ಅತಿ ಕಡಿಮೆ ದರದ ನೀರಿನ ಫಿಲ್ಟರ್ ತಯಾರಿಸಿದ ನಿರಂಜನ ಕಾರಗಿ: ಹುಲ್ಲಾಗು ಬೆಟ್ಟದಡಿ (3)
ನಮ್ಮ ರಾಜ್ಯದಲ್ಲಿ ಅಷ್ಟೇ ಏಕೆ ದೇಶದಲ್ಲೇ ಕುಡಿಯುವ ನೀರಿಗೆ ತಾಪತ್ರಯವಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಈಗಲೂ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತದೆ. ಕುಡಿಯುವ ನೀರಿಗಾಗಿ ಜನ ಮೈಲಿಗಟ್ಟಲೆ ಸವಾರಿ ಮಾಡಬೇಕಿದೆ. ಇಷ್ಟೆಲ್ಲಾ ಆದ ಮೇಲು ಸಿಕ್ಕ ನೀರು ಶುದ್ಧವಿದೆಯೇ? ಇಲ್ಲ!
ನಗರಗಳಲ್ಲಿ ಕ್ಲೋರಿನ್ ಬಳಸಿ ನೀರಿನಲ್ಲಿರುವ ಬ್ಯಾಕ್ಟೀರಿಯಾ, ಕೊಳೆ ಇತ್ಯಾದಿಗಳನ್ನು ಶುದ್ಧ ಮಾಡುತ್ತಾರೆ. ಅಷ್ಟಾಗಿಯೂ ಅಕ್ವಾಗ್ಯಾರ್ಡ್ ಬಳಕೆ ಇಲ್ಲದೆ ನೀರು ಕುಡಿಯುವುದು ಅಪಾಯವೇ ಸರಿ.
ಶ್ರೀಮಂತರಿಗಂತೂ ನೀರಿನ ಬೆಲೆಯೇ ಗೊತ್ತಿಲ್ಲ. 24 ಗಂಟೆ ದಂಡಿಯಾಗಿ ನಲ್ಲಿಗಳಲ್ಲಿ ನೀರು ಬರುತ್ತಿದ್ದಾಗ ನೀರಿನ ಅಭಾವದ ಅರಿವು ಆಗಲು ಸಾಧ್ಯವೇ ಇಲ್ಲ. ಇನ್ನು ಮಧ್ಯಮ ವರ್ಗದ ಕುಟುಂಬಗಳು.. ಇವರೆಲ್ಲ ನೀರನ್ನು ಹಿತ ಮಿತವಾಗಿ ಬಳಸಿದರೂ ಅಕ್ವಾಗ್ಯಾರ್ಡ್ ಮೊರೆ ಹೋಗುತ್ತಾರೆ. ಆದರೆ ಬಡವರಿಗೆ ಇದೆಲ್ಲ ದೂರದ ಬೆಟ್ಟ. ಕುಡಿಯಲು ನೀರು ಸಿಕ್ಕುವುದೇ ಹರಸಾಹಸವಾಗಿರುವಾಗ ದುಬಾರಿ ಅಕ್ವಾಗ್ಯಾರ್ಡ್ ಗಳನ್ನೂ ಎಲ್ಲಿಂದ ತಂದಾರು? ಎಲ್ಲ ಕಡೆಯೂ ಅಕ್ವಾಗ್ಯಾರ್ಡ್ ಗಳನ್ನೂ ಬಳಸಿಕೊಂಡು ನೀರು ಶುದ್ಧಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ಯುದ್ಧದಲ್ಲಿರುವ ಸೈನಿಕರು. ಕೆಲವೊಮ್ಮೆ ಭೂಮಿಯನ್ನು ಬಗೆದು ನೀರು ಕುಡಿಯುವ ಪರಿಸ್ಥಿತಿ ಬರುತ್ತದೆಯಂತೆ. ಅಂತಹ ಸಮಯದಲ್ಲಿ ನೀರಿನ ಶುದ್ಧತೆಯ ಬಗ್ಗೆ ಗಮನ ಯಾರಿಗೆ?
ಅಕ್ವಾಗ್ಯಾರ್ಡ್ ನ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂದರೆ ನಾನೀಗ ಹೇಳಹೊರಟಿರುವುದು ಕಡಿಮೆ ಬೆಲೆಯಲ್ಲಿ, ಎಲ್ಲರ ಕೈಗೆಟುಕುವ ಬೆಲೆಯ ನೀರಿನ ಫಿಲ್ಟರ್ ನ್ನು ಕಂಡು ಹಿಡಿದು ದೇಶ ವಿದೇಶಗಳಲ್ಲಿ ಸುದ್ದಿ ಮಾಡಿದ ನಿರಂಜನ ಕಾರಗಿ ಬಗ್ಗೆ.
ನಮ್ಮ ಕನ್ನಡಿಗನ ಸಾಧನೆ
ಹೌದು, ನಿರಂಜನ ಕಾರಗಿ ನಮ್ಮ ಹೆಮ್ಮೆಯ ಕನ್ನಡಿಗ. ಬೆಳಗಾವಿಯ ಈ ಹುಡುಗ ಫಿಲ್ಟರ್ ಕಂಡು ಹಿಡಿದಾಗ ಆತನಿಗೆ ಕೇವಲ 23 ವರುಷ.
ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ ನಿರಂಜನ ರಜೆಗೆಂದು ಊರಿಗೆ ಬಂದಿದ್ದ. ಒಂದು ದಿನ ಸರಕಾರೀ ಶಾಲೆಯೊಂದರ ಆಟದ ಮೈದಾನಕ್ಕೆ ಸ್ನೇಹಿತರೊಂದಿಗೆ ಫುಟ್ಬಾಲ್ ಆಡಲು ಹೋದಾಗ ಆ ಶಾಲೆಯ ಹುಡುಗರು ನೀರಿನ ಟ್ಯಾಂಕಿನ ನಲ್ಲಿಯಿಂದ ನೀರು ಕುಡಿಯುತ್ತಿದ್ದುದನ್ನು ನೋಡಿದ. ಅಲ್ಲೆಯೇ ನೀರು ನಿಂತು ಕ್ರಿಮಿ ಕೀಟಗಳು ಹಾರಾಡುತ್ತಿದ್ದವು. ಅದು ಅಲ್ಲದೆ ಆ ಟ್ಯಾಂಕಿನ ಅವಸ್ಥೆ ಹೇಳ ತೀರದಾಗಿತ್ತು. ತಿಂಗಳುಗಳಿಂದ ಸ್ವಚ್ಛ ಮಾಡದೆ ಇರುವುದನ್ನು ಟ್ಯಾಂಕು ಸಾರುತ್ತಿತ್ತು. ಮಕ್ಕಳ ಆರೋಗ್ಯದ ಬಗ್ಗೆ ಕನಕರಿಸಿದ ನಿರಂಜನ್ ಮತ್ತು ಆತನ ಸ್ನೇಹಿತರು ಶಾಲೆಗೇ ಅಕ್ವಾಗ್ಯಾರ್ಡ್ ಒಂದನ್ನು ಕೊಡುವುದರ ಬಗ್ಗೆ ಯೋಚಿಸಿದರು. ಆದರೆ ಅಕ್ವಾಗ್ಯಾರ್ಡ್ ನ ಬೆಲೆ ತುಂಬಾ ದುಬಾರಿಯಾಗಿತ್ತು. ಆಗ ನಿರಂಜನ ವಿದ್ಯಾರ್ಥಿಯೊಬ್ಬ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುತ್ತಿದ್ದುದನ್ನು ನೋಡಿದ. ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುವವರ ಸಂಖ್ಯೆ ಹೆಚ್ಚು. ಬಹುತೇಕ ಎಲ್ಲರು ಪ್ಲಾಸ್ಟಿಕ್ ಬಾಟಲಗಳನ್ನು ಉಪಯೋಗಿಸುತ್ತಾರೆ. ಬಾಟಲಿಗಳಿಗೆಂದೇ ಫಿಲ್ಟರ್ ಒಂದನ್ನು ಕಂಡು ಹಿಡಿಯಬಹುದಲ್ಲ ಎಂದು ನಿರಂಜನ್ ಯೋಚಿಸಿದ.
ಅವನ ಆವಿಷ್ಕಾರದ ಪರಿಣಾಮವೇ ಈ ನೀರಿನ ಫಿಲ್ಟರ್. ಇತರೆ ಅಕ್ವಾಗ್ಯಾರ್ಡ್ ಗಳಂತೆ ಇದು ಆಕಾರದಲ್ಲಿ ದೊಡ್ಡದಾಗಿ ಗೋಡೆಗೆ ನೇತು ಹಾಕಿ ನಲ್ಲಿಗೆ ಜೋಡಿಸುವಂತಹದ್ದಲ್ಲ. ಬದಲಾಗಿ ಕುಡಿಯುವ ನೀರಿನ ಬಾಟಲಿಗೆ ನೇರವಾಗಿ ಅಳವಡಿಸುವಂತಹದ್ದು. ಬೆರಳಿನಷ್ಟು ಉದ್ದವಿರುವ ಈ ಫಿಲ್ಟರ್ ನ್ನು ಯಾರು ಬೇಕಾದರೂ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು.
ಮುಂದೇನಾಯಿತು?
ನಿರಂಜನ್ ನೀರಿನ ಫಿಲ್ಟರ್ ನ್ನು ಕಂಡು ಹಿಡಿದದ್ದು ತನ್ನ ಇಂಜಿನಿಯರಿಂಗ್ ನ ಕೊನೆಯ ವರುಷದ ಪ್ರೋಜೆಕ್ಟಿನಲ್ಲಿ. ಆದರೆ ಇದನ್ನು ನೋಡಿದ ಅವನ ಲೆಕ್ಚರರ್ ಗಳು ‘ಇದೇನಿದು ಮಕ್ಕಳ ಆಟಿಕೆ’ ಎಂದು ನಿರ್ಲಕ್ಷಿಸಿದರು. ಆದರೆ ನಿರಂಜನ ಧೃತಿಗೆಡಲಿಲ್ಲ. ಹುಬ್ಬಳ್ಳಿಯ ‘ದೇಶಪಾಂಡೆ ಫೌಂಡೇಶನ್’ ಎಂಬ NGO ಕಂಪನಿಯನ್ನು ಸಂಪರ್ಕಿಸಿದ. ಅಲ್ಲಿ ಇವನಿಗೆ ಇನ್ನು ಹೆಚ್ಚು ಫಿಲ್ಟರ್ ಗಳನ್ನೂ ತಯಾರಿಸಲು ಸಹಾಯ ಧನ ಸಿಕ್ಕಿತು.
ಸರಕಾರೀ ಅನುಮತಿ ಪಡೆದ ಬೆಳಗಾವಿಯ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಸಂಶೋಧನೆ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕಳುಹಿಸಿದ. ಪ್ರಯೋಗಾಲಯದ ಪರೀಕ್ಷೆಯಲ್ಲಿ ತೇರ್ಗಡೆಯಾದ ಈ ಫಿಲ್ಟರ್ ಎಲ್ಲರು ಬಳಸಲು ಉಪಯುಕ್ತವೆಯೆಂದು ತೀರ್ಮಾನವಾಯಿತು.
ಆದರೆ ಇಷ್ಟು ಚಿಕ್ಕ, ಪ್ಲಾಸ್ಟಿಕ ಕೊಳವೆಯಂತಹ ಫಿಲ್ಟರ್ ನೀರನ್ನು 70% ಶುದ್ಧಿ ಮಾಡುತ್ತದೆಯೆಂದು ಹೇಳಿದರೆ ಜನ ನಂಬಲಿಲ್ಲ. ಈ ಚಿಕ್ಕ ಕೊಳವೆಯಲ್ಲಿಯೇ ಆಕ್ಟಿವೇಟೆಡ್ ಕಾರ್ಬನ್, ಹತ್ತಿ, ನೆಟ್ಟೆಡ್ ಮೆಶ್ ಮತ್ತು ಇನ್ನು ಒಂದು ಪ್ರಬಲವಾದ ನಿರಂಜನ ಕಂಡು ಹಿಡಿದ ನೀರು ಶುದ್ಧಿ ಮಾಡುವ ರಾಸಾಯನಿಕವಿದೆ ಎಂದು ಹೇಳಿದರೆ ಯಾರು ಒಪ್ಪಲಿಲ್ಲ.
ಸುಮ್ಮನೆ ಮನೆಯಲ್ಲಿ ಕೂರದ ನಿರಂಜನ ಹತ್ತಿರದ ಶಾಲೆಗಳಿಗೆ ಭೇಟಿ ನೀಡತೊಡಗಿದ. ನೀರಿನ ಬಾಟಲಿಗೆ ಈ ಕೊಳವೆಯ ಫಿಲ್ಟರ್ ನ್ನು ಹಾಕಿದರೆ ಸಾಕು, ಶುದ್ಧಿಯಾದ ನೀರನ್ನು ಕುಡಿಯಬಹುದು ಎಂದು ವಿವರಿಸಿದ. ಒಂದಷ್ಟು ಜನ ಆಸಕ್ತಿ ತೋರಿಸಿ ಕೊಂಡುಕೊಂಡರು. ನೀರು ಶುದ್ಧವಾಗುವುದನ್ನೂ ಮನಗಂಡರು. ಸೋಶಿಯಲ್ ಮೀಡಿಯಾ ಮತ್ತು ಜನರ ಮೆಚ್ಚುಗೆಯಿಂದ ನಿರಂಜನನಿಗೆ ಆರ್ಡರ್ ಗಳು ಬರತೊಡಗಿದವು.
Nirnal ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ಈ ಫಿಲ್ಟರ್ ಗೆ ಎಲ್ಲ ಕಡೆಯಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ಸದ್ಯಕ್ಕೆ ಒಂದೇ ಬಾಟಲಿಗೆ ಒಪ್ಪುವ ಅಳತೆಯಲ್ಲಿ ತಯಾರಾಗುತ್ತಿರುವ ಈ ಫಿಲ್ಟರ್ ನ್ನು ದೊಡ್ಡ ಬಾಟಲಿಗಳಿಗೋಸ್ಕರವೂ ತಯಾರಿಸುವ ಯೋಜನೆಯಿದೆ.
ಕರ್ನಾಟಕ ಸರಕಾರದ ಎಲೆವೆಂಟ್ 100 ಸಮಾವೇಶದಲ್ಲಿ ನಿರಂಜನನ ಫಿಲ್ಟರ್ ಗೆ ಪ್ರಶಸ್ತಿ ಹಾಗು ಸ್ಟಾರ್ಟ್ ಅಪ್ ಗೆ ಧನ ಸಹಾಯ ಸಿಕ್ಕಿದೆ. ಪ್ರತಿ ದಿನಕ್ಕೆ 10000 ಗಳಷ್ಟು ಫಿಲ್ಟರ್ ತಯಾರಿಸುತ್ತರುವ ನಿರಂಜನ ಇದನ್ನು ಇನ್ನು ಅಭಿವೃದ್ಧಿಗೊಳಿಸಿ ಅಲ್ಟ್ರಾ ಫಿಲ್ಟರ್ ತಯಾರಿಸುವ ಯೋಜನೆಯಲ್ಲಿದ್ದಾರೆ. ಕರ್ನಾಟಕ, ಸಿಂಗಪೋರ್, ಆಸ್ಟ್ರೇಲಿಯಾ ಹಾಗು ಇನ್ನು ಹಲವು ಕಡೆಗಳಲ್ಲಿ ಈ ಫಿಲ್ಟರ್ ಸದ್ದು ಮಾಡಿದೆ.
ಕೇವಲ 30 ರೂಪಾಯಿಗಳಿಗೆ ಸಿಗುವ ಈ ಫಿಲ್ಟರ್ ಹಳ್ಳಿಯ ಶಾಲೆ, ಮನೆಗಳಲ್ಲಿ ಕಲುಷಿತ ನೀರಿನಿಂದ ಉಂಟಾಗುತ್ತಿರುವ ಅನಾರೋಗ್ಯವನ್ನು ತಪ್ಪಿಸಬಲ್ಲದು. ಎಷ್ಟೋ ಮಕ್ಕಳಿಗೆ ಇದರಿಂದ ಅನುಕೂಲವಾಗಬಹುದು.
ಫೇಸ್ಬುಕ್ಕಿನಲ್ಲಿರುವ Nirnal ಎಂಬ ಪೇಜ್ ನಲ್ಲಿ ನಿರಂಜನನನ್ನು ನೇರವಾಗಿ ಸಂಪರ್ಕಿಸಿ ಈ ಫಿಲ್ಟರ್ ಗಳನ್ನೂ ತರಿಸಿಕೊಳ್ಳಬಹುದು. ನಮ್ಮ ಕೈಲಾದುದನ್ನು ಮಾಡೋಣ. ಹೆಚ್ಚು ಜನರಿಗೆ ಈ ಮಾಹಿತಿ ತಲುಪಿಸೋಣ.