ನಾನು ನೋಡಿದ ನ್ಯೂಯಾರ್ಕ
ನಮ್ಮ ಮದುವೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ನ್ಯೂಯಾರ್ಕ ಗೆ ಪ್ರಯಾಣ ಬೆಳೆಸಿದ್ದೆವು. ಮೂರು ಗಂಟೆಗಳ ಪ್ರಯಾಣದ ನಂತರ ನಮ್ಮ ವಿಮಾನದ ಕ್ಯಾಪ್ಟನ್ ‘ಇನ್ನು 30 ನಿಮಿಷಗಳಲ್ಲಿ ನ್ಯೂಯಾರ್ಕ ತಲುಪುತ್ತೇವೆ‘ ಎಂದು ಘೋಷಿಸಿದಾಗ ಎಚ್ಚೆತ್ತು ಅರೆ ನಿದ್ದೆಯಲ್ಲಿಯೆ ಅತಿ ಕೌತುಕದಿಂದ ಕೆಳಗೆ ನೋಡತೊಡಗಿದೆ. ಮಧ್ಯದಲ್ಲಿ ಆವ್ರತವಾದ ನೀರು, ಬಹುಶಃ ಹಡಸನ್ ನದಿ ಇರಬಹುದೇನೊ…. ಅದರ ಸುತ್ತ ಮುತ್ತ ಒಂದಕ್ಕೊಂದು ಅಂಟಿಕೊಂಡಂತೆ ಕಾಣಿಸುತ್ತಿದ್ದ ಕಟ್ಟಡಗಳು, ಅಲ್ಲಲ್ಲಿ ತನ್ನ ಹರಿವನ್ನು ವಿಸ್ತರಿಸಿದ ಹಸಿರು….. ನ್ಯೂಯಾರ್ಕ ಎಂದರೆ ಅತಿ ಜನದಟ್ಟಣೆ ಇರುವ ನಗರ ಎಂದು ಮೊದಲೆ ಕೇಳಿದ್ದೆ.
ಮೊದಲ ದಿನ ಪ್ರಸಿದ್ದ ‘ಸ್ಟ್ಯಾಚ್ಯು ಆಫ್ ಲಿಬರ್ಟಿ ‘ಗೆ ಹೋಗುವುದೆಂದು ನಿರ್ಧರಿಸಿ, 6 ತಿಂಗಳ ಹಿಂದೆಯೇ ಬುಕ್ ಮಾಡಿದ್ದರಿಂದ ತುಸು ಹೆಚ್ಚೆನಿಸುವಂತೆಯೆ ಉತ್ಸುಕಳಾಗಿದ್ದೆ.. ಆದರೆ ನನ್ನ ಉತ್ಶಾಹಕ್ಕೆ ತಣ್ಣೀರೆರಚುವಂತೆ ನಮ್ಮ ವಿಮಾನ ಬರೋಬ್ಬರಿ ಒಂದು ಗಂಟೆ ತಡವಾಗಿ ತಲುಪಿತು. ಹೆಚ್ಚು ಸಮಯವಿರದಿದ್ದುದರಿಂದ ನಮ್ಮ ಲಗೆಜ್ ಸಮೇತ ಬ್ಯಾಟರಿ ಪಾರ್ಕಿಗೆ ದೌಡಾಯಿಸಿದೆವು. ನಗರದ ದಟ್ಟಣೆ ಶುರುವಾತಿನಿಂದಲೇ ತನ್ನ ಚಮಕನ್ನು ತೋರಿಸತೊಡಗಿತು. ಬೆಂಗಳೂರಿನಲ್ಲಿಯೇ ಕಣ್ಣು ಬಾಯಿ ಬಿಡುತ್ತಿದ್ದ ನಾನು ಇದನ್ನು ನೋಡಿ ದಂಗಾಗಿ ಹೋದೆ. ನಾವೆಷ್ಟೇ ಪ್ರಯತ್ನಿಸಿದರೂ ನಿಗದಿತ ಸಮಯಕ್ಕೆ ಪಾರ್ಕ ತಲುಪಲಾಗಲಿಲ್ಲ. ನಮ್ಮ ಸಮಯ ಮೀರಿದ್ದರಿಂದ ನಮ್ಮನ್ನು ಒಳಗೆ ಬಿಡಲಿಲ್ಲ. ಮಾರನೆ ದಿನ ಬರಲು ಹೇಳಿದ್ದರಿಂದ ನಮ್ಮ ಇಡೀ ಪ್ರವಾಸದ ಯೋಜನೆ ಬುಡ ಮೇಲಾಯಿತು. ಮೊದಲನೇ ದಿನವೇ ಈ ಕಹಿ ಅನುಭವದಿಂದ ತುಸು ಖೇದವಾಯಿತು. ಆದರೆ ಪ್ರವಾಸ ಸಾಗಲೇಬೇಕಲ್ಲ…. ಹಾಗಾಗಿ ಹೆಚ್ಚು ತಲೆಗೆ ಹಚ್ಚಿಕೊಳ್ಳದೆ ನಮ್ಮ ಹೋಟೆಲಿಗೆ ಹೋದೆವು. ಹೋಟೆಲ್ ಮಾಲೀಕ ನಮ್ಮನ್ನು ನಗು ಮೊಗದಿಂದ ಸ್ವಾಗತಿಸಿ ಎಲ್ಲವನ್ನು ತೋರಿಸಿ ಹೊರಟು ಹೋದ.
ಸ್ವಲ್ಪ ವಿಶ್ರಾಂತಿಯ ಬಳಿಕ ಬ್ರೂಕಲಿನ್ ಬ್ರಿಡ್ಜಿಗೆ ಹೊರಟೆವು. ನಾವು ಅಲ್ಲಿಗೆ ತಲುಪಿದಾಗ ಸಂಜೆ ಸೂರ್ಯ ಅಸ್ತವಾಗುವ ಸಮಯ, ಪಕ್ಷಿಗಳೆಲ್ಲಾ ಗೂಡು ಸೇರುವ ತವಕದಲ್ಲಿ ತಮ್ಮ ಬಳಗದೊಂದಿಗೆ ಹಾರುತ್ತಾ ಸಾಗುತ್ತಿದ್ದವು.ಈಸ್ಟ ನದಿಯ ಮೇಲಿರುವ ಈ ಬ್ರಿಡ್ಜಿನ ಒಂದು ತುದಿಗೆ ಮ್ಯಾನಹ್ಯಾಟನ್ ಇನ್ನೊಂದು ತುದಿಗೆ ಬ್ರೂಕಲಿನ್ ಇದೆ. ಸಾಮಾನ್ಯ ದಿನವಾದರೂ ಜನಗಳಿಂದ ಕಿಕ್ಕಿರಿಯುತಿತ್ತು. ಬ್ರಿಡ್ಜಿನ ಅರ್ಧ ಭಾಗ ಪಾದಾಚಾರಿಗಳಿಗೆ ಮೀಸಲಾಗಿದ್ದರೆ ಉಳಿದರ್ಧ ಭಾಗ ರಭಸದಿಂದ ಸಾಗುತ್ತಿದ್ದ ಸೈಕಲ್ ಸವಾರರಿಗೆ ಮೀಸಲಾಗಿತ್ತು. ಬ್ರೂಕಲಿನ್ ನಿಂದ ಮ್ಯಾನಹ್ಯಾಟನ್ ವರೆಗು ನಡೆದುಕೊಂಡು ಹೋದೆವು. ಪಕ್ಕದಲ್ಲಿಯೇ ಇದ್ದ ನದಿ, ನದಿಯೊಳಗೆ ತಮ್ಮದೇ ಸಾಮ್ರಾಜ್ಯವೆಂಬಂತೆ ಓಡಾಡುತ್ತಿದ್ದ ಹಡಗುಗಳು, ಅತಿ ನೈಪುಣ್ಯತೆಯಿಣದ ನಿರ್ಮಿಸಿದ ಕಟ್ಟಡಗಳ ಸಾಲು ಹೀಗೆ ಎಲ್ಲವು ನೋಡಲು ಹಿತವಾಗಿತ್ತು. ಪ್ರತಿಯೊಂದು ಕಟ್ಟಡವು ತನ್ನದೆ ಆದ ವಿಭಿನ್ನ ಶೈಲಿಯಲ್ಲಿ, ವಿಶಿಷ್ಟ ವಿನ್ಯಾಸದಲ್ಲಿ ಮೆರುಗುತ್ತಿತ್ತು. ಎಲ್ಲಿಯೇ ಹೋದರು ಕಣ್ಣು ತುಂಬಿ ತುಳುಕುವಷ್ಟು ಜನ.
ಅಲ್ಲಿಂದ ‘ಟೈಮ್ಸ್ ಸ್ಕ್ವೇರ್‘ ಗೆ ಹೋದೆವು. ಇದು ನಮ್ಮ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಇದ್ದಂತೆ. ಎಲ್ಲ ಕಂಪನಿಗಳು, ಜಾಹೀರಾತುಗಳು, ವಸ್ತುಗಳ ಮಾರಾಟ ಎಲ್ಲವು ಇಲ್ಲಿ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದೆವು. ಈ ನಗರದಲ್ಲಿ ನೆಲದ ಅಡಿಯಲ್ಲಿ ಅಂದರೆ ಸುರಂಗ ಮಾರ್ಗದಲ್ಲಿ ಓಡಾಡುವ ಮೆಟ್ರೋಗಳ ಸೌಕರ್ಯ ಜಾಸ್ತಿ. ಬಸ್ಸಿನ ಅನುಕೂಲವಿದ್ದರೂ ಹೆಚ್ಚಿನ ಜನ ಮೆಟ್ರೋ ಮೇಲೆ ಅವಲಂಬಿತರಾಗಿರುತ್ತಾರೆ. ಪ್ರತಿಯೊಂದು ಏರಿಯಾಗು ಕನೆಕ್ಟ ಆಗುವ ಹಾಗೆ, ಅತಿ ಮುಂದಾಲೋಚನೆಯಿಂದ ಉಪಾಯವಾಗಿ ನಿರ್ಮಿಸಿದ ರೇಲ್ವೆ ಹಳಿಗಳು. ನಾವು ಸಹ ಎಲ್ಲ ಕಡೆಗೂ ಮೆಟ್ರೋನಲ್ಲಿಯೇ ಓಡಾಡಿದ್ದು.
ಮರುದಿನ ‘ಸ್ಟ್ಯಾಚ್ಯು ಆಫ್ ಲಿಬರ್ಟಿ‘ ಇರುವ ದ್ವೀಪಕ್ಕೆ ಫೆರ್ರಿಯ ಮುಖಾಂತರ ಹೋಗಿ ಅಲ್ಲಿಯ ವಿಹಂಗಮ ನೋಟದಿಂದ ಹರ್ಷಚಿತ್ತರಾದೆವು. ಇದೊಂದು 305ಫೀಟ್ ಎತ್ತರದ ಸ್ತೀ ಪ್ರತಿಮೆ. ಫ್ರಾನ್ಸಿನ ಜನರು ಅಮೇರಿಕನ್ನರಿಗೆ ಉಡುಗೊರೆಯಾಗಿ ನೀಡಿದ್ದು. ತಾಮ್ರದಿಂದ ಮಾಡಲ್ಪಟ್ಟ ಈ ಮೂರ್ತಿ ಲಿಬರ್ಟಿ ದ್ವೀಪದಲ್ಲಿದ್ದು ಇಲ್ಲಿಗೆ ಬರುವ ಪ್ರವಾಸಿಗರನ್ನು ಹಾಗು ವಲಸಿಗರನ್ನು ಸ್ವಾಗತಿಸಿ, ಇಲ್ಲಿಂದ ಹಡಗಿನಲ್ಲಿ ಮರಳಿ ಹೋಗುವ ಜನರನ್ನು ಬೀಳ್ಕೊಡುತ್ತದೆ. ಇದು ರೊಮನ್ನರ ದೇವತೆಯಾಗಿದ್ದು ಬಲಗೈಯಲ್ಲಿ ಟಾರ್ಚನ್ನು ಹಿಡಿದುಕೊಂಡಿದೆ. ಈ ಮೂರ್ತಿಯ ಓಳಗಡೆ ಇರುವ ಮೆಟ್ಟಿಲುಗಳ ಮುಖಾಂತರ ಸಾಗಿ ಪ್ರತಿಮೆಯ ಕೀರಿಟದವರೆಗೂ ಹೋಗಬಹುದು. ಅಲ್ಲಿಂದ ಇಡೀ ನ್ಯುಯಾರ್ಕ್ ರಮಣೀಯವಾಗಿ ಗೋಚರಿಸುತ್ತದೆ. ಆರು ತಿಂಗಳುಗಳ ಹಿಂದಯೇ ಬುಕ್ ಮಾಡಿದ್ದರೂ ಹಿಂದಿನ ದಿನ ವಿಮಾನ ವಿಳಂಬದ ಕಾರಣದಿಂದ ನಮಗೆ ಈ ಅವಕಾಶ ತಪ್ಪಿ ಹೋಯಿತು. ಕೇವಲ ದ್ವೀಪವನ್ನು ಒಂದು ಸುತ್ತು ಹಾಕಿಕೊಂಡು ಬಂದೆವು.
ನ್ಯೂಯಾರ್ಕ ನಲ್ಲಿ ನೋಡುವಂತಹ ಪ್ರೇಕ್ಷಕ ಸ್ಥಳಗಳು ನೂರಾರು. ಪ್ರವಾಸಿಗರಿಗೆ ಎಲ್ಲ ಕಡೆಗೂ ಹೋಗಲಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಡಿ ನಗರವನ್ನು ಸುತ್ತಿಸಲು ಓಪನ್ ರೂಫ್ ಬಸ್ಸುಗಳಿರುತ್ತವೆ. ಎಲ್ಲವನ್ನು ನೋಡಿ ನಂತರ ನಮಗೆ ಅತಿ ಇಷ್ಟವೆನಿಸಿದ ಸ್ಥಳಗಳಿಗೆ ಬೇಕಾದರೆ ಮತ್ತೆ ಹೋಗಬಹುದು. ನಾವು ಸಹ ಈ ಬಸ್ಸಿನಲ್ಲಿ ಕುಳಿತು ನಗರವೀಕ್ಷಣೆ ಮಾಡಿದೆವು. ಎಲ್ಲಿಯೇ ಹೋದರು ಮನಸೂರೆಗೊಳ್ಳುವ ಗಗನಚುಂಬಿ ಕಟ್ಟಡಗಳು. ಸುಮಾರು ಮೂರು ಗಂಟೆಗಳ ಈ ಪ್ರಯಾಣದ ನಂತರ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್‘ ಗೆ ಹೋದೆವು. ಇದು 102 ಅಂತಸ್ತಿನ, 1454 ಫೀಟ್ ಉದ್ದದ ಅತಿ ಎತ್ತರದ ಗಗನಚುಂಬಿ ಕಟ್ಟಡ. ಸತತ 40 ವರ್ಷಗಳ ಕಾಲ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಬಿರುದನ್ನು ಉಳಿಸಿಕೊಂಡು ಬಂದಂತಹ ಕಟ್ಟಡ. ನಂತರ ಸ್ವಲ್ಪ ವರುಷಗಳ ಕಾಲ ‘ವರ್ಲ್ಡ ಟ್ರೇಡ್ ಸೆಂಟರ್ ‘ ಅತಿ ಎತ್ತರದ ಕಟ್ಟಡವಾಗಿತ್ತು. ಆದರೆ ಇದರ ಮೇಲಿನ ದಾಳಿಯಿಂದಾಗಿ ಕೆಲ ಅಂತಸ್ತುಗಳು ಕಡಿಮೆಯಾಗಿ ಮತ್ತೆ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅತಿ ಎತ್ತರದ ಕಟ್ಟಡ ಬಿರುದನ್ನು ತನ್ನದಾಗಿಸಿಕೊಂಡಿತು. ನಾವು ಇಲ್ಲಿಗೆ ಹೋದಾಗ ರಾತ್ರಿಯಾಗಿತ್ತು. 86 ನೇ ಅಂತಸ್ತಿನಿಂದ ನೋಡಿದಾಗ ನೋಟ ಹುಬ್ಬೇರಿಸುವಂತಿತ್ತು. ಕತ್ತಲ ಸಾಮ್ರಾಜ್ಯದಲ್ಲಿ ಮಿಂಚು ಹುಳುಗಳಂತೆ ಥಳ ಥಳ ಹೊಳೆಯುತ್ತಿದ್ದ ದೀಪಗಳು, ಪೈಪೋಟಿಗೆ ಬಿದ್ದವರಂತೆ ಶೃಂಗರಿಸಿಕೊಂಡ ತರಾವರಿ ಕಟ್ಟಡಗಳು. 360 ಕೋನಾಕೃತಿಯಲ್ಲಿ ಸುತ್ತಲಿಂದ ಎಲ್ಲವನ್ನು ವೀಕ್ಷಿಸಬಹುದಾಗಿತ್ತು. ಅಲ್ಲಿ ಇದ್ದಷ್ಟ್ಟು ಹೊತ್ತು ಸಮಯದ ಪರಿವೆಯೇ ಇರಲಿಲ್ಲ.
ಸಸ್ಯಾಹಾರಿಗಳಾದ್ದರಿಂದ ಊಟ ಸಿಗುವುದಕ್ಕೆ ತುಸು ಕಷ್ಟವೆನಿಸಿದರೂ ಹುಡುಕಿಕೊಂಡು ಹೋದರೆ ಇಂಡಿಯನ್ ಹೋಟೆಲಿಗಳಿಗೆನೂ ಬರವಿರಲಿಲ್ಲ. ಮಾರನೇ ದಿನ ಅಳಿದುಳಿದ ಸ್ಥಳಗಳನ್ನು ನೋಡಿದೆವು. ಚಾರ್ಜಿಂಗ ಬುಲ್ಲ್– ಗೂಳಿಯ ಪ್ರತಿಮೆಯನ್ನು ಹಿತ್ತಾಳೆಯಲ್ಲಿ ಕೆತ್ತಿ ನ್ಯೂಯಾರ್ಕ ನಗರಕ್ಕೆ ಬಂದು ವಾಸಿಸುವವರ ಧೈರ್ಯ, ಸಾಹಸ ಮತ್ತು ಎಲ್ಲವನ್ನು ಜಯಿಸುವುದಕ್ಕೆ ಸಾಕ್ಷಿಯಾಗಿ ನಿಲ್ಲಿಸಿದ್ದಾರೆ. ಸೆಂಟ್ರಲ್ ಪಾರ್ಕ – ಇದು 843 ಎಕರೆ ವಿಸ್ತೀರ್ಣದ ಅತಿ ದೊಡ್ಡ ಪಾರ್ಕ. ಇದನ್ನು ನೋಡಲು ವರ್ಷಕ್ಕೆ 40 ಮಿಲಿಯನ್ ನಷ್ಟು ಜನ ಬರುತ್ತಾರಂತೆ!!!! ಬಹುತೇಕ ಡಿಸ್ನಿ ಸಿನೆಮಾಗಳ ಚಿತ್ರೀಕರಣವನ್ನು ಈ ಪಾರ್ಕಿನಲ್ಲಿಯೇ ಮಾಡುತ್ತರಾದ್ದರಿಂದ ದರ್ಶಕರ ಸಂಖ್ಯೆ ತುಸು ಹೆಚ್ಚೆಂದೆ ಹೇಳಬಹುದು. ಪೂರ್ತಿ ಪಾರ್ಕ ಸುತ್ತುವುದು ಅಸಾಧ್ಯವಾದ್ದರಿಂದ ಸ್ವಲ್ಪ ಹೊತ್ತು ಸುತ್ತಿ ವಿಶ್ರಾಂತಿ ಪಡೆದೆವು.
ಇಷ್ಟೆಲ್ಲಾ ನೋಡಿ ಮುಗಿಸುವ ಹೊತ್ತಿಗೆ ಸಂಜೆಯಾಗಿ ನಮ್ಮ ಮರು ಪ್ರಯಾಣದ ಫ್ಲೈಟಿನ ಸಮಯವಾಗಿತ್ತು. ಹೀಗೆ ಒಂದು ಅಪೂರ್ವ ಅನುಭವದೊಂದಿಗೆ ನಮ್ಮ ಪ್ರಯಾಣ ಕೊನೆಗೊಂಡಿತು. ಪ್ರಯಾಣ ಕೊನೆಯಾದರೂ ಎಂದು ಮರೆಯಲಾಗದಂತಹ ನೆನಪುಗಳು, ಅನುಭವವಗಳನ್ನು ನಮಗೆ ಕಟ್ಟಿ ಕೊಟ್ಟಿತು. ನನ್ನ ಅತಿ ಇಷ್ಟದ ಜಾಗಗಳಲ್ಲಿ ಒಂದಾಗಿ ನ್ಯೂಯಾರ್ಕ ಸೇರಿಕೊಂಡಿತು.
ಭಾಳ್ ಚಂದದ 🙂
Thanks 🙂
I have been to New York. Stayed there for 2 months and then back to Bengaluru. I must stay its the most beautiful city. I miss it badly!!
Yeah too beautiful it is….