ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು- ತೇಜಸ್ವಿಯವರ ಪುಸ್ತಕದಲ್ಲೊಂದು ಇಣುಕು ನೋಟ
ಹಳ್ಳಿಯಲ್ಲಿ ಕೌತುಕದ ವಿದ್ಯಮಾನಗಳನ್ನು ಗಮನಿಸುತ್ತಾ, ಪಶು, ಪಕ್ಷಿ, ಕ್ರೀಮಿ, ಕೀಟಗಳ ಸ್ವಭಾವ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅಭ್ಯಸಿಸಿ ತೇಜಸ್ವಿಯವರು ಬರೆದ ಸ್ವಾನುಭವಗಳ ಸಂಗ್ರಹವೇ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಎಂಬ ಪುಸ್ತಕ.
ಸುಶ್ಮಿತ ಮತ್ತು ಈಶಾನ್ಯೆ ಗೆ (ತೇಜಸ್ವಿಯವರ ಮಕ್ಕಳು) ಬಾಲ್ಯದ ಕೂತುಹಲಗಳು ಗರಿಗೆದರಿ ಅಪ್ಪನ ಹತ್ತಿರ ಪ್ರಶ್ನೆಗಳನ್ನು ಹೊತ್ತು ತಂದಾಗ ತೇಜಸ್ವಿಯವರು ವೈಜ್ಞಾನಿಕ ಪರಿಧಿಯಲ್ಲಿ ವಿವರಿಸ ಹೊರಟರೆ ಮಕ್ಕಳ ಆಸಕ್ತಿ ಕಮರಿ ಹೋಗುವುದೆಂದು ಅರಿತು ಜೀವನ ಸಂದರ್ಭಗಳನ್ನು ಜೊತೆಗೆ ಬೆರೆಸಿ ಮಕ್ಕಳಿಗೆ ಎಲ್ಲವನ್ನು ಕತೆಯ ಹಾಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.
ಈ ಪುಸ್ತಕದಲ್ಲಿ ಒಟ್ಟು 17 ಅಧ್ಯಾಯಗಳಿವೆ. ಒಂಟೆ ಹುಳು, ಸರ್ಪ, ಬಾವಲಿ, ಹಲ್ಲಿ, ಮಲಬಾರ ಟ್ರೋಜನ್ ಹೀಗೆ ಹಲವು ಪ್ರಾಣಿಗಳ ವಿಭಿನ್ನ ನಡುವಳಿಕೆಗಳನ್ನು, ವಿಸ್ಮಯಗಳನ್ನು , ಗುಪ್ತ ಶಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ತಾವು ಕಂಡಿದ್ದನ್ನು, ತಿಳಿದುಕೊಂಡಿದ್ದನ್ನು ,ಪತ್ತೆ ಹಚ್ಚಿದ್ದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ತೇಜಸ್ವಿಯವರು.
ಮೊದಲ ಕತೆ ಅಥವಾ ಪ್ರಸಂಗ ಶುರುವಾಗುವುದು ಒಂಟೆ ಹುಳುವಿನಿಂದ. ಬಿರು ಬಿಸಿಲಿನಲ್ಲಿ ನಡೆದು ಸುಸ್ತಾಗಿ ನೆರಳಿಗಾಗಿ ಮರದ ಕೆಳಗೆ ಹೋಗಿ ನಿಂತಾಗ ಕಂಡ ಒಂದು ಅದ್ಭುತ .
ಎಲೆಯೊಂದು ಬೀಡಿಯ ಹಾಗೆ ಸುರುಳಿ ಸುತ್ತಿಕೊಂಡು ಇತರ ಒಣ ಎಲೆಗಳ ರಾಶಿಯಲ್ಲಿ ಬಿದ್ದಿರುತ್ತದೆ. ಕೈಯಲ್ಲೆತ್ತಿಕೊಂಡು ನೋಡಿದರೆ ಯಾರೋ ಮನುಷ್ಯರೇ ಸುರುಳಿ ಸುತ್ತಿ, ಸುರುಳಿ ಬಿಚ್ಚದಂತೆ ಪೊಟ್ಟಣ ಕಟ್ಟಿ ಬಿಸಾಕಿದಂತೆ..
ಅಲ್ಲಲ್ಲಿ ಬಿದ್ದ ಇದೇ ತರಹದ ಹಲವು ಬೀಡ(ಎಲೆ) ಗಳನ್ನು ಮನೆಗೆ ತಂದು, ಸುರುಳಿ ಬಿಚ್ಚಿ ಕೂಲಂಕುಷವಾಗಿ ನೋಡಿದಾಗ ಎಲೆಯ ಒಳಗೆ ಕೂದಲಿನಷ್ಟು ಸಣ್ಣದಾದ ಹುಳವೊಂದು ಹರಿದಾಡುವುದು ಕಾಣಿಸುತ್ತದೆ. ಇಷ್ಟು ಚಿಕ್ಕ ಹುಳ ಒಳಗೆ ಬಂದು ತಾನೇ ಸುರುಳಿ ಸುತ್ತಿಕೊಂಡಿದ್ದು ಹೇಗೆ? ನಂತರ ಮೈಕ್ರೋಸ್ಕೊಪಿನಲ್ಲಿ ನೋಡಿದಾಗ ಪ್ರತಿ ಎಲೆಯ ತುದಿಯಲ್ಲೂ ಒಂದೊಂದು ರವೆ ಗಾತ್ರದ ಮೊಟ್ಟೆ! ಈಗ ನೋಡಬೇಕಲ್ಲ ಯಾವ ಹುಳು ತನ್ನ ಮೊಟ್ಟೆಗಳನ್ನು ಎಲೆಯಲ್ಲಿಟ್ಟು ಸುರುಳಿ ಸುತ್ತಿ ಪೊಟ್ಟಣ ಕಟ್ಟಿ ನೆಲಕ್ಕೆ ಬಿಸುಡುತ್ತಿದೆಯೆಂದು.
ಒಂಟೆ ಹುಳಗಳು ಮೊಟ್ಟೆಯಿಡುವುದರ ಮೇಲೆ ಶುರುವಾಯಿತು ಸಂಶೋಧನೆ. ಒಂದು ಚಿಕ್ಕ ಹುಳು ಸೂಕ್ತವಾದ ಎಲೆಯನ್ನು ಹುಡುಕಿ, ಅದರೊಳಗೆ ಮೊಟ್ಟೆಯಿಟ್ಟು, ಸುರಳಿ ಸುತ್ತಿ, ಮೊಟ್ಟೆಯ ರಕ್ಷಣೆಗೆಂದು ಪೊಟ್ಟಣ ಕಟ್ಟಿ, ಎಲೆಗೆ ಶಾಖ ಕೊಟ್ಟು ಮರಿ ಮಾಡುತ್ತದೆಯೆಂದು ಹೇಳಿದರೆ ವಿಸ್ಮಯವೆನಿಸಬಹುದು.
ಒಂದಿನ ಪ್ರತ್ಯಕ್ಷವಾಗಿ ನೋಡಿ ಓಡು ಹುಳುಗಳ ಜಾತಿಗೆ ಸೇರಿದ ಈ ಒಂಟೆಹುಳುಗಳು ತಮ್ಮ ಮರಿಗಳನ್ನು ಹೇಗೆ ಎಲೆಗಳ ಮಡಿಲಲ್ಲಿ ರಕ್ಷಿಸುತ್ತವೆ ಎಂದು ಸುಧೀರ್ಘವಾಗಿ ವಿವರಿಸಿದ್ದಾರೆ.
ನಂತರ ಶುರುವಾಗುವುದು ಏರೋಪ್ಲೆನ್ ಚಿಟ್ಟೆಯ ಪುರಾಣ. ನಾನಂತು ಇದೇ ಮೊದಲ ಬಾರಿಗೆ ಈ ಹೆಸರನ್ನು ಕೇಳಿದ್ದು.. ಇದರ ರೆಕ್ಕೆಗಳನ್ನು ಪುಸ್ತಕದಲ್ಲಿ ಇಟ್ಟುಕೊಂಡರೆ ದುಡ್ಡು ಸಿಗುತ್ತದೆಂಬ ಪ್ರತೀತಿಯಂತೆ . ನಾನು ಚಿಕ್ಕವಳಿದ್ದಾಗ ಈ ಕಂದು ಬಣ್ಣದ ದುಂಡು ಹುಳುಗಳು ಕೈಯಲ್ಲಿ ಹಿಡಿದ ತಕ್ಷಣ ಸುರಳಿಯಾಗುತ್ತವಲ್ಲ ಅವುಗಳನ್ನು ಹಿಡಿದರೆ ಅದು ಒಂದು ರೂಪಾಯಿ ನಾಣ್ಯವಾಗುತ್ತದೆಂದು ಹೇಳುತ್ತಿದ್ದರು. ದುಡ್ಡಿನ ಆಸೆಗಾಗಿ ಹಲವರು ಅವುಗಳನ್ನು ಕೈಯಲ್ಲಿ ಎಷ್ಟೊತ್ತಿನವೆರೆಗೂ ಹಿಡಿದುಕೊಂಡು ಕಾಯುತ್ತಿರುತ್ತಿದ್ದರು. ಯಾರ ಕೈಯಲ್ಲಿಯೂ ಹುಳು ನಾಣ್ಯವಾಗಿದ್ದನ್ನು ನಾನು ನೋಡಲಿಲ್ಲ. ಇರಲಿ.. ಏರೋಪ್ಲೇನ್ ಚಿಟ್ಟೆಯ ವಿಷಯಕ್ಕೆ ಬರೋಣ..
ಈ ಚಿಟ್ಟೆಯ ರೆಕ್ಕೆಗಳನ್ನು ಹಿಡಿದರೆ ದುಡ್ಡು ಸಿಗುತ್ತೆ ಅಂತ ಗೊತ್ತಾಯ್ತಲ್ಲ. ಆದರೆ ಅಷ್ಟು ಸುಲಭವಾಗಿ ಸಿಗುವಂತಹದ್ದಲ್ಲ ಈ ಏರೋಪ್ಲೇನ್ ಚಿಟ್ಟೆ. ಇತರೆ ಚಿಟ್ಟೆಗಳಂತೆ ಹೂವಿನ ಮೇಲೆ ಕುಳಿತು ಮಕರಂದ ಹೀರುವಂತಹದ್ದಲ್ಲ. ತುಂಬಾ ಹುಡುಕಾಡಿದ ಮೇಲೆ ಕುಳ್ಳಮ್ಮನ ತೋಟದ ಅತ್ತಿ ಮರದ ಮೇಲೆ ಈ ಚಿಟ್ಟೆಗಳ ಸಂಸಾರವೇ ಕಾಣಿಸುತ್ತದೆ. ಎಲ್ಲ ಬಿಟ್ಟು ಅತ್ತಿ ಮರದ ಮೇಲೆ ಯಾಕೆ?
ಚಿಟ್ಟೆಯಂತೆ ಹಾರುತ್ತಾದರಿಂದ ಇದಕ್ಕೆ ಚಿಟ್ಟಯೆಂದೇ ಹೆಸರೇ ಹೊರತು ಚಿಟ್ಟೆಯ ಯಾವ ಗುಣಲಕ್ಷಣಗಳು ಇದಕ್ಕಿಲ್ಲ. ಮಳೆಹುಳುಗಳನ್ನು ತಿನ್ನುವ ಮಾಂಸಾಹಾರಿ ಚಿಟ್ಟೆಯಿದು . ಜೊತೆಗೆ ಬೇರೆ ಚಿಟ್ಟೆಗಳಂತೆ ಎಲೆಯ ಮೇಲೆ ಮೊಟ್ಟೆ ಇಡದೆ ನೀರಿನಲ್ಲಿ ಮೊಟ್ಟೆಯಿಟ್ಟು, ಆ ಮೊಟ್ಟೆಯಿಂದ ಹೊರ ಬಂದಮರಿಗಳು ನಾಲ್ಕು ವರ್ಷಗಳ ಕಾಲ ನೀರಿನಲ್ಲಿಯ ಕ್ರಿಮಿ ಕೀಟಗಳನ್ನು ತಿಂದು ಬೆಳೆಯುತ್ತವಂತೆ .
ಏರೋಪ್ಲೇನ್ ಚಿಟ್ಟೆಯ ಮರಿ ನೀರಿನಲ್ಲಿ ಮೊಟ್ಟೆಯೊಳಗಿಂದ ಹೊರ ಬರುವ ರಸವತ್ತಾದ ಬಣ್ಣನೆಯನ್ನು ತೇಜಸ್ವಿಯವರ ಬರಹದಲ್ಲೇ ಸವಿಯಬೇಕು.
ಪಾಳು ಬಿದ್ದ ಮನೆಗಳಲ್ಲಿ ಸಾಮಾನ್ಯವಾಗಿ ಬಾವಲಿಗಳು ತಲೆ ಕೆಳಗಾಗಿ ನೇತು ಬಿದ್ದಿರುತ್ತವೆ. ತೇಜಸ್ವಿಯವರ ಬಾಲ್ಯ ಬಲು ಸಂಶೋಧನೆಯಿಂದ ಕೂಡಿತ್ತು. ನೋಡಿದ್ದನ್ನು ಹಾಗೆ ನೋಡಿ ಬಿಡುವವರಲ್ಲ ಅವರು. ಎಂತಹ ಕ್ಲಿಷ್ಟ ಪ್ರಯೋಗವಾದರು ಸರಿ ಒಂದು ಸಣ್ಣ ಎಳೆ ಸಿಕ್ಕರು ಹಿಡಿದುಕೊಂಡು ಅದರ ಇಡೀ ಜನ್ಮ ಜಾಲಾಡಿ ಬಿಡುತ್ತಿದ್ದರು.
ಹೀಗೆ ಒಂದು ದಿನ ಮೈಸೂರಿನ ಪಾಳು ಬಿದ್ದ ಮನೆಯಲ್ಲಿ ಇವರ ಪ್ರವೇಶವಾಗುತ್ತದೆ ತಮ್ಮನೊಟ್ಟಿಗೆ. ತಲೆ ಮೇಲೆತ್ತಿ ನೋಡಿದಾಗ ಸಾಲು ಸಾಲು ದುಂಡು ಕಣ್ಣುಗಳು ದುರಗುಟ್ಟಿಕೊಂಡು ನೋಡಿದ್ದನ್ನು ಕಂಡ ಅಣ್ಣತಮ್ಮ ಪಿಶಾಚಿಗಳೆಂದುಕೊಂಡು ಅಲ್ಲಿಂದ ಹಿಂದೆಯೂ ತಿರುಗಿ ನೋಡದೆ ಓಡಿದ್ದು ಆಯ್ತು..
ಎಷ್ಟೋ ದಿನಗಳವರೆಗೆ ಪಿಶಾಚಿಯ ಗುಂಗಿನಲ್ಲೇ ಇದ್ದ ಅಣ್ಣ ತಮ್ಮರಿಗೆ ದಿನಗಳು ಹೋದಂತೆ ತಾವು ಕಂಡಿದ್ದು ಬಾವಲಿಗಳೆಂಬ ಅರಿವಾಗುತ್ತದೆ.
ತೇಜಸ್ವಿಯವರು ತೋಟ ಮಾಡಲು ಶುರು ಮಾಡಿದ ಮೇಲೆ ಬಾವಲಿಗಳ ಜೊತಗಿನ ಒಡನಾಟ ಹೆಚ್ಚಾಯಿತು. ಹೇಗೆ ಅಂತಿರಾ? ಬೆಳಗಾದ ತಕ್ಷಣ ಮನೆಯ ವರಾಂಡದಲ್ಲಿ ಉಚ್ಚಿಷ್ಠಗಳು, ರಕ್ತದ ಕಲೆಗಳು, ಎಲುಬುಗಳು ಕಾಣಿಸತೊಡಗಿದವು. ಕತ್ತಲಲ್ಲಿ ಬೇಟೆಯಾಡುವ ಬಾವಲಿಗಳಲ್ಲದೆ ಇನ್ನಾರಾಗಿರಲು ಸಾಧ್ಯ.
ಈ ಬಾವಲಿಗಳು ರಾತ್ರಿ ಸಂಚಾರಿಗಳು. ಕತ್ತಲಲ್ಲಿ ವೇಗವಾಗಿ ಹಾರುವ ಈ ಬಾವಲಿಗಳ ರಹಸ್ಯವನ್ನು ಕಂಡು ಹಿಡಿಯಲು ಹಲವು ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರಂತೆ. ಚೂರು ಬೆಳಕಿಲ್ಲದಿದ್ದರು ಯಾವುದೇ ಅಡೆತಡೆಯಿಲ್ಲದೆ ಸಂಚರಿಸುವ ಈ ಸ್ತನಿಗಳು ವಿಜ್ಞಾನಕ್ಕೆ ಸವಾಲೊಡ್ಡಿದ್ದವು.
ಒಮ್ಮೆ ಒಬ್ಬ ಪಾದ್ರಿ (1893 ರಲ್ಲಿ) ಈ ಬಾವಲಿಗಳ ಕಣ್ಣಿಗೆ ಮೇಣ ಮೆತ್ತಿ ತಂತಿ ದಾರಗಳಿಂದ ತುಂಬಿದ ಕೋಣೆಯಲ್ಲಿ ಹಾರಲು ಬಿಟ್ಟನಂತೆ. ಏನಾಗಿರಬಹುದು? ಬಾವಲಿಗಳೆಲ್ಲ ದಾರಗಳಲ್ಲಿ ಸಿಕ್ಕು ಹಾಕಿಕೊಂಡು ಹಾರಲಾಗದೆ ನೆಲಕ್ಕೆ ಬಿದ್ದವೆಂದು ಯೋಚಿಸುತ್ತಿದ್ದೀರಾ?? ಇಲ್ಲ! ಒಂದು ಬಾವಲಿಯೂ ದಾರದಲ್ಲಾಗಲೀ ತಂತಿಯಲ್ಲಾಗಲೀ ಸಿಕ್ಕು ಹಾಕಿಕೊಳ್ಳಲಿಲ್ಲ. ಈ ಪ್ರಯೋಗದಿಂದ ಬಾವಲಿಗಳು ತಮ್ಮ ಕಣ್ಣಿನ ಸಹಾಯವಿಲ್ಲದೆ ದೇಹದ ಬೇರೆ ಯಾವುದೋ ಇಂದ್ರೀಯದ ಗ್ರಹಣೆಯಿಂದ ಹಾರುತ್ತವೆಂದು ಪಾದ್ರಿ ಘೋಷಿಸಿದ.
ಇದರಿಂದ ಪ್ರೇರಿತನಾದ ಮತ್ತೊಬ್ಬ ವಿಜ್ಞಾನಿ ಚಾರ್ಲ್ಸ್ ಜೂರ್ನೆ ಎಂಬಾತ ಇಂತದ್ದೇ ಪ್ರಯೋಗ ಮಾಡಿ ಬಾವಲಿಗಳು ಕಿವಿಯ ಸಹಾಯದಿಂದ ನೋಡುತ್ತವೆ ಎಂದು ಘೋಷಿಸಿದ.
ನಿಶಾಚರ ಪ್ರಾಣಿಗಳ ಬಗ್ಗೆ ತಲೆ ಕೆಡಿಸಿಕೊಂಡ ಕೂತ ಈ ಇಬ್ಬರನ್ನು ಜನ ಮೂರ್ಖರೆಂದು ಜರಿದರು. ಈ ಇಬ್ಬರನ್ನು ಜರಿಯುತ್ತ ಇನ್ನೊಬ್ಬ ಬಾವಲಿಗಳು ಸ್ಪರ್ಶ ಶಕ್ತಿಯಿಂದ ಹಾರಾಡುತ್ತವೆ ಎಂದು ಹೇಳಿ ಇಬ್ಬರ ಪ್ರತಿಪಾದನೆಗಳನ್ನು ಗಾಳಿಗೆ ತೂರಿ ಬಿಟ್ಟ.
ಅದಾದ ಮೇಲೆ 150 ವರ್ಷಗಳ ನಂತರ ಬಾವಲಿಗಳ ಮೇಲೆ ಮತ್ತೆ ಸಂಶೋಧನೆ ಶುರುವಾಯ್ತು. ನಂತರ ಜೆಗ್ರಾಫ್ ಎಂಬಾತ ಬಾವಲಿಗಳು ಎದುರಿಗಿರುವ ವಸ್ತುಗಳಿಂದ ಶಬ್ದ ಪ್ರತಿಫಲಿಸುವುದನ್ನು ಗ್ರಹಿಸಿ ಹೊರ ಪ್ರಪಂಚವನ್ನು ಗ್ರಹಿಸುತ್ತವೆ ಎಂದ. ಈ ಎಲ್ಲ ಸಂಶೋಧನೆಗಳ ಸವಿವರವಾದ ಮಾಹಿತಿ ಏರೋಪ್ಲೇನ್ ಚಿಟ್ಟೆ ಮತ್ತು ಇತರೆ ಕತೆಗಳು ಪುಸ್ತಕದಲ್ಲಿದೆ.
ಮನೆಯಲ್ಲಿ ಕರೆಂಟ್ ಹೋದಾಗ ನಾವು ಶಬ್ದ ಬರುವ ಮೂಲದ ಆಧಾರದ ಮೇಲೆ ನಡೆಯುತ್ತೇವಲ್ಲವೇ .. ಹಾಗೆ ಬಾವಲಿಗಳು ಸಹ.. ಆದರೆ ಬಾವಲಿಗಳ ಗ್ರಹಣ ಶಕ್ತಿ ನಮಗಿಂತ ಎಷ್ಟೋ ಪಾಲು ಮೇಲು. ಅಲ್ಲಿಗೆ ಮುಗಿಯುತೆಂದು ತಿಳಿಯದಿರಿ.
ಜೆಗ್ರಾಫನ ಪ್ರಯೋಗದ ಆಧಾರದ ಮೇಲೆ ಬಾವಲಿಗಳನ್ನು ಶಬ್ದ ತರಂಗಗಳನ್ನು ಪತ್ತೆ ಮಾಡುವ ಯಂತ್ರದ ಬಳಿಗೆ ತಂದರು. ಆಗ ಗೊತ್ತಾಗಿದ್ದು ಗಡಿಯಾರದ ಟಿಕ್ ಟಿಕ್ ಸದ್ದಿನಂತಹ ಸದ್ದು ಬಾವಲಿಗಳಿಂದ ಉತ್ಪತ್ತಿಯಾಗುತ್ತದೆಂದು. ನೋಡಿ ಬಾವಲಿಗಳು ಎಷ್ಟು ಚಾಣಾಕ್ಷ. ಈ ತರಹದ ಶಬ್ದ ಹೊರಡಿಸಿ ಅದರ ಪ್ರತಿಫಲನಗಳಿಂದ ತಮ್ಮ ಸುತ್ತಣ ಪರಿಸರವನ್ನು ಅರಿಯುತ್ತವೆ.
ಕತ್ತಲಲ್ಲಿ ಸ್ಥಾಯಿಯಾಗಿ ನಿಂತಿರುವ ಮರಗಳನ್ನು ಅದು ಹೇಗೊ ಶಬ್ದ ತರಂಗಗಳನ್ನು ಹೊರಡಿಸಿ ಪತ್ತೆ ಮಾಡುತ್ತದೆ ಸರಿ… ತನ್ನಷ್ಟೇ ವೇಗದಲ್ಲಿ ಹಾರಾಡುವ ಸೊಳ್ಳೆ, ಪಕ್ಷಿಗಳನ್ನು ಹೇಗೆ ಹಿಡಿಯುತ್ತದೆ ಬಾವಲಿ? ಅದಕ್ಕೂ ಒಂದು ಪ್ರಯೋಗವಾಯ್ತು!! ನಾನಿಲ್ಲಿ ಎಲ್ಲವನ್ನು ಹೇಳಿ ಪುಸ್ತಕದ ಸ್ವಾರಸ್ಯ ಹಾಳು ಮಾಡುವುದಿಲ್ಲ.
ಮುಂದೆ ರೇಷ್ಮೆ ಹುಳುಗಳು ಗೂಡು ಕಟ್ಟುವ ಸೊಬಗಿನ ಕತೆ, ನಂತರ ಮುಳ್ಳು ಹುಳುವೊಂದು ಮುಳ್ಳಿನ ವೇಷ ಧರಿಸಿ ಮುಳ್ಳುಗಳ ಮಧ್ಯೆ ಮುಳ್ಳಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕತೆ, ಕೆಂಭೂತದಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಹೋರಾಡಿದ ಹುಳುಕಡ್ಡಿ, ಹಳ್ಳದ ಚಿಟ್ಟೆಮರಿಗಳ ಕತೆಗಳು.
ನೀವೆಂದಾದರು ಹಾವು ಕಪ್ಪೆಯನ್ನು ನುಂಗುವುದನ್ನು ಪ್ರತ್ಯಕ್ಷ ನೋಡಿದ್ದಿರಾ? ನಾನು ನೋಡಿದ್ದೆನೆ. ಚಿಕ್ಕವಳಿದ್ದಾಗ ಶೃಂಗೇರಿ ಪ್ರವಾಸಕ್ಕೆ ಹೋದಾಗ ಹಾವೊಂದು ಗರ್ಭಿಣಿ ಕಪ್ಪೆಯನ್ನು ನುಂಗಿ ಬಿಟ್ಟಿತ್ತು. ನಂತರ ಅದಕ್ಕೆ ನುಂಗಲು ಆಗದ ಉಗುಳಲೂ ಆಗದ ಒದ್ದಾಟ. ನೆರೆದವರಿಗು ಏನು ಮಾಡಬೇಕೆಂದು ತೋಚದೆ ಹಾವು ಒದ್ದಾಡುವುದನ್ನು ನೋಡುತ್ತ ನಿಂತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಹಾವು ಸತ್ತು ಹೋಯಿತೆಂದು ಯಾರೋ ಹೇಳಿದ ನೆನಪು.
ಅಂತಹದೇ ಒಂದು ಪ್ರಕರಣ ತೇಜಸ್ವಿಯವರ ಕಣ್ಣ ಮುಂದೆ ನಡೆಯುತ್ತದೆ. ಇಲ್ಲಿ ನೀರ ಹಾವು ಕಪ್ಪೆಯನ್ನು ಗಂಟಲಿನವರೆಗೆ ನುಂಗುತ್ತದೆ. ನಂತರ ಕಪ್ಪೆ ಮುಂದೆ ಹೋಗುತ್ತಲೆ ಇಲ್ಲ! ಹಾವಿನ ಪರಿಸ್ಥಿತಿ ಏನಾಗಿರಬಹುದು ಯೋಚಿಸಿ.. ಅಂತು ಇಂತು ಹಾವು ಅದ್ಹೇಗೋ ಇದ್ದ ಬದ್ದ ಶಕ್ತಿಯನ್ನೆಲ್ಲ ಹಾಕಿ ಕಪ್ಪೆಯನ್ನು ನುಂಗುವಲ್ಲಿ ಸಫಲವಾಯಿತು. ಜೀವನ ಚಕ್ರ ಎನ್ನಿರಿ ಅಥವಾ ಕರ್ಮ ಎನ್ನಿರಿ.. ಹಾವಿಗೆ ಇನ್ನೊಂದು ಕಷ್ಟ ಕಾದಿತ್ತು. ಎಲ್ಲಿಂದಲೋ ಪ್ರತ್ಯಕ್ಷವಾದ ಕೆಂಬೂತಗಳು ಹಾವಿನ ಬಾಲನ್ನು ಇಂಚಿಂಚಾಗಿ ತಿನ್ನಲು ಶುರು ಮಾಡಿದವು. ಹಾವಿಗೆ ಪ್ರಾಣಸಂಕಟ. ಸರ ಸರ ಎಂದು ಓಡಿ ಹೋಗಲು ಹೊಟ್ಟೆಯೊಳಗಿನ ಕಪ್ಪೆಯ ಭಾರ! ಕೊನೆಗೆ ಏನಾಯಿತು ಅಂತೀರಾ.. ಜೀವಂತವಾಗಿ ಹಾವಿನ ಬಾಯಿಯಲ್ಲಿ ಸ್ವಾಹಾ ಆದ ಕಪ್ಪೆ ಅಷ್ಟೇ ಜೀವಂತವಾಗಿ ಹೊರ ಬರುತ್ತದೆ!
ಎಲ್ಲಿಯಾದರು ಹಾವು ಸಿಕ್ಕರೆ ಹಾವಿನ ಮೂಗಿನ ಕೆಳಗಿರುವ ಎರಡು ಹೊಳ್ಳೆಗಳನ್ನೊಮ್ಮೆ ನೋಡಿ. ವಿಜ್ಞಾನಿಗಳು ಹಾವಿಗೆ ಕಿವಿಯಿಲ್ಲದ ಕಾರಣ ಈ ಹೊಳ್ಳೆಗಳಿಂದಲೇ ಶಬ್ದ ಗ್ರಹಿಸುತ್ತವೆ ಎಂದರಂತೆ. ಆದರೆ ಪ್ರಯೋಗಗಳ ಮುಖಾಂತರ ಈ ಹೊಳ್ಳೆಗಳು ಕಣ್ಣು ಅಲ್ಲ, ಕಿವಿಯೂ ಅಲ್ಲ, ಮೂಗು ಅಲ್ಲ, ಅದೊಂದು ಮೂರನೆಯ ಇಂದ್ರೀಯ ಎಂದು ಪತ್ತೆ ಮಾಡಲಾಯ್ತು. ನಮಗಿಲ್ಲ ಬಿಡಿ ಆ ಇಂದ್ರೀಯ…
ಇನ್ನು ತೇಜಸ್ವಿಯವರ ಮನೆಯ ಪಕ್ಕ ಹರಿಯುತ್ತಿದ್ದ ನದಿಯ ಕತೆ. ನಾವು ನೀವಾದರೆ ಝರಿಯನ್ನು ನೋಡಿ ಒಂದೆರಡು ಫೋಟೊ ತೆಗೆದು ಸಂಭ್ರಮಿಸುತ್ತೀವೆನೋ ಆದರೆ ತೇಜಸ್ವಿಯವರ ನಮಗಿಂತ ನೂರು ಹೆಜ್ಜೆ ಮುಂದೆ. ಝರಿಯಲ್ಲಿ ಬರುತ್ತಿದ್ದ ನೀರಿನ ಪ್ರಮಾಣವನ್ನು ಅಳೆಯಲೆಂದು ಬಕೆಟಿನಲ್ಲಿ ನೀರನ್ನು ಹಿಡಿದು ನಿಮಿಷಕ್ಕೆ 30 ಲೀಟರ್ ಕೊಡುತ್ತದೆ ಎಂದು ಪತ್ತೆ ಮಾಡುತ್ತಾರೆ. ಅಷ್ಟೇ ಅಲ್ಲ.. ಈ ಝರಿಯ ಮೂಲವನ್ನು ಪತ್ತೆ ಮಾಡಲು ಗೆಳೆಯನೊಂದಿಗೆ ನೀರು ಹರಿಯುವ ದಾರಿ ಹಿಡಿದುಕೊಂಡು ಹೋಗುತ್ತಾರೆ ಎಂದರೆ ನೀವು ನಂಬುತ್ತೀರಾ? ತೇಜಸ್ವಿಯವರನ್ನು ಚೆನ್ನಾಗಿ ಬಲ್ಲ ಓದುಗರಿಗೆ ಇದೇನು ಹೊಸದಾಗಿ ಕಾಣುವುದಿಲ್ಲ. ಅವರ ವ್ಯಕ್ತಿತ್ವವೇ ಅಂತದ್ದು.. ತಮ್ಮ ಸುತ್ತಲಿನ ಪರಿಸರವನ್ನು ಸೂಕ್ತವಾಗಿ ಅಭ್ಯಸಿಸುವ ಗುಣ.
ನಂತರ ಹಲ್ಲಿಯ ಬಾಲದ ಪ್ರಸಂಗವೊಂದು ಬರುತ್ತದೆ. ಅದರಲ್ಲಿ ಹೆಂಡತಿಯೊಬ್ಬಳು ಗಂಡನ ಮೂಗು ಕಚ್ಚಿದ ಹಾಸ್ಯ ಕತೆಯೊಂದಿದೆ. ಆ ವ್ಯಕ್ತಿ ಹೆಂಡತಿ ಕಚ್ಚಿದ ಮೂಗನ್ನು ಕೈಯ್ಯಲ್ಲಿ ಹಿಡಿದುಕೊಂಡು ಡಾಕ್ಟರ್ ಹತ್ತಿರ ಬಂದಿದ್ದನಂತೆ ಜೋಡಿಸಿ ಎಂದು…
ಹಲ್ಲಿ ಬಾಲ ತುಂಡಾದರು ಮತ್ತೆ ಮತ್ತೆ ಬೆಳೆಯುವುದು ನಿಮಗೆಲ್ಲ ಗೊತ್ತೇ ಇರಬಹುದು. ಹಾಗೆ ಏಡಿಯು ಸಹ. ಸಮಯಕ್ಕೆ ತಕ್ಕಂತೆ ಕಾಲನ್ನು ಕಳಚಿ ಮತ್ತೆ ಜೋಡಿಸಿಕೊಳ್ಳುತ್ತದೆ. ಆಮೆಯ ದೇಹದಿಂದ ಕತ್ತನ್ನು ಬೇರ್ಪಡಿಸಿದರು ಎಷ್ಟೋ ಹೊತ್ತಿನವರೆಗೆ ಆಮೆಯ ತಲೆ ಜೀವಂತವಾಗಿತ್ತಂತೆ. ಎಷ್ಟು ನಿಚ್ಚಳ ಜೀವಂತವೆಂದರೆ ಬಾಯಿಯಲ್ಲಿದ್ದ ಗಾಳ ಬಿಡಿಸಿಕೊಳ್ಳಲು ಬಂದ ಮನುಷ್ಯನ ಕೈ ಕಚ್ಚುವಷ್ಟು ಜೀವಂತ.. ಹೀಗೆ ನಿಸರ್ಗದಲ್ಲಿ ಒಂದಷ್ಟು ಪ್ರಾಣಿಗಳು ತಮ್ಮ ಅಂಗಾಂಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸುವ, ಜೋಡಿಸಿಕೊಳ್ಳುವ ಶಕ್ತಿ ಹೊಂದಿವೆ.
ಅತಿ ಕಡಿಮೆ ಜನಗಳಿಗೆ ಗೊತ್ತಿರುವ ಮಲಬಾರ್ ಟ್ರೋಜನ್ ಹಕ್ಕಿಯ ಆವಿಷ್ಕಾರವಾಗುತ್ತದೆ ಹರೀಶನ ತೋಟದಲ್ಲಿ. ಅಪರೂಪಕ್ಕೆ ಸಿಕ್ಕು ಬಾಂಧವ್ಯ ಬೆಳೆಸಿಕೊಂಡ ಇನ್ನೊಂದು ಹಕ್ಕಿ ಇವರಿಗೆ ಗೊತ್ತಿಲ್ಲದಂತೆ ಇವರಿಂದಲೇ ಸತ್ತು ಹೋಗುತ್ತದೆ. ಎಲ್ಲರು ಮಮ್ಮಲ ಮರುಗಿ ಇನ್ನು ಮೇಲೆ ಯಾವ ಪ್ರಾಣಿ ಪಕ್ಷಿಯನ್ನು ಹಚ್ಚಿಕೊಳ್ಳಬಾರದು ಎಂದು ತೀರ್ಮಾನಿಸುತ್ತಾರೆ. ಆದರು ಮನಸು ಕೇಳಬೇಕಲ್ಲ.
ಜೇಡ ಬಲೆ ಹೆಣೆಯುವ ಕತೆಯೊಂದಿಗೆ ಪುಸ್ತಕ ಕೊನೆಗೊಳ್ಳುತ್ತದೆ.
ಅನುಕೂಲವಾದಾಗ ಪುಸ್ತಕ ಕೊಂಡು ಓದಿ. ನಾನಂತೂ ಈ ಪುಸ್ತಕ ಓದಿದ ಮೇಲೆ ಸುತ್ತಲಿನ ಗಿಡ, ಪಕ್ಷಿ, ಕ್ರಿಮಿ ಕೀಟಗಳನ್ನು ಗಮನಿಸಲು ಪ್ರಾರಂಭಿಸಿದ್ದೇನೆ. ನಾವು ಮನುಷ್ಯರು ಬಲು ಅಹಂಕಾರಿಗಳು. ಚಿಕ್ಕ ಇರುವೆ, ಮಳೆ ಹುಳ, ನೊಣಗಳೆಲ್ಲ ಕ್ಷುಲ್ಲಕ ನಮಗೆ. ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಕ್ಕೂ ಅದರದೇ ಆದ ವಿಶೇಷತೆಯಿದೆ. ಗಮನಿಸಲು ತಾಳ್ಮೆ, ಸೂಕ್ಷ್ಮತೆ, ಮತ್ತು ಅವಿಷ್ಕಾರಿ ಮನಸು ಬೇಕಷ್ಟೆ.
Hello Sanjota, can you a translator to your site.