ಅನ್ವೇಷಣ (Anweshana)– S.L.ಭೈರಪ್ಪ
ಗೃಹಭಂಗ ಕಾದಂಬರಿಯ ಮುಂದುವರೆದ ಭಾಗ. ಒಂದು ರೀತಿಯಲ್ಲಿ ಇದು ನಮ್ಮೆಲ್ಲರ ಕಥೆ. ಸದಾ ಏನನ್ನೋ ಹುಡುಕುತ್ತ, ಗೊತ್ತು ಗುರಿಯಿಲ್ಲದೆ ಓಡುತ್ತಿದ್ದೇವೆ ನಾವು. ನಮಗೆ ಬೇಕಾಗಿರುವುದೇನು ಎಂದು ತಿಳಿಯದೆ ಎಲ್ಲದರ ಬೆನ್ನು ಹತ್ತಿ ಕೊನೆಗೆ ಒಂದು ದಿನ ಸತ್ತು ಹೋಗುವವರು ನಾವೆಲ್ಲ!
ಇದು ಗೃಹಭಂಗದ ಮುಂದುವರೆದ ಭಾಗವಾದರು ಈ ಕತೆಗೆ ಅದರದೇ ಆದ ತೂಕವಿದೆ, ಸ್ವಾರಸ್ಯವಿದೆ. ಗೃಹಭಂಗದ ಬಗ್ಗೆ ಬರೆಯುವಾಗ ನಾನು ಬರೆದಿದ್ದೆ ‘ನಂಜಮ್ಮ ಮತ್ತು ಅವಳ ಕೊನೆಯ ಮಗನ ಗತಿ ಏನಾಗುತ್ತದೆ ಎಂಬುದನ್ನು ತಿಳಿಯಲು ಕಾದಂಬರಿ ಓದಿ’ ಎಂದು.
ನಂಜಮ್ಮನ ಮೂರನೆಯ ಮಗ ವಿಶ್ವನಾಥ ಚಿಕ್ಕಂದಿನಿಂದಲೂ ಮಠದ ಸ್ವಾಮೀಜಿಯ ಸಂಗದಲ್ಲಿ ಬೆಳೆಯುತ್ತಾನೆ. ತನ್ನ ಅಣ್ಣ, ಅಕ್ಕ ಮತ್ತು ತಾಯಿಯ ಸಾವಿನ ನಂತರ ಊರು ಬಿಟ್ಟು ಹೋಗುತ್ತಾನೆ. ಎಲ್ಲಿ, ಯಾರ ಜೊತೆ ಎಂದು ಯಾರಿಗೂ ಮಾಹಿತಿ ಇರುವುದಿಲ್ಲ. ಈ ಅನಾಥನ ಬಗ್ಗೆ ತಲೆ ಕೆಡಿಸಿಕೊಳ್ಳಲಾದರೂ ಯಾರಿದ್ದರು?. ಆದರೆ ವಿಶ್ವನಾಥನ ಅಜ್ಜ ಕಂಠಿ ಜೋಯಿಸರು ತಮ್ಮ ಮೊಮ್ಮಗನನ್ನು ಮರೆಯುವುದಿಲ್ಲ. ಅವರು ಅವನನ್ನು ಹುಡುಕುತ್ತ ಅಲೆಯುವುದರೊಂದಿಗೆ ಕಥೆ ಶುರುವಾಗುತ್ತದೆ. ಯಾರನ್ನೋ ಕೇಳುತ್ತ ಅವರು ತೋರಿಸಿದ ದಿಕ್ಕಿನಲ್ಲಿ ಹೋಗುತ್ತಾ ಹುಡುಕಾಡುತ್ತಾರೆ. ಆದರೆ ಯಾವ ಸುಳಿವು ಸಿಗುವುದಿಲ್ಲ ವಿಶ್ವನಾಥನ ಬಗ್ಗೆ.
ಕಂಠಿ ಜೋಯಿಸರ ಹುಡುಕಾಟದ ಜೊತೆಯಲ್ಲೇ ಇನ್ನೊಂದು ಕಡೆ ವಿಶ್ವನಾಥನ ಕಥೆ ಶುರುವಾಗುತ್ತದೆ. ಅವನು ಅನುಭವಿಸುವ ಪಾಡುಗಳು, ಇದ್ದಲ್ಲಿ ಸುಖ ಕಾಣದೆ ಮತ್ತೊಂದನ್ನು ಹುಡುಕಿಕೊಂಡು ಹೋಗುವ ಬುದ್ದಿ ಹೀಗೆ ಕತೆ ಮುಂದುವರೆಯುತ್ತದೆ. ಹೋದಲ್ಲೆಲ್ಲ ಎಲ್ಲರ ಮನಸ್ಸನ್ನು ಗೆಲ್ಲುವ ಚಾಣಕ್ಯ ವಿಶ್ವನಾಥ.
ಇತ್ತ ಕಡೆ ಇವನನ್ನು ಹುಡುಕುತಿದ್ದ ಕಂಠಿ ಜೋಯಿಸರಿಗೆ ವಿಶ್ವನಾಥನ ಬಾಲ್ಯದ ಗೆಳೆಯನೊಬ್ಬ ಸಿಗುತ್ತಾನೆ. ಒಂದು ಸಣ್ಣ ಊರಿನಲ್ಲಿ ದರ್ಜಿಯ ಕೆಲಸ ಮಾಡಿಕೊಂಡಿದ್ದ ಈತ ತಾನು ಕೊನೆ ಬಾರಿ ವಿಶ್ವನಾಥನನ್ನು ಸಿನೆಮಾ ಥಿಯೇಟರ್ ಮುಂದೆ ಟಿಕೆಟ್ ಹಂಚುವಾಗ ನೋಡಿದ್ದಾಗಿ ಹೇಳುತ್ತಾನೆ. ಇದರ ಜಾಡು ಹಿಡಿದು ಮತ್ತೆ ಹುಡುಕುತ್ತಾರೆ ಕಂಠಿ ಜೋಯಿಸರು.
ತನ್ನ ಜೀವನದಲ್ಲಿ ನಡೆದಿದ್ದನ್ನೆಲ್ಲ ಡೈರಿಯಲ್ಲಿ ಬರೆದಿಡುವ ಹವ್ಯಾಸ ವಿಶ್ವನಾಥನಿಗೆ. ಒಂದು ದಿನ ಈ ಡೈರಿ ಒಬ್ಬ ಮಹಿಳೆಗೆ ಸಿಗುತ್ತದೆ. ಓದುತ್ತ ಓದುತ್ತ ಆತನೊಬ್ಬ ಒಳ್ಳೆಯ ವ್ಯಕ್ತಿ ಎಂದು ಕಲ್ಪಿಸಿಕೊಳ್ಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರತಿ ಓದುಗ ತನ್ನ ಬುದ್ಧಿಮತ್ತೆಗೆ ತಕ್ಕಂತೆ ವಿಶ್ವನಾಥನ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತಾನೆ. ಅವನು ಒಳ್ಳೆಯವನೆಂದುಕೊಂಡರೆ ಒಳ್ಳೆಯವ, ಕೆಟ್ಟವನೆಂದರೆ ಕೆಟ್ಟವ . ಆದರೆ ಅದು ಆ ಓದುಗನ ದೃಷ್ಟಿಯಲ್ಲಿ.
ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಕಥೆಯ ಮುಖ್ಯ ಪಾತ್ರ ವಿಶ್ವನಾಥ ನಾದರೂ ಅವನೆಂದು ಕತೆಯಲ್ಲಿ ಮುಖ್ಯ ಭೂಮಿಕೆಗೆ ಬರುವುದಿಲ್ಲ. ಯಾರೋ ಹೇಳುವ ಕತೆಯಲ್ಲೋ, ಡೈರಿಯಲ್ಲಿ, ಕಂಠಿ ಜೋಯಿಸರ ಹುಡುಕಾಟದಲ್ಲಿ ಅವನ ಬಗ್ಗೆ ಪ್ರಸ್ತಾಪ ಬರುತ್ತದೆ.
ಕಂಠಿ ಜೋಯಿಸರು ಕೊನೆಗೆ ಬೇಸತ್ತು ಮರಳಿ ತಮ್ಮ ಊರಿಗೆ ಬಂದು ಮೊಮ್ಮಗನನ್ನು ಕಾಣದ ಕೊರಗಿನಲ್ಲಿ ಸತ್ತು ಹೋಗುತ್ತಾರೆ.
ವಿಶ್ವನಾಥ ಏನಾದ??? ಕಾದಂಬರಿ ಓದಿ 🙂