ಅಜ್ಜನ ಅಂಬಾರಿ ಸೈಕಲ್ ಎಂಬ ಮಾಯಾರಥ
ನಿನ್ನೆ ವಿಶ್ವ ಬೈಸಿಕಲ್ ದಿನ ಎಂದು ನೋಡಿದಾಗ ತಟ್ಟನೆ ನೆನಪಾಗಿದ್ದು ನನ್ನಜ್ಜನ ಸೈಕಲ್. ನನಗ್ ನೆನಪಿರುವ ಹಾಗೆ ಅದು ಹೀರೋ ಸೈಕಲ್. ೯೦ ರ ದಶಕದಲ್ಲಿ ಪ್ರತಿಯೊಬ್ಬನ ಮನೆಯ ಅಂಗಳವನ್ನು ಮನದಂಗಳವನ್ನು ಆಳಿದ ಸೈಕಲ್ ಅದು. ಈಗಲೂ ಹಳ್ಳಿಗಳಲ್ಲಿ ಅದರದ್ದೇ ಕಾರುಬಾರು.
ಅಜ್ಜ ಸದಾ ಜೊತೆಗಿಟ್ಟುಕೊಳ್ಳುತ್ತಿದ್ದುದು ಒಂದು ರೇಡಿಯೋ ಇನ್ನೊಂದು ಸೈಕಲ್. ಮನೆಯಲ್ಲಿದ್ದಾಗ ರೇಡಿಯೋ ಜೊತೆಯಾದರೆ ಹೊರಗಡೆ ಹೋದಾಗ ಸೈಕಲ್ ನ ಜೊತೆ.
ನನಗೆ ಬುದ್ದಿ ಬಂದಾಗಿನಿಂದಲೂ ಅಜ್ಜನ ರಥವಾಗಿದ್ದ ಸೈಕಲ್ ಈಗಲೂ ಹಾಗೆಯೇ ಇದೆ. ಅದನ್ನು ತುಳಿಯುತ್ತಿದ್ದ ಸಧೃಡ ಅಜ್ಜ ಮುಖದ ತುಂಬಾ ನೆರಿಗೆಗಳಿರುವ ಅಜ್ಜನಾಗಿ ಬದಲಾಗಿದ್ದಾನೆಯೇ ಹೊರತು ಸೈಕಲ್ ಮಾತ್ರ ಆಗಾಗ ರಿಪೇರಿ ಮಾಡಿಸಿಕೊಳ್ಳುತ್ತ ತನ್ನ ಕಾಯವನ್ನು ಕಾಪಾಡಿಕೊಂಡಿದೆ. ಅಜ್ಜ ಅದನ್ನು ಎಷ್ಟು ತುಳಿಯುತ್ತಿದ್ದನೋ ಅದರ ದುಪ್ಪಟ್ಟು ಕಾಳಜಿಯನ್ನೂ ಮಾಡುತ್ತಿದ್ದ. ದಿನ ಬೆಳಗಾದರೆ ಅಂಗಳದ ಕಸ ಹೊಡೆದು, ಚಹಾ ಕುಡಿದು, ಪೂಜೆಗೆಂದು ಹೂವುಗಳನ್ನು ಕಿತ್ತು ಅಜ್ಜಿ ತಿಂಡಿ ಮಾಡುವವರೆಗೂ ಸೈಕಲ್ ನ್ನು ಒರೆಸುವ ಕಾಯಕ ಶುರುವಾಗುತ್ತಿತ್ತು. ಬರೋಬ್ಬರಿ ಅರ್ಧ ಗಂಟೆ! ಅಜ್ಜಿ ಬಂದು ಕೂಗುವವರೆಗೂ ತಾನಾಗಿಯೇ ಒಳಗೆ ಬಂದವನೇ ಅಲ್ಲ. ಸೈಕಲ್ ನ ಪ್ರತಿಯೊಂದು ಭಾಗವನ್ನು ತಿಕ್ಕಿ ಸ್ವಚ್ಛ ಮಾಡಿ ಚೈನ್ ಗೆ ಎಣ್ಣೆ ಹಾಕಿ ಬಟ್ಟೆಯ ಮೇಲೆ ಒಂದೆರಡು ಹನಿ ಎಣ್ಣೆಯನ್ನು ಚೆಲ್ಲಿಕೊಂಡು ಬರದೇ ಹೋದರೆ ಸಮಾಧಾನವಿರಲಿಲ್ಲ ಅಜ್ಜನಿಗೆ. ಮನೆಗೆ ಅಪರೂಪದ ಅತಿಥಿಗಳು ಬಂದಾಗಲೂ ಅಜ್ಜ ಸೈಕಲ್ ಒರೆಸುವ ನಿತ್ಯರೂಢಿಯನ್ನು ತಪ್ಪಿಸುತ್ತಿರಲಿಲ್ಲ. ಅತಿಥಿಗಳೇನು ಬಂದು ಹೋಗುವವವರು ತನ್ನ ಜೊತೆಗಿರುತ್ತಿದ್ದುದು ಸೈಕಲ್ ಎಂದು ಅಜ್ಜನಿಗೆ ಅನ್ನಿಸುತ್ತಿತ್ತೇನೋ..
ಅಜ್ಜ ಎಲ್ಲೇ ಹೋದರು ಸೈಕಲ್ ಬೇಕೇ ಬೇಕಿತ್ತು. ಅಲ್ಲೇ ಹತ್ತಿರದ ಶೆಟ್ಟಿಯ ಅಂಗಡಿಯಾದರು ಸರಿ ದೂರದ ಹೊಲ ನೋಡಿಕೊಂಡು ಬರಲಾದರೂ ಸರಿ. ತನ್ನ ಬಾಳ ಸಂಗಾತಿಯೆಂಬಂತೆ ತಾನು ಹೋದಲೆಲ್ಲಾ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದ. ಅಜ್ಜನ ಊರು ಸಣ್ಣ ಹಳ್ಳಿ. ಒಂದೇ ಶಾಲೆ, ಒಂದೇ ಪೋಸ್ಟ್ ಆಫೀಸ್, ಒಂದು ಪಂಚಾಯಿತಿ ಹೀಗೆ ಅತಿ ಕಡಿಮೆ ಸೌಲಭ್ಯಗಳನ್ನು ಹೊಂದಿದ ಉತ್ತರ ಕರ್ನಾಟಕದ ಸಣ್ಣ ಹಳ್ಳಿ. ಇದ್ದ ಒಂದೇ ಪೋಸ್ಟ್ ಆಫೀಸಿನಲ್ಲಿ ಊರ ಜನರ ವ್ಯವಹಾರವೆಲ್ಲ. ಅಜ್ಜ ಪೋಸ್ಟ್ ಮಾಸ್ಟರ್ ಆಗಿದ್ದರಿಂದ ಊರಿನಲ್ಲಿದ್ದ ಬಹುತೇಕ ಎಲ್ಲರ ಪರಿಚಯವಿತ್ತು. ಅಜ್ಜ ದಾರಿಯಲ್ಲಿ ನಡೆದುಕೊಂಡು ಹೋದರೆ ಸಾಕು ಸಿಕ್ಕವರೆಲ್ಲರೂ ಮಾತನಾಡಿಸುವವರೇ. ಪೋಸ್ಟ್ ಆಫೀಸಿನ ಸಣ್ಣ ಉಳಿತಾಯಗಳ ಬಗ್ಗೆ ಮಾಹಿತಿ ಕೊಡುವುದು, ಜನರ ಕಡೆಯಿಂದ ೧೦ ರೂ, ೫೦, ರೂ, ೧೦೦ ರೂ ಹೀಗೆ ಅವರ ಕೈಲಾದಷ್ಟು RD ಮಾಡುವಂತೆ ಅವರಿಗೆ ತಿಳಿ ಹೇಳುವುದು, ಇಡಗುಂಜಿ ಗಣೇಶನಿಗೆ ಮನಿ ಆರ್ಡರ್ ಮಾಡುವುದು ಇತ್ಯಾದಿ ಸಹಾಯಗಳನ್ನು ಅಜ್ಜ ಮಾಡುತ್ತಿದ್ದರಿಂದ ಅವರಿಗೆಲ್ಲ ಅಜ್ಜನ ಮೇಲೆ ಗೌರವ ಪ್ರೀತಿ ಎರಡೂ ಇತ್ತು. ಹೀಗಾಗಿ ಅಪರೂಪಕ್ಕೇನಾದರೂ ಅಜ್ಜ ಸೈಕಲ್ ಇಲ್ಲದೆ ನಡೆದುಕೊಂಡು ಹೋದರೆ ಊರ ಜನ ಎಲ್ಲ ‘ಯಾಕ್ರೀ ಸಾವಕಾರ ಸೈಕಲ್ ಎಲ್ಲಿ ಹೋತ್ರಿ’ ಎಂದು ಕೇಳುವುದನ್ನು ಮರೆಯುತ್ತಿರಲಿಲ್ಲ. ನಮ್ಮ ಉತ್ತರ ಕರ್ನಾಟಕದ ಕಡೆ ಜನರನ್ನು ಮಾತನಾಡಿಸುವುದು ಹಾಗೆಯೇ.. ಹಿರಿಯರಾದರೆ ‘ಸಾವಕಾರ’, ‘ಮಾಸ್ತರ್’ ಎಂದು, ಸಮಾನ ವಯಸ್ಕಾರದರೆ ‘ಮಾವ’ ಎಂದು, ಚಿಕ್ಕವರಾದರೆ ‘ತಮ್ಮ’, ‘ಪುಟ್ಟಿ’ ಎಂದೆಲ್ಲ ಸಂಭೋದಿಸುತ್ತಾರೆ.
ನಾನು ಹೈಸ್ಕೂಲು ಓದಲು ಅಜ್ಜನ ಊರಲ್ಲಿದ್ದೆ. ಅಲ್ಲಿ ಯಾವಾಗಲೂ ನೀರಿನ ಕೊರತೆ ಇರುತ್ತಿತ್ತು. ಹಳ್ಳಿಗಳಿಗೆಲ್ಲ ಕೊಳಾಯಿ ನೀರಿನ ವ್ಯವಸ್ಥೆಯನ್ನು ಮಾಡಿದಾಗ ಅಜ್ಜನ ಊರಲ್ಲಿ ಎಲ್ಲರು ಖುಷಿಯಿಂದ ಕೊಳಾಯಿಗಳನ್ನು ಹಾಕಿಸಿಕೊಂಡರು. ಮೊದಲೆಲ್ಲ ವಾರಕ್ಕೆ ಬರುತ್ತಿದ್ದ ನೀರು ನಿಧಾನವಾಗಿ ಹದಿನೈದು ದಿನಗಳಿಗೆ ಬರತೊಡಗಿತು. ಹದಿನೈದು ಯಾವಾಗ ತಿಂಗಳಾಯಿತೆಂದು ಊರ ಜನಕ್ಕೆ ಗೊತ್ತೇ ಆಗಲಿಲ್ಲ. ಕೊನೆಗೆ ನೀರು ಬರುವುದು ನಿಂತೇ ಹೋಯಿತು. ಹೀಗಾಗಿ ನಾನು ಅಲ್ಲಿದ್ದಷ್ಟು ವರ್ಷಗಳು ಭರ್ತಿ ಬರಗಾಲ! ಬಾವಿಗಳಲ್ಲಿನ ನೀರು ಬತ್ತಿ ಹೋದಾಗ ಎಷ್ಟೋ ಅರ್ಜಿಗಳ ನಂತರ ಪಂಚಾಯಿತಿಯವರು ಒಂದೆರಡು ಬೋರ್ವೆಲ್ ಗಳನ್ನು ಹಾಕಿಸಿದರು. ಇದೇ ಊರಿನಲ್ಲಿ ಕಲಿತು ಅಮೆರಿಕಾಗೆ ಹೋದವರೊಬ್ಬರು ಜನರಿಗೆ ಅನುಕೂಲವಾಗಲಿ ಎಂದು ತಮ್ಮ ಸ್ವಂತ ದುಡ್ಡಿನಲ್ಲಿ ಬೋರ್ವೆಲ್ ಹಾಕಿಸಿದರು. ಎಷ್ಟೋ ಅಡಿಗಳು ಭೂಮಿಯನ್ನು ಕೊರೆದ ನಂತರವೂ ಹೇಳಿಕೊಳ್ಳುವಷ್ಟು ನೀರು ಬರಲಿಲ್ಲ. ಬಂದಷ್ಟರಲ್ಲೇ ಸಮಾಧಾನ ಹಂಚಿಕೊಂಡ ಜನ ಈ ಬೋರ್ವೆಲ್ ಗಳ ಮುಂದೆ ಸಾಲುಸಾಲಿನಲ್ಲಿ ನಿಂತು ನೀರನ್ನು ತುಂಬಿಸಿಕೊಳ್ಳುತ್ತಿದ್ದರು. ಆಳಕ್ಕಿದ್ದ ನೀರನ್ನು ಪಂಪ್ ಹೊಡೆದು ಒಂದು ಕೊಡ ತುಂಬಿಸುವಷ್ಟರಲ್ಲಿ ಭುಜದಲ್ಲಿದ್ದ ಶಕ್ತಿಯೆಲ್ಲ ಬಸಿದು ಹೋಗುತ್ತಿತ್ತು. ದಿನ ಬಳಕೆಗೆ ಒಂದೆರಡು ಕೊಡ ನೀರು ಎಲ್ಲಿಸಾಕಾದೀತು! ಹಾಗಾಗಿ ದಿನಕ್ಕೆ ಮೂರು ನಾಲ್ಕು ಬಾರಿ ಹೋಗಿ ಪಂಪ್ ಹೊಡೆದು ನೀರು ತುಂಬಿಸಿಕೊಳ್ಳುತ್ತಿದ್ದೆವು. ಒಂದೊಂದೇ ಕೊಡ ಹೊತ್ತು ತರುವಷ್ಟು ತಾಳ್ಮೆ ಶಕ್ತಿ ಯಾರಿಗಿತ್ತು? ಆಗ ಸಹಾಯಕ್ಕೆ ಬಂದಿದ್ದೆ ಈ ಸೈಕಲ್ ಎಂಬ ಪುಣ್ಯಾತ್ಮ. ಕೊಡದ ಕುತ್ತಿಗೆಗೆ ಹಗ್ಗ ಹಾಕಿ ಅದೇ ಹಗ್ಗಕ್ಕೆ ಇನ್ನೊಂದು ಕೊಡವನ್ನು ಕಟ್ಟಿ ಸೈಕಲ್ ನ ಎರಡು ಬದಿಗೆ ಬ್ಯಾಲೆನ್ಸ್ ಆಗುವಂತೆ ನೇತು ಹಾಕುತ್ತಿದ್ದರು. ಹೀಗೆ ಎರಡು ಕೊಡಗಳ ಜೋಡಿಯಂತೆ ಜನ ೪, ೬,೮ ಕೊಡಗಳನ್ನು ಹಾಕಿ ನೀರು ತರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಶಕ್ತಿ ಇದ್ದವರಂತೂ ಹತ್ತತ್ತು ಕೊಡಗಳನ್ನು ಹಾಕಿ ತಳ್ಳುತ್ತಿದ್ದರು. ಬಣ್ಣ ಬಣ್ಣದ ಕೊಡಗಳನ್ನು ಹೊತ್ತು ತರುತ್ತಿದ್ದ ಸೈಕಲ್ ಗಳ ನಯನ ಮನೋಹರ ದೃಶ್ಯವನ್ನು ಕಣ್ಣುಗಳಲ್ಲಿ ತುಂಬಿಸಿಕೊಂಡು ಖುಷಿ ಪಡಬೇಕಿತ್ತೋ ಅಥವಾ ಹಳ್ಳಿಯ ಬವಣೆಗೆ ಈ ದೃಶ್ಯ ಸಾಕ್ಷಿಯಾಗಿತ್ತೆಂದು ಕಣ್ಣೀರಿನಿಂದ ಕಣ್ಣು ತುಂಬಿಸಿಕೊಳ್ಳಬೇಕಿತ್ತೋ ಗೊತ್ತಿಲ್ಲ.
ನಮ್ಮ ಮನೆಗೂ ಅಜ್ಜ ತನ್ನ ಸೈಕಲ್ ಮೇಲೆ ನಾವು ತುಂಬಿಸಿಟ್ಟಿದ್ದ ಕೊಡಗಳನ್ನು ಹಾಕಿ ತಳ್ಳಿಕೊಂಡು ಬರುತ್ತಿದ್ದ. ಮನೆ ಹತ್ತಿರದ ಬೋರ್ ವೆಲ್ ನಲ್ಲಿಯೂ ನೀರು ನಿಂತು ಹೋದಾಗ ದೂರದ ಅಗಸಿಯಿಂದ ತರಬೇಕಿತ್ತು. ಇಡೀ ಊರಿಗೆ ಬರಿ ಎರಡೇ ಎರಡು ಬೋರೆವೆಲ್ ಗಳು ಉಳಿದುಕೊಂಡಿದ್ದರಿಂದ ಸದಾ ಕಾಲ ಜನ ಮುಗಿ ಬೀಳುತ್ತಿದ್ದರು. ಕೊಡಗಳ ಸಂತೆಯ ಮಧ್ಯ ನಮ್ಮ ಕೊಡಗಳನ್ನು ಗುರುತಿಸಲು ಅದರ ಮೇಲೆ ಪೈಂಟ್ ನಿಂದ ಹೆಸರು ಬರೆಯುತ್ತಿದ್ದೆವು. ಗಂಟೆಗಳ ಕಾಲ ಸರದಿಗಾಗಿ ಕಾಯುವುದು. ಸಮಯ ಕಳೆಯಲು ನಮ್ಮಂತೆ ಸರದಿಗೆ ಕಾಯುತ್ತಿದ್ದವರ ಜೊತೆ ಕಷ್ಟ ಸುಖ ಮಾತನಾಡುವುದು ಇದೇ ಟೈಂಪಾಸ್ ಆಗಿತ್ತು. ಆ ಗಲಾಟೆಯಲ್ಲಿ ನೀರು ತುಂಬಿಸಿಕೊಂಡು ಬರುವ ಹೊತ್ತಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಹಗಲು ಹೊತ್ತಿನಲ್ಲಿದ್ದ ದಟ್ಟಣೆಯನ್ನು ತಪ್ಪಿಸಲು ಯುವಕರೆಲ್ಲ ಅಪರಾತ್ರಿ ಹೋಗುವ ಉಪಾಯವನ್ನು ಕಂಡುಕೊಂಡರು. ಅಜ್ಜನಿಗೆ ವಯಸಾಗಿತ್ತಾದರೂ ನಿತ್ಯ ಸಾವಾಗಿದ್ದ ನೀರಿನ ಸಮಸ್ಯೆಯಿಂದ ತಾನು ರಾತ್ರಿ ಹೋಗಲು ಶುರು ಮಾಡಿದ. ಅಲ್ಲಿ ಸದಾ ಗಂಡಸರೇ ಇರುತ್ತಿದ್ದುದರಿಂದ, ನಾವು ಜೊತೆಗೆ ಹೋಗುವುದು ಸುರಕ್ಷಿತವಲ್ಲವೆಂದು ಅಜ್ಜನೊಬ್ಬನೇ ಸೈಕಲ್ ಮೇಲೆ ಕೊಡಗಳನ್ನು ಹಾಕಿಕೊಂಡು ಬರುತ್ತಿದ್ದ.
ನಾನಿನ್ನು ಹೈಸ್ಕೂಲಿನಲ್ಲಿ ಓದುತ್ತಿದ್ದರಿಂದ ಸೈಕಲ್ ಮೇಲೆ ಕೊಡಗಳನ್ನು ಹಾಕಿಕೊಂಡು ತಳ್ಳುವಷ್ಟು ಶಕ್ತಿಯಿರಲಿಲ್ಲ. ದೊಡ್ಡವಳಾದ ಮೇಲೆ ಒಮ್ಮೆ ಹತ್ತು ಕೊಡಗಳನ್ನು ಹಾಕಿ ನಾನೊಬ್ಬಳೇ ತಳ್ಳಿಕೊಂಡು ಬರಬೇಕು ಎಂದು ಕನಸು ಕಾಣುತ್ತಿದ್ದೆ. ನಿಧಾನವಾಗಿ ಹೆಂಗಸರು ನೀರು ತುಂಬಿದ ಕೊಡಗಳಿಂದ ಜೋಲಿ ಹೊಡೆಯುತ್ತಿದ್ದ ಸೈಕಲ್ ತಳ್ಳಿಕೊಂಡು ಬರಲಾರಂಭಿಸಿದರು. ಅದು ಬೇರೆ ಕತೆ. ಅದು ಬರಗಾಲದ ನೋವಿನ ಕತೆ.
ಹೀಗೆ ಸೈಕಲ್ ಅಜ್ಜನ ಆಪತ್ಭಾಂಧವ ಆಗಿತ್ತು. ಒಮ್ಮೊಮ್ಮೆ ಅಜ್ಜಿ ಅಜ್ಜನನ್ನು ಹುಡುಕಿಕೊಂಡು ಬರಲೆಂದು ನನ್ನನ್ನು ಕಳಿಸುತ್ತಿದ್ದಳು. ಆಗ ನಾನು ಅಜ್ಜನನ್ನು ಹುಡುಕುವ ಬದಲು ಸೈಕಲ್ ಹುಡುಕಿಕೊಂಡು ಹೋಗುತ್ತಿದ್ದೆ. ಯಾರ ಮನೆ ಮುಂದೆ ಸೈಕಲ್ ನಿಲ್ಲಿಸಿರುತ್ತದೋ ಆ ಮನೆಯಲ್ಲಿ ಅಜ್ಜ ಹರಟೆ ಹೊಡೆಯುತ್ತ ಕುಳಿತಿರುತ್ತಾನೆಂದು ನನಗೆ ಅನುಭವದಿಂದ ಗೊತ್ತಾಗಿತ್ತು. ಅಜ್ಜ ಆಗಾಗ ಸೈಕಲ್ ಗೆ ಅಲಂಕಾರ ಮಾಡುತ್ತಿದ್ದ. ಹೊಸ ಸೀಟ್ ಹಾಕಿಸುವುದು, ಪೆಡಲ್ ಹಾಕಿಸುವುದು ಇತ್ಯಾದಿ ಸೈಕಲ್ ನ ಅಂದವನ್ನು ಹೆಚ್ಚಿಸುತ್ತಾದರೂ ಹ್ಯಾಂಡಲ್ ಗೆ ಬಣ್ಣ ಬಣ್ಣದ ಜರಿಗಳನ್ನು ಕಟ್ಟಿದಾಗ ನಾನೇ ತೆಗೆದು ಹಾಕಿದ್ದೆ. ಪ್ರತಿ ಆಯುಧ ಪೂಜೆಯಂದು ಮರೆಯದೆ ಸೈಕಲ್ ಗು ಪೂಜೆಯಾಗುತ್ತಿತ್ತು.
ಹೀಗೆ ಅಜ್ಜನ ಆಯುಷ್ಯದಲ್ಲಿ ಬಹುಪಾಲು ವರ್ಷಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸೈಕಲ್ ಒಂದು ದಿನ ಅಜ್ಜನ ಜೀವಕ್ಕೆ ಕಂಟಕವಾಯಿತು. ಅವತ್ತು ಅಜ್ಜ ಹೊಲಕ್ಕೆ ಸೈಕಲ್ ತೆಗೆದುಕೊಂಡು ಹೋಗಿದ್ದ. ವಾಪಾಸ್ ಸೈಕಲ್ ಹತ್ತಿ ಬರುವಾಗ ಪೆಡಲ್ ನಲ್ಲಿ ಪೈಜಾಮ ಸಿಕ್ಕಿ ಹಾಕಿಕೊಂಡು ಬಿದ್ದು ಬಿಟ್ಟ. ಬಹಳ ದೊಡ್ಡ ಪ್ರಮಾಣದಲ್ಲಿ ಅಪಘಾತವಾಗಿದ್ದರಿಂದ ಅಜ್ಜನಿಗೆ ಆಪರೇಷನ್ ಮಾಡಬೇಕಾಗಿ ಬಂತು. ಎಷ್ಟೋ ದಿನಗಳವರೆಗೆ ವಿಶ್ರಾಂತಿಯಲ್ಲಿದ್ದ ಅಜ್ಜನಿಗೆ ಸುಧಾರಿಸಿಕೊಳ್ಳಲು ಬಹಳ ದಿನಗಳೇ ಬೇಕಾಯಿತು. ಇದರ ಪರಿಣಾಮವಾಗಿ ಮೊದಲೆಲ್ಲ ಸೈಕಲ್ ಹತ್ತಿ ಪೆಡಲ್ ಮಾಡಿಕೊಂಡು ಬರುತ್ತಿದ್ದ ಅಜ್ಜ ಈಗ ಅದನ್ನು ಉರುಳಿಸಿಕೊಂಡು ಅದರ ಜೊತೆಗೆ ನಡೆಯುತ್ತ ಬರತೊಡಗಿದ. ತನ್ನ ತಪ್ಪಿಗೆ ಸೈಕಲ್ ಮುಖ ಚಿಕ್ಕದು ಮಾಡಿಕೊಂಡಂತೆ ಅನ್ನಿಸುತ್ತಿತ್ತು.
ನಾನು ಸೈಕಲ್ ಕಲಿತಿದ್ದು ಸಹ ಅಜ್ಜನ ಅಂಬಾರಿಯಿಂದಲೇ. ಅಜ್ಜನ ಊರಿಗೆ ಬರುವವರೆಗೂ ಅವರಿವರ ಹತ್ತಿರ ಸೈಕಲ್ ಇಸಿದುಕೊಂಡು ಕಲಿಯುವ ಪ್ರಯತ್ನ ಮಾಡುತ್ತಿದ್ದ ನನಗೆ ಈಗ ಮನೆಯಲ್ಲೇ ಸೈಕಲ್ ಪ್ರಾಪ್ತಿಯಾಗಿತ್ತು. ಆದರೆ ಅಜ್ಜ ತನ್ನ ಸೈಕಲ್ ಬಗ್ಗೆ ಪೊಸೆಸ್ಸಿವ್ ಇದ್ದ ಎಂದು ನನ್ನ ಭಾವನೆ. ಯಾರಿಗೂ ಅದನ್ನು ಕೊಡುತ್ತಿರಲಿಲ್ಲ. ನಾನು ಕೇಳಿದಾಗ ಇಲ್ಲವೆನ್ನುತ್ತಿರಲಿಲ್ಲವಾದರೂ ಮನದ ಮೂಲೆಯಲ್ಲಿ ಮೊಮ್ಮಗಳು ತನ್ನ ಸೈಕಲ್ ನ್ನು ಕಲಿಯಲು ಹೋಗಿ ಬೀಳಿಸಿ ಹಾಳು ಮಾಡಿಯಾಳು ಎಂದು ಕೊರಗುತ್ತಿದ್ದನೆಂದು ತೋರುತ್ತಿತ್ತು. ಹಾಗಾಗಿ ಆದಷ್ಟು ಅಜ್ಜ ಮಲಗಿಕೊಂಡಾಗ, ಸೈಕಲ್ ಬಿಟ್ಟು ಹೋದಾಗ ನಾನು ಕಲಿಯುವ ಪ್ರಯತ್ನ ಮಾಡುತ್ತಿದ್ದೆ. ಅಜ್ಜ ಅದನ್ನು ಬಿಟ್ಟು ಹೋಗುತ್ತಿದ್ದುದೇ ಅಪರೂಪವಾಗಿದ್ದರಿಂದ ಅಮಾವಾಸ್ಯೆ, ಹುಣ್ಣಿಮೆಗೊಮ್ಮೆ ಸೈಕಲ್ ತುಳಿಯುವ ಭಾಗ್ಯ ಪ್ರಾಪ್ತಿಯಾಗುತ್ತಿತ್ತು. ಆದರೆ ಅದು ನನಗಿಂತ ಬಲು ಎತ್ತರ. ಅದರ ಮೇಲೆ ಹತ್ತಿ ಕುಳಿತುಕೊಳ್ಳುವುದೆಂದರೆ ದೊಡ್ಡ ಸರ್ಕಸ್ ಮಾಡಿದಂತೆ. ಮೊದ ಮೊದಲು ಸೀಟ್ ಮೇಲೆ ಹತ್ತುವ ಸಹವಾಸಕ್ಕೆ ಹೋಗದೆ ಸೀಟ್ ಮತ್ತು ಪೆಡಲ್ ಮಧ್ಯದ ಜಾಗದೊಳಗೆ ನುಸುಳಿ ಸೈಕಲ್ ತುಳಿಯುತ್ತಿದ್ದೆ. ಹಳ್ಳಿಗಳಲ್ಲಿ ಬೆಳೆದವರಿದ್ದರೆ ನಿಮಗೆ ಈ ವಿಧಾನದ ಪರಿಚಯವಿರುತ್ತದೆ. ಈ ವಿಧಾನ ಪರಿಪಕ್ವವಾದ ಮೇಲೆ ಸೀಟ್ ಮೇಲೆ ಹತ್ತುವ ಪ್ರಯತ್ನವನ್ನೂ ಮಾಡುತ್ತಿದ್ದೆ. ಪೂರ್ತಿಯಾಗಿ ಪೆಡಲ್ ಮಾಡುವಷ್ಟು ಉದ್ದ ಇರುತ್ತಿರಲಿಲ್ಲವಾದ್ದರಿಂದ ಈ ಕಾಲಿನಿಂದ ಪೆಡಲ್ ಒತ್ತಿ ಮತ್ತೊಂದು ಕಾಲಿಗೆ ಪೆಡಲ್ ಬರುವವರೆಗೂ ಕಾದು ಅದನ್ನು ಒತ್ತುತ್ತಾ ಒಟ್ಟಿನಲ್ಲಿ ಸೈಕಲ್ ಹೊಡೆಯುವ ಅನುಭೂತಿಯನ್ನು ದಕ್ಕಿಸಿಕೊಳ್ಳುತ್ತಿದ್ದೆ.
ನಾನು ಎಂಟನೇ ತರಗತಿಯಲ್ಲಿದ್ದಾಗ ಹುಡುಗಿಯರಿಗೆಲ್ಲ ಸರಕಾರದಿಂದ ಸೈಕಲ್ ಕೊಡುತ್ತಾರೆಂದು ಹೇಳಿದರು. ನನಗಾದ ಸಂತೋಷ ಹೇಳತೀರದು. ಇನ್ನೇನು ಸೈಕಲ್ ಬಂದೆ ಬಿಟ್ಟಿತು, ನಾನು ಅದರ ಮೇಲೆ ನನ್ನ ಹೆಸರು ಕೆತ್ತಿಯೇ ಬಿಟ್ಟೆ ಎಂಬ ಸಂತಸದಲ್ಲಿ ತೇಲಾಡಿದ್ದೆ. ಅಜ್ಜನು ಖುಷಿಯಾಗಿದ್ದ. ನಮ್ಮ ಮನೆಗೆ ಇನ್ನೊಂದು ಸೈಕಲ್ ಬರುವ ಕಾರಣದಿಂದ ನಾವೆಲ್ಲಾ ಖುಷಿಯಾಗಿದ್ದೆವು. ಹಗಲೆಲ್ಲ ಮನೆಯ ಮುಂದೆ ವಿರಾಜಮಾನವಾಗುತ್ತಿದ್ದ ತನ್ನ ಸೈಕಲ್ ನ್ನು ಅಜ್ಜ ರಾತ್ರಿ ಮನೆಯ ಪಡಸಾಲೆಯಲ್ಲಿ ತಂದು ನಿಲ್ಲಿಸುತ್ತಿದ್ದ. ಯಾರಾದರೂ ಎತ್ತಿಕೊಂಡು ಹೋದಾರು ಎಂಬ ಭಯದಲ್ಲಿ. ಈಗ ನನ್ನದೂ ಒಂದು ಸೈಕಲ್ ಬಂದರೆ ಅದನ್ನು ರಾತ್ರಿ ನಿಲ್ಲಿಸುವುದೆಲ್ಲಿ ಎಂದು ನನಗೆ ಚಿಂತೆಯಾಗಿತ್ತು. ನನ್ನ ಚಿಂತೆ ದೇವರಿಗೆ ಗೊತ್ತಾಗಿ ನನ್ನ ಕಷ್ಟವನ್ನು ಪರಿಹಾರ ಮಾಡಿದ್ದಕ್ಕೆ ಖುಷಿ ಪಟ್ಟಿದ್ದೇನೋ ದುಃಖದಲ್ಲಿದ್ದೇನೋ ನೆನಪಿಲ್ಲ. ಯಾಕೆಂದರೆ ನನಗೆ ಸೈಕಲ್ ಬರಲೇ ಇಲ್ಲ. ಮೀಸಲಾತಿ ಪದ್ಧತಿ ನಿಮಗೆ ಗೊತ್ತೇ ಇದೆಯಲ್ಲ.
ಮುಂದೆ ಯಾವತ್ತೂ ಸೈಕಲ್ ನನ್ನ ಪಾಲಾಗಲಿಲ್ಲ. ಬೇಕು ಎಂದು ಬಯಸಿದಾಗ ಕೊಂಡುಕೊಳ್ಳುವಷ್ಟು ಸಿರಿತನವಿರಲಿಲ್ಲ, ಕೊಂಡುಕೊಳ್ಳುವ ಸಿರಿತನ ಬಂದಾಗ ಬೇಕು ಎನ್ನಿಸಲಿಲ್ಲ. ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆಯಿದ್ದಾಗ ಹಲ್ಲಿರಲಿಲ್ಲ ಅಂತಾರಲ್ಲ ಹಾಗೆ.
ಆದರೆ ಅಜ್ಜನ ಸೈಕಲ್ ಮಾತ್ರ ತನ್ನ ಇಡೀ ಜೀವನವನ್ನು ಅಜ್ಜನಿಗಾಗಿಯೇ ಸವೆಯಿಸಿತು. ಯಾವುದೇ ಸ್ವಾರ್ಥವಿಲ್ಲದೆ! ಈಗಲೂ ಸೈಕಲ್ ಹಾಗೆಯೇ ಇದೆ ಅಜ್ಜನ ಹಳೆಯ ನೆನಪುಗಳಿಗೆ ಸಾಕ್ಷಿಯಾಗಿ. ತನ್ನ ೭೦ ರ ವಯಸ್ಸಿನವರೆಗೂ ಸೈಕಲ್ ಓಡಿಸಿದ ಅಜ್ಜ ಈಗ ನಿತ್ರಾಣನಾಗಿದ್ದರಿಂದ ಸೈಕಲ್ ಗೆ ವಿಶ್ರಾಂತಿ ನೀಡಿದ್ದಾನೆ. ಸ್ನೇಹಿತರಿಗಿಂತಲೂ ಹೆಚ್ಚು ಸಾಂಗತ್ಯ, ಮಕ್ಕಳಿಗಿಂತಲೂ ಹೆಚ್ಚು ಆಸರೆ, ಮೊಮ್ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯನ್ನು ಅಜ್ಜನ ಸೈಕಲ್ ನೀಡಿದೆಯೆಂದು ನನ್ನ ಭಾವನೆ. ಜೀವವಿಲ್ಲದೆ ಹೋದರು ಕೆಲವು ವಸ್ತುಗಳು ನಮಗೆ ಅತಿ ಆಪ್ತವಾಗುತ್ತವೆ. ಮೊಬೈಲ್, ಕಂಪ್ಯೂಟರ್, ಹೆಡ್ ಫೋನ್, ಬೈಕ್, ಕಾರ್, ಸೈಕಲ್ ಹೀಗೆ ವೈಯಕ್ತಿಕ ವಸ್ತುಗಳ ಜೊತೆ ಹೇಳಿಕೊಳ್ಳಲಾಗದಂತಹ ಬಂಧವೊಂದು ಬೆಸೆದಿರುತ್ತದೆ. ಅವುಗಳಿಗೆ ನಮ್ಮ ಕಡೆಯಿಂದ ಯಾವುದೇ ನೀರಿಕ್ಷೆಗಳಿರುವುದಿಲ್ಲ. ತಮ್ಮ ಜವಾಬ್ದಾರಿಯನ್ನು ಯಥಾವತ್ತಾಗಿ ನಿಭಾಯಿಸುವುದಷ್ಟೇ ಅವುಗಳ ಜೀವನದ ಪರಮ ಧ್ಯೇಯ. ಹಾಗಾಗಿ ನೀರಿಕ್ಷೆಗಳನ್ನಿಟ್ಟುಕೊಂಡು ನಮ್ಮ ಸಂಗ ಬಯಸಿ ಬರುವ ಜನರಿಗಿಂತ ಈ ನಿರ್ಜಿವ ವಸ್ತುಗಳೇ ಎಷ್ಟೋ ಪಾಲು ಮೇಲೆನಿಸುತ್ತವೆ .
ಅಜ್ಜನದ್ದು ಸೈಕಲ್ ಜೊತೆ ಒಂದು ಫೋಟೋ ಇಲ್ಲವಲ್ಲ ಎಂದು ಈ ಪೋಸ್ಟ್ ಬರೆಯುವಾಗ ನೆನಪಾಯಿತು. ಆದರೇನು.. ಅವನು ಸಂತೆಯಿಂದ ತರುತ್ತಿದ್ದ ನೇರಳೆ ಹಣ್ಣು, ಬಟಕಡಲೆ, ಬಿಸಿ ಬಜ್ಜಿಗಾಗಿ ನಾನು ಕಾತರದಿಂದ ಮನೆಯ ಮುಂದಿನ ಕಟ್ಟೆಯ ಮೇಲೆ ಕಾಯುತ್ತ ಕುಳಿತಾಗ ದೂರದ ತಿರುವಿನಲ್ಲಿ ಸಂತೆಯ ಚೀಲಗಳನ್ನು ಸೈಕಲ್ ಮೇಲೆ ಹಾಕಿಕೊಂಡು ಅಜ್ಜ ಬರುತ್ತಿದ್ದುದು ಈಗಲೂ ಕಣ್ಣಲ್ಲೇ ಕಟ್ಟಿದಂತಿದೆ. ನನ್ನ ನೆನಪಿನ ಶಕ್ತಿಯಿರುವವರೆಗೂ ಆ ಚಿತ್ರ ಜೀವಂತವಾಗಿರುತ್ತದೆ.