ಕ್ರೀಡೆಯ ಮೇಲಿನ ಅಭಿಮಾನ ಕೆಂಡದಂತಹ ಕಾವಾಗಲಿ – ನೀರಜ್ ಚೋಪ್ರಾ: ಹುಲ್ಲಾಗು_ಬೆಟ್ಟದಡಿ(16)
ಬರೆಯಲಿಕ್ಕೊಂದು ಸ್ಪೂರ್ತಿ ಬೇಕು ನೋಡಿ. ಅದರಲ್ಲೂ ನನಗೆ ಈ ಹುಲ್ಲಾಗು_ಬೆಟ್ಟದಡಿ ಅಂಕಣಗಳನ್ನು ಸುಮ್ಮನೆ ಬರೆಯಲು ಆಗುವುದೇ ಇಲ್ಲ. ಸಾಧಕರ ಸಾಧನೆಯ ಬಗ್ಗೆ ಓದಿದಾಗ ಅಥವಾ ಯಾರದ್ದಾದರೂ ಹೆಸರು ನನ್ನ ಕಣ್ಣ ಮುಂದೆ ಬಂದು “ಅಯ್ಯೋ, ಇವರ ಬಗ್ಗೆ ನನಗೆ ಹೆಚ್ಚು ಗೊತ್ತೇ ಇಲ್ಲವಲ್ಲ’ ಎಂದೆನಿಸಿದಾಗ ತಟ್ಟನೇ ಬ್ಲಾಗ್ ತೆಗೆದು ಬರೆಯಲು ಶುರು ಮಾಡಿ ಬಿಡುತ್ತೇನೆ. ಆದರೆ ಇವತ್ತು ಬರೆಯಲು ಕೂತಿದ್ದು ಹೆಮ್ಮೆಯಿಂದ ಎದೆಯುಬ್ಬಿದಾಗ. ನಮ್ಮ ರಾಷ್ಟ್ರಗೀತೆಯನ್ನು ಕೇಳಿ ಅರಿವಿಲ್ಲದೇ ಕಣ್ಣಲ್ಲಿ ನೀರು ಬಂದಾಗ, ಎಲ್ಲೆಡೆಯೂ ಅವನದೊಬ್ಬನದೇ ಹೆಸರು ಕೇಳುತ್ತಿರುವಾಗ, ಫೋಟೊ ಕಾಣಿಸುತ್ತಿರುವಾಗ..!
ನೀರಜ್ ಚೋಪ್ರಾ ಭಾರತಕ್ಕೆ ಸ್ವರ್ಣ ಪದಕವನ್ನು ಗೆದ್ದುಕೊಂಡು ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಆ ಕ್ಷಣ, ನಮ್ಮ ರಾಷ್ಟ್ರಗೀತೆ ಮೊಳಗಿದ ಕ್ಷಣ ಕೋಟಿಗಟ್ಟಲೇ ಭಾರತೀಯರ ಧಮನಿಗಳಲ್ಲಿ ಗರ್ವವೇ ಹರಿಯುತ್ತಿತ್ತು. ಹೆಮ್ಮೆ ಕಣ್ಣೀರಾಗಿ, ಎದೆಯುಬ್ಬಿ ಹಾಡುತ್ತಿತ್ತು. ಬಹುಶಃ ಇಡೀ ದೇಶವೇ ಒಂದಾದ ಕ್ಷಣ ಅದು.
ಅವನು ಎಸೆದ ಥ್ರೋ ನೋಡಿದ್ರಾ? ಸುಂಟರಗಾಳಿಯ ವೇಗದಲ್ಲಿ ಎಸೆದವನು ಮತ್ತೆ ಅದರತ್ತ ಹಿಂತಿರುಗಿ ನೋಡಲೇ ಇಲ್ಲ. ಎಸೆದಾಗಲೇ ಅವನಿಗೆ ಗೊತ್ತಿತ್ತು ಆ ಮಿರಿಮಿರಿ ಹೊಳೆಯುವ ಬಂಗಾರದ ಪದಕ ತನ್ನದೇ ಎಂದು. ಈ ಪರಿಯ ಆತ್ಮವಿಶ್ವಾಸದ ಹಿಂದೆ ಅದೆಷ್ಟು ನಿದ್ದೆಗೆಟ್ಟ ರಾತ್ರಿಗಳು ಇರಬಹುದು? ಅದೆಷ್ಟು ಹತಾಶೆ, ನೋವು, ಕಣ್ಣೀರಿರಬಹುದು? ವಿರಾಮವೇ ಇಲ್ಲದ ಪರಿಶ್ರಮವಿರಬಹುದು? ಅಲ್ಲವೇ.. ಅವೆಲ್ಲವನ್ನು ಮೆಟ್ಟಿ ನಿಂತಿದ್ದಕ್ಕೆ ಇವತ್ತು 139 ಕೋಟಿ ಜನರ ಕಣ್ಣಲ್ಲಿ ಇವತ್ತು ಈ ಹುಡುಗನ ಬಗ್ಗೆ ಹೆಮ್ಮೆ, ಗೌರವ, ಅಭಿಮಾನ, ಮನೆ ಮಗನೆಂಬ ಮಮತೆ ಎಲ್ಲವೂ ಒಟ್ಟಿಗೆ ಮೂಡಿ ಕಣ್ಣೀರ ಬಿಂದುಗಳಾಗಿ ಹೊರ ಬಂದಿವೆ.
ಟೊಕಿಯೋ ಒಲಂಪಿಕ್ಸ್ ಗೆ ತೆರಳುವಾಗ “ಪುರುಷರ ಜಾವೆನಿಲ್ ಥ್ರೋ” ವಿಭಾಗದಲ್ಲಿ ಇಡೀ ವಿಶ್ವದಲ್ಲಿ 16ನೇ ಸ್ಥಾನ ಪಡೆದಿದ್ದ ಈ 23 ವರ್ಷದ ಹುಡುಗ ಈಗ ತನ್ನ ರ್ಯಾಂಕಿಂಗ್ ನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡಿದ್ದಾನೆ. 2018 ರ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2018 ರ ಕಾಮನ್ ವೇಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ಶ್ರೇಷ್ಟ ಭಾರತೀಯ ಕ್ರೀಡಾಪಟು ಎನ್ನುವ ಬಿರುದನ್ನು ತನ್ನ ಮುಡಿಗೇರಿಸಿಕೊಂಡಿದ್ದ ನೀರಜ್.
ಈ ಒಲಂಪಿಕ್ಸ್ ನಲ್ಲಿ ಫೀಲ್ಡ್ ಅಥ್ಲೇಟಿಕ್ಸ್ ಎಂದರೆ ಟ್ರ್ಯಾಕಿನಲ್ಲಿ ಓಡುವ, ಎಸೆಯುವ (ಥ್ರೋ) ಈ ರೀತಿಯ ಆಟಗಳಲ್ಲಿ ಭಾರತದಿಂದ ಭರವಸೆಯ ಆಟಗಾರರೂ ಯಾರು ಇರಲಿಲ್ಲ ಎಂಬುದು ನೋವಿನ ಸಂಗತಿ. 1984 ರಲ್ಲಿ, ಲಾಸ್ ಏಂಜೇಲಿಸ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ನಮ್ಮ ಭಾರತದ ಓಟಗಾರ್ತಿ ಪಿ.ಟಿ.ಉಷಾ 400 ಮೀ. ಓಟದಲ್ಲಿ ಕೇವಲ 1/100 ನೇ ಕ್ಷಣದ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು. ಫೀಲ್ಡ್ ಅಥ್ಲೇಟಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸುವ ಭಾರತದ ಆಸೆ ಆಸೆಯಾಗಿಯೇ ಉಳಿದಿತ್ತು. 2016 ರಲ್ಲಿ ಪೊಲ್ಯಾಂಡಿನಲ್ಲಿ ನಡೆದ World Athletics U20 Championships ನಲ್ಲಿ 19 ವರ್ಷದ ನೀರಜ ಪಾಲ್ಗೊಂಡು ಜಾವೆಲಿನ್ ನ್ನು 86.48m ದೂರಕ್ಕೆ ಎಸೆದು ಮೊದಲಿಗನಾಗುತ್ತಾನೆ. ಆಗ ಭಾರತಕ್ಕೆ ಮುಂಬರುವ ಒಲಂಪಿಕ್ಸ್ ನಲ್ಲಿ track and field ಆಟಗಳಲ್ಲಿ ಪದಕ ಗೆಲ್ಲುವ ರಾಯಭಾರಿಯೊಬ್ಬ ಹುಟ್ಟಿಕೊಳ್ಳುತ್ತಾನೆ. ಭಾರತದಿಂದ track and field ವಿಭಾಗದಲ್ಲಿ ವಿಶ್ವ ಶ್ರೇಯಾಂಕವನ್ನು ಹೊಂದಿದ ಒಬ್ಬನೇ ಒಬ್ಬ ಕ್ರೀಡಾಪಟುವೆಂದರೆ ಅದು ನೀರಜ್ ಚೋಪ್ರಾ (In any age category!). ಪೊಲ್ಯಾಂಡಿನಲ್ಲಿ ಸಿಕ್ಕ ಮನ್ನಣೆಯನ್ನು ಅಭ್ಯಾಸದ ಮೂಲಕ ಇನ್ನಷ್ಟು ಹುರಿಗೊಳಿಸುತ್ತ, ತನ್ನ ತರಬೇತಿಯನ್ನು ಮುಂದುವರೆಸಿ ಗ್ರಾಫ್ ನ್ನು ಕಾಯ್ದುಕೊಂಡು ಬಂದ ನೀರಜ ಇವತ್ತು ಚಿನ್ನದ ಪದಕ ಗೆದ್ದಿದ್ದಾನೆ.
ನೀರಜ್ ಪ್ರಶಸ್ತಿ ಪಡೆದಿದ್ದು ಬರಿ ಜಾವೆಲಿನ್ ಥ್ರೋ ನಲ್ಲಿ ಅಷ್ಟೇ ಅಲ್ಲ! ಭಾರತೀಯ ಸೈನ್ಯದ ದಕ್ಷಿಣ ಕಮಾಂಡ್ ವಿಭಾಗದಲ್ಲಿ ಸುಬೇದಾರ ಆಗಿ ಕಾರ್ಯ ನಿರ್ವಹಿಸುತ್ತಿರುವ ಈ ನಮ್ಮ ಹೆಮ್ಮೆಯ ಹುಡುಗ, ತನ್ನ ಕರ್ತವ್ಯದಲ್ಲಿ ಸಲ್ಲಿಸಿದ ಸೇವೆಗಾಗಿ 2021 ರ ವಿಶಿಷ್ಟ ಸೇವಾ ಪದಕವನ್ನು ಪಡೆದು ಅಲ್ಲಿಯೂ ತಮ್ಮ ದೇಶಭಕ್ತಿಯನ್ನು ಎತ್ತಿ ಹಿಡಿದಿದ್ದಾರೆ. 2018 ರಲ್ಲಿ ಅರ್ಜುನ ಪ್ರಶಸ್ತಿಯೂ ದೊರೆತಿದೆ.
ನೀರಜ್ ಜಾವೆಲಿನ್ ಆಟಗಾರನಾಗಿದ್ದು ಹೇಗೆ?
2011 ರಲ್ಲಿ ನೀರಜ್ ತನ್ನ ತೂಕ ಇಳಿಸಿಕೊಳ್ಳಲೆಂದು ಜಿಮ್ ನ ಹುಡುಕಾಟದಲ್ಲಿದ್ದ. ಅವನಿದ್ದ ಊರಿನಲ್ಲಿ (ಖಾಂದ್ರಾ, ಹರಿಯಾಣ) ಜಿಮ್ ಸೌಲಭ್ಯ ಇಲ್ಲದಿದ್ದರಿಂದ 17km ದೂರದ ಪಾಣಿಪತ್ ಗೆ ಹೋಗಬೇಕಿತ್ತು. ಹೀಗೆ ಬಸ್ಸಿನಲ್ಲಿ ಹೋಗುವಾಗ ದಾರಿಯಲ್ಲಿ ಕಾಣಿಸುತ್ತಿದ್ದ ಶಿವಾಜಿ ಸ್ಟೇಡಿಯಮ್ ಕಡೆಗೆ ನೀರಜ್ ನ ಗಮನ. ಒಳಗೆ ಹೋಗಿ ನೋಡಿದಾಗ ಅನೇಕ ಕ್ರೀಡಾಪಟುಗಳು, ರಾಷ್ಟ್ರ ಮಟ್ಟದ ಆಟಗಾರರು ಅಭ್ಯಾಸದಲ್ಲಿ ತೊಡಗಿರುತ್ತಾರೆ. ಅಷ್ಟೊಂದು ಆಟಗಳಲ್ಲಿ ನೀರಜನನ್ನು ಆಕರ್ಷಿಸಿದ್ದು ಜಾವೆಲಿನ್ (ಭರ್ಜಿ/ಭಲ್ಲೆ)! ಜೈವೀರ್ ಎಂಬ ನುರಿತ ಜಾವೆಲಿನ್ ಥ್ರೋ ಆಟಗಾರನಿಂದ ಸ್ಪೂರ್ತಿ ಪಡೆದ ನೀರಜ್ ಜಾವೆಲಿನ್ ಎಸೆದು ನೋಡಿದಾಗ ತಾನೂ ಸಹ ದೂರಕ್ಕೆ ಎಸೆಯಬಹುದು ಎಂದೆನಿಸಿ ಅಭ್ಯಾಸದಾಲ್ಲಿ ತೊಡಗುತ್ತಾನೆ. ಆಗ ಅವನಿಗೆ 14 ವರ್ಷ ವಯಸ್ಸು!
ಹೀಗೆ ತರಬೇತಿ ಶುರು ಮಾಡಿದ ಒಂದೇ ವರ್ಷದಲ್ಲಿ ಅಂದರೆ 2012, ಲಕನೌನಲ್ಲಿ ಜೂನಿಯರ ವಿಭಾಗದಲ್ಲಿ ತನ್ನ ಮೊದಲ ಸ್ವರ್ಣ ಪದಕವನ್ನು ಗಳಿಸುತ್ತಾರೆ. ಆಗ ಅವರು ಎಸೆದ ದೂರ 68.46 ಮೀ.
ಆದರೆ ಇದರ ನಂತರ ಅವರ ಮುಂಗೈನ ಮೂಳೆ ಮುರಿದು ಅಭ್ಯಾಸದಿಂದ ದೂರ ಉಳಿಯಬೇಕಾಗುತ್ತದೆ. ಎರಡೇ ತಿಂಗಳಿನಲ್ಲಿ ಮತ್ತೆ ನೀರಜ್ ನ ತೂಕ ಎರಿದಾಗ ಕೈ ನೋವನ್ನು ಬದಿಗೊತ್ತಿ ದಿನಕ್ಕೆ ಮೂರು ಬಾರಿಯಂತೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿಧಾನವಾಗಿ ತನ್ನ ಎಸೆತದ ದೂರವನ್ನು ವೃದ್ಧಿಸಿಕೊಳ್ಳುತ್ತ ಬಂದ ನೀರಜ್ ಪೊಲ್ಯಾಂಡಿನಲ್ಲಿ ಗೆದ್ದ ನಂತರ ತನ್ನ ಗ್ರಾಫ್ ಯಾವತ್ತೂ ಕೆಳಗಿಳಿಯದಂತೆ ಶ್ರಮ ವಹಿಸಿದರು.
ಈಗಷ್ಟೇ ಮುಗಿದ ಟೊಕಿಯೋ ಒಲಂಪಿಕ್ಸ್ ಗೆ ಪುರುಷರ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಗೆ ಪ್ರವೇಶ ಪಡೆಯಲು 85 ಮೀ. ದೂರದ ಅರ್ಹತೆ ಇತ್ತು. ಈ ದೂರವನ್ನು ಯಶಸ್ವಿಯಾಗಿ ಸಿದ್ಧಿಸಿಕೊಂಡ ನೀರಜ್ ಈ ಸಲದ ಸ್ಪರ್ಧೆಯಲ್ಲಿ ಪದಕದ ಭರವಸೆಯಾಗಿದ್ದರು.
ಇತ್ತ ಭಾರತದ ಸುದ್ದಿ ಮಾಧ್ಯಮಗಳು ‘ನಮಗೆ ಬೆಳ್ಳಿ ಅಥವಾ ಕಂಚು ಬಂದೇ ಬರುತ್ತದೆ’ ಎಂದು ಹೇಳುತ್ತಿದ್ದರೆ ಅಲ್ಲಿ ನೀರಜ್ ಬಂಗಾರದ ಪದಕ ಗೆದ್ದು ಮೊಟ್ಟ ಮೊದಲ ಬಾರಿಗೆ ಟೊಕಿಯೋ ಒಲಂಪಿಕ್ಸ್ ನೆಲದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಮೊಳಗಿಸಿಯಾಗಿತ್ತು.
ನೀರಜ್ ಚೋಪ್ರಾ ಅವರ ಈಗಿನ ಕೋಚ್ ಯುವೇ ಹ್ವಾನ್ 1984 ರಲ್ಲಿ 104.80 ಮೀ. ದೂರದಲ್ಲಿ ಜಾವೆಲಿನ್ ಎಸೆದು ವಿಶ್ವ ದಾಖಲೆಯನ್ನು ನಿರ್ಮಿಸಿದವರು. ಇವರ ಅನುಭವದ ತರಬೇತಿ, ನೀರಜ್ ನ ಸಾಮರ್ಥ್ಯ, ಅವರ ತಂದೆ ತಾಯಿಯ ಪ್ರೋತ್ಸಾಹ ಎಲ್ಲವೂ ಸೇರಿ ಇಂದು ಭಾರತ ಹೆಮ್ಮೆ ಪಡುವಂತೆ ಮಾಡಿವೆ.
ಒಲಂಪಿಕ್ಸ್ ನಲ್ಲಿ ಭಾರತ
ನಮ್ಮಲ್ಲಿ ಒಂದು ಕೆಟ್ಟ ರೋಗವಿದೆ. ಅದುವೇ ಕ್ರೀಡೆಯತ್ತ ಜನ ತೋರುವ ಅಸಡ್ಡೆ. ನಾವು ಶಾಲೆಯಲ್ಲಿದ್ದಾಗಿನಿಂದಲೂ ಕೇವಲ ಓದು-ಬರಹ ಮಾತ್ರ ಜೀವನಕ್ಕೆ ಅವಶ್ಯವೆಂಬಂತೆ ಬಿಂಬಿಸಿದ್ದರಿಂದ ಮನೆಗೆ ನಾಲ್ಕು ಜನ ಇಂಜಿನಿಯರ್, ಗಲ್ಲಿಗೊಬ್ಬ ಡಾಕ್ಟರ್ ಹುಟ್ಟಿಕೊಂಡಿದ್ದಾರೆ. ಮೀನು, ಆನೆ, ಕತ್ತೆ, ಕುದುರೆ, ಸಿಂಹ ಎಲ್ಲವನ್ನೂ ಒಂದೇ ಕೊಠಡಿಯಲ್ಲಿ ತುಂಬಿ ಈಜಲು ಕಲಿಸಿದಂತೆ. ಈಜಲು ಬರುವ ಮೀನು ಮೊದಲಿಗನಾಗಿ ಅವರೆಲ್ಲರ ಮುಂದೆ ಬುದ್ಧಿವಂತ ಎಂದು ಗರಿ ತೊಟ್ಟರೆ ಓಡುವ ಕುದುರೆ ಈಜಲಾಗದೆ ದಡ್ಡ ಎಂಬ ಹಣೆಬರಹದೊಂದಿಗೆ ಹಿಂದೆ ಉಳಿಯುತ್ತದೆ. ಈಗೀಗ ಜನರ ವಿಚಾರ ಬದಲಾಗುತ್ತಿದೆ, ಓದು, ಬರಹದಷ್ಟೇ ಇತರೆ ಕಲೆಗಳೂ ಸಹ ಮುಖ್ಯವಾದವು ಎಂದು ಅರಿವಾದರೆ ನಾಳೆಯ ಯುವಕರು ನಮ್ಮಿಂದಾಗದ್ದನ್ನು ಸಾಧಿಸಿ ತೋರಿಸಬಹುದೆನೋ.. ಈ ಮನೋಭಾವವನ್ನು ಇಂದಿನ ಪೀಳಿಗೆಯಲ್ಲಿ ಬಿತ್ತುವುದು ಅವಶ್ಯಕವಾದ ಹೊತ್ತಿನಲ್ಲೇ ಭಾರತ ಈ ಒಲಂಪಿಕ್ಸ್ ನಲ್ಲಿ ಪದಕ ಗೆದ್ದದ್ದು ಲಕ್ಷಾಂತರ ಬಾಲಕ ಬಾಲಕಿಯರಲ್ಲಿ ತಾವು ಅವರಂತಾಗಬೇಕು, ದೇಶವನ್ನು ಪ್ರತಿನಿಧಿಸಬೇಕು, ದೇಶಕ್ಕಾಗಿ ಆಡಬೇಕು ಎನ್ನುವ ಕನಸಿನ ಬೀಜವೊಂದು ಮೊಳಕೆಯೊಡೆಯುತ್ತಿದೆ.
ಪ್ರತಿ ಸಲ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಾಗಲೆಲ್ಲ ಪ್ರತಿಯೊಬ್ಬ ಭಾರತೀಯನಲ್ಲಿ ಹೆಮ್ಮೆ ತಲೆಯೆತ್ತಿ ನಿಲ್ಲುತ್ತದೆ. ಅದರಲ್ಲೂ ಹೀಗೆ ಕ್ರೀಡೆಯಲ್ಲಿ ನಮ್ಮ ಭಾರತೀಯರು ಸಾಧನೆಗೈದಾಗ ಆ ಕ್ರೀಡಾಪಟುಗಳ ಸತತ ಪರಿಶ್ರಮ, ಕಷ್ಟ, ಧೃಢ ಚಿತ್ತ, ಹಗಲು ರಾತ್ರಿಯೆನ್ನದೆ ನಡೆಸಿದ ಅಭ್ಯಾಸ ಎಲ್ಲವೂ ಒಟ್ಟುಗೂಡಿ ಇಡೀ ದೇಶ ಸಂಭ್ರಮದ ವೇಷ ಹಾಕಿ ನಲಿಯುವುದನ್ನು ನೋಡುವುದೇ ಹಬ್ಬ! ಈ ಸಲದ ಒಲಂಪಿಕ್ಸ್ ನಲ್ಲಿ ನಮ್ಮ ಹುಡುಗರು ಏಳು ಪದಕಗಳನ್ನು ಗೆದ್ದು ಕೋಟಿಗಟ್ಟಲೆ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಹಾಕಿಯಂತೂ ಈಗ ಮನೆ ಮಾತಾಗಿದೆ. ಪುರುಷರ ತಂಡ ಕಂಚು ಗೆದ್ದರೆ ಹುಡುಗಿಯರು ಕೊನೆಯ ಕ್ಷಣದವರೆಗೂ ಹೋರಾಡಿ ಮನಸುಗಳನ್ನು ಸೂರೆಗೈದಿದ್ದಾರೆ. ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕ್ರೀಡೆಯಾದರೆ ಭಾರತವನ್ನು ಮೀರಿಸುವುದು ಕಷ್ಟ ಎನ್ನುವಷ್ಟು ಮನೆ ಮಾತಾಗಿರುವ ಕ್ರಿಕೆಟ್ಟಿನ ಹುಚ್ಚಿರುವ ನಮ್ಮ ಜನ ಇತರ ಕ್ರೀಡೆಗಳನ್ನು ಅಷ್ಟೇ ಅಸ್ಥೆಯಿಂದ, ಅಭಿಮಾನದಿಂದ ಅಪ್ಪಿಕೊಳ್ಳುತ್ತಿರುವುದು ಅಭಿವೃದ್ಧಿಕರ ಬದಲಾವಣೆ.
ಮುಂಬರುವ ವರ್ಷಗಳಲ್ಲಿ ಹೆಚ್ಚೆಚ್ಚು ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವಂತಾಗಲಿ. ಪ್ರತಿಯೊಂದು ರಾಜ್ಯವೂ ಕ್ರೀಡೆಗೆ ಪ್ರೋತ್ಸಾಹ ನೀಡಿ, ಅವಶ್ಯಕವಾದ ಫಂಡಿಂಗ್ ಮತ್ತು ತರಬೇತಿಯನ್ನು ಕೊಟ್ಟರೆ ನಮ್ಮಲ್ಲೂ ಗಲ್ಲಿ ಗಲ್ಲಿಗಳಲ್ಲಿ ಕ್ರೀಡಾಪಟುಗಳು ಹುಟ್ಟಿಕೊಳ್ಳುತ್ತಾರೆ. ಎಲ್ಲಿ ಸೌಲಭ್ಯಗಳಿರುತ್ತವೋ ಅಲ್ಲಿ ಜನ ಕಲಿಯಲು, ಕೆಲಸ ಮಾಡಲು ಇಷ್ಟ ಪಡುವಂತೆಯೇ ಕ್ರೀಡೆಯೆಂದರೆ ದುರ್ಗಮದ ಹಾದಿ ಎನ್ನುವ ಭಾವನೆ ಹೋಗಿ ಆದೊಂದು ಉಲ್ಲಾಸಭರಿತ, ಸ್ಪೂರ್ತಿ ಕೊಡುವಂತಹ ಕ್ಷೇತ್ರವಾಗಬೇಕು. ಹೀಗಾಗಬೇಕೆಂದರೆ ಸರಕಾರದಿಂದ ಹೆಚ್ಚೆಚ್ಚು ಸೌಲಭ್ಯಗಳು, ತರಬೇತಿ ಕೇಂದ್ರಗಳು, ನುರಿತ ತರಬೇತಿಗಾರರು, ಹೊಸ ಹೊಸ ತಂತ್ರಗಾರಿಕೆ ಎಲ್ಲವೂ ಬೇಕು.
ಇನ್ನೊಂದು. ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಮೇಲೆ, ಕ್ರೀಡೆಗಳ ಮೇಲೆ ಈಗಿರುವ ಈ ಅಭಿಮಾನ ಕಾಗದದ ಬೆಂಕಿಯೇ ಅಥವಾ ಕೆಂಡದ ಕಿಚ್ಚೋ? ಕಾಗದದ ಬೆಂಕಿಯಾದಲ್ಲಿ ಇನ್ನೊಂದು ತಿಂಗಳಿಗೆ ಸುಟ್ಟು ಬೂದಿಯಾದಿತೆನೋ.. ತನ್ನೊಳಗೆ ಜೋರಾಗಿ ಉರಿಯುವ ಕೆಂಡವಾದರೆ ಅದೆಷ್ಟೇ ದಿನಗಳು ಕಳೆದರೂ ಈ ಕಿಚ್ಚು ಆರುವುದಿಲ್ಲ. ಈಗ ಒಂದೇ ಸಮನೆ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕ್ರೀಡಾಪಟುಗಳ ಸಂದರ್ಶನಗಳು ಕೆಲವೇ ದಿನಗಳಲ್ಲಿ ‘ಆ ನಟಿಯ ಮಗ ಹೀಗೆ ಮಾಡಿದ, ಹಾಗೆ ಮಾಡಿದ’ ಎನ್ನುವ ತುಚ್ಛ ಸುದ್ದಿಗಳಿಂದ ಮೂಲೆಗುಂಪಾಗದಿದ್ದರೆ ಸಾಕು! ಅಲ್ಲವೇ?
ಜೈ ಭಾರತಾಂಬೆ!