ಆಲದ ಬಿಳಲಿನಂತೆ ಪ್ರೀತಿ ಹಂಚಿ ಹಬ್ಬಿಸಿದ ಅಜ್ಜ ಅಜ್ಜಿಯೀಗ ಜೀವನದ ಶರತ್ಕಾಲದಲ್ಲಿ…
೨೦೨೦ ಬಹುತೇಕರ ಜೀವನದಲ್ಲಿ ಕಹಿ ಘಟನೆಗಳನ್ನೇ ಮತ್ತೆ ಮತ್ತೆ ಹೆಕ್ಕಿ ತರುತ್ತಿದೆ. ಇಡೀ ಜಗತ್ತಿಗೆ ಹಬ್ಬಿಕೊಂಡ ದುರ್ದೈವದ ಕತೆ ಒಂದು ಕಡೆಯಾದರೆ ಮನೆ ಮನೆಗಳಲ್ಲಿ ನಡೆಯುತ್ತಿರುವ ಮನಸಿಗೆ ನೋವನ್ನುಂಟು ಮಾಡುವ ಘಟನೆಗಳು ಇನ್ನೊಂದು ಕಡೆ. ಈ ವರ್ಷದಲ್ಲಿ ಎಷ್ಟೋ ಜನ ಗಣ್ಯರು, ಪ್ರೀತಿ ಪಾತ್ರರು ನಮ್ಮನ್ನಗಲಿದ್ದಾರೆ. ಯಾವಾಗ ಮುಗಿಯುತ್ತದೋ ಈ ವರ್ಷ ಎಂದು ಜನ ಪರಿತಪಿಸುತ್ತಿದ್ದಾರೆ.
ಮೊನ್ನೆಯಷ್ಟೇ ಎಸ್ಪಿಬಿ ಅವರನ್ನು ಕಳೆದುಕೊಂಡೆವು. ಅವರ ಅನಾರೋಗ್ಯದ ಬಗ್ಗೆ ಅರಿವಿತ್ತಾದರೂ ಅಂತಹ ಗಣ್ಯ ವ್ಯಕ್ತಿಯ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಯಾವತ್ತೂ ಭೇಟಿಯಾಗದ, ಪರಸ್ಪರ ಮಾತನಾಡದ ವ್ಯಕ್ತಿಯ ಸಾವಿಗೆ ಕಣ್ಣೀರಿಟ್ಟೆವೆಂದರೆ ಅದು ಅವರ ಸಂಗೀತದೊಡನೆ ಬೆಸೆದುಕೊಂಡು ಬಂದ ನಮ್ಮ ಭಾಂದವ್ಯ, ಅವರ ಹಾಡುಗಳನ್ನು ಕೇಳುತ್ತಾ ಬೆಳೆದ ಬಾಲ್ಯದ ದಿನಗಳು, ಅವರ ಧ್ವನಿ ಕೇಳಿದರೆ ಸಾಕು ನಿಮಿರುವ ಕಿವಿಗಳು.. ಇಷ್ಟು ಸಾಕು ಒಂದು ಸುಪ್ತ ಭಾಂದವ್ಯ ಬೆಳೆಯಲು. ಅವರು ನಮ್ಮವರಾಗಲು.
ಒಂದಾದ ಮೇಲೊಂದರಂತೆ ಕೇಳಿ ಬರುವ ಈ ಸಾವಿನ ಸುದ್ದಿಗಳು ಮನಸ್ಸನ್ನು ಭಯಭೀತಗೊಳಿಸುತ್ತವೆ. ಜೀವನದ ಇಳಿ ಸಂಜೆಯಲ್ಲಿರುವ ನನ್ನಜ್ಜ ಅಜ್ಜಿ ನೆನಪಾಗುತ್ತಾರೆ. ಅವರನ್ನು ಮನಸಾರೆ ನೆನೆಸಿಕೊಂಡೇ ಈ ಲೇಖನ ಬರೆಯುತ್ತಿದ್ದೇನೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ನನ್ನಜ್ಜನ ಆರೋಗ್ಯದಲ್ಲಿ ಏರು ಪೇರಾಗಿ ಆಸ್ಪತ್ರೆ ಸೇರಬೇಕಾಗಿ ಬಂತು. ಚೆನ್ನಾಗಿಯೇ ಇದ್ದ ಅಜ್ಜ. ಹಾಗೆ ಹೇಳಬೇಕೆಂದರೆ ಅದಕ್ಕೂ ಒಂದು ವಾರದ ಮೊದಲು ಹಳ್ಳಿಯಲ್ಲಿ ಹೊಲ ನೋಡಿಕೊಳ್ಳಲು ಯಾರೂ ಇಲ್ಲವೆಂದು ಮನೆಯಲ್ಲಿ ಒಬ್ಬನೇ ಇದ್ದ. ಹೊಲಕ್ಕೆ ಹೋಗಿ ಬರುತ್ತಿದ್ದ. ಮನೆ ರಿಪೇರಿ ಮಾಡಿಸಿದ್ದ. ತಾನೇ ಅಡುಗೆ ಮಾಡಿಕೊಳ್ಳುತ್ತಿದ್ದ. ನನ್ನಜ್ಜನಿಗೆ ೮೦ರ ಮೇಲಿದೆ ವಯಸು!
ಹಾಗೆ ಗಟ್ಟಿ ಮುಟ್ಟಾಗಿದ್ದವನಿಗೆ ಯಾರ ದೃಷ್ಟಿ ತಾಕಿತೋ ಗೊತ್ತಿಲ್ಲ. ಕಾಲಿಗೆ ಕಬ್ಬಿಣ ಬಡೆದದ್ದಷ್ಟೇ ನೆಪ. ಅದೇ ಗಾಯವಾಗಿ ಕೊನೆಗೆ ಹಾಸಿಗೆಯ ಮೇಲೆ ಸದಾ ಮಲಗಬೇಕಾದ ಪರಿಸ್ಥಿತಿ ಬಂತು. ಈಗಲೂ ಅಜ್ಜನಿಗೆ ಮೊದಲಿನ ಹಾಗೆ ಓಡಾಡಲು ಬರುವುದಿಲ್ಲ. ನಿಧಾನವಾಗಿ ಹೆಜ್ಜಯಿಡಲು ಕಲಿಯುತ್ತಿದ್ದಾನೆ.
ಪ್ರೀತಿ ಪಾತ್ರರಿಗೆ ವಯಸಾದಂತೆ ಮನದ ಮೂಲೆಯಲ್ಲಿ ಅವರನ್ನು ಕಳೆದುಕೊಳ್ಳುವ ಭಯ ಶುರುವಾಗುತ್ತದೆ. ಅದರಲ್ಲೂ ಇಂತಹ ಘಟನೆಗಳು ಸಂಭವಿಸಿದರಂತೂ ಪ್ರತಿ ದಿನವೂ ಅದೇ ಕಳವಳದಲ್ಲಿ ಜೀವನ ಸಾಗಿಸುವಂತಾಗುತ್ತದೆ. ನಮ್ಮವರು ನಮ್ಮ ಜೊತೆಗೆ ಇರಲಿ ಎನ್ನುವ ಸ್ವಾರ್ಥ ಶುರುವಾಗುತ್ತದೆ.
ನಾನು ಈ ಹಿಂದೊಮ್ಮೆ ನನ್ನಜ್ಜ ಅಜ್ಜಿಯ ಬಗ್ಗೆ ಬರೆದಿದ್ದೆ. ಅಜ್ಜಿಯ ಹುಟ್ಟಿದ ಹಬ್ಬದ ದಿನ ಅಜ್ಜ ಯಾವತ್ತು ಉಡುಗೊರೆ ಕೊಟ್ಟಿದ್ದಿಲ್ಲ ಆದರೆ ಪ್ರತಿ ದಿನ ಹಿತ್ತಲಿನಲ್ಲಿ ಬೆಳೆದ ಗೊರಟಿ ಹೂವನ್ನು ಕಿತ್ತು ‘ಮಾಲೆ ಮಾಡಿಕೊ’ ಎಂದು ಅಜ್ಜಿಗಾಗಿ ತೆಗೆದಿಡುತ್ತಿದ್ದ. ಊರಿಗೆ ಹೋಗುವಾಗ ತಪ್ಪದೇ ಅವಳ ಸ್ವೆಟರ್ ತೆಗೆದುಕೊಳ್ಳಲು ನೆನಪಿಸುತ್ತಿದ್ದ. ಫೋಟೋ ತೆಗೆಯುವ ಪ್ರಸಂಗ ಬಂದರೆ ಮುಗಿದೇ ಹೋಯಿತು. ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳಲು ನಾಚಿಕೊಳ್ಳುತ್ತಿದ್ದರು. ಮೊದಲೇ ಕೆಂಪಗಿರುವ ಅಜ್ಜಿಯ ಕೆನ್ನೆ ಇನ್ನೂ ಕೆಂಪಾಗುತ್ತಿತ್ತು. ಹೀಗೆ ಪರಸ್ಪರ ನೇರವಾಗಿ ಪ್ರೀತಿಯನ್ನು ವ್ಯಕ್ತ ಪಡಿಸದಿದ್ದರೂ ಅವರಿಬ್ಬರ ಪ್ರೀತಿ ಅನನ್ಯ. ಹೇಳಿಕೊಳ್ಳುವುದಿಲ್ಲ ಆದರೆ ಒಬ್ಬರನ್ನು ಒಬ್ಬರು ಬಿಟ್ಟಿರುವುದಿಲ್ಲ. ಒಂದು ಕಾಲಕ್ಕೆ ಅಂದರೆ ನನ್ನಮ್ಮ ಚಿಕ್ಕವಳಿರುವಾಗ ಮನೆಯಲ್ಲಿ ಅತಿ ಬಡತನವಂತೆ. ಮೂರೂ ಹೊತ್ತು ಊಟ ಸಿಕ್ಕರೆ ಸಾಕು ಎನ್ನುವಂತಹ ಪರಿಸ್ಥಿತಿ. ಯಾವತ್ತು ಅಜ್ಜಿ ತಮ್ಮ ಪರಿಸ್ಥಿತಿಯ ಬಗ್ಗೆ ವಟವಟ ಎಂದಿದ್ದಾಗಲಿ ಅದು ಬೇಕು ಇದು ಬೇಕು ಎಂದು ಪೀಡಿಸುವುದಾಗಲಿ, ತನ್ನ ದಾರಿದ್ರ್ಯವನ್ನು ಹಳಿದುಕೊಳ್ಳುವುದನ್ನಾಗಲಿ ಮಾಡಿದ್ದಿಲ್ಲವಂತೆ. ಅಜ್ಜ ಎಷ್ಟು ತಂದು ಹಾಕುತ್ತಿದ್ದನೋ ಅಷ್ಟರಲ್ಲೇ ಸಂಸಾರ ಮಾಡಿದವಳು. ಅವಳಿಗೆ ದುಡಿಯುವುದೊಂದೇ ಗೊತ್ತಿತ್ತು. ಕಟ್ಟಿಗೆಯ ಒಲೆಯ ಮುಂದೆ ಕೊಳವೆಯಿಂದ ಹೊಗೆ ಊದುತ್ತಾ ಕಣ್ಣ ತುಂಬಾ ನೀರು ತುಂಬಿಕೊಳ್ಳುತ್ತಿದ್ದ ಅಜ್ಜಿಯ ಚಿತ್ರ ಇನ್ನೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಈಗ ಅವಳಿಗೆ ಅಸ್ತಮಾ. ರಾತ್ರಿಯೆಲ್ಲ ಮಲಗಲು ಬಿಡದಂತಹ ಕೆಮ್ಮು. ಅದೇ ಹೊಗೆಯಿಂದ. ಅದೇ ಕಟ್ಟಿಗೆಯ ಒಲೆಯಿಂದ!
ಅಜ್ಜಿಯ ಬಗ್ಗೆ ಹೇಳುವಾಗ ಇದನ್ನು ಹೇಳಲೇಬೇಕು. ಅವಳು ಆಯಾಸ ಎಂದು ಕುಳಿತಿದ್ದನ್ನು ನಾನು ಯಾವತ್ತೂ ನೋಡಿಯೇ ಇಲ್ಲ. ನಾನು ಹೈಸ್ಕೂಲಿನಲ್ಲಿದ್ದೆ. ನಮ್ಮನೆಯಲ್ಲಿ ಹಬ್ಬದ ಮಡಿ ಅಡುಗೆಗಳು, ಶ್ರಾದ್ಧ ಪಕ್ಷಗಳು ಬಲು ಜೋರು. ಆಗೆಲ್ಲ ಅಜ್ಜಿ ಬೆಳಗ್ಗೆ ಸ್ನಾನ ಮಾಡಿ ಒಲೆಯ ಮುಂದೆ ಕುಳಿತರೆ ಮುಗಿಯಿತು. ಮಧ್ಯಾಹ್ನ ಮೂರೂ ನಾಲ್ಕು ಗಂಟೆಯವರೆಗೂ ಅದೇ ಕಟ್ಟಿಗೆಯ ಒಲೆಯ ಮೇಲೆ ಒಂದೇ ಸಮನೆ ಅಡುಗೆ ಮಾಡುತ್ತಿದ್ದಳು. ಅಷ್ಟೇ ಅಲ್ಲ.. ನಮ್ಮೆಲ್ಲರಿಗೂ ಬಡಿಸಿ ನಮ್ಮ ಊಟವಾದ ನಂತರ ಅವಳ ಊಟ. ಅಷ್ಟಾದ ಮೇಲೂ ಯಾರಾದರೂ ನೀರು ಬೇಕೆಂದರೆ ಮತ್ತೆ ಹದಿನೆಂಟರ ಹರೆಯದ ಹುಡುಗಿಯ ಹಾಗೇ ತಟ್ಟನೆ ಎದ್ದು ಅವರಿಗೆ ನೀರು ತಂದು ಕೊಡುವಷ್ಟು ಉತ್ಸಾಹದ ಚಿಲುಮೆ. ಬರಿ ತನ್ನ ಮನೆಯಷ್ಟೇ ಅಲ್ಲ ಅವಳ ಅಣ್ಣಂದಿರು, ಅಕ್ಕ ಎಲ್ಲರು ಬಂದು ಕರೆದಾಗ ಬೇಸರಿಸಿಕೊಳ್ಳದೆ ಅವರ ಮನೆಗಳಿಗೆ ಹೋಗಿ ಕೆಲಸ ಮಾಡಿ ಕೊಟ್ಟು ಬಂದಿದ್ದಾಳೆ.
ಇನ್ನು ಅಜ್ಜನೋ.. ಅವನಷ್ಟು ಸ್ವಾಭಿಮಾನಿ ವ್ಯಕ್ತಿಯನ್ನು ನಾನು ಇದುವರೆಗೂ ನೋಡಿಲ್ಲ. ಇಷ್ಟೂ ವಯಸಾದರು ಮಕ್ಕಳಿಗೆ ಕಷ್ಟ ಕೊಡಬಾರದು ಇರುವ ನಾಲ್ಕೆಕೆರೆ ಹೊಲದಲ್ಲಿ ಕೈಲಾದಷ್ಟು ದುಡಿದು ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುವಷ್ಟು ಸ್ವಾಭಿಮಾನಿ ಅವನು. ನನ್ನ ಜೀವನದಲ್ಲಿ ನಾನು ಸ್ವಾಭಿಮಾನಿಯಾಗಿದ್ದೇನೆಂದರೆ ಅದು ಅಜ್ಜನಿಂದ. ಪರಿಶ್ರಮಿಯಾಗಿದ್ದೇನೆಂದರೆ ಅದು ಅಜ್ಜನಿಂದ. ಈಗಲೂ ಸೇವೆ ಮಾಡಿಸಿಕೊಳ್ಳಲು ಮುದುಡುತ್ತಾನೆ. ಕಣ್ಣೀರಿಡುತ್ತಾನೆ. ತಾನು ಹೊರೆಯಾದನಲ್ಲ ಎಂದು ಪ್ರತಿದಿನವೂ ಬಿಕ್ಕಳಿಸುತ್ತಾನೆ. ಮಕ್ಕಳಿದ್ದಾರಲ್ಲ ಮಾಡಲಿ ಎಂದು ಕಾಲ ಮೇಲೆ ಕಾಲು ಹಾಕಿಕೊಂಡು ಕೂರುವ ಜನರೇ ತುಂಬಿಕೊಂಡಿರುವಾಗ ನನ್ನಜ್ಜನಂತಹವರು ಬಹಳ ಅಪರೂಪ.
ನನಗೆ ಯಾವುದೇ ವಿಷಯಕ್ಕೆ ಬೇಜಾರಾದರು ಮೊದಲು ಕರೆ ಮಾಡುತ್ತಿದ್ದುದು ಅಜ್ಜನಿಗೆ. ‘ಅರಾಮ ಇದ್ದೀವಾ’ ಎಂದು ಆಪ್ತವಾಗಿ ಕೇಳುವ ಅವನ ಧ್ವನಿ ಕೇಳಿದರೆ ಸಾಕು ದುಗುಡವೆಲ್ಲ ಮಾಯ. ಬಹುಶಃ ನನ್ನನ್ನು ಇಡಿಯಾಗಿ ಅರ್ಥ ಮಾಡಿಕೊಂಡಿದ್ದು ಅಜ್ಜ ಒಬ್ಬನೇ. ನಾನು ಹೈಸ್ಕೂಲು ಓದುವಾಗ ಅಜ್ಜ ಅಜ್ಜಿಯ ಜೊತೆಗಿದ್ದೆ. ಆ ಸಮಯದಲ್ಲಿ ಅವರೊಡನೆ ಕಳೆದ ದಿನಗಳು ಇಡೀ ಜೀವಮಾನದಲ್ಲಿಯೇ ಅತ್ಯಂತ ವಿಶೇಷ. ನಾನಷ್ಟೇ ಅಲ್ಲ ಏಳು ಜನ ಮೊಮ್ಮಕ್ಕಳ ಮೇಲೂ ಅಷ್ಟೇ ಪ್ರೀತಿ ಇಬ್ಬರಿಗೂ. ಹಬ್ಬಕ್ಕೆ ಮಕ್ಕಳು ಮೊಮ್ಮಕ್ಕಳು ಬರುತ್ತಾರೆಂದರೆ ಸಾಕು ನನ್ನಜ್ಜನ ಸಂಭ್ರಮ ನೋಡಬೇಕು ನೀವು. ಸಂತೆಯಿಂದ ಬೇಕಾದ್ದು ಬೇಡವಾದ್ದು ಹಣ್ಣು, ಚುರುಮುರಿ, ತರಕಾರಿ ಜೊತೆಗೆ ಸೇವು ಬಟಾಣಿಯನ್ನೂ ಸೇರಿಸಿ ಮನೆ ತುಂಬಿಸುತ್ತಿದ್ದ. ಮಕ್ಕಳಿಗೆ ಊಟಕ್ಕೆ ಕಡಿಮೆ ಮಾಡಿದವನಲ್ಲ. ಅವನಿಗೇನೂ ಪೆನ್ಷನ್ ದುಡ್ಡು ಬರುತ್ತಿರಲಿಲ್ಲ. ಪೋಸ್ಟ್ ಮಾಸ್ಟರ್ ಆಗಿದ್ದ ಅಜ್ಜ. ನಿವೃತ್ತಿ ಹೊಂದಿದ ಮೇಲೆ ಅದೂ ಹೊಲದಿಂದ ಬರುತ್ತಿದ್ದ ಆದಾಯದಲ್ಲೇ ಜೀವನ ಸಾಗಿಸಿದ. ಆದರೆ ಒಂದು ದಿನವೂ ಇನ್ನೊಬ್ಬರ ಬಳಿ ಕೈ ಚಾಚಲಿಲ್ಲ. ಕೊಟ್ಟನೇ ಹೊರತು ಯಾವತ್ತೂ ಕೇಳಲಿಲ್ಲ.
ನನ್ನಜ್ಜ ಅಜ್ಜಿ ಇಬ್ಬರೂ ತಮ್ಮ ಜೀವಮಾನವೆಲ್ಲ ಅತಿ ಸರಳ ಜೀವನವನ್ನು ಬಾಳಿದ್ದಾರೆ. ಮನೆ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಗ ಹೀಗೆ ಎಲ್ಲವನ್ನೂ ನೋಡಿದ್ದಾರೆ. ತುಂಬು ಜೀವನವನ್ನು ಅನುಭವಿಸಿದ್ದಾರೆ. ಅವರು ಇರುವುದರಿಂದಲೇ ಹಬ್ಬಗಳ ಸಂಭ್ರಮ ದ್ವಿಗುಣವಾಗುತ್ತದೆ. ಅವರ ಆಶೀರ್ವಾದದಿಂದಲೇ ಕತ್ತಲಲ್ಲೂ ನಮ್ಮೆಲ್ಲರ ಮೇಲೆ ಬೆಳಕಿರುತ್ತದೆ. ದೇವರ ಒಂದು ಕಣ್ಣಿರುತ್ತದೆ. ಅವರು ಮಾಡಿದ ಪುಣ್ಯದ ಫಲವೇ ಅವರನ್ನು ಹಾಗೂ ನಮ್ಮನ್ನು ಇಲ್ಲಿಯವರೆಗೂ ಕಾಯ್ದುಕೊಂಡು ಬಂದಿದೆ. ಮುಂದೆಯೂ ಕಾಯುತ್ತದೆ.
ಶರತ್ಕಾಲದ ಈ ಸಮಯದಲ್ಲಿ ಮರಗಳ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿವೆ. ನೋಡಲು ಚಂದವೆನಿಸಿದರೂ ಇನ್ನೇನು ಎಲೆಗಳೆಲ್ಲ ಉದುರಿ ಮರಗಳೆಲ್ಲ ಬೆತ್ತಲಾಗುತ್ತವೆ. ವಸಂತ ಕಾಲದವರೆಗೂ.. ವಸಂತ ಕಾಲಕ್ಕೆ ಮತ್ತೆ ಹಸಿರೆಲೆಗಳು ಚಿಗಿಯತೊಡಗುತ್ತವೆ.
ಇದೇ ಅಲ್ಲವೇ ಜೀವನ. ಹಣ್ಣೆಲೆ ಉದುರಲೇಬೇಕು ಹಸಿರೆಲೆ ಚಿಗುರಲೇಬೇಕು. ನಮ್ಮ ಜೀವನವೂ ಅಷ್ಟೇ.. ಕಾಲನ ನಿಯಮದಂತೆ ಸಾಗಲೇಬೇಕು. ಆದರೆ ಆ ಭಯ ಇದೆಯಲ್ಲ. ಕಳೆದುಕೊಳ್ಳುವ ಭಯ. ಅದು ವಿವರಿಸಲಾಗದ್ದು. ಕಳೆದುಕೊಂಡ ಮೇಲೆ ನೆನಪುಗಳು ಕಾಡುತ್ತವೆ. ಇನ್ನೂ ಇರಬೇಕಿತ್ತು ಎಂದೆನಿಸುತ್ತದೆ. ಅವರ ಜೊತೆ ಕಳೆದ ದಿನಗಳೆಲ್ಲ ನೆನಪಾಗುತ್ತವೆ. ಅವರೊಡನೆ ಒರಟಾಗಿ ಮಾತನಾಡಿದುದರ ಬಗ್ಗೆಯೋ, ನಿರ್ಲಕ್ಷಿಸಿದುದರ ಬಗ್ಗೆಯೋ, ನಮ್ಮ ಜೀವನದಲ್ಲೇ ವ್ಯಸ್ತವಾಗಿ ಅವರನ್ನು ಕಡೆಗಣಿಸಿದುದರ ಬಗ್ಗೆಯೋ ಪಶ್ಚಾತಾಪ ಶುರುವಾಗುತ್ತದೆ. ಆದರೆ ಆಗ ಅವರಿರುವುದಿಲ್ಲ. ನಾವೆಷ್ಟೇ ಲಕ್ಷ್ಯ ಕೋಟಿ ಕೊಡುತ್ತೇವೆಂದರೂ ಅವರು ಮರಳಿ ಬರುವುದಿಲ್ಲ.
ಇದೆಲ್ಲ ಯಾಕೆ ಬರೆಯುತ್ತಿದ್ದೇನೆಂದರೆ ಅಜ್ಜ ಅಜ್ಜಿ ನೆನಪಾಗುತ್ತಿದ್ದಾರೆ. ಜಗತ್ತಿನ ಇನ್ನೊಂದು ಮೂಲೆಯಲ್ಲಿ ಕುಳಿತು ರೋಧಿಸುವ ಈ ವೇದನೆ ಇದೆಯಲ್ಲ ಅದನ್ನು ಅಕ್ಷರಗಳಲ್ಲಿ ಹಿಡಿದಿಡಲಾಗದು. ಈ ಸಮಯ ಕಳೆದು ಹೋಗುತ್ತದೆ. ಎಲ್ಲವೂ ಸರಿ ಹೋಗುತ್ತದೆ. ನನ್ನಜ್ಜ ಮತ್ತೆ ಮೊದಲಿನಂತಾಗುತ್ತಾನೆ. ಅಜ್ಜಿಗೆ ಹುಷಾರಾಗುತ್ತದೆ. ಜಗತ್ತಿನ ಸಂಕಷ್ಟ ಮಾಯವಾಗುತ್ತದೆ. ಹೊರಗೆ ಓಡಾಡುವ ಜನ ನಿರಮ್ಮಳವಾಗಿ ಉಸಿರಾಡುವಷ್ಟು ನೆಮ್ಮದಿ ಹರಡುತ್ತದೆ. ಪರಸ್ಪರ ಆಲಿಂಗನಗಳು ವಿನಿಮಯವಾಗುತ್ತವೆ. ಯಾವ ಹಿಂಜರಿಕೆಯಿಲ್ಲದೆ ಜನರೊಡನೆ ಮುಖ ಮರೆ ಮಾಚದೆ ಮಾತನಾಡಲು ಶುರು ಮಾಡುತ್ತೇವೆ. ಅಲ್ಲಿಯವರೆಗೂ ಕಾಯಬೇಕಿದೆಯಷ್ಟೆ..
ನಿಮ್ಮ ಲೇಖನ ಓದಿ ತುಂಬಾ ಸಂತೋಷವಾಯಿತು. ನನ್ನ ಅಜ್ಜ ಅಜ್ಜಿ ಈಗ ಇದ್ದಿದ್ದಿರೆ ಎಷ್ಟು ಚೆನ್ನಗಾರುತಿತ್ತು ಅನಿಸುತ್ತೆ. ಇಂತ ಪ್ರೀತಿಗೆ ಎಷ್ಟು ಕೋಟಿ ಕೊಟ್ಟರೂ ಸಾಲದು. ನೀವು ನಿಜವಾಗಲು ತುಂಬಾ ಅದೃಷ್ಟವಂತರು.