ಮತ್ತೆ ಬಂದೇ ಬಿಟ್ಟ ಗಣಪ…
ಅವನು ರಾವಣ.. ಮಹಾ ಶಕ್ತಿವಂತ. ರಾಕ್ಷಸರಲ್ಲೇ ಅತ್ಯಂತ ಪ್ರಭಾವಶಾಲಿ. ಒಮ್ಮೆ ಅವನು ಶಿವನನ್ನು ನೆನೆಯುತ್ತ ಘೋರ ತಪಸ್ಸನ್ನು ಮಾಡುತ್ತಾನೆ. ಸಾಧಾರಣ ತಪಸ್ಸಲ್ಲ ಅದು. ಹಗಲು ರಾತ್ರಿಗಳ, ನಿದ್ದೆ ನೀರಡಿಕೆಗಳ ಪರಿವಿಲ್ಲದೆ ಒಂದೇ ಸಮನೆ ತನು ಮನದ ತುಂಬಾ ಶಿವನನ್ನೇ ಆರಾಧಿಸಿ ಮಾಡುವಂತಹ ತಪಸ್ಸು. ಈ ಭಕ್ತನ ಅನನ್ಯ ಭಕ್ತಿಯನ್ನು ಕಂಡು ಶಿವ ಸಂಪ್ರೀತನಾಗುತ್ತಾನೆ. ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದಾಗ ಶಿವನ ಆತ್ಮಲಿಂಗವನ್ನೇ ಕೇಳಿ ಬಿಡುತ್ತಾನೆ ಭಂಡ ರಾವಣ. ಶಿವ ಏನು ಕೇಳಿದರೂ ಕೊಡುತ್ತೇನೆಂದು ಮಾತು ಕೊಟ್ಟಾಗಿದೆ. ಈಗ ಹಿಂಪಡೆಯುವ ಮಾತಂತೂ ಇಲ್ಲ. ದೇವರು ಅಥವಾ ದೇವತೆಗಳು ಪ್ರತಿ ಬಾರಿ ವಾರ ಕೊಟ್ಟಾಗಲೂ ಅದರ ಜೊತೆ ಒಂದು ನಿಭಂದನೆಯನ್ನು ಹಾಕಿಯೇ ಕೊಡುತ್ತಾರೆ. ಟ್ರಿಕ್ ಅಂತೀವಲ್ಲ ನಾವು.. ಹಾಗೆ! ಯಾಕೆಂದರೆ ರಾಕ್ಷಸರ ಬುದ್ಧಿ ಅವರ ಕೈಯ್ಯಲ್ಲೇ ಇರುವುದಿಲ್ಲ. ಸಿಕ್ಕ ವರದಿಂದ ಅಮಲೇರಿ ತಮ್ಮ ಮನಸಿಗೆ ಬಂದ ಹಾಗೆ ಉಪಯೋಗಿಸಲು ಶುರು ಮಾಡಿದರೆ ಮುಗಿಯಿತು.. ಸಾಮಾನ್ಯ ಜನರಷ್ಟೇ ಅಲ್ಲ, ದೇವಾನುದೇವತೆಗಳು ಅವರ ಕೈಯಲ್ಲಿ ಸಿಕ್ಕಿ ನರಳುತ್ತಾರೆ. ಹಾಗೇನಾದರೂ ಆದಾಗ ಈ ಟ್ರಿಕ್ ನ್ನು ಬಳಸಿ ರಕ್ಕಸರಿಗೆ ಬುದ್ಧಿ ಕಲಿಸುವುದೋ ಅಥವಾ ಅವರಿಂದ ವರ ಹಿಂಪಡೆಯುವುದೋ ಅಥವಾ ಯಾವುದು ಆಗಲಿಲ್ಲವೆಂದರೆ ಅವರನ್ನು ಕೊಂದು ಮುಕ್ತಿ ಹಾಡುತ್ತಾರೆ. ರಾವಣನಿಗೆ ಶಿವ ಮಾಡಿದ್ದು ಹಾಗೆಯೇ.. ಒಂದು ನಿಬಂಧನೆಯ ಜೊತೆಗೆ ಆತ್ಮಲಿಂಗವನ್ನು ಕೊಡುತ್ತಾನೆ. ಆ ನಿಬಂಧನೆ ಏನೆಂದರೆ ಏನೇ ಆದರೂ ಆತ್ಮಲಿಂಗ ಭೂಸ್ಪರ್ಶ ಮಾಡಬಾರದು. ಹಾಗೇನಾದರು ಆದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಷರತ್ತು ವಿಧಿಸಿದಾಗ ‘ಇದ್ಯಾವ ಮಹಾ’ ಎಂದು ಬೀಗಿದ ರಾವಣ ಆತ್ಮಲಿಂಗವನ್ನು ಪಡೆದು ಹೊರಡುತ್ತಾನೆ.
ಇತ್ತ ದೇವತೆಗಳಿಗೆಲ್ಲ ನಡುಕ ಶುರುವಾಗುತ್ತದೆ. ಮೊದಲೇ ಶಕ್ತಿಶಾಲಿ ರಾವಣ, ಈಗ ಆತ್ಮಲಿಂಗದ ಶಕ್ತಿಯು ದಕ್ಕಿ ಬಿಟ್ಟರೆ ಅವನನ್ನು ಹಿಡಿಯುವರಾರು.. ಸ್ವಯಂ ಶಿವನೇ ವರ ದಯಪಾಲಿಸಿ ಅವನು ಕೇಳಿದ್ದನ್ನು ನೀಡಿದ್ದಾನೆಂದರೆ ಈಗ ಯಾರ ಬಳಿ ಹೋಗುವುದು. ಬ್ರಹ್ಮ ವಿಷ್ಣು ಮಹೇಶ್ವರರೇ ನಮಗೆ ದಿಕ್ಕು ಎಂದು ಯೋಚಿಸಿ ಅವರ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ. ತ್ರಿಮೂರ್ತಿಗಳು ರಾವಣನನ್ನ ಹತ್ತಿಕ್ಕುವ ಹಲವು ಬಗೆಗಳನ್ನು ಸಮಾಲೋಚಿಸಿದರೂ ಅಂತಹ ಸಮರ್ಥ ವ್ಯಕ್ತಿ ಯಾರೆಂದು ತೋಚುವುದಿಲ್ಲ. ಬೆಕ್ಕಿನ ಕೊರಳಿಗೆ ಗಂಟೆಯೊಂದನ್ನು ಕಟ್ಟಬೇಕಾಗಿದೆ.. ಕಟ್ಟುವರಾರು.. ಶಕ್ತಿಯಿಂದಂತೂ ರಾವಣನನ್ನು ಗೆಲ್ಲಲಾಗುವುದಿಲ್ಲ ಆದರೆ ಯುಕ್ತಿಯಿಂದ ಗೆಲ್ಲಬಹುದು ಎಂದು ಯೋಚಿಸಿ ಗಣಪತಿಯ ಸಹಾಯ ಕೇಳುತ್ತಾರೆ. ಎಲ್ಲರು ಸೇರಿ ಯೋಜನೆಯೊಂದನ್ನು ಸಿದ್ಧಪಡಿಸುತ್ತಾರೆ. ಅದರ ಪ್ರಕಾರ ಗಣಪತಿ ಪುಟ್ಟ ಬಾಲಕನಾಗಿ ರಾವಣ ಹೊರಟಿದ್ದ ದಾರಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ರಾವಣ ಮಹಾ ದೈವಭಕ್ತ. ಎಂತಹ ಪರಿಸ್ಥಿತಿ ಎದುರಾದರೂ ದಿನಕ್ಕೆ ಎರಡು ಬಾರಿ ಒಮ್ಮೆ ಸೂರ್ಯೋದಯಕ್ಕೆ ಮತ್ತೊಮ್ಮೆ ಸೂರ್ಯಾಸ್ತಕ್ಕೆ ಸಂಧ್ಯಾವಂದನೆ ಮಾಡಿಯೇ ತೀರುವವ.. ಅವನ ಈ ಸ್ವಭಾವದ ಅರಿವಿದ್ದ ದೇವತೆಗಳು ಅದನ್ನೇ ಅಸ್ತ್ರವನ್ನಾಗಿ ಬಳಸುವ ಹೊಂಚು ಹಾಕಿರುತ್ತಾರೆ. ವಿಷ್ಣು ಸೂರ್ಯನ ಮುಂದೆ ತನ್ನ ಸುದರ್ಶನ ಚಕ್ರವನ್ನು ಇಟ್ಟಾಗ ಎಲ್ಲೆಡೆ ಮಬ್ಬು ಕವಿದು ಸಂಜೆಯಾದಂತೆ ತೋರುತ್ತದೆ. ಸೂರ್ಯಾಸ್ತವಾಯಿತೆಂದು ಭಾವಿಸಿ ರಾವಣ ಆ ಬಾಲಕನ ಕೈಗೆ ಆತ್ಮಲಿಂಗವನ್ನು ಕೊಟ್ಟು ಹಿಡಿದುಕೊಂಡಿರಲು ಮತ್ತು ತಾನು ಬೇಗ ಬರುವುದಾಗಿಯೂ ಹೇಳಿ ಹೋರಡಲು ಸನ್ನದ್ಧನಾಗುತ್ತಾನೆ. ಆಗ ಆ ಬಾಲಕ ತಾನು ಮೂರೂ ಬಾರಿ ಕರೆದಾಗಲೂ ಬರದೇ ಹೋದರೆ ತಾನು ಆತ್ಮಲಿಂಗವನ್ನು ಅಲ್ಲಿಯೇ ಇಟ್ಟು ಹೊರಟು ಹೋಗುವುದಾಗಿ ಹೇಳಿದಾಗ ರಾವಣನಿಗೆ ಕಳವಳವಾಗಿತ್ತದೆ. ಬೇರೆ ಯಾರು ಕಣ್ಣಿಗೆ ಬೀಳದಿದ್ದುದರಿಂದ ಇವನನ್ನು ಬಿಟ್ಟು ಬೇರೆ ಗತಿಯಿಲ್ಲ ಅವನಿಗೆ. ಸರಿ ಎಂದು ಹೇಳಿ ಹೋಗುತ್ತಾನೆ! ಅವನು ಹೊರಟು ಹೋಗುವುದನ್ನೇ ಕಾದಿದ್ದ ಗಣಪ ಮೂರೂ ಬಾರಿ ಕರೆದಂತೆ ಮಾಡಿ ರಾವಣ ಬರದೇ ಇದ್ದಾಗ ಆ ಆತ್ಮಲಿಂಗವನ್ನು ಅಲ್ಲಿಯೇ ಇಟ್ಟು ಬಿಡುತ್ತಾನೆ. ಅಲ್ಲಿಗೆ ದೇವತೆಗಳ ಯೋಜನೆ ಯಶಸ್ವಿಯಾಯಿತು. ರಾವಣ ತಪಸ್ಸು ಮಾಡಿ ಆತ್ಮಲಿಂಗ ಪಡೆದಿದ್ದರೂ ಅದು ಅವನ ಉಪಯೋಗಕ್ಕೆ ಬಾರದೆ ಹೋಯಿತು. ಗಣಪತಿ ಆತ್ಮಲಿಂಗ ಇಟ್ಟ ಆ ಸ್ಥಳ ಗೋಕರ್ಣವಾಯಿತು.
ಹೀಗೆ ಕತೆ ಕೊನೆಗೊಳ್ಳುತ್ತದೆ. ಯಾಕೆ ಈ ಕತೆಯೊಂದಿಗೆ ಶುರು ಮಾಡಿದೆನೆಂದರೆ ಗಣೇಶ ಎಂದಾಗ ನನಗೆ ಮೊದಲು ನೆನಪಾಗುವುದೇ ಈ ಕತೆ. ಅಲ್ಲಿ ಗಣೇಶನ ಪಾತ್ರ ಒಬ್ಬ ಪುಟ್ಟ ಬಾಲಕನಾಗಿ ರಾವಣನ ವಿಶ್ವಾಸವನ್ನು ಗಳಿಸುವುದು. ಅದು ಅಷ್ಟು ಸುಲಭದ ಮಾತಲ್ಲ. ಹೇಳಿ ಕೇಳಿ ರಾಕ್ಷಸ ಅವನು. ಕಣ್ಣು ಬಿಟ್ಟರೆ ನಿನ್ನನ್ನು ಭಸ್ಮ ಮಾಡುತ್ತೇನೆ ಎನ್ನುವಂತಹ ನೋಟ ಅವನದು. ಅಂತಹವನ ನಂಬಿಕೆಗೆ ಪಾತ್ರವಾಗುವುದು ಅಷ್ಟು ಸುಲಭದ ಮಾತೇ? ಚೂರು ಪಾರು ನಂಬಿಕೆಯಲ್ಲ, ಅವನು ತನ್ನ ಕೈಯ್ಯಲ್ಲಿರುವ ಆತ್ಮಲಿಂಗವನ್ನು ಕೊಟ್ಟು ಹೋಗುವಷ್ಟು ನಂಬಿಕೆ! ಎಷ್ಟೋ ಕಾಲ ಘೋರ ತಪಸ್ಸನ್ನು ಮಾಡಿ ಉಗ್ರ ಶಿವನನ್ನು ಮೆಚ್ಚಿಸಿ ಪಡೆದ ಆತ್ಮಲಿಂಗವನ್ನು ಯಃಕಶ್ಚಿತ ಒಬ್ಬ ಬಾಲಕನ ಕೈಯ್ಯಲ್ಲಿ ಇಡುವಂತಹ ನಂಬಿಕೆಯನ್ನು ಸಂಪಾದಿಸಬೇಕಿತ್ತು ಗಣಪತಿ. ಎಲ್ಲಿಗಾದರೂ ಒಬ್ಬರೇ ಪ್ರಯಾಣ ಮಾಡುತ್ತಿದ್ದರ ಬಸ್ಸಲ್ಲಿ ಇಟ್ಟ ಕೈಚೀಲವನ್ನು ಪಕ್ಕದವರಿಗೆ ನೋಡಿಕೊಳ್ಳಲು ಹೇಳಲು ಹಿಂದೆಮುಂದೆ ಯೋಚಿಸುತ್ತೇವೆ. ಅಂತದುರಲ್ಲಿ ಇಲ್ಲಿರುವುದು ಆತ್ಮಲಿಂಗ! ಬಾಲಕನಾಗಿ ಅವನೆಂತಹ ಬಣ್ಣದ ಮಾತುಗಳನ್ನು ಆಡಿರಬಹುದು, ಅದು ಹೇಗೆ ರಾವಣನ ನಂಬಿಕೆಯನ್ನು ಸಂಪಾದಿಸಿರಬಹುದು ಎನ್ನುವ ಸೋಜಿಗ ನನ್ನಲ್ಲಿ. ಅಷ್ಟು ಬುದ್ಧಿವಂತ ದೇವರು ಗಣಪತಿ!
ಹೆಚ್ಚು ತೋರಿಸಿಕೊಳ್ಳದೆ, ಮಾತಿನಲ್ಲಿ ಹೇಳಿಕೊಳ್ಳದೆ ಚಾಕಚಕ್ಯತೆನಿಂದ ತನ್ನ ಕರ್ತವ್ಯವನ್ನು ನಿಭಾಯಿಸುವವ. Ground To Earth ಅಂತೀವಲ್ಲ ಹಾಗೆ.. ಅದಕ್ಕಾಗಿಯೇ ನನಗೆ ಗಣೇಶ ಇಷ್ಟ.. ತಾನಾಯಿತು ತನ್ನ ಕೆಲಸವಾಯಿತು.. ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾನೆ. ತನಗೆ ಬೇಕಾದಷ್ಟು ದಿನ ಇದ್ದು, ಸುಂದರವಾಗಿ ಅಲಂಕರಿಸಿಕೊಂಡು, ಸಮೃದ್ಧಿಯಾಗಿ ನೈವೇದ್ಯ ಉಂಡು, ಮತ್ತೆ ಅಷ್ಟೇ ಭರ್ಜರಿಯೊಂದಿಗೆ ಹೊರಡುತ್ತಾನೆ. ಹಾಗಂತ ಅವನನ್ನು ಮರೆಯುವ ಹಾಗಿಲ್ಲ.. ಪ್ರತಿ ಪೂಜೆಯ ಮೊದಲಿಗೂ ಅವನಿರಬೇಕು. ಅವನಿಂದಲೇ ಎಲ್ಲ ಶುರು. ಪ್ರತಿ ತಿಂಗಳ ಸಂಕಷ್ಠಿಗೂ ಬಂದು ತನ್ನ ಇರುವನ್ನು, ಪ್ರಾಮುಖ್ಯತೆಯನ್ನು ಸಾರುತ್ತಲೇ ಇರುತ್ತಾನೆ. ದೊಡ್ಡವರಷ್ಟೇ ಅಲ್ಲ.. ಮಕ್ಕಳಿಗೂ ಅವನೆಂದರೆ ಇಷ್ಟ. ಅವನು ಬಂದರೆ ಮನೆ ರಂಗು ರಂಗಾಗುತ್ತದೆ. ಗಂಟೆ ಜಾಗಟೆಗಳ ಜೊತೆಗೆ ನಗುವಿನ ಸದ್ದು ಮೇಳೈಸುತ್ತದೆ. ಅವನ ಪೂಜೆಗೆ ಹೆಚ್ಚು ರೀತಿ ನೀತಿಗಳೂ ಸಹ ಇಲ್ಲ. ನೀವು ಅವನನ್ನು ಯಾವ ಆಕಾರದಲ್ಲಿ, ಯಾವ ಬಣ್ಣದಲ್ಲಾದರೂ ಮಾಡಿ ಕೂರಿಸಬಹುದು. ಗಂಧದ ಗುಡಿಯ ರಾಜಕುಮಾರನ ವೇಷದಲ್ಲೂ ಸೈ, ರಣರಂಗದಲ್ಲಿ ಕಾದಾಡುವ ಸೈನಿಕನ ವೇಷವಾದರೂ ಸೈ! ನಮಗೆ ಬೇಕಂತೆ… ಒಟ್ಟಿನಲ್ಲಿ ಅವನ ಪೂಜೆ ಮಾಡಿದರಾಯಿತು.. ನೈವೇದ್ಯಕ್ಕೆ ಕಡುಬು, ಮೋದಕಗಳನ್ನು ಇಟ್ಟರಾಯಿತು.. ಹೂವು, ಗಂಧ ಪುಷ್ಪ ಯಾವುದು ಬೇಕಂತಿಲ್ಲ ಗರಿಕೆ ಹುಲ್ಲಾದರೆ ಸಾಕು.. ಸಂತೃಪ್ತ ಆತ!
ಗಣೇಶನ ಜೊತೆ ಅವನಮ್ಮ ಗೌರಿಯೂ ಬರುತ್ತಾಳಲ್ಲ.. ನಮ್ಮ ಮನೆಯಲ್ಲಿ ಅಷ್ಟಮಿ ಗೌರಿ ಬಲು ಜೋರು. ಶ್ರಾವಣದ ಮೊದಲ ಶುಕ್ರವಾರ ಮನೆಯೊಳಗೇ ಬರುವ ಈ ಗೌರಿ ಗಂಗೆಯರು ಗಣೇಶ ಬಂದು ಹೋಗುವವರೆಗೂ ಇರುತ್ತಾರೆ. ಅವರಿಗೆಂದೇ ಮಾಡುವ ತರಾವರಿ ತಿಂಡಿ ತಿನಿಸುಗಳು. ಕರ್ಚಿಕಾಯಿ, ಗಾರಿಗೆ , ಮಂಡಿಗೆ, ಶಂಕರಪೊಳೆ, ಚಕ್ಕಲಿ, ಅಂಬೊಡಿ ಹೀಗೆ ವಿಧ ವಿಧದ ಖಾದ್ಯಗಳು.
ನಮ್ಮ ಈ ವರ್ಷದ ಗಣಪ ಹೀಗೆ ತಯಾರಾಗಿ ಕೂತಿದ್ದಾನೆ. ಇನ್ನೇನು ಅವನನ್ನು ಕೂರಿಸಿ ಅಲಂಕರಿಸುವುದೊಂದೇ ಬಾಕಿ.
ಬೇರೆ ಎಲ್ಲೇ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಉತ್ಸಾಹದಿಂದ ಮಾಡುತ್ತೇನಾದರೂ ನನಗೆ ಗಣೇಶನ ಹಬ್ಬ ಮನಸಿಗೆ ತುಂಬಾ ಹತ್ತಿರ. ಪ್ರತಿ ದಿನ ಅವನನ್ನೇ ನೆನೆಸಿ ಏಳುವುದಕ್ಕೋ ಏನೋ ಗೊತ್ತಿಲ್ಲ. ಅವನು ನಮ್ಮಲ್ಲೇ ಒಬ್ಬನೆನಿಸುತ್ತಾನೆ. ಅಮೆರಿಕಾಕ್ಕೆ ಬಂದ ಮೇಲೆ ಗಣೇಶನ ಹಬ್ಬಕ್ಕೆ ಮನೆಯವರ ಜೊತೆ ಬೆರೆಯುವುದು ನಿಂತೇ ಹೋಯಿತು. ಆಗೆಲ್ಲ ಮನಸಿಗೆ ಬಹಳ ಬೇಜಾರು. ಅಲ್ಲಿ ಅವರೆಲ್ಲ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದರೆ ಇಲ್ಲಿ ನಾವಷ್ಟೇ ವೆಂಕ ನೊಣ ಕೂತು ಊಟ ಮಾಡುವುದು ಘನ ಘೋರ! ಅದನ್ನು ತಪ್ಪಿಸಲೆಂದು ನಾವೂ ಇಲ್ಲಿ ಗಣೇಶನ ಹಬ್ಬ ಮಾಡಲು ಶುರು ಮಾಡಿದೆವು. ಹಬ್ಬ ಅಂತ ಒಂಚೂರು ತಯಾರಿ, ಅವಸರ ಇದ್ದಾಗ ಮಾತ್ರ ಆ ಸಡಗರ ಮನೆ ತುಂಬುತ್ತದೆ. ಹಬ್ಬ ಹಬ್ಬವೆನಿಸುತ್ತದೆ! ಈಗಂತೂ ಗಣೇಶನನ್ನು ಮನೆಯಲ್ಲೇ ಮಾಡುವುದರಿಂದ ಹಬ್ಬ ಒಂದು ವಾರದ ಮೊದಲೇ ಶುರುವಾಗುತ್ತದೆ. ಅವನ ಅಲಂಕಾರದ ಮತ್ತು ಪೂಜೆಯ ಸಾಮಗ್ರಿಗಳೆಲ್ಲ ಇಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲವಾದ್ದರಿಂದ ಅಂಗಡಿಗಳ ಸುತ್ತಾಟ, ಮನೆ ಸ್ವಚ್ಛ ಮಾಡುವ ದಿವ್ಯ ಧ್ಯಾನ, ಫರಾಳ ತಯಾರಿಸುವ ಕೆಲಸ ಇತ್ಯಾದಿಗಳಿಂದ ನಮಗೂ ಮನೆಯ ಮತ್ತು ಮನೆಯವರ ನೆನಪು ಅಷ್ಟಾಗುವುದಿಲ್ಲ ಆದರೂ ಊರಲ್ಲಿ ಮಾಡುವ ಹಬ್ಬವೇ ಬೇರೆ, ಅದು ಬೇರೆ ಮಾತು!
ಇಂತಿಪ್ಪ ಗಣಪ ಮತ್ತೆ ಬಂದಿದ್ದಾನೆ. ಈ ಕಷ್ಟದ ಸಮಯದಲ್ಲಿ, ಇಡೀ ಜಗತ್ತು ಅನುಭವಿಸುತ್ತಿರುವ ಸೋಂಕಿನ ಭೀತಿಯ ಮಧ್ಯದಲ್ಲಿ ಆಶಾ ಕಿರಣವಾಗಿ ಬಂದಿದ್ದಾನೆ. ಈ ಸಲ ಅಷ್ಟೊಂದು ಭರ್ಜರಿಯಿಲ್ಲದೆ ಇರಬಹುದು, ಬೀದಿ ಬೀದಿಗಳಲ್ಲಿ ಗಣಪನನ್ನು ಕೂರಿಸಲು ಸಾಧ್ಯವಾಗದ್ದರಿಂದ ಹಬ್ಬದ ಸಂಭ್ರಮ ಕಡಿಮೆಯೆನಿಸಬಹುದು. ಆದರೆ ನಮ್ಮ ಉತ್ಸಾಹ ಕಡಿಮೆಯಾಗುವುದಿಲ್ಲ. ಯಾರಿಗೂ ಕಷ್ಟವಾಗದಂತೆ ನಮ್ಮ ನಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಲು ತೊಂದರೆಯೇನಿದೆ ಅಲ್ಲವೇ.. ಜೊತೆಗೆ ಈಗ ಎಲ್ಲರು ಮನೆಯಲ್ಲಿ ಇರುವುದರಿಂದ ಹಬ್ಬಗಳ ಸಂಭ್ರಮ ಇನ್ನೂ ಜೋರಾಗಿರುತ್ತದೆ. ಮೊದಲಿನ ಹಾಗೆ ರಜೆ ತೆಗೆದುಕೊಂಡು ಬಸ್ಸು ಬುಕ್ ಮಾಡಿ ಊರುಗಳಿಗೆ ಹೋಗಿ ಒಂದೆರಡು ದಿನದ ರಜೆಯ ನಂತರ ಮನಸ್ಸಿಲ್ಲದೆ ಹೋದರೂ ಮತ್ತೆ ಕರ್ಮಭೂಮಿಗೆ ಮರಳಬೇಕೆನ್ನುವ ಸಂಕಟವಿಲ್ಲ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಎಲ್ಲರು ಸುರಕ್ಷಿತವಾಗಿ ಇದ್ದು ಹಬ್ಬವನ್ನು ಆಚರಿಸಿ ಎಂದು ಹೇಳುತ್ತಾ ಈ ಗಣಪನ ಪುರಾಣವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.
ನಮಸ್ಕಾರ,