ಮುದ್ದುಮರಿ ಹ್ಯಾಚಿಕೊ ಕತೆ ಒಂದೆರಡು ಹನಿ ಕಣ್ಣೀರಿನೊಂದಿಗೆ…
ನಮ್ಮಲ್ಲಿ ಕೆಲವೊಂದಷ್ಟು ಆಡು ಮಾತುಗಳಿವೆ. ‘ನಾಯಿಗಿಲ್ಲದ ನಿಯತ್ತು’, ‘ನಾಯಿ ಬಾಲ ಯಾವತ್ತಿಗೂ ಡೊಂಕು’, ‘ನಾಯಿ ಮನೆ ಕಾಯಿ’ ಹೀಗೆ ಹಲವು… ನಾಯಿಯೆಂದರೆ ಕೇವಲ ಮನೆ ಕಾಯುವ ಪ್ರಾಣಿ, ಬುದ್ಧಿಯಿಲ್ಲದ, ಮೂಳೆಯನ್ನೆಸೆದರೆ ಸ್ವಾಮಿ ಭೇದ ಮರೆತು ಬಾಲ ಅಲ್ಲಾಡಿಸಿಕೊಂಡು ಹಿಂಬಾಲಿಸುವ ಪ್ರಾಣಿ ಎಂದಷ್ಟೇ ಹಲವರ ಸಿದ್ಧಾಂತ. ಅದಕ್ಕೂ ಜೀವವಿರುತ್ತದೆ, ಮನಸಿರುತ್ತದೆ, ತನ್ನ ಒಡೆಯನಿಗೋಸ್ಕರ ವಿಶ್ವವನ್ನೇ ಎದುರಿಸುವ ಭಕ್ತಿಯಿರುತ್ತದೆ ಎಂದು ತೋರಿಸಿ ಕೊಟ್ಟದ್ದು ‘ಹ್ಯಾಚಿ’.
‘ಹ್ಯಾಚಿಕೊ ದಿ ಡಾಗ್ಸ್ ಟೇಲ್’ ಈ ಚಿತ್ರವನ್ನು ನೈಜ ಘಟನೆಯ ಆಧಾರದ ಮೇಲೆ ತಯಾರಿಸಿದ್ದು. ಹ್ಯಾಚಿ ಎಂಬ ನಾಯಿ ಈ ಚಿತ್ರದ ಹೀರೋ. 1997ರಲ್ಲಿ ಮೊದಲ ಬಾರಿಗೆ ಜಪಾನಿನಲ್ಲಿ ಬಿಡುಗಡೆಯಾದ ಈ ಚಿತ್ರ ಅಪಾರ ಯಶಸ್ಸನ್ನು ಗಳಿಸಿತು. ಈ ಚಿತ್ರದ ಮೂಲಕ ಬೆಳಕಿಗೆ ಬಂದ ಹ್ಯಾಚಿ ಜಪಾನಿಯರ ಪಾಲಿನ ಅತಿ ಪ್ರೀತಿಯ ಮುದ್ದು ಮರಿ. 2009ರಲ್ಲಿ ಇಂಗ್ಲೀಷಿನಲ್ಲಿ ಈ ಚಿತ್ರದ ಮರು ನಿರ್ಮಾಣವನ್ನು ಹಾಲಿವುಡ್ ಮಾಡುತ್ತದೆ. ಲಸ್ಸೇ ಹಾಲ್ಸ್ಟೋಮ್ ಈ ಚಿತ್ರದ ನಿರ್ದೇಶಕ.
ಒಡೆಯ ಮತ್ತು ನಾಯಿಯ ಮಧ್ಯದ ಅವಿನಾಭಾವ ಸಂಬಂಧವನ್ನು ತಿಳಿಸುವ ಈ ಚಿತ್ರ ಶುರುವಾಗುವುದು ‘ರೋನಿ’ಯಿಂದ. ರೋನಿ ಈ ನಾಯಿಯ ಒಡೆಯನ ಮೊಮ್ಮಗ. ಶಾಲೆಯಲ್ಲಿ ತಮಗಿಷ್ಟವಾದ ನಾಯಕನ ಬಗ್ಗೆ ಭಾಷಣ ಮಾಡಬೇಕೆಂದು ಹೇಳಿದಾಗ ರೋನಿ ಹೇಳುವುದು ತನ್ನ ನಾಯಕ ಹ್ಯಾಚಿಯ ಬಗ್ಗೆ. ಹ್ಯಾಚಿ ಒಂದು ನಾಯಿ ಎಂದು ರೋನಿ ಕತೆ ಹೇಳಲು ಶುರು ಮಾಡಿದಾಗ ಅವನ ಸಹಪಾಠಿಗಳೆಲ್ಲ ನಗಲು ಶುರು ಮಾಡುತ್ತಾರೆ.. ಇಡೀ ಚಿತ್ರ ರೋನಿಯ ಮಾತುಗಳಲ್ಲಿ ಮುಂದುವರೆಯುತ್ತದೆ.
ರಿಚರ್ಡ್, ಟೋಕಿಯೋ ವಿಶ್ವ ವಿದ್ಯಾನಿಲಯದಲ್ಲಿ ಕೃಷಿ ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರಿಗೆ ನಾಯಿ ಎಂದರೆ ವಿಶೇಷ ಪ್ರೀತಿ ಮತ್ತು ಮಮತೆ. ಬಹು ದಿನಗಳಿಂದ ನಾಯಿಯೊಂದನ್ನು ದತ್ತು ತೆಗೆದುಕೊಳ್ಳಬೇಕೆಂದು ಹವಣಿಸುತ್ತಿದ್ದರೂ ಅನೇಕ ಕಾರಣಗಳಿಂದಾಗಿ ಅದು ಕೈಗೂಡಿರುವುದಿಲ್ಲ. ಅದು ಅಲ್ಲದೆ ರಿಚರ್ಡರವರ ಹೆಂಡತಿಗೆ ನಾಯಿಯೆಂದರೆ ಅಷ್ಟಕ್ಕಷ್ಟೇ. ಒಂದು ದಿನ ಅಕಸ್ಮಾತ್ತಾಗಿ ಅನಾಥ ‘ಹ್ಯಾಚಿಕೊ’ ಪ್ರೊಫೆಸರ್ ಗೆ ಸಿಗುತ್ತಾನೆ. ಅವನನ್ನು ಮನೆಗೆ ಕರೆತಂದು ತಮ್ಮ ಹೆಂಡತಿಯಿಂದ ಮುಚ್ಚಿಡಲು ಹರಸಾಹಸ ಮಾಡಿದರೂ ತುಂಟ ಹ್ಯಾಚಿಕೊ ತನ್ನ ಗಲಾಟೆಗಳಿಂದ ಪ್ರೊಫೆಸರ್ ಹೆಂಡತಿ ಕಣ್ಣಿಗೆ ಬೀಳುತ್ತಾನೆ. ಕೂಡಲೇ ಅವನನ್ನು ಮನೆ ಬಿಟ್ಟು ಕಳಿಸುವಂತೆ ಹೆಂಡತಿಯ ಕಟ್ಟಾಜ್ಞೆ. ಪ್ರೊಫೆಸರಿಗೆ ಬಾಯಿಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತಹ ಸಂಕಟ. ಹೆಂಡತಿಯ ಇಷ್ಟಕ್ಕೆ ವಿರೋಧವಾಗಿ ಹ್ಯಾಚಿಯನ್ನು ಇಟ್ಟುಕೊಳ್ಳುವಂತೆಯೂ ಇಲ್ಲ. ಮುದ್ದು ಮುಖದ ಹ್ಯಾಚಿಯನ್ನು ಮನೆಯಿಂದ ಓಡಿಸುವಂತೆಯೂ ಇಲ್ಲ. ಮನಸ್ಸಿಲ್ಲದೆ ಅವನಿಗೆ ಬೇರೆ ಮನೆಯನ್ನು ಹುಡುಕುವ ಪ್ರೊಫೆಸರ್ ಅವನನ್ನು ತುಂಬಾ ಹಚ್ಚಿಕೊಂಡು ಬಿಡುತ್ತಾರೆ.. ನಾಯಿಯ ಮೇಲಿನ ಇವರ ಪ್ರೀತಿಯನ್ನು ನೋಡಿ ಅವರ ಹೆಂಡತಿಯೇ ಸೋತು ಸಮ್ಮತಿ ಸೂಚಿಸಿದಾಗ ‘ಹ್ಯಾಚಿಕೊ’ ಹ್ಯಾಚಿಯಾಗಿ ಮನೆಯ ಸದಸ್ಯರಲ್ಲೊಬ್ಬನಾಗುತ್ತಾನೆ.
ಇವನೆಂದರೆ ಪ್ರೊಫೆಸರ್ ಗೆ ಬಲು ಮೆಚ್ಚು. ಮಗನಂತೆ ಇವನನ್ನು ನೋಡಿಕೊಳ್ಳುತ್ತ ಸ್ವಲ್ಪ ಅವಧಿಯಲ್ಲಿಯೇ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರಡಷ್ಟು ಹಚ್ಚಿಕೊಳ್ಳುತ್ತಾರೆ. ಪುಟ್ಟ ಹ್ಯಾಚಿಗೆ ಪ್ರತಿಯೊಂದನ್ನು ಕಲಿಸುವ ದೃಶ್ಯಗಳು, ಹ್ಯಾಚಿಯ ತುಂಟಾಟಗಳು, ಅವನ ಬುದ್ಧಿವಂತಿಕೆ ಎಲ್ಲವೂ ಮನಸೂರೆಗೊಳ್ಳುವಂತೆ ಚಿತ್ರದಲ್ಲಿ ಮೂಡಿ ಬಂದಿವೆ. ಪ್ರೊಫೆಸರ್ ಮಗಳ ಜೊತೆ ಹ್ಯಾಚಿ ಸಹ ಬೆಳೆಯತೊಡಗುತ್ತಾನೆ.
ಪ್ರತಿದಿನ ಕಾಲೇಜಿಗೆ ಟ್ರೈನಿನಿಂದ ಹೋಗಿ ಬರುವುದು ಪ್ರೊಫೆಸರರ ನಿತ್ಯದ ಕಾಯಕ. ಹ್ಯಾಚಿ ತುಸು ದೊಡ್ಡವನಾದ ನಂತರ ದಿನ ಬೆಳಿಗ್ಗೆ ಪ್ರೊಫೆಸ್ಸರೊಂದಿಗೆ ತಾನು ‘ಶಿಬುಯಾ’ ಸ್ಟೇಷನ್ ವರೆಗೂ ಹೋಗಿ ಬೀಳ್ಕೊಟ್ಟು ಬರುತ್ತಾನೆ. ಸಂಜೆಯಾಗುತ್ತಿದ್ದ ಹಾಗೆ ಟ್ರೈನಿನ ಹಾರ್ನಿನ ಕಡೆಗೆನೇ ಹ್ಯಾಚಿಯ ಚಿತ್ತ. ಸದ್ದು ಕೇಳಿದೊಡನೆ ಎಲ್ಲಿದ್ದರು ಚಂಗನೆ ಎದ್ದು ಓಡಿ ತನ್ನ ಒಡೆಯನನ್ನು ಕರೆತರುವ ಧಾವಂತ. ಹೀಗೆ ದಿನವೂ ಸ್ಟೇಷನ್ನಿಗೆ ಬರುವ ಇವನು ಅಲ್ಲಿ ಇರುವವರಿಗೆಲ್ಲ ಚಿರಪರಿಚಿತ . ಸ್ಟೇಷನ್ ಮುಂದೆ ಟೀ ಮಾರುವವನಿಗೆ, ಸ್ಟೇಷನ್ ಮಾಸ್ಟರ್ ಗೆ ಹೀಗೆ ಎಲ್ಲರಿಗು ಹ್ಯಾಚಿ ಎಂದರೆ ಅಕ್ಕರೆ.
ಪ್ರೊಫೆಸರ್ ಮಗಳು ಮದುವೆ ವಯಸ್ಸಿಗೆ ಬಂದಾಗ ಅವಳು ಇಷ್ಟ ಪಟ್ಟ ಹುಡುಗನ ಜೊತೆ ಮದುವೆಯಾಗುತ್ತದೆ. ಅನಂತರ ಪ್ರೊಫೆಸರ್, ಅವರ ಹೆಂಡತಿ ಮತ್ತು ಹ್ಯಾಚಿ ಮೂವರೇ ಮನೆಯಲ್ಲಿ. 1975 ಮೇ 21ರಂದು ಬೆಳಿಗ್ಗೆ ಪ್ರೊಫೆಸರ್ ಎಂದಿನಂತೆ ಸ್ಟೇಷನ್ನಿಗೆ ಹೊರಡಲನುವಾಗುತ್ತಾರೆ. ಪ್ರತಿದಿನ ಇವರು ರೆಡಿ ಆಗುವುದನ್ನೇ ಕಾದು ಕುಳಿತಿರುತ್ತಿದ್ದ ಹ್ಯಾಚಿ ಈ ದಿನ ಮಿಸುಕಾಡುವುದಿಲ್ಲ. ಒಂದು ದಿನವೂ ತಪ್ಪದೆ ತಾವು ರೆಡಿ ಆಗುವುದನ್ನೇ ಕಾದು ಕುಳಿತಿರುತ್ತಿದ್ದ ಈ ದಿನ ಸುಮ್ಮನೆ ಮಲಗಿದ್ದು ರಿಚರ್ಡರಿಗೆ ವಿಚಿತ್ರವಾಗಿ ತೋರುತ್ತದೆ. ಆದರೂ ಕೆಲಸಕ್ಕೆ ಹೋಗಲೇಬೇಕಲ್ಲ…. ತುಸು ಹೊತ್ತು ಹ್ಯಾಚಿಯನ್ನು ನೇವರಿಸಿ ಮಾತನಾಡಿಸಿದರು ಅವನಿಂದ ಏನು ಪ್ರತಿಕ್ರಿಯೆ ಇಲ್ಲ, ಕೊನೆಗೆ ಇವನನ್ನು ಬಿಟ್ಟು ಹೊರಡಲನುವಾಗುತ್ತಾರೆ. ಪ್ರೊಫೆಸರ್ ಹೊರಟಿದ್ದನ್ನು ಕಂಡ ಹ್ಯಾಚಿ ಓಡಿ ಬಂದು ಗೇಟ್ ಹತ್ತಿರ ನಿಲ್ಲುತ್ತಾನೆ. ಇವನ ಭಾಷೆ ಪ್ರೊಫೆಸರ್ ಗೆ ಅರ್ಥವಾಗುವುದೇ ಇಲ್ಲ. ಸ್ಟೇಷನ್ನಿನ ದ್ವಾರದವರೆಗೂ ಹ್ಯಾಚಿ ಏನನ್ನೋ ಹೇಳಲು ಯತ್ನಿಸುತ್ತಲೇ ಇರುತ್ತಾನೆ. ಪ್ರೊಫೆಸರ್ ಹ್ಯಾಚಿಯನ್ನು ನೇವರಿಸಿ ತಮ್ಮ ಕೆಲಸಕ್ಕೆ ಹೊರಡುತ್ತಾರೆ.
ಸಂಜೆ ಎಂದಿನಂತೆ ಸ್ಟೇಷನ್ನಿನ ನಿರ್ಗಮನ ದ್ವಾರದ ಬಳಿ ಕುಳಿತು ನಾಲಿಗೆ ಹೊರ ಚಾಚಿ ಬಿಟ್ಟ ಕಣ್ಣು ಬಿಡದಂತೆ ಬಾಗಿಲತ್ತ ನೋಡುತ್ತಾ ಪ್ರೊಫೆಸರ್ ಬರುವುದನ್ನೇ ಕಾಯುವ ಹ್ಯಾಚಿಗೆ ತೆರೆದ ಕಣ್ಣುಗಳಲ್ಲಿಯೇ ಕನಸು.. . ಪ್ರತಿದಿನದಂತೆ ಬಾಗಿಲನ್ನು ತೆಗೆದು ನಗು ನಗುತ್ತ ಹ್ಯಾಚಿ ಎಂದು ಕೂಗುತ್ತ ತನ್ನೊಡೆಯ ಬಂದಂತೆ, ಅತಿ ಪ್ರೀತಿಯಿಂದ ತನ್ನನ್ನು ನೇವರಿಸಿದಂತೆ, ಮಾತನಾಡಿಸಿದಂತೆ, ‘ಕಮ್ ಲೆಟ್ಸ್ ಗೋ’ ಅಂದಂತೆ….. ಹ್ಯಾಚಿ ಕನಸು ಕಾಣುತ್ತಿರುವಾಗಲೇ ಟ್ರೈನ್ ಸ್ಟೇಷನ್ನಿಗೆ ಬಂದು ಸೇರುತ್ತದೆ. ಇನ್ನೇನು ಒಡೆಯ ಬಂದೇ ಬಿಟ್ಟ ಎಂದು ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ಬಾಗಿಲತ್ತ ನೋಡುತ್ತಲೇ ಇರುತ್ತಾನೆ ಹ್ಯಾಚಿ. ಎಷ್ಟೊತ್ತು ಕಾಯ್ದರೂ ಒಡೆಯ ಬರುವುದೇ ಇಲ್ಲ. ದುರ್ದೈವವೆಂದರೆ ಪ್ರೊಫೆಸರ್ ಕಾಲೇಜಿನಲ್ಲಿ ಪಾಠ ಮಾಡುತ್ತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿರುತ್ತಾರೆ. ಬೆಳಗ್ಗೆ ಕೆಟ್ಟದ್ದನ್ನು ಮೊದಲೇ ನೆನೆದು ಅವರನ್ನು ಹೋಗದಂತೆ ತಡೆ ಹಿಡಿಯಲು ಯತ್ನಿಸಿದ ಹ್ಯಾಚಿಗೆ ಅವರ ಸಾವಿನ ವಿಷಯ ಅರ್ಥವಾಗುವುದು ಹೇಗೆ ? ಇಡೀ ರಾತ್ರಿ ಅದೇ ಜಾಗದಲ್ಲಿ ಕಾಯುತ್ತಿರುತ್ತಾನೆ.
ಅತಿ ಸಂಕಟದಲ್ಲಿಯೇ ಪ್ರೊಫೆಸರ್ ಹೆಂಡತಿ ಸ್ಟೇಷನ್ನಿಗೆ ಬಂದು ಹ್ಯಾಚಿಯನ್ನು ಮನೆಗೆ ಕರೆದೊಯ್ಯುತ್ತಾರೆ. ಆದರೆ ಅವರ ಕಣ್ಣು ತಪ್ಪಿಸಿ ಹ್ಯಾಚಿ ಮತ್ತೆ ಓಡಿದ್ದು ಸ್ಟೇಷನ್ನಿನತ್ತ. ನಂತರ ಅವರ ಮಗಳು ಹ್ಯಾಚಿಯನ್ನು ಮನೆಗೆ ಕರೆದೊಯ್ಯುತ್ತಾಳೆ. ಆದರೆ ಹ್ಯಾಚಿ ಊಟ ನೀರಿಲ್ಲದೆ ಒಂದೇ ಸಮನೆ ಕನವರಿಸುತ್ತಾನೆ. ಅಲ್ಲಿಂದ ದಾರಿ ಗೊತ್ತಿರದಿದ್ದರೂ ತನ್ನ ಚಾಣಾಕ್ಷ ಬುದ್ಧಿಯಿಂದ ಸ್ಟೇಷನ್ನಿಗೆ ಬರುವ ಹ್ಯಾಚಿ ಮತ್ತೆ ಅದೇ ಜಾಗದಲ್ಲಿ ಕಾಯುತ್ತ ಕೂರುತ್ತಾನೆ. ಅವನಿಗಿದ್ದುದು ಒಂದೇ ಧ್ಯೇಯ, ತನ್ನ ಒಡೆಯನಿಗೋಸ್ಕರ ಕಾಯುವುದು. ಬಂದೆ ಬರುತ್ತಾನೆ ಎನ್ನುವ ಭರವಸೆಯಲ್ಲಿ ತಲೆಯೆತ್ತಿ ಕಣ್ಣು ಪಿಳುಕಿಸದೇ ದಿನವೂ ಪ್ರೊಫೆಸರ್ ಬರುತ್ತಿದ್ದ ದ್ವಾರವನ್ನು ಕಾಯುತ್ತ ಕೂರುವುದು.
ದಿನಗಳು ಉರುಳಿದವು, ವಾರಗಳು ಕಳೆದವು, ತಿಂಗಳುಗಳು ಜಾರಿದವು, ವರುಷಗಳು ಸದ್ದಿಲ್ಲದೇ ಸರಿದವು. ಮಳೆಗಾಲ ಮಿಂದು, ಚಳಿಗಾಲ ಬೆಚ್ಚಗಾಗಿ, ಬೇಸಿಗೆಗಾಲ ದಹಿಸಿ, ಹಿಮಗಾಲ ಹೆಪ್ಪುಗಟ್ಟಿದರೂ ಬದಲಾಗದ್ದು ಹ್ಯಾಚಿ ಒಬ್ಬನೇ. ಅದೇ ಜಾಗದಲ್ಲಿ ಭಂಗಿಯನ್ನು ಸಹ ಬದಲಾಯಿಸದೆ, ಹಸಿವು ಬಾಯಾರಿಕೆಗಳಿಗೆ ಸೊಲ್ಲೆತ್ತದೆ ಕಾಯುತ್ತಲೇ ಇರುತ್ತಾನೆ. ಹೀಗೆ ಸತತ ಹತ್ತು ವರುಷಗಳ ಕಾಲ ಹ್ಯಾಚಿ ಸ್ಟೇಷನ್ನಿನಲ್ಲಿ ಕಾಯುತ್ತಾನೆ. ಕಾಯುತ್ತಲೇ ಒಂದು ದಿನ ಶಿಬುಯಾ ಸ್ಟೇಷನ್ನಿನ ರಸ್ತೆಯಲ್ಲಿ ಸತ್ತು ಹೋಗುತ್ತಾನೆ. ಮರಳದೇ ಹೋದ ತನ್ನೊಡೆಯನ ನೀರಿಕ್ಷೆಯಲ್ಲಿ ಹ್ಯಾಚಿಯ ಜೀವನ ಕಳೆದು ಹೋಗುತ್ತದೆ.
ಇವನನ್ನು ನೋಡಿದ ವರದಿಗಾರನೊಬ್ಬ ಇವನ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತಾನೆ. ಈ ವರದಿಯೇ ಮುಂದೆ ಸಿನೆಮಾಗೆ ಪ್ರೇರಣೆ. ಜಪಾನಿನ ನ್ಯಾಷನಲ್ ಸೈನ್ಸ್ ಮ್ಯೂಸಿಯಂನಲ್ಲಿ ಹ್ಯಾಚಿಯ ಮೂರ್ತಿ ಪ್ರದರ್ಶನಕ್ಕಿದೆ. ಶಿಬುಯಾ ಸ್ಟೇಷನ್ನಿನ ಮುಂದೆ ತಾಮ್ರದಲ್ಲಿ ಕೆತ್ತಿದ ಹ್ಯಾಚಿಯ ಪ್ರತಿಮೆಯಿದೆ. ಇದರ ಉದ್ಘಾಟನೆಗೆ ಸ್ವತಃ ಹ್ಯಾಚಿಯೇ ಮುಖ್ಯ ಅಥಿತಿಯಾಗಿದ್ದ!
ಹೀಗೆ ರೋನಿಯ ಕಥೆ ಮುಗಿಯುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದೆರಡು ಹನಿ ಕಣ್ಣೀರು ತಂತಾನೆ ಕೆನ್ನೆಯ ಮೇಲೆ ಜಾರುತ್ತದೆ.
Your hachico story is very interesting and feel happy
Thank you!
Thanks for sharing nice Things
Thank you 🙂