ಐರ್ಲೆಂಡಿನ ಈ ಸಂತನ ಸ್ಮರಣೆಗೆ ನದಿ ಹಸಿರಾಗುತ್ತದೆ…..
ಕೆಲಸದ ನಿಮಿತ್ತ ಬ್ಲೂಮಿಂಗ್ಟನ್ ಗೆ ಸ್ಥಳಾಂತರವಾಗುವ ಅನಿವಾರ್ಯತೆ ಬಂದಾಗ ಈ ಹಿಮ ಪ್ರದೇಶದಲ್ಲಿ ಹೇಗಪ್ಪಾ ಕಾಲ ಕಳೆಯೋದು ಅನ್ನುವ ಚಿಂತೆ ಶುರುವಾಗಿತ್ತು. ಪ್ರತಿ ವಾರಾಂತ್ಯದಲ್ಲಿ ಸ್ನೇಹಿತರ ಮನೆಗೋ ಅಥವಾ ಇನ್ನೆಲ್ಲಿಗಾದರು ಸುತ್ತಾಡಲು ಹೋಗುವುದು ನಮಗೆ ಅಭ್ಯಾಸವಾಗಿ ಬಿಟ್ಟಿತ್ತು. ಈ ಊರಿಗೆ ಬಂದ ಮೇಲೆ ಸ್ನೇಹಿತರಿಲ್ಲ ಅನ್ನುವ ಕೊರಗು ಒಂದೆಡೆಯಾದರೆ ಹೊರಗೆ ಕಾಲಿಟ್ಟರೆ ರಕ್ತದ ಕಣ ಕಣಗಳು ಮರಗಟ್ಟುವಂತೆ ಹಿಂಸಿಸುತ್ತಿದ್ದ ಚಳಿ ಇನ್ನೊಂದೆಡೆ. ಚಳಿಗಾಲ ಮುಗಿಯುವವರೆಗೂ ಮನೆಯಲ್ಲಿಯೇ ಕೊಳೆಯಬೇಕಾದ ಪರಿಸ್ಥಿತಿ. ಹೀಗೆ ಗೋಳಿಡುತ್ತಿರುವಾಗ ಚಿಕಾಗೊ ನಲ್ಲಿ ನಡೆಯುವ ‘ಹಸಿರು ನದಿ’ ಕಾರ್ಯಕ್ರಮದ ಬಗ್ಗೆ ಗೊತ್ತಾಯಿತು. ಇನ್ನೇನು ಬಿಟ್ಟೇವೆಯೇ….
ನಾವು ಇರುವ ಸ್ಥಳದಿಂದ ಚಿಕಾಗೊ ಎರಡು ಗಂಟೆಗಳ ಕಾರು ಹಾದಿ. ಬೆಳಗ್ಗಿನ 9 ಗಂಟೆಗೂ ಮೊದಲೇ ಹೋಗಿ ಎಂದು ಈ ಗೂಗಲ್ ವಿಮರ್ಶೆ ಎಂಬ ಅಜ್ಜಿಯ ವರಾತ. ನನಗೋ ಬೆಳಿಗ್ಗೆ ಬೇಗ ಏಳುವುದೆಂದರೆ ಮೈಯೆಲ್ಲಾ ಮುಳ್ಳು. ಮುದ್ದು ಮಾಡಿ ರಮಿಸಿಕೊಂಡು ಎದ್ದು ಅಂತೂ ಇಂತೂ ತಯಾರಾಗಿ ಮನೆ ಬಿಟ್ಟಾಗ ಬೆಳಗಿನ 5.45 ಆಗಿತ್ತು. ಗಡ ಗಡ ನಡುಗಿಸುವ ಚಳಿಯ ಜೊತೆಗೆ ತುಂತುರು ಮಳೆಯ ಪಿಟಿ ಪಿಟಿ.
ನಾವು ಸ್ಥಳಕ್ಕೆ ತಲುಪಿದಾಗ 9 ಸಮೀಪಿಸುತ್ತಿತ್ತು. ಎಲ್ಲಿ ನೋಡಿದಲ್ಲಿ ಹಸಿರು ಬಣ್ಣ… ಹಸಿರು ಲಿಪ್ಸ್ಟಿಕ್, ಹಸಿರು ಕ್ಲಿಪ್ಸ್. ಹಸಿರು ಶೂಸ್ ಹಾಕಿಕೊಂಡ ಹುಡುಗಿಯರ ದಂಡೊಂದು ರಸ್ತೆ ದಾಟಲು ಹವಣಿಸುತ್ತಿತ್ತು. ದಶ ದಿಕ್ಕುಗಳಲ್ಲಿಯೂ ಜನರ ಗುಂಪು. ನದಿಯ ದಂಡೆಯ ಮೇಲಂತೂ ಆಕ್ಸಿಜನ್ ನ ಕೊರತೆಯಾಗುವಷ್ಟು ಜನ ಕಿಕ್ಕಿರಿದಿದ್ದರು. ತಾಪಮಾನ -1 °C ಇದ್ದರು ಜನರಲ್ಲಿ ಅದೇನೋ ಒಂಥರದ ಉತ್ಸಾಹ.
ನಾವು ಹೋದ ಕೆಲ ನಿಮಿಷಗಳ ನಂತರ ದೊಡ್ಡ ದೊಡ್ಡ ದೋಣಿಗಳು ನೀರಿಗೆ ಹಸಿರು ಬಣ್ಣ ಬಿಡತೊಡಗಿದವು. ಇವುಗಳ ಹಿಂದೆ ಬರುತ್ತಿದ್ದ ಚಿಕ್ಕ ಚಿಕ್ಕ ದೋಣಿಗಳಿಗೆ ಬಣ್ಣವನ್ನು ನೀರಿನ ತುಂಬಾ ಹರಡುವ ಕೆಲಸ. ಬಣ್ಣವಿಲ್ಲದ ನೀರಿಗೆ ಬಣ್ಣ ತುಂಬುವ ಕಲೆಗಾರಿಕೆ. ಯಾವ ಬಣ್ಣವಾದರೇನು, ಯಾವ ಆಕಾರವಾದರೇನು ನನ್ನನ್ನು ಹಿಡಿಯುವವರಾರು ಎಂಬಂತೆ ಹಸಿರು ಬಣ್ಣದಲ್ಲಿಯೇ ತನ್ನ ಗತ್ತನ್ನು ತೋರಿಸುತ್ತಿತ್ತು ನದಿ. ಸ್ವಲ್ಪ ಹೊತ್ತಿನ ನಂತರ ಇಡೀ ನದಿಯೆಲ್ಲ ಹಸಿರು ಬಣ್ಣದಿಂದ ಪ್ರತಿಫಲಿಸತೊಡಗಿತು. ಪ್ರಾಣಿಗಳ ಮುಖಗಳಿದ್ದ ದೋಣಿಗಳು, ದೊಡ್ಡ ಶಿಪ್ಪುಗಳು, ಇನ್ನು ಹಲವು ಸುತ್ತ ನೆರೆದಿದ್ದ ಜನರನ್ನು ಮನರಂಜಿಸಲೆಂದು ನೀರಿನಲ್ಲಿ ಓಡಾಡುತ್ತಿದ್ದವು.
ಯಾಕೆ, ಏನು, ಎತ್ತ……..
ಮಾರ್ಚ್ 17 ಸಂತ ಪ್ಯಾಟ್ರಿಕ್ ಮರಣ ಹೊಂದಿದ ದಿನ. ಐರ್ಲೆಂಡಿನ ಬಿಷಪ್ ಆಗಿದ್ದ ಈ ಸಂತ ಹಿಂದುಳಿದಿದ್ದ ಐರ್ಲೆಂಡಿನ ಜನರಲ್ಲಿ ಶೋಷಣೆಯ ವಿರುದ್ಧ ಹೋರಾಡುವ ಅರಿವನ್ನು ಮೂಡಿಸಿದ. ಕ್ರಿಸ್ತ ಪೂರ್ವ ಕಾಲದಲ್ಲಿ ಐರ್ಲೆಂಡಿನಲ್ಲಿ ಜೀತ ಪದ್ಧತಿ ಎಲ್ಲ ಕಡೆಯೂ ಕರಾಳವಾಗಿ ಹಬ್ಬಿತ್ತು. ಬೇರೆ ಹಳ್ಳಿಗಳನ್ನು ಲೂಟಿ ಮಾಡಿ ಅಲ್ಲಿನ ಜನರನ್ನು ಹಿಡಿದು ತಂದು ಜೀತಗಾರರಾಗಿ ಐರ್ಲೆಂಡಿನ ಸಿರಿವಂತರು ಬಳಸಿಕೊಳ್ಳುತ್ತಿದ್ದರು. ಅಂತಹ ಸಾವಿರಾರು ಜೀತಗಾರರಲ್ಲಿ ಪ್ಯಾಟ್ರಿಕ್ ಸಹ ಒಬ್ಬ.
ಬ್ರಿಟನ್ನಿನ ರೋಮನ್ ನಗರ ಪ್ಯಾಟ್ರಿಕ್ಕನ ಜನ್ಮಸ್ಥಳ. ಐರ್ಲೆಂಡಿನ ಜನ ಈ ಹಳ್ಳಿಯನ್ನು ಲೂಟಿ ಮಾಡಿ ಪ್ಯಾಟ್ರಿಕ್ಕನನ್ನು ಜೀತದಾಳಾಗಿ ಕರೆದೊಯ್ಯುತ್ತಾರೆ. 6 ವರುಷಗಳ ಕಾಲ ಜೀತ ಮಾಡಿಕೊಂಡಿದ್ದ ಇವನಿಗೆ ಒಂದು ರಾತ್ರಿ ಅಶರೀರ ವಾಣಿಯೊಂದು ಕೇಳಿಸುತ್ತದೆ. ಅದರ ಪ್ರಕಾರ ನದಿಯ ದಂಡೆಯ ಮೇಲೆ ಹೊರಡಲು ಸಿದ್ದವಾಗಿದ್ದ ಹಡಗನ್ನು ಹತ್ತಿ ತನ್ನ ಊರಿಗೆ ಮರಳುತ್ತಾನೆ ಪ್ಯಾಟ್ರಿಕ್. ಆದರೆ ಅವನಿಗೆ ಐರ್ಲೆಂಡಿನ ಕೆಟ್ಟ ಪದ್ದತಿಯನ್ನು ನಿಲ್ಲಿಸಬೇಕಿತ್ತು. ತನ್ನಂತೆಯೇ ಶೋಷಣೆಗೆ ಒಳಗಾದ ಅಮಾಯಕರನ್ನು ಸಂರಕ್ಷಿಸಬೇಕಿತ್ತು. ಅದೇ ಧ್ಯೇಯದಿಂದ ಸಂತನಾಗಿ ಐರ್ಲೆಂಡಿಗೆ ಮರಳುತ್ತಾನೆ. ಇವನ ಒಳ್ಳೆಯ ಉದ್ದೇಶದಿಂದ ತಮಗಾಗುವ ಲಾಭ ತಪ್ಪುತ್ತದೆಂದು ಅನೇಕ ಸ್ವಾರ್ಥಿಗಳು ಇವನ ವಿರುದ್ಧವಾಗಿ ನಿಲ್ಲುತ್ತಾರೆ. ಹಲವು ಬಾರಿ ಜೈಲಿಗೂ ಹೋಗಬೇಕಾಗುತ್ತದೆ ಪ್ಯಾಟ್ರಿಕ್. ಆದರೆ ಅವನು ಯಾವುದಕ್ಕೂ ಎದೆಗುಂದುವುದಿಲ್ಲ. ಜನರಿಗೆ ತಿಳುವಳಿಕೆ ಮೂಡಿಸಿ, ಶೋಷಣೆಯ ವಿರುದ್ಧ ಧ್ವನಿ ಎತ್ತುವಂತೆ ಮಾಡಿ ಬಡವರಿಗಾಗಿ ಅನೇಕ ಸ್ಕೂಲು, ಕಾಲೇಜು, ಆಸ್ಪತ್ರೆ, ಚರ್ಚುಗಳನ್ನು ತೆರೆಯುತ್ತಾನೆ. ಇವನಿಂದಲೇ ಐರ್ಲೆಂಡಿಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದರೆ ಅತಿಶಯವಾಗಲಿಕ್ಕಿಲ್ಲ.
ಹೀಗಾಗಿ ಈ ಸಂತ ಪ್ಯಾಟ್ರಿಕ್ ಐರ್ಲೆಂಡಿನ ಜನರಿಗೆಲ್ಲ ಆರಾಧ್ಯ ದೈವ, ಬದಲಾವಣೆಯನ್ನು ತಂದ ಮಹಾತ್ಮ, ಎಲ್ಲರಿಗು ಒಳ್ಳೆಯದನ್ನೇ ಬಯಸಿದ ಕಾರುಣ್ಯ ಮೂರ್ತಿ, ಹಿಂದೆ ತನ್ನನ್ನು ಜೀತಕ್ಕೆ ಇಟ್ಟುಕ್ಕೊಂಡಿದ್ದ ಸಾಹುಕಾರ ಎದುರಿಗೆ ಬಂದಾಗ ಎಲ್ಲವನ್ನು ಮರೆತು ಅವನನ್ನು ಕ್ಷಮಿಸಿದ ದಯಾಳು. ಐರ್ಲೆಂಡಿನ ಧ್ವಜದಲ್ಲಿ ಹಸಿರು ಬಣ್ಣವಿದೆ. ಐರ್ಲೆಂಡಿನ ಹಲವು ಕಾರ್ಯಕ್ರಮಗಳಲ್ಲಿ, ಆಟಗಳಲ್ಲಿ ಉಳಿದ ಎರಡು ಬಣ್ಣಕ್ಕಿಂತ ಹಸಿರನ್ನು ತಮ್ಮ ಗುರುತಾಗಿ ಬಳಸುತ್ತಾರೆ. ದೇಶದ ಸಂಕೇತವಾಗಿ, ಪ್ಯಾಟ್ರಿಕ್ಕನ ಸ್ಮರಣೆಗಾಗಿ ಐರ್ಲೆಂಡಿನಲ್ಲಿ ಮಾರ್ಚ್ 17 ರಂದು ಜನರೆಲ್ಲಾ ಹಸಿರು ಬಣ್ಣದ ಬಟ್ಟೆ ಮತ್ತು ಇತರೆ ಉಪಕರಣಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ.
ಬ್ರಿಟನ್ನಿನ ಸಂತನ ಸ್ಮರಣೆ ಅಮೇರಿಕಾದಲ್ಲಿ ಹೇಗೆ?
ಐರ್ಲೆಂಡಿನ ಬಹಳಷ್ಟು ಜನ ಅಮೆರಿಕಾಗೆ ವಲಸೆ ಬಂದಿದ್ದಾರೆ. ಬಹಳ ವರ್ಷಗಳ ಹಿಂದೆ ಐರ್ಲೆಂಡಿನ ಜನರೆಲ್ಲಾ ಸೇರಿ ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳಲು, ರಾಜಕೀಯವಾಗಿ ತಮ್ಮನ್ನು ಗುರುತಿಸಿಕೊಳ್ಳಲೆಂದು, ಈ ದೇಶದಲ್ಲಿ ತಮಗೆ ಸ್ಥಾನ ಮಾನ ಸಿಗಬೇಕೆಂದು ಸಾಮೂಹಿಕ ಪರೇಡ್ ಮಾಡಿದ್ದರು.
ಅದೇ ಸಮಯದಲ್ಲಿ ಚಿಕಾಗೋದ ಮೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.ಈತ ಲೇಕ್ ಮಿಚಿಗನ್ ನದಿಯ ಮೇಲೆ ಹೆಚ್ಚಿನ ಗಮನ ಹರಿಸಿದ. ಅದಾಗಲೇ ನಗರದ ಕಸವನ್ನೆಲ್ಲ ತುಂಬಿಕೊಂಡು ನದಿ ದಾರುಣ ಸ್ಥಿತಿಯಲ್ಲಿತ್ತು. ನದಿಗೆ ಕಸ ಹಾಕಬಾರದೆಂದು ಎಷ್ಟೇ ಆಜ್ಞೆ ವಿಧಿಸಿದರು ನದಿಗೆ ಬರುತ್ತಿದ್ದ ಕಸ ನಿಲ್ಲಲಿಲ್ಲ. ಆಗ ಕಸ ಸಂಗ್ರಹಿಸುತ್ತಿದ್ದ ಸಲಕರಣೆಗೆ ಹಸಿರು ಬಣ್ಣ ಹಾಕಿದರು. ಇದರಿಂದ ನದಿ ಎಲ್ಲಿ ಹಸಿರು ಬಣ್ಣವಾಗಿ ಬದಲಾಗುತ್ತೋ ಅದರ ಮುಖಾಂತರ ಕಸ ಹಾಕುವವರನ್ನು ಹಿಡಿಯುವುದಾಗಿತ್ತು. ಇದೇ ಮುಂದೆ ನದಿಗೆ ಹಸಿರು ಬಣ್ಣ ಹಾಕುವುದಕ್ಕೆ ನಾಂದಿಯಾಯಿತು.
ಮೊದಲು ಉಪಯೋಗಿಸುತ್ತಿದ್ದ ಬಣ್ಣದಿಂದ ನದಿ ಸುಮಾರು ಒಂದು ವಾರದ ಕಾಲ ಹಸಿರು ಬಣ್ಣದಲ್ಲಿರುತ್ತಿತ್ತು. ಆದರೆ ಈ ಬಣ್ಣ ನದಿಯ ಮಾಲಿನ್ಯವನ್ನು ಇನ್ನು ಹೆಚ್ಚಿಸತೊಡಗಿತು. ನದಿಯನ್ನು ಸ್ವಚ್ಛ ಮಾಡಬೇಕೆಂಬ ಉದ್ದೇಶದಿಂದ ಯಾವ ಹಸಿರು ಬಣ್ಣದ ಮೊರೆ ಹೊಕ್ಕಿದ್ದರೋ ಅದೇ ಹಸಿರು ಬಣ್ಣ ನದಿಯನ್ನು ಹಾಳು ಮಾಡತೊಡಗಿದಾಗ ಇದರ ಮೇಲೆ ಹೆಚ್ಚಿನ ಸಂಶೋಧನೆಯನ್ನು ಮಾಡಿದರು.
ವೆಜಿಟಬಲ್ ಡೈ ಮಾಲಿನ್ಯದಿಂದ ದೂರ ಎಂದು ಗೊತ್ತಾದಾಗ ಇದರ ಬಳಕೆ ಖಾಯಂ ಆಯಿತು. ಈಗ ಪ್ರತಿ ವರುಷ ಯಾವುದೇ ಮಾಲಿನ್ಯದ ಅಪಾಯಗಳಿಲ್ಲದೆ ನದಿ ಹಸಿರು ಬಣ್ಣದಲ್ಲಿ ಮಿನುಗುತ್ತದೆ. ಈ ಬಣ್ಣ ಐದರಿಂದ ಆರು ಗಂಟೆಗಳವರೆಗೆ ಇರುತ್ತದೆ.
ಬರಿ ಐರ್ಲೆಂಡಿನ ಜನರಷ್ಟೇ ಅಲ್ಲದೆ ಯು.ಎಸ್ ನ ಜನರೆಲ್ಲಾ ಸೇರುತ್ತಾರೆ. ಕ್ಯಾಥೊಲಿಕ್, ನಾನ್ ಕ್ಯಾಥೊಲಿಕ್, ಐರಿಶ್ ಹೀಗೆ ಎಲ್ಲ ಜನರು ಧರ್ಮದ ಭೇದ ಭಾವಗಳಿಲ್ಲದೆ ಒಬ್ಬ ಒಳ್ಳೆಯ ಹೃದಯದ ಸಂತನ ಸ್ಮರಣೆ ಮಾಡುತ್ತಾರೆ.