ಕನಸನ್ನು ಬೆನ್ನತ್ತುವ ಕಠೋರ ತಪಸ್ಸಿಗಷ್ಟೇ ದೇವರು ಒಲಿಯುತ್ತಾನೆ : ಹುಲ್ಲಾಗು ಬೆಟ್ಟದಡಿ (6)
ಭಾರತ ಪ್ರವಾಸದ ಕಾರಣದಿಂದ ನವೆಂಬರ್ ತಿಂಗಳಿನಲ್ಲಿ ಹುಲ್ಲಾಗು ಬೆಟ್ಟದಡಿ ಅಂಕಣಗಳನ್ನು ಬರೆಯಲಾಗಿರಲಿಲ್ಲ. ನಾನು ಸಾಧಕರ ಬಗ್ಗೆ ಅಂಕಣ ಬರೆಯಲು ತೀರ್ಮಾನಿಸಿದ್ದಕ್ಕೆ ಎರಡು ಕಾರಣಗಳು- ಒಂದು ಜಗತ್ತಿನ ಸರ್ವ ಶ್ರೇಷ್ಠ ಸಾಧನೆಗಳ ಮತ್ತು ಸಾಧಕರ ಬಗ್ಗೆ ನಾನು ಹೆಚ್ಚೆಚ್ಚು ಓದಬಹುದು ಎನ್ನುವ ಹಂಬಲ, ಇನ್ನೊಂದು ನಾನು ಏನಾದರೂ ಮಾಡಬೇಕು ಎಂಬ ತುಡಿತವನ್ನು ಜೀವಂತವಾಗಿರಿಸುವ ಹಪಾಹಪಿ.
ಈಗ ಮತ್ತೆ ಬರೆಯಲು ಕುಳಿತಿದ್ದೇನೆ. ಸ್ಪೂರ್ತಿಗೆ ದೊಡ್ಡ ದೊಡ್ಡ ಸಾಧಕರೇ ಆಗಬೇಕೆಂದೇನಿಲ್ಲ. ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದವರೇ ಆಗಬೇಕೆಂದೋ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದವರೇ ಸ್ಪೂರ್ತಿಯಾಗಲು ಸಾಧ್ಯ ಎಂಬ ಬಲವಂತವಿಲ್ಲ. ಸ್ಫೂರ್ತಿ ಬೀಸುವ ಗಾಳಿಯಂತೆ. ಮುಖ ಒಡ್ಡಿದರೆ ಅಲ್ಲಲ್ಲಿ ಸಿಕ್ಕೇ ಸಿಗುವುದು.
ಬೆಳಗಿನ ವಾಕಿಂಗ್ ಗೆ ಹೋದಾಗ ಕಾಣ ಸಿಗುವ ಹಾಲು ಮಾರುವ ಹುಡುಗ, ಟ್ರಾಫಿಕ್ ನಲ್ಲಿ ಸಿಲುಕಿದಾಗ ಗಾಡಿಯಿಂದ ಗಾಡಿಗೆ ಓಡಾಡುವ ಕೂಲಿಂಗ್ ಗ್ಲಾಸ್ ಮಾರುವ ಕುರುಡ, ಆಸ್ಪತ್ರೆಗೆ ಹೋದಾಗಲೆಲ್ಲ ಪರಿಚಿತ ನಗು ಬೀರುವ ನರ್ಸು ಹೀಗೆ ಪ್ರತಿಯೊಬ್ಬರಿಂದ ಕಲಿಯಲು ಬೇಕಾದಷ್ಟು ವಿಷಯಗಳಿರುತ್ತವೆ. ಆದರೆ ಈ ಎಲ್ಲರ ಕತೆಗಳನ್ನು ಯಾರು ಕೇಳಲು ಹೋಗುವುದಿಲ್ಲ. ಇವರಿಗೆ ವಿಕಿಪೀಡಿಯ ಪೇಜ್ ಗಳಿರುವುದಿಲ್ಲ. ಇವರ ಜೀವನ ತೆರೆಯ ಮೇಲೆ ಬರುವುದಿಲ್ಲ. ಇವರ ಬಗ್ಗೆ ಬರೆಯುವುದಾದರೂ ಹೇಗೆ. ಅದೆಷ್ಟು ಜನ ಹಾಲು ಹಾಕುವ ಹುಡುಗರು ನಮ್ಮ ದೇಶದಲ್ಲಿ? ಟ್ರಾಫಿಕ್ ಸಿಗ್ನಲಿನಲ್ಲಿ ಓಡಾಡುವ ಅದೆಷ್ಟು ಕುರುಡ ವ್ಯಾಪಾರಿಗಳನ್ನು ನಾವು ನೋಡಿಲ್ಲ? ಲೆಕ್ಕವೇ ಸಿಗದಷ್ಟು ಆಸ್ಪತ್ರೆಗಳಿರುವಾಗ ಸೇವಾ ಮನೋಭಾವದ ಒಬ್ಬಳು ನರ್ಸು ಎಂದು ಬರೆಯಲು ಹೇಗೆ ಸಾಧ್ಯ? ಹಾಗಾಗಿ ಇವರೆಲ್ಲ ಕಾಣಿಸಿದಾಗ ಪ್ರಶಂಸಾತ್ಮಕವಾಗಿ ಒಂದು ಮುಗುಳು ನಗೆಯೋ ಅಥವಾ ಒಂದೆರಡು ಆತ್ಮೀಯ ಮಾತುಗಳನ್ನಾಡಿದರೆ ಅಷ್ಟೇ ಸಾಕು. ಆ ಜೀವಗಳಿಗೆ ಅದೇ ಪ್ರಶಸ್ತಿ ಪುರಸ್ಕಾರ ಎಲ್ಲ.
ಸಾಧಕರ ಬಗ್ಗೆ ಬರೆಯಬೇಕು ಎಂದು ಕೂತಾಗ ಪ್ರತಿ ಸಲ ಕಾಡುವ ಇವರುಗಳನ್ನು ಬದಿಗಿಟ್ಟು ಇವತ್ತು ನಾನು ಹೇಳ ಹೊರಟಿರುವುದು ಮೇರಿ ಕೋಮ್ ಎಂಬ ಅಸಾಮಾನ್ಯ ಛಲಗಾತಿಯ ಬಗ್ಗೆ.
ಪರಿಚಯದ ಅವಶ್ಯಕತೆಯೇ ಇಲ್ಲ. ಈ ಹೆಸರು ಈಗ ಭಾರತದ ಮನೆ-ಮನಗಳಲ್ಲಿ ಪರಿಚಿತ. ಒಂದು ಕಾಲದಲ್ಲಿ ಮೇರಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಮಣಿಪುರದ ಕಾಂಗಾಥೆಯಿ ಎಂಬ ಹಳ್ಳಿಯಲ್ಲಿ ಕಡು ಬಡತನದಲ್ಲಿ ಜನಿಸಿದ ಮೇರಿ ಸಾಮಾನ್ಯರಲ್ಲಿ ಅತಿ ಸಾಮಾನ್ಯಳು. ಮೇಲಾಗಿ ಕಡು ಬಡತನದ ಕೀರಿಟ ತೊಟ್ಟವಳು. ಬ್ರಿಟಿಷರ ಸಮಯದಲ್ಲಿ ಮಿಡ್ಲ್ ಈಸ್ಟ್ ನಿಂದ ಅಲೆಯುತ್ತ ಬಂದ ಜನಾಂಗ ಭಾರತದ ಮಣಿಪುರದಲ್ಲಿ ವಾಸ್ತವ್ಯ ಹೂಡಿದರು. ಕೋಮ ಸಮುದಾಯ ಎಂಬ ಹೆಸರಿನಿಂದ ಪರಿಚಯವಾದ ಇವರು ಭಾರತವನ್ನೇ ತಮ್ಮ ನೆಲವನ್ನಾಗಿ ಆಯ್ದುಕೊಂಡರು. ಇವರು ಗುಹೆಯ ಮೂಲಕ ಹೊರ ಬಂದರೆಂಬ ಕತೆಯಿದೆ. ಹಾಗೆ ಬರುವಾಗ 5 ಜನ ನಾಯಕರ ಮಾರ್ಗದರ್ಶನದಲ್ಲಿ ಹೊರಗೆ ಬಂದಿದ್ದರಿಂದ ಆ 5 ಜನರು ಈ ಸಮುದಾಯದ ಕುಲ ನಾಯಕರು. ಈಗ ಸದ್ಯಕ್ಕೆ ಮಣಿಪುರದಲ್ಲಿರುವ ಕೋಮ ಸಮುದಾಯದ ಜನರು ಈ ಐದು ಜನ ನಾಯಕರ ವಂಶಾವಳಿ. ಕೋಮ ಸಮುದಾಯದ ಒಟ್ಟು ಜನಸಂಖ್ಯೆ ಕೇವಲ 14602.
ಮೇರಿಯ ಜೀವನದ ಬಗ್ಗೆ ಹೇಳುವಾಗ ಈ ಸಂಗತಿ ಅತಿ ಅವಶ್ಯವಾಗುತ್ತದೆ. ಬಾಕ್ಸಿಂಗ್ ಆಗಲಿ, ಕ್ರೀಡೆಗಳಲ್ಲಿ ಭಾಗವಹಿಸುವುದೇ ಆಗಲಿ ಮೇರಿಗೆ ಅಷ್ಟು ಸುಲಭವಾಗಿರಲಿಲ್ಲ. ನಮ್ಮ ಸಮಾಜ ಸಾಧನೆ ಮಾಡುವುದಕ್ಕೂ ಒಂದು ಚೌಕಟ್ಟನ್ನು ಹಾಕಿಕೊಂಡಿದೆ. ಹುಡುಗಿಯಾದರೆ ಇದನ್ನು ಮಾಡುವ ಹಾಗಿಲ್ಲ, ಹುಡುಗನಾದರೆ ಇದನ್ನೇ ಮಾಡಬೇಕು ಎಂಬ ಒಣ ನಿರ್ಬಂಧನೆಗಳು. ಈಗೀಗ ಜನ ತಮ್ಮ ಕೂಪಮಂಡೂಕ ಸಿದ್ಧಾಂತಗಳಿಂದ ಹೊರ ಬರುತ್ತಿದ್ದಾರಾದರು ಪರಿಸ್ಥಿತಿಯೇನು ಸುಧಾರಿಸಿಲ್ಲ.
ಶಾಲೆಗೇ ಹೋಗುವುದೇ ಸವಾಲಾಗಿರುವಾಗ ಬಾಕ್ಸಿಂಗ್ ನಂತಹ ಕ್ಷೇತ್ರಕ್ಕೆ ಮೇರಿ ಕಾಲಿಡುವುದು ದುರ್ಲಭದ ಮಾತು. ಮೇರಿಯ ಅಪ್ಪ ಟೊಂಪಾ ಕೋಮ ಒಬ್ಬ ಕುಸ್ತಿಪಟು. ರಕ್ತಗುಣದ ಬಲದಿಂದ ಮೇರಿಗೆ ಸಹಜವಾಗಿ ಕ್ರೀಡೆಗಳಲ್ಲಿ ಆಸಕ್ತಿಯಿತ್ತು. ಶಾಲೆಯಲ್ಲಿ ವಾಲಿಬಾಲ್, ಫುಟ್ಬಾಲ್ ಹೀಗೆ ಎಲ್ಲ ತರಹದ ಕ್ರೀಡೆಗಳಲ್ಲಿ ಭಾಗವಹಿಸಿದಳು. ಮಣಿಪುರದ ಬಾಕ್ಸರ್ ಡಿಂಗ್ಕೊ ಸಿಂಗ್ 1998ರ ಏಶಿಯನ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವವರೆಗೂ ಮೇರಿ ಬಾಕ್ಸಿಂಗ್ ನ ಬಗ್ಗೆ ಯೋಚಿಸಿಯೇ ಇರಲಿಲ್ಲ. ಯಾವಾಗ ಡಿಂಗ್ಕೊ ಸಿಂಗ್ ಕೈಯಲ್ಲಿ ಚಿನ್ನದ ಪದಕ ಹಿಡಿದು ಮಣಿಪುರಕ್ಕೆ ಮರಳಿದನೋ ಆಗ ಮೇರಿಯಷ್ಟೇ ಅಲ್ಲ ಆಕೆಯಂತಹ ಅನೇಕ ಯುವಕರ ಮನಸಿನಲ್ಲಿ ಬಾಕ್ಸಿಂಗ್ ನ ಕನಸು ಚಿಗುರಿತು. ಡಿಂಗ್ಕೊ ಸಿಂಗ್ ಇಡೀ ಮಣಿಪುರದ ಯುವ ಜನಾಂಗಕ್ಕೆ ಸ್ಪೂರ್ತಿಯಾದ.
ಕನಸು ಕಂಡರಷ್ಟೇ ಮುಗಿಯಿತೇ? ಕನಸು ಕಾಣುವುದಕ್ಕಿಂತ ಕನಸನ್ನು ನನಸು ಮಾಡುವುದರಲ್ಲಿನ ಶ್ರಮ ದೊಡ್ಡದು. ಎಷ್ಟೋ ಜನ ಕನಸು ಕಾಣುತ್ತಾರೆ. ಕೆಲವರು ಕನಸಿನ ಬೆನ್ನತ್ತಿದರೆ ಇನ್ನು ಕೆಲವರು ಮತ್ತೆ ಕನಸು ಕಾಣಲೆಂದು ಮಲಗುತ್ತಾರೆ. ಕನಸನ್ನು ಬೆನ್ನತ್ತಿ ಸೋತವರಿಲ್ಲ. ಮುಗ್ಗರಿಸಿರಬಹುದು, ಒಂದೆರಡು ಬಾರಿ ಬಿದ್ದಿರಬಹುದು ಆದರೆ ಗುರಿ ತಲುಪದವರಿಲ್ಲ. ಮುಗ್ಗರಿಸಿದಾಗ, ಬಿದ್ದಾಗ ಮತ್ತೆ ಎದ್ದು ಓಡಬೇಕಷ್ಟೆ.
ಮೇರಿಯ ಕನಸು ಬೃಹತ್ತಾಗಿತ್ತು. ಕನಸನ್ನು ಬೆನ್ನತ್ತಲು ಬೇಕಾದ ಆತ್ಮಶಕ್ತಿಯಿತ್ತು ಆದರೆ ಸಹಕಾರವಿರಲಿಲ್ಲ. ಹೀಗಾಗಿ ಮನೆಯವರಿಂದ ವಿಷಯ ಮುಚ್ಚಿಟ್ಟು ಮೇರಿ ನರ್ಜಿತ್ ಸಿಂಗ್ ಬಳಿ ಬಾಕ್ಸಿಂಗ್ ತರಬೇತಿಗೆ ಸೇರಿಕೊಳ್ಳುತ್ತಾಳೆ. ಡಿಂಗ್ಕೊ ಸಿಂಗ್ ಸಹ ನರ್ಜಿತ್ ಸಿಂಗ್ ಬಳಿ ತರಬೇತಿ ಪಡೆದದ್ದು.
ಮೇರಿಯ ಅಮ್ಮ ಆಖಂ ಕೋಮ್ ಗೆ ಮಗಳು ಆಯ್ದುಕೊಂಡ ದಾರಿಯ ಬಗ್ಗೆ ಗೊತ್ತಿತ್ತು. ಆದರೆ ಅವಳ ತಂದೆಗೆ ವಿಷಯ ಗೊತ್ತಾಗಿದ್ದು 2000 ಇಸವಿಯ ಮಣಿಪುರದ ಸ್ಟೇಟ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನ ನಂತರ. ಸುದ್ದಿಪತ್ರಿಕೆಯೊಂದು ಮೇರಿಯ ಫೋಟೋ ಜೊತೆಗೆ ಆಕೆ ಸ್ಟೇಟ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನ್ನು ಗೆದ್ದಿದುದರ ಬಗ್ಗೆ ವಿಸ್ತಾರವಾಗಿ ಬರೆದಿತ್ತು. ಸುದ್ದಿ ತಿಳಿದ ಅಪ್ಪನಿಗೆ ಸಿಟ್ಟು ನೆತ್ತಿಗೇರಿತ್ತು. ಮಗಳು ಬಾಕ್ಸಿಂಗ್ ಎಂದು ಮುಖವನ್ನೆಲ್ಲ ಹಾಳು ಮಾಡಿಕೊಂಡರೆ ನಾಳೆ ಇವಳನ್ನು ಯಾರು ಮದುವೆಯಾಗುತ್ತಾರೆ? ಮದುವೆಯಾಗದ ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಾದರೂ ಹೇಗೆ? ಮೇರಿ ಅಪ್ಪನ ಮಾತಿಗೆ ಜಗ್ಗಲಿಲ್ಲ. ತನ್ನ ತರಬೇತಿಯನ್ನು ಮುಂದುವರೆಸಿದಳು.
ಮೇರಿ ಕೋಮ್ ಅಂತಾರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಗೆ ಪಾದಾರ್ಪಣೆ ಮಾಡಿದಾಗ ಆಕೆಗೆ ವಯಸು 18. ಬಾಕ್ಸಿಂಗ್ ಜಗತ್ತಿನಲ್ಲಿ ಹದಿನೆಂಟರ ಹರಯವೆಂದರೆ ವಯಸಾದಂತೆಯೇ ಲೆಕ್ಕ. ಈ ವಯಸಿನಲ್ಲಿ ನೀನೇನು ಮಾಡಲು ಸಾಧ್ಯ ಎಂಬ ಪ್ರಶ್ನೆಗಳು ಎದುರಾದವು. ಗುರಿ ಮುಟ್ಟಲೇಬೇಕೆಂಬ ಛಲದಿಂದ ಬಂದವಳಿಗೆ ವಯಸು ಯಾವ ಲೆಕ್ಕ? ಮೇರಿ ಬಾಕ್ಸಿಂಗ್ ಜಗತ್ತಿನ ಸಿದ್ದ ಸೂತ್ರಗಳು ಸುಳ್ಳೆಂದು ಸಾಬೀತು ಪಡಿಸಿದಳು. ಸಾಧಿಸಲು ವಯಸ್ಸಲ್ಲ, ಗಟ್ಟಿ ಗುಂಡಿಗೆ ಬೇಕು ಎಂದು ತೋರಿಸಿದಳು.
2002ರಲ್ಲಿ ಆಂಟ್ಲ್ಯಾ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಮೆನ್ಸ್ ವರ್ಲ್ಡ್ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಷಿಪ್ಸ್ ಮೇರಿ ಗೆದ್ದುದನ್ನು ನೋಡಿದ ಟೊಂಪಾ ಕೋಮ್ ಗೆ ಮಗಳ ಬಗ್ಗೆ ಹೆಮ್ಮೆಯಾಯಿತು. ವಿಚಾರ ಬದಲಾಯಿತು. ಮೇರಿಗೆ ಈಗ ಮನೆಯವರೆಲ್ಲರ ಸಂಪೂರ್ಣ ಬೆಂಬಲವಿತ್ತು. ಇದೇ ಬೆಂಬಲದಿಂದ ಮುನ್ನುಗ್ಗಿದ ಮೇರಿ ಹಸಿದ ಚಿರತೆಯಂತೆ ಅನೇಕ ಸ್ಪರ್ಧೆಗಳನ್ನು ಗೆದ್ದಳು. ಪ್ರಶಸ್ತಿಗಳನ್ನು ಬಾಚಿಕೊಂಡಳು.
ಭಾರತದ ದೆಹಲಿಯಲ್ಲಿಯೇ ನಡೆದ 2006 ರ ಅಂತಾರಾಷ್ಟ್ರೀಯ ವಮೆನ್ಸ್ ವರ್ಲ್ಡ್ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಷಿಪ್ಸ್ ಸರಣಿಯನ್ನು ಮೇರಿ ಗೆದ್ದಾಗ ದೇಶವೇ ಆಕೆಯ ಬಗ್ಗೆ ಹೆಮ್ಮೆ ಪಟ್ಟಿತು. ಮೇರಿ ಕೋಮ್ ಮನೆ ಮಾತಾದಳು. ಹೆಣ್ಣು ಮಕ್ಕಳಿಗೆ ಇದ್ದ ಚೌಕಟ್ಟನ್ನು ಮೀರಿ ಮೇರಿ ಗೆದ್ದು ತೋರಿಸಿದಳು. ಧೃಡ ಮನಸಿದ್ದರೆ ಯಾರು ಏನನ್ನಾದರೂ ಸಾಧಿಸಲು ಸಾಧ್ಯ. ಮದುವೆ ಮಾಡಿಕೊ, ಹೆಣ್ಣು ಮಗಳಾಗಿ ನಿನಗ್ಯಾಕೆ ಬೇಕು ಇದೆಲ್ಲ ಎಂದು ಕೇಳುವ ಸಮಾಜಕ್ಕೆ, ಪೋಷಕರಿಗೆ ಮೇರಿ ಉತ್ತರವಾದಳು.
ಹಾಗಂತ ಮೇರಿ ಕೋಮ್ ಮದುವೆಯಾಗಲಿಲ್ಲ ಅಥವಾ ಮದುವೆ ಮಾಡಿಕೊಂಡವರಿಗೆ ಸಾಧಿಸಲು ಅಸಾಧ್ಯ ಎಂದೇನಲ್ಲ. 2006ರ ಚಾಂಪಿಯನ್ಷಿಪ್ ನ್ನು ಗೆದ್ದ ನಂತರ ಮೇರಿ ಕೋಮ್ ಗೆಳೆಯ ಒನಲೇರ್ ನನ್ನ ಮದುವೆಯಾದಳು. ಅಲ್ಲಿಂದ ಮೇರಿಯ ಬಾಕ್ಸಿಂಗ್ ಅಶ್ವಮೇಧಕ್ಕೆ ಮಧ್ಯಂತರ ವಿರಾಮ ಎಂದು ಹೇಳಬಹುದು. ನಂತರ ಮೇರಿಗೆ ಮುದ್ದಾದ ಅವಳಿ ಮಕ್ಕಳು ಜನಿಸುತ್ತವೆ. ಕುಟುಂಬ ಪೋಷಣೆಗಾಗಿ ಮೇರಿ ಸರಕಾರೀ ಕೆಲಸಕ್ಕೆ ಪ್ರಯತ್ನಿಸುತ್ತಾಳೆ. ಎಲ್ಲಿಯೂ ಕೆಲಸ ಸಿಗದೇ ಹೋದಾಗ ಅರ್ಜುನ, ಪದ್ಮಶ್ರೀ ಪ್ರಶಸ್ತಿ ಪಡೆದ ತನ್ನನ್ನು ಜನ ಮರೆತೇ ಹೋದರೆ ಎಂದು ಗಾಬರಿಯಾಗುತ್ತಾಳೆ. ಕಸಿವಿಸಿಯಾಗುತ್ತದೆ. ಜನರ ಮನಸಿನಲ್ಲಿ ಮೂಡಿದ ತನ್ನ ಬಗೆಗಿನ ಪರದೆಯನ್ನು ಸರಿಸಬೇಕು ಮತ್ತೆ ಮನೆ ಮಾತಾಗಬೇಕು ಮೇಲಾಗಿ ತನ್ನ ಕನಸನ್ನು ಮುಂದುವರೆಸಬೇಕೆಂಬ ಆಸ್ಥೆಯೊಂದಿಗೆ ಮೇರಿ ಕೋಮ್ ಬಾಕ್ಸಿಂಗ್ ಜಗತ್ತಿಗೆ ಮರುಪ್ರವೇಶ ಮಾಡುತ್ತಾಳೆ. ಗಂಡನ ಪೂರ್ಣ ಬೆಂಬಲವಿದ್ದುದರಿಂದ ಮಕ್ಕಳನ್ನು ನೋಡಿಕೊಳ್ಳಬೇಕೆಂಬ ಚಿಂತೆಯಿರಲಿಲ್ಲ.
ಎರಡು ಮಕ್ಕಳ ತಾಯಿಯಾದರೂ ಮೇರಿ ಕೋಮ್ ಬಾಕ್ಸಿಂಗ್ ರಂಗದಲ್ಲಿ ತೊಡೆ ತಟ್ಟುತ್ತ ನಿಂತಿದ್ದಾಳೆ. ಎಲ್ಲ ಕಷ್ಟಗಳಿಗೆ ಸವಾಲಾಗಿ, ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ. ಮೊನ್ನೆಯಷ್ಟೇ ನಡೆದ 2018 ರ ಅಂತಾರಾಷ್ಟ್ರೀಯ ವಮೆನ್ಸ್ ವರ್ಲ್ಡ್ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಷಿಪ್ಸ್ ಗೆದ್ದು ಭಾರತದ ಹೆಮ್ಮೆಯಾಗಿದ್ದಾಳೆ. ಅಂದು ಆಕೆ ಖುಷಿಯಲ್ಲಿ ಕಂಬನಿಯಿಟ್ಟಾಗ ಟಿವಿ ಮುಂದೆ ಕುಳಿತು ನೋಡುತ್ತಿದ್ದ ಕ್ರೀಡಾಪ್ರೇಮಿಗಳ ಕಣ್ಣಾಲಿಗಳು ತುಂಬಿಕೊಂಡಿದ್ದವು. ಅದೊಂದು ಭಾವನತ್ಮಕ ಸನ್ನಿವೇಶ. ಸಾಗಿ ಬಂದ ದಾರಿ, ಅನುಭವಿಸಿದ ಕಷ್ಟ, ಎದುರಾದ ತೊಡಕುಗಳು, ಧೈರ್ಯ ತುಂಬಿದ ಬೆಂಬಲ, ಕುಟುಂಬದವರ ಅಂತಃಕರಣ ಹೀಗೆ ಎಲ್ಲವು ಸಮ್ಮಿಶ್ರವಾಗಿ ಕಣ್ಣೀರಾಗಿ ಹೊರ ಬಂದ ಮನ ಕಲುಕುವಂತಹ ದೃಶ್ಯ.
ಮೇರಿ ಕೋಮ್ ಸಾಧನೆಗಳು
- ಅಂತಾರಾಷ್ಟ್ರೀಯ ವಮೆನ್ಸ್ ವರ್ಲ್ಡ್ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಷಿಪ್ಸ್ ನ್ನು 6 ಬಾರಿ ಗೆದ್ದ ವಿಶ್ವದ ಏಕೈಕ ಮಹಿಳೆ
- 7 ವರ್ಲ್ಡ್ ಚಾಂಪಿಯನ್ಷಿಪ್ ಗಳಲ್ಲಿ ಪದಕ ಬಾಚಿಕೊಂಡ ಜಗತ್ತಿನ ಏಕೈಕ ಮಹಿಳಾ ಬಾಕ್ಸರ್
- 2012 ರ ಸಮ್ಮರ್ ಒಲಿಂಪಿಕ್ಸ್ ಗೆ ಭಾರತದಿಂದ ಆಯ್ಕೆಯಾದ ದೇಶದ ಏಕೈಕ ಮಹಿಳಾ ಬಾಕ್ಸರ್
- 2014 ರ ಏಶಿಯನ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಏಕೈಕ ಮಹಿಳಾ ಬಾಕ್ಸರ್
- 2018 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಏಕೈಕ ಮಹಿಳಾ ಬಾಕ್ಸರ್
- AIBA ನಿಂದ ಮ್ಯಾಗ್ನಿಫಿಸೆಂಟ್ ಮೇರಿ ಎಂಬ ಬಿರುದು
- ಅರ್ಜುನ, ಪದ್ಮಶ್ರೀ, ಪದ್ಮಭೂಷಣ, ರಾಜೀವ ಗಾಂಧಿ ಖೇಲ ರತ್ನ ಹೀಗೆ ಹಲವು ಬಿರುದುಗಳು
ಚಿಕ್ಕ ಹಳ್ಳಿಯಲ್ಲಿ ಜನಿಸಿ ವಿಶ್ವಮಟ್ಟದಲ್ಲಿ ಖ್ಯಾತಿಯಾದ ಮೇರಿ ಕೋಮ್ ಲಕ್ಷಾಂತರ ಕ್ರೀಡಾಪಟುಗಳಿಗೆ, ಕ್ರೀಡಾಸಕ್ತರಿಗೆ ಸ್ಫೂರ್ತಿ. ಮೇರಿಯ ದಿಗ್ವಿಜಯ ಹೀಗೆ ಮುಂದುವರೆಯಲಿ.