ಕಲೆಗೆ ಹೆಣ್ಣು ಗಂಡೆಂಬ ಭೇದ ಭಾವವಿಲ್ಲ ಎಂದು ತೋರಿಸಿದ ಯಕ್ಷಗಾನ ಕಲಾವಿದೆ: ಹುಲ್ಲಾಗು_ಬೆಟ್ಟದಡಿ(14)
ಕಲೆಗೆ ವ್ಯಾಖ್ಯಾನವಿಲ್ಲ. ಸಣ್ಣದು ದೊಡ್ಡದು ಎಂದು ವಿಭಾಗಕ್ಕೊಳಗಾಗುವ ಪ್ರಮೇಯವಿಲ್ಲ. ಕಲೆಗೆ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ. ಕಲೆ ಎಲ್ಲರಿಗೂ ಒಂದೇ. ಕಲೆ ಎಂದಿಗೂ ಶ್ರೇಷ್ಠವೇ. ಆದರೂ ಕೆಲವೊಂದು ಕಲಾಕ್ಷೇತ್ರದಲ್ಲಿ ಇದು ಗಂಡಿಗೆ ಸೂಕ್ತ, ಇದು ಹೆಣ್ಣಿಗೆ ಮಾತ್ರ ಯೋಗ್ಯ ಎನ್ನುವ ಕಂದಾಚಾರದ ಕಟ್ಟುಪಾಡುಗಳಿವೆ. ಉದಾಹರಣೆಗೆ ಯಕ್ಷಗಾನ. ರಾತ್ರಿ ಹೊತ್ತು ಪ್ರದರ್ಶನ, ನೂರಾರು ಜನರ ಮುಂದೆ ಅಭಿನಯ, ವೇಷ ಭೂಷಣ ಇತ್ಯಾದಿಗಳ ಕಾರಣದಿಂದ ಅದು ಗಂಡಿಗೆ ಮಾತ್ರ ಎಂದು ಸಿದ್ಧಸೂತ್ರವಾಗಿತ್ತು. ಇತ್ತೀಚಿಗೆ ಜನರು, ಪ್ರೇಕ್ಷಕರು ಆ ಕಟ್ಟುಪಾಡುಗಳಿಂದ ಹೊರ ಬಂದು ಹೆಣ್ಣು ಮಕ್ಕಳಿಗು ಸಹ ಈ ಕಲೆಯನ್ನು ಕಲಿಯುವ ಅವಕಾಶಗಳು ಒಲಿದು ಬರತೊಡಗಿದವು. ಇಷ್ಟು ದಿನಗಳ ಕಾಲ ಮನಸ್ಸಿನಲ್ಲಿಯೇ ಆಸೆ ಪಡುತ್ತಾ ಯಾವತ್ತಾದರೂ ಒಂದು ದಿನ ರಂಗಮಂಚ ಏರಬೇಕೆಂಬ ಹೆಣ್ಣುಮಕ್ಕಳ ಕನಸು ಕೈಗೂಡತೊಡಗಿತು. ಇದಲ್ಲವೇ ಬದಲಾವಣೆ? ಕಾಲಕ್ಕೆ ತಕ್ಕಂತೆ ಹೊಸ ಹೊಸ ಪ್ರಯತ್ನಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವುದು, ಹೊಸತನವನ್ನು ಪ್ರಯತ್ನಿಸುವುದೇ ಜೀವನದ ಪರಿಪಾಠ ಅಲ್ಲವೇ..
ಈ ಎಲ್ಲ ಪೀಠಿಕೆ ಯಾಕೆಂದರೆ ಈಗ ನಾನು ಹೇಳ ಹೊರಟಿರುವ ಕತೆ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರದು. ಜನಪ್ರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರ ಮಗಳಾದ ಅಶ್ವಿನಿಗೆ ಬಾಲ್ಯದಿಂದಲೂ ಯಕ್ಷಗಾನ ಚಿರಪರಿಚಿತ. ತನ್ನ ತಂದೆ ತಾಲೀಮು ನಡೆಸುತ್ತಿದ್ದುದನ್ನು, ಪ್ರದರ್ಶನ ನೀಡುತ್ತಿದ್ದುದನ್ನು ನೋಡುತ್ತಾ ಬೆಳೆದ ಅಶ್ವಿನಿಗೆ ತಾನು ತಂದೆಯಂತೆಯೇ ಪರಿಪೂರ್ಣ ಕಲಾವಿದೆಯಾಗಬೇಕೆಂಬುದು ಬಾಲ್ಯದ ಆಸೆ. ಹರಿಶ್ಚಂದ್ರ ಪ್ರಸಂಗದಲ್ಲಿ ಬಾಲ ಚಂದ್ರಹಾಸನಾಗುವ ಮೂಲಕ ರಂಗಕ್ಕೆ ಪಾದಾರ್ಪಣೆ ಮಾಡಿದ ಅಶ್ವಿನಿ ಕೊಂಡದಕುಳಿ ನಂತರ ಹಲವಾರು ಬಾಲ ಪಾತ್ರಗಳನ್ನು ನಿರ್ವಹಿಸಿದರು. ಚಿಕ್ಕ ವಯಸ್ಸಿನಿಂದಲೂ ಚುರುಕಾಗಿದ್ದ ಅಶ್ವಿನಿ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಗುರುಗಳ ಮೆಚ್ಚುಗೆಗೆ ಪಾತ್ರವಾದಾಕೆ.
ಬಾಲ್ಯದಲ್ಲಿ ಹಲವಾರು ಆಸೆಗಳಿರುತ್ತವೆ, ಕನಸುಗಳಿರುತ್ತವೆ. ನಮ್ಮ ನೆಚ್ಚಿನ ಗುರುಗಳು ಪಾಠ ಮಾಡುವುದನ್ನು ನೋಡಿ ನಾವು ಒಂದು ದಿನ ಟೀಚರ್ ಆಗಬೇಕು ಎಂದೆನಿಸುತ್ತದೆ. ಸಿನಿಮಾಗಳಲ್ಲಿ ಬರುವ ನಾಯಕ ಅದ್ಭುತವಾದ ಹೊಡೆದಾಟದ ಮೂಲಕ ರೌಡಿಗಳನ್ನು ಎತ್ತಿ ಬೀಳಿಸುವಾಗ ನಾವು ಅವನಂತೆಯೇ ನಾಯಕನಾಗಿ ಮೆರೆಯಬೇಕೆನಿಸುತ್ತದೆ. ಗಡಿಯಲ್ಲಿ ಸೈನಿಕರು ಶತ್ರುಗಳ ಮೇಲೆ ಧಡ್ ಧಡ್ ಎಂದು ಗುಂಡುಗಳನ್ನು ಹಾರಿಸುವಾಗ ನರನರಗಳಲ್ಲಿಯೂ ದೇಶಭಕ್ತಿ ಉಕ್ಕಿ ನಾವು ಒಂದು ದಿನ ಸೈನಿಕರಾಗಬೇಕು ಶತ್ರುಗಳ ಎದೆ ಸೀಳಬೇಕು ಎನ್ನುವ ಕೆಚ್ಚು ಹುಟ್ಟುತ್ತದೆ. ಹೀಗೆ ವರುಷದಿಂದ ವರುಷಕ್ಕೆ ಬದಲಾಗುವ ಸುಂದರ ಕನಸುಗಳು ಅವು. ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟಾಗ, ನಿಜವಾಗಿಯೂ ಜೀವನದಲ್ಲಿ ಏನೋ ಒಂದು ಆಗುವ ಸಂದರ್ಭ ಬಂದಾಗ ಯಾರು ಯಾವ ಕ್ಷೇತ್ರಕ್ಕೆ ಹೋಗುತ್ತಾರೆಂದು ಯಾರಿಗೆ ಗೊತ್ತು! ಸೈನಿಕನಾಗಬೇಕು ಎಂದು ಹೇಳಿದವನು ಟೀಚರ್ ಆಗಿರಬಹುದು, ಟೀಚರ್ ಆಗುತ್ತೇನೆಂದು ಹೇಳಿದವನು ಇಂಜಿನಿಯರ್ ಆಗಿರಬಹುದು.. ಹೀಗೆ ಜೀವನದ ಆ ಹಂತದಲ್ಲಿ ಯಾವುದು ನಮಗೆ ಅತಿ ಸೂಕ್ತವೆನ್ನಿಸುತ್ತದೋ ಅದನ್ನೇ ಆಯ್ದುಕೊಳ್ಳುತ್ತೇವೆ. ಸೈನಿಕನಾಗಿ ಆ ಚಳಿಯಲ್ಲಿ, ಆಪತ್ಕಾಲದಲ್ಲಿ ಗಡ ಗಡ ನಡುಗುತ್ತ ಪ್ರಾಣ ಕೊಡುವರಾರು? ಅದಕ್ಕಿಂತ ಏಸಿ ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದು ಭದ್ರವಲ್ಲವೇ? ಎಲ್ಲರು ಸೈನಿಕರಾದರೆ ಇಂಜಿನಿಯರ್ ಆಗಿ ಯುದ್ಧ ವಿಮಾನಗಳನ್ನು, ಸಲಕರಣೆಗಳನ್ನು ನಿರ್ಮಿಸುವವರು ಯಾರು? ಎಲ್ಲರು ಇಂಜಿನಿಯರ್ ಆದರೆ ದೇಶವನ್ನು ರಕ್ಷಿಸುವರಾರು, ಮಕ್ಕಳಿಗೆ ಪಾಠ ಹೇಳಿ ಭವ್ಯ ಪ್ರಜೆಗಳನ್ನು ಮಾಡುವವರು ಯಾರು? ಅಲ್ಲವೇ..
ಹಾಗಾಗಿಯೇ ನಮ್ಮ ಬಾಲ್ಯದ ಕನಸು, ಗುರಿ ಹಲವು ಕಾರಣಗಳಿಂದಾಗಿ ವಿಭಿನ್ನ ದಿಶೆಗಳಲ್ಲಿ ಹಂಚಿ ಹೋಗಿ ಬಿಡುತ್ತದೆ. ಹಲವು ಕಾರಣಗಳಿಗಾಗಿ ಕನಸುಗಳು ಕಳೆಗುಂದುತ್ತವೆ, ಮೌಲ್ಯ ಕಳೆದುಕೊಳ್ಳುತ್ತವೆ. ತಂದೆಯಂತೆಯೇ ಯಕ್ಷಗಾನ ಕಲಾವಿದೆಯಾಗಬೇಕೆಂಬುದು ಅಶ್ವಿನಿಯ ಬಾಲ್ಯದ ಕನಸು. ತಂದೆಯಿಂದ ಯಕ್ಷಗಾನ ಕಲಿಯುತ್ತ, ಬಾಲ ಪಾತ್ರಗಳಲ್ಲಿ ಅಭಿನಯಿಸುತ್ತ, ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದೆವರೆಸುತ್ತ ಬೆಳೆದ ಅಶ್ವಿನಿ ಪಿಯುಸಿಯ ನಂತರ ಮಂಗಳೂರಿನ ಆಳ್ವಾಸ್ ನಲ್ಲಿ ಬಿ.ಎಸ್ಸಿಗೆ ಸೇರಿ ಅಲ್ಲಿಯೇ ಎಂ.ಎಸ್ಸಿ ಪದವಿಯನ್ನು ಮುಗಿಸುತ್ತಾರೆ. ಆಳ್ವಾಸ್ ನ ಸಾಂಸ್ಕೃತಿಕ ಕಾರ್ಯಕ್ರಮಗಳು ಅಶ್ವಿನಿಯವರ ಕನಸಿಗೆ ನೀರೆರೆಯುತ್ತವೆ. ವಿದ್ಯಾಭ್ಯಾಸದ ನಡುವೆ ಸಮಯ ಸಿಕ್ಕಾಗ ಯಕ್ಷಗಾನದೆಡೆಗೆ ಹೊರಳುತ್ತಿದ್ದ ಅಶ್ವಿನಿಯನ್ನು ಸಂಪೂರ್ಣವಾಗಿ ಯಕ್ಷಗಾನದೆಡೆಗೆ ಮುಖ ಮಾಡುವಂತೆ ಮಾಡಿದ್ದು ಅಮ್ಮನ ಸಾವು. ಆ ದುಃಖವನ್ನು ಮರೆಯಲು, ಅಮ್ಮನ ಅಗಲುವಿಕೆಯ ನೋವನ್ನು ಮರೆಯಲು ಯಕ್ಷಗಾನವನ್ನೇ ಸಂಪೂರ್ಣವಾಗಿ ಅಪ್ಪಿಕೊಂಡರು ಅಶ್ವಿನಿ. ಅವರೇ ಹೇಳುವಂತೆ ಅವರ ತಾಯಿಯೇ ಯಕ್ಷಗಾನದ ರೂಪದಲ್ಲಿ ಅವರನ್ನು ಅಪ್ಪಿಕೊಂಡಿದ್ದು, ಅಕ್ಕರೆ ತೋರಿದ್ದು, ತನ್ನವಳನ್ನಾಗಿ ಮಾಡಿಕೊಂಡಿದ್ದು.
ನಮ್ಮಲ್ಲಿ ಬಹುತೇಕ ಮಧ್ಯಮ ವರ್ಗದ ಕುಟುಂಬಗಳೇ.. ಅಪ್ಪ ಅಮ್ಮ ಕಷ್ಟ ಪಟ್ಟು ಮಕ್ಕಳನ್ನು ಓದಿಸುತ್ತಾರೆ. ಹಾಗೆ ಓದಿದ ಬಹುತೇಕರಿಗೆ ಆದಷ್ಟು ಬೇಗ ಒಳ್ಳೆಯ ಕೆಲಸ ಹಿಡಿದು ಅಪ್ಪ ಅಮ್ಮನ ಹೊರೆಯನ್ನು ಕಡಿಮೆ ಮಾಡಬೇಕು, ತಮ್ಮ ನೆರವೇರದ ಕನಸುಗಳನ್ನು ಈಡೇರಿಸಿಕೊಳ್ಳಬೇಕು ಎನ್ನುವ ಆಸೆ. ಇವೆರಡಕ್ಕೂ ಪರಿಹಾರವೆಂದರೆ ತಿಂಗಳಿಗೆ ಸರಿಯಾಗಿ ಸಂಬಳ ಬರುವಂತಹ ಕೆಲಸವನ್ನು ಹಿಡಿಯುವುದು. ಅಲ್ಲವೇ.. ಏನೋ ಒಂದು ಹೊಸದನ್ನು ಪ್ರಯತ್ನಿಸಲು ಹಣಕಾಸಿನ ಬೆಂಬಲ ಇರಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು. ಹಾಗಾಗಿ ಕೆಲಸ ಹಿಡಿದರಾಯಿತು ಮುಂದೊಂದು ದಿನ ಹಣ ಸೇರಿಸಿಕೊಂಡು ಕಂಪನಿಯನ್ನು ತೆರೆದರಾಯಿತು ಅಥವಾ ನಮ್ಮಿಷ್ಟದ ಇನ್ನಾವುದೋ ಕೆಲಸ ಮಾಡಿದರಾಯಿತು ಎಂದುಕೊಂಡು ಜೀವನವನ್ನು ತಳ್ಳುತ್ತೇವೆ. ಆ ಒಂದು ದಿನ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಆ ದಿನ ಬಂದರೂ ನಾವು ಅದನ್ನು ಗುರುತಿಸದೆಯೂ ಹೋಗಬಹುದು. ಅಲ್ಲಿಗೆ ತಿಂಗಳಿಗೆ ಸಂಬಳ ಎಣಿಸುವ, ಕೈ ಬಿಟ್ಟ ಕನಸುಗಳನ್ನು ಮತ್ತೆ ಮತ್ತೆ ನೆನೆಯುವ, ಏಕತಾನತೆಯ ಜೀವನ ನಡೆಸುವ ಲಕ್ಷಗಟ್ಟಲೆ ಜನರ ಗುಂಪಿನಲ್ಲಿ ಒಬ್ಬರಾಗಿ ಹೋಗಿ ಬಿಡುತ್ತೇವೆ.
ಅಶ್ವಿನಿ ಹಾಗೆ ಮಾಡಲಿಲ್ಲ. ಸಮಾಜ ಏನೇ ಹೇಳಿದರೂ, ಯಕ್ಷಗಾನ ಗಂಡು ಕಲೆ, ಹೆಣ್ಣಿಗೇಕೆ? ಎಂದು ಪ್ರಶ್ನಿಸಿದರೂ, ಯಕ್ಷಗಾನಕ್ಕೆ ಸೇರಿದರೆ ಮಕ್ಕಳು ಹಾಳಾಗಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರೂ ಹಿಂದೆ ಸರಿಯಲಿಲ್ಲ. ಅಷ್ಟೇ ಅಲ್ಲ.. ತಮ್ಮ ಎತ್ತರದ ನಿಲುವಿಗೆ ಹೊಂದುವಂತಹ ಗಂಡು ಪಾತ್ರಗಳನ್ನೇ ಆಯ್ದುಕೊಂಡು ಭೇಷ ಎನಿಸಿಕೊಂಡರು. ಪಗಡೆ ವೇಷ, ಕಿರೀಟ ವೇಷ ಎರಡರಲ್ಲಿಯೂ ಅವರದು ಅಮೋಘ ಪ್ರದರ್ಶನ. ಕೃಷ್ಣಾರ್ಜುನ, ಭಷ್ಮಾಸುರ, ಹನುಮಂತ, ವಿಶ್ವಾಮಿತ್ರ, ಶ್ರೀರಾಮ ಹೀಗೆ ಹಲವಾರು ಪಾತ್ರಗಳಾಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಯಾವ ಪಾತ್ರವನ್ನು ಕೊಟ್ಟರು ಹಿಂಜರಿಯದೆ ಪಾತ್ರಕ್ಕೆ ಜೀವ ತುಂಬುವ ಅಶ್ವಿನಿಗೆ ಹನುಮಂತನ ಪಾತ್ರವೆಂದರೆ ಅಚ್ಚುಮೆಚ್ಚು.
ಸದಾ ಕನಸು ಕಾಣುತ್ತಿರಬೇಕು. ಕನಸುಗಳೇ ನಮ್ಮನ್ನು ಅಭ್ಯುದಯದೆಡೆಗೆ ಕೊಂಡೊಯ್ಯುತ್ತವೆ. ಕನಸುಗಳೇ ನಮ್ಮನ್ನು ನಿನ್ನೆಗಿಂತ ಉತ್ತಮರನ್ನಾಗಿ ಮಾಡುತ್ತವೆ. ಕನಸುಗಳಿಂದಲೇ ಬದುಕಲಿಕ್ಕೊಂದು ಛಲವಿರುತ್ತದೆ. ಮುಂಜಾನೆ ಎದ್ದು ದಿನವನ್ನು ಶುರು ಮಾಡಲು ಕನಸುಗಳೇ ಕಾರಣವಾಗಿರುತ್ತವೆ. ಕನಸುಗಳೆಂದರೆ ಹೀಗೇ ಇರಬೇಕೆಂದಿಲ್ಲ. ದೊಡ್ಡದೇ ಆಗಬೇಕೆಂದಿಲ್ಲ. ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡುವ ಕನಸು, ಅಂದದ ಚಿತ್ರಕಲೆಯನ್ನು ಬಿಡಿಸುವ ಕನಸು, ಯಾರೋ ಸೂಚಿಸಿದ ಪುಸ್ತಕವನ್ನು ಓದಿ ಮುಗಿಸುವ ಕನಸು, ಸಿಹಿಯಾದ ಗುಲಾಬ್ ಜಾಮೂನು ಮಾಡುವ ಕನಸು.. ಹೀಗೆ ಯಾವುದೋ ಒಂದು ಕನಸು. ಒಂದನ್ನು ಪೂರೈಸಿದ ನಂತರ ಮತ್ತೊಂದು.. ಮಗದೊಂದು.. ಹೀಗೆ ಕನಸುಗಳು ಹುಟ್ಟುತ್ತಲೇ ಇರಬೇಕು. ಆದರೆ ಒಂದು ಕನಸನ್ನು ಪೂರ್ಣಗೊಳಿಸುವ ಮೊದಲೇ ಇನ್ನೊಂದಕ್ಕೆ ಹಾರುವ, ಅರ್ಧದಲ್ಲೇ ಕೈ ಬಿಡುವ ಮಂಗನ ಮನಸು ಇರಬಾರದಷ್ಟೇ. ಹಾಗೇನಾದರೂ ಇದ್ದರೆ ನಾವು ಜೀವನದಲ್ಲಿ ಮುಂದೆ ಹೋಗುವುದೇ ಇಲ್ಲ. ನಿಂತಲ್ಲಿಯೇ ನಿಂತು ಬಿಡುತ್ತೇವೆ. ಒಂದು ಕನಸಿದ್ದರೆ ಅದನ್ನು ಸಾಕಾರಗೊಳಿಸಲು ವಿಶ್ವಪ್ರಯತ್ನ ಮಾಡಬೇಕು. ತನು ಮನ ಎರಡರಿಂದಲೂ ದುಡಿಯಬೇಕು. ಎಷ್ಟೇ ಅಡೆ ತಡೆಗಳು ಬಂದರು ಈಸಬೇಕು, ಈಸುತ್ತಿರಬೇಕು!
ಇವತ್ತು ಅಶ್ವಿನಿಯವರನ್ನು ಕೇಳಿದರೆ ತಾವು ಆಯ್ದುಕೊಂಡ ಕ್ಷೇತ್ರದ ಬಗ್ಗೆ ಅವರಿಗೆ ಯಾವುದೇ ಪಶ್ಚಾತಾಪವಿಲ್ಲ. ಅವತ್ತು ಕೈ ಬಿಟ್ಟ ವಿದೇಶಿ ಕೆಲಸದ ಬಗ್ಗೆಯೂ ಕೊರಗಿಲ್ಲ. ಯಕ್ಷಗಾನ ಅವರಿಗೆ ಎಲ್ಲವನ್ನು ಕೊಟ್ಟಿದೆ. ಅವರ ಸತತ ಪರಿಶ್ರಮ ಮತ್ತು ಕಲಿಕಾ ಮನೋಭಾವದಿಂದ ಇವತ್ತು ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ. ಯಕ್ಷಗಾನದ ಗಳಿಕೆಯಲ್ಲಿಯೇ ಮನೆ, ಕಾರು ಎಲ್ಲವನ್ನು ಕೊಂಡುಕೊಂಡಿದ್ದಾರೆ. ಈಗ ಇದೆಲ್ಲವನ್ನು ಕೇಳುತ್ತಿದ್ದರೆ ಎಲ್ಲವು ಸುಲಭ ಎಂದೆನಿಸುತ್ತದೆ. ಆದರೆ ಅವರು ಈ ಮಟ್ಟಕ್ಕೆ ಬರಲು ಪಟ್ಟ ಕಷ್ಟ, ಹಾಕಿದ ಪರಿಶ್ರಮ ಅವರಿಗೆ ಗೊತ್ತು. ಕೆಲವೊಮ್ಮೆ ಬಯಲಾಟದ ಪ್ರದರ್ಶನಗಳಲ್ಲಿ ಮೂಲಭೂತ ಸೌಕರ್ಯಗಳೇ ಇರುವುದಿಲ್ಲ. ಕೆಲವೊಂದು ಸಲ ಒಂದು ಹನಿ ನೀರನ್ನು ಕುಡಿಯದೆ ಏಳೆಂಟು ತಾಸುಗಳ ಕಾಲ ಪ್ರದರ್ಶನ ನೀಡಿದ್ದಿದೆ. ಬಿ.ಎಸ್ಸಿ ಓದುವಾಗ ಪರೀಕ್ಷೆ ಮತ್ತು ಪ್ರದರ್ಶನ ಎರಡೂ ಒಂದೇ ದಿನ ಇದ್ದಾಗ ಪ್ರದರ್ಶನ ನೀಡಿ ಅದೇ ವೇಷದಲ್ಲಿಯೇ ಬಂದು ಪರೀಕ್ಷೆ ಬರೆದು ಮತ್ತೆ ಮರಳಿ ಹೋಗಿ ಪ್ರದರ್ಶನ ನೀಡಿ ಪ್ರೇಕ್ಷಕರಿಂದಲೂ ಭೇಷ ಎನ್ನಿಸಿಕೊಂಡು ಪರೀಕ್ಷೆಯಲ್ಲಿಯೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಹಿರಿಮೆ ಅಶ್ವಿನಿಯದು. ವಿದೇಶಿ ಕೆಲಸ ಬಿಟ್ಟರೇನಾಯಿತು ಯಕ್ಷಗಾನ ಪ್ರದರ್ಶನ ನೀಡಲೆಂದು ದುಬೈ, ಚೀನಾಗಳಿಗೆ ಹೋಗಿ ವಿದೇಶಿ ನೆಲದಲ್ಲಿಯೂ ಭಾರತದ ಸಂಪ್ರದಾಯವನ್ನು ಪ್ರದರ್ಶಿಸಿದ್ದಾರೆ. ಯಕ್ಷಗಾನದ ಜೊತೆಗೆ ಕಾಲೇಜು ಉಪನ್ಯಾಸಕಿಯಾಗಿಯೂ ಕೆಲಸ ಮಾಡುವ ಅಶ್ವಿನಿ ವರ್ಷಕ್ಕೆ ಕನಿಷ್ಠ ಇನ್ನೂರು ಆಟಗಳ ಪ್ರದರ್ಶನ ನೀಡುತ್ತಾರೆ.
ನಮ್ಮ ಸಂಪ್ರದಾಯ, ಶಾಸ್ತ್ರೀಯ ಕಲೆ, ಇತಿಹಾಸ ಎಲ್ಲವು ಮುಂದಿನ ಪೀಳಿಗೆಗೆ ರವಾನೆಯಾಗಬೇಕೆಂದರೆ ನಮ್ಮ ಪೀಳಿಗೆಯ ಹೆಚ್ಚೆಚ್ಚು ಜನರು ಈ ಕ್ಷೇತ್ರಗಳಲ್ಲಿ ಕಾಣುವಂತಾಗಬೇಕು. ಮನೆತನದ ಹಿರಿಮೆ, ಕಲೆ ಏನಿದೆಯೋ ಅದನ್ನು ಮುಂದುವರೆಸಿಕೊಂಡು ಹೋಗುವ ಆಸಕ್ತಿಯಿದ್ದರೆ ಯಾವ ಹಿಂಜರಿಕೆ, ಕೀಳರಿಮೆಗೆ ಒಳಗಾಗದೆ ಎದೆ ತಟ್ಟಿಕೊಂಡು ಮುಂದೆ ಬನ್ನಿ. ಅದಕ್ಕಾಗಿ ಪರಿಶ್ರಮ ಪಡಿ.ಸತತ ಪರಿಶ್ರಮದಿಂದ ಪರಮೇಶ್ವವರನೇ ಒಲಿಯುತ್ತಾನಂತೆ. ಆದ್ದರಿಂದ ಗುರಿಯಿಟ್ಟುಕೊಳ್ಳಿ. ಸತತ ಪರಿಶ್ರಮದ ನಂತರವೂ ಕೆಲವೊಮ್ಮೆ ಫಲ ಸಿಗುವುದಿಲ್ಲ. ನಿರಾಶರಾಗುವ ಬದಲು ಇನ್ನಷ್ಟು ಶ್ರಮ ಹಾಕಿ, ತಾಳ್ಮೆ ಮತ್ತು ಬುದ್ಧಿಮತ್ತೆಯಿಂದ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಯಶಸ್ಸು ನಮ್ಮಮಡಿಲಿಗೆ ಬಂದು ಬೀಳುತ್ತದೆ. ಕನಸುಗಳನ್ನು ಹಿಂಬಾಲಿಸುವ ಧೈರ್ಯ ಬೇಕಷ್ಟೆ!
ಮತ್ತೆ ಸಿಗೋಣ, ಧನ್ಯವಾದ!
ಅಶ್ವಿನಿಯವರ ಫೇಸ್ಬುಕ್ ಪ್ರೊಫೈಲ್: Aswini Kondadkuli