ಮಿಂಚಂತೆ ಮೂಡಿ ಮಾಯವಾದ ಶಂಕರನಾಗ್ : ಹುಲ್ಲಾಗು ಬೆಟ್ಟದಡಿ (1)
ಮೊನ್ನೆ ಸೆಪ್ಟೆಂಬರ್ 30 ಕ್ಕೆ ಶಂಕರನಾಗ್ ಕಾರ್ ಅಪಘಾತವೊಂದರಲ್ಲಿ ನಮ್ಮನ್ನೆಲ್ಲಿ ತ್ಯಜಿಸಿ 28 ವರ್ಷಗಳೇ ಕಳೆದವು. ಶಂಕರನಾಗ್ ನಮ್ಮೆಲ್ಲರ ಮನಸಿನಲ್ಲಿ ಇಂದಿಗೂ ಅಜರಾಮರ. ಮರೆತು ಮಸುಕಾಗುವ ವ್ಯಕ್ತಿತ್ವವೇ ಅಲ್ಲ ಬಿಡಿ.
ಒಂದಷ್ಟು ಜನ ಹಾಗೆನೇ.. ಜೊತೆಯಿದ್ದ ಕೆಲ ಸಮಯದಲ್ಲೇ ಇಡೀ ಜೀವನಕ್ಕಾಗುವಷ್ಟು ಪ್ರೀತಿ, ಪ್ರಭಾವ ಎರಡನ್ನು ಹಂಚಿ ಎಲ್ಲೋ ಮರೆಯಾಗಿ ಬಿಡುತ್ತಾರೆ. ಯಾವತ್ತೋ ಓದಿದ ಪುಸ್ತಕದ ಒಂದೆರಡು ಸಾಲುಗಳು ಸುಪ್ತವಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತವಲ್ಲ ಹಾಗೆ ಇವರು.
ಕೇವಲ 12 ವರುಷಗಳ ಚಿತ್ರ ಜಗತ್ತಿನ ಅವಧಿಯಲ್ಲಿ ಈ ಪರಿಯ ಅನುರಾಗ, ಅಭಿಮಾನಗಳನ್ನು ಸಂಪಾದಿಸಿಕೊಳ್ಳುವುದು ಬಹುಶಃ ಶಂಕರನಾಗ್ ಅವರಿಗಷ್ಟೇ ಸಾಧ್ಯವೆನೋ.. ಈ 12 ವರುಷಗಳಲ್ಲಿ 80 ಚಿತ್ರಗಳಲ್ಲಿ ನಟಿಸಿ, 8 ಚಿತ್ರಗಳನ್ನು ನಿರ್ದೇಶಿಸಿ, 3 ಚಿತ್ರಗಳನ್ನು ನಿರ್ಮಿಸಿ, ಇಂದು ರಂಗ ಶಂಕರ ಎಂದು ಖ್ಯಾತವಾಗಿರುವ ಅಂದಿನ ಸಂಕೇತವನ್ನು ಸ್ಥಾಪಿಸಿ ಹಸಿ ಗೋಡೆಯಲ್ಲಿ ಹರಳೊಂದನ್ನು ನೆಟ್ಟಂತೆ ತಮ್ಮ ಹೆಜ್ಜೆಯನ್ನು ಅಚ್ಚಾಗಿಸಿದ್ದಾರೆ ಶಂಕರನಾಗ್.
ಇನ್ನು ಬದುಕಿದ್ದಿದ್ದರೆ ಇವರು ಏನೇನೆಲ್ಲ ಮಾಡುತ್ತಿದ್ದರೋ ಎಂಬ ಶಾಶ್ವತ ಬೆರುಗು ನಾವು ಕನ್ನಡಿಗರದ್ದು. ಇವತ್ತಿಗು ಕರ್ನಾಟಕದ ಆಟೋಗಳ ರಾಜ ಶಂಕರನಾಗ್. ರಾಜಕುಮಾರರವರ ಬಂಗಾರದ ಮನುಷ್ಯ ಚಿತ್ರ ನೋಡಿ ಹಲವರು ಪಟ್ಟಣ ಬಿಟ್ಟು ವ್ಯವಸಾಯಕ್ಕೋಸ್ಕರ ಹಳ್ಳಿಗೆ ಬಂದರಂತೆ. ಹಾಗೆ ಶಂಕರನಾಗ್ ರವರ ಆಟೋರಾಜ ಚಿತ್ರ ನೋಡಿ ಎಷ್ಟೋ ಜನ ಆಟೋ ಚಾಲನೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡರು. ಆಟೋ ಚಾಲಕರೆಲ್ಲರಿಗು ಗೌರವ, ಆ ವೃತ್ತಿಗೆ ಮರ್ಯಾದೆಯನ್ನು ತಂದು ಕೊಟ್ಟಿದ್ದು ಶಂಕರನಾಗ್ ಎಂದು ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ಹಂಸಲೇಖಾರವರು ಹೇಳುತ್ತಾರೆ ಶಂಕರನಾಗ್ ಅವರು ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಎಲ್ಲವು ನಿಧಾನಗತಿಯಲ್ಲಿ ಸಾಗಿದಂತೆ ಅನಿಸಿತ್ತಂತೆ. ಅವರಿಗೆ ಸದಾ ಏನೋ ಒಂದು ಮಾಡುತ್ತಿರಬೇಕು, ಹೊಸದನ್ನು ಪ್ರಯತ್ನಿಸುತ್ತಿರಬೇಕು , ಆವಿಷ್ಕಾರಗಳಾಗುತ್ತಿರಬೇಕು. ಪ್ರತಿ ನಿಮಿಷವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸದಾ ಜೀವನೊತ್ಸಾಹದಿಂದ ಪುಟಿಯುತ್ತಿದ್ದ ಖುಷಿಯ ಬುಗ್ಗೆ ಶಂಕರನಾಗ್.
ಗಿರೀಶ ಕಾರ್ನಾಡರವರ ನಿರ್ದೇಶನದಲ್ಲಿ ಮೂಡಿ ಬಂದ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಈ ಪ್ರತಿಭೆಯ ಪಾದಾರ್ಪಣೆಯಾಯಿತು. 7 ಪ್ರಶಸ್ತಿಗಳನ್ನು ಬಾಚಿಕೊಂಡು ಜನಮೆಚ್ಚುಗೆಗೆ ಪಾತ್ರವಾದ ಈ ಚಿತ್ರ ಗಿರೀಶ ಕಾರ್ನಾಡರ ನಿರ್ದೇಶನಕ್ಕೂ, ಶಂಕರ ನಾಗ್ ಅವರ ಅಭಿನಯಕ್ಕೂ ಸಾಕ್ಷಿಯಾಯಿತು.
ಸೀತಾ ರಾಮು ಚಿತ್ರದಿಂದ ಖುಲಾಯಿಸಿದ ಅದೃಷ್ಟದಿಂದ ಶಂಕರನಾಗ್ ಈ ಚಂದನವನದ ನಾಗಾಲೋಟದಲ್ಲಿ ಹಿಂದೆ ಬೀಳಲೆ ಇಲ್ಲ. ವೈವಿಧ್ಯಮಯ ಪಾತ್ರಗಳಿಂದ ಜನರ ಮನಸ್ಸನ್ನು ಗೆಲ್ಲುತ್ತಲೇ ಹೋದರು. ಸಾಂಗ್ಲಿಯಾನ್ ಪಾತ್ರಗಳು, ಸಿಬಿಐ ಶಂಕರ್, ಮೂಗನ ಸೇಡು, ಗೀತಾ ಒಂದಲ್ಲ ಎರಡಲ್ಲ ಬರೋಬ್ಬರಿ 80 ಚಿತ್ರಗಳಲ್ಲಿ ನಟಿಸಿ ಒಂದಾದ ಮೇಲೊಂದರಂತೆ ಸುಪರ್ ಹಿಟ್ ಮೂವಿಗಳನ್ನು ನೀಡಿದರು.
ಬರಿ ಚಿತ್ರರಂಗವಷ್ಟೇ ಅಲ್ಲ ಸಮಾಜಕ್ಕಾಗಿ, ತಮ್ಮ ಸುತ್ತಣ ಜನರಿಗಾಗಿ ಏನನ್ನಾದರು ಮಾಡಬೇಕೆಂಬ ತುಡಿತ ಶಂಕರನಾಗ ಅವರದ್ದು. ಇದರಿಂದಲೇ ಅವರು ಜನರಿಗೆ ಹತ್ತಿರವಾದದ್ದು. ಮನೆ ಮಗನೆಂದೆನಿಸಿದ್ದು. ಮೇಟ್ರೋ ನಿರ್ಮಾಣದ ಬಗ್ಗೆ ಸರ್ಕಾರದ ಜೊತೆಗೆ ಮಾತುಕತೆ, ಬೆಂಗಳೂರಿನ ನಂದಿ ಬೆಟ್ಟದಲ್ಲಿ ಕೇಬಲ್ ಕಾರುಗಳ ಅಡವಳಿಕೆ, ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೋಸ್ಕರ ಕೇವಲ ಎಂಟೇ ದಿನದಲ್ಲಿ ಮನೆ ಕಟ್ಟುವ ಅದ್ಭುತ ಯೋಜನೆ ಹೀಗೆ ಇನ್ನು ಹಲವು ಜನಾಭಿವೃದ್ಧಿ ಕಾರ್ಯಗಳು ಶಂಕರ ಅವರ ತಲೆಯಲ್ಲಿ ಸುಳಿದಾಡುತ್ತಲೇ ಇದ್ದವು. ಎಲ್ಲವು ಕಾರ್ಯಗತವಾಗುವ ಮೊದಲೇ ಎಲ್ಲರನ್ನು ತೊರೆದದ್ದು ನಮ್ಮ ದೌರ್ಭಾಗ್ಯಕ್ಕಿಂತ ಹೆಚ್ಚಾಗಿ ಇಡೀ ಕರ್ನಾಟಕಕ್ಕೆ, ಕನ್ನಡಿಗರಿಗೆ ಭಾರಿ ನಷ್ಟ ಎಂದ್ಹೇಳಬಹುದೇನೋ…
ಮನುಷ್ಯ ಕನಸು ಕಾಣಬೇಕು, ಕನಸು ಕಂಡಷ್ಟು ನನಸಾಗಿಸುವ ತುಡಿತಗಳು ಹೆಚ್ಚಾಗುತ್ತವೆ ಎಂಬ ಅಬ್ದುಲ್ ಕಲಾಂ ರ ಮಾತಿನಂತೆ ಶಂಕರನಾಗ್ ಅವರಿಗಿದ್ದದ್ದು ಲೆಕ್ಕವಿಲ್ಲದಷ್ಟು ಕನಸುಗಳು. ಕನಸು ಕಂಡದ್ದನ್ನು ಮರೆತು ಎಂದಿನ ದೈನಂದಿನ ಜೀವನದಲ್ಲಿ ಬೆರೆತು ಹೋಗುವ ಜೀವವಲ್ಲ ಅದು. ಕನಸಿನೆಡೆಗೆ ನಾಗಾಲೋಟದಲ್ಲಿ ಓಡುವ ಜೀವ. ಅನಂತನಾಗ್ ಅವರು ವೀಕೆಂಡ್ ವಿತ ರಮೇಶ್ ಕಾರ್ಯಕ್ರಮದಲ್ಲಿ ‘ಅವನನ್ನು ಇಷ್ಟು ಬೇಗ ಕರೆಸಿಕೊಂಡಿದ್ದಕ್ಕೆ ಆ ದೇವರನ್ನೆಂದೂ ಕ್ಷಮಿಸೋದಿಲ್ಲ ನಾನು’ ಎಂದು ನೋವಿನಿಂದ ಹೇಳಿದ್ದು ಶಂಕರನಾಗ್ ಅವರ ನೆನಪಾದಾಗಲೆಲ್ಲ ಕಿವಿಯಲ್ಲಿ ಗುಂಯ್ಯಗುಡುತ್ತದೆ.
ಇನ್ನು ಅವರ ಮಾಲ್ಗುಡಿ ಡೇಸ್ ಧಾರಾವಾಹಿ! ಮಾಲ್ಗುಡಿಯನ್ನು ಅವರು ತೋರಿಸಿದ ರೀತಿ ಮನೆ ಮಾತಾಗಿತ್ತು. ದೃಶ್ಯ ಪ್ರಪಂಚವೆಲ್ಲ ನಿಬ್ಬೆರಗಾಗಿತ್ತು. ಆಗಿನ್ನು ದೃಶ್ಯ ಮಾಧ್ಯಮ ಒಂದೊಂದೇ ಹೆಜ್ಜೆಯಿಡುತ್ತ ನಡೆಯಲು ಕಲಿಯುತ್ತಿತ್ತು. ಒಳಾಂಗಣದ ದೃಶ್ಯಗಳೇ ಹೆಚ್ಚಾಗಿದ್ದ ಕಾಲ. ಅಂತಹ ಸಮಯದಲ್ಲಿ ಶಂಕರನಾಗ್ ಅವರು ಆರ್.ಕೆ.ನಾರಾಯಣ ಅವರು ಬರೆದ ಕತೆ್ಗಗಳ ಸಂಗ್ರಹ ಮಾಲ್ಗುಡಿ ಡೇಸ್ ನ್ನು ಆಗುಂಬೆ ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಿಸುವ ಧೈರ್ಯ ಮಾಡಿದರು. ಹೋಟೆಲಗಳು ಇನ್ನು ತಲೆ ಎತ್ತಿರಲಿಲ್ಲ. ತಿಂಗಳುಗಟ್ಟಲೇ ಇಡೀ ಚಿತ್ರತಂಡದ ಊಟ, ನೀರು, ನಿದ್ದೆ ಮತ್ತಿತರ ವ್ಯವಸ್ಥೆಗಳನ್ನು ತಿಂಗಳಾನುಗಟ್ಟಲೇ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದೆ ದೊಡ್ಡ ಕೆಲಸವಾಗಿದ್ದಂತಹ ಕಾಲ. ಎಲ್ಲವನ್ನು ನಿಭಾಯಿಸಿ ಸ್ವಾತಂತ್ರ್ಯ ನಂತರದ ಸ್ಥಿತಿಗತಿಯನ್ನು 80 ರ ದಶಕದಲ್ಲಿ ಜನರ ಮನಸಿಗೆ ತಲುಪುವಂತೆ ತೋರಿಸುವಲ್ಲಿ ಸಫಲರಾದರು ಶಂಕರನಾಗ್. ಮಾಲ್ಗುಡಿ ಡೇಸ್ ನೋಡಿದ ಹಲವರಿಗೆ ತಮ್ಮ ಬಾಲ್ಯದ ನೆನಪಾಯಿತು. ಸ್ವಾಮಿ ಮನೆ ಮನೆಯ ಚಾಮಿಯಾದ. ಹಲವಾರು ಭಾಷೆಗಳಲ್ಲಿಅನುವಾದಗೊಂಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತು ಮಾಲ್ಗುಡಿ ಡೇಸ್.
ಶಂಕರನಾಗ್ ನಿರ್ದೇಶನದ ಮೊದಲ ಚಿತ್ರ ಮಿಂಚಿನ ಓಟ. ಒಟ್ಟು 7 ರಾಜ್ಯ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಚಿತ್ರ ಶಂಕರ ಅವರ ಪಾಂಡಿತ್ಯಕ್ಕೆ ಕನ್ನಡಿಯಾದಂತಾಯಿತು. ಇದರಿಂದ ಪ್ರೇರಿತರಾಗಿ ನಂತರ ಅವರು ನಿರ್ದೇಶಸಿದ ಚಿತ್ರಗಳೆಲ್ಲವು ಒಂದಕ್ಕಿಂತ ಒಂದು ಮೇಲು. ಆ ದಿನಗಳ ಮಧ್ಯಮ ವರ್ಗದ ವಠಾರ ಜೀವನವನ್ನು ಎತ್ತಿ ಹಿಡಿದ ‘ನೋಡಿ ಸ್ವಾಮಿ ನಾವಿರೋದು ಹೀಗೆ‘, ಮಧ್ಯರಾತ್ರಿ ಅಮಲೇರಿದ ಶ್ರೀಮಂತನೊಬ್ಬ ರಾತ್ರಿ ಪುಟಪಾತನಲ್ಲಿ ಮಲಗಿದ ಜನರ ಮೇಲೆ ಕಾರನ್ನೋಡಿಸುವ ದಾರುಣ ಚಿತ್ರ ‘ಆಕ್ಸಿಡೆಂಟ್‘, ಅರಳುತ್ತಿರುವ ಪ್ರೀತಿಯೊಂದು ಕ್ಯಾನ್ಸರ್ ಗೆ ಬಲಿಯಾದ ‘ಗೀತಾ‘…. ಹೀಗೆ ಒಂದೊಂದು ಚಿತ್ರವೂ ವಿಭಿನ್ನ ಕತೆಯುಳ್ಳ, ಜನಜೀವನಕ್ಕೆ ಹತ್ತಿರವಾಗುವಂತಹ, ಸಮಾಜದ ಸ್ಥಿತಿಗತಿಗಳನ್ನು ಎತ್ತಿ ಹಿಡಿಯುವಂತಹ, ಜನರಿಗೆ ಸ್ಪೂರ್ತಿ ತುಂಬುವಂತಹ ಚಿತ್ರಗಳು.
ಇಷ್ಟೆಲ್ಲಾ ಬರೆದ ಮೇಲೆ ಅವರ ‘ಒಂದು ಮುತ್ತಿನ ಕತೆ‘ಯ ಬಗ್ಗೆ ಬರೆಯದಿದ್ದರೆ ಹೇಗೆ.. ಅದು 80 ರ ದಶಕ. ಮೊದಲೇ ಹೇಳಿದಂತೆ ಚಿತ್ರರಂಗವಿನ್ನೂ ಹೊಸ ಹೊಸ ಪ್ರಯೋಗಗಳ ಅವಿಷ್ಕಾರದಲ್ಲಿತ್ತು. ಕೇವಲ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಚಿತ್ರರಂಗದ ದೊಡ್ಡಣ್ಣ ಬಾಲಿವುಡ್ ನಲ್ಲಿಯೂ ಸಹ ಹೊಸ ಹೊಸ ತಂತ್ರಜ್ಞಾನದ ಪ್ರಯೋಗ ನಡೆದೇ ಇತ್ತು. ಅಣ್ಣಾವ್ರು ತಮ್ಮ ವೃತ್ತಿರಂಗದ ಅತ್ತ್ಯುನ್ನತ ಮಟ್ಟದಲ್ಲಿದ್ದ ಕಾಲ. ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಗಲ್ಲಾಪೆಟ್ಟಿಗೆ ಉಕ್ಕಿ ಹರಿಯುವುದು ಎಂಬ ಪ್ರತೀತಿ ಜನಜನಿತವಾಗಿತ್ತು.
ಈ ಸಮಯದಲ್ಲಿ ಜಾನ್ ಸ್ಟಿನಬೆಕ್ ಬರೆದ ‘ದಿ ಪರ್ಲ್’ ಎಂಬ ಪುಸ್ತಕದ ಆಧಾರದ ಮೇಲೆ ಶಂಕರನಾಗ್ ರಾಜಕುಮಾರ್ ಅವರ ಜೊತೆ ಚಿತ್ರ ಮಾಡಲು ನಿರ್ಧರಿಸುತ್ತಾರೆ. ಅದುವೇ ‘ಒಂದು ಮುತ್ತಿನ ಕತೆ’. ರಾಜಕುಮಾರ್ ಅವರು ಸಮುದ್ರದ ಆಳದಲ್ಲಿ ಮುತ್ತಿಗಾಗಿ ಈಜುವ ದೃಶ್ಯಗಳು, ನೀರಿನಾಳದಲ್ಲಿ ಸಮುದ್ರದ ಪ್ರಾಣಿಯೊಂದು ದಾಳಿ ಮಾಡುವ ದೃಶ್ಯಗಳನ್ನು ಮನೋಹರವಾಗಿ ಸೆರೆ ಹಿಡಿಯುವಲ್ಲಿ ಸಫಲರಾದರು. ಆ ಕಾಲದಲ್ಲಿ ಸಮುದ್ರದ ನೀರಿನಲ್ಲಿ ಅಂದರೆ ಅಂಡರ್ ವಾಟರ್ ಶೂಟಿಂಗ್ ನ್ನು ಮಾಡಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದು ಶಂಕರ್ ನಾಗ್.
ಅವರು ಕಟ್ಟಿದ ‘ರಂಗ ಶಂಕರ‘ ಇಂದಿಗೂ ನಾಟಕಗಳನ್ನು, ಹೊಸ ಪ್ರತಿಭೆಗಳನ್ನು, ಕಲೆಯನ್ನು ಪ್ರೋತ್ಸಾಹಿಸುವಲ್ಲಿ ನಿರತವಾಗಿದೆ. ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ದರಕ್ಕೆ ರಂಗಮಂದಿರ ಕೊಟ್ಟು ನಾಟಕ, ನೃತ್ಯ, ಮತ್ತಿತರೇ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿದೆ.
ಮತ್ತೆ ಹುಟ್ಟಿ ಬನ್ನಿ ಎಂದು ಹೇಳುವುದಕ್ಕಿಂತ ಶಂಕರನಾಗ್ ಅವರು ಆಸೆ ಪಟ್ಟಂತೆ ಉನ್ನತ ಮಟ್ಟದ ಚಿತ್ರಗಳು ಕನ್ನಡದಲ್ಲಿ ಬರಲಿ. ಹೊಸ ನಿರ್ದೇಶಕರು, ನಾಯಕ, ನಾಯಕಿಯರಿಗೆ ಶಂಕರ ನಾಗ್ ಅವರ ದೂರದೃಷ್ಟಿ, ಯಾವುದೇ ದೂರುಗಳಿಲ್ಲದೆ ಶ್ರಮ ಪಟ್ಟು ಮುಂದೆ ಬರುವ ಛಾತಿ ಮಾದರಿಯಾಗಲಿ.
ಶಂಕ್ರಣ್ಣ, ನೀವೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ.
Very well Articulated.. Thank you for this Gem..