ಕೌದಿ ಕಲೆಯ ಕಂಪನ್ನು ಪಸರಿಸುತ್ತಿರುವ ತಾಳಿಕೋಟೆಯ ಅಜ್ಜಿ ಗಂಗೂಬಾಯಿ ದೇಸಾಯಿ: ಹುಲ್ಲಾಗು ಬೆಟ್ಟದಡಿ(9)
ಆಗ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದೆ. ಜನ ಹಂತ ಹಂತವಾಗಿ ಆಧುನಿಕತೆಯತ್ತ ಮುಖ ಮಾಡುತ್ತಿದ್ದ ಕಾಲ. ಶ್ರೀಮಂತ ವರ್ಗದವರೆಲ್ಲ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿಯಾಗಿತ್ತು. ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲೂ ಮೆಲ್ಲ ಮೆಲ್ಲನೆ ಆಧುನಿಕತೆ ಅಡಿಯಿಡುತ್ತಿತ್ತು. ಅಜ್ಜ ಅಜ್ಜಿಯ ಕಾಲದಿಂದಲೂ ಬಂದ ಸಂಪ್ರದಾಯ, ಆಚಾರ, ವಿಚಾರ, ವಸ್ತುಗಳೆಲ್ಲವೂ ಗೊಡ್ಡು ಎಂಬ ಭಾಸ.
ಹಂಚಿನ ಮನೆ, ಕಟ್ಟಿಗೆ ಓಲೆ, ಸಗಣಿ ಕುಳ್ಳು, ಮರದ ಗೃಹಪಯೋಗಿ ವಸ್ತುಗಳು, ಬಿದಿರು ಬುಟ್ಟಿಗಳು, ಸೋಗೆ ಬಳಸಿ ಕಟ್ಟುತ್ತಿದ್ದ ಗುಡಿಸಲು, ಮಣ್ಣಿನ ಮಡಿಕೆ, ಗಡಿಗೆಗಳು, ಮರದ ತೊಟ್ಟಿಲುಗಳು ಹೀಗೆ ಇನ್ನು ಅನೇಕ ಕರ ಕುಶಲತೆಗಳು , ಹಳೆಯ ವಸ್ತುಗಳು ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗಿವೆ.
ಆದರೆ ಈಗ ಕಾಲ ಬದಲಾಗುತ್ತಿದೆ. ಚಕ್ರ ತಿರುಗುತ್ತಿದೆ. ಜನ ಮತ್ತೆ ಹಳ್ಳಿಯ ಸೊಗಡನ್ನು, ಹಳೆಯ ಕಾಲದ ವಿಚಾರಗಳನ್ನು ಇಷ್ಟ ಪಡುತ್ತಿದ್ದಾರೆ. ಪಟ್ಟಣದ ಏಕತಾನತೆಯ ಜೀವನ ಬೇಸರ ತರಿಸುತ್ತಿದೆ. ಪಿಜ್ಜಾ ಬರ್ಗರ್ ಪಾಸ್ತಾಗಳನ್ನು ತಿಂದ ನಾಲಿಗೆ ಈಗ ಮುದ್ದೆ, ರೊಟ್ಟಿಯೂಟ ಬೇಕು ಎಂದು ಅಪೇಕ್ಷೆ ಪಡುತಿದೆ.
ಇಷ್ಟೆಲ್ಲಾ ಪ್ರವರ ಯಾಕಂದ್ರೆ ನಾನಿವತ್ತು ಹೇಳ ಹೊರಟಿರುವುದು ಕೌದಿ ದೊರೆಸಾನಿ ಗಂಗೂಬಾಯಿ ದೇಸಾಯಿಯವರ ಬಗ್ಗೆ.
ಗಂಗೂಬಾಯಿ ಮೂಲತಃ ತಾಳಿಕೋಟೆಯವರು. ಅವರಿಗೀಗ 70 ರ ಆಸುಪಾಸು. ತಮ್ಮ ಕೌದಿಗಳಿಂದಲೇ ಹೆಸರುವಾಸಿಯಾದ ಗಂಗೂಬಾಯಿಯವರ ಬಗ್ಗೆ ಈ ವಾರದ ಹುಲ್ಲಾಗು ಬೆಟ್ಟದಡಿ ಅಂಕಣ.
ನೀವು ಉತ್ತರ ಕರ್ನಾಟಕದವರಾಗಿದ್ದರೆ ಈ ಕೌದಿಗಳ ಬಗ್ಗೆ ಗೊತ್ತಿರಲಿಕ್ಕೆ ಬೇಕು. ಕೌದಿ ಇಲ್ಲದ ಮನೆಗಳೇ ಇಲ್ಲವೇನೋ ಬಹುಶಃ. ಕೌದಿ ಎಂದರೆ ಹಳೆಯ, ಬೇಡವೆಂದು ಬಿಸಾಡಿದ ಬಟ್ಟೆಗಳನ್ನು ಒಂದುಗೂಡಿಸಿ, ಅದಕ್ಕೊಂದು ವಿನ್ಯಾಸ ಕೊಟ್ಟು ಒಪ್ಪವಾಗಿ ಸೂಜಿ ದಾರದಿಂದ ಹೊಲೆದು ಹೊದ್ದುಕೊಳ್ಳಲು ತಯಾರಿಸುವ ಚಾದರ ಅಥವಾ ಕಂಬಳಿ. ಚಳಿಗಾಲದಲ್ಲಿ ಅಮ್ಮನ ಮಡಿಲಂತೆ ಬೆಚ್ಚಗೆ ಪೋಷಿಸುವ ಈ ಕೌದಿ ಬೇಸಿಗೆಗಾಲ ಬಂದರೆ ತಂಪಾಗಿ ಧಗೆಯಿಂದ ಮುಕ್ತಿ ನೀಡುವ multipurpose ಹೊದಿಕೆ.
Recycle/Reusable ಕಾಲದಲ್ಲಿರುವ ನಾವು ನಮ್ಮ ಅಜ್ಜಿ ಅಜ್ಜಂದಿರು ಜತನದಿಂದ ಸಂಸಾರ ನಡೆಸಿದ್ದನ್ನು ಮರೆಯುತ್ತಿದ್ದೇವೆ. ಹರಿದ ಲುಂಗಿ, ಸವೆದು ಹೋದ ಸೀರೆ, ಸಣ್ಣದಾದ ಲಂಗ ಹೀಗೆ ಎಲ್ಲವನ್ನು ಬಿಸಾಡುವ ಬದಲು ಕೌದಿ ಮಾಡಿದರೆ ಎಷ್ಟು ಚೆಂದ ಅಲ್ಲವೇ! ಮೊದಲ ಬಾರಿಗೆ ಉಟ್ಟುಕೊಂಡ ಅಮ್ಮನ ಸೀರೆ ವಯಸಾದ ನಂತರ ಕೌದಿಯಾಗಿ ಆ ನೆನಪನ್ನು ಜೀವಂತವಾಗಿರಿಸುತ್ತದೆ. ತೀರಿ ಹೋದ ಅಜ್ಜನ ನೆನಪು ಧೋತರದಲ್ಲಿ ಅವಿತಿಟ್ಟುಕೊಂಡು ಕೌದಿ ಹೊದ್ದುಕೊಂಡಾಗಲೆಲ್ಲ ಅಜ್ಜನ ಬಳಿ ಕುಳಿತು ಕತೆ ಕೇಳಿದ ದಿನಗಳನ್ನು ಜ್ಞಾಪಿಸುತ್ತದೆ.
ಆದರೆ ಈ ಕೌದಿ ಹೊಲೆಯುವುದು ಸುಲಭದ ಕೆಲಸವಲ್ಲ. ಗಂಗೂಬಾಯಿಯವರ ಮಾತುಗಳಲ್ಲಿ ಹೇಳುವುದಾದರೆ ದೊಡ್ಡ ಕೌದಿ ಸಿದ್ಧಗೊಳ್ಳಲು ಸುಮಾರು 3 ತಿಂಗಳುಗಳೇ ಬೇಕು! ಅವರು 15 ವರ್ಷದವಾರಾಗಿದ್ದಾಗ ತಮ್ಮೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಅಜ್ಜಿಯೊಬ್ಬರು ಕೌದಿ ಹೊಲೆಯುವುದನ್ನು ನೋಡಿ, ಇಷ್ಟಪಟ್ಟು ಅವರ ಬಳಿ ಹೇಳಿಸಿಕೊಂಡರಂತೆ. ಅವತ್ತಿನಿಂದ ಶುರುವಾದ ಅವರ ಕೌದಿ ಪ್ರೇಮ ಇವತ್ತಿಗೂ ಅಮರವಾಗಿದೆ.
ಸುಮಾರು ಕೌದಿಗಳನ್ನು ಹೊಲೆದು ಸುತ್ತ ಮುತ್ತ ಜನಪ್ರಿಯವಾದ ಗಂಗೂಬಾಯಿಯವರ ಹತ್ತಿರ ಅನೇಕರು ಕೌದಿ ಕಲೆಯನ್ನು ಹೇಳಿಸಿಕೊಳ್ಳಲು ಬರುತ್ತಾರೆ. ಅದರಲ್ಲೇನಿದೆ ಎಂದು ಮೂಗು ಮುರಿಯದಿರಿ! ನೀವೇ ಒಮ್ಮೆ ನೋಡಿ ಈ ಕೌದಿಗಳಲ್ಲಿರುವ ವಿನ್ಯಾಸವನ್ನು, ಕರ ಕುಶಲತೆಯನ್ನು. ಯಾವ ಫ್ಯಾಷನ್ ಡಿಸೈನಿಂಗ್ ಗು ಕಡಿಮೆಯಿಲ್ಲ.
ಅಜ್ಜಿ ಕೌದಿ ಹೊಲೆಯುವುದು ಎಷ್ಟು ಪರಿಣಿತರೆಂದರೆ ಕೌದಿ ಹೊಲೆಯಲು ಅಳತೆ ಪಟ್ಟಿಯೂ, ರಫ್ ಸ್ಕೆಚ್, ಅಳತೆ ಯಾವುದು ಬೇಕಾಗಿಯೇ ಇಲ್ಲ. ಬಟ್ಟೆಗಳನ್ನು ಸಂಗ್ರಹಿಸಿದ ತಕ್ಷಣ ಅವರದೇ ಒಂದು ವಿನ್ಯಾಸ ಮೂಡಿ ಬಿಟ್ಟಿರುತ್ತದೆ. ಅಲ್ಲಿಂದ ಕೌದಿ ಹೊಲೆಯಲು ಶುರು ಮಾಡಿದರೆ ಮುಗಿಯಿತು ಹೊಲೆದು ಮುಗಿಸುವವರೆಗೂ ಕೈ ಬಿಡದಂತಹ ತಾಳ್ಮೆ, ಪರಿಶ್ರಮ, ಕೌದಿ ಪ್ರೀತಿ.
ಕೇವಲ ಕೌದಿಯಷ್ಟೇ ಅಲ್ಲ. ಹಾಸನದಲ್ಲಿರುವ ಇವರ ಮನೆಗೆ ಕಾಲಿಟ್ಟರೆ ಕೌದಿಯ ಇನ್ನೊಂದು ಪ್ರಪಂಚವೇ ತೆರೆದುಕೊಳ್ಳುತ್ತದೆ. ನೆಲದ ಮೇಲೆ ರತ್ನಗಂಬಳಿಯಾಗಿ , ಟಿವಿ, ಟೇಬಲ್ಲುಗಳ ಮೇಲೆ ಹೊದಿಕೆಯಾಗಿ, ಚಿಕ್ಕ ಮಕ್ಕಳ ದುಪ್ಪಟ್ಟಿಯಾಗಿ, ಕುಂಚಿಗೆಯಾಗಿ, ಗೋಡೆಯ ಮೇಲಿನ ಚಿತ್ತಾರವಾಗಿ, ಮನೆಯ ಹೊರಗಡೆ ಚಂದವಾಗಿ ಇಳಿಬಿಟ್ಟಿರುವ ಕೌದಿ ರಾರಾಜಿಸುತ್ತದೆ. ಇಂಟೀರಿಯರ್ ಡಿಸೈನಿಂಗ್ ಎಂಬ ಹೆಸರಿನಲ್ಲಿ ಬಗೆ ಬಗೆಯ ವಾಲ್ ಡಿಸೈನ್ ಗಳು, ಪೈಂಟಿಂಗಗಳು, Flour Design ಎಂಬೆಲ್ಲ ದೊಡ್ಡ ಪದಗಳು ನಮ್ಮನ್ನು ಆಕರ್ಷಿಸುತ್ತಿರುವಾಗ ನಮ್ಮದೇ ಆದ, ಮಧುರ ನೆನಪುಗಳನ್ನು ಒತ್ತಟ್ಟಿಗೆ ಜೋಡಿಸಿ ಹೊಲೆದ ಕೌದಿಯ ಬಗ್ಗೆ ನಿರ್ಲಕ್ಷ್ಯವೇಕೆ?
ಇನ್ನೊಂದು ವಿಷಯ ಗಂಗೂಬಾಯಿಯವರ ಬಗ್ಗೆ. ಅವರು ಶರೀರದಿಂದ ಸ್ವಾಧೀನರಿಲ್ಲ. ಹುಟ್ಟು ಅಂಗವೈಕಲ್ಯ ಅವರನ್ನು ಶಾಲೆಯ ಮೆಟ್ಟಿಲು ಹತ್ತಲು ಬಿಡಲಿಲ್ಲ. ಏನಾದರೂ ಕಲಿಯಬೇಕೆಂಬ ಆಸೆಗೆ ಭರವಸೆಯಾಗಿ ನಿಂತದ್ದು ಕೌದಿ. ಸ್ವಲ್ಪ ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕೂತರೆ ನಾವು ಬೆನ್ನು ನೋವು ಎಂದೆಲ್ಲ ಗೋಳಾಡುತ್ತೇವೆ. 70ರ ವಯಸ್ಸಿನ ಈ ಅಜ್ಜಿ ಸೂಜಿಗೆ ದಾರ ಪೋಣಿಸಿ ಗಂಟೆಗಳ ಕಾಲ ಹೊಲೆಯುವುದನ್ನು ನೋಡಿದರೆ ಎಂತಹವರೂ ನಾಚಬೇಕು.
ಇವರ ಮನೆಯವರೆಲ್ಲರೂ ಕೌದಿ ಕಲೆಯ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. ಈ ಎಲ್ಲ ಫೋಟೋಗಳನ್ನು ವಿವರಗಳನ್ನು ಕೊಟ್ಟು ನನಗೆ ಸಹಾಯ ಮಾಡಿದ್ದು ಅವರ ಮೊಮ್ಮಗನೇ. ಗಂಗೂಬಾಯಿಯವರ ಸೊಸೆ ಸಹ ಕೌದಿ ಹೊಲೆಯುವುದುರಲ್ಲಿ ಪರಿಣಿತರು. ಮನೆ ಮಂದಿಯೆಲ್ಲ ಜಾನಪದ ಶೈಲಿಯ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಮನ ತುಂಬಿ ಬರುತ್ತದೆ.
ಸಾಧನೆಗೆ ಇತಿ ಮಿತಿಗಳಿಲ್ಲ. ಇಂತಹದ್ದನ್ನೇ ಮಾಡಬೇಕು ಎಂಬ ಕಟ್ಟು ಪಾಡುಗಳಿಲ್ಲ. ಯಾವುದೇ ಕ್ಷೇತ್ರವಾಗಲಿ ಮನಸಿಟ್ಟು, ಪರಿಶ್ರಮದಿಂದ ಮಾಡಿದರೆ ಏನನ್ನಾದರೂ ಸಾಧಿಸಬಹುದು. ಬಿಡದ ಛಲ ಮತ್ತು ಆಸಕ್ತಿ ಮುಖ್ಯ. ಗಂಗೂಬಾಯಿಯವರ ಮನೆಯವರು, ಕೌದಿಗಳನ್ನು ನೋಡಲು ಬರುತ್ತಿದ್ದ ಕಲಾವಿದರು ಅವರನ್ನು ಇನ್ನು ದೊಡ್ಡದಾದ ಕೌದಿಯನ್ನು ಹೊಲೆಯುವಂತೆ ಪ್ರೋತ್ಸಾಹಿಸಿದರು. ಆಗ ಗಂಗೂಬಾಯಿಯವರು ತಿಂಗಳುಗಳ ಕಾಲ ಪಟ್ಟು ಬಿಡದೆ ಹೊಲೆದು ಸಿದ್ದ ಮಾಡಿದ್ದು 6.10 ಅಡಿ 15.3 ಅಳತೆಯ ಬೃಹತ ಕೌದಿ. ಈ ಕೌದಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ಗಂಗೂಬಾಯಿಯವರ ಕೌದಿ ಕಲೆಯ ಹಿರಿಮೆಗೆ ಸಾಕ್ಷಿ.
ಜರ್ಮನಿಯಿಂದ ಬಂದ ವಿದೇಶಿಗ ಇವರ ಮನೆಗೆ ಭೇಟಿ ನೀಡಿ, ಕೌದಿಯನ್ನು ಮೆಚ್ಚಿಕೊಂಡು ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ಒಯ್ದದ್ದು ಇದೆ.
ಇದು ಮಷಿನ್ನುಗಳ ಕಾಲ. ಏನೇ ಕ್ಲಿಷ್ಟ ಕೆಲಸವಿದ್ದರೂ ಒಂದೇ ಏಟಿನಲ್ಲಿ ಮಾಡಿ ಮುಗಿಸಬಲ್ಲ ದೈತ್ಯ ಮಷಿನ್ನುಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹಾಗೆ ಕೌದಿ ಹೊಲೆಯುವ ಮಷಿನ್ ಕೂಡ ಇದೆಯಂತೆ. ಆದರೆ ಗಂಗೂಬಾಯಿಯವರು ಮಾತ್ರ ಅನಾದಿ ಕಾಲದಿಂದ ಬಂದ, ಸೂಜಿ ದಾರದಿಂದ ಕೈಯಲ್ಲೇ ಕೌದಿಯನ್ನು ಹೊಲೆಯುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆ ಕೈಗಳಲ್ಲಿರುವ ಪ್ರೀತಿ, ಮಮತೆ ಮಶಿನ್ನಿಗೆಲ್ಲಿ ಬರಬೇಕು ಹೇಳಿ!
ಹೀಗೆ ಕೌದಿಗಳನ್ನು ಹೊಲೆಯುತ್ತ ಗಂಗೂಬಾಯಿ ಅಜ್ಜಿಯವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ನಮ್ಮ ತೋರಬೆರಳ ಹಿಡಿದು ಜಾನಪದ ಶೈಲಿಗಳನ್ನು ಕಲಿಸುತ್ತಾ ಸಾಗಲಿ. ಅವರ ಜೀವನ ಪ್ರೀತಿ ಬತ್ತದಿರಲಿ. ಮುಗ್ಧ ನಗು ಮಾಸದಿರಲಿ. ನೂರಾರು ಕಾಲ ಬದುಕಿ ಕಿರಿಯರನ್ನು ಆಶೀರ್ವದಿಸುತ್ತ, ಕೌದಿಯ ಕಲೆಯನ್ನು, ಕಂಪನ್ನು ಎಲ್ಲೆಡೆ ಪಸರಿಸಲಿ.
ನಮ್ಮ ಜಾನಪದ ಹಾಡುಗಳು, ಸಂಪ್ರದಾಯಗಳು, ಜೀವನ ಪದ್ದತಿಗಳೆಲ್ಲವೂ ಆರೋಗ್ಯಕರವಾದವು. ಗುಡಿ ಕೈಗಾರಿಕೆಗಳಲ್ಲಿ ಸಿದ್ಧವಾಗುವ ಪ್ರತಿಯೊಂದು ವಸ್ತುವು ಅತ್ಯಂತ ಕಲಾಕುಸರಿಯಿಂದ ಕೂಡಿದ್ದಾಗಿದೆ. ಹಳೆಯ ಕಾಲದ ತಾಂಬೂಲು ಪೆಟ್ಟಿಗೆ ಎಲ್ಲಾದರೂ ಸಿಕ್ಕರೆ ಒಮ್ಮೆ ನೋಡಿ. ಮರದಲ್ಲಿ ಅತ್ಯಂತ ಜತನವಾಗಿ ಕೆತ್ತಿ ಸುಂದರವಾಗಿ ಮಾಡಿದಂತಹ ಪೆಟ್ಟಿಗೆಗಳಿದ್ದವು ಹಳೆಯ ಕಾಲದಲ್ಲಿ. ಹೀಗೆ ನಮ್ಮ ಪೂರ್ವಜರ ಕಾಲದಲ್ಲಿ ಕಲೆ ನಿರಾಯಾಸವಾಗಿ ಪ್ರತಿಯೊಂದು ಕೆಲಸದಲ್ಲೂ ಆವರಿಸಿಕೊಂಡಿತ್ತು.
ಆಧುನಿಕತೆಯ ಬಿರುಗಾಳಿಯಲ್ಲಿ ನಮ್ಮ ಜಾನಪದ ಕಲೆ, ಹಳ್ಳಿಯ ಸೊಗಡು ಕೊಚ್ಚಿಕೊಂಡು ಹೋಗುವುದನ್ನು ತಡೆಯೋಣ. ನಾವೇ ಇಂದಿನ ಪೀಳಿಗೆಗಳು. ಮುಂದಿನ ಪೀಳಿಗೆಗೆ ಈ ಎಲ್ಲ ವಿಷಯವನ್ನು ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ.
so supar