ನನಗೆ ವರುಷಕ್ಕೆರಡು ಬಾರಿ ದೀಪಾವಳಿ ….
ನಾವು ಹಿಂದುಗಳಿಗೆ ಹಬ್ಬಗಳಿಗೇನು ಕೊರತೆಯಿಲ್ಲ. ಯುಗಾದಿ, ದೀಪಾವಳಿಗಳಂತಹ ದೊಡ್ಡ ಹಬ್ಬಗಳ ಜೊತೆಗೆ ರಾಮನವಮಿ, ತುಳಸಿ ಮದುವೆಯಂತಹ ಚಿಕ್ಕ ಹಬ್ಬಗಳು ಹಲವಾರು. ಅಂತಹುದರಲ್ಲಿ ಕ್ರೈಸ್ತಮಸ್, ಗುಡ್ ಫ್ರೈಡೆಗಳು ಬಂದಾಗ ಸ್ನೇಹಿತರ ಜೊತೆ ಸೇರಿ ಆಚರಿಸಲು ಯಾವ ಅಡೆ ತಡೆಗಳೂ ಇಲ್ಲ. ಬಹುಶಃ ನಾನು 6 ನೇ ತರಗತಿಯಲ್ಲಿದ್ದೆನೇನೋ.. ನಮ್ಮ ಶಾಲೆಗೆ ಕ್ರೈಸ್ತನ ಅನುಯಾಯಿಗಳು ಎಂದು ಹೇಳಿಕೊಂಡು ಬಂದಂತಹ ಒಂದಷ್ಟು ಜನರು ಏಸು ಕ್ರೈಸ್ತನ ಅನೇಕ ಪುಸ್ತಕಗಳನ್ನು ಉಚಿತವಾಗಿ ಕೊಟ್ಟು ಹೋಗಿದ್ದರು. ಆಗೆಲ್ಲ ಮತಾಂತರದ ಧಾಂದಲೆ ತುಸು ಜೋರಾಗಿಯೇ ಇತ್ತು. ಯಾವುದೇ ಪುಸ್ತಕವಿರಲಿ ಅತಿ ಶ್ರದ್ದೆಯಿಂದ ಓದುವ ನಾನು ಈ ಪುಸ್ತಕಗಳನ್ನು ಓದತೊಡಗಿದೆ. ಬಿಟ್ಟು ಬಿಡದೆ ಕಾದಂಬರಿಗಳನ್ನು ಓದುತ್ತಿದ್ದನ್ನು ಖಂಡಿಸುತ್ತಿದ್ದ ಅಮ್ಮ ಇದನ್ನು ಎಂದಿನಂತೆ ತಮ್ಮ ಏರು ಧ್ವನಿಯಲ್ಲಿ ಖಂಡಿಸಿದರು. ಅಮ್ಮನಿಗೆ ಹೆದರಿಯೋ ಆ ಪುಸ್ತಕಗಳಲ್ಲಿ ಮುಂದೆ ಓದುವ ಕುತೂಹಲ ಇಲ್ಲದಾಗಿಯೋ ನಾನಂತೂ ಓದುವುದನ್ನು ನಿಲ್ಲಿಸಿದೆ.
ಕ್ರೈಸ್ತಮಸ್ ದಿನ ಸ್ನೇಹಿತರ ಮನೆಗೆ ಹೋಗುವುದಷ್ಟೇ ನನ್ನ ಕ್ರೈಸ್ತಮಸ್ ಆಚರಣೆಯಾಗಿತ್ತು. ಕ್ರೈಸ್ತಮಸ್ ಹಬ್ಬಕ್ಕಾಗಿಯೇ ಕಾಯುವಂತೆ ಮಾಡಿದ್ದು ಕಾರ್ಪೊರೇಟ್ ಜೀವನ. ನಮ್ಮದು ಸರ್ವ ಧರ್ಮ ಪ್ರೇಮಿಯಾದ ಟೀಮ್ ಆದ್ದರಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತಿದ್ದೆವು. ಕ್ರೈಸ್ತಮಸ್ ಸಮಯದಲ್ಲಿ ಇಡೀ ಓ.ಡಿ.ಸಿ (ಪ್ರಾಜೆಕ್ಟ್ ಟೀಮ್ ಗೆ ನಿಗದಿಪಡಿಸಿದ ಕೋಣೆ) ಶೃಂಗಾರಗೊಂಡು ಬಣ್ಣಮಯವಾಗಿ ರಂಗೇರುತ್ತಿತ್ತು. ನಂತರ ನಾನೇ ಮುಂದಾಳತ್ವ ವಹಿಸಿ ಕ್ರೈಸ್ತಮಸ್ ಟ್ರೀ ಡೆಕೋರಟ್ ಮಾಡೋದು, ಸೀಕ್ರೆಟ್ ಸಾಂಟಾ ಆಟ ಆಡಿಸುವುದನ್ನೆಲ್ಲ ಮಾಡತೊಡಗಿದೆ. ನಮ್ಮ ಯುಕೆ ಕ್ಲೈಂಟ್ ಗಳ ಕೃಪೆಯಿಂದ ಡಿಸೆಂಬರ್ ನಲ್ಲಿ ಅಷ್ಟಾಗಿ ಕೆಲಸವಿಲ್ಲದೇ ಇರುತ್ತಿದ್ದರಿಂದ ಈ ತರಹ ಸಮಯ ಕಳೆಯುವುದು ಇಂಟೆರೆಸ್ಟಿಂಗ್ ಆಗಿರುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಸೀಕ್ರೆಟ್ ಸಾಂಟಾ ನಮಗೇನು ಗಿಫ್ಟ್ ಕೊಡುತ್ತಾರೆ ಎಂದು ಆಶೆಯಿಂದ ಕಾಯುವುದೇ ಹಬ್ಬ. ದಿನವೂ ಒಂದೊಂದು ಗಿಫ್ಟ್ ಕೊಡುವ ಉದಾರಿ ಸಾಂಟಾ ಸಿಕ್ಕರಂತೂ ನಮ್ಮ ಖುಷಿಗೆ ಮೇರೆಗಳಿರುತ್ತಿರಲಿಲ್ಲ. ಅವರು ಕೊಡುತ್ತಿದ್ದ ಸುಳಿವುಗಳನ್ನಿಟ್ಟುಕೊಂಡು ಅವರನ್ನು ಕಂಡು ಹಿಡಿಯುವ ಕೆಲಸ ಷರ್ಲಾಕ್ ಫೀಲಿಂಗ್ ಕೊಡುತ್ತಿತ್ತು. ನಮ್ಮ ಸ್ನೇಹಿತರ ಹೆಸರಿಗೆ ತಪ್ಪು ಸುಳಿವುಗಳನ್ನು ಕೊಟ್ಟು ಅವರು ತಲೆ ಕೆಡಿಸಿಕೊಳ್ಳುವುದನ್ನು ನೋಡುವುದೇ ಒಂದು ಖುಷಿ.
ಪ್ರತಿ ವರುಷ ನಮ್ಮ ಸಾಂಟಾ ಯಾರು ಎಂದು ನಮ್ಮ ಕೈಯಲ್ಲಿ ಗಿಫ್ಟ್ ಬರುವ ಕ್ಷಣದವರೆಗೂ ಗೊತ್ತಾಗುತ್ತಿರಲಿಲ್ಲ. ಆದರೆ ಆ ವರುಷ ನನ್ನ ಸಾಂಟಾ ಹಿಂದಿನ ಸಂಜೆ ಕರೆ ಮಾಡಿ ‘ನಿನಗೇನು ಗಿಫ್ಟ್ ಬೇಕು’ ಎಂದು ಕೇಳಿದಾಗ ಜೋರಾಗಿ ನಕ್ಕು ಬಿಟ್ಟಿದ್ದೆ. ‘ನಿಂಗೇನು ಬೇಕು ನೀನೆ ತುಗೊಂಡು ಬಿಡು’ ಎಂದಾಗ ಕುಣಿಯುತ್ತ ಹೋಗಿ ನನಗಿಷ್ಟವಾದ ಡ್ರೆಸ್ ಎತ್ತಿಕೊಂಡು ಬಂದಿದ್ದೆ. ಇದೆ ಸಮಯದಲ್ಲಿ ನಮ್ಮ Clients ನಮಗೆ Gift voouchers ಕೊಡುತ್ತಿದ್ದರಿಂದ ನಾವೆಲ್ಲಾ ಡಿಸೆಂಬರಿಗಾಗಿ ಕಾಯುತ್ತಿದ್ದೆವು.
ನಂತರ ಪ್ರಾಜೆಕ್ಟ್ ಕೆಲಸದ ಮೇಲೆ ಒಂದು ವರುಷ ಯುಕೆ ಗೆ ಹೋಗಬೇಕಾಯಿತು. ಅಲ್ಲಿ ಕ್ರೈಸ್ತಮಸ ಆಚರಣೆ ಇನ್ನು ಜೋರು. ಪ್ರತಿಯೊಂದು ಡೆಸ್ಕಿನ ಹತ್ತಿರವೂ ಒಂದೊಂದು ಮರವನ್ನಿಟ್ಟು ಪೈಪೋಟಿಯ ಮೇಲೆ ಶೃಂಗರಿಸುತ್ತಿದ್ದರು. ನಮ್ಮ ಟೀಮಿನಲ್ಲಿ ನಾನೊಬ್ಬಳೇ ಹುಡುಗಿಯಾದ್ದರಿಂದ ಈ ಜವಾಬ್ದಾರಿ ನನ್ನ ಮೇಲೆಯೇ ಬಿತ್ತು. ಇದು ಆ ವರುಷ ನಾನು ಮತ್ತು ನಮ್ಮ ಕ್ಲೈಂಟ್ ‘ಹಾರ್ವೆ’ ಜೊತೆಗೂಡಿ ಶೃಂಗರಿಸಿದ ಕ್ರೈಸ್ತಮಸ್ ಟ್ರೀ. ಎಲ್ಲ ಹಸಿರು ಗಿಡಗಳ ಮಧ್ಯೆ ನಮ್ಮ ಬಿಳಿ ಬಣ್ಣದ ಮರ ದೇವತೆಯ ತರಹ ಕಾಣಿಸುತ್ತಿತ್ತು.
ಅದಾದ ಒಂದು ವರುಷದ ನಂತರ ನಾನು ಅಮೆರಿಕಾನಲ್ಲಿದ್ದೆ. ಇಲ್ಲಿ ಸ್ವಂತ ಮನೆಗಳ ಒಂದೊಂದು ಕಮ್ಯೂನಿಟಿ ಇರುತ್ತದೆ. ಈ ಎಲ್ಲ ಕಮ್ಯೂನಿಟಿಗಳು ಸಹ ತರಹೆವಾರಿಯಾಗಿ ತಮ್ಮ ದೊಡ್ಡ ದೊಡ್ಡ ಮನೆಗಳನ್ನು, ಮನೆಯ ಮುಂದಿನ ಜಾಗವನ್ನು ವಿವಿಧ ರೀತಿಯ ಕ್ರೈಸ್ತಮಸ್ ಗೆಂದೆ ಮೀಸಲಾದ ವಸ್ತುಗಳಿಂದ ಅಲಂಕರಿಸುತ್ತಾರೆ. ಸುಮ್ಮನೆ ಕಾರಿನಲ್ಲಿ ಎಲ್ಲ ಕಮ್ಯೂನಿಟಿಗಳನ್ನು ಸುತ್ತು ಹಾಕಿಕೊಂಡು ಬರುವುದೇ ಒಂದು ಚೆಂದ. ಇವೆಲ್ಲ ಹೋದ ವರುಷ ತೆಗೆದ ಛಾಯಾಚಿತ್ರಗಳು.
ಇದಷ್ಟೇ ಅಲ್ಲದೆ ಅಲ್ಲಲ್ಲಿ ಕ್ರೈಸ್ತಮಸ್ ಆಚರಣೆಗೆ ಲೈಟಿಂಗ್ ಮಾಡಿ ಜನರಿಗೆ ಉಚಿತ ಪ್ರವೇಶವನ್ನಿಟ್ಟಿರುತ್ತಾರೆ. ಇದು ನಾವು ಈ ವರುಷ ಹೋಗಿದ್ದ ಪಾರ್ಕ್. ಈ ಪಾರ್ಕಿನಲ್ಲಿರುವ ಮರಗಳೆಲ್ಲವನ್ನು ಬಣ್ಣ ಬಣ್ಣದ ಕಣ್ಣಿಗೆ ಮುದ ನೀಡುವಂತಹ ಲೈಟುಗಳಿಂದ ಶೃಂಗರಿಸಿದ್ದರು. ಪಾರ್ಕಿನ ಮಧ್ಯೆ ಇದ್ದ ಕೆರೆಯ ಹತ್ತಿರ ಹೋದಾಗ ನೀರಿನಲ್ಲಿ ಹೊಳೆಯುತ್ತಿದ್ದ ಮರಗಳ ಪ್ರತಿಬಿಂಬ ಇಡೀ ದೃಶ್ಯವನ್ನು ಇನ್ನು ಸುಂದರವನ್ನಾಗಿಸಿತ್ತು. ಒಂದಷ್ಟು ಚಿತ್ರಗಳು ಇಲ್ಲಿವೆ..
ಹೀಗೆ ಇಲ್ಲಿ ಡಿಸೆಂಬರಿನಲ್ಲಿ ಆಚೆ ಹೋಗುವುದೇ ಚಂದ. ದಾರಿಯುದ್ದಕ್ಕೂ ಹಾಕಿದ ಲೈಟುಗಳನ್ನು ಎಷ್ಟು ನೋಡಿದರು ಮನಸಿಗೆ ತೃಪ್ತಿಯಾಗದು.
Lovely 😍💖
Nice Article Sanjota
Thank you 🙂