ಎವರೆಸ್ಟ್ ಶಿಖರ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕಿ ನಮ್ಮ ಭಾರತ ದೇಶದವಳು – ಹುಲ್ಲಾಗು ಬೆಟ್ಟದಡಿ (4)
ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ‘ಪೂರ್ಣಾ‘ ಚಿತ್ರ ನೋಡಿದೆ. ಇಡೀ ಜಗತ್ತಿನಲ್ಲಿಯೇ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತ್ಯಂತ ಕಿರಿಯ ಹುಡುಗಿ ಎಂಬ ಸಾಧನೆ, ಬಿರುದು ಎರಡನ್ನು ಮುಡಿಗೇರಿಸಿಕೊಂಡ ಬಾಲಕಿಯೊಬ್ಬಳ ಯಶೋಗಾಥೆ.
ಅವಳ ಕೋಚ್ ಮೊದಲ ಬಾರಿಗೆ ಅವಳಿಗೆ ಎವರೆಸ್ಟ್ ಶಿಖರವನ್ನು ತೋರಿಸಿದಾಗ ಅವಳು ಹೇಳಿದ್ದು ‘ಇದೇನು ಅಷ್ಟು ಎತ್ತರವಿಲ್ಲ. ಒಂದು ದಿನದಲ್ಲಿ ಇದನ್ನು ಹತ್ತಬಹುದು’.
ಆಕೆಯ ಹೆಸರು ಪೂರ್ಣಾ. ಪೂರ್ತಿ ಹೆಸರು ಅನ್ನಪೂರ್ಣಾ ಮಾಲವತ್. ತೆಲಂಗಾಣ ರಾಜ್ಯದ ಬಡ ಕುಟುಂಬವೊಂದರಲ್ಲಿ ಜನಿಸಿದ ಪೂರ್ಣಾ ಇಂದು ಜಗತ್ತು ಕಂಡ ಮೇರು ಪರ್ವತಾರೋಹಿಗಳಲ್ಲಿ ಒಬ್ಬಳು.
ಪಕಾಲ ಎನ್ನುವ ಹಳ್ಳಿ ತೆಲಂಗಾಣದ ನಿಜಾಮಾಬಾದ್ ಎನ್ನುವ ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಈ ಹಳ್ಳಿಯ ಜನ ತುಂಬಾ ಹಿಂದುಳಿದವರು. ಬಹುಪಾಲು ಅನಕ್ಷರಸ್ಥರಿರುವ ಈ ಹಳ್ಳಿಯಲ್ಲಿ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಶಾಲೆಗೇ ಕಳುಹಿಸುವ ಸಂಪ್ರದಾಯ ಕಡಿಮೆ. ಹೆಣ್ಣು ಮಗು ಹುಟ್ಟಿದರೆ ರೋಧಿಸುವ ಜನ ಇವರು. ಅವಳ ಮದುವೆಗೆ ವರದಕ್ಷಿಣೆ ಹಣ ಹೊಂದಿಸಿ ಹುಡುಗ ಎಂತಹವನಾದರೂ ಪರವಾಗಿಲ್ಲ ಮದುವೆಯಾದರೆ ಸಾಕು ಎಂಬಂತೆ ಸಾಗ ಹಾಕುವವರು.
ಪೂರ್ಣಾಳ ಪರಿಸ್ಥಿತಿಯೇನು ವಿಶೇಷವಾಗಿರಲಿಲ್ಲ. ಅವಳಿಗಿದ್ದಿದ್ದ ಒಂದೇ ಒಂದು ಭರವಸೆಯೆಂದರೆ ಇವಳಿಷ್ಟದಂತೆ ನಡೆದುಕೊಳ್ಳುವ ಅಪ್ಪ ಅಮ್ಮ. ಉಳಿದ ಅಪ್ಪಂದಿರೆಲ್ಲ ಇನ್ನು ಮೈ ನೆರೆಯದ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಕೈ ತೊಳೆದುಕೊಳ್ಳುತ್ತಿರುವಾಗ ಪೂರ್ಣಾಳ ತಂದೆ ಅವಳನ್ನು ಶಾಲೆಗೇ ಕಳುಹಿಸುತ್ತಾರೆ. ಮೌಂಟೈನರ್ ಅಥವಾ ರಾಕ್ ಕ್ಲೈಂಬಿಂಗ್ ಎಂದರೆ ಏನು ಎಂಬ ಲವಲೇಶ ಮಾಹಿತಿ ಇಲ್ಲದೆ ಹೋದರು ಮಗಳನ್ನು ಬೆಂಬಲಿಸುತ್ತಾರೆ. ಅವಳ ಕೋಚ್ ಹೇಳಿದ್ದಕ್ಕೆಲ್ಲ ಸಮ್ಮತಿಸುತ್ತಾರೆ. ತೆಲಂಗಾಣದಲ್ಲಿ ಅಷ್ಟೊಂದು ಬೆಟ್ಟಗಳಾಗಲಿ, ಪರ್ವತಗಳಾಗಲಿ ಇಲ್ಲದ ಕಾರಣ ಮಗಳನ್ನು ದೂರದ ಸ್ಥಳಗಳಿಗೆ ತರಬೇತಿಗಾಗಿ ಕಳುಹಿಸುತ್ತಾರೆ. ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ ಮಗಳ ಉನ್ನತಿಗಾಗಿ ಹಂಬಲಿಸುತ್ತಾರೆ. ನೆರೆ ಹೊರೆಯವರ ಚುಚ್ಚು ಮಾತುಗಳಿಗೆ ಕಿವಿಗೊಡದೆ ಮಗಳನ್ನು ಹುರಿದುಂಬಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಗಳ ಮೇಲೆ ಭರವಸೆಯಿಡುತ್ತಾರೆ.
ಪರ್ವತಾರೋಹಣಕ್ಕೆ ಬೇಕಾದ ಆತ್ಮಸ್ಥೈರ್ಯ, ಪರಿಶ್ರಮ, ಬುದ್ದಿಮತ್ತೆ, ಮನೋಬಲ ಇದ್ದ ಪೂರ್ಣಾಳಿಗೆ ಮುನ್ನುಗ್ಗಲು ಇಷ್ಟು ಸಾಕಿತ್ತು.
ಹೇಗೆ ಶುರುವಾಯಿತು ಪೂರ್ಣಾಳ ಪರ್ವತಾರೋಹಣ?
ಬೇಸಿಗೆ ರಜೆಯಲ್ಲಿ ಶಾಲೆಯವರು ಹಮ್ಮಿಕೊಂಡಿದ್ದ ಪರ್ವತಾರೋಹಣ ಶಿಬಿರಕ್ಕೆ ಪೂರ್ಣಾ ಹೆಸರು ಕೊಡುತ್ತಾಳೆ. ಬೃಹತ್ತಾದ ಭೊಂಗಿರ್ ರಾಕ್ ಹತ್ತಲು ತರಬೇತಿ ನೀಡುವ ಶಿಬಿರ ಇದು. ಪೂರ್ಣಾಳ ಹಲವು ಸ್ನೇಹಿತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬೆಟ್ಟ, ಬಂಡೆಗಲ್ಲುಗಳನ್ನು ಹತ್ತುವುದು ಅಷ್ಟು ಸುಲಭದ ಮಾತಲ್ಲ. ತರಬೇತಿ ಬೇಕು, ಮುನ್ನೆಚ್ಚರಿಕೆಯಿರಬೇಕು, ಧೈರ್ಯದಿಂದ ಮುನ್ನುಗ್ಗುವ ಛಲ ಬೇಕು, ಕೆಳಗೆ ನೋಡಿದಾಗ ಕಾಣುವ ಭಯಂಕರ ಆಳವನ್ನು ನಿರ್ಲಕ್ಷಿಸಿ ತಲೆ ಎತ್ತಿ ನೋಡುವ ಛಾತಿ ಇರಬೇಕು.
ಇತರೆ ಮಕ್ಕಳು ಹಗ್ಗದ ಸಹಾಯದಿಂದ ಅಭ್ಯಾಸ ಮಾಡುತ್ತಿರುವಾಗ ಪೂರ್ಣಾ ಹಗ್ಗವಿಲ್ಲದೆ ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತ ಭೊಂಗಿರ್ ಬಂಡೆಗಲ್ಲನ್ನು ಹತ್ತಲು ಶುರು ಮಾಡುತ್ತಾಳೆ. ಇದೇ ಮೊದಲ ಬಾರಿಗೆ ಆಕೆ ಹತ್ತಲು ಶುರು ಮಾಡಿದ್ದು. ನಡುಗುವ ಕಾಲಿನಲ್ಲಿ, ಭಯದಲ್ಲಿ, ಜಾಗರೂಕತೆಯಿಂದ ಹೆಜ್ಜೆ ಮೇಲೆ ಹೆಜ್ಜೆಯಿಡುತ್ತ ಸಾಗಿದ ಪೂರ್ಣಾ ತನಗೆ ಅರಿವಿಲ್ಲದಂತೆ ಇಡೀ ಬಂಡೆಗಲ್ಲನ್ನು ಹತ್ತುತ್ತಾಳೆ. ಅಲ್ಲಿಂದ ಅವಳನ್ನು ಜೋಪಾನವಾಗಿ ಇಳಿಸಿಕೊಂಡ ಅವಳ ಕೋಚ್ ಎಲ್ಲರ ಮುಂದೆ ಪೂರ್ಣಾಳ ಧೈರ್ಯವನ್ನು ಪ್ರಶಂಸಿಸುತ್ತಾರೆ. ಯಾವ ತರಬೇತಿಯು ಇಲ್ಲದೆ, ಯಾರ ಸಹಾಯವು ಇಲ್ಲದೆ ಮುನ್ನುಗ್ಗಿದ ಅವಳ ದಿಟ್ಟತನವನ್ನು ಹೊಗಳುತ್ತಾರೆ.
ಅಲ್ಲಿಂದ ಶುರುವಾಯಿತು ಪೂರ್ಣಾಳ ಪರ್ವತಾರೋಹಣದ ಪಯಣ.
ಎಲ್ಲವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಪರ್ವತಾರೋಹಣಕ್ಕೆ ಬೇಕಾದಂತಹ ಸವಲತ್ತುಗಳನ್ನು ಕೊಂಡುಕೊಳ್ಳುವಷ್ಟು ಪೂರ್ಣಾಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹುಡುಗರೇ ಪ್ರಧಾನವಾಗಿದ್ದಂತಹ ಕ್ಷೇತ್ರದಲ್ಲಿ ಈ ಪುಟ್ಟ ಹುಡುಗಿಗೆ ಅನುಸರಿಸಿಕೊಂಡು ಹೋಗಬೇಕಾದಂತಹ ಸಾಕಷ್ಟು ವಿಷಯಗಳಿದ್ದವು.
ಪೂರ್ಣಾಳ ಜೀವನದಲ್ಲಿ ಹೊಂಗಿರಣವಾಗಿ ಬಂದಿದ್ದು IAS ಆಫೀಸರ್ ಪ್ರವೀಣ. ಮೌಂಟ್ ಎವರೆಸ್ಟ್ ಶಿಖರವನ್ನು ಏರುವವರೆಗೂ ಎಲ್ಲ ತರಹದಲ್ಲೂ ಬೆನ್ನುಲುಬಾಗಿ ನಿಂತಿದ್ದು ಆಕೆಯ ಮೆಚ್ಚಿನ ಪ್ರವೀಣ ಸರ್. ಇವಳು ಓದುತ್ತಿದ್ದ ತೆಲಂಗಾಣ ರೆಸಿಡೆನ್ಷಿಯಲ್ ಸೋಶಿಯಲ್ ವೆಲ್ಫೇರ್ ಇನ್ಸ್ಟಿಟ್ಯೂಷನ್ಸ್ ನ ಸೆಕ್ರೆಟರಿ ಆಗಿದ್ದ ಡಾ.ಪ್ರವೀಣ ಪೂರ್ಣಾಳ ಪ್ರತಿಭೆಯನ್ನು ಗುರುತಿಸಿ ಅವಳನ್ನು ಈ ಮಟ್ಟಕ್ಕೆ ತಂದಿದ್ದು.
ಇಲ್ಲಿ ಪ್ರವೀಣ ಅವರ ಸಣ್ಣ ಪರಿಚಯ ಮಾಡಿ ಕೊಡಲೇಬೇಕು. ಇವರು ತೆಲಂಗಾಣ ರೆಸಿಡೆನ್ಷಿಯಲ್ ಸೋಶಿಯಲ್ ವೆಲ್ಫೇರ್ ಇನ್ಸ್ಟಿಟ್ಯೂಷನ್ಸ್ ನ ಸೆಕ್ರೆಟರಿ ಆಗಿ ಅಧಿಕಾರ ವಹಿಸಿಕೊಂಡಾಗ ಈ ವೆಲ್ಫೇರ್ ನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. 268 ಶಾಲೆಗಳನ್ನು ನಡೆಸುತ್ತಿರುವ ಈ ಸಂಸ್ಥೆ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯೆ ಮತ್ತು ವಸತಿಯನ್ನು ಒದಗಿಸುತ್ತದೆ. ಪ್ರವೀಣ ಬಂದು ಈ ಶಾಲೆಗಳ ತಪಾಸಣೆ ನಡೆಸಿದಾಗ ಸರಿಯಾದ ಊಟ, ಸವಲತ್ತುಗಳನ್ನು ದೊರಕದೆ ಮಕ್ಕಳು ಅನುಭವಿಸುತ್ತಿದ್ದ ನೋವನ್ನು ಕಣ್ಣಾರೆ ಕಂಡು ತಕ್ಷಣವೇ ಬೇಕಾದ ಸೌಕರ್ಯಗಳನ್ನು ಒದಗಿಸಿದರು. ಶಿಕ್ಷಣೇತರ ಚಟುವಟಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಮೈದಾನ, ಕ್ರೀಡಾ ಸಲಕರಣೆಗಳು ಹೀಗೆ ಅನೇಕ ಉತ್ತಮ ಬದಲಾವಣೆಗಳನ್ನು ಈ ಶಾಲೆಗಳಲ್ಲಿ ತಂದರು.
ಒಟ್ಟು 110 ವಿದ್ಯಾರ್ಥಿಗಳಲ್ಲಿ ರಾಕ್ ಕ್ಲೈಂಬಿಂಗ್ ಕೋರ್ಸ್ ನ್ನು ಯಶಸ್ವಿಯಾಗಿ ಮುಗಿಸಿದವರು ಇಬ್ಬರೇ. ಪೂರ್ಣ ಮತ್ತು ಆನಂದ ಎಂಬ ಇನ್ನೊಬ್ಬ ಬಾಲಕ. ಇವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಪ್ರವೀಣ ಖುದ್ದಾಗಿ ಪೋಷಕರ ಬಳಿ ಮಾತನಾಡಿ ಎಲ್ಲವನ್ನು ವಿವರಿಸಿ ಮುಂದಿನ ಪಯಣಕ್ಕೆ ಒಪ್ಪಿಸುತ್ತಾರೆ. ಅಲ್ಲಿಂದ ಈ ಇಬ್ಬರು ಡಾರ್ಜಿಲಿಂಗ್ ಮತ್ತು ಲಡಾಖ್ ಪರ್ವತಗಳನ್ನು ಯಾವುದೇ ಅಡೆತಡೆಯಿಲ್ಲದ ಹತ್ತಿ ಮತ್ತೆ ಮುಂದಿನ ಸಾಧನೆಗೆ ಅಣಿಯಾಗುತ್ತಾರೆ.
ಎವರೆಸ್ಟ್ ಶಿಖರವನ್ನು ಹತ್ತುವ ಅವಕಾಶ ಬಂದಾಗ ಪ್ರವೀಣ, ಪೂರ್ಣಾ ಮತ್ತು ಆನಂದ ಇಬ್ಬರನ್ನು ಸೂಚಿಸುತ್ತಾರೆ. ಪೂರ್ಣಾಳ ವಯಸ್ಸಿನ ವಿಚಾರದ ಪ್ರಶ್ನೆ ಬಂದಾಗ ಪ್ರವೀಣರಿಗೆ ಇದ್ದದ್ದು ಅವಳ ಪ್ರತಿಭೆಯ ಮೇಲಿನ ಭರವಸೆಯೊಂದೇ. ಪೂರ್ಣಾಳಿಗೆ ಇದ್ದದ್ದು ಒಂದೇ ಒಂದು ಗುರಿ ‘ಹೆಣ್ಣು ಮಕ್ಕಳಿಗೆ ಎಲ್ಲವು ಸಾಧ್ಯ. ಅವರು ಮನಸು ಮಾಡಿದರೆ ಏನನ್ನು ಸಾಧಿಸಬಲ್ಲರು’ ಎಂದು ಅವಳ ಜಗತ್ತಿಗೆ ತೋರಿಸಬೇಕಿತ್ತು. ನೇಪಾಳದಲ್ಲಿ ಪ್ರವೀಣ ಪೂರ್ಣಾ ಮತ್ತು ಆನಂದ್ ಇಬ್ಬರ ಪೋಷಕರನ್ನು ಕರೆಸಿ ಎವರೆಸ್ಟ್ ಪರ್ವತಾರೋಹಣದ ಅಪಾಯಗಳನ್ನು ವಿವರಿಸುತ್ತಾರೆ. ಅಪಾಯ ಸಂಭವಿಸಿದಲ್ಲಿ ದೇಹ ಸಿಗುವುದು ಸಹ ಕಷ್ಟ ಎಂದು ಹೇಳಿದಾಗ ಪೂರ್ಣಾಳ ತಂದೆ ತಾಯಿ ಹೇಳುವ ಮಾತು ‘ಅವಳು ನಮ್ಮ ಮಗಳಲ್ಲ, ನಿಮ್ಮ ಮಗಳು, ಎಲ್ಲರ ಮಗಳು’.
ಪೂರ್ಣಾಳ ಎವರೆಸ್ಟ್ ಶಿಖರದ ಪಯಣ
ಮೇ 25, 2014 ರಂದು ಪೂರ್ಣಾ ಆನಂದನ ಜೊತೆಗೂಡಿ ಎವರೆಸ್ಟ್ ಶಿಖರದತ್ತ ಮೊದಲ ಹೆಜ್ಜೆಯಿಡುತ್ತಾಳೆ. ಆಗ ಆಕೆಗೆ ಕೇವಲ 13 ವರ್ಷ ವಯಸ್ಸು. ಒಟ್ಟು 52 ದಿನಗಳ ಕಾಲದ ಈ ಪಯಣ ಪೂರ್ಣಾ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮಾರ್ಗ ಮಧ್ಯದಲ್ಲಿಯೇ ಅವಳಿಗೆ ಚಳಿಜ್ವರ ಶುರುವಾಯಿತು. ತಿಂದದ್ದೆಲ್ಲ ಒಂದೇ ಸಮನೆ ವಾಂತಿ, ಸುಸ್ತು, ನಿತ್ರಾಣ.. ವಿಷಯ ತಿಳಿದ ಪ್ರವೀಣ ಅವಳ ಆರೋಗ್ಯದ ಸಮಸ್ಯೆಯಿಂದ ಮುಂದೆ ಉಂಟಾಗಬಹುದಾದ ಭೀತಿಯಿಂದ ಎಲ್ಲವನ್ನು ಅಲ್ಲಿಗೆ ನಿಲ್ಲಿಸಿ ಕ್ಯಾಂಪ್ ಗೆ ಮರಳಲು ಸೂಚಿಸುತ್ತಾರೆ. ಆದರೆ ಪೂರ್ಣಾ ಅದಾಗಲೇ ಎವರೆಸ್ಟ್ ಹತ್ತಿಯೇ ತೀರುವೆ ಎಂದು ತನ್ನೊಂದಿಗೆ ತಾನೇ ಶಪಥ ಹಾಕಿಕೊಂಡಿದ್ದಾಗಿತ್ತು.
ಹಿಂದೂ ಪತ್ರಿಕೆಯ ಸಂದರ್ಶನದಲ್ಲಿ ಪೂರ್ಣಾ ಹೇಳಿಕೊಳ್ಳುತ್ತಾಳೆ; ಅವಳಿಗೆ ಜೀವನದಲ್ಲಿ ಭಯವಾಗಿದ್ದು ಎರಡೇ ಬಾರಿ. ಮೊದಲ ಬಾರಿಗೆ ಭೊಂಗಿರ್ ರಾಕ್ ನ್ನು ಹತ್ತತೊಡಗಿದಾಗ ಆದ ಭಯ. ಎರಡನೆಯದು ಎವರೆಸ್ಟ್ ಶಿಖರವನ್ನು ಹತ್ತುವಾಗ ಕಂಡ ಮಂಜುಗಟ್ಟಿದ ದೇಹಗಳು. ದೇಹಗಳನ್ನು ಮರಳಿ ಒಯ್ಯುವವರಿಲ್ಲದೆ ಅನಾಥವಾಗಿ ಅಲ್ಲಿಯೇ ಕೊಳೆತು ನಾರುತ್ತಿದ್ದವಂತೆ.
ಈ ಕ್ಲಿಷ್ಟ ಪರ್ವತಾರೋಹಣದಲ್ಲಿ ಇವರು ತಂದಿದ್ದ ಪ್ಯಾಕೇಜ್ಡ್ ಫುಡ್ ವಾಸನೆ ಬಂದು ಪೂರ್ಣಾಳಿಗೆ ಊಟವೇ ಸೇರುತ್ತಿರಲಿಲ್ಲವಂತೆ. ಯಾವಾಗ ಮನೆಗೆ ಹೋದೆನೋ ಅಮ್ಮ ಮಾಡುವ ಬಿಸಿ ಬಿಸಿ ಊಟ ತಿಂದೆನೋ ಎಂದು ಅದೆಷ್ಟು ಬಾರಿ ಅಂದುಕೊಂಡಳೋ.. ಹಲವು ದಿನಗಳ ಕಾಲ ಚಾಕಲೇಟ್, ಡ್ರೈ ಫ್ರ್ಟ್ಸ್ ತಿಂದೇ ದಿನಗಳನ್ನು ಕಳೆದರು.
ಎವರೆಸ್ಟ್ ನ ತುತ್ತ ತುದಿಯನ್ನು ಮುಟ್ಟಿದಾಗ ಪೂರ್ಣಾಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅವಳು ಮೊದಲು ಕರೆ ಮಾಡಿದ್ದು ಪ್ರವೀಣ್ ಸರ್ ಗೆ. ತಮ್ಮೊಟ್ಟಿಗೆ ಒಯ್ದಿದ್ದ್ದ ಭಾರತದ, ತೆಲಂಗಾಣದ, ತೆಲಂಗಾಣ ರೆಸಿಡೆನ್ಷಿಯಲ್ ಸೋಶಿಯಲ್ ವೆಲ್ಫೇರ್ ಇನ್ಸ್ಟಿಟ್ಯೂಷನ್ಸ್ ನ ಧ್ವಜಗಳನ್ನು ನೆಟ್ಟು ಆನಂದ ಮತ್ತು ಪೂರ್ಣಾ ಮರಳಿದರು.
ಹುಡುಗಿಯರೆಂದರೆ ತಾತ್ಸಾರ ಪಡುತ್ತಿದ್ದವರ ಮುಂದೆ ಪೂರ್ಣಾ ಹುಡುಗಿಯರು ಏನು ಬೇಕಾದರೂ ಸಾಧಿಸಬಲ್ಲರು ಎಂದು ತೋರಿಸಿದಳು. 2010 ರಲ್ಲಿ ಅಮೆರಿಕಾದ ಹುಡುಗನೊಬ್ಬ ಎವರೆಸ್ಟ್ ಶಿಖರವನ್ನು ಏರಿ ಎವರೆಸ್ಟ್ ಹತ್ತಿದ ಜಗತ್ತಿನ ಮೊದಲ ಕಿರಿಯ ಬಾಲಕ ಎಂದೆನಿಸಿಕೊಂಡಿದ್ದ. ಕೇವಲ ಅವನಿಗಿಂತ ಒಂದು ತಿಂಗಳು ಚಿಕ್ಕವಳಾದ ಪೂರ್ಣಾ ಈಗ ಆ ಬಿರುದನ್ನು ಪಡೆದು ಭಾರತಕ್ಕೆ ಹೆಮ್ಮೆ, ಮೆರುಗನ್ನು ತಂದಿದ್ದಾಳೆ.
ಸದ್ಯಕ್ಕೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿರುವ ಪೂರ್ಣಾಳಿಗೆ ಪ್ರವೀಣ್ ಸರ್ ಹಾಗೆ IAS ಆಫೀಸರ್ ಆಗುವ ಕನಸಿದೆ.
ಅಮೆಜಾನ್ ಪ್ರೈಮ್ ನಲ್ಲಿ ರಾಹುಲ್ ಬೋಸ್ ನಿರ್ದೇಶಿಸಿ ತಾನೇ ‘ಪ್ರವೀಣ್’ ಆಗಿ ನಟಿಸಿದ ಪೂರ್ಣಾಳ ಜೀವನಾಧಾರಿತ ಚಿತ್ರದಲ್ಲಿ ಅವಳ ಹಳ್ಳಿಯ ಜೀವನ, ತಂದೆ ತಾಯಿ, ಹುಡುಗಿಯರ ಬಗ್ಗೆ ಜನರ ಮನಸ್ಥಿತಿ, ತೆಲಂಗಾಣ ರೆಸಿಡೆನ್ಷಿಯಲ್ ಸೋಶಿಯಲ್ ವೆಲ್ಫೇರ್ ಇನ್ಸ್ಟಿಟ್ಯೂಷನ್ಸ್ ನ ಶಾಲೆಗಳ ಸ್ಥಿತಿಗತಿ ಎಲ್ಲವನ್ನು ತೋರಿಸಿದ್ದಾರೆ.
ಪೂರ್ಣಾಳ ಜೊತೆಗೆ ಇನ್ನೊಬ್ಬ ಹುಡುಗಿ ಪ್ರಿಯಾ ಎಂಬ ಹುಡುಗಿಯ ಕತೆಯನ್ನು ಕಾಲ್ಪನಿಕವಾಗಿ ಹೆಣೆಯಲಾಗಿದೆ. ತೆಲಂಗಾಣ ರೆಸಿಡೆನ್ಷಿಯಲ್ ಸೋಶಿಯಲ್ ವೆಲ್ಫೇರ್ ಇನ್ಸ್ಟಿಟ್ಯೂಷನ್ಸ್ ನ ಹಾಸ್ಟೆಲ್ ಸೇರಲೆಂದು ಪೂರ್ಣಾ ಮತ್ತು ಪ್ರಿಯಾ ಮನೆಯಿಂದ ಓಡಿ ಹೋಗುತ್ತಿರುವಾಗ ಪ್ರಿಯಾಳ ತಂದೆಯ ಬಳಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಆತ ತರಾತುರಿಯಲ್ಲಿ ವಯಸಾದವನಿಗೆ ತನ್ನ ಮಗಳನ್ನು ಮಾಡುವೆ ಮಾಡಿ ಕೊಡುತ್ತಾನೆ. ಪ್ರಿಯಾ ಗರ್ಭಿಣಿಯಾದಾಗ ಆಕೆಗಿನ್ನೂ 15- 16 ರ ವಯಸ್ಸು. ಹೆರಿಗೆ ಸಮಯದಲ್ಲಿ ಕಾಮಾಲೆಯಾಗಿ ಸರಿಯಾದ ಚಿಕಿತ್ಸೆ ದೊರಕದೆ ಪ್ರಿಯಾ ಮರಣ ಹೊಂದುತ್ತಾಳೆ.
ಸಮಯ ಸಿಕ್ಕಾಗ ಒಮ್ಮೆ ನೋಡಿ. ಎವರೆಸ್ಟ್ ಶಿಖರ ಏರಿದ ಅತ್ಯಂತ ಕಿರಿಯ ಬಾಲಕಿ ನಮ್ಮ ಭಾರತೀಯಳು ‘ಪೂರ್ಣಾ ಮಾಲವತ್’ ಎಂದು ಹೆಮ್ಮೆಯಿಂದ ಹೇಳಿ.