ರಂಗಪಂಚಮಿಗೆ ಒಂದು ರಂಗಿನ ನೆನಪು.
ನನಗೆ ರಂಗಪಂಚಮಿ ಅಂದ್ರೆ ಚೂರು ಮಮತೆ ಜಾಸ್ತಿ. ಯಾಕಂದ್ರೆ ನಾನು ಹುಟ್ಟಿದ್ದು ರಂಗಪಂಚಮಿ ದಿನ. ಈ ತಿಥಿ, ಘಳಿಗೆ, ಕಾಲ ಅಂತೆಲ್ಲ ಇರುತ್ತಲ್ಲವಾ ಆ ಲೆಕ್ಕದಲ್ಲಿ ನಾನು ಹುಟ್ಟಿದ ದಿನದ ತಿಥಿ ರಂಗಪಂಚಮಿ ಆಗಿತ್ತು. ರಂಗಪಂಚಮಿ ಬಂದ್ರೆ ನಂಗೇನೋ ಖುಷಿ, ನನ್ನ ಹುಟ್ಟಿದ ದಿನ ಹತ್ತಿರ ಆಯ್ತು ಅಂತ. ಈ ದಿನ ನಾನು ನಮ್ಮಮ್ಮನ ಬದುಕಿಗೆ ಬಣ್ಣ ತುಂಬಿದ ದಿನ.
ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪುನೀತ ರಾಜಕುಮಾರ್ ‘ಅಲ್ಲಿಯೂ ಇದ್ದಾನೆ’ ‘ಇಲ್ಲಿಯೂ ಇದ್ದಾನೆ’ ಎಂದು ಹೇಳುವುದನ್ನು ನೋಡಿ ನೋಡಿ ಪ್ರಹ್ಲಾದ- ಹಿರಣ್ಯಕಶ್ಯಪುವಿನ ಕಥೆ ಎಂದೂ ಮರೆಯದಂತೆ ಮನಸಿನಲ್ಲಿದೆ. ಈ ಚಿತ್ರದಲ್ಲಿ ಹಿರಣ್ಯಕಶ್ಯಪು ತನ್ನ ಮಗನನ್ನು ಬೆಂಕಿಗೆ ಹಾಕಲು ಯತ್ನಿಸಿದ ಎಂದು ತೋರಿಸುತ್ತಾರೆ. ಆದರೆ ನಿಜವಾದ ಕಥೆಯಲ್ಲಿ ಹಿರಣ್ಯಕಶ್ಯಪು ತನ್ನ ತಂಗಿ ‘ಹೋಲಿಕಾ’ ಳನ್ನು ಕರೆದು ಪ್ರಹ್ಲಾದನ ಜೊತೆ ಬೆಂಕಿಗೆ ಆಹುತಿಯಾಗು ಎಂದು ಹೇಳುತ್ತಾನೆ. ಹೋಲಿಕಾಳಿಗೆ ಬೆಂಕಿಯಲ್ಲಿ ಬಿದ್ದರು ಸುಡದಂತಹ ವರವಿರುತ್ತದೆ. ಅಣ್ಣನ ಆಜ್ಞೆಯಂತೆ ಹೋಲಿಕಾ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಯಲ್ಲಿ ಇಳಿದಾಗ ಹರಿಭಕ್ತ ಪ್ರಹ್ಲಾದ ಜೀವಂತವಾಗಿ ಹೊರಬರುತ್ತಾನೆ. ಹೋಲಿಕಾ ಬೂದಿಯಾಗುತ್ತಾಳೆ. ಕಾರಣ ಆಕೆಗೆ ಒಬ್ಬಳೇ ಬೆಂಕಿಯಲ್ಲಿ ಇಳಿದಾಗ ಸುಡುವುದಿಲ್ಲ ಎಂಬ ವರವಿರುತ್ತದೆ. ಆಕೆಗೆ ತನ್ನ ಪ್ರಾಯಚ್ಚಿತ್ತವಾಗಿ ಪ್ರಹ್ಲಾದನ ಹತ್ತಿರ ಕ್ಷಮಾಪಣೆ ಕೇಳಿದಾಗ ಮನ ಕರಗಿದ ಪ್ರಹ್ಲಾದ ಪ್ರತಿ ವರುಷ ಆಕೆಯನ್ನು ನೆನೆಯುವಂತೆ ಆಕೆಯ ಹೆಸರಿನ ‘ಹೋಳಿ’ ಹಬ್ಬವನ್ನು ಆಚರಿಸುವುದಾಗಿ ಹೇಳಿದನಂತೆ. ಇದು ನಾನು ಓದಿದ ಕಥೆ. ತಪ್ಪಿದ್ದರೆ ಅಥವಾ ಬೇರೆ ಕಥೆ ಇದ್ದರೆ ಹೇಳಿ ತಿಳಿದುಕೊಳ್ಳುವ.
ನಾನು ಚಿಕ್ಕವಳಿದ್ದಾಗ ಈ ಹೋಳಿ ಹಬ್ಬದ ಹಾವಳಿ ಅಷ್ಟಿರಲಿಲ್ಲ. ಮುಖಕ್ಕೆ ಒಂಚೂರು ಬಣ್ಣ ಬಳೆದುಕೊಂಡರೆ ಹಬ್ಬ ಮುಗಿದಂತೆ. ಗಂಡು ಹುಡುಗರು ಮಾತ್ರ ಆಚೆ ಹೋಗಿ ಬಣ್ಣ ಎರಚಾಡಿಕೊಂಡು ಬರ್ತಿದ್ರು. ನನಗು ಮೈ ತುಂಬಾ ಬಣ್ಣ ಬಳಿದುಕೊಂಡು ಮೈ ಮರೆತು ಹಬ್ಬ ಆಚರಿಸಬೇಕು ಎಂದೆಲ್ಲ ಆಸೆಯಿದ್ದರೂ ಗೆಳೆಯರಾರು ಇಲ್ಲವಾದ್ದರಿಂದ ಸುಮ್ಮನಾಗುತ್ತಿದ್ದೆ. ಕೆಲವೊಮ್ಮೆ ಚೂರು ಬಣ್ಣ ಬಳಿಯಲು ಸಹ ಯಾರು ಸಿಗದೇ ನಾನೇ ಬಣ್ಣ ಬಳಿದುಕೊಂಡು ಮನೆಗೆ ಬರುತ್ತಿದ್ದೆ. ಈಗಿನ ತರಹ ಹುಡುಗಿಯರು ಸ್ವಚ್ಚಂದವಾಗಿ ಹೊರಗೆ ಬಂದು ಬಣ್ಣ ಎರಚಾಡುವ ಪದ್ಧತಿ ಆಗಿರಲಿಲ್ಲ. ಅಥವಾ ನಾನು ಬೆಳೆದ ಜಾಗ ಹಾಗಿತ್ತೋ ಏನೋ ಗೊತ್ತಿಲ್ಲ.
ಒಟ್ಟಿನಲ್ಲಿ ನಾನು ಮೊದಲ ಬಾರಿಗೆ ಹೋಳಿ ಹಬ್ಬ ಆಚರಿಸಿದ್ದು ಅಂದರೆ ಬಣ್ಣ ಎರಚಾಡಿದ್ದು ಇಂಜಿನಿಯರಿಂಗ್ ಸೇರಿದಾಗ. ಜೀವನದಲ್ಲಿ ಪ್ರತಿ ‘ಮೊದಲು’ ತುಂಬಾ ವಿಶೇಷವಾಗಿರುತ್ತವೆ. ಹಾಗೆ ಈ ನನ್ನ ಮೊದಲ ಹೋಳಿ ಹಬ್ಬದ ಅನುಭವವು ಕೂಡ ವಿಶೇಷ.
ನಾನು ಇಂಜಿನಿಯರಿಂಗ್ ನಲ್ಲಿದ್ದಾಗ ನೋಡೋಕೆ ಸಮಾಧಾನ, ತಂಟೆಯಿಲ್ಲದ ಹುಡುಗಿ ತರಹ ಇದ್ದೆ. ಈಗಲೂ ಹಾಗೆ ಇದೀನಿ… ಆದರೆ ನೋಡೋಕೆ ಮಾತ್ರ! ನನ್ನ ನಿಜವಾದ ಬಣ್ಣ ತಿಳಿಯೋಕೆ ನನ್ನ ಜೊತೆ ಇರಬೇಕು ಒಂದಷ್ಟು ದಿನ. ನಮ್ಮ ಮನೆಯವರಿಗೆ, ನನ್ನ ಗಂಡನಿಗೆ, ನನ್ನ ಸ್ನೇಹಿತರಿಗೆ ಮಾತ್ರ ಗೊತ್ತು ನಾನೆಷ್ಟು ಘಾಟಿ ಹುಡುಗಿ ಅಂತ. ಯಾರಾದರೂ ದಾರಿಹೋಕರಿಗೆ ನನ್ನ ತೋರಿಸಿ ‘ಆಗೋ ಆ ಹುಡುಗಿ ತುಂಬಾ ಘಾಟಿ’ ಅಂತ ಆಣೆ ಪ್ರಮಾಣ ಮಾಡಿ ಹೇಳಿದರೂ ನಂಬದಷ್ಟು ಸಾಧು ಮುಖ ನಂದು.
ಇಂತಿಪ್ಪ ನಂಗೆ ಬಲು ಘಾಟಿ ಸ್ನೇಹಿತಯರೇ ಇದ್ದರು. ಕ್ಲಾಸ್ಸಿನಲ್ಲಿ ಕೊನೆ ಬೆಂಚು ನಮ್ಮದೇ. ನನ್ನ ಸ್ನೇಹಿತೆಯರೋ ಮಾಡ್ರನ್ ಪ್ಲಸ್ ಅಲ್ಟ್ರಾ ತರಲೆಗಳು. ಹೀಗಾಗಿ ತುಂಬಾ ಜನ ಸೀನಿಯರ್ಸ್ ನಮ್ಮ ಗುಂಪಿನ ಮೇಲೆ ಒಂದು ಕಣ್ಣಿಟ್ಟಿದ್ದರು. ವಿಶೇಷವಾಗಿ ಮೆಕ್ಯಾನಿಕಲ್ ವಿಭಾಗದವರು.
ಅವತ್ತು ಹೋಳಿ ಹಬ್ಬದ ದಿನ ಶರ್ಮಿಳಾ ನನ್ನ ಹಾಸ್ಟೆಲಿಗೆ ಬಂದು ‘ನಡಿಯೇ ಎಲ್ಲರ ಮನೆ ಮನೆಗೆ ಹೋಗಿ ಬಣ್ಣ ಹಾಕೋಣ’ ಅಂದ್ಲು. ನಂಗು ಇದು ಫಸ್ಟ್ ಟೈಮ್ ಆದ್ದರಿಂದ ಬಲು ಉತ್ಸಾಹದಲ್ಲಿ ನಡಿ ಎಂದು ಹೇಳಿ ಹೊರಟೆವು. ಅವಳು ತನ್ನ ಕಾರಿನಲ್ಲಿ ಹರಿಹರದಿಂದ ದಾವಣಗೆರೆಯವರೆಗೂ ಡ್ರೈವ್ ಮಾಡಿಕೊಂಡು ಬಂದಿದ್ದಳು. ಯಾವತ್ತೂ ಕಾರ್ ಮುಟ್ಟಲು ಕೊಡದ ಅವಳ ತಂದೆ ಅವತ್ತು ಅದೇಕೋ ಮನಸು ಸಡಿಲ ಮಾಡಿ ಕಾರ್ ಕೊಟ್ಟು ಕಳುಹಿಸಿದ್ದರು.
ನಾವಿಬ್ಬರು ಸೇರಿ ಲಕ್ಷ್ಮಿಯ ಮನೆಗೆ ಹೋದೆವು. ಈ ಲಕ್ಷ್ಮಿ ತುಂಬಾ ಶ್ರೀಮಂತ ಗಿರಾಕಿ. ದಾವಣಗೆರೆಯಲ್ಲೇ ೨-೩ ಮನೆ ಇತ್ತು. ನಮಗೆ ಬೇಕಾದಾಗಲೆಲ್ಲ ಖಾಲಿ ಇದ್ದ ಮನೆಯಲ್ಲಿ ಸೇರಿ ರಾತ್ರಿಯೆಲ್ಲಾ ಹರಟೆ ಹೊಡೆಯುತ್ತಿದ್ದೆವು. ಅವಳ ಮನೆಗೆ ಹೋಗಿ ನೀರು ಬಣ್ಣ ಎರಡನ್ನು ದಂಡಿಯಾಗಿ ಎರಚಾಡಿದಾಗ ನಮ್ಮ ನಮ್ಮ ಮುಖಗಳು ನಮಗೆ ಪರಿಚಯ ಸಿಗದಷ್ಟು ಬಣ್ಣಮಯ. ನಂತರ ನಾವು ಮೂರು ಜನರ ಸವಾರಿ ಅರ್ಪಿತಾಳ ಮನೆಯ ಕಡೆಗೆ!
ಅವಳ ಮನೆಯ ಬೆಲ್ ಬಾರಿಸಿದಾಗ ಬಾಗಿಲು ತೆರೆದವಳೇ ನನ್ನ ನೋಡಿ ‘ಸಂಜು ಇದು ನೀನಾ’ ಎಂದು ಒಮ್ಮೆಲೇ ನಗಲು ಶುರು ಮಾಡಿದಳು. ಈ ಸುಂದರಿ ಚೆನ್ನಾಗಿರೋ ಬಟ್ಟೆ ಹಾಕಿಕೊಂಡು ನನ್ನ ನೋಡಿ ಅಣಕಿಸ್ತಾ ಇದಾಳೆ ಅಂದುಕೊಂಡು ಸಿಟ್ಟಲ್ಲಿ ‘ಬಾರೆ ಆಚೆ’ ಅಂದೆ. ದೊಡ್ಡ ಡಾನ್ ಶೈಲಿಯಲ್ಲಿ. ಅವಳು ನಗುವುದನ್ನೇನು ನಿಲ್ಲಿಸಲಿಲ್ಲ. ಅವಳನ್ನು ಮನೆಯಿಂದ ಆಚೆ ಎಳೆದು ಅವಳಿಗೂ ಬಣ್ಣದ ಅವತಾರ ಕೊಟ್ಟಾಯ್ತು.
ಯಾರಿಗೂ ನಾವು ಬರುತ್ತಿರುವುದರ ಬಗ್ಗೆಯಾಗಲಿ, ಹೋಳಿ ಹಬ್ಬ ಆಚರಿಸವುದರ ಬಗ್ಗೆ ಆಗಲಿ ಚೂರು ಐಡಿಯಾ ಇರಲಿಲ್ಲವಾದ್ದರಿಂದ ಒಂಥರಾ ಮಜವಾಗಿತ್ತು. ಅಲ್ಲಿಂದ ರೂಪಾಳ ಮನೆಗೆ ಹೋಗಬೇಕೆಂದುಕೊಂಡು ನಾವು ನಾಲ್ಕು ಜನ ಹೊರಟೆವು. ನಾವಿದ್ದಿದು ಡೆಂಟಲ್ ಕಾಲೇಜಿನ ಹತ್ತಿರ. ರೂಪಾಳ ಮನೆ ಇದ್ದದ್ದು ಡಿಸಿಎಂ ಟೌನ್ ಹತ್ತಿರ. ಸುಮಾರು ೨೦ ನಿಮಿಷಗಳ ದಾರಿ.
ದಾರಿ ತುಂಬಾ ಹೋಳಿ ಹಬ್ಬದ ಗದ್ದಲ. ಹುಡುಗ ಹುಡುಗಿಯರ ಗುಂಪುಗಳು ಅಲ್ಲಲ್ಲಿ. ಕಾರಿನಿಂದ ೨ ಹೆಜ್ಜೆ ಕ್ರಮಿಸೋಕೆ ೨ ನಿಮಿಷ ಕಾಯ್ದು ಮುಂದೆ ಹೋಗಬೇಕಾದ ಪರಿಸ್ಥಿತಿ. ಹಾಗೆ ನಿಂತು ನಿಂತು ಹೋಗುತ್ತಿರುವಾಗ ಒಂದಷ್ಟು ಜನ ಹುಡುಗರು ನಮ್ಮ ಕಾರನ್ನು ಸುತ್ತುಗಟ್ಟಿದರು. ಅವರನ್ನೆಲ್ಲ ಕಾಲೇಜಿನಲ್ಲಿ ನೋಡಿದ ನೆನಪು ಬಂತಾದರೂ ಖಚಿತವಾಗಿ ಗುರುತು ಹಿಡಿಯಲು ಅವರ ಮುಖಕ್ಕಂಟಿದ ಬಣ್ಣ, ಅವರ ಅವತಾರ ಅಡ್ಡಿ ಮಾಡುತ್ತಿತ್ತು. ಒಂದೆರಡು ನಿಮಿಷ ಅವರು ಕದಲಲೇ ಇಲ್ಲ. ನಾವು ಸಹ ಏನು ಮಾಡಲಾಗದೆ ಸುಮ್ಮನೆ ಕಾರಿನಲ್ಲಿಯೇ ಕುಳಿತೆವು.
ಬಲು ಧೈರ್ಯವಂತರಂತೆ ನಟಿಸುತ್ತಿದ್ದರು ಒಳಗೊಳಗೇ ಢವ ಢವ. ನಮ್ಮ ಕಾಲೇಜಿನವರೇ ಎಂಬ ನಂಬಿಕೆಯಿದ್ದುದರಿಂದ ಹೆಚ್ಚೇನು ಮಾಡುವುದಿಲ್ಲ ಎಂಬ ಚೇತರಿಕೆ. ಅವರಲ್ಲೊಬ್ಬ ಕಾರಿನ ಬಾನೆಟ್ ಮೇಲೆ ಜೋರಾಗಿ ಗುದ್ದಿದ. ನಮಗೆ ಭಯವಾದರೂ ತೋರಗೊಡಲಿಲ್ಲ. ಎಷ್ಟೆಂದರೂ ನಮ್ಮದು ಕಾಲೇಜಿನಲ್ಲಿ ‘ಬಲು ಜೋರು’ ಎಂದು ಗುರುತಿಸಿಕೊಂಡ ಗುಂಪಲ್ಲವೇ. ಈಗ ಹೀಗೆ ಹೆದರಿಕೊಂಡರೆ ಹೇಗೆ. ಒಂದೆರಡು ನಿಮಿಷಗಳ ತಟಸ್ಥ ದೃಷ್ಟಿ ವಿನಿಮಯಗಳ ನಂತರ ಅವನು ಹೊರಡಿ ಎನ್ನುವಂತೆ ಸನ್ನೆ ಮಾಡಿದ. ‘ಬದುಕಿದೆವು ನಾವು ಬಡಜೀವಗಳು’ ಎಂದುಕೊಳ್ಳುತ್ತ ಅಲ್ಲಿಂದ ಹೊರಟೆವು.
ಮುಂದೆ ರೂಪಾಳ ಮನೆಯಲ್ಲಿ ಇದರದೇ ಚರ್ಚೆ. ಆ ಹುಡುಗರು ನಮ್ಮನ್ನು ಹೆದರಿಸಲು ಯತ್ನಿಸಿದರೂ ನಾವು ಹೆದರಲಿಲ್ಲ ಎಂಬುದೇ ನಮ್ಮ ಹೆಮ್ಮೆ.
ಇದು ನನ್ನ ಮೊದಲ ಹೋಳಿ ಹಬ್ಬದ ಅನುಭವ. ಆಧುನಿಕತೆ ಸ್ವಲ್ಪ ಸ್ವಲ್ಪವಾಗಿ ನಮ್ಮ ಮನೆಯಲ್ಲೂ ಪರಿಣಾಮ ಬೀರತೊಡಗಿದಾಗ ಮನೆಯವರೂ ಹೋಳಿ ಹಬ್ಬವನ್ನು ಆಚರಿಸಲು ಶುರು ಮಾಡಿದರು. ಈಗ ಪ್ರತಿ ವರ್ಷ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಬರಿ ಮನೆಯಷ್ಟೇ ಅಲ್ಲದೆ ಇಡೀ ಓಣಿಯ ಜನರೆಲ್ಲಾ ಸೇರಿ ಹಬ್ಬ ಆಚರಿಸವುದು ಇನ್ನು ಚೆಂದ.
ಇಲ್ಲಿ ಅಮೇರಿಕಾದಲ್ಲಿ ಯಾವುದಾದರೊಂದು ದೇವಸ್ಥಾನದಲ್ಲಿ ಹೋಳಿ ಆಚರಣೆ ಇಟ್ಟುಕೊಂಡಿರುತ್ತಾರೆ. ಈ ವರುಷ ನೋಡೋಣ ಎಲ್ಲಿ ಹೇಗೆ ಆಚರಿಸ್ತೀವಿ ಅಂತ.
ಬದುಕು ರಂಗು ರಂಗಾಗಿರಲಿ..
ಶುಭಹಾರೈಕೆಗಳು…
ನಿಮ್ಮ ಹಾರೈಕೆಗೆ ಒಂದು ನಮನ _/\_
ಉತ್ತರ ಕನ್ನಡದ ಹವ್ಯಕ ಭಾಷೆಯಲ್ಲಿ ಮಕ್ಕಳು ತುಂಬಾ ಕಿಲಾಡಿ ಮಾಡಿದರೆ ‘ಹೋಳಿ ಮಾಡಡ’ (ಮಾಡಡ-ಮಾಡಬೇಡ) ಅಂತ ಹೇಳ್ತಾರೆ. ಇಲ್ಲಿ ‘ಹೋಳಿ’ ಪದ ಯಾಕೆ ಬಳಕೆಗೆ ಬಂತು ಗೊತ್ತಿಲ್ಲ. ಆದರೆ, ಹವ್ಯಕರ ಮಾತಲ್ಲಿ ಹೇಳುವುದಾದರೆ ನೀವು ವಿದ್ಯಾರ್ಥಿ ದೆಸೆಯಲ್ಲಿ ತುಂಬಾನೇ ‘ಹೋಳಿ’ ಮಾಡಿದ್ದೀರಿ 😄
ನೆನಪುಗಳಿಗೆ ‘ಬಣ್ಣ’ ತುಂಬಿದ ಚೆಂದದ ಬರಹವಿದು.
ಹ ಹಾ!! ಧನ್ಯವಾದ 🙂
ರಂಗ ಪಂಚಮಿಯ ಪೌರೌಣಿಕ ಹಿನ್ಸಲೆ ಇದೆ ಎಂದು ಹೇಳಲು ಕಟಿಣ.ನಿಮ್ಮ ಪದಗಳ ಜೋಡಣೆ ಸುಲಲೀತವಾಗಿದೆ.ನಿಮ್ಮ ಹೊಳಿಕಾ ಕತೆ ಪುರಾಣಿಕ ಊಲ್ಲೆಖ.
Thank you 🙂
Your Kannada is superior and your interesting in our festivals are also super.
Thank you! 🙂