ಕನ್ನಡ ಕವಿಗಳ ದೃಷ್ಟಿಯಲ್ಲಿ ‘ಪ್ರೇಮ’- ಒಂದು ಅವಲೋಕನ
ಪ್ರೇಮಿಗಳ ದಿನದ ಗದ್ದಲ ಈಗಷ್ಟೇ ಕಡಿಮೆಯಾಗಿದೆ. ಕೆಲವರಿಗೆ ಹೊಸ ಪ್ರೀತಿ ಸಿಕ್ಕ ಪುಳಕ, ಕೆಲವರಿಗೆ ‘ಪ್ರೀತಿ- ಪ್ರೇಮ’ದ ಮೇಲೆ ವೈರಾಗ್ಯ, ಹಳೆಯ ಪ್ರೀತಿಯ ನೆನಪುಗಳಲ್ಲಿ ಬೇಯುತ್ತಿರುವವರು ಕೆಲವರು, ಮೊದಲ ಬಾರಿಗೆ ಪ್ರೀತಿಯನ್ನು ಅನುಭವಿಸುತ್ತಿರುವ ಒಂದಷ್ಟು ಜನರು, ‘ಇದೆಲ್ಲ ನಮ್ಮ ಸಂಸ್ಕಾರವಲ್ಲ’ ಎಂದು ಗಲಾಟೆ ಎಬ್ಬಿಸುವವರು…. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರೇಮಿಗಳ ದಿನ ಎಲ್ಲರಿಂದ ಆಚರಿಸಿಕೊಂಡಿದೆ.
ಹಾಗಿದ್ದರೆ ಪ್ರೇಮಿಗಳ ದಿನ ಎಂದರೇನು, ವರುಷಕ್ಕೊಂದು ದಿನವಷ್ಟೇ ಪ್ರೀತಿಯ ಹಬ್ಬವಾಗಬೇಕೇ, ಉಳಿದ ದಿನಗಳಲ್ಲಿ ಪ್ರೀತಿ ಬರಿಯ ಶೂನ್ಯವೇ, ಪ್ರೇಮಿಗಳ ದಿನ ಇಲ್ಲದೆ ಹೋದಲ್ಲಿ ಜನರು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದೇ ಇಲ್ಲವೇ, ಈ ದಿನವನ್ನು ವಿರೋಧಿಸುವ ಜನರು ಉಳಿದ 365 ದಿನಗಳೂ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆಯೇ…. ಗೊತ್ತಿಲ್ಲ. ಒಟ್ಟಿನಲ್ಲಿ ಪ್ರೇಮಿಗಳ ದಿನ ‘ಅವರವರ ಭಾವಕ್ಕೆ’ ತಕ್ಕಂತೆ.
ನಮ್ಮ ಅಜ್ಜ- ಅಜ್ಜಿಯರ ಕಾಲದಲ್ಲಿ ಯಾವ ಪ್ರೇಮಿಗಳ ದಿನವೂ ಇರಲಿಲ್ಲ. ಅಜ್ಜ ಅಜ್ಜಿಗೆ ಗುಲಾಬಿ ಹೂವುಗಳ ಬೊಕ್ಕೆಯನ್ನು ಹಿಡಿದುಕೊಂಡು ಮೊಳಕಾಲೂರಿ ‘ನೀನಿಲ್ಲದೆ ಬದುಕಲಾರೆ’ ಎಂದು ಹೇಳಿದ್ದಿಲ್ಲ. ಆದರೆ ಪ್ರತಿ ಮುಂಜಾನೆ ಹಿತ್ತಲಿನಲ್ಲಿ ಬೆಳೆದ ಮಲ್ಲಿಗೆಯನ್ನು ಅತಿ ಜಾಗರೂಕತೆಯಿಂದ ಅಜ್ಜಿಗೆಂದೇ ತೆಗೆದಿಡುತ್ತಾರೆ. ಅಜ್ಜಿ ತನ್ನ ಕೆಲಸದಲ್ಲಿ ಮಾಲೆ ಮಾಡಿಕೊಳ್ಳಲು ಮರೆತರೆ ಪದೇ ಪದೇ ಜ್ಞಾಪಿಸುತ್ತಾರೆ. ಕೆಲವೊಮ್ಮೆ ತಾವೇ ತಮಗೆ ಬಂದಂತೆ ಹೂವು ಪೋಣಿಸಿ ಮಾಲೆ ಮಾಡಿ ಕೊಟ್ಟದ್ದಿದೆ. ಅವರಿಬ್ಬರ ಮಧ್ಯೆ ಸರ್ಪ್ರೈಸ್ ಆಗಲಿ, ಗಿಫ್ಟ್ಗಳ ವಿನಿಮಯವಾಗಲಿ, ಪ್ರೀತಿ ತುಂಬಿದ ಪತ್ರಗಳ ವ್ಯವಹಾರ ಯಾವುದು ಎಂದಿಗೂ ನಡೆದಿಲ್ಲ. ಆದರೆ ಅಜ್ಜನಿಗೆ ಇಷ್ಟವಾದ ಅಡಿಗೆ ಮಾಡಿ ಬಡಿಸುವುದು, ಊರಿಗೆ ಹೋಗುವಾಗಲೆಲ್ಲ ಅಜ್ಜ ನೆನಪಿನಿಂದ ಅಜ್ಜಿಯ ಔಷಧಿಯನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳುವುದಕ್ಕೆಲ್ಲ ಯಾವುದೇ ‘ಪ್ರೇಮಿಗಳ ದಿನ’ ಬೇಕಿಲ್ಲ.
ಹಾಗಿದ್ದರೆ ನಮ್ಮ ಕಾಲದವರಿಗೆ ಯಾಕೆ ಈ ದಿನ ವಿಶೇಷ? ಬಹುಶಃ ನಮ್ಮ ಬಳಿ ನಮಗೋಸ್ಕರವೇ ಬದುಕುತ್ತಿರುವ ಜನರಿಗೆ ಸಮಯವೇ ಇಲ್ಲ. ಅಪ್ಪ ಅಮ್ಮನಿಗೆ ಏನಾದರೂ ತಂದು ಕೊಡಲು ‘ಫಾದರ್ಸ್ ಡೇ’ ‘ಮದರ್ಸ್ ಡೇ’ ಬೇಕೇ ಬೇಕು. ಹಳೆಯ ಸ್ನೇಹಿತರ ಜೊತೆ ಒಂದು ದಿನ ಕಳೆಯಲು ‘ಫ್ರೆಂಡಶಿಪ್ ಡೇ’ ಬೇಕು. ವಿದ್ಯೆ ಕಲಿಸಿದ ಗುರುಗಳನ್ನು ನೆನೆದು ಒಂದು ಧನ್ಯವಾದ ಹೇಳಲು ‘ಟೀಚರ್ಸ್ ಡೇ’ ಬೇಕು. ಹೀಗಿರುವಾಗ ನಾವು ಪ್ರೀತಿಸುತ್ತಿರುವವರಿಗೆ ‘ನೀನೆಂದರೆ ನನಗೆ ಪ್ರಾಣ’ ಎಂದು ಹೇಳಿಕೊಳ್ಳಲು ಒಂದು ದಿನ ಬೇಡವೇ?
ಪ್ರೇಮವೆಂಬುದು ಈ ಜಗತ್ತಿನ ಆದಿಯಿಂದ ಮನುಷ್ಯರ ಜೊತೆಗೆ ಈ ಭೂಮಿಗೆ ಬಂದಿದ್ದು. ಪ್ರೇಮವಿಲ್ಲವಾದಲ್ಲಿ ಜಗತ್ತಿನ ಯಾವ ಪ್ರಾಣಿಯು ಬದುಕಲು ಸಾಧ್ಯವಿಲ್ಲ. ನಮ್ಮೆಲ್ಲರನ್ನೂ ಒಬ್ಬರನ್ನೊಬ್ಬರ ಜೊತೆಗೆ ಬೆಸೆದು ‘ನಾಳೆ’ಗೋಸ್ಕರ ಕಾಯುವಂತೆ ಮಾಡುತ್ತಿರುವುದು ಈ ಪ್ರೇಮ. ಅದು ಹಿಂದೆಯೂ ಇತ್ತು, ಇಂದಿಗೂ ಇದೆ, ಮುಂದೆಯೂ ಇರುತ್ತದೆ.
‘ನಾನೇ ವೀಣೆ ನೀನೆ ತಂತಿ ಅವನೇ ವೈಣಿಕ’ ಎಂದು ಕುವೆಂಪುರವರು ತಮ್ಮ ಕವನದಲ್ಲಿ ಹೇಳುತ್ತಾರೆ. ವೀಣೆ- ತಂತಿ, ನೀರು-ಮೀನು, ದೇಹ-ಉಸಿರು, ಮರ-ಬೇರು ಹೀಗೆ ಈ ಎಲ್ಲದರ ಜೊತೆಗೆ ಪ್ರೇಮ ಮತ್ತು ಬದುಕಿನ ಹೋಲಿಕೆಯಾಗಿದೆ. ಹೇಗೆ ಈ ಎಲ್ಲವು ಒಂದಕ್ಕೊಂದು ಬೆಸೆದುಕೊಂಡಿವೆಯೋ ಹಾಗೆ ಪ್ರೇಮ ನಮ್ಮ ಬದುಕಿನ ತುಂಬ ಆವರಿಸಿಕೊಂಡಿದೆ.
‘ಬೆಳಗು ಬಾ ದೀವಿಗೆಯ… ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ ಶುಭ ಲಗ್ನದಲ್ಲಿ
ಎದೆಯ ಕಸವನ್ನು ಗುಡಿಸಿ ರಂಗವಲ್ಲಿಯನಿರಿಸಿ
ಸಿಂಗರಿಸು ನನ್ನೆದೆಯ ನಿನ್ನ ಪ್ರೇಮದ ಅಮೃತ ಸಂಪತ್ತಿನಲಿ’
ಎಂದು ಜಿ.ಎಸ್.ಎಸ್ ರವರು ಬರೆದಾಗ ಪ್ರೇಮವೆಂಬುದು ಎಂಥ ಅದ್ಭುತ ಪರಿಕಲ್ಪನೆ ಎಂಬ ಅರಿವಾಗುತ್ತದೆ. ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಎಂಬ ಬೇಂದ್ರೆಯವರ ಸಾಲುಗಳಲ್ಲಿರುವಂತೆ ಪ್ರೇಮವೆಂಬುದು ಅಮೃತ, ಉಪಯೋಗಿಸಿದಷ್ಟು ಇಮ್ಮಡಿಯಾಗುವ ಸಂಪತ್ತು, ಸದಾ ಜೊತೆಗಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಸುಮಧುರ ಭಾವ.
ಪ್ರೇಮದ ದೀಪಕ್ಕೆ ಪ್ರತಿದಿನವೂ ಒಲವೆಂಬ ಎಣ್ಣೆ ಹಾಕಿ ಪೋಷಿಸದಿದ್ದರೆ ಆರಿ ಹೋಗುವುದಂತೂ ಖಚಿತ. ಪ್ರೇಮ ಬಟ್ಟ ಬಯಲಿನಲ್ಲಿ ಉರಿಯುತ್ತಿರುವ ದೀಪದಂತೆ. ಬಿರುಗಾಳಿಗಳನ್ನು ಎದುರಿಸಿ ದೀಪವನ್ನು ಕಾಯಲು ಎರಡು ಕೈಗಳು ಬೇಕೇ ಬೇಕು. ಇಲ್ಲವಾದಲ್ಲಿ ‘ಹರಿಯಿತೇನು ಋಣ ನನಗು ನಿನಗೂ
ಬೆಸುಗೆ ಬಿರಿಯಿತೇ ಒಲವಿನ ಕಡೆಗೂ’ ಎಂದು ಭಗ್ನ ಪ್ರೇಮಿಗಳಾಗಬೇಕಷ್ಟೆ.
‘ನೀ ನುಡಿಯದಿರಲೇನು, ಬಯಲಾಗಿಹುದು ಎಲ್ಲ
ಕಣ್ಣಂಚಿನ ಕೊನೆಯ ಭಾವದಲ್ಲಿ’
ಎಂದು ಪ್ರೇಮಕವಿ ಕೆ.ಎಸ್.ಏನ್ ಬರೆಯುತ್ತಾರೆ. ಪ್ರೇಮಿಗಳ ಮಧ್ಯೆ ಮಾತಿಗಿಂತ ಮೌನಕ್ಕೆ ಹೆಚ್ಚಿನ ಕೆಲಸ. ಮಾತುಗಳಲ್ಲೇ ಎಲ್ಲವನ್ನು ಹೇಳಿಕೊಳ್ಳಬೇಕಾದಲ್ಲಿ ಅಲ್ಲಿ ಪ್ರೇಮವಿಲ್ಲವೆಂದೇ ಅರ್ಥ. ಅವನ ತುಂಟ ನಗೆಗೆ ಆಕೆಯ ಕಣ್ಣಂಚಲ್ಲಿ ಅರಳುವ ನಸು ನಾಚಿಕೆಯೇ ಪ್ರೇಮ. ಮಾತುಗಳು ಮೂಕವಾಗಿ ಅವರ ಮಧ್ಯೆ ನಡೆಯುವ ಸಾವಿರ ಸಂಭಾಷಣೆಗಳಿಗೆ ಕಣ್ಣೇ ಸಾಕ್ಷಿ. ಅವಳ ಹುಸಿ ಕೋಪಕ್ಕೆ ಕಣ್ಣಿನಲ್ಲೇ ಕ್ಷಮೆ ಕೇಳುತ್ತಾ ಮುಂಗೈ ಹಿಡಿದು ‘ಮನ್ನಿಸು’ ಎಂದು ಕೇಳುವ ಕಣ್ಣಂಚಿನ ಕೊನೆಯ ಭಾವದ ಬಗ್ಗೆಯೇ ಕೆ.ಎಸ್.ಏನ್ ರವರು ಬರೆದಿದ್ದಾರೆ.
ಶಾಲೆಯಲ್ಲಿದ್ದಾಗ ‘ವಿಶ್ವ ವಿನೂತನ ವಿದ್ಯಾ ಚೇತನ’ ಎಂದು ಅರ್ಥಗರ್ಭಿತವಾಗಿ ಹಾಡುತ್ತಿದ್ದ ಕವನವನ್ನು ಬರೆದ ಕವಿ ಚನ್ನವೀರ ಕಣವಿಯವರು ಸಹ ಪ್ರೇಮವನ್ನು ತಮ್ಮ ಕಾವ್ಯಗಳಲ್ಲಿ ತೋರಿಸಿದ್ದಾರೆ.
‘ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತು ಬಿಡುವೆ’
ಆಹಾ! ನಸು ಬೆಳಗಿಗೆ ಚಂದದ ಕನಸು ಕಾಣುತ್ತ, ಕಿರುನಗೆಯ ಹೊತ್ತು ಮಲಗಿದ ಆಕೆಯನ್ನು ಗಲ್ಲಕ್ಕೆ ಕೈ ಊರಿ ನೋಡುತ್ತಾ ಕುಳಿತ ಹುಡುಗನ ಪದ ಪುಂಜಗಳಿವು. ಅವಳ ಮಾತುಗಳಲ್ಲಿ ಕರಗಿ ಹೋಗಿ ಜಗತ್ತನ್ನೇ ಮರೆಯುವ ಆ ಅನುಭವ ಅನುಭವಿಸಿದವರಿಗಷ್ಟೇ ಗೊತ್ತು. ಅವಳ ಕನಸುಗಳಲ್ಲಿ ಅವನಿಲ್ಲದೆ ಇನ್ನ್ಯಾವ ಚಂದಿರ ಬರಲು ಸಾಧ್ಯ.
‘ಕನಸು ಕಾತರವಿಲ್ಲದ ಪ್ರೇಮ
ತುಂಬೆ ಗಿಡ ಕೂಡ ಇಲ್ಲದ ಬಯಲಿನಂತೆ’
ನಮ್ಮ ಜೀವನದ ಅನುಭವಗಳೇ ಲಂಕೇಶರ ಬಹುತೇಕ ಕವನಗಳಲ್ಲಿ ವ್ಯಕ್ತವಾಗಿವೆ. ಬಯಲೆಂದರೆ ತುಂಬೆ ಗಿಡ ಸರ್ವೇ ಸಾಮಾನ್ಯ. ತುಂಬೆ ಗಿಡವೇ ಇಲ್ಲದ ಬಯಲಿರುವುದಾ? ಹಾಗಿದ್ದರೆ ಅದು ಕನಸು ಕಾತುರಗಳಿಲ್ಲದ ಪ್ರೇಮದಂತೆ. ಇದ್ದರು ಇಲ್ಲದಂತೆ. ಬದುಕಿದ್ದರು ಜೀವವಿಲ್ಲದಂತೆ….
‘ಒಮ್ಮೆ ಮೋಹಕ ನೋಟ ಹಾಯಿಸಿ
ಇನ್ನೊಮ್ಮೆ ನೋಡದೆ ನೋಯಿಸಿ
ಕನಸಲ್ಲೂ ಬಿಡದೆ ಸತಾಯಿಸಿ
ಕಣ್ಣಾಮುಚ್ಚಾಲೆಯನಾಡಲಿಲ್ಲ’
-ಬಿ.ಆರ್.ಲಕ್ಷ್ಮಣರಾವ್
ಸುತ್ತಲೂ ಜನರಿದ್ದರು ತನ್ನಿಯನ ಕಡೆ ನೋಡುತ್ತಾ ಮೋಹಕ ನೋಟದಲ್ಲೇ ತನ್ನತ್ತ ಸೆಳೆಯುವ ಪರಿ… ನೋಡಿ ನೋಡಿ ಅಭ್ಯಾಸವಾದಾಗ ನೋಡದೆ ನೋಯಿಸುವ ಪರಿ, ಹಗಲೆಲ್ಲ ಕಾಡಿ ಕನಸಲ್ಲೂ ಸತಾಯಿಸಿಯುವ ಪರಿ ಪ್ರೇಮ.. ಇವೆಲ್ಲ ಬಹು ಸೂಕ್ಷ್ಮ ಸಂವೇದನೆಗಳು. ಕಲ್ಪನೆಗೂ ಮೀರಿದ್ದು, ಅರಿವಿಲ್ಲದಂತೆ ನಡೆದು ಹೋಗುವ ಘಟನೆಗಳು.
‘ನನ್ನ ಪ್ರೇಮದಹುಡುಗಿ ತಾವರೆಯ ಹೊಸಕೆಂಪು
ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು’
ಎಂದು ಪರಿಪರಿಯಾಗಿ ತನ್ನ ಪ್ರೇಮದ ಹುಡುಗಿಯನ್ನು ಹೊಗಳಿದ ಬಿ.ಎಂ.ಶ್ರೀಯವರು ತಮ್ಮ ಇನ್ನೊಂದು ಕವನದಲ್ಲಿ ಬರೆಯುತ್ತಾರೆ…
‘ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ
ಹೊಮ್ಮಿದ ಹಸುರಳಿ ಮೆರೆಯಿತು ಹಕ್ಕಿ ಕೊರಳಿನ ದನಿದೋರಿ’
ಪ್ರೇಮ ಹುಟ್ಟುವ ಮುಂಚೆ ಬಾಹ್ಯ ಸೌಂದರ್ಯವನ್ನು ಅವಲೋಕಿಸುವ ಮನ ಒಮ್ಮೆ ಪ್ರೇಮದಲ್ಲಿ ಲೀನವಾದರೆ ಮುಗಿಯಿತು, ನೋಡಲು ಹೇಗೆ ಇರಲಿ ಅವರ ಸಾನಿಧ್ಯವೊಂದಿದ್ದರೆ ಸಾಕು.. ಎಲ್ಲವನ್ನು ಅಳೆದು ತೂಗಿ ಪ್ರೇಮಿಸುವ ಪ್ರೇಮ ಪ್ರೇಮವಾಗುತ್ತದೆಯೇ? ಪ್ರೇಮಕ್ಕೆ ಗಡಿ ಬಂಧವಿಲ್ಲ. ಜಾತಿಗಳಾಚೆ, ಧರ್ಮದಾಚೆ, ವಯಸ್ಸಿನಾಚೆ ಪ್ರೇಮ ಸವಾರಿ ಮಾಡಬಲ್ಲದು.
‘ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ
ಗಂಧ ಲೇಪನವ್ಯಾತಕೆ ಈ ಜೀವಕೆ’
ಕಂಬಾರರ ಈ ಕವನದಂತೆ ಕಾಂತನಿಲ್ಲದೆ ಹೋದರೆ ಕಾಂತೆಯ ಮನಸು ಏನನ್ನು ಬಯಸುವುದಿಲ್ಲ. ಅವನೊಬ್ಬನಿದ್ದರೆ ಸಾಕು ಸಿರಿಯ ಸಂಪತ್ತೆಲ್ಲವೂ ಕಾಲ ಬಳಿ ಬಿದ್ದಂತೆ. ಅವನಿದ್ದರೆ ಚೆಂದ ಚೆಂದವಾಗಿ ಅವನ ಸುತ್ತ ಸುತ್ತುವ ಬಯಕೆ. ಅವನಿಗೊಪ್ಪುವ ಬಟ್ಟೆ ತೊಟ್ಟು ಕಾಲ ಗೆಜ್ಜೆಯ ಸದ್ದು ಮಾಡುತ್ತಾ ಅವನ ಧ್ಯಾನ ಸೆಳೆಯುವ ಹಂಬಲ,
‘ಯಾರಿಗೂ ಹೇಳೋಣು ಬ್ಯಾಡ
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲ್ಲೆ ಹಾಡೋಣಾಂತ’
ಬೇಂದ್ರೆಯವರು ಬರೆದಂತೆ ತನ್ನ ಜಗತ್ತಲ್ಲಿ ಅವನನ್ನು ಸೆಳೆದುಕೊಂಡು ಇಬ್ಬರೇ ಏಕಾಂತದಲ್ಲಿ ಮುದ್ದಾಡುವ ತವಕ.
ಪ್ರೇಮಕ್ಕೆ ಯಾವ ಕವಿಗಳು ಹೊರತಾಗಿಲ್ಲ. ಹೂವು, ಗ್ರೀಟಿಂಗ್ ಕಾರ್ಡ್ ಗಳು ಇಲ್ಲದ ಸಮಯದಲ್ಲಿಯೂ ಜನರು ಪ್ರೀತಿಸುತ್ತಿದ್ದರು, ತೋರ್ಪಡಿಸುತ್ತಿರಲಿಲ್ಲ. ಈಗ ಪ್ರೀತಿಸುತ್ತ ಅದನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರಷ್ಟೆ. ಕೆಲಸದ ಜಂಜಾಡದಿಂದ ಮುಕ್ತಿ ಹೊಂದಲು ಭಾನುವಾರ ಹೇಗೆ ಅವಶ್ಯಕವೋ ಹಾಗೆ ಈ ಒತ್ತಡದ ಸಮಯದಲ್ಲಿ ನಾವು ಪ್ರೀತಿಸುತ್ತಿರುವವರ ಜೊತೆಗೆ ಒಂದೆರಡು ಪ್ರೀತಿಯ ಮಾತನ್ನಾಡಲು, ಉಡುಗೊರೆ ಕೊಟ್ಟು ಮುದ್ದಾಡಲು, ಕೆಲ ಸಮಯ ಒಟ್ಟಿಗೆ ಕಳೆಯಲು ಪ್ರೇಮಿಗಳ ದಿನವೂ ಅಷ್ಟೇ ಅವಶ್ಯಕ. ವರ್ಷ ಪೂರ್ತಿ ಶಿವನನ್ನು ಧ್ಯಾನಿಸುವವರಿಗೆ ಶಿವರಾತ್ರಿ ಯಾಕೆ ಬೇಕು ಎಂದು ಕೇಳಿದರೆ ತಪ್ಪಲ್ಲವೇ.
Very nice. Thank you☺
ಕನ್ನಡ ಸಾಹಿತ್ಯದ ಮೇಲೆ ನಿಮಗಿರುವ ಪ್ರೀತಿ,ಅಧ್ಯಯನಶೀಲತೆ,ಉನ್ನತ ಗುಣಮಟ್ಟದ ಬರಹವನ್ನೇ ಓದುಗರಿಗೆ ನೀಡಬೇಕು ಎನ್ನುವ ತುಡಿತ ಬೆರಗು ಹುಟ್ಟಿಸುತ್ತದೆ.ನಾಡಿನ ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ,ಮ್ಯಾಗಝಿನ್’ಗಳಲ್ಲಿ ನಿಮ್ಮ ಬರಹಗಳನ್ನು ಅಷ್ಟಾಗಿ ನೋಡಿಲ್ಲ.ಪತ್ರಿಕೆಗಳಿಗೂ ಬರೆಯಬಹುದಲ್ಲ ನೀವು.ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿಲ್ಲದ ಸಾಹಿತ್ಯಾಸಕ್ತರೂ ನಿಮ್ಮ ಲೇಖನ,ಕಥೆಗಳನ್ನು ಓದಿದಂತಾಗುತ್ತದೆ.
Best wishes
ಲಕ್ಷ್ಮೀಶ ಜೆ.ಹೆಗಡೆ
Thank you very much 🙂
ನಾನು ಪತ್ರಿಕೆಗಳಿಗೆ ನನ್ನ ಲೇಖನಗಳನ್ನು ಕಲಿಸುವ ಪ್ರಯತ್ನವನ್ನೇ ಮಾಡಿಲ್ಲ. ಹೇಗೆ ಮಾಡಬೇಕು ಎಂದು ಸಹ ಗೊತ್ತಿಲ್ಲ 😀
Tumba chennagide nimma lekhana..
Thank you 🙂