ಪ್ರಸಿದ್ಧಿಗಾಗಿ ಸಾಧಿಸಬೇಡಿ, ಸಾಧಿಸಿ ಪ್ರಸಿದ್ಧರಾಗಿ – ಹುಲ್ಲಾಗು_ಬೆಟ್ಟದಡಿ(13)
ಎಲ್ಲೆಲ್ಲೂ ಆ ಹುಡುಗನದ್ದೇ ಮಾತು. ಅವನ ಸಾಧನೆಗಳೆಲ್ಲವೂ ಸುಳ್ಳು, ಆತ ಯಾವ ದೇಶಕ್ಕೂ ಹೋಗಿಲ್ಲ, ನೆಟ್ಟಗೆ ಡಿಗ್ರಿಯನ್ನೂ ಪಾಸ್ ಮಾಡಿಲ್ಲ, ಕೇಳಿದರೆ ವಿಜ್ಞಾನದ ಒಂದೂ ಪ್ರಶ್ನೆಗೂ ಉತ್ತರವಿಲ್ಲ ಹಾಗೆ ಹೀಗೆ… ಅವನು ಯುವ ವಿಜ್ಞಾನಿ ಎಂದು ಪ್ರಸಿದ್ಧಿಯಾಗಿದ್ದಕ್ಕಿಂತಲೂ ಹೆಚ್ಚಾಗಿ ಈಗ ಎಲ್ಲರಿಗೂ ಚಿರ ಪರಿಚಿತನಾಗಿದ್ದಾನೆ. ಅದಕ್ಕೆ ಹೇಳೋದು “there is nothing like bad fame” ಅಂತ.
ಅವನು ಚೆನ್ನಾಗಿಯೇ ಮಾತನಾಡುತ್ತಾನೆ. ನೀವೇನೇ ಕೇಳಿದರೂ ಅದರಲ್ಲಿ ತನಗೆ ಬೇಕಾದುದನ್ನಷ್ಟೇ ಆಯ್ದುಕೊಂಡು ಅದಕ್ಕಷ್ಟೇ ಉತ್ತರಿಸುತ್ತಾನೆ. ನಯವಾಗಿ ನಿರಾಕರಿಸುತ್ತಾನೆ. ಆತ್ಮವಿಶ್ವಾಸದಿಂದ ಒಂದಷ್ಟು ವಿವರಗಳನ್ನು ಹೇಳುತ್ತಾನೆ. ಎಲ್ಲಿಯೂ ವಿಚಲಿತನಾಗುವುದಿಲ್ಲ, ಧ್ವನಿ ನಡುಗುವುದಿಲ್ಲ, ಮುಖದಲ್ಲಿರುವ ಭಾವನೆ ಸಹ ಬದಲಾಗುವುದಿಲ್ಲ.
ನಾನು ಗಮನಿಸಿದಂತೆ ಸುಳ್ಳು ಹೇಳುವವರಿಗೆ ಸುಳ್ಳುಗಳನ್ನು ಪೋಣಿಸುವುದು ಬಹು ಸುಲಭ. ನೀರು ಕುಡಿದಂತೆ. ಅವರಲ್ಲಿ ಯಾವ ಪಾಪ ಪ್ರಜ್ಞೆಯೂ ಇರುವುದಿಲ್ಲ. ಭಂಡತನವಿರುತ್ತದೆ. ನೈತಿಕತೆಯ ಪ್ರಶ್ನೆಯಂತೂ ದೂರವೇ ಉಳಿಯಿತು. ಅದೇ ಸದಾ ಸತ್ಯವನ್ನೇ ಹೇಳುವ ಜನ ಅಪರೂಪಕ್ಕೆ ಒಂದು ಸುಳ್ಳು ಹೇಳಲಿ.. ಗೊತ್ತಾಗಿ ಬಿಡುತ್ತದೆ.. ಹಾವ ಭಾವ ಬದಲಾಗುತ್ತದೆ, ಧ್ವನಿ ನಡುಗುತ್ತದೆ, ಬೆವರು ಒರೆಸಿಕೊಳ್ಳುತ್ತಾರೆ, ಅದೇ ಪ್ರಶ್ನೆಯನ್ನು ತಿರುಚಿ ಕೇಳಿದಾಗ ಬಾಯಿ ಬಿಟ್ಟೇ ಬಿಡುತ್ತಾರೆ. ಆದರೆ ಈತ ಹಾಗಲ್ಲ. ಇವನಿಗೆ ಗೊತ್ತು. ಕುತ್ತಿಗೆಗೆ ಬರುವವರೆಗೂ ಸಂಭಾಳಿಸುತ್ತಾನೆ. ಅದನ್ನೂ ಮೀರಿದಾಗ ವ್ಯವಸ್ಥಿತ ಕಾರಣ ಕೊಟ್ಟು ನುಣುಚಿಕೊಳ್ಳುತ್ತಾನೆ. ಎದುರಿನವರ ನಾಡಿ ನೋಡಿ ಮಾತನಾಡುತ್ತಾನೆ. ತುಸು ಬುದ್ಧಿವಂತರಂತೆ ಕಾಣಿಸಿದರೆ ಕೇಳಿದ್ದಕಷ್ಟೆ ಉತ್ತರ ಕೊಡುತ್ತಾನೆ. ಅವನು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುವ ಹಾಗಿದ್ರೆ ಗಳಗಳನೆ ಪಾಠ ಮಾಡಲು ನಿಂತು ಬಿಡುತ್ತಾನೆ.
ಅವನಿಗೆ ಗೊತ್ತಿದೆ ಯಾವ ತಂತಿಯನ್ನು ಹೇಗೆ ಮೀಟಬೇಕೆಂದು. ಆ ವಿಷಯದಲ್ಲಿ ಜಾಣ ಅವನು. ಆ ಜಾಣ್ಮೆಯಿಂದಲೇ ಇಷ್ಟು ದಿನ ಎಲ್ಲರನ್ನು ಏಮಾರಿಸಿದ್ದು ಹಾಗು ಈಗಲೂ ಸತ್ಯವನ್ನ ಒಪ್ಪಿಕೊಳ್ಳದೆ ಏಮಾರಿಸಲು ಪ್ರಯತ್ನಿಸುತ್ತಿರುವುದು. ಆದರೆ ಒಮ್ಮೆ ಮನುಷ್ಯನ ಸುಳ್ಳು ಆಚೆ ಬಂದರೆ ಮುಂದೆ ಅವನು ನಿಜ ಹೇಳಿದರೂ ಸುಳ್ಳಿನ ಪರಿಧಿಯಲ್ಲೇ ನೋಡುತ್ತೇವೆ. ಹಾಗಾಗಿ ಸಂತೆಯಲ್ಲಿ ಬೆತ್ತಲಾಗಿ ಹುಚ್ಚ ಎಂದು ಕರೆಸಿಕೊಳ್ಳುವ ಮೊದಲು ಯೋಚಿಸಬೇಕು. ನೀರಿನ ಆಳ ತಿಳಿದು ಬಾವಿಗೆ ಜಿಗಿಯಬೇಕು.
ಅವನನ್ನು ಕರೆಸಿ ಪ್ರಶ್ನೆಗಳನ್ನು ಕೇಳಿ ಬಾಯಿ ಬಿಡಿಸಬೇಕೆಂದುಕೊಂಡಿದ್ದ (ತೆರೆಯ ಹಿಂದೆ ಅದೇನು ಒಪ್ಪಂದ ನಡೆದಿತ್ತೋ ಗೊತ್ತಿಲ್ಲ!) ಮಾಧ್ಯಮಕ್ಕೆ ಮತ್ತದೇ ರಾಗವನ್ನು ತಪ್ಪಾದ ಸ್ವರದಲ್ಲಿ ಹಾಡಿ, ಹಾಡು ಹಗಲೇ ಪಾರಾಗಿದ್ದಾನೆ. ಅವನ ಬಾಯಿಯಿಂದ ವಿಜ್ಞಾನದ ಒಂದು ವಿಶ್ಲೇಷಣೆಯು ಬರುವುದಿಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಒಂದು ಉತ್ತರವೂ ಇಲ್ಲ. ಮತ್ತದೇ ತೋರಿಕೆ ಮತ್ತದೇ ಹಾರಿಕೆ.
ಇವನ್ಯಾಕೆ ಹೀಗೆ ಮಾಡಿದ? ಇಡೀ ಸಮಾಜಕ್ಕೆ ಮೋಸ ಮಾಡುವ ಹುಂಬ ಧೈರ್ಯ ಬಂದಿದ್ದಾದರೂ ಹೇಗೆ?
ನಾನು ನೇರವಾಗಿ ಸೋಶಿಯಲ್ ಮೀಡಿಯವನ್ನೇ ದೂರುತ್ತೇನೆ. ಇದೊಂದು ಡಸ್ಟಬಿನ್ ಎಂದು ಯಾರೋ ಹೇಳಿದ್ದು ನೆನಪಾಗುತ್ತದೆ. ಬೇಕಾದ್ದು ಬೇಡವಾಗಿದ್ದು ಎಲ್ಲ ಇಲ್ಲಿದೆ. ಸತ್ಯಕ್ಕಿಂತ ಸುಳ್ಳು ಬಹುಬೇಗ ಹಬ್ಬುತ್ತದೆ. ಸುಗಂಧ ಮತ್ತು ದುರ್ಗಂಧ ಎರಡನ್ನು ಒಟ್ಟಿಗಿಟ್ಟಾಗ ಮೂಗು ಮೊದಲು ದುರ್ಗಂಧವನ್ನೇ ಮೂಸುತ್ತದಂತೆ. ಅದು ಸತ್ಯವೋ ಸುಳ್ಳೋ ಎಂದು ಪ್ರಾಮಾಣಿಸುವ ಮೊದಲೇ ನೂರು ಜನರಿಗೆ, ಅವರಿಂದ ಸಾವಿರ ಜನರಿಗೆ ಸರಬರಾಜಾಗುತ್ತದೆ. ಹಾಗಾಗಿಯೇ ಕಷ್ಟ ಪಟ್ಟು ಸ್ವರ ಹಿಡಿದು ಹಾಡುವ ಪ್ರತಿಭೆಗಳಿಗಿಂತ ಬೆಕ್ಕಿನ ಸ್ವರದಲ್ಲಿ ಕಿರುಚಿ ರಾತ್ರೋ ರಾತ್ರಿ ಫೇಮಸ್ ಆಗುವ ಸಿಂಗರ್ ಗಳೇ ಹೆಚ್ಚು. ಇನ್ಸ್ಟಂಟ್ ದೋಸೆ, ಇನ್ಸ್ಟಂಟ್ ಇಡ್ಲಿ ಕಾಲದ ಇನ್ಸ್ಟಂಟ್ ಫೇಮ್ ಇದು!! ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಆದರೆ ಇರುವಷ್ಟು ದಿನ ಅವರದ್ದೇ ಮೆರವಣಿಗೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ಪ್ ಸ್ಟೇಟಸ್ ಎಲ್ಲಿ ನೋಡಿದರೂ ಅವರೇ ಕಾಣಿಸುತ್ತಾರೆ. ಪಾಪ ವರ್ಷಗಳ ಕಾಲ ಸ್ವರಗಳನ್ನು ಕಲಿತು, ಪಳಗಿಸಿ ಒಂದು ದಿನ ತನ್ನ ಹಾಡನ್ನು ಜನ ಕೇಳುತ್ತಾರೆಂದು ಕುಳಿತವನ ಕಣ್ಣ ಕೆಳಗೆ ಕಪ್ಪು ಚಂದ್ರವೊಂದು ಮೂಡಿರುತ್ತದೆ.
ನಾವ್ಯಾಕೆ ಹೀಗೆ? ಒಂದು ವಿಷಯವನ್ನು ಸರಿಯೋ ತಪ್ಪೋ ಎಂದು ಆಲೋಚಿಸಿ ನೋಡುವಷ್ಟು ವ್ಯವಧಾನವಿಲ್ಲದೆ ಹೋಯಿತೇ ನಮಗೆ? ಅಥವಾ ಅಷ್ಟೊಂದು ಸೋಮಾರಿಗಳಾಗಿದ್ದೇವೆಯೇ ನಾವು? ಗೊತ್ತಿಲ್ಲ.. ನಮ್ಮನ್ನು ಬಿಡಿ.. ಮಾಧ್ಯಮಗಳು ಸಹ ಇದೇ ರೀತಿ ಮಾಡಿದಾಗ ಸತ್ಯವನ್ನು, ಸಮಾಚಾರಗಳನ್ನು ಜನರಿಗೆ ತಲುಪಿಸುವವರಾರು? ನಮ್ಮಲ್ಲಿ ಮೊದಲು, ನಾನೇ ಮೊದಲು, ನನಗೆ ಮೊದಲು ಎಂಬ ಎಲ್ಲಿಯೂ ತಲುಪದ ರೇಸ್ ನಲ್ಲಿ ಓಡುತ್ತಿದ್ದೇವೆ ಎಲ್ಲರೂ. ಒಂದು ಕ್ಷಣ ನಿಂತುಕೊಳ್ಳಿ. ಒಂದು ವಿಷಯವನ್ನು ತಟ್ಟನೆ ಫಾರ್ವರ್ಡ್ ಅಥವಾ ರಿ-ಟ್ವೀಟ್ ಮಾಡುವ ಮೊದಲು ಸುಧಾರಿಸಿಕೊಳ್ಳಿ. ಉಸಿರು ತೆಗೆದುಕೊಳ್ಳಿ. ನಿಧಾನಿಸಿ ನೋಡಿ. ಆ ಹುಡುಗನ ವಿಷಯದಲ್ಲಿ ಆಗಿದ್ದು ಇದೇ.. ಅವನು ಹೇಳಿದ ನಾವು ನಂಬಿದೆವು.. ಎಂತೆಂತಹ ದೊಡ್ಡ ವ್ಯಕ್ತಿಗಳು ನಂಬಿ ಅವನನ್ನು ಭೇಟಿಯಾಗಿ ಅವನಿಗೆ ಸಹಾಯ ಮಾಡುವ ಭರವಸೆ ನೀಡಿದರು. ಸಹಾಯ ಮಾಡಿದರು ಕೂಡ!
ನಮ್ಮಲ್ಲಿ ಅನುಕಂಪವಿದೆ. ಕಷ್ಟ ಪಟ್ಟು ಸಾಧಿಸಿದವರ ಬಗ್ಗೆ ಮಮಕಾರವಿದೆ. ಹಳ್ಳಿಯಲ್ಲಿ ಬೆಳೆದು ಯಾವುದೇ ಸವಲತ್ತುಗಳಿಲ್ಲದೆ ಓದಿ ಮುಂದೆ ಬಂದವರ ಬಗ್ಗೆ ಹೆಮ್ಮೆಯಿದೆ. ಇದನ್ನೇ ಆತ ಬಂಡವಾಳ ಮಾಡಿಕೊಂಡಿದ್ದು. ಸಾಧಿಸಿದ ವಿಷಯವನ್ನು ಬಿಟ್ಟು ಹೋದಲ್ಲೆಲ್ಲ ತನ್ನ ಕಷ್ಟ, ಪರಿಸ್ಥಿತಿಗಳ ಬಗ್ಗೆಯೇ ಮಾತನಾಡಿದ್ದು. ನಿಜವಾಗಿಯೂ ಕಷ್ಟ ಪಟ್ಟು ಮುಂದೆ ಬಂದ ರೈತನ ಮಗ ಎಲ್ಲಿಯೋ ಕೂತು ಬಿಟ್ಟ! ಮೊದಲನೆಯದಾಗಿ ಅವನನ್ನು ಹೀರೋ ಮಾಡಿದವರು ನಾವೇ! ಈಗ ತೆಗಳುತ್ತಿರುವವರು ನಾವೇ! ತಪ್ಪು ಯಾರದು? ಭಾವನೆಗಳನ್ನು, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡ ಅವನದೇ? ಅಥವಾ ಅವನಿಗೆ ಆ ಅವಕಾಶ ಕೊಟ್ಟ ನಮ್ಮದೇ?
ಗಮನಿಸಿ ನೋಡಿ.. ನಾವು ವೈಯಕ್ತಿಕವಾಗಿ ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಯಾರೇ ಏನೇ ಹೇಳಿದರು ಅವರ ಸುತ್ತ ಅನುಮಾನದ ಪ್ರಶ್ನೆಯೊಂದು ಸುತ್ತುವರಿಯುತ್ತಲೇ ಇರುತ್ತದೆ. ಆದರೆ ಸಮಾಜದ ಪ್ರಶ್ನೆ ಬಂದಾಗ ನಾವು ಅಷ್ಟೊಂದು ಯೋಚಿಸುವುದಿಲ್ಲ. ಸಾಮಾನ್ಯ ಮನುಷ್ಯರಾದ ನಮಗೆ ಪ್ರತಿಯೊಂದನ್ನು ಪ್ರಾಮಾಣಿಸಿ ನೋಡುವಷ್ಟು ಸವಲತ್ತುಗಳು ಇರುವುದಿಲ್ಲ ಬಿಡಿ… ಆದರೆ ಮಾಧ್ಯಮಗಳು ಈ ಕೆಲಸವನ್ನು ಮಾಡಬೇಕಿತ್ತು. ಇನ್ನು ಮೇಲಾದರೂ ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡರೆ ಅವರಿಗೆ ಒಳ್ಳೆಯದು. ಇಲ್ಲದೆ ಹೋದಲ್ಲಿ ಕಾಮಿಡಿ ಚಾನೆಲಗಳ ಬದಲಾಗಿ ಇವುಗಳನ್ನು ನೋಡಬೇಕಷ್ಟೆ!!
ಈ ಪ್ರಸಿದ್ದಿ ಅನ್ನುವುದಿದೆಯಲ್ಲ ಅದು ಬಹಳ ತೂಕದ ಪದ. ಬೇಕು ಎಂದರೆ ಸುಲಭವಾಗಿ ಸಿಗುವಂತಹದಲ್ಲ. ಅದನ್ನು ಪಡೆಯಲು ನಿರಂತರ ಶ್ರಮ ಬೇಕು, ತಾಳ್ಮೆ ಬೇಕು, ಸೋಲುಗಳನ್ನು ಒಪ್ಪುವ ಮನಸ್ಥಿತಿ ಬೇಕು, ಬಿದ್ದಾಗ ಕುಗ್ಗದೆ ಮತ್ತೆ ಮುನ್ನುಗ್ಗುವ ಮನೋಸ್ಥೈರ್ಯ ಬೇಕು. ಆದರೆ ಈಗಿನ ದಿನಗಳಲ್ಲಿ ಪ್ರಸಿದ್ದಿಯನ್ನು ಪಡೆಯಲು ಸರ್ಕಸ್ ಗಳೇ ನಡೆಯುತ್ತಿವೆ. ಪ್ರತಿಯೊಬ್ಬರಿಗೂ ತಾವು ಒಂದಲ್ಲ ಒಂದು ರೀತಿಯಿಂದ ಪ್ರಸಿದ್ಧರಾಗಬೇಕು ಎಂಬ ಹಂಬಲ. ಅದು ಒಳ್ಳೆಯದೇ.. ಜೀವನಕ್ಕೊಂದು ಧ್ಯೇಯ ಬೇಕು. ಅದರ ಹಿಂದೆ ಮುನ್ನಗ್ಗಬೇಕು, ಸಾಧಿಸಬೇಕು.. ಆದರೆ ಆ ಪ್ರಯತ್ನದಲ್ಲಿ ನಾವು ಆಯ್ದುಕೊಳ್ಳುವ ದಾರಿಯ ಬಗ್ಗೆ ಗಮನವಿರಬೇಕು. ಮೊದಲು ಹೆಜ್ಜೆಗಳನ್ನಿಡಲು ಪ್ರಯತ್ನಿಸಬೇಕು, ನಂತರ ನಡೆಯಲು, ನಂತರ ಓಡಲು.. ಹಾಗೆ ಮಾಡಿದಾಗ ಮಾತ್ರ ರೇಸ್ ಟ್ರ್ಯಾಕಿನಲ್ಲಿ ಬಹಳ ಸಮಯ ಉಳಿಯಲು ಸಾಧ್ಯ. ಇಲ್ಲದೆ ಹೋದಲ್ಲಿ ಶುರುವಾತಿನಲ್ಲೇ ಮುಗ್ಗರಿಸಿ, ಬಿದ್ದು, ಜನರಿಗೆ ನಿಮ್ಮ ಉಪಸ್ಥಿತಿಯ ಬಗ್ಗೆಯೇ ಮರೆತು ಹೋಗುತ್ತದೆ.
ಈ ಪ್ರಸಿದ್ದಿಯಲ್ಲೇ ಎರಡು ವಿಧಗಳಿವೆ; ಸುಪ್ರಸಿದ್ದಿ ಮತ್ತು ಕುಪ್ರಸಿದ್ದಿ. ಇವತ್ತಿನ ಸಮಾಜದಲ್ಲಿ ಎರಡನೆಯ ವಿಧವನ್ನು ಪಡೆಯುವುದು ತುಂಬಾ ಸುಲಭ. ನಮ್ಮ ಮುಂದೆ ಹಲವಾರು ಉದಾಹರಣೆಗಳಿವೆ. ಡಿಂಚಕ್ ಪೂಜಾ, ಹುಚ್ಚ ವೆಂಕಟ, ನೆನಪಿಗೆ ಬಾರದ ಇನ್ನು ಹಲವರು.. ಅವರನ್ನು ಪ್ರಸಿದ್ದಿ ಮಾಡುವವರಾರು? ನಾವೇ! ತೆಗಳಲೋ ಕಾಮಿಡಿ ಅಂತಲೋ ಒಟ್ಟಿನಲ್ಲಿ ಅವರ ವಿಷಯವನ್ನು ಶೇರ್ ಮಾಡುತ್ತೇವೆ. ಅದು ಹೀಗೆ ಶೇರ್ ಆಗುತ್ತಲೇ ಇರುತ್ತದೆ. ಸತ್ತ ಹೆಣಕ್ಕೆ ಹದ್ದುಗಳು ಸುತ್ತು ಹಾಕುವಂತೆ ಕುಪ್ರಸಿದ್ದಿ ಅವರ ಸುತ್ತ ರಣಕೇಕೆ ಹೊಡೆಯುತ್ತದೆ. ಅವರಿಗೂ ತಾವು ಒಮ್ಮೆಲೇ ಹೀಗೆ ಜನರ ಬಾಯಿಯಲ್ಲಿ ರಾಮ ಕೃಷ್ಣರಾಗುತ್ತೇವೆಂದು ಅನ್ನಿಸಿರುವುದಿಲ್ಲ. ಅದನ್ನೇ ಆಸ್ವಾದಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಕೊಡುತ್ತಾರೆ. ಒಂದಷ್ಟು ಮಾಧ್ಯಮಗಳು ಬಿಟ್ಟು ಬಿಡದೆ ಅವರ ಜೀವನವನ್ನ ಅವರ ಒಂದೆರಡು ವಿಡಿಯೋ ತುಣುಕುಗಳನ್ನ ಬೆಳಿಗ್ಗೆಯಿಂದ ಸಂಜೆಯವರೆಗೂ ತೋರಿಸುತ್ತವೆ. ಅಲ್ಲಿಗೆ ಅವರು ಮನೆ ಮನೆಗೆ ತಲುಪಿರುತ್ತಾರೆ. ಇದೆಲ್ಲ ಒಂದಷ್ಟು ದಿನ.. ಇನ್ನೊಬ್ಬ ವೆಂಕಟ ಬರುವವರೆಗೂ.. ಮತ್ತೆ ಅವನ ಮೆರವಣಿಗೆ ಶುರವಾಗುತ್ತದೆ. ಮಾಧ್ಯಮಗಳು ದುಡ್ಡು ಮಾಡಿಕೊಳ್ಳುತ್ತವೆ. ಇಲ್ಲಿ ಈತ ರಸ್ತೆಗೆ ಬೀಳುತ್ತಾನೆ!!
ಯಾರ ತಪ್ಪು?
ಸರ್ ಎಂ ವಿಶ್ವೇಶ್ವರಯ್ಯ, ಡಾ ರಾಜಕುಮಾರ, ಮಾನವ ಕಂಪ್ಯೂಟರ್ ಶಕುಂತಲಾ ದೇವಿ, ಎಸ್.ಪಿ.ಬಾಲಸುಬ್ರಮಣ್ಯ ಇನ್ನು ಅನೇಕ ಸಾಧಕರನ್ನು ನಾವು ಮರೆಯಲು ಸಾಧ್ಯವೇ? ಖಂಡಿತ ಇಲ್ಲ!! ಕಾರಣ ಅವರಲ್ಲಿ ಪ್ರತಿಭೆಯ ಜೊತೆಗೆ ವರ್ಷಗಳ ಪರಿಶ್ರಮವಿತ್ತು, ತಮ್ಮ ಕಾರ್ಯದಲ್ಲಿ ಸ್ಥಿರತೆ ಇತ್ತು ಹೆಚ್ಚಾಗಿ ಅವರ ಸಾಧನೆ ಒಂದು ರಾತ್ರಿಯಲ್ಲಿ ಅಥವಾ ಬರಿಯ ಭಾಷಣಗಳಿಂದ ಹುಟ್ಟಿಕೊಂಡಿದ್ದಲ್ಲ. ಹಂತ ಹಂತವಾಗಿ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡರು. ಅವರ ಸಾಧನೆ ಮಾತನಾಡಿತು. ಮನೆಗಳಿಗೆ ತಲುಪುವುದರ ಜೊತೆಗೆ ಮನಗಳಿಗೆ ತಲುಪುವುದು ಸಹ ಅಷ್ಟೇ ಅವಶ್ಯಕ.
ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂತು. ಕೆಲವು ವಿದ್ಯಾರ್ಥಿಗಳಿಗೆ ಬೆಲ್ಲ ಇನ್ನು ಕೆಲವರಿಗೆ ಬೇವು. ತುಂಬಾ ಜನ ಕಡಿಮೆ ಮಾರ್ಕ್ಸ್ ಬಂದುದಕ್ಕೆ ಖಿನ್ನತೆಗೆ ಒಳಗಾಗುತ್ತಾರೆ. ಪಕ್ಕದ ಮನೆಯ ಹುಡುಗ ತಮಗಿಂತ ಹೆಚ್ಚಾಗಿ ಮಾರ್ಕ್ಸ್ ತೆಗೆದಾಗ, ಅದನ್ನು ಅಪ್ಪ ಅಮ್ಮ ಪದೇ ಪದೇ ಹೇಳಿದಾಗ ಬೇಜಾರಾಗುತ್ತದೆ. ಕೆಲವರಂತೂ ಜೀವನದಿಂದ ದೂರ ಹೋಗುವ ದುಸ್ಸಾಹಸವನ್ನೂ ಮಾಡುತ್ತಾರೆ. ಸರಿ.. ಅವರಿಗೆ ಅಕ್ಯಾಡೆಮಿಕ್ಸ್ ನಲ್ಲಿ ನಿಮಗಿಂತ ಹೆಚ್ಚಿನ ಮಾರ್ಕ್ಸ್ ಬಂದಿರಬಹುದು ಆದರೆ ಅವರಿಗೆ ಬರದೇ ಹೋದ ಸಂಗೀತ ನಿಮಗೆ ಒಲಿದಿರಬಹುದು, ಅವರು ಕಷ್ಟ ಪಡುವ ಚೆಸ್ ಆಟ ನಿಮಗೆ ಸಲೀಸಾಗಿರಬಹುದು.. ಎಲ್ಲರಲ್ಲೂ ಒಂದಲ್ಲ ಒಂದು ವೈಶಿಷ್ಟ್ಯವಿರುತ್ತದೆ. ಜೀವ ಉಳಿಸುವ ಡಾಕ್ಟರಿಗೆ ಎಷ್ಟು ಬೆಲೆಯೋ ಅಷ್ಟೇ ಬೆಲೆ ದೇವಸ್ಥಾನದ ವಿಗ್ರಹಗಳನ್ನು ಕಟೆಯುವ ಶಿಲ್ಪಿಗೆ. ಅವರವರ ಸಾಮರ್ಥ್ಯ! ಮೀನಿಗೆ ಈಜುವ ಸಾಮರ್ಥ್ಯ ಅಳಿಲಿಗೆ ಮರ ಏರುವ ಸಾಮರ್ಥ್ಯ! ಆ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮೊಟ್ಟ ಮೊದಲನೆಯದಾಗಿ ಪೋಷಕರಿಂದ ನಂತರ ಸಮಾಜದಿಂದ ಶುರುವಾಗಬೇಕಿದೆ. ಟಿವಿಯಲ್ಲಿ ಬರುವ ಯುವ ವಿಜ್ಞಾನಿಯ ಜೊತೆಗೆ ಮಕ್ಕಳನ್ನು ಹೋಲಿಸುವ ಬದಲು ಏನನ್ನಾದರೂ ಸಾಧಿಸುವ ಪ್ರೋತ್ಸಾಹ ನೀಡಬೇಕಿದೆ. ಸಾಧಿಸಲೇಬೇಕಂತಿಲ್ಲ. ಸಮಾಜಕ್ಕೆ ಒಳ್ಳೆಯ ಪ್ರಜೆಯಾದರೆ ಸಾಕು! ಕಷ್ಟಗಳಿಗೆ ಮಿಡಿಯುವ ಹೃದಯವಾದರೆ ಸಾಕು! ಸನ್ನಡತೆಯ ಮನುಷ್ಯನಾದರೆ ಸಾಕು!
ಹಲವರಿಗೆ ಜೀವನದಲ್ಲಿ ಏನನ್ನಾದರೂ ಮಾಡಬೇಕೆಂಬ ತುಡಿತ ಇದ್ದೆ ಇದೆ… ನನ್ನನ್ನೂ ಸೇರಿಸಿ!! ಯಾರಿಗಿರುವುದಿಲ್ಲ ಹೇಳಿ? ನಾಲ್ಕು ಜನ ನಮ್ಮನ್ನು ಗುರುತಿಸಿದರೆ ಅದಕ್ಕಿಂತ ಬೇರೆ ಸೌಭಾಗ್ಯ ಬೇಕೇ? ಅಲ್ಲವೇ.. ಆದರೆ.. ಈ ಮೊದಲೇ ಹೇಳಿದಂತೆ ಅದು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಸುಲಭವಾಗಿ ದಕ್ಕಬೇಕೆಂದರೆ ಏನಾದರೂ ವಿಚಿತ್ರವಾದುದನ್ನೋ ಅಥವಾ ಡೋಂಗಿತನವನ್ನೋ ಪ್ರದರ್ಶಿಸಬೇಕು. ಅದು ಬಹಳ ಕಾಲ ನಿಲ್ಲುವುದಿಲ್ಲ ಬಿಡಿ… ಮಾಡುವವರು ಮಾಡಲಿ. ಆ ಡೋಂಗಿತನ ಒಂದು ದಿನ ಹೊರಗೆ ಬಂದೇ ಬರುತ್ತದೆ. ಜನರ ಮನಸಿನಲ್ಲಿ ಅವರ ಹೆಸರು ನೆನಪಿರದಷ್ಟು ಸಹ ದೂರ ಸಾಗುತ್ತಾರವರು.
ನಿಮ್ಮ ಗುರಿಯನ್ನು ಸೆಟ್ ಮಾಡಿಕೊಳ್ಳಿ. ಅದಕ್ಕಾಗಿ ಶ್ರಮಿಸಿ. ಹಗಲಿರುಳು! ಗುರಿಯನ್ನು ತಲುಪುವುದೇ ನಿಮ್ಮ ಜೀವನದ ಪರಮೋಚ್ಚ ಮಂತ್ರವಾಗಬೇಕು. ಈ ಇಂಟರ್ನೆಟ್ ಇರಾ ದಲ್ಲಿರಲು ನಾವು ಬಹಳ ಪುಣ್ಯ ಮಾಡಿದ್ದೇವೆ. ಬೇಕಾದ ಮಾಹಿತಿಯೆಲ್ಲ ಸೆಕೆಂಡುಗಳಲ್ಲಿ ಸಿಗುತ್ತದೆ. ಹಾಡುಗಾರಿಕೆ, ಪೇಂಟಿಂಗ್, ನೃತ್ಯ, ನಾಟಕ, ಬರವಣಿಗೆ, ಬ್ಲಾಗಿಂಗ್, ಫೋಟೋಗ್ರಾಫಿ, ಅಡುಗೆ ಅಥವಾ ಇನ್ನಾವ ಪ್ರಕಾರದ ಕಲೆಯೇ ಇರಲಿ. ಇವತ್ತು ಹುಟ್ಟಿ ನಾಳೆ ಮಾಯವಾಗುವಂತಹ ಉತ್ಸಾಹವಾದರೆ ಸಾವಿರ ಜನರಲ್ಲಿ ನೀವು ಒಬ್ಬರಾಗಿ ಮೂಲೆಗೆ ಸರಿದು ಬಿಡುತ್ತೀರಿ. ಆ ಉತ್ಸಾಹಕ್ಕೆ ಪ್ರತಿದಿನವೂ ಎಣ್ಣೆ ಹಾಕಿ. ಪ್ರತಿದಿನವೂ ಒಂದಿಷ್ಟು ಶ್ರಮ ಹಾಕಿ. ಪ್ರತಿದಿನವೂ ಅದರ ಬಗ್ಗೆ ಹೊಸದೇನನ್ನಾದರೂ ಕಲಿತುಕೊಳ್ಳಿ, ಹಂತ ಹಂತವಾಗಿ ಅದರ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.. ಜೋರಾಗಿ ಉರಿಯುವ ದೀಪಕ್ಕೆ ಆಯಸ್ಸು ಕಡಿಮೆ. ಮಂದವಾಗಿ ಉರಿಯಬೇಕು. ಉರಿಯುತ್ತಲೇ ಇರಬೇಕು..
En cholo bardiri neevu.. Manushanige taalme mukya, Instant agi barodu shashwatawagi uliyolla annodu artha agbeku..