ನವೆಂಬರ್ ಕನ್ನಡ ಪ್ರೇಮಿಗಳೇ…. ಇದು ನಿಮಗಾಗಿ
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು‘, ‘ಸಿರಿಗನ್ನಡಂ ಗೆಲ್ಗೆ‘, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ‘, ‘ನಡೆ ಕನ್ನಡ ನುಡಿ ಕನ್ನಡ‘, ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ‘…. ಈ ಕೆಲವೇ ಕೆಲವು ಸಾರ್ವತ್ರಿಕ ಕನ್ನಡ ಘೋಷಣೆಗಳಿಗೆ ಸುಗ್ಗಿಯೋ ಸುಗ್ಗಿ. ಉಸಿರಾಡಲು ಸಾಧ್ಯವಿಲ್ಲದಂತೆ ಈ ಘೋಷಣೆಗಳ ಕ್ಯಾಲೆಂಡರ್ ನವೆಂಬರಿನಲ್ಲಿ ಬ್ಯುಸಿ. ಕಾವೇರಿ ಚಳುವಳಿಯ ನಂತರ ನೆಮ್ಮದಿಯ ನಿದ್ರೆಯಲ್ಲಿರುವ ಕರ್ನಾಟಕ ಬಾವುಟ ಮತ್ತೆ ಸಿಂಗರಿಸಿಕೊಂಡು ತಲೆ ಎತ್ತಿ ಹಾರಾಡುವ ದಿನ ಇನ್ನೇನು ಒಂದೇ ವಾರದಲ್ಲಿ ಬಂದೇ ಬಿಟ್ಟಿತು.
ನಮ್ಮ ನವೆಂಬರ್ ಕನ್ನಡ ಪ್ರೀತಿ ವರ್ಷ ಪೂರ್ತಿ ಇದ್ದಿದ್ದರೆ ಕನ್ನಡಕ್ಕಾಗಿ ಪ್ರತಿ ಬಾರಿ ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ನನ್ನ ಅನಿಸಿಕೆ. ಇಂದು ಮಾಲ್ ಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ, ಬೆಂಗಳೂರಿನ ಬೀದಿಗಳಲ್ಲಿ ಕನ್ನಡ ಮರೆಯಾಗುತ್ತಿರುವುದಕ್ಕೆ ನಮ್ಮ ಔದಾರ್ಯ ಮನೋಭಾವ ಒಂದು ಕಾರಣವಾದರೆ ಕನ್ನಡದ ಬಗ್ಗೆ ನಿಜವಾದ ಪ್ರೀತಿ, ಕಾಳಜಿ ಮರೆಯಾಗಿರುವುದು ಇನ್ನೊಂದು ಕಾರಣ.
ಕನ್ನಡ ಅಭಿಮಾನವೆಂದರೆ ಬೇರೆ ಭಾಷೆಯನ್ನು ಬಳಸದೇ ಕನ್ನಡ ಮಾತನಾಡುವುದಲ್ಲ. ಮೊಬೈಲ್, ಟ್ಯುಬಲೈಟ್, ಪೆನ್ ಮುಂತಾದ ಇಂಗ್ಲೀಷ್ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಮೀಸೆ ತಿರುವಿಕೊಳ್ಳುವುದು ಕನ್ನಡ ಅಭಿಮಾನವಲ್ಲ. ಯೋಚಿಸಿ…. ಇಂಗ್ಲೀಷ್ ಬಳಸದೆ ಕನ್ನಡ ಮಾತನಾಡಿದಾಗ ಅಭಿಮಾನದಿಂದ ಚಪ್ಪಾಳೆ ತಟ್ಟುವ ಕೈಗಳು ಹೆಚ್ಚೋ ಅಥವಾ ಹಾಸ್ಯಾಸ್ಪದವಾಗಿ ನಗುವ ಮನಸುಗಳು ಹೆಚ್ಚೋ… ಹಾಗಂತ ಕಂಗ್ಲೀಷ್ ಬಳಕೆಗೆ ನನ್ನ ಸಹಮತವೇನಿಲ್ಲ. ಆದರೆ ಭಾಷಾಭಿಮಾನವನ್ನು ಅತಿಯಾಗಿ ಪ್ರದರ್ಶಿಸ ಹೊರಟರೆ ಲೇವಡಿಗೊಳಗಾಗುತ್ತೇವೆ.
ಕನ್ನಡಕ್ಕೆ ಈಗ ಬೇಕಾಗಿರುವುದು ಒಣ ಪ್ರತಿಷ್ಟೆಯಲ್ಲ. ಕನ್ನಡ ಬಯಸುತ್ತಿರುವುದು ತನ್ನನ್ನು ನಿಜವಾಗಿಯು ಪ್ರೀತಿಸುವ ಜನರನ್ನು. ಇಂದು ನಮ್ಮ ಕನ್ನಡ ಸಿನಿಮಾಗಳು ಬೇರೆ ಭಾಷೆಯ ಚಿತ್ರಗಳಿಂದ ಬಹು ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಿವೆ. ನಮ್ಮ ರಾಜ್ಯದಲ್ಲಿಯೇ ಕನ್ನಡ ಸಿನಿಮಾಗಳಿಗೆ ಥೀಯೆಟರ್ ಕೊಡಿ ಎಂದು ಧರಣಿ ಕೂರಬೇಕಾಗಿದೆ. ಚಿತ್ರರಂಗದ ಒಳಗಡೆಯೇ ಡಬ್ಬಿಂಗ್ ವಿರೋಧಿಸಿ ಪರೋಕ್ಷವಾಗಿ ಬೇರೆ ಭಾಷೆಗಳನ್ನು ಪ್ರೋತ್ಸಾಹಿಸುವ ಕುತಂತ್ರಿ ಮನಗಳು ತುಂಬಿಕೊಂಡಿವೆ. ಸದ್ಯದ ಕನ್ನಡ ಸಿನಿಮಾದ ಹೊಸ ಅಲೆ, ಹೊಸ ಪ್ರತಿಭೆಗಳನ್ನು ನೋಡುತ್ತಿದ್ದರೆ ಇದೆಲ್ಲವನ್ನು ಮೆಟ್ಟಿ ನಿಲ್ಲುತ್ತೇವೆ ಎಂಬ ನಂಬಿಕೆಯಿದೆ. ಆದರೆ ಕನ್ನಡಿಗರಾಗಿ ಸದಭಿರುಚಿಯ ಚಿತ್ರಗಳು ಬಂದಾಗ ನಿರ್ಲಕ್ಷಿಸದೆ ಥೀಯೆಟರಗಳಿಗೆ ಹೋಗಿ ಪ್ರೋತ್ಸಾಹಿಸಬೇಕೆನ್ನುವುದು ಎಲ್ಲರಿಗು ಅರಿವಾದ ದಿನವೇ ಕನ್ನಡ ರಾಜ್ಯೋತ್ಸವ.
ನಂತರದ ವಿಚಾರ ಶಾಲೆಗಳಲ್ಲಿ ಕನ್ನಡದ ಕಲಿಕೆ… ರಾಜ್ಯ ಸರ್ಕಾರ ಈಗಾಗಲೇ ಹಲವು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಿ ತನ್ನ ಕನ್ನಡ ಪ್ರೇಮ ಮೆರೆದಿದೆ. ಇಲೆಕ್ಷನ್ ಇನ್ನೇನು ಬಂತು ಅನ್ನುವಾಗ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದೆ. ಕನ್ನಡ ಪ್ರೇಮಿಗಳಿಗೆ ಇದೊಂದು ಸಮಾಧಾನಕರ ಸಂಗತಿ. ಕನ್ನಡದ ಕಲಿಕೆ ಮೊದಲು ಮನೆಯಿಂದ ಶುರುವಾಗಿ ಶಾಲೆಗಳಲ್ಲಿ ಮುಂದುವರೆದರೆ ‘ಕನ್ನಡ ಉಳಿಸಿ‘ ಎಂಬ ಘೋಷಣೆಗೆ ಮುಕ್ತಿ ಸಿಗಬಹುದೆನೋ….
ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಅಳೆಯುವುದು ಕಷ್ಟ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮಗೆ ಕನ್ನಡ ಸಾಹಿತ್ಯದ ನಿಜವಾದ ಪರಿಚಯವಿದೆಯೇ? ಒಂದು ಭಾಷೆ ಎಲ್ಲ ವಿಧಗಳಿಂದ ಅಭ್ಯುದಯವಾಗಬೇಕೆಂದರೆ ಸಾಹಿತ್ಯದ ಹಳೆ ಬೇರು ಮತ್ತು ಹೊಸ ವಿಚಾರಗಳು ಕೂಡಬೇಕು. ಕೇವಲ ಫೇಸಬುಕ್ಕಿನಲ್ಲಿ ಕೆಲವು ಸಾಹಿತಿಗಳನ್ನು follow ಮಾಡಿ, ಅವರು ಹೇಳಿದ್ದು ಸರಿಯೆನಿಸಿದಾಗ ಹೂಂಗುಟ್ಟಿ ,ತಪ್ಪೆನಿಸಿದಾಗ ಅವರ ವೈಯಕ್ತಿಕ ಜೀವನವನ್ನು ಜಾಲಾಡಿಸುವುದು ಸಾಹಿತ್ಯ ಪ್ರೀತಿಯಲ್ಲ. ಕನ್ನಡ ಸಾಹಿತ್ಯಕ್ಕೆ ನವ್ಯ ಸಾಹಿತಿಗಳು ಕಾಲಿಡುತ್ತಿದ್ದಾರೆ. ಓದಿ ಪ್ರೋತ್ಸಾಹಿಸಿದರೆ ಅವರ ಉತ್ಸಾಹ, ಕನ್ನಡ ಪ್ರೀತಿ ಇನ್ನು ಹೆಚ್ಚಾಗುವುದಂತು ಖಂಡಿತ. ಜ್ಞಾನವಿರುವ ವ್ಯಕ್ತಿ ಜಗತ್ತಿನ ಯಾವುದೇ ಮೂಲೆಯಲ್ಲು ಹೆಮ್ಮೆಯಿಂದ ಬದುಕಬಲ್ಲ!
ಇತ್ತೀಚಿಗೆ ನನ್ನ facebook ಬಳಗ ತುಸು ದೊಡ್ಡದಾಗಿದೆ. ಒಂದು ಖುಷಿಯ ಸಂಗತಿಯೆಂದರೆ ಹಲವಾರು ನಿಜವಾದ ಕನ್ನಡ ಪ್ರೇಮಿಗಳನ್ನು ದಿನ ಬೆಳಗಾದರೆ ನೋಡುತ್ತಿದ್ದೇನೆ. ಸ್ನೇಹಿತರ ಹುಟ್ಟುಹಬ್ಬಕ್ಕೆ, ರಕ್ಷಾ ಬಂಧನದಂದು ಸಹೋದರಿಯರಿಗೆ, ಪ್ರೇಮಿಗಳ ದಿನದಂದು ಗೆಳೆಯ/ಗೆಳತಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಪರಿಪಾಠವಿಟ್ಟುಕೊಳ್ಳಿ. ‘ಕನ್ನಡ ಬೆಳೆಸಿ‘ ಎಂದು ಒಣ ಮಾತಿನಲ್ಲಿ ಹೇಳುವುದಕ್ಕಿಂತ, ಬಿಗ್ ಬಾಸ್ ನಲ್ಲಿ ಕನ್ನಡ ಮಾತನಾಡದೆ ಇರುವವರನ್ನು ತೆಗಳುತ್ತಾ ಕೂರುವದಕ್ಕಿಂತ ಈ ರೀತಿಯಾಗಿ ಕನ್ನಡ ಬೆಳೆಸಿ. ಮಾತಿಗಿಂತ ಕೃತಿ ಲೇಸಲ್ಲವೇ…?
ಕೊನೆಯದಾಗಿ ಕನ್ನಡ ಅಭಿಮಾನವೆಂದರೆ ಬರಿ ನವೆಂಬರನ ಉದ್ದುದ್ದ ಭಾಷಣೆಗಳಾಗದೇ (ಈ ಲೇಖನದಂತೆ) ನಮ್ಮ ಮಾತು, ಕೃತಿ, ನಡತೆ, ವಿಚಾರಗಳಲ್ಲಿ ಕನ್ನಡ ಪ್ರೀತಿಯಿರಲಿ. ಕನ್ನಡ ಎಲ್ಲರ ಹೃದಯದಲ್ಲರಳಲಿ.
ಚೆನ್ನಾದ ವಿಶ್ಲೇಷಣಾ ಬರಹ..
ದುರಂತ ಅಂದರೆ ಎಲ್ಲವೂ ರಾಜಕೀಯ ತಿರುವು ಪಡೆದುಕೊಂಡಿದೆ, ಉದಾಹರಣೆಗೆ ಸಾಹಿತ್ಯ ಸಮ್ಮೇಳನಗಳು, ಸಾಹಿತ್ಯ ಪ್ರಶಸ್ತಿಗಳು, ಶಾಲಾ ಪಠ್ಯಗಳು, ಸಿನೆಮಾ ವಿಚಾರಗಳು, – ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯದ ನಿಜವಾದ ಸತ್ವ ಏನೆಂಬುದೆ ತಿಳಿಯುತ್ತಿಲ್ಲ! ನಮಗೆ ತಿನ್ನಲಿಕ್ಕೆ ಏನಾದರೂ ಬೇಕು ಎನಿಸಿದಾಗ ಅಡಿಗೆಮನೆಯಲ್ಲಿ ಎದುರಿಗೆ ಏನಾದರೂ ಸಿಗುತ್ತಾ ಎಂದು ನೋಡುತ್ತೇವೆ, ಆದರೆ ತೀರಾ ಹಸಿವಾದಾಗ ಪ್ರತಿಯೊಂದು ಡಬ್ಬಿಯನ್ನು ಜಾಲಾಡುತ್ತೇವೆ, ಈ ಎರಡನೆ ರೀತಿಯ ಹಸಿವು ಕನ್ನಡದ ಬಗೆಗೆ ಆದಾಗ ನಿಜವಾದ ಸತ್ವ ತಿಳಿಯಲು ಸಾಧ್ಯ ಎಂದೆನಿಸುತ್ತದೆ. ಅಥವಾ ಸ್ವಲ್ಪ ಅಧ್ಯಯನ ಇರುವಂತವರು ಅದನ್ನು ಜನ ಸಾಮಾನ್ಯರಿಗೆ ಒದಗಿಸಿಕೊಡುವ ಕೆಲಸ ಆಗಬೇಕಿದೆ.. ಎರಡೂ ಒಂದಕ್ಕೊಂದು ಪೂರಕವಾಗಿದೆ.
ಅಪ್ಪ~ಅಮ್ಮಂದಿರು ಮಕ್ಕಳಿಂದ ಆಂಗ್ಲಭಾಷೆ ಕಲಿಯುವುದು ತಪ್ಪಲ್ಲ, ಆದರೆ ಅವರು ಕನ್ನಡ ಭಾಷೆಯ ಮೊಳಕೆಯನ್ನು ತಮ್ಮ ಮಕ್ಕಳಲ್ಲಿ ಬಿತ್ತಲೇಬೇಕು. ನಮ್ಮನ್ನು ನಾವು ಮಾರಿಕೊಂಡು ಕಾನ್ಮೆಂಟ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ/ಸೇರಿಸುತ್ತಿರುವ ಸನ್ನಿವೇಶಗಳು ನಮ್ಮ ಕಣ್ಣೆದುರಿಗಿದೆ. ಅದೇ ಎಲ್ಲ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತೇವೆಂದು ಮನಸ್ಸು ಮಾಡಿದರೆ ಅನಿವಾರ್ಯವಾಗಿ ಸರ್ಕಾರ ತನ್ನ ಶಾಲೆಗಳನ್ನು ಗುಣಮಟ್ಟಗೊಳಿಸಬೇಕಾಗುತ್ತದೆ, ಹಾಗೆಯೇ ಇದರಿಂದ ಕಾನ್ವೆಂಟುಗಳ ಅಹಂಕಾರವೂ ಸ್ವಲ್ಪ ಇಳಿಯುತ್ತದೆ, ನಮ್ಮ ಸಂಸ್ಕೃತಿಯೂ ಉಳಿಯುತ್ತದೆ.
ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವಷ್ಟು ಶ್ರೇಷ್ಠ ಕೆಲಸ ಇನ್ನೊಂದಿಲ್ಲ ನಿಜವಾಗಿಯೂ, ಆ ಟ್ರೆಂಡ್ ಕೂಡ ಬೆಳೆಯುತ್ತಿದೆ ನೀವು ಹೇಳಿದಂತೆಯೇ, ಸಮಾಜದಲ್ಲಿ ಪರಿವರ್ತನೆ ತರಬಹುದಾದ ಪರಿಣಾಮಕಾರಿ ಮಾಧ್ಯಮಗಳಲ್ಲಿ ಪುಸ್ತಕಗಳು ಅತ್ಯಂತ ಪ್ರಮುಖವಾದುದು.
ಇನ್ನು ಯುವ ಜನತೆ ಹೆಚ್ಚಿನ ಸಮಯ ವಿನಿಯೋಗಿಸುವುದು ಸಾಮಾಜಿಕ ಜಾಲತಾಣಗಳಲ್ಲಿ, ಅಲ್ಲಿ ತಮ್ಮಂತಹ ನಿಜವಾದ ಕಳಕಳಿಯುಳ್ಳವರ ಪ್ರೇರಣಾದಾಯಿ ಬರಹಗಳು ಜನ ಸಾಮಾನ್ಯರು ಯೋಚನೆ ಮಾಡುವ ದಿಕ್ಕನ್ನು ಬದಲಾಯಿಸಿ, ಸರಿ ದಾರಿಗೆ ತರುತ್ತವೆ..
ಉತ್ತಮ ಬರಹಕ್ಕಾಗಿ ಗೌರವಪೂರ್ವಕ ಅಭಿನಂದನೆಗಳು,
ನಿಮ್ಮ ಇನ್ನಷ್ಟು ಬರಹಗಳನ್ನು ಓದಬೇಕೆಂಬ ನಿರೀಕ್ಷೆಯಲ್ಲಿ…
ಅದ್ಭುತ ವಿವರಣೆ ನಿಮ್ಮದು. ಮಾಧ್ಯಮಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ವಿಚಾರವಂತರಿಗೆ ಮಾತ್ರ ಎಲ್ಲ ಅರ್ಥವಾಗುತ್ತದೆ. ಬಾಲ ಅಲ್ಲಾಡಿಸಿಕೊಂಡು ಹೋಗುವ ಮನಸುಗಳಿಗೆ ಎಷ್ಟು ಹೇಳಿದರು ಪ್ರಯೋಜನವಿಲ್ಲ.
I have gone throug ur blog its beautiful all articles.
Please check and review my blog.
Anashku.blogspot.com
Reply in the blog ur views.
Khandita.
Thanks for reading.
Very good message
Advanced happy Kannada rajyotsava.
Nimagu 🙂
Kannada Rajyotsavada shubhashayagalu.
very good article , navellaru kannadavanna ulisi belesale beku
Thanks for reading.