ಗೃಹಭಂಗ (Gruhabhanga)–S.L.ಭೈರಪ್ಪ
ತನಗಿದ್ದ ಕಷ್ಟಗಳನ್ನು ಮರೆತು ಮಕ್ಕಳಿಗಾಗಿ ಬದುಕಿದ ದಿಟ್ಟ ಮಹಿಳೆಯೊಬ್ಬಳ ಕಥೆ, ತನಗೆ ಸೂರಿಲ್ಲದಿದ್ದರು ಮುಂದೊಂದು ದಿನ ತನ್ನ ಮಕ್ಕಳು ಸುರಕ್ಷಿತವಾಗಿರಲಿ ಎಂದು ಕಷ್ಟು ಪಟ್ಟು ದುಡಿದು ಮನೆ ಕಟ್ಟಿಸಿದ ಮಾತೃ ಹೃದಯದ ಕಥೆ..
ಇಂತಹ ಅದೆಷ್ಟೋ ಮಹಿಳೆಯರು ನಮ್ಮಲ್ಲಿದ್ದಾರೆ. ಗಂಡನ ಆಸರೆ ಇಲ್ಲದೆ, ಯಾರ ಸಹಾಯವು ಸಿಗದೇ ತಮ್ಮ ಸ್ವಂತ ಬಲದಿಂದ ಕೆಲಸ ಮಾಡುತ್ತ, ತಮ್ಮ ಮಕ್ಕಳನ್ನು ಪೋಷಿಸುತ್ತಾ, ತಮ್ಮ ಜೀವನ ಬೆಂಗಾಡಾದರು ಮಕ್ಕಳ ಜೀವನ ಬಣ್ಣಮಯವಾಗಿರಲೆಂದು ಕನಸು ಕಾಣುವ ಧೀರ ನಾರಿಯರು. ಈ ಕಥೆಯ ತುಂಬಾ ಇಂತಹ ಮಹಿಳೆಯೊಬ್ಬಳು ಬಂದು ಮನಸ್ಸನ್ನು ಆವರಿಸಿಕೊಳ್ಳುತ್ತಾಳೆ. ಪ್ರತಿಯೊಬ್ಬರ ಪಾತ್ರದಲ್ಲಿ ಪಾತ್ರವಾಗಿ ಯೋಚಿಸಿದಾಗ ಕೆಲ ಪಾತ್ರಗಳನ್ನು ಬಿಟ್ಟು ಇನ್ನ್ಯಾರದು ತಪ್ಪಿಲ್ಲ ಎನ್ನಿಸುತ್ತದೆ.
ಆದರೂ ನನ್ನನ್ನು ಸದಾ ಕಾಡುವ ಪ್ರಶ್ನೆ.. ಕೆಲವರಿಗೆ ಭಗವಂತ ತೀರದ ಕಷ್ಟಗಳನ್ನು ಮನ ಬಿಚ್ಚಿ ಕೊಟ್ಟಿರುತ್ತಾನೆ. ಇನ್ನು ಕೆಲವರು ಸದಾ ಸುಖದ ಉಯ್ಯಾಲೆಯಲ್ಲಿ ತೂಗಾಡುವ ಸುಖ ಪುರುಷರು. ಹಿಂದಿನ ಜರ್ಮದ ಕರ್ಮ ಇದಕ್ಕೆಲ್ಲ ಕಾರಣ ಎಂದು ಎಲ್ಲೋ ಓದಿದ ನೆನಪು. ಆದರೆ ಹಿಂದಿನ ಜನ್ಮದ ನೆನಪೇ ಇಲ್ಲದ ಈ ಜೀವನದಲ್ಲಿ ಇಷ್ಟೊಂದು ಕಷ್ಟಗಳನ್ನು ಕೊಟ್ಟು ಬಿಟ್ಟರೆ ಸೈರಿಸುವ ಶಕ್ತಿ ಬೇಕಲ್ಲವೇ.. ಕೆಲವರು ಗಟ್ಟಿಯಾಗಿರುತ್ತಾರೆ. ಎಂತಹ ಭೀಕರ ಪ್ರವಾಹ ಬಂದರು ಈಜಿ ಮುನ್ನುಗ್ಗುವ ಛಲ ಅವರದು. ಇನ್ನು ಕೆಲವರು ಪೊಳ್ಳು, ಹೆದರಿ ಆತ್ಮಹತ್ಯೆಗೆ ಶರಣಾಗುವಂತವರು. ಕರ್ಮ ಅಕರ್ಮದ ಬಗ್ಗೆ ಅತಿ ವಿಮರ್ಶೆ ಮಾಡದೆ ಕಥೆಯ ತೀರಕ್ಕೆ ಹೋಗೋಣ 🙂
ಈ ಕಥೆಯ ನಾಯಕಿ ನಂಜವ್ವ. ಅಲ್ಪ ಸ್ವಲ್ಪ ಓದಿ ತಿಳುವಳಿಕೆ ಇರುವ ಬುದ್ದಿವಂತೆ ಹಾಗೂ ವಿದ್ವತ್ವ ಇರುವ ಕಂಠಿಜೋಯೀಸ ಎಂಬ ಬ್ರಾಹ್ಮಣನ ಮಗಳು. ವಿಧಿ ಲಿಖಿತವೋ, ಹಿಂದಿನ ಜನ್ಮದ ಕರ್ಮವೋ ನಂಜವ್ವನಿಗೆ ಚೆನ್ನಿಗರಾಯ ಎಂಬಾತನೊಂದಿಗೆ ಮದುವೆಯಾಗುತ್ತದೆ. ಚೆನ್ನಿಗರಾಯನದು ಸುತ್ತ ಹಳ್ಳಿಗಳಲ್ಲಿ ಶಾನುಭೋಗಿಕೆ ಮಾಡುವ ಕೆಲಸ. ಹಳ್ಳಿಗರ ಹೊಲದ ಆಧಾರದ ಮೇಲೆ, ಬೇಸಾಯದ ಮಿತಿಗಳನ್ನು ಅಳೆದು ಅದರ ಮೇಲೆ ಕಂದಾಯವನ್ನು ಪಡೆದು ಅದನ್ನು ಸರಕಾರಕ್ಕೆ ಒಪ್ಪಿಸುವ ಜವಾಬ್ದಾರಿ. ಈ ಕೆಲಸ ವಂಶ ಪಾರ್ಯಾಂಪರವಾಗಿದ್ದರಿಂದ ಚೆನ್ನಿಗರಾಯ ದಡ್ಡನಾದರೂ ಆತನಿಗೆ ಈ ಕೆಲಸ ಒದಗಿರುತ್ತದೆ. ಮದುವೆಯಾದ ಹೊಸದರಲ್ಲಿ ಎಲ್ಲ ಸುಸೂತ್ರವಾಗಿ ನಡೆದರು ಬರು ಬರುತ್ತಾ ಚೆನ್ನಿಗರಾಯನ ತಾಯಿ ಗಂಗವ್ವನಿಂದ ನಂಜವ್ವನ ಬದುಕು ಹದಗೆಡಲು ಶುರುವಾಗುತ್ತದೆ.
ಶುದ್ಧ ಹಳ್ಳಿಯ ಗಮಾರಿ ಗಂಗವ್ವ. ತನ್ನ ಸೊಸೆಯ ಮೌಲ್ಯ ತಿಳಿಯುವುದಿಲ್ಲ ಈಕೆಗೆ. ಚೆನ್ನಿಗರಾಯನಿಗೆ ಇಲ್ಲ ಸಲ್ಲದ್ದನ್ನು ಹೇಳಿ ಅವರ ಸಂಬಂಧದಲ್ಲಿ ಬಿರುಕು ಮೂಡಿಸುತ್ತಾಳೆ. ತಾಯಿಯ ಸೆರಗಿನ ಗುಬ್ಬಚ್ಚಿ ಚೆನ್ನಿಗರಾಯ ಕೂಡ ಸತ್ಯ ಸುಳ್ಳಿನ ಪರಾಮರ್ಶೆ ಮಾಡದೆ ನಂಜವ್ವನೊಡನೆ ಜಗಳಕ್ಕೆ ಇಳಿಯುತ್ತಾನೆ. ನಿತ್ಯವೂ ಇದೆ ಗೋಳು ಮುಂದುವರೆಯುತ್ತದೆ. ಕಂದಾಯ ವಸೂಲಿಗೂ ಹೋಗುವುದನ್ನು ನಿಲ್ಲಿಸುವುದರಿಂದ ನಂಜವ್ವ ಮತ್ತು ಅವಳ ಮೂರು ಮಕ್ಕಳು ತುತ್ತು ಕೂಳಿಗೂ ಪರದಾಡುವಂತಾಗುತ್ತದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ನಡವಳಿಕೆಯ ಚೆನ್ನಿಗರಾಯನಿಗೆ ತನ್ನ ಹೆಂಡತಿ, ಮಕ್ಕಳ ಜವಾಬ್ದಾರಿ ಇಲ್ಲದೆ ಅಲ್ಲಿ ಇಲ್ಲಿ ಅಲೆಯುತ್ತ ಹೊತ್ತು ಕಳೆಯುತ್ತಾನೆ .
ಚೆನ್ನಿಗರಾಯನಿಂದ ದೂರವಾಗಿ ಮನೆಯಿಂದ ಹೊರ ಬಂದ ಮೇಲೆ ಯಾವುದೋ ಪಾಲು ಬಿದ್ದ ಜಾಗದಲ್ಲಿ ಬದುಕುತ್ತಿರುತ್ತಾರೆ ನಂಜವ್ವ ಮತ್ತು ಅವಳ ಮೂರು ಜನ ಮಕ್ಕಳು.. ನಂಜವ್ವ ಮುತ್ತುಗದ ಎಲೆ ಕಟ್ಟಿ, ಅವುಗಳನ್ನು ಮಾರಿದ ದುಡ್ಡಿನಲ್ಲಿ ಜೀವನವನ್ನು ಪೋಷಿಸುತ್ತಾಳೆ. ಕೊನೆಗೆ ಕೆಲವು ಊರಿನ ಹಿರಿಯರ ಸಹಾಯದಿಂದ ತಾನೇ ಕಂದಾಯ ವಸೂಲಿ ಮಾಡುವ ಕೆಲಸಕ್ಕೆ ಮುಂದಾಗಿ ತನ್ನ ಮತ್ತು ತನ್ನ ಮಕ್ಕಳ ಬದುಕಿಗೆ ಹೇಗೋ ಒಂದು ದಾರಿ ಮಾಡಿಕೊಂಡಿರುತ್ತಾಳೆ. ಹಿರಿಯ ಮಗ ರಾಮಣ್ಣ ಹೈ ಸ್ಕೂಲ್ ಮುಗಿಸಿ ಚೆನ್ನಾಗಿ ಓದುತ್ತ ಅಮ್ಮನ ಬಾಳಿನಲ್ಲಿ ಭರವಸೆಯಾಗುತ್ತಾನೆ. ಮಗಳು ಪಾರ್ವತಿ ಮದುವೆಯ ವಯಸ್ಸಿಗೆ ಬಂದಾಗ ಶಾಲೆಯಲ್ಲಿ ಮೇಷ್ಟ್ರಾಗಿದ್ದ ಸಭ್ಯ ವ್ಯಕ್ತಿಯನ್ನು ಹುಡುಕಿ ಅವರೊಂದಿಗೆ ಮದುವೆ ಮಾಡಿ ಕೊಡುತ್ತಾಳೆ ನಂಜವ್ವ. ಎಲ್ಲವೂ ಸುಗಮ ಎಂದು ಓದುಗ ನಿಟ್ಟುಸಿರು ಬಿಟ್ಟರೆ ಭೈರಪ್ಪನವರ ಅದ್ಭುತ ಕಲ್ಪನೆಯ ವಿಧಿಯಾಟವೇ ಬೇರೆ.
ಇಡೀ ಊರಿಗೆ ಪ್ಲೇಗ್ ವಕ್ಕರಿಸುತ್ತದೆ. ಹಲವರು ಇದರಿಂದ ಸಾಯತೊಡಗುತ್ತಾರೆ. ಸಾವಿನ ದೇವತೆ ನಂಜವ್ವನ ಮನೆಗೂ ಕಾಲಿರಿಸುತ್ತಾಳೆ . ಅಳಿಯ ವಾಸಕ್ಕೆ ಮನೆ ಹುಡುಕುತ್ತಿದ್ದರಿಂದ ನಂಜವ್ವನ ಮಗಳು ಇನ್ನು ತಾಯಿಯ ಮನೆಯಲ್ಲೇ ಇರುತ್ತಾಳೆ. ಆದರೆ ರಾಮಣ್ಣ ಮತ್ತು ಪಾರ್ವತಿ ಇಬ್ಬರಿಗೂ ಪ್ಲೇಗ್ ಬಂದು ಒಂದೇ ದಿನದಲ್ಲಿ ಇಬ್ಬರು ಶವಗಳಾಗುತ್ತಾರೆ.
ಇಷ್ಟು ಓದುವ ಹೊತ್ತಿಗೆ ಕರುಳು ಹಿಂಡಿ ಕಣ್ಣೀರು ತುಳುಕುತ್ತದೆ. ಭೈರಪ್ಪನವರ ಕಾದಂಬರಿಗಳೇ ಹಾಗೆ. ಯಾರಿಗಾದರೂ ಕಷ್ಟದ ಎಳ್ಳಷ್ಟೂ ಅರಿವಿಲ್ಲವೆಂದರೆ ಖಂಡಿತ ಭೈರಪ್ಪನವರ ಕಾದಂಬರಿ ಓದಿ. ಯಾವ ರೀತಿಯ ಅತಿರೇಕದ ಕಷ್ಟ ಇರುತ್ತದೆಂಬುದನ್ನು ಮನ ಮಿಡಿಯುವಂತೆ ಬರೆಯುತ್ತಾರೆ.
ಕೊನೆಗೆ ನಂಜವ್ವ ಮತ್ತು ಅವಳ ಮೂರನೇ ಮಗನ ಪರಿಸ್ಥಿತಿ ಏನಾಗುತ್ತದೆ. ಅವರಾದರೂ ಪ್ಲೇಗ್ನಿಂದ ಪಾರಾಗುತ್ತಾರಾ ಎಂದು ತಿಳಿಯಲು ಕಾದಂಬರಿ ಓದಿ.
ಸಂಪೂರ್ಣ ಹಳ್ಳಿಯ ಚಿತ್ರಣವಿದೆ. ಗಂಗವ್ವನ ಬಾಯಿಯಲ್ಲಿ ಬೈಗುಳಗಳನ್ನು ಯಥೇಚ್ಛವಾಗಿ ಹೊರ ಹೊಮ್ಮಿಸಿದ್ದಾರೆ ಭೈರಪ್ಪನವರು 🙂 ಕೆಲವರಿಗೆ ಇಷ್ಟವಾಗದೇ ಇರಬಹುದು ಈ ಕಾದಂಬರಿ. ಆದರೆ ಹಳ್ಳಿಯಲ್ಲಿ ಬೆಳೆದು ಬಂದವರು, ಕಷ್ಟಗಳ ಅರಿವಿದ್ದವರು 5/5 ಅಂಕ ಕೊಡುತ್ತಾರೆ ಖಂಡಿತ.
ಇಷ್ಟ ಆದರೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ 🙂