ಮುನಿಶಾಮಿ ಮತ್ತು ಮಾಗಡಿ ಚಿರತೆ(Munishaami mattu magadi chirate)- ಪೂರ್ಣಚಂದ್ರ ತೇಜಸ್ವಿ
ಕಾಡಿನ ಕಥೆಗಳು ಭಾಗ-೪ ಎಂಬ ಅಂಡಸ್ರೆನ್ ಬರೆದ ಕತೆಗಳ ಭಾವಾನುವಾದವೇ ಈ ಪುಸ್ತಕ.
ಈ ಪುಸ್ತಕದಲ್ಲಿ ನಾಲ್ಕು ಘಟನೆಗಳು ಬರುತ್ತವೆ. ಎಲ್ಲವು ಪ್ರಾಣಿ ಬೇಟೆಗೆ ಸಂಬಂಧಿಸಿದ್ದು.
ಮುನಿಶಾಮಿ ಮತ್ತು ಮಾಗಡಿ ಚಿರತೆ;
ಬೆಂಗಳೂರಿನ ವಿವರಣೆಯೊಂದಿಗೆ ಶುರುವಾಗುತ್ತದೆ ಈ ಘಟನೆ. ಹಾಗೆ ಹಿಂದಿದ್ದ ಬೆಂಗಳೂರು ಹಸಿರಿನಿಂದ ಕೂಡಿ ಅದೆಷ್ಟು ಚಂದವಾಗಿತ್ತು, ಅಪ್ಯಾಯಮಾನವಾದ ಹವಾಗುಣವಿತ್ತು ಎಂಬುದನ್ನು ಓದಿದರೆ ಇಂದಿನ ಬೆಂಗಳೂರಿನ ಪರಿಸ್ತಿತಿಯ ಬಗ್ಗೆ ಖೇದವಾಗುತ್ತದೆ. ಇರಲಿ ಕಥೆ ಮುಂದುವರೆಸೋಣ.
ಬೆಂಗಳೂರಿನ ಪಶ್ಚಿಮ ದಿಕ್ಕಿನಲ್ಲಿರುವ ಮಾಗಡಿ ಬೆಟ್ಟಗಳ ಶ್ರೇಣಿಯಲ್ಲಿ ಅಡಗಿ ಕುಳಿತುಕೊಂಡ ಚಿರತೆ ಮತ್ತು ತನ್ನನ್ನು ತಾನು ಶಿಕಾರಿಗಳ ಗೈಡ್ ಎಂದು ಕರೆದುಕೊಳ್ಳುವ ಮುನಿಶಾಮಿ ಈ ಕಥೆಯ ಮುಖ್ಯ ಪಾತ್ರಗಳು. ಶಿಕಾರಿಗಳ ದುರ್ಬಲತೆಯನ್ನು ಉಪಯೋಗಿಸಿಕೊಂಡು ಮುನಿಶಾಮಿ ಅವರಿಂದ ದುಡ್ಡು ಕೀಳುತ್ತಿರುತ್ತಾನೆ ಇಲ್ಲದ ಚಿರುತೆಯ ಆಸೆ ತೋರಿಸಿ. ಇವನ ಮೋಸಕ್ಕೆ ಬಲಿಯಾದವರು ಅದೆಷ್ಟೋ ಜನರು ಅವರಲ್ಲಿ ಲೇಖಕರು ಕೂಡ ಒಬ್ಬರು. ಪಿಂಜರಾಪೊಲು ದೊಡ್ದಿಗಳಲ್ಲಿ ಯಾರದೋ ಕತ್ತೆಯನ್ನು ತನ್ನ ಕತ್ತೆಯೆಂದು ಹೇಳಿ ಅದಕ್ಕೆ ಒಂದೋ ಎರಡೋ ರುಪಾಯಿ ತೆತ್ತು ಕಾಡಿನಲ್ಲಿ ಕಟ್ಟುತ್ತಾನೆ ಮುನಿಶಾಮಿ.ಮೂರೂ ದಿನ ಕಾಡಿನಲ್ಲಿ ಅನ್ನ ನೀರಿಲ್ಲದೆ ಬಳಲಿದ ಕತ್ತೆಯನ್ನು ತಾನೇ ಚಿರತೆಯ ಶೈಲಿಯಲ್ಲಿ ಕೊಂದು ನಂತರ ಅದನ್ನು ಶಿಕಾರಿಗಳಿಗೆ ಚಿರತೆ ಕೊಂದಿದ್ದೆಂದು ತೋರಿಸಿದಾಗ ಪೆದ್ದ ಶಿಕಾರಿಗಳು ಇದ್ದರು ಇರಬಹುದು ಎಂದು ನಂಬುತ್ತಾರೆ. ಒಂದು ಸಾರಿ ಮೋಸ ಹೋದ ನಂತರ ಲೇಖಕರಿಗೆ ಇವನ ಸತ್ಯ ತಿಳಿಯುತ್ತದೆ. ಆದರೆ ಇವನ ನಿಜ ರೂಪವನ್ನು ಬಯಲು ಮಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ನಿಜವಾಗಿಯೂ ಚಿರತೆಯೊಂದು ಮಾಗಡಿ ಬಳಿ ಸುಳಿದಾಡುತ್ತ ಹಸುಗಳನ್ನು ತಿನ್ನುತ್ತಿರುತ್ತದೆ. ಲೇಖಕರು ತಮ್ಮ ತಂತ್ರ ಉಪಯೋಗಿಸಿ ಚಿರತೆಯನ್ನು ಕೊಂದು ಅದರ ಕಾಟದಿಂದ ಜನರಿಗೆ ಮುಕ್ತಿ ಕೊಡುತ್ತಾರೆ.
ಅಲ್ಲಾಭಕ್ಷಿಯ ಪುಂಡುಕರಡಿ;
ಈ ಕತೆ ದಕ್ಷಿಣ ಭಾರತದ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕರಡಿಗೆ ಸಂಭಂದಿಸಿದ್ದು (ಹಿಂದಿನ ಕಾಲದಲ್ಲಿ).
ಈ ಕರಡಿಯ ಬಗ್ಗೆ ಅನೇಕ ಕತೆಗಳು ಹುಟ್ಟಿಕೊಂಡಿರುತ್ತವೆ ಹಳ್ಳಿಗರಲ್ಲಿ. ಹುಚ್ಚು ಕರಡಿ ಎಂದೋ, ಹೆಣ್ಣು ಕರಡಿ ಎಂದೋ ಹೀಗೆ ಹಲವು. ಆದರೆ ಅತಿ ವಿಚಿತ್ರವಾದ ಕತೆಯೊಂದಿತ್ತು. ಅದು ಈ ಕರಡಿಯ ಲೈಂಗಿಕ ಜೀವನಕ್ಕೆ ಸಂಭದಿಸಿದ್ದು. ಒಂದು ವರ್ಷದ ಹಿಂದೆ ತನ್ನ ಜೊತೆಗಾತಿ ಕರಡಿ ಸಿಗದೇ ಕಾಡು ಮೇಡು ಸುತ್ತಿದ ಈ ಕರಡಿ ರೈತನ ಮಗಳನ್ನು ಮೋಹಿಸಿ ಬಿಟ್ಟಿತಂತೆ. ಅವಳು ಒಬ್ಬಳೇ ಇರುವಾಗ ಸಂಚು ಹಾಕಿ ಅವಳನ್ನು ಹೊತ್ತೊಯ್ದಾಗ ಊರ ಜನರೆಲ್ಲಾ ಸೇರಿ ಕರಡಿಯಿಂದ ಆ ಹುಡುಗಿಯನ್ನು ಪಾರು ಮಾಡಿದರಂತೆ. ಸಿಟ್ಟಿಗೆದ್ದ ಕರಡಿ ಅಂದಿನಿಂದ ಇಂದಿನವರೆಗೂ ಕೋಪಿಷ್ಟವಾಗಿ ಸಿಕ್ಕ ಸಿಕ್ಕ ಮನುಷ್ಯರ ಮೇಲೆಲ್ಲಾ ಆಕ್ರಮಣ ಮಾಡತೊಡಗಿದೆ ಅಂತೆ.
ಈ ಕರಡಿಯ ಮೂಲಸ್ಥಾನ ನಾಗವಾರ ಬೆಟ್ಟಗಳು. ಬೆಟ್ಟಗಳ ಹತ್ತಿರದ ಹೊಲಗಳಲ್ಲಿ ರೈತರು ಕೆಲಸ ಮಾಡುವಾಗ ಈ ಕರಡಿ ಅವರ ಮೇಲೆ ಆಕ್ರಮಣ ಮಾಡುತ್ತಿದುದು ಉಂಟು. ಲೇಖಕರ ಸ್ನೇಹಿತ ಅಲ್ಲಾಭಕ್ಷಿ ಎಂಬಾತ ಮುಸ್ಲಿಮ ಸಂತನೊಬ್ಬನ ಗೋರಿಯನ್ನು ಗುಡಿಯನ್ನಾಗಿ ಮಾಡಿ ಅದರ ಪಕ್ಕದಲ್ಲೇ ಮನೆ ಮಾಡಿಕೊಂಡು ಕಾಯುತ್ತಿರುತ್ತಾನೆ. ಈ ಗುಡಿ ಇದ್ದುದು ನಾಗವಾರ ಬೆಟ್ಟಗಳ ಹತ್ತಿರ. ಜೊತೆಗೆ ಗುಡಿಯ ಸುತ್ತಲು ಅತ್ತಿ, ಆಲ, ಬಸರಿ ಮರಗಳು. ಕರಡಿ ಈ ಮರಗಳ ಹಣ್ಣುಗಳನ್ನು ತಿನ್ನಲು ದಿನವು ಅಲ್ಲಾಭಕ್ಷಿಯ ಗುಡಿಯ ಹತ್ತಿರ ಬರತೊಡಗಿತು. ಒಂದು ರಾತ್ರಿ ಮನೆಯಿಂದ ಆಚೆ ಬಂದ ಅಲ್ಲಾಭಕ್ಷಿಯ ಮಗನನ್ನು ಈ ಕರಡಿ ಸಾಯಿಸಿ ಬಿಡುತ್ತದೆ ಮಾರಣಾಂತಿಕವಾಗಿ. ಅಲ್ಲಾಭಕ್ಷಿಯ ವೇದನೆಯ ಪತ್ರ ನೋಡಿ ಲೇಖಕರು ಕರಡಿ ಹೊಡೆಯಲೆಂದು ಬಂದಿಳಿಯುತ್ತಾರೆ. ಲೇಖಕರು ಕರಡಿಯನ್ನು ಕೊಂದ ರೀತಿ ರೋಮಾಂಚಕವಾಗಿದೆ.
ಬಾಳೆತೋಟದ ಸ್ವಾಮಿ;
ನೀಲಗಿರಿ ಪರ್ವತಗಳ ತಪ್ಪಲಿನಲ್ಲಿದ್ದ ಉದಕಮಂಡಲ ಊರಿನಿಂದ ಹನ್ನೆರಡು ಮೈಲು ದೂರದಲ್ಲಿದ್ದ ಬಾಳೆತೋಟ ಈ ಘಟನೆ ನಡೆದ ಜಾಗ. ಸಾಧುವೊಬ್ಬ ದಾರಿಗುಂಟ ಹೋಗುವಾಗ ವಿಶ್ರಾಂತಿಗೆಂದು ಈ ಬಾಳೆತೋಟಕ್ಕೆ ಬಂದು ಒಡೆಯ ರೈತನಿಗೆ ತನಗೆ ಕೊಂಚ ಜಾಗ ಕೊಡುವಂತೆ ಕೇಳುತ್ತಾನೆ. ರೈತ ಅತಿ ಸಂತೋಷದಿಂದ ತನ್ನ ಗುಡಿಸಲು ಪಾವನವಾಯಿತೆಂದು ತಿಳಿದು ಆತನಿಗೆ ಬಾಳೆ ಹಣ್ಣಿನ ರಸಾಯನ ಕೊಟ್ಟು ಗೌರವ ಆದರಗಳಿಂದ ನೋಡಿಕೊಳ್ಳುತ್ತಾನೆ. ಇವನ ಸತ್ಕಾರ ಕಂಡು ಸ್ವಾಮಿ ಅಲ್ಲಿಯೇ ತಳ ಉರುತ್ತಾನೆ ಗುಡಿಸಲು ಕಟ್ಟಿಕೊಂಡು. ರೈತನಿಗೆ ಪ್ರಾಣಸಂಕಟ ಹೋಗು ಎನ್ನುವ ಹಾಗು ಇಲ್ಲ, ಇಟ್ಟುಕೊಳ್ಳುವ ಹಾಗು ಇಲ್ಲ. ಇದಲ್ಲದೆ ಈ ಗುಡಿಸಲಿನ ಸುತ್ತ ಮುತ್ತ ರಾತ್ರಿಯೆಲ್ಲಾ ಹುಲಿ ಓಡಾಡುತ್ತಿರುತ್ತದೆ ಗರ್ಜಿಸುತ್ತ. ಸ್ವಾಮಿಯ ವಿಚಿತ್ರ ನಡುವಳಿಕೆಯಿಂದ ಊರ ಜನರಿಗೆಲ್ಲ ಅನುಮಾನ ಶುರುವಾಗುತ್ತದೆ, ಸ್ವಾಮಿಯೇ ಹುಲಿಯಾಗಿ ಪರಿವರ್ತಿತನಾಗುತ್ತಿದ್ದನೆಂದು. ಊರಿನ ಕೆಲವರು ಗೂಢಚರ್ಯೆ ಮಾಡಲು ಪ್ರಯತ್ನಿಸಿದರೂ ಸ್ವಾಮಿಯ ಭಯದಿಂದ ಅದು ಸಾಧ್ಯವಾಗುವುದಿಲ್ಲ. ಉದಕಮಂಡಲದಿಂದ ಮಿತ್ರನೊಬ್ಬ ಕಾಗದ ಬರೆದು ಈ ಘಟನೆಯನ್ನು ವರದಿ ಮಾಡಿದಾಗ ಲೇಖಕರು ಈ ಜಾಗಕ್ಕೆ ತೆರಳುತ್ತಾರೆ ಊರ ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸ್ವಾಮಿ ಮತ್ತು ಹುಲಿ ಇಬ್ಬರನ್ನು ಸದೆ ಬಡಿಯಲು. ಸ್ವಾಮಿ ನಿಜವಾಗಿಯೂ ಹುಲಿಯಾಗುತ್ತಿದ್ದನಾ ಅಥವಾ ನಿಜವಾದ ಹುಲಿಯೇ ಊರ ಜನರನ್ನು ಹೆದರಿಸುತ್ತಿತ್ತಾ.. ಕತೆ ಬಲು ರೋಚಕವಾಗಿದೆ ಮುಂದೆ ಓದಿದಂತೆಲ್ಲ 🙂
ರಾಂಪುರದ ಒಕ್ಕಣ್ಣ;
ಕೊಯಮತ್ತೂರು ಜಿಲ್ಲೆಯ ಉತ್ತರಭಾಗ ದಟ್ಟವಾದ ಕಾಡುಗಳಿಂದಲೂ, ಕಿಕ್ಕಿರಿದ ಪರ್ವತಗಳಿಂದಲೂ ಕೂಡಿದೆ. ಅರ್ಧ ಕೊಯಮತ್ತೂರು ಜಿಲ್ಲೆಯನ್ನು ಥರ ಥರ ನಡುಗಿಸಿದ ನರಭಕ್ಷಕ ಹುಲಿಯ ಸ್ವಾರಸ್ಯಕರ ಕತೆ.
ರಾಂಪುರದ ನರಭಕ್ಷಕ ಕಾವೇರಿ ನದಿ ದಡದಲ್ಲಿರುವ ಸುಮಾರು ಆರು ಸಾವಿರ ಎತ್ತರದ ಪೋನ್ನಚಿಮಲೈ ಬೆಟ್ಟಗಳ ಕಡೆಯಿಂದ ಬಂತು ಎಂದು ಹೇಳುತ್ತಾರೆ. ಮೊದಲಿಗೆ ಮೇಯಲು ಹೋದ ಎಮ್ಮೆ ದನಗಳನ್ನು ತಿನ್ನುತ್ತಿದ್ದ ಈ ಹುಲಿ ಬರು ಬರುತ್ತಾ ಮನುಷ್ಯರನ್ನು ತಿನ್ನಲು ಶುರು ಮಾಡಿತು. ಬೇಸತ್ತ ಹಳ್ಳಿ ಜನರು ಹುಲಿಯನ್ನು ಜಿನ್ ಕತ್ತರಿಯಿಂದ ಸಾಯಿಸುವ ಯೋಜನೆ ಮಾಡಿರುತ್ತಾರೆ. ಆದರೆ ಈ ಪ್ರಯತ್ನದಲ್ಲಿ ಹುಲಿ ಸಾಯದೆ ಕೇವಲ ತನ್ನ ಒಂದು ಕಣ್ಣನ್ನು ಮಾತ್ರ ಕಳೆದುಕೊಂಡು ಒಕ್ಕಣ್ಣನಾಗಿರುತ್ತದೆ ನೋಡಲು ಇನ್ನೂ ಭಯಾನಕವಾಗಿ. ಸ್ವಲ್ಪ ದಿನಗಳ ಸುಮ್ಮನಿದ್ದ ಹುಲಿ ಮತ್ತೆ ತನ್ನ ರಂಪಾಟ ಶುರು ಮಾಡುತ್ತದೆ. ಹಲವರನ್ನು ತಿನ್ನುತ್ತದೆ. ಉತ್ತರ ಕೊಯಮತ್ತೂರು ವಿಭಾಗದ ಅಧಿಕಾರಿಗಳಿಂದ ಲೇಖಕರಿಗೆ ಕರೆ ಬರುತ್ತದೆ ಹೇಗಾದರೂ ಮಾಡಿ ಈ ಹುಲಿಯನ್ನು ಸದೆ ಬಡಿಯುವಂತೆ. ಹುಲಿಯೆಂದರೆ ಭಯ ಭೀತರಾಗುತ್ತಿದ್ದ ಜನ ಲೇಖಕರಿಗೆ ಸಹಕರಿಸಲು ನಿರಾಕರಿಸುತ್ತಾರೆ. ಎಲ್ಲಿ ತಾವು ಸಹ ಹುಲಿಗೆ ಬಲಿಯಾಗುತ್ತೆವೋ ಎಂಬ ಭೀತಿಯಲ್ಲಿ. ಈ ಕತೆಯಲ್ಲಿ ನೇರವಾಗಿ ನರಭಕ್ಷಕ ಹುಲಿ ಮತ್ತು ಲೇಖಕರ ಮದ್ಯೆ ಕಾದಾಟವಾಗುತ್ತದೆ.
ಲೇಖಕರ ಆರನೆಯ ಇಂದ್ರಿಯ, ಅತೀಂದ್ರಿಯ, ಮುಂಜಾಗ್ರತೆ ಹಲವು ಬಾರಿ ಅವರನ್ನು ಪ್ರಾಣಾಪಾಯದಿಂದ ಕಾಪಾಡುತ್ತದೆ.
ಹೀಗೆ ಪ್ರತಿಯೊಂದು ಕತೆಯೂ ರೋಚಕವಾಗಿದೆ. ಒಂದು ಸಾರಿ ಲೇಖಕರು ಹುಲಿ ಮುಂದೆ ಹೋಗಿ ತಪ್ಪಿಸಿಕೊಂಡು ಬಂದದ್ದು ಅದ್ಭುತ. ಬೇಟೆ, ಶಿಕಾರಿ, ರೋಮಾಂಚನಕಾರಿ ಕತೆಗಳು ಇಷ್ಟವಾದವರು ಓದಲೇಬೇಕಾದ ಪುಸ್ತಕ.
ಅವರದ್ದೇ ಇನ್ನೊಂದು ಅನುವಾದಿತ ಕೃತಿ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಕೂಡ ಶಿಕಾರಿಯ ಅದ್ಭುತ ಕ್ಷಣಗಳನ್ನ ತೆರೆದಿಡುತ್ತದೆ.
Oh..! ಎಲ್ಲಿಯಾದರು ಸಿಕ್ಕಿದರೆ ಖಂಡಿತ ಓದುವಾ…. 🙂