ಮನಸಿದ್ದರೆ ಸಾಕು ಕೈ ಚಾಚಿ ಚುಕ್ಕಿ ಚಂದ್ರಮರನ್ನೂ ಮುಟ್ಟಬಹುದು : ಹುಲ್ಲಾಗು ಬೆಟ್ಟದಡಿ (11)
ಎಲ್ಲರಿಗು ನಮಸ್ಕಾರ,
ತುಂಬಾ ದಿನಗಳ ನಂತರ ಮತ್ತೆ ಬರೆಯುತ್ತಿದ್ದೇನೆ. ಬಹುಶಃ ತಿಂಗಳೇ ಕಳೆಯಿತೇನೋ… ಹಾಗೆ ಏನಾದರೂ ಬರೆಯುತ್ತಿದ್ದೆನೇ ಹೊರತು ನಿಮ್ಮ ಮುಂದೆ ಪ್ರಸ್ತುತ ಪಡಿಸುವಂತಹದ್ದನ್ನು ಬರೆದು ತುಂಬಾ ದಿನಗಳಾಯಿತು. ಬರವಣಿಗೆ ಎಂಬುದು ಗಿಡವಿದ್ದಂತೆ. ಪ್ರತಿದಿನ ನೀರೆರೆದು ಪೋಷಿಸುತ್ತಿದ್ದರೆ ನಳನಳಿಸುತ್ತ, ಚಿಗುರುತ್ತಾ ದಿನ ಕಳೆದಂತೆಲ್ಲ ಮರವಾಗಿ ಬೆಳೆಯುತ್ತದೆ. ಬಿಟ್ಟರೆ ಹಂತ ಹಂತವಾಗಿ ಬಾಡುತ್ತ ಕೊನೆಗೆ ಪೂರ್ತಿ ಗಿಡವೇ ಒಣಗಿ ಮಣ್ಣಾಗುತ್ತದೆ. ಬರವಣಿಗೆ ಒಂದೇ ಅಲ್ಲ, ಯಾವುದೇ ಹವ್ಯಾಸವೇ ಆಗಲಿ ಪ್ರತಿದಿನ ಒಂದಿನಿತಾದರೂ ಮಾಡುವುದನ್ನು ರೂಢಿಸಿಕೊಳ್ಳಬೇಕು. ಹೊಸದನ್ನು ಪ್ರಯತ್ನಿಸಬೇಕು ಆಗಷ್ಟೇ ಅದರಲ್ಲಿ ಮುಂದುವರೆಯಲು ಸಾಧ್ಯ. ಇಲ್ಲವಾದಲ್ಲಿ ನೀವು ಎಷ್ಟೇ ಪ್ರತಿಭಾವಂತರಿದ್ದರೂ ನಿರ್ಲಕ್ಷಿಸಿದಲ್ಲಿ ನಶಿಸಿ ಹೋಗುವುದಂತೂ ನಿಜ. ಹಾಗಾಗಿ ಓದುವುದನ್ನು ಬರೆಯುವುದನ್ನು ಆದಷ್ಟು ತಪ್ಪಿಸುವುದಿಲ್ಲ ನಾನು.
ಇತ್ತೀಚಿಗೆ ನಡೆದ ವಿದ್ಯಮಾನಗಳಲ್ಲಿ ನನ್ನನ್ನು ಬಹಳವಾಗಿ ಕಾಡಿದ್ದು ನಮ್ಮ ಚಂದ್ರಯಾನ ೨. ಅವತ್ತು ನಾನು ಕಾತುರದಿಂದ ಟಿವಿ ಮುಂದೆ ಕೂತಿದ್ದೆ. ಇಡೀ ಭಾರತವೇ ಕಾದು ಕೂತಿತ್ತು. ನಮ್ಮ ಪ್ರಧಾನ ಮಂತ್ರಿ ಸ್ವತಃ ಇಸ್ರೋ ಆಫೀಸಿನಲ್ಲಿ ಕುಳಿತು ಅಲ್ಲಿನ ಸಿಬ್ಬಂದಿಯೊಂದಿಗೆ, ನೇರಪ್ರಸಾರವನ್ನು ನೋಡಲು ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಕುಳಿತು ಚಂದ್ರನ ಅಂಗಳಕ್ಕೆ ಭಾರತ ಕಾಲಿಡುವುದನ್ನು ನೋಡಲು ಕಾದು ಕುಳಿತಿದ್ದರು. ನನಗೆ ಇದೇ ಮೊದಲ ಅನುಭವ. ಇದಕ್ಕೂ ಮೊದಲು ಇಸ್ರೋನ ಸಾಧನೆಯನ್ನು ಸುದ್ದಿ ಪತ್ರಿಕೆಗಳಲ್ಲಿ, ವಾರ್ತೆಗಳಲ್ಲಿ ನೋಡಿದ್ದೆ, ಕೇಳುತ್ತಿದ್ದೆ. ಅಲ್ಲಿ ಚಂದ್ರನ ಮೇಲೆ ನಮ್ಮ ಉಪಗ್ರಹ ಇನ್ನೇನು ಇಳಿಯುತ್ತದೆ ಅದನ್ನು ನಾನು ಮನೆಯಲ್ಲೇ ಕುಳಿತುಕೊಂಡು ನೋಡುತ್ತಿದ್ದುದು ಹೀಗೆ ಆಗಿದ್ದು ಮೊದಲು. ಬಹುಶಃ ಮಂಗಳಯಾನದ ನಂತರ ನಮಗೆಲ್ಲ ಇಸ್ರೋ ಬಗ್ಗೆ ಇನ್ನು ಹೆಚ್ಚಿನ ಹೆಮ್ಮೆ, ಪ್ರೀತಿ ಶುರುವಾಯಿತು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಅಲ್ಲಿಯವರೆಗೂ ಇಸ್ರೋ ಎಂದರೆ ವಿಜ್ಞಾನಿಗಳಿಗೆ ಮೀಸಲಾದ, ಸಾಮಾನ್ಯ ಜನರ ತಲೆಗೆ ಹತ್ತದ, ಬುದ್ಧಿಗೆಟುಕದ ವಿಜ್ಞಾನದ ವಿಸ್ಮಯವಷ್ಟೇ ಆಗಿತ್ತು. ನಿಮ್ಮಲ್ಲಿ ಅನೇಕರಿರಬಹುದು, ಉಪಗ್ರಹಗಳ ಬಗ್ಗೆ, ಗಗನಯಾನದ ಬಗ್ಗೆ, ವಿಜ್ಞಾನದ ವಿಸ್ಮಯಗಳ ಬಗ್ಗೆ ಆಸಕ್ತಿಯಿರುವವವರು ಮಂಗಳಯಾನಕ್ಕೂ ಮೊದಲೇ ಇಸ್ರೋನ ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ, ಯಶಸ್ಸಿನ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡಿರಬಹುದು. ಆದರೆ ನನಗೆ ಈ ಪರಿಯ ಆಸಕ್ತಿ ಶುರುವಾಗಿದ್ದು ಮಂಗಳಯಾನದ ನಂತರವೇ. ಅದೊಂಥರ ಹೆಮ್ಮೆ! ಜಗತ್ತೇ ಸಾಧಿಸಲಾಗದ್ದನ್ನು ನಾವು ಸಾಧಿಸಿದ್ದೇವೆ ಎಂಬ ಹೆಮ್ಮೆ. ಆ ಸಾಧನೆಯ ಹಿಂದೆ ಅದೆಷ್ಟು ಪರಿಶ್ರಮವಿರಬಹುದು ಎಂದು ತಿಳಿಯುವ ಹಂಬಲ. ಹೀಗಾಗಿ ಚಂದ್ರಯಾನ ೨ ಕ್ಕೆ ಕಾದು ಕೂತಿದ್ದೆ. ನಾನಷ್ಟೇ ಅಲ್ಲ, ನಮ್ಮಮ್ಮ ಸಹ ಅವತ್ತು ನನ್ನೊಂದಿಗೆ ಕುಳಿತಿದ್ದರು. ಇಷ್ಟು ಸಾಕಲ್ಲವೇ ನಾವು ಬದಲಾಗುತ್ತಿದ್ದೇವೆ ಎಂಬುದನ್ನು ಅರಿಯಲು?
ನಾವು ಕಾತುರದಿಂದ ಕಾಯುತ್ತಿದ್ದೇವೇನೋ ನಿಜ. ಆದರೆ ಅಂದುಕೊಂಡಂತೆ ಆಗಲಿಲ್ಲ. ಟಿವಿಯಲ್ಲಿ ಉಪಗ್ರಹದ ಮಾರ್ಗವನ್ನು ತೋರಿಸುತ್ತಿದ್ದರು. ಇಷ್ಟು ದಿನ ಸಾಗಿ ಬಂದ ದಾರಿ, ಇನ್ನು ಕೆಲವೇ ಕ್ಷಣಗಳಲ್ಲಿ ಸಾಗಬೇಕಿದ್ದ ದಾರಿ. ಇನ್ನೇನು ನಾವು ಚಂದ್ರನಲ್ಲಿ ಇಳಿದೇ ಬಿಟ್ಟೆವೇನೋ ಎಂಬಂತಹ ಉದ್ವೇಗ. ಕೂತಲ್ಲೇ ಚಡಪಡಿಕೆ. ಇಸ್ರೋ ಸಿಬ್ಬಂದಿಗಳು ಸಹ ಉಪಗ್ರಹ ಪ್ರತಿ ಹಂತವನ್ನು ಯಶಸ್ವಿಯಾಗಿ ಮುಗಿಸಿದಾಗ ಖುಷಿಯಲ್ಲಿ ಚಪ್ಪಾಳೆ ತಟ್ಟುತ್ತಿದ್ದರು. ನಮಗೇ ಇಷ್ಟು ತಳಮಳ, ಆತಂಕ, ಉದ್ವೇಗ, ಖುಷಿ, ಮುಂದೇನಾಗುತ್ತೋ ಎಂಬ ಚಿಂತೆ ಕಾಡುವಾಗ ವರ್ಷಗಟ್ಟಲೆ ಇದಕ್ಕಾಗಿ ಶ್ರಮಿಸಿದ ಅವರಿಗೆ ಹೇಗಾಗಿರಬೇಡ. ಉಪಗ್ರಹ ಸಾಗುತ್ತಿತ್ತು. ಟಿವಿ ಮೇಲೆ ಹಸಿರು ಬಣ್ಣದ ಚುಕ್ಕೆಯೊಂದು ಚಂದ್ರನತ್ತ ಧಾವಿಸುತ್ತಿತ್ತು. ಉಪಗ್ರಹದ ವೇಗವನ್ನು ಕಡಿಮೆ ಮಾಡಲಿದ್ದೇವೆ ಎಂದು ಅವರು ಘೋಷಿಸಿದರು. ನಾನು ನನ್ನ ಪರಿಮಿತಿಗೆ ತಕ್ಕಂತೆ ವಿಮಾನದ ವೇಗವನ್ನು ಕಡಿಮೆ ಮಾಡಿ ಭೂಮಿಯ ಮೇಲೆ ತಂದು ನಿಲ್ಲಿಸುವ ವಿಧಾನವನ್ನು ನೆನೆಸಿಕೊಂಡೆ. ಆದರೆ ಆ ಚುಕ್ಕೆ ಅಲ್ಲಿಗೆ ನಿಂತು ಬಿಟ್ಟಿತು. ಅಲ್ಲಿಗೆ ಇಸ್ರೋ ಆಫೀಸಿನಲ್ಲಿ ಅಷ್ಟೇ ಅಲ್ಲ ಇಡೀ ದೇಶದಲ್ಲೇ ಗುಸು ಗುಸು ಆರಂಭವಾಯಿತು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇಸ್ರೋನ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಿದ್ದ ಆ ಸಾಧನೆ ಕೈಗೂಡಲಿಲ್ಲ. ಆದರೇನು.. ಇಡೀ ದೇಶ ಇಸ್ರೋ ಜೊತೆಗಿತ್ತು. ಅಮೇರಿಕಾ ರಷ್ಯಾ ದಂತಹ ಬಲಾಢ್ಯ ದೇಶಗಳು ಹತ್ತು ಹಲವಾರು ಬಾರು ಪ್ರಯೋಗಿಸಿದ್ದನ್ನು ನಾವು ಮೊದಲ ಹಂತದಲ್ಲೇ ಮಾಡಿ ಇದೇನು ಕಷ್ಟವಲ್ಲ ಎಂದು ತೋರಿಸಿದ್ದೆವು. ಇನ್ನು ಎರಡನೇ ಬಾರಿ ಖಂಡಿತ ಚಂದ್ರನ ಅಂಗಳಕ್ಕೆ ಇಳಿದೇ ಇಳಿಯುತ್ತೇವೆ ಎಂಬ ಭರವಸೆ.
ಎಲ್ಲದಕ್ಕಿಂತ ಹೆಚ್ಚಾಗಿ ಇಸ್ರೋ ಅಧ್ಯಕ್ಷ ಶಿವನ್ ಕಣ್ಣೀರು ಹಾಕಿದ್ದು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಸರಕ್ಕಳ್ವಿಲ್ಲೈ ಎಂಬ ತಮಿಳುನಾಡಿನ ಹಳ್ಳಿಯಲ್ಲಿ ಹುಟ್ಟಿ ಸರಕಾರೀ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ಶಿವನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಮುಗಿಸಿ ಇಸ್ರೋ ನಲ್ಲಿ ಕೆಲಸಕ್ಕೆ ಸೇರಿದಾಗ ಅವರಿಗೆ ೨೫ ವರ್ಷ ವಯಸ್ಸು. ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರಿದ ಶಿವನ್ ಅದೆಷ್ಟೋ ಪ್ರೊಜೆಕ್ಟ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಚಂದ್ರಯಾನ ೨ ಅವರ ವೃತ್ತಿ ಜೀವನದ ಮಹತ್ವದ ಪ್ರಾಜೆಕ್ಟ್ ಮತ್ತು ಅವರ ಕನಸಿನ ಕೂಸು.
ಅವರ ಇಡೀ ಕುಟುಂಬದಲ್ಲಿಯೇ ಪದವಿ ಪೂರೈಸಿದ ಮೊದಲಿಗ ಶಿವನ್. ಬಡತನದಿಂದ ವಿದ್ಯಾಭ್ಯಾಸ ಪೂರೈಸಲಾಗದೆ ಶಾಲೆ ಬಿಟ್ಟ ಅಣ್ಣ ಮತ್ತು ಅಕ್ಕಂದಿರು. ತಂದೆಯ ಜೊತೆ ಹೊಲದಲ್ಲಿ ಕೆಲಸ ಮಾಡುತ್ತಲೇ ಶಾಲೆ, ಕಾಲೇಜು ಮುಂದುವರೆಸಿದ ಶಿವನ್, ಕಾಲೇಜಿಗೂ ಧೋತರ ಉಟ್ಟುಕೊಂಡು ಹೋಗುತ್ತಿದ್ದರಂತೆ!
ಹೀಗೆ ಹಿಡಿದ ಕೆಲಸ ಸಾಧಿಸುವವರೆಗೂ ದುಡಿಯುವ ತ್ರಿವಿಕ್ರಮನ ಛಲ ಶಿವನ್ ಅವರದ್ದು. ಹಾಗಾಗಿಯೇ GSLV MK3 ನಲ್ಲಿ ತಾಂತ್ರಿಕ ದೋಷವುಂಟಾದಾಗ ತಂಡವೊಂದನ್ನು ರಚಿಸಿ ೨೪ ಗಂಟೆಗಳ ಒಳಗೆ ಕಾರಣ ಕಂಡು ಹಿಡಿದು ತಾಂತ್ರಿಕ ದೋಷವನ್ನು ಸರಿಪಡಿಸಿ ಎಲ್ಲವನ್ನು ಸರಾಗವಾಗಿಸಲು ಸಾಧ್ಯವಾದದ್ದು. ಇವರೇ ಬರೆದ ಸಾಫ್ಟ್ವೇರ್ ಸಿತಾರಾ ರಾಕೆಟ್ ಗಳ ಪಥವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಂದು ಕಾಲದಲ್ಲಿ ಟ್ಯೂಷನ್ ಫೀ ಕಟ್ಟಲು ಪರದಾಡುತ್ತಿದ್ದ ಹುಡುಗ, ಸೈಕಲ್ ಮೇಲೆ ಮಾವಿನ ಹಣ್ಣುಗಳನ್ನು ಮಾರಲು ಹೋಗುತ್ತಿದ್ದ ಹುಡುಗ, ಅಪ್ಪನ ಜೊತೆ ಬರಿಗಾಲಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಇಂದು ಭಾರತವನ್ನು ಚಂದ್ರನ ಅಂಗಳಕ್ಕೆ ಕೊಂಡೊಯ್ದಿದ್ದಾನೆ. ಜಗತ್ತೇ ತಲೆಯೆತ್ತಿ ಚಂದ್ರನತ್ತ ನೋಡುವಂತೆ ಮಾಡಿದ್ದಾನೆ. ಇಡೀ ದೇಶವೇ ಕುರ್ಚಿಯ ತುದಿಗೆ ಕೂತು ಅದ್ಭುತವೊಂದನ್ನು ವೀಕ್ಷಿಸುವಂತೆ ಮಾಡಿದ್ದಾನೆ. ಪ್ರಧಾನ ಮಂತ್ರಿಯಿಂದ ಬೆನ್ನು ತಟ್ಟಿಸಿಕೊಂಡಿದ್ದಾನೆ.
ಈಗೆಲ್ಲ ಚಂದ್ರನನ್ನು ನೋಡಿದರೆ ವಿಕ್ರಮನೇ ನೆನಪಾಗುತ್ತಾನೆ. ಯಾವತ್ತಾದರೂ ಮತ್ತೆ ಸಿಗ್ನಲ್ ಸಿಗಬಹುದೇ? ಸಿಕ್ಕರೆ ನಾವು ಚಂದ್ರನಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ಇಳಿಯಬಹುದೇ? ಇಂತಹದ್ದೊಂದು ಪವಾಡ ನಡೆದೀತೆ? ಎಂದೆಲ್ಲ ಅನ್ನಿಸುತ್ತದೆ. ಹಾಗೆ ಆಗಲಿ ಎಂದು ಮನಸು ಪ್ರಾರ್ಥಿಸುತ್ತದೆ. ಹಾಗೆ ಯೋಚಿಸುವಾಗ ಚಂದ್ರನಲ್ಲಿಯೂ ಜನಗಳಿದ್ದರೆ? ಮಂಗಳ ಗ್ರಹದಲ್ಲಿಯೂ ಜನರು ವಾಸಿಸುತ್ತಿದ್ದರೆ? ಅವರು ನಮ್ಮಂತೆಯೇ ಬೇರೆ ಗ್ರಹಗಳಿಗೆ ಹೋಗುವ ಪ್ರಯತ್ನ ಮಾಡಿದ್ದರೆ? ಭೂಮಿಗೆ ಈಗಾಗಲೇ ಬಂದು ಹೋಗಿದ್ದರೆ? ಹೀಗೆ ಕಾಡುವ ಹುಚ್ಚು ಹಲವು ಯೋಚನೆಗಳು.
ಹೀಗೆ ಈ ಗಗನದಾಚೆ, ಭೂಮಿಯ ಗುರುತ್ವಾಕರ್ಷಣೆಯ ಆಚೆ ಏನೆಲ್ಲಾ ಅದ್ಭುತಗಳಿರಬಹುದು ಅಲ್ಲವೇ.. ನೀವು northern lights ಬಗ್ಗೆ ಕೇಳಿರಬಹುದು.. ಅದರ ಹಿಂದಿರುವ ವೈಜ್ಞಾನಿಕ ಕಾರಣವೇನೆಂದು ಓದುತ್ತ ಇರುವಾಗ ನಾ ಓದಿದ ಒಂದಷ್ಟು ಅಂಶಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸೂರ್ಯನ ಮೇಲ್ಪದರು ಮಿಲಿಯನ್ ಡಿಗ್ರಿ Celsius ಉಷ್ಣಾಂಶದಲ್ಲಿ ಸುಡುತ್ತಿರುತ್ತದೆ. ಈ ಪರಿಯ ಉಷ್ಣಾಂಶದಲ್ಲಿ gas molecules ಒಂದಕ್ಕೊಂದು ಘರ್ಷಣೆಯಾಗುವುದು ಸರ್ವೇ ಸಾಮಾನ್ಯ. ಹೀಗೆ ಬಿಡುಗಡೆಯಾದ ಎಲೆಕ್ಟ್ರಾನ್ಸ್ ಮತ್ತು ಪ್ರೊಟೊನ್ಸ್ ಗಳು ಸೂರ್ಯನ ಸುತ್ತುವಿಕೆಯ ಪರಿಣಾಮದಿಂದ ಸೂರ್ಯನಿಂದ ಹೊರ ಚಿಮ್ಮಿ ಭೂಮಿಯ ಕಡೆಗೆ ನೆಗೆಯುತ್ತವೆ. ಅತಿ ವೇಗ ಮತ್ತು ಶಕ್ತಿಯ ಕಾರಣದಿಂದ ಇವು ಭೂಮಿಗೆ ಬಲು ಅಪಾಯಕಾರಿ. ಆದರೆ ನಿಸರ್ಗದಲ್ಲಿ ಎಲ್ಲವು ಎಷ್ಟು ಕರಾರುವಕ್ಕಾಗಿ, ಜತನದಿಂದ ನಿರ್ಮಾಣವಾಗಿದೆಯೆಂದರೆ ಈ ಎಲ್ಲವನ್ನು ನಿಸರ್ಗವೇ ನಿಯಂತ್ರಿಸುತ್ತದೆ. ಭೂಮಿಯ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್) ಈ ಪರಮಾಣುಗಳನ್ನು ನಿಯಂತ್ರಿಸುವಲ್ಲಿ ಸಫಲವಾಗುತ್ತದೆ. ಹೀಗೆ ಸೂರ್ಯನಿಂದ ಭೂಮಿಯತ್ತ ಧಾವಿಸುವ ಶಕ್ತಿಭರಿತ ವಿಕಿರಣಗಳನ್ನು, ಪರಮಾಣುಗಳನ್ನು ಭೂಮಿಯ ಕಾಂತಿಯ ಕ್ಷೇತ್ರ ತಡೆದು ನಾಶ ಮಾಡುತ್ತದೆ. ಆದರೆ ಭೂಮಿಯ ದಕ್ಷಿಣಾರ್ಧ ಮತ್ತು ಉತ್ತರಾರ್ಧ ಗೋಳದಲ್ಲಿ ಕಾಂತೀಯ ಶಕ್ತಿ ಕಡಿಮೆ ಇರುವುದರಿಂದ ಕೆಲವೊಂದು ಕಣಗಳು ಭೂಮಿಯನ್ನು ಪ್ರವೇಶಿಸಿ ಇಲ್ಲಿನ gas molecules ಜೊತೆ ಘರ್ಷಿಸಿದಾಗ ಒಂದು ಬಗೆಯ ಬೆಳಕು ಹೊರ ಚಿಮ್ಮುತ್ತದೆ. ಇದುವೇ northern lights . ನಾನು ಕಣ್ಣಾರೆ ನೋಡಿದ್ದರಿಂದ ಹೇಗೆ, ಯಾಕೆ ಎಂದೆಲ್ಲ ತಿಳಿಯುವ ಹಂಬಲ ಉಂಟಾಯಿತಷ್ಟೆ. ನೋಡಲಂತೂ ಕಣ್ಣಿಗೆ ಹಬ್ಬ.
ಹೀಗೆ ಈ ಚಂದ್ರ, ಭೂಮಿ, ಸೂರ್ಯ ಮತ್ತು ಇನ್ನಿತರೇ ಗ್ರಹಗಳು ಒಂದಕ್ಕೊಂದು ಹೊಂದಿಕೊಂಡಿವೆ. ಒಂದು ವ್ಯವಸ್ಥಿತ ಪದ್ದತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿವೆ. ನಾವು ಏಳುವುದು ತಡವಾಗಬಹುದು ಆದರೆ ಸೂರ್ಯ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಿಯೇ ತೀರುತ್ತಾನೆ. ಒಂದು ಊರಿನಿಂದ ಇನ್ನೊಂದು ಊರಿಗೋ ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೋ ಹೋಗಲು ಅನೇಕ ಅಡ್ಡಿ ಆತಂಕಗಳಿರುವಾಗ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗಲು ಏನೇನೆಲ್ಲ ಸಮಸ್ಯೆಗಳಿರಬಹುದಲ್ಲವೇ?
ಒಟ್ಟಿನಲ್ಲಿ ನಾನು ಹೇಳುತ್ತಿರುವ ತಾತ್ಪರ್ಯವೇನೆಂದರೆ; ಚಂದ್ರನತ್ತ ಹೋಗುವುದು ಅಷ್ಟು ಸುಲಭವಲ್ಲ! ಹಾಗೆಯೇ ಕಷ್ಟ ಪಟ್ಟು ಪ್ರಯತ್ನಿಸಿದರೆ ಅಸಾಧ್ಯ ಎಂಬುದಿಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಯಾವ ಕೆಲಸವೂ ಕೈಗೂಡುವುದಿಲ್ಲ. ಜೀವನದ ಬಗ್ಗೆ ಆರೋಪಗಳಿರಬಾರದು. ಏನಿದೆಯೋ ಹಾಗೆ ಸ್ವೀಕರಿಸಬೇಕು. ಶಿವನ್ ಅವರನ್ನು ನೋಡಿ.. ಅವರು ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಹಿಂದೆ ತಿರುಗಿ ನೋಡಲಿಲ್ಲ. ಕಷ್ಟಗಳನ್ನು ಹಿಂದಿಕ್ಕಿ ಜೀವನಕ್ಕೆ ಒಂದು ಸವಾಲ್ ಹಾಕಿದರು. ಮುಂದೆ ಬಂದರು. ಇಡೀ ದೇಶದ ಜನರ ಮನ ಗೆದ್ದರು ಅಲ್ಲವೇ..
ನಮ್ಮ ಇಸ್ರೋ ಇನ್ನು ಹೆಚ್ಚಿನ ಸಾಧನೆಗಳನ್ನು ಮಾಡುವಂತಾಗಲಿ ಎಂದು ತುಂಬು ಮನಸಿನಿಂದ ಹಾರೈಸುತ್ತ ಈ ಲೇಖನವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.
ಧನ್ಯವಾದ
ಸಂಜೋತಾ ಅವರೇ ನಿಮ್ಮ ಲೇಖನ ಓದಿ ತುಂಬಾ ಖುಷಿಯಾಯಿತು.ನೀವು ಅಮೆರಿಕಾದಲ್ಲಿದ್ದರೂ ಕನ್ನಡ ಮತ್ತು ಕನ್ನಡಿಗರನ್ನು ಮರೆಯದಿರುವುದೇ ನಮ್ಮ ಸಂತಸ.
Thank you