ಪ್ರೀತಿ ಮಮತೆಯಲ್ಲಿ ಹೆಂಗರುಳಿಗೆ ಸಾಟಿ ಯಾವುದಿಲ್ಲಿ? – ಮಹಿಳಾ ದಿನದ ವಿಶೇಷ
೨೦೨೦ ರ ಏಣಿಯ ಮೊದಲೆರಡು ಮೆಟ್ಟಿಲನ್ನು ಹತ್ತಿಯಾಗಿದೆ. ಬಾಕಿ ಉಳಿದಿರುವುದು ಇನ್ನು ಹತ್ತು ಮೆಟ್ಟಿಲುಗಳು ಮಾತ್ರ. ಹೊಸ ವರುಷದ ಆರಂಭ “ಅಯ್ಯೋ ಆಗಲೇ ಒಂದು ವರ್ಷ ಕಳೆಯಿತಲ್ಲ, ಅಂದುಕೊಂಡಿದ್ದ ಎಷ್ಟೋ ಕೆಲಸಗಳು, ಸಾಧನೆಗಳು ಕೈಗೂಡಲೇ ಇಲ್ಲ” ಎಂಬ ನಿಟ್ಟುಸಿರಿನಿಂದಲೇ ಶುರುವಾಗುತ್ತದೆ. ಜೊತೆಗೆ ಹೊಸ ವರ್ಷ “ಈ ವರ್ಷವಾದರೂ ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು, ಒಂದಿಷ್ಟು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು” ಎಂಬ ಹುಮ್ಮಸ್ಸನ್ನು ಹೊತ್ತು ತರುತ್ತದೆ.
ಇಡೀ ವರ್ಷದಲ್ಲಿ ನನಗೆ ಅತ್ಯಂತ ಪ್ರೀತಿಯ ತಿಂಗಳು ಮಾರ್ಚ್. ಮಾರ್ಚ್ ಎಂದರೆ ಯುಗಾದಿ ಹಬ್ಬ, ಮಾರ್ಚ್ ಎಂದರೆ ರಂಗು ರಂಗಿನ ಹೋಳಿ ಹುಣ್ಣಿಮೆ, ಮಾರ್ಚ್ ಎಂದರೆ ಮಹಿಳೆಯರಿಗೆಂದೇ ವಿಶೇಷವಾಗಿ ಮೀಸಲಿಟ್ಟ ತಿಂಗಳು. ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಹುರುದುಂಬಿಸಿವುದು, ಮಹಿಳಾಕೇಂದ್ರಿತ ಕಾರ್ಯಕ್ರಮಗಳು, ಮಹಿಳೆಯರ ಅಭಿವೃದ್ಧಿಗೆ ನಾನಾ ಕಾರ್ಯಕ್ರಮಗಳ ಘೋಷಣೆ ಹೀಗೆ ಹತ್ತು ಹಲವು ಮಹಿಳೆಯರನ್ನ, ಅವರ ಇರುವನ್ನ ಸಂಭ್ರಮಿಸುವ ಕ್ಷಣಗಳು.
ಇತ್ತೀಚಿಗೆ ಮಹಿಳಾವಾದದ ಹೊಸ ವ್ಯಾಖ್ಯಾನವೇ ಹುಟ್ಟಿಕೊಂಡಿದೆ. ಪುರುಷರಿಗೆ ಸರಿ ಸಮಾನರಾಗಿ ತೋರಿಸಿಕೊಳ್ಳುವ ಸ್ಪರ್ಧೆಯಲ್ಲಿ ಮಹಿಳಾವಾದ ಅಥವಾ ಸ್ತ್ರೀವಾದ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದೇ ಹೇಳಬಹುದು. ಏನೇ ಇರಲಿ.. ಸೃಷ್ಟಿ ನಿಯಮದ ಪ್ರಕಾರ ಮಹಿಳೆ ಮತ್ತು ಪುರುಷನಿಗೆ ಅವರವರದ್ದೇ ಆದ ಶಕ್ತಿಯಿದೆ. ಎಷ್ಟೇ ತಂತ್ರಜ್ಞಾನ, ಆಧುನಿಕತೆ ಬಂದರೂ ಇದನ್ನು ಬದಲಾಯಿಸುವುದಕ್ಕಾಗಲಿ, ಪಾತ್ರಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. PERIOD!
ಇದನ್ನು ಮೀರಿ ಮಹಿಳೆಯ ವಿಶೇಷತೆಯನ್ನ ವಿಶ್ಲೇಷಿಸಬೇಕೆಂದರೆ ನಾವು ಮತ್ತದೇ ಸೃಷ್ಟಿಯ ಮೂಲಭೂತ ನಿಯಮವಾದ ಒಂದು ಜೀವಕ್ಕೆ ಜನ್ಮ ಕೊಡುವ ಪ್ರಕ್ರಿಯೆಗೆ ಹೋಗಬೇಕು. ನಾವು ಎಷ್ಟೋ ವಾಟ್ಸಪ್ಪ್ ಮೆಸ್ಸೇಜುಗಳಲ್ಲಿ, ಫೇಸ್ಬುಕ್ಕಿನ ಪೋಸ್ಟುಗಳಲ್ಲಿ ಓದಿದ್ದಿದೆ “ಸಾಮಾನ್ಯವಾಗಿ ಮನುಷ್ಯನ ದೇಹ ೪೫ ಡೆಲ್ ಯೂನಿಟ್ಸ ಗಳಷ್ಟು ನೋವನ್ನು ಭರಿಸುತ್ತದೆ ಆದರೆ ಒಂದು ಮಗುವಿನ ಜನನವಾಗುವಾಗ ಹೆಂಗಸು ೫೭ ಡೆಲ್ ಯೂನಿಟ್ ಗಳಷ್ಟು ನೋವನ್ನು ಅನುಭವಿಸುತ್ತಾಳೆ” ಎಂದು. ಈ ಅಂಕಿ ಅಂಶಗಳು ಎಷ್ಟು ಸರಿ ಎಂದು ಗೊತ್ತಿಲ್ಲ ನನಗೆ. ಆದರೆ ಈ ಪರಿಯ ನೋವನ್ನು ಮಹಿಳೆ ಅನುಭವಿಸುತ್ತಾಳೆ ಎಂದು ಹೇಳಿದಾಗ ಯಾರು ಅಲ್ಲಗೆಳೆಯುವುದಿಲ್ಲ. ಅಷ್ಟು ನೋವಿದೆ.. ತಾಯಿಯಾಗುವುದು ಹೊಸ ಜನ್ಮವಿದ್ದಂತೆ ಎಂದು ಸುಮ್ಮನೆ ಹೇಳಿಲ್ಲ ತಿಳಿದವರು. ಸತ್ತು ಮತ್ತೆ ಹುಟ್ಟಿ ಬರುತ್ತಾಳೆ ಆಕೆ. ಗಂಟೆಗಟ್ಟಲೆ ಹಲ್ಲುಗಟ್ಟಿ ತನ್ನ ಕರುಳ ಬಳ್ಳಿಗೆ ಅಂಟಿಕೊಂಡ ಜೀವವನ್ನು ಇದ್ದ ಬದ್ದ ಶಕ್ತಿಯನ್ನೆಲ್ಲ ಹಾಕಿ ಹೊರಗೆ ತಳ್ಳುವುದಿದೆಯಲ್ಲ.. ತನ್ನ ಮಗು ಈ ಭೂಮಿಗೆ ಬರಲೇಬೇಕು ಅದಕ್ಕೆ ತಾನು ಎಷ್ಟು ನೋವನ್ನಾದರೂ ಅನುಭವಿಸಲು ಸಾಧ್ಯ ಎನ್ನುವ ಗಟ್ಟಿ ಧೈರ್ಯವಿದೆಲ್ಲ ಅದು ಯಾವ ಗಂಡಸಿಗೂ ಬಾರದು.
ಹಾಗೆ ನೋಡಿದರೆ ಎಲ್ಲವನ್ನು ತೊರೆದು ಹೊರಡುವುದು ಗಂಡಸಿಗೆ ಸುಲಭದ ಕೆಲಸ. ಬುದ್ಧನು ಹಾಗೆಯೇ ಹೋದದ್ದು, ಮಧ್ಯ ರಾತ್ರಿಯಲ್ಲಿ. ಯಶೋಧರೆ, ರಾಹುಲನನ್ನು ಇದ್ದ ಸ್ಥಿತಿಯಲ್ಲೇ, ಹಿಂದೆಯೂ ತಿರುಗಿ ನೋಡದೆ ಹೋದನಲ್ಲ.. ರಾಮನಾದರೂ ಏನು? ಸೀತೆಯನ್ನು ತೊರೆದ ನಂತರ ಆಕೆಗೆ ಪ್ರಸವವಾಗಿದೆಯೆಂದು ಗೊತ್ತಿದ್ದರೂ ಸಹ ಒಂದು ದಿನವೂ ಮಕ್ಕಳನ್ನು ನೋಡಲು ಬರಲಿಲ್ಲ. ಗೌತಮ ಮಹರ್ಷಿಗಳು ಅಷ್ಟೇ. ಮಕ್ಕಳಿರಲಿಲ್ಲ ಆದರೆ ಅಹಲ್ಯೆಯನ್ನು ಕಲ್ಲಾಗಲು ಬಿಟ್ಟು ಹೊರಟೇ ಹೋದರಲ್ಲ? ಪುರಾಣದ ಕತೆಗಳನ್ನು ನೋಡಿದಾಗ ಅನ್ನಿಸುವುದೊಂದೇ, ಪುರುಷ ಭವ ಬಂಧನಗಳನ್ನು ನಿರಾಯಾಸವಾಗಿ ತೊರೆಯಬಲ್ಲ. ತನಗಾಗಿಯೋ, ಪ್ರಜೆಗಳಿಗಾಗಿಯೋ, ಲೋಕ ಕಲ್ಯಾಣಕ್ಕೋ, ಸಿಟ್ಟಿನ ಭರದಲ್ಲೋ ಒಟ್ಟಿನಲ್ಲಿ ಪುರುಷರಿಗೆ ಸರಳದ ಕಾರ್ಯ ಇದು.
ಆದರೆ ಹೆಂಗಸಿಗೆ ಹಾಗಾಗುವುದಿಲ್ಲ. ಎಲ್ಲವನ್ನು ತೊರೆದು, ಧಿಕ್ಕರಿಸಿ ಹೋಗಬೇಕೆಂದರೂ ಕರುಳ ಬಳ್ಳಿಗಳು ತೊಡರುತ್ತವೆ, ಕಟ್ಟಿಕೊಂಡ ಸಂಬಂಧಗಳು ಅಡ್ಡ ಹಾಕುತ್ತವೆ, ದೈನ್ಯತೆಯಿಂದ ಬೇಡುತ್ತವೆ. ಅಲ್ಲಿಗೆ ಆಕೆ ಎಷ್ಟೇ ಕಷ್ಟವಾದರೂ ಸರಿ ದಡ ಮುಟ್ಟಿಸಬೇಕೆಂಬ ತೀರ್ಮಾನಕ್ಕೆ ಬರುತ್ತಾಳೆ. ಇಂದಿಗೂ ಎಷ್ಟೋ ಜನ ಹೆಂಗಸರು ಇದೇ ಸೀತೆಯ, ಯಶೋಧರೆಯ, ಅಹಲ್ಯೆಯ ಜೀವನವನ್ನು ಬದುಕುತ್ತಿದ್ದಾರೆ. ಗಂಡ ತೀರಿ ಹೋಗಿದ್ದಿರಬಹುದು ಅಥವಾ ಗಂಡನಿಂದ ದೂರವಾಗಿದ್ದಿರಬಹುದು. ಎಲ್ಲರ ನೋವು ಒಂದೇ. ನಾವು ಸಮಾಜದಲ್ಲಿ ನೋಡುವ ಈ ಸಿಂಗಲ್ ಪೇರೆಂಟಿಂಗ್ ಕಥೆಗಳಲ್ಲಿ ಅಮ್ಮನೇ ಕಥಾನಾಯಕಿ, ಅಮ್ಮನೇ ಅಂಬಿಗ, ಅಮ್ಮನೇ ದಿಕ್ಕು ದೆಸೆ ಎಲ್ಲ..
ಹಾಗಾಗಿ ಮಹಿಳೆಗೆ ಧೈರ್ಯ, ಶಕ್ತಿ ಎಲ್ಲವು ಒಂದು ಕೈ ಜಾಸ್ತಿ ಎಂದೇ ಹೇಳಿದರೆ ಅತಿಶಯವಾಗುವ ಮಾತೇ ಇಲ್ಲ. ಕೊನೆಯ ಉಸಿರಿನವರೆಗೂ ಅಮ್ಮನ ಪ್ರೀತಿ, ಮಮತೆ, ಆಶೀರ್ವಾದ ನಮ್ಮನ್ನು ಕಾಯುತ್ತಲೇ ಇರುತ್ತದೆ.
ಹಾಗಂತ ಬರಿ ಅಮ್ಮಂದಿರಷ್ಟೇ ಶಕ್ತಿವಂತರು, ಸ್ಪೂರ್ತಿಗೆ ಹೆಸರಾದವರು, ಧೈರ್ಯವಂತರು ಅಂತಲ್ಲ. ಅದಕ್ಕೆ ನಾನು ಹೇಳಿದ್ದು ಪ್ರೀತಿ ಮಮತೆಗೆ ಹೆಂಗರುಳಿಗೆ ಸಾಟಿ ಯಾವುದಿಲ್ಲಿ ಎಂದು. ಹೆಂಗರುಳು ಇರಬೇಕೆಂದರೆ ಅಮ್ಮನೇ ಆಗಬೇಕೆಂದಿಲ್ಲ, ಹೆರಿಗೆಯ ನೋವನ್ನೇ ಅನುಭವಿಸಬೇಕೆಂದಿಲ್ಲ, ಮಕ್ಕಳು ಇರಲೇಬೇಕೆಂದಿಲ್ಲ, ಮದುವೆಯಾಗಿರಲೇಬೇಕೆಂದಿಲ್ಲ. ನಿನ್ನಲ್ಲಿ ಆ ಪ್ರೀತಿ, ಮಮತೆ, ಕಾಳಜಿ, ಧೈರ್ಯ ಇದ್ದರೆ ಸಾಕು! ಆ ಶಕ್ತಿ ಕೆಟ್ಟದ್ದರ ವಿರುದ್ಧ ಹೊರಡುವ ಸ್ಥೈರ್ಯ ನೀಡುತ್ತದೆ, ಒಳ್ಳೆಯದನ್ನು ಪ್ರೋತ್ಸಾಹಿಸುವ ದಿಟ್ಟತನ ನೀಡುತ್ತದೆ, ಎಲ್ಲರನ್ನು ಒಂದೇ ಸಮಾನವಾಗಿ ಕಾಣುವ ಮನೋಬಲ ನೀಡುತ್ತದೆ, ಸಾಧಿಸುವ ಆತ್ಮವಿಶ್ವಾಸ ತುಂಬುತ್ತದೆ ಹಾಗು ಜೀವನಕ್ಕೆ ಅಗತ್ಯವಿರುವ ಪ್ರತಿಯೊಂದನ್ನು ಕಲಿಸುತ್ತದೆ.
ಅಮ್ಮನಾಗುವುದರ ಜೊತೆಗೆ ಮಹಿಳೆ ಹೊರಗಿನ ಜವಾಬ್ದಾರಿಗಳನ್ನು ಹೊತ್ತು ಕರಾರುವಕ್ಕಾಗಿ ನಿಭಾಯಿಸುತ್ತಿದ್ದಾಳೆ. ಹಿಂದೆ ತಿರುಗಿ ನೋಡಿದಾಗ ಅದೆಷ್ಟೋ ಕ್ಷೇತ್ರಗಳು ಕೇವಲ ಪುರುಷರಿಗೆಂದೇ ಮೀಸಲಾಗಿದ್ದವು. ಹೆಣ್ಣಿನ ಸಾಮರ್ಥ್ಯವನ್ನು ಗುರುತಿಸುವ, ಗುರುತಿಸಿದರೂ ಜವಾಬ್ದಾರಿ ನೀಡುವ ಮನೋಭಾವದ ಕೊರತೆಯಿತ್ತು. ಆದರೆ ಇಂದು ಹಾಗಿಲ್ಲ.. ಪುರುಷರಿಗಷ್ಟೇ ಮೀಸಲಾದ ಕ್ಷೇತ್ರ ಇಲ್ಲವೇ ಇಲ್ಲ ಎಂದು ಗಟ್ಟಿಯಾಗಿ ಹೇಳಬಹುದು. ಮಹಿಳೆ ಮಂಗಳ ಗ್ರಹವನ್ನು ತಲುಪಿದ್ದಾಳೆ, ಎವರೆಸ್ಟ್ ಶಿಖರ ಏರಿದ್ದಾಳೆ, ವಿಜ್ಞಾನದ ಆವಿಷ್ಕಾರಗಳನ್ನು ಮಾಡುತ್ತಿದ್ದಾಳೆ, ಹೊಸ ಕಂಪನಿಗಳನ್ನು ತೆರೆದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾಳೆ, ಮಾಹಿತಿ ತಂತ್ರಜ್ಞಾನದಲ್ಲಿ ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ, ಈ ಎಲ್ಲದರ ಜೊತೆಗೆ ಮನೆಯನ್ನ ನಿಭಾಯಿಸುತ್ತಿದ್ದಾಳೆ.
ಈ ಮನೆ ನಡೆಸುವ ಶಕ್ತಿ ಇದೆಯಲ್ಲ ಅದು ಚಿಕ್ಕಂದಿನಿಂದಲೇ ಹೆಣ್ಣು ಮಕ್ಕಳಿಗೆ ಯಾರು ಹೇಳಿ ಕೊಡದೆ ಕರಗತವಾಗಿ ಬಿಟ್ಟಿರುತ್ತದೆ. ಅಮ್ಮನ ಸುತ್ತ ಸುತ್ತುತ್ತಲೇ ಅಡುಗೆಯ ವಿಧಿ ವಿಧಾನಗಳನ್ನ ತಿಳಿದುಕೊಳ್ಳುವುದರ ಜೊತೆಗೆ ಅಪ್ಪನ ಜೊತೆ ಹರಟೆ ಹೊಡೆಯುತ್ತ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಂಡಿರುತ್ತಾಳೆ. ಇದರಿಂದಲೇ ಹೆಣ್ಣು ಮಕ್ಕಳು ಮದುವೆಯಾದ ನಂತರ ಗಂಡನ ಮನೆಯಲ್ಲಿ ಅಷ್ಟು ಚೆನ್ನಾಗಿ ಬಾಳಲು ಸಾಧ್ಯ. ಹೊಸ ಕುಟುಂಬವನ್ನ ತನ್ನದೇ ಎಂದು ಅಪ್ಪಿಕೊಳ್ಳಲು ಸಾಧ್ಯ. ಹೊಸ ಮನೆಯ ಯಜಮಾನಿಯಾಗಲು ಸಾಧ್ಯ.
ಹಾಗಾಗಿಯೇ ಇಂದಿನ ದಿನಗಳಲ್ಲಿ ಹೆಣ್ಣಿಗೆ ಪುರುಷನ ಅವಶ್ಯಕತೆಯಿಲ್ಲ. ತನ್ನ ಪಾಡಿಗೆ ತಾನು ಸ್ವತಂತ್ರಳು. ತನ್ನ ದುಡಿಮೆಯಲ್ಲಿ ಜೀವನ ಕಟ್ಟಿಕೊಳ್ಳುವ ಸಾಮರ್ಥ್ಯ ಹೊಂದಿದವಳು. ಹಿಂದಿನ ಕಾಲದಲ್ಲೂ ಈ ಸಾಮರ್ಥ್ಯ ಹೆಣ್ಣು ಮಕ್ಕಳಿಗೆ ಇದ್ದೆ ಇತ್ತು. ಆದರೆ ಅವಕಾಶಗಳಿರಲಿಲ್ಲ, ಶಿಕ್ಷಣದ ಕೊರತೆಯಿತ್ತು, ಹೆಣ್ಣು ಮಕ್ಕಳಿಗ್ಯಾಕೆ ಇದೆಲ್ಲ ಹೇಗಿದ್ದರೂ ಮದುವೆಯಾಗಿ ಹೋಗುವವವರು ಎಂಬ ತಾತ್ಸಾರದ ಭಾವವಿತ್ತು. ಈಗ ಎಲ್ಲವೂ ಬದಲಾಗಿದ್ದರಿಂದಲೇ ಇದೆಲ್ಲವೂ ಸಾಧ್ಯವಾದದ್ದು.
ಹಾಗಂತ ಹೆಣ್ಣು ಮಕ್ಕಳ ಸಮಸ್ಯೆಯೆಲ್ಲ ದೂರವಾಗಿ ಎಂದು ಹೇಳಲಿಕ್ಕಾಗುವುದಿಲ್ಲ. ಪರಿಸ್ಥಿತಿ ಉತ್ತಮವಾಗಿದೆಯಷ್ಟೆ.. ಈಗಲೂ ಎಷ್ಟೋ ಕಡೆಗಳಲ್ಲಿ ಸ್ತ್ರೀ ಶೋಷಣೆ ನಡೆಯುತ್ತಲೇ ಇದೆ. ಎಷ್ಟೇ ಓದಿರಲಿ, ಎಂತಹುದೇ ತಂತ್ರಜ್ಞಾನ ಬರಲಿ ಹೆಣ್ಣು ಮಕ್ಕಳನ್ನು ಹೀನವಾಗಿ ನೋಡುವ ದೃಷ್ಟಿ ಬದಲಾಗಿಲ್ಲ. ಹೆಜ್ಜೆ ಹೆಜ್ಜೆಗೆ ಪ್ರಶ್ನೆಗಳು ಎದುರಾಗುತ್ತವೆ. ಕಷ್ಟಗಳಿನ್ನು ಇವೆ, ಸುಧಾರಿಸಬೇಕಾದದ್ದು ಬಹಳಷ್ಟಿದೆ, ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ.
ಆದರೆ ಈ ದಿನ ನಮ್ಮ ಶಕ್ತಿ ಸಾಮರ್ಥ್ಯದ ಆಚರಣೆಯ ದಿನ. ಹೆಣ್ತನವನ್ನು ಸಂಭ್ರಮಿಸುವ ದಿನ. ಹಾಗಾಗಿ ಎಲ್ಲರಿಗು ಮಹಿಳಾ ದಿನದ ಶುಭಾಶಯಗಳು. ಪ್ರತಿಯೊಂದು ಹೆಂಗರುಳಿಗೂ..