ಅಮ್ಮನಿಗೊಂದು ಪತ್ರ
ಅಮ್ಮಾ,
ಇಷ್ಟೊತ್ತಿಗೆ ನೀ ಬಹುಶಃ ಮಲಗಿರಬಹುದು. ಅದ್ಯಾಕೋ ಗೊತ್ತಿಲ್ಲ ತುಂಬಾ ನೆನಪಾಗುತ್ತಿದ್ದೀಯಾ.. ಏನೇನೋ ಹೇಳಬೇಕೆಂದುಕೊಂಡು ಪತ್ರ ಬರೆಯಲು ಕೂತರೆ ಅಕ್ಷರಗಳೇ ಸಿಗದೇ ಮನಸು ಒದ್ದಾಡುತ್ತಿದೆ. ನೀನಿಲ್ಲಿದ್ದಿದ್ದರೆ ನಿನ್ನ ಅಪ್ಪಿಕೊಂಡು ಬಿಡುತ್ತಿದ್ದೆ. ನಾನೇನು ಹೇಳದೆ ನಿನಗೆಲ್ಲವೂ ಅರ್ಥವಾಗಿ ಬಿಡುತ್ತಿತ್ತು. ಅದ್ಹೇಗೆ ನಿನಗೆ ನನ್ನ ಬಗ್ಗೆ ನನಗಿಂತಲೂ ಚೆನ್ನಾಗಿ ಗೊತ್ತಮ್ಮಾ?
ನನಗೆ ಪೆಟ್ಟಾದರೆ ನಿಂಗೆ ನೋವಾಗುತ್ತಿತ್ತು. ನನಗೆ ದುಃಖವಾದರೆ ನಿನ್ನ ಕಣ್ಣಲ್ಲಿ ನೀರು ಬರುತ್ತಿತ್ತು. ಕೆಮ್ಮು ನನಗಾದರೆ ನಿದ್ದೆಯಿಲ್ಲದ ರಾತ್ರಿಗಳು ನಿನ್ನವು, ಜ್ವರ ನನಗೆ ಅಂಟಿದರೆ ನಿನ್ನ ಮೈ ಶಾಖ ಏರುತ್ತಿತ್ತು. ನನಗೆ ಶೀತವಾದರೆ ನಿನಗೆ ಸಂಕಟವಾಗುತ್ತಿತ್ತು. ಮಳೆಯಲ್ಲಿ ನೆನೆದು ಬಂದಾಗ ಓಡಿ ಬಂದು ತಲೆಯ ಮೇಲೆ ಟವೆಲ್ ಹಾಕಿ ನನ್ನ ಬೈಯುತ್ತಾ ನನ್ನ ಕೂದಲು ಒರೆಸುತ್ತಿದ್ದೆ. ಹಸಿವಿಲ್ಲ ಊಟ ಬೇಡ ಎಂದು ಮಲಗಿದರೆ ಮುದ್ದು ಮಾಡಿ ಎದ್ದೇಳುವಂತೆ ರಮಿಸಿ ಊಟ ಮಾಡಿಸುತ್ತಿದ್ದೆ. ಮಳೆಗಾಲದಲ್ಲಿ ಬೆಚ್ಚಗೆ ಮಳೆ ನೋಡುತ್ತಾ ಕುಳಿತಾಗ ನಾನು ಕೇಳದೆಯೇ ಬಿಸಿ ಬಿಸಿ ಪಕೋಡ ಮಾಡಿ ತಂದಿಡುತ್ತಿದ್ದೆ.
ನೀನು ಯಾವಾಗಲೂ ಹಾಗೆ. ನೀನೆಂದು ನಿನಗಾಗಿ ಅಡುಗೆ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಪ್ರತಿಯೊಂದಕ್ಕೂ ನನ್ನನ್ನೇ ಮುಂದಿಡುವಾಗ ನಿನ್ನ ಬಗ್ಗೆ ಕಿಂಚಿತ್ತಾದರೂ ಯೋಚನೆ ಬಂದಿಲ್ಲವೇ? ನಾನು ಸ್ವಲ್ಪ ಸೀನಿದರು ಮಾತ್ರೆಯ ಜೊತೆಗೆ ನೀರು ತೆಗೆದುಕೊಂಡ ಬರುತಿದ್ದ ನೀನು, ನಿನಗೆ ಕೆಂಡದಂತಹ ಜ್ವರ ಬಂದರು ಡಾಕ್ಟರ್ ಬಳಿ ಹೋದದ್ದು ನನಗೆ ನೆನಪಿಲ್ಲ. ನನಗೋಸ್ಕರವೇ ನೀನು ಬದುಕಿದ್ದು, ಬದುಕುತ್ತಿರುವುದು ಸಹ. ಇಷ್ಟೊಂದು ಉಪಕಾರಿ, ತ್ಯಾಗ, ಸಹನೆ, ಮಮತೆ ಎಲ್ಲ ಅದ್ಹೇಗೆ ಬರುತ್ತಮ್ಮ? ನಿನಗೆ ಹೋಲಿಸಿದರೆ ನಾನು ಸ್ವಾರ್ಥಿ ಎಂದೆನಿಸುತ್ತದೆ.
ನಾನು ಕಣ್ಣು ಬಿಟ್ಟಾಗ ಮೊದಲು ಕಂಡವಳು ನೀನು. ನಾನು ಅಂಬೆಗಾಲಿಟ್ಟಾಗ ಚಪ್ಪಾಳೆ ಹಾಕಿ ಸಂಭ್ರಮಿಸಿದಾಕೆ, ನಡೆಯಲು ಯತ್ನಿಸಿದಾಗ ತೋರುಬೆರಳು ನೀಡಿ ಆಸರೆಯಾದಾಕೆ, ಓದಲು ಹೋಗಿ ಬಿದ್ದಾಗ ಗಾಯಕ್ಕೆ ಔಷಧಿ ಹಾಕಿದಾಕೆ, ನಾಯಿಯನ್ನು ನೋಡಿ ಹೆದರಿ ಅತ್ತಾಗ ಸಿಹಿ ಮುತ್ತನಿತ್ತು ರಮಿಸಿದಾಕೆ, ಶಾಲೆ ಬೇಡ ಎಂದು ಹಠ ಮಾಡಿದಾಗ ರಂಗು ರಂಗಿನ ಕತೆ ಹೇಳಿ ಕನಸು ಕಾಣಲು ಕಲಿಸಿದಾಕೆ, Homework ಮಾಡಲಾಗದೆ ಕಷ್ಟ ಪಡುತ್ತಿದ್ದಾಗ ನನ್ನಂತೆಯೇ Handwriting ಮಾಡಿ ಬರೆಯಲು ಸಹಾಯ ಮಾಡಿದಾಕೆ, ಜ್ವರದಿಂದ ರಾತ್ರಿಯೆಲ್ಲಾ ನರಳಿದಾಗ ಒಂದಿನಿತು ಬೇಸರ ಪಡದೆ ತಣ್ಣೀರ ಬಟ್ಟೆ ಹಾಕುತ್ತ ನಿದ್ದೆ ಗೆದ್ದಾಕೆ, ಸೀರೆಯುಡಲು ಕಲಿಸಿದಾಕೆ…. ಒಂದೇ ಎರಡೇ… ನೀನು ಮಾಡಿದ್ದನ್ನು ಲೆಕ್ಕವಿಡುತ್ತ ಹೋದರೆ ನಾನು ಮಲ್ಯನಿಗಿಂತಲೂ ಹೆಚ್ಚಿನ ಸಾಲಗಾರಳಾಗುತ್ತೇನೆ, ನೀನು ಕರ್ಣನಿಗಿಂತಲೂ ದೊಡ್ಡ ದಾನಿಯಾಗುತ್ತಿಯ.
ಅಮ್ಮ ನಿನಗೆ ಗೊತ್ತಾ. ನನ್ನ ಮಡಿಲಲ್ಲಿ ಜೀವವೊಂದು ಅರಳುತ್ತಿರುವ ಸೂಚನೆ ಕಾಣಿಸುತ್ತಿದೆ. ಈ ಸುದ್ದಿ ಗೊತ್ತಾದ ಬಳಿಕ ನಿನ್ನ ಖುಷಿ ಮೇರೆ ಮೀರುತ್ತದೆಂದು ಗೊತ್ತು ನಂಗೆ. ಆದ್ರೆ ನೀನು ಅಜ್ಜಿ ಆಗೋಗಿ ಬಿಡ್ತೀಯಲ್ಲಮ್ಮಾ.. ಹಹ..
ನನಗು ಮಗು ಆದರೆ ನಿನ್ನಂತೆ ಅಮ್ಮನಾಗ್ತೀನಾ ನಾನು? ಗೊತ್ತಿಲ್ಲ. ಭಯ ಆಗುತ್ತಮ್ಮಾ. ಇಷ್ಟು ದೊಡ್ಡ ಜವಾಬ್ದಾರಿ ಹೊರುವಷ್ಟು ಶಕ್ತಿ ನನಗಿಲ್ಲ ಅನ್ನಿಸ್ತಾ ಇದೆ. ಅಮ್ಮನಾಗಿ ಮಮತೆ ತೋರಿಸ್ತೀನೋ ಅಥವಾ ಮಗಳಾಗಿ ಇನ್ನು ಹಠ ಮಾಡ್ತಿನೋ.. ನಾನು ನಿನ್ನ ಹೊಟ್ಟೆಯಲ್ಲಿದ್ದಾಗ ನಿಂಗು ಹೀಗೆ ಭಯ ಆಗಿತ್ತೆನಮ್ಮ? ನೀನು ನನ್ನಂತೆ ಮಗಳಾಗಿದ್ದೆ. ನನ್ನಷ್ಟಲ್ಲದಿದ್ದರು ಸ್ವಲ್ಪನಾದ್ರು ಹಠ, ಜಗಳ ಎಲ್ಲ ಮಾಡ್ತಿದ್ದೆ ಅಲ್ಲ್ವಾ? ಅದ್ಯಾವಾಗ ಅಮ್ಮನಾದೆ ನೀನು? ಈ ಸಹನೆ, ನಿನಗೆ ಹಸಿವಾಗಿದ್ದರು ನನಗೆ ಅಡುಗೆ ಮಾಡಿ ತಿನ್ನಿಸಿ ನಂತರ ಉಳಿದರೆ ನೀನು ತಿನ್ನುವ ಗುಣ, ಮನೆಗೆ ಯಾರೇ ಬಂದರು ಮುಖ ಸಿಂಡರಿಸಿಕೊಳ್ಳದೆ ನಗು ನಗುತ್ತ ಅತಿಥಿ ಸತ್ಕಾರ ಮಾಡುವ ಪರಿ, ಯಾರಿಂದ ಏನನ್ನು ಬಯಸದೆ ಎಲ್ಲವನ್ನು ನೀಡುವ ನಿಸ್ವಾರ್ಥ ಸ್ವಭಾವ ಇದೆಲ್ಲವೂ ನನಗೆ ಹೊಸದು. ‘ನೀನು ಅಮ್ಮ ಆದಾಗ ಗೊತ್ತಾಗುತ್ತದೆ‘ ಎಂದು ಹೇಳುತ್ತಿರುತ್ತೀಯಲ್ಲಮ್ಮ . ನಿನ್ನ ಹಾಗೆ ನಾನಾಗುವುದಿಲ್ಲವೇನೋ ಎಂಬ ಭಯ ಶುರುವಾಗಿದೆ.
ನಿನ್ನ ಕೈ ಬದನೇಕಾಯಿ ಪಲ್ಯದ ರುಚಿಯೇ ರುಚಿ. ನೀನು ಹೇಳಿದ ಹಾಗೆ ಮಾಡಿದರು ಆ ರುಚಿ ಯಾವತ್ತೂ ಬಂದಿಲ್ಲ. ಅದಕ್ಕೆ ಹೇಳ್ತಾರೇನೋ ಅಮ್ಮನ ಕೈ ಅಡುಗೆ ಅಂತ. ಈ ಬೇಸಿಗೆಯಲ್ಲಿ ನನಗಿಷ್ಟ ಎಂದು ರಾಶಿ ರಾಶಿ ಸಂಡಿಗೆಗಳನ್ನು ಮಾಡಬೇಡಮ್ಮ. ನಿನಗೂ ವಯಸಾಯಿತು. ಮೊದಲಿನಂತೆ ಮೈಯಲ್ಲಿ ಶಕ್ತಿಯಿಲ್ಲದಿದ್ದರು ನೀನು ಮಾತ್ರ ಯಾವುದನ್ನು ಬಿಟ್ಟಿಲ್ಲ. ಒಂದು ದಿನ ಉಸ್ಸಪ್ಪ ಎಂದು ನಿನ್ನ ಬಾಯಿಂದ ಬಂದದ್ದಿಲ್ಲ. ಯಾರ ಮನೆಯೇ ಇರಲಿ, ನಮ್ಮ ಮನೆ ಎಂದುಕೊಂಡು ಕೆಲಸ ಮಾಡುವಾಕೆ ನೀನು. ನೀನು ಕಾಮಧೇನುವಿನ ಕತೆ ಹೇಳುತ್ತಿರುವಾಗ ನಾನು ಆ ಕತೆಯಲ್ಲಿ ನಿನ್ನನ್ನೇ ಕಾಮಧೇನುವಾಗಿ ಕಲ್ಪಿಸಿಕೊಳ್ಳುತ್ತಿದ್ದೆ. ಹಿಂದೆ ಹೋದರೆ ಹಾಯುವ ಮುಂದೆ ಬಂದರೆ ಒದೆಯುವ ಜನಗಳ ಮಧ್ಯೆ ನೀನು ಮಾತನಾಡುವ ಕಾಮಧೇನು. ಬದುಕನ್ನು ಹೇಗೆ ಎದುರಿಸಬೇಕು ಎಂದು ತೋರಿಸಿ ಕೊಟ್ಟವಳು. ಹಣ, ಗೌರವ, ಖ್ಯಾತಿ ಏನೇ ಬಂದರು ನಮ್ಮತನವನ್ನು ಕಳೆದುಕೊಳ್ಳಬಾರದು. ಇದೆಲ್ಲ ಇರದಿದ್ದರೂ ನಾವು ನಾವಾಗಿ ಬಾಳಬೇಕು ಎಂಬುದು ನಿನ್ನ ಸಿದ್ದಾಂತ.
ಒಮ್ಮೆಲೇ ನೆನಪಾಯಿತು. ಮೊನ್ನೆ ಸುಧೀರ ಅಂಕಲ್ ಮಗನ ನಿಶ್ಚಿತಾರ್ಥಕ್ಕೆ ಬ್ಲೂ ಸಿಲ್ಕ್ ಸೀರೆನೇ ಉಟ್ಟುಕೊಂಡಿದ್ಯಾ? ಅಪ್ಪ ಕೊಡಿಸಿದ ಮೊದಲ ಸೀರೆ ಅಂತ ಎಷ್ಟು ಜೋಪಾನವಾಗಿ ತೆಗೆದಿಟ್ಟಿದ್ದೀಯ. ಅವತ್ತು ಮೊದಲ ಬಾರಿಗೆ ನಾ ಸೀರೆ ಉಟ್ಟುಕೊಂಡಿದ್ದೆ. ನೀನೆ ಉಡಿಸಿದ್ದೆ. ಅದೇ ಬ್ಲೂ ಸೀರೆ. ನನ್ನ ನೋಡಿ ನನಗಿಂತಲೂ ಹೆಚ್ಚು ಸಂಭ್ರಮಿಸಿದ್ದು ನೀನು. ಅದೇ ಸಂಜೆ ನಾನು ಗೆಳತಿಯೊಂದಿಗೆ ಜಗಳವಾಡಿದ ಸಿಟ್ಟಿನಲ್ಲಿ ಮನೆಗೆ ಬಂದು ಸೀರೆ ಕಿತ್ತು ಬಿಸಾಡಿದಾಗ ನಿನಗೆ ಸಿಟ್ಟು ಬಂದರು ಮೌನದಿಂದಲೇ ಸೀರೆ ಎತ್ತಿ ಮಡಿಚಿಟ್ಟಿದ್ದೆ. ನನ್ನ ಇಷ್ಟದ ಟೆಡ್ಡಿಯನ್ನು ಯಾರಾದರೂ ಮುಟ್ಟಿ ಸಿಟ್ಟು ಬಂದಾಗ ಅದೇ ಘಟನೆ ನೆನಪಾಗುತ್ತದೆ. ಪದೇ ಪದೇ..
ಅಮ್ಮನೆಂದರೆ ನಿನ್ನ ಹಾಗಿರಬೇಕು ಎಂದು ತೋರಿಸಿ ಕೊಟ್ಟವಳು ನೀನು. ಕಣ್ಣೀರು ಬಂದರು ಆಚೆ ತುಳುಕದಂತೆ ಹಿಡಿಟ್ಟುಕೊಳ್ಳುವದನ್ನು ನಿನ್ನಿಂದ ಕಲಿಯಬೇಕು. ಎಲ್ಲರು ಸೀರೆ, ಒಡವೆ ಎಂದು ಮಾತನಾಡುತ್ತಿರುವಾಗ ನೀನು ನನ್ನ ಬಗ್ಗೆ ಹೇಳಿಕೊಳ್ಳುತ್ತಿದೆ. ನನ್ನ ಓದು, ಹವ್ಯಾಸಗಳ ಬಗ್ಗೆ ಮಾತನಾಡುತ್ತಿದ್ದೆ. ನೀನೆಂದು ಅಪ್ಪನನ್ನು ಅದು ಬೇಕು ಇದು ಬೇಕು ಎಂದು ಕೇಳಿದ್ದಿಲ್ಲ. ಅಪ್ಪ ಕೊಟ್ಟಿದ್ದ ದುಡ್ಡಿನಲ್ಲಿ ಉಳಿಸಿ ಅದರಲ್ಲೇ ನನಗೇನನ್ನೋ ತಂದು ಕೊಡುತ್ತಿದ್ದೆ.
ಹಾಯಾಗಿ ಟಿವಿ ಮುಂದೆ ಕಾಲು ಹಾಕಿ ಕುಳಿತುಕೊಳ್ಳುವ ಜಾಯಮಾನವಂತೂ ನಿಂದಲ್ಲ. ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರುವಾಕೆ ನೀನು. ಸುಮ್ಮನೆ ಕುಳಿತಾಗಲೂ ಕೈಯಲ್ಲೊಂದು ಹೆಣಿಕೆ ಇದ್ದೆ ಇರುತ್ತದೆ. ನನ್ನಮ್ಮ ಅಷ್ಟೇ ಜಾಣೆ ಕೂಡ. ಹಳೆಯ ಸೀರೆಗಳನ್ನು ಮನೆಯಲ್ಲಿ Mat ಮಾಡುವುದಾಗಲಿ, ಮನೆಯ ಅಂಗಳದಲ್ಲಿ ಬೆಳೆಸಿದ ಸಸಿಗಳನ್ನು ಜೋಪಾನವಾಗಿ ನೋಡಿಕೊಳ್ಳುವುದಾಗಲಿ, ಮುತ್ತಿನ ಕಿವಿಯೋಲೆಗಳನ್ನು ಮಾಡುವುದಾಗಲಿ ಎಲ್ಲದರಲ್ಲೂ ನಿಂದು ಎತ್ತಿದ ಕೈ. ಯಾವತ್ತೂ ಯಾವುದಕ್ಕೂ ನನಗಿದು ಗೊತ್ತಿಲ್ಲ ಅಥವಾ ನನಗಿದು ಬರೋಲ್ಲ ಎಂದು ನೀನು ಹೇಳಿದ್ದಿಲ್ಲ.
ಪ್ರತಿಯೊಂದನ್ನು ಕಲಿಯುವ ಹುಮ್ಮಸ್ಸು, ಕಲಿತು ಮಾಡಿ ತೋರಿಸುವ ಆಸಕ್ತಿ, ಜ್ಞಾನ ನಿಂತ ನೀರಾಗಬಾರದು ಎಂದು ಅದನ್ನು ಬೇರೆಯವರಿಗೆ ಹೇಳಿ ಕೊಡುವ ಪ್ರವೃತ್ತಿ ಎಲ್ಲದಕ್ಕೂ ನಿನಗೆ ನೀನೆ ಸಾಟಿ. ನಿನ್ನ ನೋಡಿ ನನ್ನ ಜೀವನೋತ್ಸಾಹ ಇನ್ನು ಅರಳುತ್ತದೆ. ಈ ವಯಸ್ಸಿನಲ್ಲಿಯೂ ಎಲ್ಲದರಲ್ಲಿಯೂ ಆಸಕ್ತಿ ತೋರಿಸುವ ನಿನ್ನನ್ನು ನೋಡಿ ನನಗೆ ನಾಚಿಕೆ.
ಏನಿವತ್ತು ನನ್ನ ಮಗಳು ಇಷ್ಟೊಂದು ಹೊಗಳುತ್ತಿದ್ದಾಳೆ ಎಂದು ಬೆರಗಾಗುತ್ತಿದೆ ಅಲ್ಲ್ವಾ? ಹೌದು ನಾನ್ಯಾವತ್ತೂ ನಿನ್ನ ಹೊಗಳಿದ್ದಿಲ್ಲ. ನೀನೆಂದರೆ ನನಗೆ ತುಂಬು ಅಭಿಮಾನ ಅಮ್ಮ. ಇದೆಲ್ಲವನ್ನು ನಿನ್ನ ಮುಂದೆ ಹೇಳುತ್ತಾ ಕುಳಿತರೆ ಅಳಲು ಶುರು ಮಾಡುತ್ತೇನೆ ಭಾವುಕತೆಯಲ್ಲಿ. ಆಮೇಲೆ ನನ್ನ ನೋಡಿ ನೀನು ಅಳುತ್ತೀಯಾ. ಅದಕ್ಕೆ ಈ ಪತ್ರ ಬರೆದು ಹೇಳುತ್ತಿದ್ದೇನೆ. ನಿನ್ನ ಬಗ್ಗೆ ಒಂದೇ ಎರಡೇ…. ನಾನು ನೋಡಿದ ವೀರ ನಾರಿ ನೀನು. ಅಪ ರಾತ್ರಿಯಲ್ಲೂ ನನ್ನ ಕೈ ಹಿಡಿದು ಧೈರ್ಯದಿಂದ ಹೆಜ್ಜೆ ಹಾಕುವಾಕೆ. ನನಗು ನಿನ್ನಲ್ಲಿರುವ ಗುಣಗಳಲ್ಲಿ ಒಂದು ೫% ಬಂದಿರಬಹುದೇನೋ ಗೊತ್ತಿಲ್ಲ..
ಕಾಲೇಜು ಹೋಗಲು ಶುರು ಮಾಡಿದಾಗ ನೀನು ಓಲ್ಡ್ ಫ್ಯಾಷನ್ ಎಂದೆನಿಸೋಕೆ ಶುರು ಆಯಿತು. ಆದರೆ ಇಷ್ಟು ವಯಸಾದರೂ ನಿನ್ನ ಮುಖದ ಮೇಲಿದೆಯಲ್ಲ ಆ ದೇವತೆಯಂತಹ ಕಾಂತಿ, ಅದು ನನ್ನಲ್ಲಿಲ್ಲ. ಹರಯದಲ್ಲಿದ್ದಾಗ ನನ್ನ ಭಾವನೆಗಳು ನಿನಗರ್ಥವಾಗುವುದಿಲ್ಲ ಎಂದು ತಪ್ಪು ತಿಳಿದುಕೊಂಡು ಬಿಟ್ಟಿದ್ದೆ. ನನಗಿಂತ ನನ್ನನ್ನು ನೀನು ಚೆನ್ನಾಗಿ ಬಲ್ಲೆ ಎಂದು ಇತ್ತೀಚಿಗೆ ಅರ್ಥವಾಗಿದೆ. ನನಗೆ ಮದುವೆ ಎಂದಾಗ ನಿನ್ನ ಮೇಲೆ ಉರಿದು ಬಿದ್ದಿದ್ದೆ ನಾನು. ನಾನೆಂದರೆ ನಿನಗೆ ಇಷ್ಟವಿಲ್ಲ ದಕ್ಕೆ ಮದುವೆ ಮಾಡುತ್ತಿದ್ದೀಯ ಎಂದೆಲ್ಲ ಹೇಳಿದ್ದೆ. ಆದರೆ ಮದುವೆಯ ದಿನ ತಾಳಿ ಕಟ್ಟುವ ಸಮಯದಲ್ಲಿ ಯಾರಿಗೂ ಕಾಣದಂತೆ ಕಣ್ಣೀರು ಒರೆಸಿಕೊಂಡಿದ್ದೆಯಲ್ಲ ಅದನ್ನು ನಾನು ನೋಡಲಿಲ್ಲ ಎಂದುಕೊಂಡಿದ್ದೀಯ? ಆ ಕಣ್ಣೀರೇ ನನಗೆಲ್ಲವನ್ನು ಹೇಳಿತ್ತು.
ಗಂಡನ ಮನೆಗೆ ಬಂದು ಅಪರಿಚಿತರ ನಡುವೆ ಬದುಕುತ್ತಿದ್ದಾಗ ಅರಿವಾಯಿತು ಅಮ್ಮನೆಂದರೆ ಏನು ಅಂತ. ಅದು ನನ್ನ ಮನೆ. ನನ್ನ ತವರು ಮನೆ. ನನ್ನನ್ನು ರಾಣಿಯಂತೆ ನೋಡುವ ಮನೆ. ಅದೇ ಇಲ್ಲಿ…. ಎಷ್ಟೇ ದಣಿವಾದರೂ ನಾನೇ ಅಡಿಗೆ ಮಾಡಬೇಕು. ಅತ್ತೆ, ಮಾವ, ಗಂಡ ಎಲ್ಲರ ಇಷ್ಟ ಕಷ್ಟಗಳು ತೀರಿದ ಮೇಲೆ ನನ್ನ ಕತೆ. ಅದು ಯಾರಾದರೂ ಕೇಳುವವರಿದ್ದರೆ…. ಸೋಫಾ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತು ನೀನು ಮಾಡಿ ಕೊಟ್ಟ ಕಾಫಿ ಕುಡಿಯುತ್ತ ಟಿವಿ ನೋಡುತ್ತಿದ್ದೆನಲ್ಲ ಆ ಸೌಭಾಗ್ಯ ಇಲ್ಲಿಲ್ಲ. ಎಲ್ಲರಿಗು ಪ್ರೀತಿ ಪಾತ್ರಳಾಗು ಎಂದು ನೀನು ಹರಸಿದ್ದಕ್ಕೆ ಸುಮ್ಮನಿದ್ದೇನೆ. ಇಲ್ಲದಿದ್ದರೆ ರಂಪಾಟ ಮಾಡಿ ನಿನ್ನ ಹತ್ತಿರ ಓಡಿ ಬಂದು ಬಿಡುತ್ತಿದ್ದೆ.
ಮೊನ್ನೆ ಸಣ್ಣದಾಗಿ ಮಳೆ ಬರುತ್ತಿತ್ತು. ನಿನ್ನ ಕಾಫಿಯ ಪರಿಮಳ ನನ್ನನ್ನು ಆವರಿಸಿಕೊಂಡಂತಾಗಿತ್ತು. ಮಳೆ ಬಂದಾಗ, ಬೆಚ್ಚಗೆ ಹೊದ್ದು ಮಲಗಿದಾಗ, ಗಂಡನೊಡನೆ ಮುನಿಸಿಕೊಂಡಾಗ, ಅಡುಗೆಗೆ ಉಪ್ಪು ಜಾಸ್ತಿ ಆದಾಗ, ಸೀರೆ ಉಟ್ಟುಕೊಂಡಾಗ, ಕೂದಲು ಒಣಗಿಸಿಕೊಳ್ಳುವಾಗ, ಕಾಫೀ ಕುಡಿಬೇಕೆನಿಸಿದಾಗ, ಶೀತವಾಗಿ ಗಂಟಲು ಕಟ್ಟಿಕೊಂಡಾಗ ನೀನೆ ನೆನಪಾಗುತ್ತೀಯಮ್ಮಾ.
ನಿನ್ನ ಕೈ ಉಪ್ಪಿನಕಾಯಿ ತಿನ್ನುವ ಬಯಕೆಯಾಗುತ್ತಿದೆ. ಅಮ್ಮನಾಗುವಾಗ ಅಮ್ಮ ಬೇಕು ಎಂದೆನಿಸುತ್ತದೆನಮ್ಮ? ಗೊತ್ತಿಲ್ಲ. ನನಗಂತೂ ನೀನು ಬೇಕು ಎಂದು ಪದೇ ಪದೇ ಅನ್ನಿಸುತ್ತೆ. ಮೊನ್ನೆ ಸಿನಿಮಾ ನೋಡ್ತಾ ಕೂತಿರುವಾಗ ಎಮೋಷನಲ್scene ಒಂದು ಬಂತು. ನಿನ್ನದೇ ನೆನಪಾಯ್ತು. ವೀಕೆಂಡ್ ವಿಥ್ ರಮೇಶ್ ನೋಡ್ತಾ ಅಳುತ್ತಿರುತ್ತೀಯಲ್ಲ. ಬೇರೆಯವರಿಗೆ ನೋವಾದರೆ ಅದನ್ನು ನಮ್ಮ ನೋವಿನಂತೆ ಭಾವಿಸಿ ಪ್ರತಿಕ್ರಿಯಿಸುವ ರೀತಿ ಇದೆಯಲ್ಲ ಅದು ಎಲ್ಲರಿಗು ಬರುವುದಿಲ್ಲಮ್ಮ . ನಿನ್ನಂತಹ ಮಾತೃ ಹೃದಯ ಇದ್ದವರಿಗಷ್ಟೇ ಸಾಧ್ಯ.
ಎಲ್ಲವನ್ನು ಕಲಿಸಿದೆ ಆದರೆ ನಿನ್ನ ಬಿಟ್ಟು ಬದುಕುವುದನ್ನು ಕಲಿಸಲಿಲ್ಲ. ಅಮ್ಮನಾಗುವ ಸಮಯ ಬಂದರು ನಿನ್ನ ಸೆರಗು ಹಿಡಿದು ಸುತ್ತುವುದನ್ನು ಬಿಡಲಾರೆ. ಈ ಪತ್ರ ಓದಿ ಹುಚ್ಚು ಹುಡುಗಿ ಅಂತ ಮನದಲ್ಲೇ ನಕ್ಕು ನನಗೆ ಕಾಲ್ ಮಾಡುತ್ತೀಯಾ, ಅಜ್ಜಿಯಾಗುತ್ತಿರುವೆ ಎಂಬ ಖುಷಿಯಲ್ಲಿ ನನಗಿಂತ ಹೆಚ್ಚು ಸಂಭ್ರಮಿಸುತ್ತೀಯಾ, ಅದು ತಿನ್ನು ಇದು ತಿನ್ನು ಎಂದು ಉದ್ದದ ಪಟ್ಟಿಯೊಂದನ್ನು ಹೇಳುತ್ತೀಯಾ, ನನಗಿಷ್ಟವಾದ ತಿಂಡಿಗಳನ್ನೆಲ್ಲ ಮಾಡುತ್ತೀಯಾ, ಯಾವಾಗ ಮಗಳನ್ನು ನೋಡುತ್ತೀನೋ ಎಂಬ ಕಾತರದಲ್ಲಿ ಕಾಯುತ್ತಿರುತ್ತೀಯ ಅಂತ ನಂಗೆ ಗೊತ್ತು.
ನಿನ್ನ ಅಳಿಯ ಬಂದ್ರು.. ನಿನ್ನಂತೆ ಗಂಡನ ಉಪಚಾರ ಮಾಡಬೇಕಲ್ಲ್ವಾ ನಾನು. ಸೊ ಹೊರಡ್ತಾ ಇದೀನಿ.
ಇಂತಿ,
ಅಮ್ಮನಾಗುತ್ತಿರುವ ನಿನ್ನ ಮಗಳು.
Too emotional…. Yes totally agree Mothers are always special…. We can’t even imagine life without her… Love you Amma always..
Totally Agree! 🙂