ಚಿದಂಬರ ರಹಸ್ಯ (Chidanbara rahasya)–K.P.ಪೂರ್ಣಚಂದ್ರ ತೇಜಸ್ವಿ
ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ಮೇಲು-ಕೀಳು, ದೆವ್ವ ಭೂತಗಳು ಹೀಗೆ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನು ಲಘು ಸಾಹಿತ್ಯದ ಹಾಸ್ಯ ಹಾರಾಟದಂತಹ ಅಂಶಗಳನ್ನು ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು ಇತ್ತೀಚಿನ ಅತಿ ಮುಖ್ಯ ಕನ್ನಡದ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ.
— ಶ್ರೀ ಟಿ.ಪಿ.ಅಶೋಕ
ತುಂಬಾ ದಿನಗಳಿಂದ ಓದಬೇಕೆಂದುಕೊಂಡಿದ್ದ ಕಾದಂಬರಿ ಇದು. ಚಿದಂಬರ ರಹಸ್ಯ ಎಂಬ ಶೀರ್ಷಿಕೆ ನೋಡಿ ಕಾದಂಬರಿಯ ಬಗ್ಗೆ ನನ್ನದೇ ಆದ ಸುಪ್ತ ಕತೆಯೊಂದು ಅಗೋಚರವಾಗಿ ಮನಸಿನಲ್ಲಿ ಹೆಣೆದುಕೊಂಡು ಬಿಟ್ಟಿತ್ತು. ಕಾದಂಬರಿ ಓದಿದ ನಂತರ ನನ್ನ ಕಲ್ಪನೆಗೂ ತೇಜಸ್ವಿಯವರು ಹೆಣೆದ ಕತೆಗೂ ಅಜ ಗಜಾಂತರ ವ್ಯತ್ಯಾಸ. ಈ ಕಾದಂಬರಿ ಮೊದಲ ಮುದ್ರಣವಾದದ್ದು 1985ರಲ್ಲಿ. ಅದಾದ ನಂತರ ಸುಮಾರು ಮುದ್ರಣಗಳು ಹೊರಬಂದು ಇತ್ತೀಚಿಗೆ 2011ರಲ್ಲಿ ಒಂದು ಮುದ್ರಣವನ್ನು ಹೊರ ತಂದಿರುವುದು ಈ ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ.
ಕೆಸರೂರು ಎಂಬ ಗ್ರಾಮದಲ್ಲಿ ನಡೆಯುವ ಘಟನೆಗಳು ಈ ಕಾದಂಬರಿಯ ಕಥಾ ವಸ್ತು. ಏಲಕ್ಕಿ ಬೆಳೆಗೆ ದೇಶದಾಚೆಗೂ ಖ್ಯಾತಿ ಪಡೆದ ಊರು ಕೆಸರೂರು. ಹೆಸರಾಂತ ವಿಜ್ಞಾನಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಂತಹ ಜೋಗಿಹಾಳರು ಸಂಶೋಧನೆ ಮಾಡುತ್ತಿದ್ದಂತಹ ಸಂಶೋಧನಾ ಕೇಂದ್ರ ಇರುವ ಸ್ಥಳ. ಎಲ್ಲ ರಂಗದಲ್ಲಿಯೂ ಹೆಸರು ಮಾಡಬಹುದಾದಂತಹ ಬುದ್ದಿವಂತಿಕೆಯಿದ್ದರೂ, ಅದನ್ನು ಸದುಪಯೋಗ ಪಡಿಸಿಕೊಳ್ಳಲಾಗದಷ್ಟು ಚಿಕ್ಕ ಮನಸಿರುವ ವ್ಯಕ್ತಿಗಳು ನೆಲೆಸುತ್ತಿದ್ದ ಜಾಗ.
ಜೋಸೆಫ್ ಅಂಗಾರ, ರಾಮಪ್ಪ ಅಲಿಯಾಸ ಇಂಗ್ಲಿಶಗೌಡ, ಚಂದ್ರ, ರಮೇಶ, ರಫಿ ಎಲ್ಲರು ಜೂನಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದುತ್ತಿರುವ ಮತ್ತು ಪ್ರೊಫೆಸರ್ ರಾಮಚಂದ್ರರವರ ಪಟ್ಟ ಶಿಷ್ಯರು. ಇತ್ತ ಅತಿ ಜಾಣರು ಅಲ್ಲದ ಇತ್ತ ಅತಿ ದಡ್ಡರು ಅಲ್ಲದ ಪೆದ್ದು ಹುಡುಗರು. ಹುಡುಗಿಯರನ್ನು ಇಂಪ್ರೆಸ್ ಮಾಡಲು ಸದಾ ಪ್ರಯತ್ನಿಸುತ್ತಾ, ಹುಡುಗಿಯರು ಎದುರಿಗೆ ಬಂದಾಗ ಗಲಿಬಿಲಿಗೊಳ್ಳುತ್ತ, ದೊಡ್ಡದೊಂದು ಕ್ರಾಂತಿಯನ್ನು ಮಾಡುತ್ತಿದ್ದೇವೆ ಎಂಬ ಹುಚ್ಚು ಕಲ್ಪನೆಯಲ್ಲಿ ಬೀಗುತ್ತ ತಮ್ಮನ್ನು ತಾವು ಮಹಾನ ಬುದ್ದಿವಂತರು, ಧೈರ್ಯವಂತರು, ಸಾಹಸಿಗಳು ಎಂದೆಲ್ಲ ಅಂದುಕೊಂಡು ಗುರಿಯಿಲ್ಲದೆ ಬದುಕುತ್ತಿದ್ದ ಜೀವಿಗಳು.
ಏಲಕ್ಕಿ ಬೆಳೆ ಮತ್ತು ಬೆಲೆ ಎರಡು ಹಠಾತ್ತನೆ ಕುಸಿಯುತ್ತಿರುವುದರಿಂದ ಕೇಂದ್ರ ಸರಕಾರ ಶಾಮನಂದನ ಅಂಗಾಡಿ ಎಂಬ ಇಂಟೆಲಿಜೆನ್ಸ್ ಆಫೀಸರ್ ನನ್ನು ಇದಕ್ಕೆ ಕಾರಣ ಹುಡುಕಲೆಂದು ಕೆಸರೂರಿಗೆ ಕಳಿಸಿರುತ್ತದೆ. ಜೋಗಿಹಾಳ ಎಂಬ ಹೆಸರಾಂತ ವಿಜ್ಞಾನಿ ಏಲಕ್ಕಿ ಬೆಳೆಯ ಬಗ್ಗೆ ಸಂಶೋಧನೆ ಮಾಡುತ್ತಲೇ ಮಧ್ಯದಲ್ಲಿ ಸಾವನಪ್ಪಿರುತ್ತಾರೆ. ಜೋಗಿಹಾಳರ ಶಿಷ್ಯಂದಿರಾದ ಸಿದ್ದಪ್ಪ ಮತ್ತು ಹೆಗಡೆಯವರಿಗೆ ಈ ಸಾವಿನ ಬಗ್ಗೆ ಯಾವುದೇ ಅನುಮಾನಗಳಿರುವುದಿಲ್ಲ. ಅಂಗಾಡಿ ಬಂದು ಏಲಕ್ಕಿ ಬೆಳೆಯ ಬಗ್ಗೆ ವಿಷಯಗಳನ್ನು ಸಂಗ್ರಹಿಸುತ್ತಾ ಹೋದಂತೆ ಜೋಗಿಹಾಳರ ಸಾವು ಆಕಸ್ಮಿಕವಲ್ಲ ಕೊಲೆಯು ಆಗಿರಬಹುದು ಎಂಬ ಸಂಶಯಗಳು ಗೋಚರಿಸುತ್ತವೆ. ಜೊತೆಗೆ ಸಾಹಿತಿ ಜಯರಾಂ ಕಲ್ಪಿಸಿದ ಕಲ್ಪನೆಯ ಕಥೆ ಈ ಅನುಮಾನಗಳಿಗೆ ಸಾಕ್ಷಿಯನ್ನು ಒದಗಿಸುತ್ತ ಕೊಲೆಯಾಗಿರಬಹುದು ಎಂಬ ಸಂಶಯವನ್ನು ಪುಷ್ಟಿಕರೀಸುತ್ತದೆ. ಅಂಗಾಡಿಯ ಪತ್ತೆಗೆ ಸಹಾಯವಾಗಲೆಂದು ಜೋಗಿಹಾಳರು ಅರ್ಧಕ್ಕೆ ನಿಲ್ಲಿಸಿದ ಅಧ್ಯಯನವನ್ನು ಇನ್ನೊಬ್ಬ ವಿಜ್ಞಾನಿ ಪಾಟೀಲರು ಮುಂದುವರೆಸುತ್ತಾರೆ. ಆಗ ಜೋಗಿಹಾಳರು ಸಂಶೋಧಿಸಿದ ಕೆಸರೂರಿನ ಹೈಬ್ರಿಡ್ ಎಂಬ ಅಧಿಕ ಉತ್ಪನ್ನ ಕೊಡುವ ಏಲಕ್ಕಿಯ ತಳಿ ಇರುವುದು ಪತ್ತೆಯಾಗುತ್ತದೆ. ಈ ತಳಿಯನ್ನು ಪತ್ತೆ ಹಚ್ಚಿದರೆ ಕೆಸರೂರು ಮತ್ತೆ ಏಲಕ್ಕಿ ಬೆಳೆಯಲ್ಲಿ ಇನ್ನು ಹೆಚ್ಚಿನ ಹೆಸರು ಮಾಡಬಹುದು, ಇಲ್ಲಿಯ ರೈತರು ಫಲವತ್ತಾದ ಬೆಳೆ ಬೆಳೆದು ಸಿರಿವಂತರಾಗಬಹುದು ಎಂದುಕೊಂಡು ಅಂಗಾಡಿ, ಸಿದ್ದಪ್ಪ, ಹೆಗಡೆ, ಜಯರಾಂ, ರಾಮಚಂದ್ರ ಮತ್ತು ಪಾಟೀಲರು ಮುಂದಾಗುತ್ತಾರೆ.
ಕೃಷ್ಣೇಗೌಡ ಎಂಬಾತ ಕೆಸರೂರಿನಲ್ಲಿ ಏಲಕ್ಕಿಯ ಮಂಡಿಯನ್ನಿಟ್ಟುಕೊಂಡು ಚೆನ್ನಾಗಿ ವ್ಯಾಪಾರ ಮಾಡುತ್ತಾ ಸಿರಿವಂತ ಕುಳಗಳಲ್ಲಿ ಒಬ್ಬನಾಗಿರುತ್ತಾನೆ. ಈತನ ಮಗಳು ಚೆಲುವೆ ಜಯಂತಿ ಜೂನಿಯರ್ ಕಾಲೇಜಿನಲ್ಲಿ ಓದುತ್ತ, ಅಲ್ಲಿ ಓದಲು ಬರುತ್ತಿದ್ದ ಪ್ರತಿ ಹುಡುಗನ ಮುಖದಲ್ಲಿ ತನ್ನ ಕನಸಿನ ರಾಜಕುಮಾರನ ಪ್ರತಿಬಿಂಬ ಹುಡುಕುತ್ತ ಹಗಲುಗನಸು ಕಾಣುತ್ತಿರುತ್ತಾಳೆ. ಪ್ರತಿ ರಾತ್ರಿ ಕೃಷ್ಣೇಗೌಡನ ಮನೆ ಮೇಲೆ ಕಲ್ಲು ಬೀಳೋಕೆ ಶುರುವಾಗುತ್ತದೆ. ಕಲ್ಲು ಹೊಡೆಯುತ್ತಿರುವವರನ್ನು ಕಂಡು ಹಿಡಿಯಲು ಹೋಗಿ, ಆ ಪ್ರಯತ್ನ ಇನ್ನೆಲ್ಲೋ ಕೊನೆಗೊಂಡು ಅನವಶ್ಯ ತೊಂದರೆಗಳಿಗೀಡಾಗುತ್ತಾನೆ. ಕೊನೆಗೆ ಇದೊಂದು ಪೈಶಾಚಿಕ ಕೃತ್ಯ ಎಂದುಕೊಂಡು ಭಯಭೀತನಾಗುತ್ತಾನೆ.
ಸುಲೇಮಾನ್ ಬೇರಿ ಎಂಬ ವ್ಯಕ್ತಿ ಕೃಷ್ಣೇಗೌಡನಿಗೆ ಪೈಪೋಟಿ ನೀಡಲು ಆತನ ಏಲಕ್ಕಿ ಮಂಡಿಯೆದುರೇ ತಾನು ಏಲಕ್ಕಿ ಮಂಡಿಯನ್ನು ತೆರೆಯುವ ಹುನ್ನಾರ ಹೂಡಿರುತ್ತಾನೆ. ಇದರಿಂದ ಕೃಷ್ಣೇಗೌಡನಿಗೂ ಸುಲೇಮಾನ್ ಬೇರಿಗೂ ಮುಸುಕಿನೊಳಗಿನ ಗುದ್ದಾಟ. ಮುಸ್ಲಿಮರು ಮಸೀದಿ ಕಟ್ಟಿಕೊಂಡು ಒಗ್ಗಟ್ಟು ಪ್ರದರ್ಶಿಸಿದರೆ ಹಿಂದೂಗಳು ವೆಂಕಟೇಶ್ವರ ಸಂಘ ಕಟ್ಟಿಕೊಂಡು ಮತಭೇದ ಮಾಡುತ್ತಾ ಊರಿನ ಸ್ವಾಸ್ತ್ಯ ಕೆಡಿಸುತ್ತಿರುತ್ತಾರೆ. ಎರಡು ಕಡೆ ಇಲ್ಲದ ಹರಿಜನ ಮತ್ತು ಊರಿಗೆ ವಲಸೆ ಬಂದ ಗೋಸಾಯಿಗಳನ್ನು ತಮ್ಮ ತಮ್ಮ ಗುಂಪುಗಳಲ್ಲಿ ಸೇರಿಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಕಸರತ್ತುಗಳು ಸದಾ ನಡೆಯುತ್ತಿರುತ್ತವೆ.
ಹಿಂದೂ ಮುಸ್ಲಿಂ ಕಿತ್ತಾಡುತ್ತಿರುವಾಗಲೇ ಜಯಂತಿ ಮತ್ತು ರಫಿಯ ಮಧ್ಯೆ ಪ್ರೇಮ ಚಿಗುರೊಡೆಯುತ್ತದೆ. ಈ ಪ್ರೇಮಿಗಳಿಗೆ ಬೆನ್ನುಲಾಬಾಗಿ ಎಲ್ಲ ಪಡ್ಡೆ ಹುಡುಗರು, ಜಯರಾಂ ಮತ್ತು ರಾಮಚಂದ್ರ ನಿಂತುಕೊಳ್ಳುತ್ತಾರೆ. ಕೆಸರೂರು ಹೈಬ್ರಿಡ್ ತಳಿಯನ್ನು ಮತ್ತೆ ಮಾಡುವುದು, ಜೋಗಿಹಾಳರ ಸಾವಿನ ರಹಸ್ಯವನ್ನು ಭೇದಿಸುವುದು, ಕೃಷ್ಣೇಗೌಡನ ಮನೆ ಮೇಲೆ ಕಲ್ಲು ತೂರುತ್ತಿರುವವರನ್ನು ಕಂಡು ಹಿಡಿಯುವುದು ಕಾದಂಬರಿಯ ಸಾರ ಮತ್ತು ಚಿದಂಬರ ರಹಸ್ಯ.
ಕೊನೆಗೆ ಕೆಸರೂರು ಹೈಬ್ರಿಡ್ ಹೇಗೆ ಪತ್ತೆಯಾಯಿತು, ಜಾತಿ ವೈಷಮ್ಯಕ್ಕೆ ಇಡೀ ಊರು ಹೇಗೆ ಬಲಿಯಾಯಿತು, ಗೋಸಾಯಿಗಳು ಓಡಿ ಹೋದದ್ದು, ಪಾಟೀಲರ ಕೊಲೆ ಪ್ರಯತ್ನ ಹೀಗೆ ಹಲವು ರಹಸ್ಯಗಳು ವ್ಯೂಹ ಭೇದಿಸಿಕೊಂಡು ಕಾದಂಬರಿಯ ಅಂತ್ಯವನ್ನು ಸಾರುತ್ತವೆ.