‘ಉತ್ತರಕಾಂಡ’ – ಸೀತೆಯ ದೃಷ್ಟಿಯಲ್ಲಿ ರಾಮಾಯಣ
ನಾನು ವಾಲ್ಮೀಕಿ ರಾಮಾಯಣವನ್ನು ಪ್ರತ್ಯಕ್ಷ ಓದಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಲ್ಲಿ ಇಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತಲೇ ಈ ಎರಡು ಮಹಾ ಗ್ರಂಥಗಳ ಪರಿಚಯವಾದದ್ದು. ಎರಡರ ವಿವರವಾದ ಕತೆ ಏನೇ ಇರಲಿ, ಧರ್ಮದಿಂದ ಅಧರ್ಮವನ್ನು ಗೆದ್ದಿದ್ದು, ಕೆಟ್ಟದ್ದರ ಮೇಲೆ ಒಳ್ಳೆಯತನದ ಜಯ ಎಂಬ ಸಾರ್ವಕಾಲಿಕ ಸತ್ಯ ಈ ಕೃತಿಗಳ ಮೂಲಕ ಕಾಣಿಸಿಕೊಂಡಿದೆ.
ಮಹಾಭಾರತದ ನಾಯಕ ಕೃಷ್ಣ ಎಂದಾದರೆ ರಾಮಾಯಣದ ನಾಯಕ ರಾಮ. ಕೃಷ್ಣನು ಧರ್ಮದಿಂದ ಅಧರ್ಮವನ್ನು ಗೆಲ್ಲಬೇಕು ಎಂದೇ ಹೇಳಿದ್ದು. ರಾಮನು ಸಹ ಧರ್ಮದಿಂದಲೇ ಅಧರ್ಮವನ್ನು ಗೆಲ್ಲಲು ಸಾಧ್ಯ ಎಂದು ಸಾರಿದ್ದು. ಆದರೆ ಈ ಎರಡು ವ್ಯಕ್ತಿತ್ವಗಳ ನಡುವೆ ಅಜಗಜಾಂತರ ವ್ಯತ್ಯಾಸ. ಸತ್ಯ ಗೆಲ್ಲುವುದಾದರೆ ಧರ್ಮದ ಗೆರೆಯಿಂದ ಚೂರು ಆಚೀಚೆ ಹೋಗಬಹುದು ಎಂದು ಕೃಷ್ಣ, ತಾನು ಸತ್ತರು ಪರವಾಗಿಲ್ಲ ಧರ್ಮದ ಗೆರೆಯಲ್ಲೇ ಸಾಗಬೇಕು ಎಂಬ ಕಟ್ಟುನಿಟ್ಟಿನ ರಾಮ. ಇಲ್ಲಿ ಕೃಷ್ಣ ಚಾಣಾಕ್ಷನಾಗಿ ರಾಮ ಪೆದ್ದನಾಗಿ ಕೆಲವರಿಗೆ ಕಂಡರೆ ಇನ್ನು ಕೆಲವರಿಗೆ ಕೃಷ್ಣನ ತುಂಟಾಟ ಅಷ್ಟಕ್ಕಷ್ಟೆಯಾಗಿ ರಾಮನ ಸತ್ಯಸಂಧತೆ ಅತ್ತ್ಯುತ್ತಮವಾಗಿ ಕಾಣಿಸಿದರೆ ಉತ್ಪ್ರೇಕ್ಷೆಯೇನಿಲ್ಲ. ಕೃಷ್ಣ ರಾಮರಂತೆ ನಾವೆಲ್ಲಾ ಭಿನ್ನ ಭಿನ್ನ ವ್ಯಕ್ತಿತ್ವಗಳನ್ನು, ವಿಚಾರಗಳನ್ನು, ಅರಿವುಗಳನ್ನು ಹೊಂದಿದವರು.
ಭೈರಪ್ಪನವರ ಪರ್ವವನ್ನು ಸುಮಾರು ವರುಷಗಳ ಹಿಂದೆಯೇ ಓದಿ ಮುಗಿಸಿದ್ದೇನೆ. ಮತ್ತೆ ಮತ್ತೆ ಓದಬೇಕೆಂದುಕೊಂಡು ಪುಸ್ತಕವನ್ನು ಕೊಂಡು ತಂದಿದ್ದೇನೆ. ನನ್ನ ಕಲ್ಪನೆಗೆ ನಿಲುಕದ ಮಹಾಭಾರತವನ್ನು ನನಗೆ ತೋರಿಸಿದ್ದು ‘ಪರ್ವ’. ಅದಕ್ಕೂ ಮೊದಲು ಮಹಾಭಾರತ ಯುದ್ಧ 18 ದಿನಗಳ ಕಾಲ ನಡೆಯಿತೆಂದು ಗೊತ್ತಿತ್ತಷ್ಟೇ. ಆದರೆ ‘ಪರ್ವ’ವನ್ನು ಓದಿದ ನಂತರ ಆ 18 ದಿನಗಳು ಸೈನಿಕರು ಯುದ್ಧ ಭೂಮಿಯಲ್ಲಿ ಅನುಭವಿಸಿದ ದೈಹಿಕ ಹಿಂಸೆ, ಮಾನಸಿಕ ತೊಳಲಾಟ, ಯಾವ ಸೈನಿಕರು ಯಾವ ಗುಂಪಿಗೆ ಸೇರಿದವರೆಂದು ಗೊತ್ತಾಗದಷ್ಟು ಜನದಟ್ಟಣೆ ಹೀಗೆ ಇದೆಲ್ಲವನ್ನು ನೋಡಿ ಮಹಾಭಾರತದ ಬಗ್ಗೆ ಒಂದು ಹೊಸ ಆಯಾಮವೇ ತಿಳಿದಂತಾಯಿತು. ನನಗೆ ಅರಿವಿಲ್ಲದ ಎಷ್ಟೋ ಸಣ್ಣ ಸಣ್ಣ ಕತೆಗಳು, ಪಾತ್ರಗಳು ಒಂದಕ್ಕೊಂದು ಬೆಸೆದ ರೀತಿ ಎಲ್ಲವು ಇಷ್ಟವಾಯಿತು.
ಹೀಗಾಗಿ ಉತ್ತರಕಾಂಡವನ್ನು ಓದಲು ತುಸು ಹೆಚ್ಛೇ ಉತ್ಸುಕಳಾಗಿದ್ದೆ. ಯುಗದ ಆದಿಯಿಂದ ಶುರುವಾದ ಈ ಕತೆಗಳಿಗೆಲ್ಲ ‘ಪುರುಷ’ನೇ ನಾಯಕ. ಅವನ ವಿಚಾರಗಳು, ಭಾವನೆಗಳು, ನಿರ್ಧಾರಗಳಷ್ಟೇ ಪ್ರಾಮುಖ್ಯ. ದ್ರೌಪದಿ, ರಾಧೆ, ರುಕ್ಮಿಣಿ, ಸೀತೆ ಹೀಗೆ ಹಲವು ಮಹಿಳೆಯರು ಕತೆಯ ತುಂಬಾ ಹಾಸು ಹೊಕ್ಕಾಗಿದ್ದರು ನಾವು ಕೇಳುತ್ತ ಬಂದಿದ್ದು ರಾಮನ ಪುರಾಣ, ಅರ್ಜುನನ ಸಾಹಸ, ಧರ್ಮರಾಜನ ಪಗಡೆ ಆಟ, ಕೃಷ್ಣನ ಉಪದೇಶ. ಈ ಮಹಾ ಗ್ರಂಥಗಳನ್ನಿಟ್ಟುಕೊಂಡು ಹಲವರು ತಮಗೆ ತಿಳಿದಂತೆ ಒಂದು ಹೊಸ ಚಿತ್ರಣವನ್ನು ಕಟ್ಟಿ ಕೊಡಲು ಯತ್ನಿಸಿದ್ದಾರೆ. ಆದರೆ ಮಹಿಳೆಯೊಬ್ಬಳ ಮಾತುಗಳಲ್ಲಿ ಇಡೀ ಕತೆಯನ್ನು ವಿವರಿಸುವ ಕಲೆ ಅಥವಾ ವಿಚಾರ ಬಹುಶಃ ಭೈರಪ್ಪನವರಿಗಷ್ಟೇ ಬಂದಿದೆ.
— ಉತ್ತರಕಾಂಡದ ಬಗ್ಗೆ–
(ಅಮೆಜಾನ್ ನಲ್ಲಿ ಉತ್ತರಕಾಂಡ ಕಾದಂಬರಿ ಲಭ್ಯವಿದೆ. ಆಸಕ್ತರು ಕೊಂಡು ಓದಬಹುದು)
ಹೆಸರು ಉತ್ತರಕಾಂಡವಾದರೂ ಇದು ಸೀತೆಯ ಆತ್ಮಕಥೆ.
ಎಲ್ಲ ಹೆಣ್ಣು ಮಕ್ಕಳಿಗೂ ತನ್ನನ್ನು ಮದುವೆಯಾಗುವ ಹುಡುಗನ ಬಗ್ಗೆ ಕನಸುಗಳಿರುತ್ತವೆ. ಗುಪ್ತ ಆಸೆಗಳಿರುತ್ತವೆ. ಅಂತೆಯೇ ಸೀತೆ… ತನ್ನಿನಿಯನ ಬಗ್ಗೆ ಕನಸು ಕಾಣುತ್ತ ದಾರಿ ಕಾಯುವ ಆಕೆಗೆ ರಾಮ ತಾನಿರುವ ಅರಮನೆಗೆ ಬಂದಿಳಿದಾಗ ಎಲ್ಲಿಲ್ಲದ ಕೌತುಕ, ಸಂಭ್ರಮ. ತನ್ನಪ್ಪನ ಪಂದ್ಯದಲ್ಲಿ ಅವನೇ ಗೆಲ್ಲಲಿ ಎಂಬ ಪ್ರಾರ್ಥನೆ. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಗೌತಮ ಮುನಿಗಳಿಗೆ ಅಹಲ್ಯೆಯ ಮನವರಿಕೆ ಮಾಡಿ ಅವರಿಬ್ಬರನ್ನು ಒಂದು ಮಾಡಿದ ಪ್ರೌಢ, ವಾಲ್ಮೀಕಿ ಋಷಿಗಳ ಯಜ್ಞದಲ್ಲಿ ರಾಕ್ಷಸರೊಂದಿಗೆ ಹೋರಾಡಿದ ಧೀರ, ಮನ ಸೋಲುವಂತಹ ಮೈ ಕಟ್ಟನ್ನು ಹೊಂದಿದ ಸುಂದರಾಂಗ. ಇನ್ನೇನು ಬೇಕಿತ್ತು ಸೀತೆಗೆ. ಸೀತೆಯ ಹುಟ್ಟಿನ ಬಗ್ಗೆ ಅಸಮಾಧಾನವನ್ನು ತೋರಿ ದಶರಥ ಮದುವೆ ಬೇಡವೆಂದಾಗ ‘ಸೀತೆಯ ಜೊತೆ ನನ್ನ ಪಾಣಿಗ್ರಹಣವಾಗಿ ಹೋಗಿದೆ’ ಎಂದು ಹೇಳಿ ತಂದೆಯನ್ನು ಒಪ್ಪಿಸಿದ ರಾಮನ ಮೇಲೆ ಪ್ರೀತಿ ಉಕ್ಕಿ ಬರುತ್ತದೆ.
ಇಷ್ಟು ಅಂತಃಕರುಣಿ ರಾಮ, ಎಲ್ಲವನ್ನು ಪ್ರೌಢವಾಗಿ ಯೋಚಿಸುವ ರಾಮ, ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಮ ರಾವಣನೊಂದಿಗಿನ ಯುದ್ಧದ ನಂತರ ಒಮ್ಮೆಲೇ ಹೇಗೆ ಬದಲಾದ. ಬಸುರಿ ಹೆಂಡತಿಯನ್ನು ಕಾಡಿಗಟ್ಟಿದ್ದಲ್ಲದೆ ಒಂದು ದಿನವೂ ಆಕೆಯ ಬಳಿಯಾಗಲಿ ಮಕ್ಕಳ ಕಡೆಗಾಗಲಿ ಸುಳಿಯಲಿಲ್ಲ. ಅಹಲ್ಯೆಯ ತಪ್ಪನ್ನು ಮನ್ನಿಸಿದ ರಾಮನಿಗೆ ತಪ್ಪೇ ಮಾಡದ ಸೀತೆಯ ಮೇಲೆಯಾಗಲಿ, ತನ್ನ ಮಕ್ಕಳ ಮೇಲೆಯಾಗಲಿ ಕರುಣೆ ಬಾರಲಿಲ್ಲವೇ. ಮದುವೆಯಾದ ಹೊಸದರಲ್ಲಂತೂ ಕಾಡು ಮೇಡು ಅಲೆದ ರಾಮನಿಗೆ ಇನ್ನಾದರೂ ನನ್ನ ಸಂಸಾರದೊಡನೆ ನೆಮ್ಮದಿಯಾಗಿರಬೇಕು ಎಂದೆನಿಸಲಿಲ್ಲವೇ, ತನ್ನನ್ನು ನಂಬಿ ಬಂದವರನ್ನು ರಕ್ಷಿಸದೇ ಧರ್ಮವನ್ನು ಕಾಪಾಡುವುದು ಮರ್ಯಾದಾ ಪುರಷೋತ್ತಮನಾ ಲಕ್ಷಣವೇ…. ರಾಮಾಯಣದ ಸಾರವನ್ನು ಓದಿದಾಗ ಹುಟ್ಟಿಕೊಳ್ಳುವ ಪ್ರಶ್ನೆಗಳಿವು.
ಇದೆ ಪ್ರಶ್ನೆಗಳಿಂದ ತೊಳಲಿದ ಸೀತೆ ಕೊನೆಗೆ ಉತ್ತರ ಸಿಗದೇ ಮಣ್ಣಾಗುವ ಕಥೆ ಉತ್ತರಕಾಂಡ. ಮದುವೆಯಾದಾಗ ಸುಕೋಮಲ ಸೀತೆ, ಕಾಡಿನಲ್ಲಿ ಎಲ್ಲ ಕಷ್ಟಗಳನ್ನು ತುಟಿ ಪಿಟಕ್ಕೆನ್ನದೆ ಅನುಭವಿಸುವ ಗಟ್ಟಿ ಸೀತೆ, ಅಶೋಕವನದಲ್ಲಿ ಗಂಡನಿಗಾಗಿ ಕಾದು ಕುಳಿತ ವಿರಹಿ ಸೀತೆ, ಅಗ್ನಿ ಪ್ರವೇಶ ಮಾಡಿದ ಸತ್ಯವಾನ ಸೀತೆ, ಒಬ್ಬಂಟಿಯಾಗಿ ಮಕ್ಕಳಿಗೆ ಪಾಲನೆ ಪೋಷಣೆ ಮಾಡಿದ ಕರ್ತವ್ಯ ನಿರತ ಸೀತೆ, ಮಹಾರಾಣಿಯಾಗಿದ್ದರು ಸಾಮಾನ್ಯರಂತೆ ನೇಗಿಲು ಹಿಡಿದ ಸ್ವಾವಲಂಬಿ ಸೀತೆ, ಧರ್ಮಸಭೆಯಲ್ಲಿ ರಾಮನನ್ನು ತಿರಸ್ಕರಿಸಿದ ಸಾಧ್ವಿ ಸೀತೆ, ಕೊನೆಗೆ ಮಣ್ಣಲ್ಲಿ ಮಣ್ಣಾದ ಸೀತೆ… ಇವು ಭೈರಪ್ಪನವರು ಕಟ್ಟಿ ಕೊಟ್ಟ ಸೀತೆಯ ಅವತಾರಗಳು.
ವನವಾಸದಲ್ಲಿ ಗಂಡನನ್ನು ಹಿಂಬಾಲಿಸಿ ಎಲ್ಲರ ಪ್ರಶಂಸೆಗೆ ಸೀತೆ ಪಾತ್ರಳಾಗುತ್ತಾಳೆ. ನಾನು ಯಾವಾಗಲೂ ಊರ್ಮಿಳೆಯ ಕುರಿತು ಯೋಚಿಸುತ್ತಿದ್ದೆ. ಕಾಡಾದರೂ ಸೀತೆಗೆ ಗಂಡ ಜೊತೆಗಿದ್ದ. ಆದರೆ ಊರ್ಮಿಳೆಗೆ? ಅಂತಃಪುರವಾದರೂ ಗಂಡ ಮೈಲುಗಳ ಅಂತರದಲ್ಲಿಯೂ ಇಲ್ಲ ಎಂಬ ನೋವಿತ್ತಲ್ಲ… ಅವಳನ್ನೇಕೆ ಜನ ಹೊಗಳಲಿಲ್ಲವೆಂದು. ಆದರೆ ಲಕ್ಷ್ಮಣ ಕರೆದಾಗ ಊರ್ಮಿಳೆಯೇ ಹಿಂಜರಿದಳೆಂದು ಉತ್ತರಕಾಂಡ ಓದಿದಾಗ ತಿಳಿಯಿತು.
ಧರ್ಮವನ್ನು ರಕ್ಷಿಸಿದ ರಾಮ ಸೀತೆಯನ್ನು ರಕ್ಷಿಸಲಿಲ್ಲ. ಎಲ್ಲವನ್ನು ಧರ್ಮದ ದೃಷ್ಟಿಯಿಂದ ನೋಡಿದ ರಾಮನಿಗೆ ಗಂಡನಾಗಿ ತಂದೆಯಾಗಿ ತನ್ನ ಕರ್ತವ್ಯವನ್ನು ಮಾಡಬೇಕೆಂಬ ಧರ್ಮ ಪ್ರಜ್ಞೆ ಇರಲಿಲ್ಲ. ಊರ ಜನರ ಮಾತು ಕೇಳಿ ಹೆಂಡತಿಯನ್ನೇನೋ ಬಿಟ್ಟು ಬಿಟ್ಟ. ನಂತರ ನೆಮ್ಮದಿ ಎಂಬುದು ರಾಮನಿಗೆ ದೂರದ ಬೆಟ್ಟ. ತನ್ನ ತಪ್ಪಿನ ಪಶ್ಚತ್ತಾಪದಲ್ಲೇ ಇಡೀ ಜೀವನ ಸವೆಸಿದ. ಅಂತಃಪುರದಲ್ಲಿದ್ದರು ಸನ್ಯಾಸಿಯಂತೆ ಬದುಕಿದ. ವನವಾಸಕ್ಕೆ ರಾಮ ಹೊರಟು ನಿಂತಾಗ ಏನಾದರಾಗಲಿ ನಾನು ನಿನ್ನೊಡನೆ ಬರುವೆ ಎಂದು ಸೀತೆ ಹಿಂಬಾಲಿಸಿದಳು. ಆದರೆ ವಿನಃಕಾರಣ ಆಕೆಯನ್ನು ಕಾಡಿಗಟ್ಟಿದ ನಂತರ ರಾಮ ಅವಳ ಮುಂದೆ ತುಂಬಾ ಚಿಕ್ಕವನಾಗಿ ಬಿಟ್ಟ.
ಅಶೋಕವನದಲ್ಲಿದ್ದಾಗ ರಾವಣ ತನ್ನ ಮೇಲೆ ಅತ್ಯಾಚಾರ ಮಾಡಿದರೆ ಎಂದು ಸೀತೆ ಚಿಂತಾಕ್ರಾಂತಳಾಗಿ ಯೋಚಿಸುತ್ತಿರುತ್ತಾಳೆ. ‘ದೇಹ ಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶದ ಭಾವ ಬರುತ್ತೆ? ದೇಹವು ಆತ್ಮ ಜೀವ ಬುದ್ಧಿ ಮನಸ್ಸುಗಳಿಗಿಂತ ಜಡವಾದದ್ದಲ್ಲವೆ? ಜಡವು ಅಶುದ್ಧವಾಗಿಯೂ ಆತ್ಮ ಜೀವ ಮನಸ್ಸುಗಳು ಶುದ್ಧವಾಗಿರಲು ಸಾಧವಿಲ್ಲವೆ?’ ಎಂಬ ಸೀತೆಯ ವಿಚಾರಗಳು ಎಷ್ಟೊಂದು ಉದಾತ್ತವಾಗಿ ಮೂಡಿ ಬಂದಿವೆ. ಕೇವಲ ಪರ ಪುರುಷನ ಸಂಗದಲ್ಲಿದ್ದ ಮಾತ್ರಕ್ಕೆ ಹೆಣ್ಣು ‘ಕೆಟ್ಟಳು’ ಎಂಬ ಹೊಲಸು ವಿಚಾರ ರಾಮಾಯಣದ ಕಾಲದಿಂದಲೂ ಸಾರ್ವತ್ರಿಕವಾಗಿದೆ. ಸೀತೆಗೆ ತನ್ನ ಗಂಡನ ಮೇಲಿದ್ದಷ್ಟು ನಂಬಿಕೆ ರಾಮನಿಗೆ ತನ್ನ ಹೆಂಡತಿಯ ಮೇಲಿರಲಿಲ್ಲ. ಸದಾ ಧರ್ಮವನ್ನು ಪಾಲಿಸಿ ಎಲ್ಲರಿಗು ಮಾದರಿಯಾಗುವ ರಾಮ ಅವತ್ತು ತನ್ನ ಪ್ರಜೆಗಳಿಗೆ ‘ನನ್ನ ಹೆಂಡತಿಯ ಮೇಲೆ ನಂಬಿಕೆಯಿದೆ’ ಎಂದು ಗಟ್ಟಿಯಾಗಿ ಹೇಳಿ ಅನೇಕರಿಗೆ ಮಾದರಿಯಾಗಬಹುದಿತ್ತು. ಬದಲಾಗಿ ‘ರಾಮನೇ ಹೆಂಡತಿಯನ್ನು ಬಿಟ್ಟ. ಇನ್ನು ನಾನ್ಯಾರು’ ಎಂದು ಹೇಳಲು ಸ್ಪೂರ್ತಿಯಾದ.
ಇಡೀ ಕತೆಯಲ್ಲಿ ಮನಸ್ಸಿಗೊಪ್ಪುವುದು ಲಕ್ಷ್ಮಣನ ಪಾತ್ರ. ಅಣ್ಣನಿಗೆ ಒಳ್ಳೆಯ ತಮ್ಮನಾಗಿ, ಹೆಂಡತಿ-ಮಕ್ಕಳನ್ನು ಪೋಷಿಸುವ ಪುರುಷನಾಗಿ, ಅತ್ತಿಗೆಯನ್ನು ಕಾಪಾಡುವ ಮೈದುನನಾಗಿ, ಅನ್ಯಾಯ ನಡೆದರೆ ಹಿಂದು ಮುಂದು ನೋಡದೆ ಸಿಡಿದೇಳುವ ವೀರನಾಗಿ, ಸಕಲ ವಿದ್ಯೆಗಳನ್ನು ಬಲ್ಲವನಾಗಿ ತನ್ನದೇ ಛಾಪು ಮೂಡಿಸಿದ್ದಾನೆ. ರಾಮ, ಲಕ್ಷ್ಮಣ, ಸೀತೆ ಕಾಡಿಗೆ ಹೋದಾಗ ಬದುಕಲು ಬೇಕಾಗಿರುವುದು ಬದುಕುವ ಕಲೆ, ಪುಸ್ತಕದ ಬದನೆಕಾಯಿಯಲ್ಲ ಎಂದು ಲಕ್ಷ್ಮಣ ತೋರಿಸಿದ್ದಾನೆ. ಸೀತೆ ಹೇಳಿದಂತೆ ಲಕ್ಷ್ಮಣನಿಲ್ಲದಿದ್ದರೆ ರೋಗಿಷ್ಠರಾಗಿ ಸಾಯುವ ಪರಿಸ್ಥಿತಿಯೇ ಬರುತ್ತಿತ್ತು. ಹೊಟ್ಟೆ ಹಸಿವಾದಾಗ ಬೇಕಾಗಿರುವುದು ತುತ್ತು ಅನ್ನವೇ ಹೊರತು ಪಾಠ ಪ್ರವಚನವಲ್ಲ.
ವಾಲ್ಮೀಕಿಯವರು ಸಂಧಾನ ವಹಿಸಿ ಧರ್ಮಸಭೆ ನಡೆಸುವವರೆಗೂ ರಾಮ-ಸೀತೆಯನ್ನು ಒಂದು ಮಾಡಲು ಯಾರು ಮುಂದಾಗುವುದಿಲ್ಲ. ಈ ಕಾರ್ಯವನ್ನು ವಾಲ್ಮೀಕಿಯವರು ಲವ-ಕುಶರ ಜನನವಾದಾಗಲೇ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಮೂಡುತ್ತದೆ. ತುಂಬಿದ ಧರ್ಮಸಭೆಯಲ್ಲಿ ರಾಮನನ್ನು ತಿರಸ್ಕರಿಸುವ ಸೀತೆಯ ಆಯ್ಕೆ ಸರಿಯೆಂದೇ ಕಾಣಿಸುತ್ತದೆ. ‘ಎಲ್ಲ ಮುಗಿದಾಗ ಸಲ್ಲದ ಸುಖವ ಪಡೆದೆನು ಫಲ’ ಎಂಬಂತೆ ಇಡೀ ಜೀವನವನ್ನೇ ಒಂಟಿಯಾಗಿ ಕಳೆದ ಸೀತೆ ಉಳಿದ ಸಮಯವನ್ನು ಒಂಟಿಯಾಗಿ ಕಳೆಯಲಾರಳೇ. ಅದು ಅಲ್ಲದೆ ಈ ಸಂಧಾನ ರಾಮನಿಂದ ಬಂದಿದ್ದಲ್ಲ. ವಾಲ್ಮೀಕಿ ಋಷಿ ಮಧ್ಯವರ್ತಿಯಾಗಿ ಅವನ ಮನವೊಲಿಸಿದ್ದು.
–ನನ್ನ ಅಭಿಪ್ರಾಯ–
ಸೀತೆಯ ಮನದಾಳದ ಮಾತುಗಳೆಲ್ಲ ಕೆಲವೊಮ್ಮೆ ಅಸಹಾಯಕತೆಯಾಗಿ , ಕೆಲವೊಮ್ಮೆ ಪ್ರಶ್ನೆಗಳಾಗಿ, ಇನ್ನು ಕೆಲವೊಮ್ಮೆ ಸ್ವಗತವಾಗಿ ಮೂಡಿ ಬಂದಿವೆ. ಸೀತಾಯಣದ ಇನ್ನೊಂದು ಜಗತ್ತೇ ತೆರೆದುಕೊಂಡಿತು. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗದೇ ಯೋಚಿಸುವಂತಾಯಿತು. ಮೂಲ ರಾಮಾಯಣವನ್ನೊಮ್ಮೆ ಓದುವ ಬಯಕೆಯಾಯಿತು.
ಆದರೆ ರಾಮನನ್ನು ಹೃದಯ ಹೀನನಂತೆ ಬಿಂಬಿಸಿರುವುದು ಸರಿ ಕಾಣಲಿಲ್ಲ. ಧರ್ಮವನ್ನು ಪಾಲಿಸುವುದು ತಪ್ಪೇ? ಸತ್ಯವೇ ದೇವರೆಂದು ಬದುಕಿದ ಹರಿಚ್ಚಂದ್ರನಿಗೆ ಕೊನೆಗೆ ಸದ್ಗತಿ ಸಿಗಲಿಲ್ಲವೇ… ರಾಮನ ನಡೆ ಸರಿಯಿಲ್ಲವಾದಲ್ಲಿ ಇವತ್ತು ಅವನ ಹೆಸರಿನಲ್ಲಿ ಮಂದಿರಗಳನ್ನೇಕೆ ಕಟ್ಟಿಸುತ್ತಿದ್ದರು.. ಮರ್ಯಾದಾ ಪುರುಷೋತ್ತಮನೆಂದು ಹಾಡಿ ಹೊಗಳುವುದೇಕೆ… ಅಹಲ್ಯೆ ಒಂದೇ ಬಾರಿ ಜಾರಿದ್ದಳೆಂದು ನಾವೆಲ್ಲಾ ಓದಿದ್ದು. ಆದರೆ ಆಕೆಯನ್ನು ಪೂರ್ಣ ವ್ಯಭಿಚಾರಿಣಿಯಂತೆ ತೋರಿಸಿರುವುದಕ್ಕೆ ಸಹಮತವಿಲ್ಲ. ಅನ್ಯ ಪುರುಷರ ಹೆಂಡತಿಯನ್ನು ಮೋಹಿಸುವ ಪುರುಷನೊಂದಿಗೆ ಧರ್ಮ ಯುದ್ಧ ಸಾಧ್ಯವೇ ಎಂದು ವಾಲಿಯನ್ನು ಪ್ರಶ್ನಿಸುವ ರಾಮನಿಗೆ ರಾವಣನ ಜೊತೆ ಯುದ್ಧ ಮಾಡುವಾಗ ಈ ಮಾತು ನೆನಪಾಗುವುದಿಲ್ಲ. ಕೆಲವೊಮ್ಮೆ ಹಾಗೆ ಇನ್ನು ಕೆಲವೊಮ್ಮೆ ಇನ್ನೊಂದು ತರಹ ನಡೆಯುವ ರಾಮನ ಧರ್ಮ ಜ್ಞಾನದ ಮೇಲೆ ಅನುಮಾನವಾಗುತ್ತದೆ.
ಒಟ್ಟಿನಲ್ಲಿ ಉತ್ತರಕಾಂಡದ ಪಯಣ ಒಂದು ಸುಂದರ ಅನುಭವ. ನಿಧಾನವಾಗಿ ಒಂದೊಂದು ವಾಕ್ಯವನ್ನು ಆಳವಾಗಿ ತಿಳಿಕೊಳ್ಳುತ್ತ ಓದಬೇಕೆಂದು ಎಷ್ಟೇ ಅಂದುಕೊಂಡರೂ ಎರಡೇ ದಿನದಲ್ಲಿ ಪುಸ್ತಕ ಮುಗಿಸಿ ಬಿಟ್ಟೆ (ಎಂದಿನಂತೆ). ಮತ್ತೊಮ್ಮೆ ಓದುತ್ತೇನೆ ನಿಧಾನವಾಗಿ…
ವಾಲ್ಮೀಕಿ ಯಜ್ಞದಲ್ಲಿ ಅಲ್ಲಾ,
ವಿಶ್ವಾಮಿತ್ರನ ಯಜ್ಞ ಮಾಡುವಾಗ ಹೋರಾಡಿದವನು ರಾಮ .
ವಾಲ್ಮೀಕಿ ಋಷಿಯ ಪ್ರಕಾರ : ರಾಮನು ಸೀತೆಯ ಕೊಂದು ಬಿಡು ಅಥವಾ ಕಾಡಿಗೆ ಹಟ್ಟಿ ಬಂದು ಬಿಡು ಎನ್ನುತ್ತಾನೆ .
ಆದರೆ,
ಲಕ್ಷ್ಮಣ ಸೀತೆಯನ್ನು ಗೌರವಪೂರಕವಾಗಿ ಕೀಡಿನ ಮಧ್ಯೆ ವನದೇವಿಯ ಪ್ರಾರ್ಥಿಸಿ ಅವಳನ್ನು ಅಲ್ಲೇ ಬಿಟ್ಟು ಬರುತ್ತಾನೆ.
ಚೆಂದದ ಲೇಖನ .
—-ಪಿ.ಕೀರ್ತಿ
ಬರಹ ತುಂಬಾ ಚೆನ್ನಾಗಿದೆ. ನನ್ನ ಪ್ರತಿಕ್ರಿಯೆಯನ್ನು ಭೈರಪ್ಪನವರ ಉತ್ತರಕಾಂಡಕ್ಕಷ್ಟೇ ಸೀಮಿತಗೊಳಿಸದೆ ,ಅದರಾಚೆಗೂ ರಾಮ-ಸೀತಾಯಣದ ಬಗ್ಗೆ ಒಂದೆರಡು ಅನಿಸಿಕೆ ಹೇಳುತ್ತೇನೆ.
‘ಸೀತಾಯಣ’ವನ್ನು ಹೀಗೂ ಅರ್ಥೈಸಬಹುದು.ರಾಮ ಸೀತೆಯನ್ನು ಬಿಟ್ಟದ್ದೋ, ಅಥವಾ ಸೀತೆಯೇ ರಾಮನನ್ನು ಬಿಟ್ಟದ್ದೋ? ರಾವಣನ ವಶದಲ್ಲಿದ್ದಂಥ ಸೀತೆ ಅವನ ವಧೆಯಾದ ಮೇಲೆ ರಾಮನ ಬಳಿ ವಾಪಸ್ಸು ಬರುವಾಗ ತಾನು ಪವಿತ್ರಳು ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡಬೇಕೆನ್ನುವ ಸಂದರ್ಭ ಎದುರಾದಾಗಲೇ ಮಾನಸಿಕವಾಗಿ ರಾಮನನ್ನು ತ್ಯಜಿಸಿಯಾಗಿತ್ತು.ತ್ರಿಕರಣಪೂರ್ವಕವಾಗಿ ತಾನು ಪ್ರೇಮಿಸಿ,ಪೂಜಿಸಿದ ರಾಮ ನನ್ನನ್ನು ಅನುಮಾನಿಸಿದ ಎಂಬ ಭಾವವೇ ಜಾನಕಿಯನ್ನು ಘಾಸಿಗೊಳಿಸಿತ್ತು.ಅನುಮಾನವೆಂಬ ರೋಗ ಒಮ್ಮೆ ಮನಸ್ಸಿನೊಳಗೆ ಹೊಕ್ಕ ಮೇಲೆ ಅರ್ಬುದವಾಗಿ ಬೆಳೆದು ತಮ್ಮಿಬ್ಬರನ್ನು ಮುಂದೊಂದು ದಿನ ಬೇರ್ಪಡಿಸಬಹುದು ಎಂಬ ಮುಂದಾಲೋಚನೆ ಭೂಜಾತೆಗೆ ಅಂದು ಒಡಮೂಡಿ ಪುಂಡರೀಕಾಕ್ಷ ರಘುವರನನ್ನು ಮಾನಸಿಕವಾಗಿ ತ್ಯಜಿಸಿಯಾಗಿತ್ತವಳು.ಮುಂದೊಂದು ದಿನ ಭೌತಿಕವಾಗಿ ರಾಮನನ್ನು ಬಿಡಲು ಆ ಸಮಯದಿಂದಲೇ ಸಿದ್ಧತೆ ಆರಂಭಿಸಿದ್ದಳೋ ಏನೋ.ಬಹುಷಃ ಅದಕ್ಕೇ ಇರಬೇಕು ತನ್ನನ್ನು ಕಾಡಿನಲ್ಲಿ ಲಕ್ಷ್ಮಣ ಬಿಟ್ಟಾಗ ಅವಳು ಹೇಳಿದ್ದು “ಕರುಣಾಳು ರಾಘವನಲ್ಲಿ ತಪ್ಪಿಲ್ಲ”
ಸೀತೆಯಷ್ಟೇ ಮೇಲ್ಪಂಕ್ತಿಯಲ್ಲಿ ನಿಲ್ಲುವ ಇನ್ನೊಂದು ಜೀವ ಊರ್ಮಿಳೆ.ತನ್ನ ಯಾವ ತಪ್ಪೂ ಇಲ್ಲದೆ ಹದಿನಾಲ್ಕು ವರ್ಷಗಳ ಕಾಲ ಅಕ್ಷರಶಃ ಸನ್ಯಾಸಿನಿಯ ಹಾಗೇ ಬದುಕಿದಳು.ಅರಮನೆಯ ಸಕಲ ಸಂಪತ್ತುಗಳಿದ್ದೂ,ಕಣ್ಣು ಕುಕ್ಕುವ ವಸ್ರ್ತಾಭರಣಗಳಿದ್ದೂ,ನಾಸಿಕವನ್ನು ಕೆಣಕುವ ಸುವಾಸನಾಯುಕ್ತವಾದ ಕಂಪನ್ನು ಸೂಸುವ ಷಡ್ರಸೋಪೇತ ಭಕ್ಷ್ಯ ಭೋಜ್ಯಗಳಿದ್ದೂ ಯಾವುದನ್ನೂ ಹೊಂದಲಾಗದ,ಅನುಭವಿಸಲಾಗದ ಸ್ಥಿತಿ ಆಕೆಯದು.ಪತಿಯ ಅನುಪಸ್ಥಿತಿಯಲ್ಲಿಯೂ ತನ್ನ ಇನ್ನಿಬ್ಬರು ತಂಗಿಯಂದಿರಾದ ಮಾಂಡೋವಿ ಮತ್ತು ಶ್ರುತಕೀರ್ತಿಯರಂತೆ ಅರಮನೆಯ ಸುಖಾಭೋಗಗಳನ್ನು ಅನುಭವಿಸುತ್ತ ಬದುಕಿದ್ದರೆ ಯಾರೂ ಅವಳನ್ನು ಪ್ರಶ್ನಿಸುತ್ತಿರಲಿಲ್ಲ.ಆದರೆ ಕಾಡಿನಲ್ಲಿ ನಾರುಮಡಿಯುಟ್ಟು ಅರೆಹೊಟ್ಟೆಯಲ್ಲಿ ತನ್ನ ಗಂಡ ಜೀವಿಸುತ್ತಿರುವಾಗ ತಾನೂ ಬ್ರಹ್ಮಚರ್ಯೆಯನ್ನು ಪಾಲಿಸಲು ಮನಮಾಡಿದಳು.ಪತಿಯನ್ನು ಕಾಡಿಗೆ ಹೋಗದಂತೆ ಹಠ ಮಾಡಿ ತಡೆಯಬಹುದಿತ್ತು.ಅದಾಗದಿದ್ದರೆ ಸೀತೆಯಂತೆ ತಾನೂ ನಿನ್ನನ್ನು ಅನುಸರಿಸುತ್ತೇನೆಂದು ಲಕ್ಷ್ಮಣನನ್ನು ಗೋಳುಹೊಯ್ಯಬಹುದಾಗಿತ್ತು.ಊರ್ಮಿಳೆ ಅದ್ಯಾವುದೂ ಮಾಡಲಿಲ್ಲ.ಅದಕ್ಕೇ ಏನೋ ನನಗೆ ರಾಮಾಯಣದಲ್ಲಿ ಮತ್ತು ‘ಉತ್ತರಕಾಂಡ’ದಲ್ಲಿ ಸೀತೆಯಷ್ಟೇ ಊರ್ಮಿಳೆಯೂ ಇಷ್ಟವಾಗುತ್ತಾಳೆ.
ನಿಜಕ್ಕಾದರೆ ತನ್ನನ್ನು ಅತಿಯಾಗಿ ಪ್ರೀತಿಸುವ ತಂದೆ-ತಾಯಿ,ಪತ್ನಿ,ತಮ್ಮಂದಿರು,ಪ್ರಜಾವರ್ಗ ಇವನ್ನೆಲ್ಲ ಬಿಡುವುದು ರಾಮನಿಗೆ ಸಾಧ್ಯವಿರಲಿಲ್ಲ.ಆದ್ದರಿಂದಲೇ ಇರಬೇಕು ರಾಮನ ಕಾಲವಾಗುವುದಕ್ಕೂ ಮುಂಚೆಯೇ ಜಾನಕಿ ಭೂಗರ್ಭವನ್ನು ಸೇರಿಕೊಂಡಳು.ಲಕ್ಷ್ಮಣ ಸರಯೂ ನದಿಯಲ್ಲಿ ರಾಮನಿಗಿಂತ ಮೊದಲೇ ಲೀನವಾಗಿ ಹೋದ.( ‘ಉತ್ತರಕಾಂಡ’ದಲ್ಲಿ ರಾಮನ ಆಡಳಿತವನ್ನು ಧಿಕ್ಕರಿಸಿ ಲಕ್ಷ್ಮಣ ತನ್ನದೇ ಪ್ರತ್ಯೇಕ ರಾಜ್ಯವನ್ನು ಸಣ್ಣದಾಗಿ ಸ್ಥಾಪಿಸಿ ಬದುಕುವುದನ್ನು ಗಮನಿಸಬಹುದು.ಸೂಚ್ಯವಾಗಿ ನೋಡಿದರೆ ರಾಮನನ್ನು ಲಕ್ಷ್ಮಣನೇ ತ್ಯಜಿಸಿದ ಎಂಬ ಅರ್ಥ ಬರಬಹುದಲ್ಲವೇ?). ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಬರುವ ಹೊತ್ತಿಗೆ ತನ್ನ ಪ್ರೀತಿಪಾತ್ರ ಅಪ್ಪ ದಶರಥನೂ ರಾಮನನ್ನು ಬಿಟ್ಟು ಹೋಗಿದ್ದ.ಹಾಗಾಗಿ ತಾನು ಇಷ್ಟಪಟ್ಟವರನ್ನು ತ್ಯಜಿಸಲು ರಾಮನಿಗಾಗಲಿಲ್ಲ.ಅವರೇ ಇವನನ್ನು ತ್ಯಜಿಸಿದರು.
‘ನನ್ನ ಅಭಿಪ್ರಾಯ’ ಎಂಬ ಉಪಶೀರ್ಷಿಕೆಯಡಿ ‘ರಾಮನನ್ನು ಹೃದಯಹೀನನಂತೆ ಬಿಂಬಿಸಿರುವುದು ಇಷ್ಟವಾಗಲಿಲ್ಲ’ ಎಂದು ಬರೆದಿದ್ದೀರಿ.ನಿಮ್ಮ ಅಭಿಪ್ರಾಯವನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ.ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀಹರಿಯ ಅಂಶಸ್ವರೂಪನಾದ ಮರ್ಯಾದಾಪುರುಷೋತ್ತಮ ರಾಮನನ್ನು ದೇವರಾಗಿ ಪೂಜಿಸುವ ನಮಗೆ ಭೈರಪ್ಪನವರು ರಾಮನ ಬಗ್ಗೆ ದಾಖಲಿಸಿದ ವಿವರಗಳನ್ನು ಒಪ್ಪಿಕೊಳ್ಳುವುದು ತುಸು ಕಷ್ಟವೇ ಸರಿ.ಆದರೆ ಎಲ್ಲ ಮನುಷ್ಯರಂತೆ ರಾಮ ಸೀತೆಯೂ ಈ ಭೂಮಿಯಲ್ಲಿ ಬದುಕಿದ್ದಾರೆ ಎಂದಾದರೆ ಮನುಷ್ಯರಂತೆ ಜೀವನದಲ್ಲಿ ಅವರಿಗೆ ಕಷ್ಟಗಳು ಬಂದಾಗ ರಾಮ ಸೀತೆಯರು ಏನು ಮಾಡುತ್ತಿದ್ದರು ಎಂಬುದನ್ನು ಮಥಿಸುವುದೂ ‘ಉತ್ತರಕಾಂಡ’ದ ಉದ್ದೇಶಗಳಲ್ಲೊಂದು ಎಂದು ಕಾದಂಬರಿ ಬಿಡುಗಡೆಯಾದ ಸಂದರ್ಭದಲ್ಲಿ ಭೈರಪ್ಪನವರು ಸೂರ್ಯಪ್ರಕಾಶ್ ಪಂಡಿತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಯೂಟ್ಯೂಬಿನಲ್ಲಿರುವ ಆ ಮಾತುಕಥೆಯ ಲಿಂಕನ್ನು ಇಲ್ಲಿ ಹಾಕಿದ್ದೇನೆ. https://www.youtube.com/watch?v=el1TOk6jg-o ಉತ್ತರಕಾಂಡದ ಸೀತಾಯಣಕ್ಕೆ ಪೂರಕವಾಗಿ ಆ ಸಂದರ್ಶನವನ್ನೂ ಆಲಿಸಿ.ಸೀತೆಯ ಜೀವನದ ಇನ್ನೂ ಹಲವು ಆಯಾಮಗಳು ಚಿಂತನೆಗೆ ನಿಲುಕಬಹುದು..
ಕನ್ನಡ ಸಾಹಿತ್ಯವನ್ನು ಓದುವುದಲ್ಲದೇ ಅದರ ಬಗ್ಗೆ ನಾಲ್ಕು ಮಾತು ಬರೆದು ಇತರರನ್ನೂ ಓದಲು ಪ್ರೇರೇಪಿಸುವುದಕ್ಕೆ ನೀವು ಅಭಿನಂದನಾರ್ಹರು.ಹೀಗೇ ಬರೆಯುತ್ತಿರಿ..
-ಲಕ್ಷ್ಮೀಶ ಜೆ.ಹೆಗಡೆ
ಕ್ಷಮಿಸಿ
ಭೈರಪ್ಪನವರ ಬಗ್ಗೆ ಪುಸ್ತಕದ ಬಗ್ಗೆ ಬರೆಯಲು ನಾನು ಎಂದೆಂದಿಗೂ ಚಿಕ್ಕವಳೇ.
ಆದರೆ uttarakanda ಓದಿದ ಮೇಲೆ ನನಗೆ ತುಂಬಾ ನೆಮ್ಮದಿ ಸಿಕ್ಕಿದೆ.
ಬುದ್ಧಿ ತಿಳಿದoದಿನಿಂದಲೂ ಸೀತೆ ಗೆ ಆದ ಅನ್ಯಾಯ ಮನಸ್ಸನ್ನು suduttale ಇತ್ತು, ಅದೆಷ್ಟು ಬಾರಿ seethe ಯನ್ನು ನೆನೆದು attiddino ಗೊತ್ತಿಲ್ಲ. ಇಡೀ ಲೋಕಕ್ಕೆ ರಾಮ ಆದರ್ಶ ವ್ಯಕ್ತಿ, ಆದರೆ ಸೀತೆಯ ವಿಷಯದಲ್ಲಿ ಆತ ನಡೆದುಕೊಂdiruva ರೀತಿ ಅಕ್ಷಮ್ಯ.
ಈ ಪುಸ್ತಕ ಬರೆದು ನನ್ನ ಮನಸ್ಸಿಗೆ ತುಂಬಾ ಶಾಂತಿ ತಂದುಕೊಟ್ಟ ಭೈರಪ್ಪನವrige ನಾನು ಎಂದಿಗೂ chiraruni.
ಕ್ಷಮಿಸಿ
ಭೈರಪ್ಪನವರ ಬಗ್ಗೆ ಪುಸ್ತಕದ ಬಗ್ಗೆ ಬರೆಯಲು ನಾನು ಎಂದೆಂದಿಗೂ ಚಿಕ್ಕವಳೇ.
ಆದರೆ uttarakanda ಓದಿದ ಮೇಲೆ ನನಗೆ ತುಂಬಾ ನೆಮ್ಮದಿ ಸಿಕ್ಕಿದೆ.
ಬುದ್ಧಿ ತಿಳಿದoದಿನಿಂದಲೂ ಸೀತೆ ಗೆ ಆದ ಅನ್ಯಾಯ ಮನಸ್ಸನ್ನು suduttale ಇತ್ತು, ಅದೆಷ್ಟು ಬಾರಿ seethe ಯನ್ನು ನೆನೆದು attiddino ಗೊತ್ತಿಲ್ಲ. ಇಡೀ ಲೋಕಕ್ಕೆ ರಾಮ ಆದರ್ಶ ವ್ಯಕ್ತಿ, ಆದರೆ ಸೀತೆಯ ವಿಷಯದಲ್ಲಿ ಆತ ನಡೆದುಕೊಂdiruva ರೀತಿ ಅಕ್ಷಮ್ಯ.
ಈ ಪುಸ್ತಕ ಬರೆದು ನನ್ನ ಮನಸ್ಸಿಗೆ ತುಂಬಾ ಶಾಂತಿ ತಂದುಕೊಟ್ಟ ಭೈರಪ್ಪನವrige ನಾನು ಎಂದಿಗೂ chiraruni.
ಓಹ್! ತುಂಬಾ ಭಾವುಕರು ನೀವು…
‘ರಾಮನ ಧರ್ಮಜ್ಞಾನದ ಬಗ್ಗೆ ಅನುಮಾನವಾಗುತ್ತದೆ.’ ಎಂಬ ಮಾತಿನೊಂದಿಗೆ ಮುಕ್ತಾಯವಾಗುವ ಉತ್ತರಕಾಂಡದ ಬಗೆಗಿನ ಸಂಜೋತ ಪುರೋಹಿತ್ ಅವರ ಲೇಖನ ಬೈರಪ್ಪನವರು ತಮ್ಮ ಕಾದಂಬರಿಯಿಂದ ಓದುಗರು ರಾಮಾಯಣದ ಬಗ್ಗೆ ವಿಭಿನ್ನವಾಗಿ ಚಿಂತಿಸಲು ಪ್ರೇರೇಪಿಸಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. ಉತ್ತರಕಾಂಡದ ಬಗ್ಗೆ ಸಂಜೋತ ಪುರೋಹಿತ್ ಅವರ ವಿಚಾರಗಳು ಮನನೀಯವಾಗಿವೆ.
ತುಂಬಾ Thanks Sir 🙂