ಮೈ ಮನಗಳ ಸುಳಿಯಲ್ಲಿ (Mai Managala Suliyalli)- ಶಿವರಾಮ ಕಾರಂತ
ಹೊಟ್ಟೆ ಬಟ್ಟೆಯ ಪೋಷಣೆಗಾಗಿ ದುಡಿಯುವವರು ಕೆಲವರು, ಇನ್ನು ಕೆಲವರು ಯಾರದೋ ಬಲವಂತಕ್ಕೆ ತಮಗಿಷ್ಟವಿಲ್ಲದ ವೃತ್ತಿಯನ್ನು ಮಾಡುವ ಪ್ರವೃತ್ತಿಯವರು, ಹಣಕ್ಕೆ ಮರುಳಾಗಿ ಮನಕ್ಕೆ ಬೇಲಿ ಹಾಕಿಕೊಂಡು ಕಾಯಕ ಮಾಡುವವರು ಕೆಲವರಾದರೆ ಇನ್ನು ಕೆಲವರು ತಲೆಮಾರುಗಳಿಂದ ಬಂದಂತಹ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಗುಣದವರು, ಈ ಎಲ್ಲ ಕೆಲವರುಗಳ ಮಧ್ಯೆ ಆತ್ಮತೃಪ್ತಿಗಾಗಿ , ಸಂತೃಪ್ತ ಭಾವನೆಯಿಂದ ಯಾರನ್ನು ದೂಷಿಸದೆ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುವವರು ತುಂಬಾ ವಿರಳ.
ತಲೆತಲಾಂತರುಗಳಿಂದ ಮೈ ಮಾರಿಕೊಂಡು ಬದುಕುವ ವೃತ್ತಿಯನ್ನು ಮುಂದುವರೆಸಿಕೊಂಡು, ಮೈ ಮನಗಳ ಸುಳಿಯಲ್ಲಿ ಆಗಾಗ ಸಿಕ್ಕು ಬಳಲಿ ನರಳುವ ‘ಮಂಜುಳಾ’ ಎಂಬ ಗರತಿಯಲ್ಲದ ಗರತಿಯ ಕಥೆ ಇದು. ಮಂಜುಳೆಯ ಮಗಳಾದ ಶಾರಿಯ ಜೀವನದ ಜೊತೆಗೆ ಈ ಕತೆ ಶುರುವಾಗುತ್ತದೆ. ಮಗಳೆಂದರೆ ಸ್ವಂತ ಮಗಳೇನಲ್ಲ. ತನಗೆ ಮಕ್ಕಳಾಗದಿದ್ದಾಗ ತಂಗಿಯ ಮಗಳನ್ನು ದತ್ತು ತೆಗೆದುಕೊಂಡು ಮಂಜುಳಾ ಪೋಷಿಸಿರುತ್ತಾಳೆ. ಮಂಜುಳೆಯ ಮರಣದ ನಂತರ ಅನಾಯಾಸವಾಗಿ ಬಂದ ಆಸ್ತಿಗೆ ಶಾರಿ ಒಡತಿಯಾಗುತ್ತಾಳೆ. ಹಣದ ಮದ, ಅಲ್ಪ ಸ್ವಲ್ಪ ಇದ್ದ ಚೆಲುವು, ದುಡಿಯಬೇಕಿಲ್ಲ ಎಂಬ ನೆಮ್ಮದಿ, ಯೌವ್ವನದ ಬಿಸಿ ರಕ್ತ ಎಲ್ಲವು ಶಾರಿಯ ಹುಚ್ಚು ಮನಸ್ಸನ್ನು ಆವರಿಸಿಕೊಳ್ಳುತ್ತವೆ. ‘ಕಾಳೇಗೌಡ’ ಎಂಬಾತನ ಜೊತೆಗಿದ್ದು ಆಸ್ತಿಯನ್ನು ಪೋಲು ಮಾಡುತ್ತಾ ಕೊನೆಗೆ ವಾಸಿಸಲು ಇದ್ದ ಒಂದೇ ಒಂದು ಮನೆಯನ್ನು ಮಾರಿಕೊಳ್ಳುವ ಸ್ಥಿತಿಗೆ ಬಂದು ತಲುಪುತ್ತಾಳೆ. ಮುಳುಗುತ್ತಿರುವ ತನಗೆ ಆಸರೆಯಾಗಿ ತನ್ನ ಮಗಳು ‘ಚಂದ್ರಿ’ ಕುಲದ ವೃತ್ತಿಯನ್ನು ಮುಂದುವರೆಸಿಕೊಂಡು ಯಾವನಾದರೂ ಧನಿಕನನ್ನು ಪಟಾಯಿಸಿದರೆ ತಾನು ಬದುಕಬಹುದೆಂದು ಕನಸು ಕಾಣುತ್ತಾಳೆ. ಆದರೆ ಚಂದ್ರಿಗೆ ತನ್ನ ಕುಲದ ವೃತ್ತಿಯ ಮೇಲೇನೆ ಅಸಹ್ಯ. ಚೆನ್ನಾಗಿ ಓದಿ, ಸಂಪಾದನೆ ಮಾಡಿ ತಲೆಮಾರುಗಳಿಂದ ಬಂದ ಈ ಅನಿಷ್ಟ ಪದ್ದತಿಯನ್ನು ತೊಡೆದು ಹಾಕುವ ಹಂಬಲ ಅವಳದು. ಮನೆಯನ್ನು ಉಳಿಸಿಕೊಳ್ಳಲು ಏನಾದರು ಆಧಾರ ಸಿಕ್ಕಿತೆಂದು ಅಜ್ಜಿಯ ಹಳೆ ಟ್ರಂಕಿನಲ್ಲಿ ಹುಡುಕಾಡಿದಾಗ ಸಿಕ್ಕಿದ್ದು ‘ಮಂಜುಳಾ’ಳ ದಿನಚರಿಯ ಪುಸ್ತಕ. ಚಂದ್ರಿ ಓದುತ್ತ ಹೋದಂತೆ ಮೈ ಮನಗಳ ಸುಳಿಯಲ್ಲಿ ಕಾದಂಬರಿಯ ನಾಯಕಿಯ ಕತೆ ಆವರಣಗೊಳ್ಳುತ್ತದೆ.
ಮಂಜುಳಾಳ ಅಮ್ಮ ತನ್ನ ವೃತ್ತಿ ಧರ್ಮಕ್ಕೆ ವಿರೋಧವಾಗಿ ಒಬ್ಬನ ಜೊತೆಗೆ ನಿಷ್ಠೆಯಿಂದ ತನ್ನ ಇಡೀ ಜೀವನವನ್ನು ಸಾಗಿಸಿದ ಮಹಿಳೆ. ಅಮ್ಮನ ಜೀವನವನ್ನೇ ಆದರ್ಶವಾಗಿಟ್ಟುಕೊಂಡ ಮಂಜುಳಾಳಿಗೆ ಅಮ್ಮನ ಮಾತು ‘ಮೈ ಮಾರಿಕೊಂಡರು ಮನಸ್ಸನ್ನು ಮಾರಿಕೊಳ್ಳಬಾರದು’ ಎಂಬುದು ರಕ್ತದ ಕಣ ಕಣಗಳಲ್ಲಿ ಬೆರೆತು ಹೋದ ಸಿದ್ದಾಂತ. ತಾನು ಅಮ್ಮನಂತೆಯೇ ಬದುಕಬೇಕೆಂದುಕೊಂಡವಳಿಗೆ ಜೀವನದ ದಾರಿಯಲ್ಲಿ ಸಿಕ್ಕ ‘ಪಯಣಿಗ’ರು ಹಲವರು. ರಾಧಾ ಕೃಷ್ಣ ಬುವಾ ಎಂಬುವವರ ಹತ್ತಿರ ತಮ್ಮ ವೃತ್ತಿಗೆ ಅತಿ ಅವಶ್ಯವಾದ ಸಂಗೀತವನ್ನು ಕಲಿಯುತ್ತಾಳೆ. ಆದರೆ ಸಂಗೀತ ಕೇವಲ ವೃತ್ತಿಗಷ್ಟೇ ಸೀಮಿತವಾಗಿರದೆ ತನ್ನ ಕಷ್ಟ-ಸುಖ, ನೋವು-ನಲಿವು, ಬೇಜಾರು-ಸಂಕಟ ಎಲ್ಲವನ್ನು ತೋಡಿಕೊಳ್ಳುವ ಆಪ್ತ ಮಿತ್ರನಾಗುತ್ತದೆ. ಹೀಗಾಗಿ ಸಂಗೀತವೆಂದರೆ ಹೆಚ್ಚಿನ ಒಲವು. ಜೊತೆಗೆ ಅಮ್ಮನಿಂದ ಬಂದಂತಹ ನೃತ್ಯ ಕಲೆ. ನೋಡಲು ತಿದ್ದಿ ತೀಡಿದ ಗೊಂಬೆಯಂತಿದ್ದ ಮಂಜುಳಾಳಿಗೆ ದೈವದತ್ತವಾಗಿ ಬಂದ ಕಂಠ, ಹಲವಾರು ವರ್ಷಗಳಿಂದ ಶೃದ್ಧೆಯಿಂದ ಕಲಿತ ಸಂಗೀತ, ನೃತ್ಯ ಎಲ್ಲವು ಸೇರಿ ಎಲ್ಲರಿಗು ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾಳೆ.
ದುಗ್ಗಿ – ಪಮ್ಮರು ಕತೆಯ ಮಧ್ಯೆ ಬಂದು ಹೋಗುವ ಸಣ್ಣ ಪಾತ್ರಗಳಾದರು ಇಡೀ ಕತೆಯ ಹೂರಣ, ನಾಯಕಿಯ ತೊಳಲಾಟ ಈ ಎರಡು ಪಾತ್ರಗಳಲ್ಲಿ ಮೂಡಿ ಬಂದಿದೆ. ಹಣ್ಣು ಹಣ್ಣು ಮುದುಕಿಯಾದ ತನ್ನ ಹೆಂಡತಿ ದುಗ್ಗಿಯನ್ನು ನೆರಳಿನಂತೆ ಕಾಪಾಡುವ ಪಮ್ಮ. ದೇಹದ ಆಕರ್ಷಣೆಯನ್ನು ಮೀರಿ ಬೆಸೆದ ಸಂಬಂಧ ಇವರದು. ಜೀವನದುದ್ದಕ್ಕೂ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳಿದ ಈ ದಂಪತಿಗಳು ಸಾಯುವಾಗಲು ಒಟ್ಟಿಗೆ ಸತ್ತದ್ದು ಆಶ್ಚರ್ಯಕರ ಮತ್ತು ಕಲ್ಮಶವಿಲ್ಲದ ಪ್ರೀತಿಗೆ ಉದಾಹರಣೆ. ಹಾಗಂತ ಮಂಜುಳಾಳ ಸುತ್ತ ಮುತ್ತಲಿದ್ದ ದಂಪತಿಗಳೆಲ್ಲ ದುಗ್ಗಿ-ಪಮ್ಮರಾಗಿರಲಿಲ್ಲ. ಕೆಲವೊಂದಷ್ಟು ಜನ ಪತಿಗಳು ತಮ್ಮ ಪತ್ನಿಯನ್ನು ಕೇವಲ ಮನೆಗೆಲಸದ ಆಳಿನಂತೆ ನೋಡಿದರೆ , ಇನ್ನು ಕೆಲವರು ಸಮಾಜದ ಹೆದರಿಕೆಗೆ ಮದುವೆಯಾಗಿ ‘ಮಂಜುಳಾ’ನಂತಹವರ ಹತ್ತಿರ ಹೋಗುತ್ತಿದ್ದುದು ಸರ್ವೇ ಸಾಮಾನ್ಯವಾದ ಸಂಗತಿ.
ತನ್ನ ‘ಪಮ್ಮ’ನ ಹುಡುಕಾಟದಲ್ಲಿದ್ದ ಮಂಜುಳಾಳಿಗೆ ಸಿಕ್ಕಿದ್ದು ಪೈಗಳು. ತನ್ನ ಮೈ ಮನಸ್ಸನ್ನು ಆತನಿಗೆ ಸಂಪೂರ್ಣವಾಗಿ ಸಮರ್ಪಿಸಿದ ಮಂಜುಳಾಳಿಗೆ ಆತನಲ್ಲಿ ಕಂಡಿದ್ದು ‘ದೇಹದ ಹಸಿವು’ ನೀಗಿಸುವ ಚಾಂಚಲ್ಯ ಮಾತ್ರ. ಆತನಿಂದ ದೂರವಾದವಳಿಗೆ ನಂತರ ಸಿಕ್ಕಿದ್ದು ‘ಅಂಪಾರು ಧಣಿಗಳು’. ನಿಜವಾದ ಪ್ರೀತಿಯನ್ನು ಅವರಲ್ಲಿ ಕಂಡಳಾದರು ಅವರದು ‘ಬೃಹನ್ನಳೆ’ಯ ವೇಷ. ಅವರಿಂದ ಸಿಗುವ ಪ್ರೀತಿ ಮನಸಿಗೆ ಹಿತವಾಗಿತ್ತಾದರೂ ದೇಹ ಇನ್ನು ಹೆಚ್ಚಿನದನ್ನು ಬಯಸುತ್ತದೆ. ದೇಹದ ಅಭಿಮಾನದಲ್ಲಿ ತನ್ನನ್ನು ತಾನು ಕಳೆದುಕೊಂಡು, ಅಮ್ಮ ಹೇಳಿದ ಮಾತನ್ನು ಮರೆತು ಯೋಗ್ಯತೆಯಿಲ್ಲದ ಒಂದಿಬ್ಬರ ಜೊತೆ ದಿನ ಕಳೆದು ಬೇಡ ಗರ್ಭ ಹೊತ್ತು ಪರಿತಪಿಸುತ್ತಾಳೆ. ಇವಳ ಪರಿತಾಪವೋ, ದೇವರ ಶಾಪವೋ ಮಗು ಉಳಿಯುವುದಿಲ್ಲ. ಅಲ್ಲದೆ ಇನ್ನ್ಯಾವತ್ತು ಮಕ್ಕಳಾಗದ ಸ್ಥಿತಿಯಲ್ಲಿರುತ್ತಾಳೆ.
ತನ್ನ ಜೀವನವನ್ನು ಪರಾಮರ್ಶಿಸಿ ನೋಡಿದಾಗ ಮಂಜುಳಾಳಿಗೆ ಆಗುವ ಸಂಕಟ ಒಂದೇ- ತನಗೆ ಕೊನೆಗೂ ‘ಪಮ್ಮ’ ಸಿಗಲಿಲ್ಲ ಎಂದು. ಧರ್ಮ ಭೋದನೆ ಮಾಡುತ್ತಾ ನೈತಿಕತೆಯನ್ನು ಸಾರಬೇಕಾಗಿದ್ದ ಸ್ವಾಮೀಜಿ ಇವಳ ಹತ್ತಿರ ಬಂದಿದ್ದು ಒಂದು ವಿಪರ್ಯಾಸ ಮತ್ತು ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ. ಅವರಲ್ಲಿ ತನಗೆ ಬೇಕಾಗಿದ್ದ ‘ಪಮ್ಮ’ ಸಿಕ್ಕನಾದರೂ ಅವರು ತಮ್ಮ ಧರ್ಮ ಕರ್ತವ್ಯದಿಂದ ವಿಮುಖರಾಗದೆ ಈಕೆಯನ್ನು ತೊರೆದು ಕೊನೆಗೊಂದು ದಿನ ಸಮಾಧಿ ಹೊಂದುತ್ತಾರೆ.
ಹೀಗೆ ಮಂಜುಳೆಯ ಕತೆ ಮುಗಿಯುತ್ತದೆ. ಯಾರೇ ಆಗಲಿ, ಎಂತಹದೇ ವೃತ್ತಿಯಲ್ಲಿರಲಿ ಅವರಿಗೂ ಒಂದು ಆತ್ಮಸಾಕ್ಷಿಯಿರುತ್ತದೆ, ಮನಸಿರುತ್ತದೆ, ಬೇಕು ಬೇಡಗಳಿರುತ್ತವೆ, ಅಭಿಪ್ರಾಯಗಳಿರುತ್ತವೆ ಎಂಬುದಕ್ಕೆ ಮಂಜುಳಾ ಸಾಕ್ಷಿ. ಯಾರನ್ನೇ ಆಗಲಿ, ಯಾವ ವೃತ್ತಿಯನ್ನೇ ಆಗಲಿ ಕೀಳಾಗಿ ನೋಡದೆ ಮನಃಸಾಕ್ಷಿಯಿಂದ ಮಾಡಬೇಕು ಎಂದು ಕಾರಂತರು ಹೇಳಿದಂತಿದೆ.
ಅಜ್ಜಿಯ ಕತೆ ಓದಿದ ಚಂದ್ರಿ ತನ್ನ ಕುಲದ ವೃತ್ತಿ ಮುಂದುವರೆಸಿಕೊಂಡು ಹೋಗುತ್ತಾಳಾ ಅಥವಾ ಚೆನ್ನಾಗಿ ಓದಿ ಸಂಪಾದನೆ ಮಾಡಿ ಮದುವೆ ಮಾಡಿಕೊಂಡು ತನ್ನ ‘ಪಮ್ಮ’ನನ್ನ ಪಡೆಯುತ್ತಾಳಾ ಎಂಬುದನ್ನು ಪುಸ್ತಕ ಓದಿ ತಿಳಿದುಕೊಳ್ಳಿ.