ತಬ್ಬಲಿಯು ನೀನಾದೆ ಮಗನೇ..(Tabbaliyu neenade magane)– S.L.ಭೈರಪ್ಪ
ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನೊ
ಸತ್ಯವೆ ನಮ್ಮ ತಾಯಿ ತಂದೆ ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು…!!
ನಾವೆಲ್ಲ ಈ ಹಾಡು ಕೇಳುತ್ತ ಬೆಳೆದವರು. ಕೊಟ್ಟ ಮಾತಿಗೆ ತಪ್ಪದೆ ಹೆಬ್ಬುಲಿಗೆ ತನ್ನನ್ನೇ ತಾನು ಸಮರ್ಪಿಸಿಕೊಳ್ಳುವ ಪುಣ್ಯಕೋಟಿಯ ಕಥೆ. ಕೇಳಿದರೆ ಭಾವುಕರಾಗುತ್ತೇವೆ.
ಗೋವನ್ನು ಮುಖ್ಯ ಪಾತ್ರವನ್ನಾಗಿ ಇಟ್ಟುಕೊಂಡು 1968 ರಲ್ಲಿ ಭೈರಪ್ಪನವರು ಬರೆದ ಕಾದಂಬರಿ ಇದು. ಆಧುನಿಕತೆಯ ಸೊಬಗಿಗೆ ಮಾರು ಹೋಗಿ ನಮ್ಮತನವನ್ನೇ ಮರೆತರೆ ಪರಿಸ್ಥಿತಿ ಏನಾಗುತ್ತದೆ ಎಂದು ತೋರಿಸುವ ಅದ್ಭುತ ಕಾದಂಬರಿಯಿದು. 1968 ರಲ್ಲಿ ಬರೆದಿದ್ದಾದರೂ ಸದಾ ಕಾಲಕ್ಕೆ ಅನ್ವಯವಾಗುವಂತಹ ಕತೆಯ, ನೀತಿಯ ಜಾಡು.ಈ ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ದೇಶಿಸಿದ್ದಾರೆ. ಹಿಂದಿಯಲ್ಲಿ ಸಹ ಗೋಧೂಳಿ ಎಂಬ ಹೆಸರಿನಿಂದ ಬಿಡುಗಡೆಯಾಗಿದೆ.
ಕಾಳಿಂಗೇಗೌಡ ಎಂಬಾತನ ವಂಶ ಗೋವುಗಳನ್ನು ತಲೆಮಾರುಗಳಿಂದ ಸಾಕುತ್ತ ಬಂದಿರುತ್ತಾರೆ. ಇವರಿಗೆ ಗೋವೆಂದರೆ ಬರಿ ಪ್ರಾಣಿಯಲ್ಲ, ದೇವರು!.. ಅದು ಅಲ್ಲದೆ ಇವರು ಪುಣ್ಯಕೋಟಿ ಗೋವಿನ ವಂಶಸ್ಥರು. ಹೀಗಾಗಿ ಪ್ರತಿಯೊಂದು ಗೋವು ಪುಣ್ಯಕೋಟಿಯ ತಳಿಯಾದ್ದರಿಂದ ಸ್ವಲ್ಪ ಹೆಚ್ಚಿನ ಗೌರವ ಮತ್ತು ಆರಾಧನೆ. ಕಾಳಿಂಗೇಗೌಡನ ಮಗ ತೋಳವೊಂದು ತನ್ನ ಆಕಳನ್ನು ತಿನ್ನಲು ಬಂದಾಗ ಅದರೊಂದಿಗೆ ಸೆಣಸಾಡಿ , ಗೋವನ್ನು ರಕ್ಷಿಸಿ ಆ ಕಾಳಗದಲ್ಲಿ ವೀರ ಮರಣ ಹೊಂದಿರುತ್ತಾನೆ. ಹಳ್ಳಿಯವರಿಗೆ ಇವರ ವಂಶಸ್ಥರೆಂದರೆ ಅಪಾರ ಗೌರವ. ಇಡೀ ಹಳ್ಳಿಗೆ ಹಳ್ಳಿಯೇ ಗೋವುಗಳನ್ನು ದೇವರಂತೆ ಕಾಣುತ್ತಿರುತ್ತಾರೆ.
ಸರಕಾರ ಕಾಳಿಂಗೇಗೌಡನ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತದೆ. ತನ್ನ ಮಗನ ಸಮಾಧಿಯಿದ್ದ ಜಮೀನು ಸಹ ಸಮಾಧಿಯಾಗಿದ್ದನ್ನು ನೋಡಿ ಕಾಳಿಂಗೇಗೌಡ ಕೊರಗಿ ಸತ್ತು ಹೋಗುತ್ತಾನೆ. ಅಜ್ಜನ ಮರಣದ ನಂತರ ಮೊಮ್ಮಗ ಕಾಳಿಂಗ ಹಳ್ಳಿಗೆ ಬಂದು ಸರಕಾರದಿಂದ ರಸ್ತೆಯಾದ ಜಮೀನಿಗೆ ಪರಿಹಾರ ಕೇಳುತ್ತಾನೆ. ಕಾಳಿಂಗ ಅಮೆರಿಕಾದಲ್ಲಿ ಕೃಷಿ ಅಧ್ಯಯನ ಮಾಡಿ ಅಲ್ಲಿಯ ಹುಡುಗಿ ಹಿಲ್ಡಾಳನ್ನು ಮದುವೆಯಾಗಿ ಇಬ್ಬರಿಗೂ ಒಂದು ಮಗುವಾಗಿರುತ್ತದೆ. ತನ್ನ ಜೊತೆ ಹೆಂಡತಿ ಮಗನನ್ನು ಹಳ್ಳಿಗೆ ಕರೆ ತಂದಿರುತ್ತಾನೆ. ಇವರಿಬ್ಬರಿಗೂ ಹಳ್ಳಿಯಲ್ಲಿ ತಮ್ಮ ನವೀನ ಕೃಷಿ ಪ್ರಯೋಗಗಳನ್ನು ಮಾಡಿ ದುಡ್ಡು ಗಳಿಸುವ ಹೆಬ್ಬಯಕೆ. ಅಮೆರಿಕಾನಲ್ಲಿ ಗೋಮಾಂಸವನ್ನು ತಿಂದು ಬೆಳೆದ ಹಿಲ್ಡಾಳಿಗೆ ಹಳ್ಳಿಯಲ್ಲಿ ಅದಕ್ಕೆ ಅನುಮತಿಯಿಲ್ಲದುದ್ದರಿಂದ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹಳ್ಳಿ ಜನರ ನಂಬಿಕೆಗಳು, ಆಧುನಿಕತೆಗೆ ಮಾರು ಹೋಗದೆ ತಮ್ಮತನವನ್ನು ಮುಂದುವರೆಸಿಕೊಂಡು ಹೋಗುವ ಮನಸುಗಳ ಮಧ್ಯೆ ಕಾಳಿಂಗ ಮತ್ತು ಹಿಲ್ಡಾ ಕಳೆದು ಹೋಗುತ್ತಾರೆ.
ಕಾಳಿಂಗ ಮತ್ತು ವೆಂಕಟರಮಣ ಬಾಲ್ಯ ಸ್ನೇಹಿತರು. ಇಬ್ಬರಿಗೂ ಒಂದೇ ರೀತಿಯ ಸಂಸ್ಕಾರ ಕೊಟ್ಟು ಬೆಳೆಸಿದ್ದರೂ ಆಧುನಿಕತೆಗೆ ಮಾರು ಹೋಗಿ ತನ್ನ ವಂಶದ ಬೇರನ್ನೇ ಕಿತ್ತೊಗೆಯುವ ಕಾಳಿಂಗ ಮತ್ತು ಸಂಪ್ರದಾಯ ಧಾರ್ಮಿಕತೆಯನ್ನು ಪಾಲಿಸುವ ವೆಂಕಟರಮಣನ ಮಧ್ಯೆ ಅಜಗಜಾಂತರ ವ್ಯತ್ಯಾಸ. ವೆಂಕಟರಮಣ ಓದಿ, ಸರಕಾರಿ ಕೆಲಸಕ್ಕೆ ಹೋಗುವ ಪ್ರವೀಣತೆಯಿದ್ದರೂ ತನ್ನ ಅಜ್ಜ ಕಟ್ಟಿದ ದೇವಸ್ಥಾನದಲ್ಲಿ ಪೂಜಾರಿಯಾಗಿರುತ್ತಾನೆ. ಹಿಲ್ಡಾಳಿಗೆ ಗೋಮಾಂಸದ ರುಚಿಯನ್ನು ಮರೆಯಲಾಗುವುದಿಲ್ಲ. ಒಂದು ದಿನ ಕಾಳಿಂಗ ಮತ್ತು ಹಿಲ್ಡಾ ಸೇರಿ ತಮ್ಮ ಮನೆಯಲ್ಲಿ ಗೋವನ್ನು ಕೊಂದು ಮಾಂಸ ತಿನ್ನುತ್ತಾರೆ. ಇದು ಹಳ್ಳಿಯ ಜನರಿಗೆ ತಿಳಿದು, ಜನರೆಲ್ಲ ಆಕ್ರೋಶದಲ್ಲಿ ಕಾಳಿಂಗನ ಬೆಳೆಯನ್ನು ನಾಶ ಮಾಡಿ, ಆತನನ್ನು ಪಂಚಾಯಿತಿ ಕಟ್ಟೆಗೆ ತಂದು ನಿಲ್ಲಿಸುತ್ತಾರೆ. ಕಾಳಿಂಗನ ತಾಯಿಗೆ ತಮ್ಮ ಮಗನ ಈ ಅನಿಷ್ಟ ಬುದ್ದಿಯನ್ನು ನೋಡಿ ಸಂಕಟವಾಗುತ್ತದೆ. ಒಂದು ದಿನ ಆ ತಾಯಿ ತೀರಿಕೊಂಡಾಗ ಹಳ್ಳಿಯವರು ಕಾಳಿಂಗ ಅಂತ್ಯ ಸಂಸ್ಕಾರ ಮಾಡದಂತೆ ಪಟ್ಟು ಹಿಡಿಯುತ್ತಾರೆ.
ಕಾಳಿಂಗನಿಗೆ ಕೊನೆಗೂ ತನ್ನ ತಪ್ಪಿನ ಅರಿವಾಗುತ್ತದೆ. ಸ್ವತಃ ಆತನೇ ಗೋವುಗಳ ರಕ್ಷಣೆಗೆ ಮುಂದಾಗುತ್ತಾನೆ. ಹಿಂದೊಮ್ಮೆ ಮುದಿ ಗೋವುಗಳನ್ನು ಕಾಳಿಂಗ ಮತ್ತು ಹಿಲ್ಡಾ ದುಡ್ಡಿಗಾಗಿ ಕಟುಕರಿಗೆ ಮಾರಿರುತ್ತಾರೆ. ಅದರಲ್ಲಿ ಕಾಳಿಂಗನ ಪುಣ್ಯಕೋಟಿ ತಳಿಗಳು ಸೇರಿರುತ್ತವೆ. ತಪ್ಪಿನ ಅರಿವಾದಾಗ ಕಾಳಿಂಗ ಗೋವುಗಳನ್ನು ರಕ್ಷಿಸಲೆಂದು ಕಟುಕರನ್ನು ಅರಸಿ ಮುಂಬಯಿಗೆ ಹೋಗುತ್ತಾನೆ. ಆದರೆ ಅಲ್ಲಿದ್ದ ಸಾವಿರಾರು ಗೋವುಗಳಲ್ಲಿ ತನ್ನ ಗೋವು ಯಾವುದೆಂದು ತಿಳಿಯದೆ ಕಂಗಾಲಾಗುತ್ತಾನೆ.
ಕೊನೆಗೇನಾಗುತ್ತದೆ… ಕಾಳಿಂಗನಿಗೆ ಬುದ್ದಿ ಬರಲು ಕಾರಣವಾದ ಕತೆಯೊಂದಿದೆ. ಅದನ್ನು ಓದಿ ತಿಳಿಯಬೇಕು ನೀವೆಲ್ಲ. 🙂
5/5 ಕೊಡಬಹುದಂತಾದ ಕಾದಂಬರಿ.
ತುಂಬಾ ಚೆನ್ನಾಗಿ ವಿವರಣೆ ಬರ್ದಿದೀರಾ, ಈಗ ಕೂಡ ಪುಣ್ಣ್ಯಕೋಟಿ ಪದ್ದ್ಯ ಓದಿದ್ರ್ ಕಣ್ಣು ತುಂಬಿ ಬರತದ್.(Nostalgic) . Reading ಅಬಚೂರಿನ ಪೋಸ್ಟಾಫಿಸ್ after that i ll read this.
…..ಧನ್ಯವಾದ
Superr 🙂
Thumba varshagala hinde odida kadamabari nenapu madidiri. Agella hucheddu oduthidde. Onde ratri kadamabari odi maru divasa methadanne odide. Ashtondu huchu ithu. Thumba bhavukanagi oduthidda kala. Kramena oduva rithiyu badalayithu. Yellaru nenapu madidfakke dhanyavadagalu.
ಒಹ್.. ನೀವು ನಮ್ಮ ತರಹ 🙂 ಮತ್ತೆ ಶುರು ಮಾಡಿ ಓದ್ಲಿಕ್ಕೆ!