೆಯಾಯಿತಾದರೂ ನಿಂತಿರಲಿಲ್ಲ.
ಬ್ಲಾಗ್ ಎಂಬ ಹೊಸ ಪ್ರಪಂಚ ಶುರುವಾದ ಮೇಲೆ ನಾನು ನನ್ನದೊಂದು ಬ್ಲಾಗ್ ಬರೆಯತೊಡಗಿದೆ. ಕೆಲಸದ ಜೊತೆ ಜೊತೆಗೆ ಕನ್ನಡ ಕಾದಂಬರಿಗಳನ್ನು ಓದುತ್ತ ನನ್ನ ಅನಿಸಿಕೆಗಳನ್ನುಬರೆದೆ. ಕಾದಂಬರಿಗಳ ಬಗ್ಗೆ ಬರೆದ ಬಹುತೇಕ ಲೇಖನಗಳು ವಿಮರ್ಶೆಗಳಲ್ಲ; ನನ್ನ ಅನಿಸಿಕೆಗಳು. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂಬ ಮಾತಿದೆಯಾದರು ವಿಮರ್ಶೆ ಮಾಡುವಷ್ಟು ದೊಡ್ಡವಳು ನಾನಲ್ಲ ಎಂಬ ಭಾವನೆ. ಇಲ್ಲಿಯವರೆಗೂ ಸುಮಾರು ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಓದಿರುವೆನಾದರೂ ಇಲ್ಲಿ ಇರುವುದು ಕೆಲವೇ ಕೆಲವು. ಶ್ರೀಯುತ ಎಸ್.ಎಲ್.ಭೈರಪ್ಪನವರ ಅಭಿಮಾನಿಯಾದ್ದರಿಂದ ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ ಎಂಬ ಹೆಮ್ಮೆ.
ಓದುವುದಷ್ಟೇ ಅಲ್ಲದೆ ಆಗಾಗ ಲೇಖನಗಳು, ಕವನಗಳನ್ನು ಗೀಚುತ್ತಿರುತ್ತೇನೆ. ನನ್ನ ಫೇಸ್ಬುಕ್, ಟ್ವಿಟ್ಟರ್ ಲಿಂಕ್ಸ್ ಸಹ ಕೊಟ್ಟಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ಧನ್ಯವಾದಗಳು,
ಸಂಜೋತಾ ಪುರೋಹಿತ