ವಿದ್ಯೆಯ ಹಸಿವನ್ನು ನೀಗಿಸುವತ್ತ: ಹಿಂದಿ ಸಿನಿಮಾ Super 30
Hotstar ನಲ್ಲಿ Super 30 ಹೆಸರಿನ ಹೃತಿಕ್ ರೋಷನ್ ಅಭಿನಯದ ಸಿನಿಮಾ ಇದೆ. ನಾವು ಈಗಷ್ಟೇ ನೋಡಿ ಮುಗಿಸಿದೆವು. ಏನಂತ ಶುರು ಮಾಡಲಿ... ನಾನು ಇತ್ತೀಚಿಗೆ ನೋಡಿದ್ದರಲ್ಲಿ ಅತ್ಯಂತ ಉತ್ತಮ ಸಿನಿಮಾಗಳಲ್ಲಿ ಒಂದು.
ಆನಂದ ಅವನ ಹೆಸರು. ಅಪ್ಪ ಪೋಸ್ಟಮ್ಯಾನ್. ಮನೆಯಲ್ಲಿ ಎರಡು ಹೊತ್ತಿನ ಊಟಕ್ಕಷ್ಟೇ ಅನುಕೂಲವಾಗುವಷ್ಟು ಸ್ಥಿತಿವಂತಿಕೆ. ಆದರೆ ಅಸಮಾನ್ಯ ಪ್ರತಿಭಾವಂತ. ಎಂತಹ ಕಠಿಣ ಗಣಿತ ಸಮಸ್ಯೆಯೇ ಇರಲಿ.. ಛಲ ಬಿಡದೆ ಸೊಲ್ಯೂಷನ್ ಕಂಡು ಹಿಡಿಯುವವ. ಓದಲು ಪುಸ್ತಕ ಕೊಂಡುಕೊಳ್ಳಲು ಆಗದ ಕಾರಣಕ್ಕೆ ದೂರದಲ್ಲಿದ್ದ ಪ್ರೈವೇಟ್ ಶಾಲೆಗೆ ಸೈಕಲ್ ಮೇಲೆ ಹೋಗಿ ಲೈಬ್ರರಿಯ ಮೂಲೆಯೊಂದರಲ್ಲಿ ಕುಳಿತು ಫಾರಿನ್ ಜರ್ನಲ್ ಹಿಡಿದುಕೊಂಡು ಗಣಿತದ ಸಮಸ್ಯೆ ಬಿಡಿಸುತ್ತಿದ್ದ ಇವನನ್ನು ಬೈದು ಓಡಿಸುತ್ತಾನೆ ಲೈಬ್ರರಿಯವ. ಆದರೇನು ಇವನು ತ್ರಿವಿಕ್ರಮನಂತೆ. ಮನೆಯಲ್ಲಿ ಸದಾ ಬೆನ್ನು ತಟ್ಟುತ್ತ ಹುರಿದುಂಬಿಸುವ ಅಪ್ಪ. ಈ ಬಡಪಾಯಿಗೆ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಡ್ಮಿಷನ್ ಸಿಗುತ್ತದೆ. ಆದರೆ ಹಣದ ಸಮಸ್ಯೆ! ಅಪ್ಪ ತನ್ನ ಪಿಎಫ್, ಮತ್ತಿತರ ಎಲ್ಲವನ್ನು ಬಸಿದರೂ ಹಣ ಹೊಂದಿಸಲಾಗುವುದಿಲ್ಲ. ಬಣ್ಣಬಣ್ಣದ ಮಾತುಗಳನ್ನಾಡುತ್ತ ಚಪ್ಪಾಳೆ ಗಿಟ್ಟಿಸುವ ಶಿಕ್ಷಣ ಮಂತ್ರಿಯಿಂದ ಸಹ ಯಾವುದೇ ಸಹಾಯ ಸಿಗುವುದಿಲ್ಲ.
ಅಲ್ಲಿಗೆ ಆನಂದನ ಭವಿಷ್ಯ ಅರಳುವ ಮೊದಲೇ ಕಮರಿ ಹೋಗುತ್ತದೆ. ಇದೇ ವೇದನೆಯಲ್ಲಿ ಅಪ್ಪ ಸಾವಿಗೀಡಾದಾಗ ಮನೆ ನಡೆಸುವ ಜವಾಬ್ದಾರಿ ಕೂಡ ಆನಂದನ ಮೇಲೆ. ಅಮ್ಮ ಮಾಡಿಕೊಟ್ಟ ಹಪ್ಪಳವನ್ನು ಸೈಕಲ್ ಮೇಲೆ ಮಾರುತ್ತ ಚಿಲ್ಲರೆ ಕಾಸಿಗಾಗಿ ಗುದ್ದಾಡುತ್ತ ಜೀವನ ಸಾಗಿಸತೊಡುತ್ತಾನೆ ಈ ರಾಮಾನುಜನ್ ಗೋಲ್ಡ ಮೆಡಲಿಸ್ಟ್..
ಆದರೆ ಕಾಲ ಒಂದೇ ತರಹ ಇರುವುದಿಲ್ಲ ನೋಡಿ.. ಇವನ ಪ್ರತಿಭೆಯ ಅರಿವಿದ್ದ ಕೋಚಿಂಗ್ ಸೆಂಟರ್ ನವ ಇವನನ್ನು ಕರೆದು ಗಣಿತದ ಪ್ರೊಫೆಸರ್ ಕೆಲಸ ಕೊಡುತ್ತಾನೆ. ಅದೇ ಶಿಕ್ಷಣ ಮಂತ್ರಿ ನಡೆಸುತ್ತಿದ್ದ ವಿದ್ಯೆಯ ಬ್ಯುಸಿನೆಸ್ ಅದು. ಅಲ್ಲಿ ಆನಂದನ ಹೆಸರಿನಿಂದ ಶ್ರೀಮಂತ ಪೋಷಕರಿಂದ ಲಕ್ಷಗಟ್ಟಲೆ ಫೀ ತೆಗೆದುಕೊಂಡು ದುಡ್ಡು ಗಳಿಸುತ್ತಾರೆ. ಆನಂದನ ಪರಿಸ್ಥಿತಿಯೂ ಸುಧಾರಿಸುತ್ತದೆ. ಸೈಕಲ್ ಹೋಗಿ ಗಾಡಿ, ಹರಿದ ಬಟ್ಟೆ ಹೋಗಿ ಒಳ್ಳೊಳ್ಳೆಯ ಉಡುಪುಗಳು, ಕೈಯ್ಯಲ್ಲಿ ವಾಚ್ ಹೀಗೆ…
ಎಲ್ಲವು ಸರಿ ಹೋಯಿತೆಂದುಕೊಳ್ಳುವಾಗ ಒಂದು ರಾತ್ರಿ ಆನಂದನಿಗೆ ಆಟೋನವನೊಬ್ಬ ಸಿಗುತ್ತಾನೆ. ರಾಜನ ಮಕ್ಕಳೇ ರಾಜ ಆಗಬೇಕು ಅದೇ ಈ ಸಮಾಜದ ಲಿಖಿತ ಕಾನೂನು, ಹಾಗಾಗಿಯೇ ದ್ರೋಣಾಚಾರ್ಯ ಸಹ ಏಕಲವ್ಯನಿಂದ ಹೆಬ್ಬೆರಳು ಕೇಳಿದ್ದು. ಇಲ್ಲವಾದಲ್ಲಿ ಅರ್ಜುನನ ಜಾಗದಲ್ಲಿ ಏಕಲವ್ಯ ಇರುತ್ತಿದ್ದ ಎಂದು ಹೇಳಿದಾಗ ಎಲ್ಲವು ಸರಿ ಹೋಯಿತು ಅಥವಾ ಸರಿ ಹೋಗುತ್ತಿದೆ ಎಂಬ ಭಾವದಿಂದ ಆನಂದ ಹೊರ ಬರುತ್ತಾನೆ. ಯಾವುದು ಸರಿ ಹೋಗಿಲ್ಲ, ಎಲ್ಲವು ಹೇಗಿತ್ತೋ ಹಾಗೆಯೇ ಇದೆ ಎಂದು ತಿಳಿದಾಗ ಆನಂದ ರಾತ್ರೋರಾತ್ರಿ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುತ್ತಾನೆ. ಆ ಒಂದು ತೀರ್ಮಾನ ಅವನ ಜೀವನವನ್ನಷ್ಟೇ ಅಲ್ಲ ಹಲವಾರು ಬಡ ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುತ್ತದೆ.
ಆನಂದ ತನ್ನ ಹೊಸ ಕೆಲಸದಿಂದ ಸಿಗುತ್ತಿದ್ದ ಸಂಬಳದಲ್ಲಿ ಆರಾಮಾಗಿರಬಹುದಿತ್ತು. ದೊಡ್ಡ ಮನೆ ಕಟ್ಟಿಸಬಹುದಿತ್ತು.. ಕಾರಿನಲ್ಲಿ ಓಡಾಡಬಹುದಿತ್ತು.. ಹೇಗಿದ್ದರೂ ಅವನ ಹೆಸರಿನಿಂದಲೇ ಕೋಚಿಂಗ್ ಕ್ಲಾಸ್ ನಡೆಯುತ್ತಿತ್ತು. ಇವನ ಹತ್ತಿರ ಪಾಠ ಹೇಳಿಸಿಕೊಳ್ಳಲೆಂದೇ ಶ್ರೀಮಂತರೆಲ್ಲ ತಮ್ಮ ಮಕ್ಕಳೊಂದಿಗೆ ಸಾಲಿನಲ್ಲಿ ನಿಂತಿದ್ದರು.
ಆದರೆ ಎಲ್ಲವನ್ನು ತೊರೆದು ಆನಂದ ಬಡಮಕ್ಕಳಿಗೋಸ್ಕರ ಉಚಿತವಾಗಿ IIT ಟ್ರೆನಿಂಗ್ ಸೆಂಟರ್ ತೆಗೆಯಲು ನಿರ್ಧರಿಸುತ್ತಾನೆ. ಸಂಪೂರ್ಣ ಉಚಿತವಾಗಿ! ತರಬೇತಿಯ ಜೊತೆ ಊಟ ವಾಸ್ತವ್ಯ ಕೂಡ ಫ್ರೀ. ಸುದ್ದಿ ಕೇಳಿ ಎಲ್ಲೆಲ್ಲಿಂದಲೋ ಬಡ ವಿದ್ಯಾರ್ಥಿಗಳು ಆನಂದನ ಸೆಂಟರ್ ಗೆ ಬರುತ್ತಾರೆ. ಇವರೆಲ್ಲ ದಿನಗೂಲಿ ಮಾಡುವ ಮಕ್ಕಳು. ಒಂದು ಹೊತ್ತು ತಿಂದರೆ ಇನ್ನೊಂದು ಹೊತ್ತು ಉಪಾವಾಸ ಇದ್ದು ಜೀವನ ಮಾಡುವಂತಹವರು. ಒಬ್ಬನ ಅಪ್ಪ ಮಲ ಹೊತ್ತರೆ ಇನ್ನೊಬ್ಬಳ ತಾಯಿ ಬೇರೆಯವರ ಮನೆಯಲ್ಲಿ ಕಸ ಮುಸುರೆ ಮಾಡುವವಳು. ಆದರೆ ಇವರೆಲ್ಲ ಬುದ್ಧಿವಂತರು, ಕಲಿಯುವ ಅವಕಾಶದಿಂದ ವಂಚಿತರಾದವರು. ಹೀಗೆ ಬಂದ ಸಾವಿರಾರು ಜನ ಮಕ್ಕಳಲ್ಲಿ ಪರೀಕ್ಷೆಯ ಮುಖಾಂತರ ಕೇವಲ 30 ಜನರನ್ನು ಆರಿಸುತ್ತಾನೆ ಆನಂದ. ಅವನ ಈಗಲೋ ಆಗಲೋ ಎನ್ನುವಂತಿದ್ದ ಆ ಮನೆಯಲ್ಲಿ ಕೇವಲ 30 ಜನರಿಗಷ್ಟೇ ಕೂರಲು ಅವಕಾಶ.
ಆನಂದನ ಈ ಸತ್ಕಾರ್ಯಕ್ಕೆ ಪ್ರಶಂಸೆಯ ಹೊರತಾಗಿ ಹಣದ ಅಥವಾ ಇತರೇ ಯಾವುದೇ ಸಹಾಯ ಸಿಗುವುದಿಲ್ಲ. ಎಲ್ಲ ಮಕ್ಕಳಿಗೆ ಊಟ ಹೊಂದಿಸಲು ಪರದಾಡುತ್ತಾನೆ. ಪುಸ್ತಕ ಕೊಡಿಸಲು ಹೆಣಗಾಡುತ್ತಾನೆ. ಇದ್ದ ಹಣವೆಲ್ಲ ಮುಗಿದು ಕೊನೆಗೆ ಒಂದು ಹೊತ್ತಿನ ಊಟ ಸಹ ಸಿಗುವುದಿಲ್ಲ. ಇದರ ಮೇಲೆ ಕೋಚಿಂಗ್ ಸೆಂಟರ್ ಮತ್ತು ಶಿಕ್ಷಣ ಮಂತ್ರಿ ಇವನನ್ನು ಮತ್ತು ಇವನ ಕೋಚಿಂಗ್ ಸೆಂಟರ್ ನ್ನು ಮುಗಿಸಲು ದಾಳಿ ನಡೆಸುತ್ತಾರೆ. ಏನೇ ಆದರೂ ಧೈರ್ಯಗೆಡದೆ ಮುಂದುವರೆದ ಆನಂದನ ಮತ್ತು ಅವನ ತಮ್ಮನ ಮೇಲೆ ಕೊಲೆಯ ಪ್ರಯತ್ನವೂ ನಡೆಯುತ್ತದೆ.
ಎಲ್ಲರ ಜೊತೆಗೆ ಹೋರಾಡಿ ಅಂದುಕೊಂಡಿದ್ದನ್ನು ಸಾಧಿಸಿ ನಿಜವಾದ ದ್ರೋಣಾಚಾರ್ಯನಾಗುತ್ತಾನೆ ಆನಂದ..
ಈ ಸಿನಿಮಾ ಆನಂದ ಹೆಸರಿನ ಶಿಕ್ಷಕರೊಬ್ಬರ ನಿಜ ಜೀವನದ ಕತೆ. 2002 ರಲ್ಲಿ ಶುರು ಮಾಡಿದ ಆ ಕೋಚಿಂಗ್ ಸೆಂಟರ್ ಇವತ್ತಿನವರೆಗೂ ಅದೇ ಹಳೆಯ ಮನೆಯಲ್ಲಿ ಬಡ ಮಕ್ಕಳಿಗಾಗಿ ನಡೆಯುತ್ತಿದೆ. ಇಲ್ಲಿ ಓದಿದವರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತ ತಮ್ಮ ಮತ್ತು ತಮ್ಮವರ ಬದುಕನ್ನು ಹಸನಾಗಿಸಿದ್ದಾರೆ.
ನಿಜವಾಗಿಯೂ ಮನತಟ್ಟುವ ಸಿನಿಮಾ. ಹೃತಿಕ ರೋಷನ್ ಅಭಿನಯವಂತೂ ಮನೋಜ್ಞ. ಬಡಮಕ್ಕಳ ಕಷ್ಟ ನೋಡಿ, ಆನಂದ ವ್ಯವಸ್ಥೆಯ ವಿರುದ್ಧ ಸೆಣಸಾಡುವ ದೃಶ್ಯಗಳನ್ನು ನೋಡಿದಾಗಲೆಲ್ಲ ಕಣ್ಣು ತೇವವಾಗುತ್ತದೆ.
ನಮ್ಮ ಶಿಕ್ಷಣ ಪದ್ಧತಿಯೇ ಹೀಗಿದೆ. ಎಷ್ಟೋ ಜನ ಪ್ರತಿಭಾವಂತರು ಸಾಧನಗಳಿಲ್ಲದೆ ಸಾಧನೆಯಿಂದ ವಂಚಿತರಾಗುತ್ತಿದ್ದಾರೆ . ಶಿಕ್ಷಣ ವ್ಯಾಪಾರವಾಗಿ ತನ್ನ ಮಹತ್ವ ಕಳೆದುಕೊಂಡಿದೆ. ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ. ತಮ್ಮ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿಯೇ ಕಲಿಯಬೇಕು, ಇಂಗ್ಲಿಷ್ ನಲ್ಲೇ ಓದಬೇಕು ಎಂಬ ಪೋಷಕರ ಆಸೆಯ ನಡುವೆ ಪ್ರತಿಭೆ ಮತ್ತು ಪರಿಶ್ರಮಕ್ಕೆ ಬೆಲೆಯೆಲ್ಲಿ?
ಈ ಸಿನಿಮಾ ನೋಡಿ ನನ್ನ ಹಳೆಯ ದಿನಗಳು ನೆನಪಾದವು. ಪಿಯುಸಿನಲ್ಲಿ ಒಳ್ಳೆಯ ಅಂಕಗಳು ಬಂದಿದ್ದವು. ಆಗ ಇಂಜನಿಯರಿಂಗ್ ಅತಿ ಉತ್ತುಂಗದಲ್ಲಿತ್ತು. ಕೇಳಿದವರೆಲ್ಲ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೈ ತುಂಬ ಸಂಪಾದಿಸುತ್ತಿದ್ದರು. ನಮ್ಮಂತಹವರಿಗೆ ಇಂಜಿನಿಯರಿಂಗ್ ದೂರದ ಬೆಟ್ಟವೇ ಸರಿ. ನಾಲ್ಕು ವರ್ಷಗಳು ಫೀ ಕಟ್ಟಿ ಪುಸ್ತಕ ಹೊಂದಿಸಿ ಓದಿಸಿಬೇಕಲ್ಲ. ಆದರೂ ನನ್ನಮ್ಮ ಇಂಜಿನಿಯರಿಂಗ್ ಓದಿಸಬೇಕೆಂದು ತಮ್ಮಲ್ಲಿದ್ದ ಹಣವನ್ನೆಲ್ಲ ಹೊಂದಿಸಿದರು. 10000 ಕಡಿಮೆಯಾಯಿತು. ಪರಿಚಯದವರ ಮನೆಗೆ ಹೋಗಿ 10000 ಕೇಳಿ ಪಡೆದದ್ದು ಯಾವತ್ತು ಮನಸಿನಿಂದ ಮರೆಯಾಗುವುದಿಲ್ಲ. ಆ ನೋವು ಸಂಕಟ ದಾರಿದ್ರ್ಯ ಅನುಭವಿಸಿದವರಿಗಷ್ಟೇ ಗೊತ್ತು. ಸಿಇಟಿ ಕೌನ್ಸೆಲಿಂಗ್ ಬೆಂಗಳೂರಿನಲ್ಲಿತ್ತು. ನನ್ನ ಸ್ನೇಹಿತರೆಲ್ಲ ಟ್ರೆನ್ ರಿಸರ್ವೇಷನ್ ಮಾಡಿಕೊಂಡು ಹೋದರೆ ನಾವು ಪ್ಯಾಸೆಂಜರ್ ಟ್ರೆನಿನಲ್ಲಿ ರಾತ್ರಿ ಕುಳಿತುಕೊಂಡು ಪ್ರಯಾಣ ಮಾಡಿ ಬೆಳಗ್ಗೆ ತಲುಪಿದ್ದೆವು. ಸ್ನಾನ ತಿಂಡಿ ಮಾಡಿಕೊಳ್ಳಲು ಪರಿಚಯದವರಾರು ಅಲ್ಲಿರಲಿಲ್ಲ. ಮನೆಯಿಂದ ಕಟ್ಟಿಕೊಂಡು ಬಂದಿದ್ದ ತಿಂಡಿ ತಿಂದು ಕೌನ್ಸೆಲಿಂಗ್ ಜಾಗಕ್ಕೆ ಹೋದೆವು. ಆ ರಾತ್ರಿ ಮೆಜೆಸ್ಟಿಕ್ ಬಸ್ಟ್ಯಾಂಡಿನಲ್ಲಿ ಮಲಗಿದ್ದು ಇನ್ನು ನೆನಪಿದೆ.
ಹೀಗೆ ಬಡ ವಿದ್ಯಾರ್ಥಿಯಾಗಿ ಈ ಎಲ್ಲ ಕಷ್ಟಗಳನ್ನು ಪರದಾಟಗಳನ್ನು ಅನುಭವಿಸಿದ ನನಗೆ ಸಿನಿಮಾನಲ್ಲಿ ತೋರಿಸಿದ ಪ್ರತಿಯೊಂದು ಪರಿಚಿತ. ಆನಂದ ಅವರಂತಹ ಶಿಕ್ಷಕರು ಬಲು ಅಪರೂಪ. ಒಬ್ಬೊಬ್ಬ ವಿದ್ಯಾರ್ಥಿಯ ಜೀವನವನ್ನು ಬದಲಾಯಿಸುತ್ತ ಅದೆಷ್ಟೋ ಜೀವಗಳ ಬದುಕನ್ನು ಸುಧಾರಿಸುತ್ತಿದ್ದಾರೆ. ಪ್ರತಿಭೆಯಿಂದ ಸ್ಥಾನ ಮಾನ ಸಿಗಬೇಕೇ ಹೊರತು ಗುಂಡಿಯಿದೆ ಎಂದ ಮಾತ್ರಕ್ಕೆ ಮತ್ತೆ ಮತ್ತೆ ಅಲ್ಲಿಯೇ ನೀರು ನಿಲ್ಲುವುದಲ್ಲ. ಹಾಕುವ ಬಟ್ಟೆಗಳಿಂದ, ಹೊರಗೆ ಕಾಣಿಸುವ ರೂಪದಿಂದ ಶ್ರೀಮಂತರಾದರೆ ಪ್ರಯೋಜನವಿಲ್ಲ. ಕೇಳಿದಾಗಲೆಲ್ಲ ಪಾಕೆಟ್ ಮನಿ, ಪುಸ್ತಕ, ಮೊಬೈಲ್ ಹೀಗೆ ಎಲ್ಲವು ಸಿಗುವ ಅನೇಕರಿಗೆ ಅದೇ ಪಠ್ಯ ಪುಸ್ತಕ ಕೊಳ್ಳಲು ಒಂದು ಹೊತ್ತಿನ ಊಟವನ್ನು ತ್ಯಜಿಸುವ ವಿದ್ಯಾರ್ಥಿಯ ಕಷ್ಟ ಗೊತ್ತಾಗುವುದೇ ಇಲ್ಲ. ಸಾಧ್ಯವಾದರೆ ಈ ಸಿನಿಮಾ ಒಮ್ಮೆ ನೋಡಿ. ಅರ್ಥಹೀನ ಸಲ್ಮಾನ್ ಖಾನನ ಸಿನಿಮಾಗಳು ಹೆಸರು ಮಾಡುತ್ತವೆಯೇ ಹೊರತು ಈ ತರಹದ ಸಾಮಾಜಿಕ ಸಂದೇಶ, ಕಾಳಜಿ ಇರುವಂತಹ ಸಿನಿಮಾಗಳು ಸದ್ದು ಮಾಡದೇ ಇರುವುದು ದುರದೃಷ್ಟಕರ 🙁