ಲಂಡನ್ನಿನಿಂದ ಬೊಗಸೆ ತುಂಬಾ ತಂದ ನಕ್ಷತ್ರಗಳು….
ನಾನು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತೇನೋ.. ನಮ್ಮದು ಯುಕೆ ಬೇಸ್ಡ್ ಪ್ರಾಜೆಕ್ಟ್ ಆದ್ದರಿಂದ ಚೆನ್ನಾಗಿ ಕೆಲಸ ಮಾಡುತ್ತಿದ್ದವರನ್ನು ವರ್ಷದ ಮಟ್ಟಿಗೆ ಯುಕೆ ಕಳಿಸುವುದು ಸಾಮಾನ್ಯವಾಗಿತ್ತು. ಉದ್ದ ಕೂದಲಿನ ರಾಜಕುಮಾರಿ, ರಾಜಕುಮಾರನಿಗಾಗಿ ಕಾತುರದಿಂದ ಕಾಯುವ ಕತೆಯಿದೆಯಲ್ಲ ಅಷ್ಟೇ ಕಾತುರದಿಂದ ನಾವು ಈ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆವು. ದೂರದ ಬೆಟ್ಟ ಮುಟ್ಟುವ ತವಕ. ಸಾಗರ ದಾಟಿ ಜಗತ್ತನ್ನು ನೋಡುವ ಬೆರಗು , ಕನಸಲ್ಲಿ ಕಂಡ ಕಡಲನ್ನು ಸೇರುವ ಹಪಾಹಪಿ..
ಮೂರು ವರ್ಷಗಳ ನಂತರ ಮ್ಯಾನೇಜರ್ ನನ್ನನ್ನು ಕರೆದು ಯುಕೆ ವೀಸಾ ಮಾಡಿಸುತ್ತಿರುವುದಾಗಿ ಹೇಳಿದರು. ಆ ಕ್ಷಣಕ್ಕೆ ಆದ ಸಂಭ್ರಮ ಅಷ್ಟಿಷ್ಟಲ್ಲ. ಇನ್ನೇನು ಮತ್ತೆ.. ಅತ್ತೆಯ ಮಗ ಕೆಲಸಕ್ಕೆ ಸೇರಿ ಹತ್ತು ವರುಷಗಳ ಮೇಲಾಯಿತು.. ವಿದೇಶದ ಅವಕಾಶಕ್ಕಾಗಿ ಇನ್ನು ಕಾಯುತ್ತಲೇ ಇದ್ದಾನೆ. ನನಗಿನ್ನೂ ಮೂರು ವರ್ಷಗಳ ಅನುಭವ.. ಆಗಲೇ ವಿದೇಶಕ್ಕೆ ಹಾರುವ ಸೂಚನೆ. ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ದೇಶ ಬಿಟ್ಟು ಹೊರಡುವ ಸಂಕಟವಂತೂ ಇದ್ದೇ ಇತ್ತು. ಹೊಸ ದೇಶ ನೋಡುವ, ದುಡ್ಡು ಮಾಡುವ, ಬಂಧು ಮಿತ್ರರಲ್ಲಿ ಎದೆಯುಬ್ಬಿಸಿ ಹೇಳುವ ಹುಮ್ಮಸ್ಸೊಂದು ಸಂಕಟವನ್ನು ಮರೆ ಮಾಚಿತ್ತು.
ಇನ್ನೇನು ಬಂದೀತು ಎಂದು ಕಾಯುತ್ತ ಕೂತವಳಿಗೆ ವೀಸಾ ರಿಜೆಕ್ಟ್ ಆದ ಸುದ್ದಿ ತಂದ ನೋವು ಹೇಳತೀರದ್ದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಅಮ್ಮನ ಸಮಾಧಾನ ಬೆನ್ನು ತಟ್ಟಿತ್ತು. ಈಗಿಲ್ಲದಿದ್ದರೆ ಮುಂದಿನ ವರ್ಷ ಖಂಡಿತ ಆಗುತ್ತೆ, ನಿಮ್ಮನ್ನಂತೂ ಕಳಿಸದೆ ಬಿಡಲ್ಲ ಎಂದು ಮ್ಯಾನೇಜರ್ ಹೇಳಿದಾಗ ಮತ್ತೆ ತಲೆ ಎತ್ತಿದ ಆಸೆ. ನನ್ನ ಬದಲು ಸ್ನೇಹಿತ ವೀಸಾ, ಪಾಸ್ಪೋರ್ಟ್ ಹಿಡಿದು ವಿಮಾನ ಏರಿದ.
ನಾನೇನಕ್ಕೋ ಕಾಯುತ್ತಿದ್ದರೆ ಬದುಕು ನನಗೋಸ್ಕರ ಹೆಚ್ಚಿನ ಯೋಜನೆಗಳನ್ನು ಹಾಕಿಕೊಂಡು ಕೂತಿತ್ತು. ಅಂದುಕೊಂಡಿದ್ದೆಲ್ಲ ಆದರೆ ಕೋರಿಕೆಗಳಿಗೆಲ್ಲ ಬೆಲೆಯಿರುವುದಿಲ್ಲವಲ್ಲ. ವರ್ಷ ಕಳೆಯುವುದರ ಒಳಗೆ ಅಮ್ಮನಿಂದ ಮದುವೆಯ ಪ್ರಸ್ತಾಪ. ನಾನಾಗಲೇ ಪ್ರೀತಿಯ ದೋಣಿಯಲ್ಲಿ ತೇಲುತ್ತಿದ್ದೆ. 7 ವರ್ಷಗಳ ಪ್ರೀತಿ ನನ್ನದು. ನನ್ನಂತೆ ಅಮ್ಮ ಕೂಡ ಹಠಮಾರಿ. ವಿದೇಶಕ್ಕೆ ಹೋಗುವುದಾದರೆ ಮದುವೆಯಾಗಿ ಹೋಗು ಎಂಬ ಬಲವಂತ. ಮದುವೆಯು ಆಗಿ ಹೋಯಿತು.
ಮದುವೆಯ ಭಾಂದವ್ಯ ಬಲು ದೊಡ್ಡದು. ಎರಡೇ ತಿಂಗಳಲ್ಲಿ ಏಳು ವರ್ಷಕ್ಕಿಂತ ಹೆಚ್ಚಿನ ಸಾಮೀಪ್ಯ, ಆತ್ಮೀಯತೆ, ಮಮತೆ, ಪ್ರೀತಿಯ ಉತ್ಕಟತೆ ನಮ್ಮಿಬ್ಬರಲ್ಲಿ. ಒಂದು ವರ್ಷದ ಹಿಂದೆ ಇದ್ದ ದೇಶ ನೋಡುವ, ಏನನ್ನೋ ಸಾಧಿಸುವ ಉತ್ಸುಕತೆ ಕಡಿಮೆಯಾಗತೊಡಗಿತು. ಈ ಬಾರಿ ಮತ್ತೆ ವೀಸಾ ರಿಜೆಕ್ಟ್ ಆಗಲೆಂದು ನನಗೆ ಗೊತ್ತಿಲ್ಲದಂತೆ ಪ್ರಾರ್ಥಿಸುತ್ತಿದ್ದೆ. ಆದರೆ ಈ ಬಾರಿಯೂ ಬದುಕು ನನಗೋಸ್ಕರ ಬೇರೆ ಯೋಜನೆಯನ್ನೇ ಹಾಕಿಕೊಂಡಿತ್ತು. ಈ ಸಲ ವೀಸಾ ಸಿಕ್ಕಿತು.
ಅಮ್ಮನನ್ನು, ಪ್ರೀತಿಯ ಗಂಡನನ್ನು, ಮನೆಯವರನ್ನು, ಸ್ನೇಹಿತರನ್ನು ಬಿಟ್ಟು ಹೊರಡಲೇನೋ ಸಂಕಟ. ನನಗೋಸ್ಕರ ಹೆಚ್ಚಿನ ಕೆಲಸದ ಜವಾಬ್ದಾರಿ ಸಾಗರದಾಚೆಗೆ ಕಾಯುತ್ತಿತ್ತು. ಇನ್ನೇನು ಹೊರಡುವ ದಿನ ಹತ್ತಿರ ಬಂತು ಎನ್ನುವಾಗಲೇ ನನಗೆ ವೀಪರೀತ ಜ್ವರ. ವಾರ ಕಳೆದರು ಕಡಿಮೆಯಾಗಲಿಲ್ಲ. ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ವಾರದ ಮಟ್ಟಿಗೆ ರಜೆ ಹಾಕಿ ನನ್ನ ಶುಶ್ರುಷೆಗೆ ನಿಂತರು. ಅತ್ತ ಮ್ಯಾನೇಜರ್ ಚಡಪಡಿಸುತ್ತಿದ್ದ.
ಕೊನೆಗೂ ನಾನು ಹೋಗುವ ದಿನ ಬಂತು. ಇನ್ನು ಸಣ್ಣಗೆ ಜ್ವರವಿತ್ತು. ಮೊದಲ ವಿಮಾನಯಾನ. ಅದೂ ವಿದೇಶಕ್ಕೆ… ಯಾವತ್ತೂ ಏರ್ಪೋರ್ಟ್ ಮುಖ ಕಾಣದೆ ಇದ್ದವಳಿಗೆ ಈಗ ಒಮ್ಮೆಲೇ ಚೆಕ್ ಇನ್ ಬ್ಯಾಗ್ಸ್, ಕ್ಯಾರಿ ಆನ್, ಬೋರ್ಡಿಂಗ್ ಪಾಸ್, ಗೇಟ್ ನಂಬರ್, ಸೆಕ್ಯೂರಿಟಿ ಚೆಕ್, ಇಮಿಗ್ರೇಷನ್ ಮುಂತಾದವುಗಳೆಲ್ಲ ಚಕ್ರವ್ಯೂಹದಂತೆ ಕಂಡವು. ಹೊಟ್ಟೆಯಲ್ಲೆಲ್ಲ ಪಾತರಗಿತ್ತಿಗಳ ನರ್ತನ. ಧೈರ್ಯ ಮಾಡಿ ಹೊರಟೆ. ಕಣ್ಣೀರು ನಿಲ್ಲುವ ಸೂಚನೆಯಂತೂ ಇರಲಿಲ್ಲ.
ಒಂದು ವರ್ಷದ ಕಾಲ ಹುಟ್ಟಿದ ಊರು, ಸೇವಿಸಿದ ಗಾಳಿ, ನಡೆದಾಡಿದ ನೆಲವನ್ನು ಬಿಟ್ಟು ಇರುವುದು ಕಷ್ಟವೇ.. ಗಾಜಿನ ಬಾಗಿಲಿನಲ್ಲಿ ನನ್ನವರ ಮುಖ ನೋಡುತ್ತಾ ತುಂಬಿದ ಕಣ್ಣಾಲಿಗಳೊಂದಿಗೆ ಹೊರಟೆ. ಕಾಡಿನಲ್ಲಿ ತಪ್ಪಿಸಿಕೊಂಡ ಹಾಗಿತ್ತು ನನ್ನ ಪರಿಸ್ಥಿತಿ. ಎಲ್ಲವನ್ನು ಮುಗಿಸಿಕೊಂಡು ಗೇಟಿನಲ್ಲಿ ಕಾಯುತ್ತ ಕುಳಿತಾಗ ತಿರುಗಿ ಹೋಗಿ ಬಿಡಲೇ ಎಂಬ ಯೋಚನೆ.. ಯಾರಿಗೆ ಬೇಕು ಇದೆಲ್ಲ. ಅಮ್ಮನ ಪ್ರೀತಿ ಮುಂದೆ ಯಾವುದು ದೊಡ್ಡದು. ಹೊಸದಾಗಿ ಮದುವೆಯಾದದ್ದು. ಮದರಂಗಿ ಮಾಸಿತ್ತಾದರೂ ಕೈಯಲ್ಲಿನ ಹಸಿರು ಬಳೆ ಇನ್ನು ಹಾಗೆ ಇತ್ತು. ಗಂಡನ ತೋಳ ತೆಕ್ಕೆಗಿಂತ ಹೆಚ್ಚಿನ ಸುಖ ಯಾವುದರಲ್ಲಿದೆ. ಹೀಗೆ ಹಲವು ವಿರಾಗಿಯ ಯೋಜನೆಗಳು.
ಕಣ್ಣೀರು ಜಾರುತ್ತಿತ್ತು. ಮನಸು ತೊಳಲಾಡುತ್ತಿತ್ತು. ಅಂತೂ ಇಂತೂ ನಾನು ವಿಮಾನಿನಲ್ಲಿ ಕುಳಿತಿದ್ದೆ. ಅವರು ಕೊಟ್ಟ ಪಾನೀಯ, ಊಟ ಯಾವುದು ಸೇರಲಿಲ್ಲ. ದೆಹಲಿ ಸೇರಿದಾಗ ತುಸು ಧೈರ್ಯ ಬಂದಿತ್ತು. ಇನ್ನೇನು ನಾನು ಲಂಡನ್ ಸೇರಿ ಬಿಡುವೆ ನಂತರ ಕೆಲಸದಲ್ಲಿ ಮಗ್ನಳಾದರೆ ಎಲ್ಲವನ್ನು ಮರೆಯಬಹುದು ಎಂಬ ಧೈರ್ಯ ಬಂದಿತಾದರೂ ಫೋನಿನಲ್ಲಿ ಧ್ವನಿ ಕೇಳಿದ ತಕ್ಷಣ ಎಲ್ಲ ನಿರ್ಧಾರಗಳು ನಿಧಾನವಾಗಿ ಕರಗಿದಂತೆ. ನಾ ಹೋಗಲ್ಲ ಎಂದು ಚಿಕ್ಕ ಮಗುವಿನಂತೆ ರಂಪ ಮಾಡಿದ ನೆನಪು. ನನ್ನ ಗಂಡನಿಗೆ ಗೊತ್ತಿತ್ತು ನನ್ನ ನೋವೆಲ್ಲಾ ಅಲ್ಲಿ ಹೋಗಿ ಸೇರುವವರೆಗೆ ಮಾತ್ರ ಎಂದು. ಒಂದು ವರ್ಷದ ಹಿಂದೆ ಈ ಘಳಿಗೆಗಾಗಿ ನಾನು ಕಾದ ಗಂಟೆಗಳ ಲೆಕ್ಕವಿತ್ತು ಅವರ ಬಳಿ. ಧೈರ್ಯ, ಪ್ರೀತಿ ಎರಡನ್ನು ತುಂಬಿ ಲಂಡನ್ನಿನತ್ತ ಮುಖ ಮಾಡಿಸಿದರು.
ಬಹುಶಃ ಅಲ್ಲಿಂದ ನಾನು ಹಿಂದೆ ತಿರುಗಿ ನೋಡಲೇ ಇಲ್ಲ. ನಾನು ಹೋಗಿದ್ದು ಬರ್ಮಿಂಗ್ಹ್ಯಾಮ್ ಗೆ.. ನನ್ನ ಸ್ನೇಹಿತೆ ಒಂದು ತಿಂಗಳಿನ ಮುಂಚೆಯೇ ಹೋಗಿದ್ದರಿಂದ ನನ್ನ ಕರೆದುಕೊಂಡು ಹೋಗಲು ಏರ್ಪೋರ್ಟ್ ಗೆ ಬಂದಿದ್ದಳು. ನಾವು ಐದು ಜನ ಹುಡುಗಿಯರಿಗೆ ಮೂರು ಬೆಡ್ರೂಮಿನ ಮನೆ. ಮನೆ ತುಂಬಾ ಗದ್ದಲ. ಅಮ್ಮ ಹೊತ್ತು ಹೊತ್ತಿಗೆ ರುಚಿ ರುಚಿಯಾಗಿ ಮಾಡಿ ಹಾಕುತ್ತಿದ್ದರಿಂದ ಅಡುಗೆ ಕಲಿಯುವ ಪ್ರಮೇಯ ಬಂದಿರಲಿಲ್ಲ. ಅಡುಗೆ ಕಲಿಯತೊಡಗಿದೆ. ಜೊತೆಗೆ ಕೆಲಸದ ಭಾರ.. ಅಗಲಿಕೆಯ ನೋವಿನಲ್ಲಿ ತುಸು ಮರೆಯಾಗಿದ್ದ ಜ್ವರ ಅಲ್ಲಿಯ ಚಳಿಗೆ ಮತ್ತೆ ತಾಕಲಾಡತೊಡಗಿತು. ನಮ್ಮಂತೆ ಅಲ್ಲಿ ತಕ್ಷಣಕ್ಕೆ ಹೋಗಲು ಆಸ್ಪತ್ರೆಗಳಿಲ್ಲ. ಫಾರಂ ತುಂಬಿ ಅದು ಅಪ್ರೋವ್ ಆದ ನಂತರವಷ್ಟೇ ಪ್ರವೇಶ. ಅಲ್ಲಿಯವರೆಗೂ ನಾನು ಡಬ್ಬಿ ತುಂಬಾ ತುಂಬಿಸಿಕೊಂಡು ಹೋಗಿದ್ದ ಮಾತ್ರೆಗಳೇ ಆಸರೆ.
ಹೊಸದರಲ್ಲಿ ಕ್ಲೈಂಟ್ಸ್ ಮಾತನಾಡುತ್ತಿದ್ದುದು ಅರ್ಥವೇ ಆಗುತ್ತಿರಲಿಲ್ಲ. ಒಮ್ಮೊಮ್ಮೆ ಅಂತೂ ಮೈ ಪರಚಿಕೊಳ್ಳುವಷ್ಟು ಅಸಹಾಯಕತೆ. ಕೆಲಸವಂತೂ ಊರಿಗೆಲ್ಲ ಹಂಚುವಷ್ಟಿತ್ತು. ಮೊದಲ ನಾಲ್ಕು ತಿಂಗಳು ನಾನು ಮನೆಯಿಂದಾಚೆ ಕಾಲಿಟ್ಟಿಲ್ಲ. ವಾರಾಂತ್ಯಗಳಲ್ಲೂ ಮುಗಿಯದ ಕೆಲಸ. ನಿಧಾನವಾಗಿ ಬದುಕು ಚುಕ್ಕಿಗಳನ್ನು ಕೂಡುತ್ತ ಸ್ಪಷ್ಟ ರೂಪ ತಳೆಯತೊಡಗಿತು. ಅಡುಗೆ ಕಲಿತೆ. ನನ್ನದೇ ಒಂದು ಸುಂದರ ಪ್ರಪಂಚ ತೆರೆದುಕೊಂಡಿತು. ಅಕ್ಕರೆಯ ಸ್ನೇಹಿತೆ ಜೊತೆಗಿದ್ದಳು. ಅಲ್ಲಿ ಹೋದ ನಂತರ ಎಷ್ಟೋ ಜನರು ಪರಿಚಯವಾದರು. ಹೊರ ಪ್ರಪಂಚದ ಎಷ್ಟೋ ಆಯಾಮಗಳಿಗೆ ನನ್ನನ್ನು ನಾನು ತೆರೆದುಕೊಂಡೆ. ನಾನು ಕಾದಂಬರಿ ಬರೆಯಲು ಶುರು ಮಾಡಿದ್ದು ಸಹ ಅಲ್ಲಿಯೇ ..
ನೋಡಲು ಯುಕೆ ಬಲು ಚಂದ. ಯುಎಸ್ ಮತ್ತು ಯುಕೆ ವಿಷಯ ಬಂದರೆ ನಾನೆಂದಿಗೂ ಯುಕೆ ಪರ. ಅಲ್ಲಿ ಪರಕೀಯತೆಯ ಭಾವ ಇರಲಿಲ್ಲ. ಎಷ್ಟೋ ಅಪರಾತ್ರಿಗಳು ನಾವು ಹುಡುಗಿಯರಷ್ಟೇ ಬಸ್ ಹಿಡಿದುಕೊಂಡು ಬಂದದ್ದಿದೆ. ಗನ್ ನಿಂದ ಶೂಟ್ ಮಾಡಿ ಸಾಯಿಸುವ ಕ್ರೂರತೆಯಂತೂ ಅಲ್ಲಿಲ್ಲ. ನಮ್ಮ ಅಕ್ಕ ಪಕ್ಕದ ಮನೆಯವರು ಅಷ್ಟೇ. ನಾವಷ್ಟೇ ಹುಡುಗಿಯರೆಂದು ಗೊತ್ತಿದ್ದರೂ ಎಂದಿಗೂ ನಮ್ಮ ತಂಟೆಗೆ ಬಂದದ್ದಿಲ್ಲ. ನಾವಿಲ್ಲದಾಗ ಬಂದ ಪಾರ್ಸೆಲ್ ಗಳನ್ನೂ ಅತಿ ಜೋಪಾನವಾಗಿ ತೆಗೆದಿಟ್ಟು ನಾವು ಯಾವ ಸಮಯದಲ್ಲಿ ಬಾಗಿಲು ತಟ್ಟಿದರು ನಗು ನಗುತ್ತ ಉತ್ತರಿಸುತ್ತಿದ್ದರು. ಅಲ್ಲಿ ಎಲ್ಲ ಬಗೆಯ ಅಂಗಡಿಗಳು ಸಂಜೆ 6 ಗಂಟೆಗೆಲ್ಲ ಮುಚ್ಚಿ ಬಿಡುತ್ತವೆ. ಹೆಚ್ಚೆಂದರೆ 7 ಗಂಟೆ ಅಷ್ಟೇ. ರಾತ್ರಿ ತೆಗೆಯುತ್ತಿದ್ದುದು ಕ್ಲಬ್, ಪಬ್ಬುಗಳು ಮಾತ್ರ. ಯುಕೆ ಜನರೇ ಹಾಗೆ. ಬಹಳಷ್ಟು ಜನರು ಆಫೀಸಿನ ನಂತರ ಕುಡಿಯಲು ಪಬ್ಬಿಗೆ ಹೋಗಿ ಬಿಡುತ್ತಿದ್ದರು. ಹೀಗಾಗಿ ನನ್ನಂತಹವರು ಮನೆಯಲ್ಲಿಯೇ ಸಮಯ ಕಳೆಯಬೇಕು. ಆಚೆ ಹೋಗುವುದೇನಿದ್ದರೂ ವಾರಾಂತ್ಯದಲ್ಲಿ ಮಾತ್ರ.
ನಮ್ಮ ಮನೆಯ ಹಿಂದೆಯೇ ಸೇಬು ಹಣ್ಣಿನ ಮರವಿತ್ತು. ಚಳಿಗಾಲದಲ್ಲಿ ಮೈ ದುಂಬಿ ಸೆಳೆಯುತ್ತಿದ್ದ ಹಣ್ಣುಗಳು ಬೇಸಿಗೆಗಾಲ ಬಂದಾಗ ಕೆಂಪಗಾಗಿ ಕೇಳುವವರಿಲ್ಲದೆ ನೆಲಕ್ಕೆ ಬಿದ್ದು ಹಾಳಾಗುತ್ತಿದ್ದವು. ಪಕ್ಕದ ಮನೆಗೆ ಸೇರಿದ ಮರವಾದ್ದರಿಂದ ನಾವು ನೋಡಿ ಮರಗುತ್ತಿದ್ದೆವಷ್ಟೇ. ಅಷ್ಟೇ ಅಲ್ಲ… ನಾವು ಆಫೀಸಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಸೇಬು ಹಣ್ಣುಗಳ ಮರ.. ಮನೆಯ ಹಿತ್ತಲಲ್ಲಿ ಬ್ಲಾಕ್ಬೆರ್ರಿ ಗಿಡ ಇತ್ತು. ಹಣ್ಣಾಗಿದ್ದನ್ನು ಆರಿಸಿ ತೊಳೆದು ತಿನ್ನುವ ಮಜಾ ನಮಗೆ.. ರೈತರು ತಮ್ಮ ಫಾರ್ಮನ್ನು ಪ್ರದರ್ಶನಕ್ಕೆ ಇಡುತ್ತಿದ್ದರು. ಸ್ಟ್ರಾಬೆರಿ, ಬ್ಲೂಬೆರ್ರಿ, ರಾಸಬೇರಿ ಹೀಗೆ ಹಲವು ಬೆರ್ರಿಗಳ ಸಮೃದ್ಧ ಹೊಲ. ಬಾಸ್ಕೆಟ್ ಹಿಡಿದುಕೊಂಡು ಹೊಲವೆಲ್ಲ ಸುತ್ತಾಡಿ ನಿಮಗೆ ಇಷ್ಟವೆನಿಸಿದ ಹಣ್ಣನ್ನು ಆಯ್ದುಕೊಳ್ಳುವ ಅವಕಾಶ. ಯಾರಿಗುಂಟು ಯಾರಿಗಿಲ್ಲ. ನಾವಂತೂ ಅಲ್ಲಿಯೇ ಸಾಕೆನಿಸುವಷ್ಟು ತಿನ್ನುತ್ತಿದ್ದೆವು (ಹಾಗೆ ತಿನ್ನುವ ಹಾಗಿರಲಿಲ್ಲ).
ಚಳಿಗಾಲದಲ್ಲಿ ಮರದ ಎಲೆಗಳ ಬಣ್ಣ ಕೆಂಪು ಹಳದಿಯಾಗಿ ನೆಲದ ಮೇಲೆಲ್ಲಾ ರಾಶಿಯಾಗಿ ಬಿದ್ದಿರುತ್ತವೆ. ಭೂಮಿಯ ಕೆನ್ನೆಗೆ ಅರಿಶಿನ ಬಳೆದು ಹಣೆಗೆ ಕುಂಕುಮ ಹಚ್ಚಿ ಸಿಂಗರಿಸಿದಂತೆ. ಮಧ್ಯಾಹ್ನ ನಾಲ್ಕು ಗಂಟೆಗೆಲ್ಲ ಕತ್ತಲು. 6 ಗಂಟೆಗೆ ಆಫೀಸಿನಿಂದ ಬರುವಾಗ ಮಧ್ಯರಾತ್ರಿಯಾಗಿದೆಯೇನೋ ಎನ್ನುವಷ್ಟು ಗಾಢ ಕತ್ತಲು. ಚಳಿಯಂತೂ ಭಯಂಕರ. ದಪ್ಪನೆಯ ಜಾಕೆಟ್, ಬೆಚ್ಚನೆಯ ಟೋಪಿ, ಗ್ಲೋವ್ಸ್, ಸಾಕ್ಸ್ ಎಲ್ಲವನ್ನು ಹಾಕಿಕೊಂಡು ಚೂರು ಗಾಳಿ ಮೈಯನ್ನು ತಟ್ಟದಂತೆ ಪ್ಯಾಕ್ ಆದರೂ ರಕ್ತ ಮರಗಟ್ಟಿಸುವ ಚಳಿ. ಹಿಮ ಬಿದ್ದರಂತೂ ಮುಗಿದೇ ಹೋಯಿತು. ರಸ್ತೆಯಲ್ಲಿ ನಡೆದಾಡಲು ಆಗುತ್ತಿರಲಿಲ್ಲ. ಇದು ಚಳಿಗಾಲದ ಕತೆಯಾಯಿತು. ಇನ್ನು ಬೇಸಿಗೆಗಾಲದಲ್ಲಿ ರಸ್ತೆಯಲ್ಲೆಲ್ಲ ಹೂವುಗಳ ಬಣ್ಣ.. ತರಹೇವಾರಿ ಹೂವುಗಳು. ಅಲ್ಲಿ ನೋಡಿದಷ್ಟು ಹೂವುಗಳ ಪ್ರಕಾರಗಳನ್ನು ಇನ್ನೆಲ್ಲೂ ನೋಡಿಲ್ಲ ನಾನು. ಮನೆಗಳ ಮುಂದೆ, ಪಾರ್ಕಿನಲ್ಲಿ, ರಸ್ತೆಯ ಪಕ್ಕದಲ್ಲಿ, ರಸ್ತೆಗಳ ಮಧ್ಯೆ ಮತ್ಸ್ಯಕನ್ನೆಯರಂತೆ ಓಲಾಡುವ ಹೂ ಬುಟ್ಟಿಗಳು.
ನಮ್ಮನ್ನು 200 ವರ್ಷಗಳಷ್ಟು ಕಾಲ ಆಳಿದರು ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ ಶಿಸ್ತು, ಒಳ್ಳೆಯ ನಡತೆ, ಬೇರೆಯವರನ್ನು ಗೌರವಿಸುವ ಗುಣ ಈಗ ಸದ್ಯಕ್ಕೆ ಬದುಕುತ್ತಿರುವ ಬ್ರಿಟಿಷ್ ಜನರಲ್ಲಿ ಹೆಚ್ಚು ಎಂದು ನನ್ನ ಭಾವನೆ. ಬಸ್ಸು ಹತ್ತಿದರೆ ಸಾಕು ಡ್ರೈವರ್ ಸಣ್ಣ ನಗೆಯೊಂದಿಗೆ ‘ಗುಡ್ ಮಾರ್ನಿಂಗ್’ ಎಂದು ಹೇಳುತ್ತಾನೆ. ಇಳಿಯುವಾಗ ‘ಹ್ಯಾವ್ ಅ ಗುಡ್ ಡೇ’ ಎಂದು ಕೇಳಿಸುತ್ತದೆ ಹಿಂದಿನಿಂದ.. ದಾರಿಯಲ್ಲಿ ಓಡಾಡುವಾಗೆಲ್ಲ ಜನರು ಮುಗುಳುನಗುತ್ತಾ ‘ಯು ಆಲ್ ರೈಟ್’ ಎಂದು ಕೇಳುತ್ತಾರೆ. ಬರಿ ಇಷ್ಟಕ್ಕೆ ಪ್ರಭಾವಿತಳಾಗಿಲ್ಲ ನಾನು. ನಮ್ಮ ಟೀಮಿನಲ್ಲಿ ನಾನೊಬ್ಬಳೇ ಹುಡುಗಿ. ನನ್ನ ಇಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೆಂದರೆ ಪದಗಳಲ್ಲಿ ಹಿಡಿದಿಟ್ಟು ನಿಮಗೆ ವಿವರಿಸುವುವುದು ನನಗಾಗದ ಕೆಲಸ. ಸ್ವಾತಂತ್ರ್ಯೋತ್ಸವ, ಗಣತಂತ್ರ ದಿನಕ್ಕೆ ನಮ್ಮೊಡನೆ ಸೇರಿ ನಮ್ಮ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ನಮ್ಮ ಹಬ್ಬಗಳ ಬಗ್ಗೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಹಬ್ಬಗಳನ್ನು ಆಚರಿಸುವುದರ ಕಾರಣ, ಕತೆಗಳನ್ನು ಕೇಳಿ ವಾವ್ ಎಂಬ ಉದ್ಘಾರ ಅವರಿಂದ. ನಮ್ಮ ಊಟ ತಿಂಡಿಗಳಂತೂ ಅವರಿಗೆ ಬಲು ಇಷ್ಟ. ಟೀಮ್ ಎಲ್ಲ ಸೇರಿ ಊಟಕ್ಕೆ ಹೋಗುವ ಪ್ರಸಂಗ ಬಂದರೆ ಅವರು ಮೊದಲು ಆಯ್ದುಕೊಳ್ಳುತ್ತಿದ್ದುದೇ ಇಂಡಿಯನ್ ರೆಸ್ಟೋರೆಂಟಗಳನ್ನು… ನಮ್ಮ ಒಂದು ವರ್ಷದ ಅವಧಿ ಮುಗಿದು ಹೊರಡುವ ಸಮಯ ಬಂದಾಗ ಎಲ್ಲ ಸೇರಿ ನಮಗೆ ನೆನಪಿನ ಕಾಣಿಕೆ ಕೊಟ್ಟು, ಕಣ್ಣೀರು ತೊಟ್ಟಿಕ್ಕುವಂತೆ ಭಾಷಣ ಮಾಡಿ ಕಳುಹಿಸಿ ಕೊಡುತ್ತಿದ್ದರು.
ನಾನು ಹೋಗಿ 6 ತಿಂಗಳಾಗಿತ್ತು. ಎರಡು ವಾರಗಳ ಮಟ್ಟಿಗೆ ಸಮರ್ಥ ಯುಕೆಗೆ ಬರುವುದೆಂದು ನಿರ್ಧಾರವಾಗಿತ್ತು. ನನ್ನನ್ನು ಹಿಡಿಯುವವರಿರಲಿಲ್ಲ. ಎಲ್ಲರು ನನ್ನ ಕಾಲೆಳೆಯುತ್ತಾ ಸತಾಯಿಸುವವರೇ. ಲಂಡನ್, ಸ್ಕಾಟ್ಲೆಂಡ್, ಎಡಿನ್ಬರ್ಗ್ ಹೀಗೆ ಎರಡು ವಾರದಲ್ಲಿ ಎಷ್ಟಾಗತ್ತೋ ಅಷ್ಟು ಸುತ್ತಿದೆವು. ಆ ಎರಡು ವಾರ ಎರಡು ದಿನಗಳಂತೆ ಕಳೆದು ಹೋಯಿತು. ಮತ್ತೆ ವಿದಾಯದ ಚೀತ್ಕಾರ. ಮತ್ತೆ ಗಡಿಯಾರದ ಆಮೆಯ ಓಟ, ಮತ್ತೆ ಏಕಾಂಗಿತನದ ಭಾಸ. ಸ್ವಲ್ಪ ದಿನಗಳ ನಂತರ ನನ್ನ ಸ್ನೇಹಿತೆಯ ಮಗಳು ಅಪ್ಪನೊಂದಿಗೆ ಬಂದಿಳಿದಳು. ಐದು ವರುಷದ ಕೂಸು. ಒಂದು ತಿಂಗಳ ಕಾಲ ನಮಗೆಲ್ಲ ಖುಷಿ ಹಂಚಿದಳು. ಅವಳಿದ್ದಷ್ಟು ಕಾಲ ಮನೆ ತುಂಬಾ ಜೀವಂತಿಕೆ ನರ್ತಿಸುತ್ತಿತ್ತು. ಅವಳಿಗೆ ಕನ್ನಡ ಬಾರದು ನನಗೆ ತೆಲುಗು ಬಾರದು. ಆದರೂ ನಮ್ಮಿಬ್ಬರ ಭಾಂದವ್ಯಕ್ಕೆ ಕೊರತೆಯಾಗಲಿಲ್ಲ. ಚಂಜೋತಾ ಆಂಟಿ ಎಂದು ಕರೆಯುತ್ತ ನನ್ನ ರೂಮಿನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಅವಳು ಹೊರಟು ಹೋದ ನಂತರ ಇನ್ನೇನು ಅವಧಿ ಮುಗಿಯಿತು, ನಾವು ಹೊರಡುವ ಸಮಯ ಬಂದಿತೆಂದು ದಿನಗಳ ಲೆಕ್ಕ ಹಾಕುತ್ತಿದ್ದೆವು.
ಶುರುವಾತಿನಲ್ಲಿ ಐದು ಜನರಿದ್ದ ನಾವು, ಇಬ್ಬರು ಮರಳಿ ಹೋಗಿದ್ದರಿಂದ ಮೂರಾಗಿದ್ದೆವು. ನಾವೇ ಮೂರು ಜನ ಹುಡುಗಿಯರು ಇಡೀ ಪ್ರೋಜೆಕ್ಟಿನಲ್ಲಿ. ಹೀಗಾಗಿ ನಮ್ಮ ಮೇಲೆ ಎಲ್ಲರಿಗು ವಿಶೇಷ ಪ್ರೀತಿ, ಕಕ್ಕುಲಾತಿ.. ಶನಿವಾರ ಭಾನುವಾರ ಬಂದರೆ ಎಲ್ಲ ಒಬ್ಬರ ಮನೆಯಲ್ಲಿ ಸೇರಿ ಕೂಡಿ ಅಡುಗೆ ಮಾಡುವುದು, ಕಾರ್ಡ್ಸ್ ಆಡುತ್ತ ಸಮಯ ಕಳೆಯುತ್ತಿದ್ದೆವು. ನಾವೆಲ್ಲಾ ಒಂದೇ ದೋಣಿಯ ಪಯಣಿಗರು. ಮನೆ, ಊರು, ದೇಶದ ಅಗಲಿಕೆಯ ದುಃಖ ನಮ್ಮೆಲ್ಲರಲ್ಲಿತ್ತು. ಹಬ್ಬ, ಹುಟ್ಟಿದ ದಿನ, ಮದುವೆಯ ವಾರ್ಷಿಕೋತ್ಸವ ಮುಂತಾದವು ಬಂದರೆ ನಾವೇ ಒಂದು ಕುಟುಂಬ. ಕಷ್ಟಕ್ಕೆ ಹೆಗಲು ನೀಡಿ, ಅತ್ತಾಗ ಸಂತೈಸಿ, ಖುಷಿಯಲ್ಲಿ ಕಾಲೆಳೆಯುತ್ತಾ ಸಂಭ್ರಮದ ತೇರು ಹತ್ತಿಸಿದ್ದರು ನನ್ನ ಸ್ನೇಹಿತರು.
ಆ ಒಂದು ವರ್ಷ ನನ್ನ ಬದುಕಿನ ಅತಿ ಸುಂದರ ವರ್ಷ ಎಂದು ಹೇಳಬಹುದು. ಯಾವುದೇ ಬಂಧನಗಳಿಲ್ಲದೆ ಹಾರಾಡಿದ್ದ ವರ್ಷ. ಆಗಲೇ ಎರಡು ವರ್ಷಗಳಾಯಿತು ನಾನು ಯುಕೆ ಹೋಗಿ ಬಂದು . ಯಾಕೋ ಒಮ್ಮೆಲೇ ನೆನಪುಗಳನ್ನೆಲ್ಲ ಕೆದಕಿ ಅಕ್ಷರಗಳಲ್ಲಿ ಹಿಡಿದಿಡುವ ಆಸೆಯಾಯಿತು. ನಿಮ್ಮ ಮುಂದೆ ನನ್ನ ನಕ್ಷತ್ರಗಳ ಗೊಂಚಲು…
Wow very sweet and nice memories ri…..
Fantastic experience
Thank you!
Thank you!
ತುಂಬಾ ಚೆನ್ನಾಗಿದೆ ನಿಮ್ಮ ಒಂದು ವರ್ಷದ ಅನುಭವ… ಅಷ್ಟೇ ಚೆನ್ನಾಗಿ ಅದನ್ನು ಪದಗಳಲ್ಲಿ ಬಣ್ಣಿಸಿದ್ದೀರಿ
Thanks Madhuri 🙂