ಗೋಕಾಕ ಚಳುವಳಿ| ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ – ಹುಲ್ಲಾಗು ಬೆಟ್ಟದಡಿ(5)
ಇನ್ನೇನು ನವೆಂಬರ್ ಬಂದೇ ಬಿಟ್ಟಿತು. ಮತ್ತೆ ಹಾರಾಡುವ ಕನ್ನಡದ ಬಾವುಟಗಳು, ಭಾಷಾಭಿಮಾನ, ಕನ್ನಡ ಉಳಿಸುವ ದೊಡ್ಡತನ, ಕನ್ನಡವನ್ನೇ ಮಾತನಾಡುವ ಪ್ರತಿಜ್ಞೆಗಳು ತಲೆಯೆತ್ತುವ ಸಮಯ. ಕೇವಲ ನವೆಂಬರ್ ಕನ್ನಡ ಪ್ರೇಮಿಗಳಾಗಬೇಡಿ ಎಂಬುದು ಸಹ ಅಲ್ಲಲ್ಲಿ ಕೇಳಸಿಗುತ್ತದೆ.
ಸೋಶಿಯಲ್ ಮೀಡಿಯಾ ಬೆಳವಣಿಗೆಯ ನಂತರ ಕನ್ನಡ ಅಭಿಮಾನಕ್ಕೆ ಹೊಸ ಗುರುತು, ಪ್ರಸಿದ್ದಿ ದೊರಕಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮನಸಿಗನಿಸಿದ್ದನ್ನು ಮುಕ್ತವಾಗಿ ಬರೆದುಕೊಳ್ಳುವ ಕಾಲ ಇದು. ಬಹಳ ಬೇಗ ಜನರಿಗೆ ತಲುಪಿ ಬಿಡುತ್ತದೆ. ಮೊದಲಿನಂತೆ ಪತ್ರಿಕೆ, ಸಂಚಿಕೆಗಳಲ್ಲಿ ಪ್ರಕಟವಾಗಲಿ ಎಂದು ಆಶಿಸುತ್ತಾ ಕೂರುವ ಕಾಲ ಇದಲ್ಲ.
ಇವತ್ತು ಹುಲ್ಲಾಗು ಬೆಟ್ಟದಡಿಯಲ್ಲಿ ನಾನು ಹೇಳಹೊರಟಿರುವುದು ಗೋಕಾಕ್ ಚಳುವಳಿಯ ಬಗ್ಗೆ. ನಿಮಗೆ ತಿಳಿದಿರಬಹುದು ಇದು ಶುರುವಾದದ್ದು ವಿ.ಕೃ.ಗೋಕಾಕ್ ಅವರಿಂದ.
ಕರ್ನಾಟಕ ಏಕೀಕರಣ ಚಳುವಳಿಯ ಫಲವಾಗಿ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ನಿರ್ಮಾಣವಾಯಿತು. ಕನ್ನಡ ಮಾತನಾಡುವ ಪ್ರಾದೇಶಿಕ ಸ್ಥಳಗಳೆಲ್ಲ ವಿಲೀನಗೊಂಡು ಮೈಸೂರು ರಾಜ್ಯ ಸ್ಥಾಪನೆಯಾಗಿತ್ತಾದರೂ ಕನ್ನಡಕ್ಕೆ ಬೇಕಾದ ಸ್ಥಾನಮಾನಗಳು ಸಿಕ್ಕಿರಲಿಲ್ಲ. ಇಂದಿರಾ ಗಾಂಧಿ ತಮ್ಮ ಆಡಳಿತದ ಅವಧಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಂವಿಧಾನದಲ್ಲಿ ತಿದ್ದುಪಡಿ ತಂದರು.
ಶಾಲೆಗಳಲ್ಲಿ ತ್ರಿಭಾಷಾ ಸೂತ್ರವಿದ್ದ ಆ ಸಮಯದಲ್ಲಿ ಕರ್ನಾಟಕದ ಶಾಲೆಗಳಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡೇತರ ಭಾಷೆಗಳನ್ನು ಆಯ್ದುಕೊಂಡರು. ಕಾರಣ ಕನ್ನಡವಿನ್ನು ಅಧಿಕೃತ ಭಾಷೆಯಾಗಿ ಹೊರ ಹೊಮ್ಮಿದ್ದಿಲ್ಲ. ಸಂಸ್ಕೃತದ ಪಾರುಪತ್ಯ ಅಧಿಕವಾಗಿತ್ತು. ಕನ್ನಡ ಕೇವಲ ಆಡು ಭಾಷೆಯಾಗಿ, ಮನೆ ಮಾತಾಗಿ ಉಳಿದಿತ್ತು.
ಇದೆಲ್ಲವನ್ನು ಕಂಡ ವಿನಾಯಕ ಕೃಷ್ಣ ಗೋಕಾಕರು ವರದಿಯೊಂದನ್ನು ಸಿದ್ದ ಪಡಿಸುತ್ತಾರೆ. ಈ ವರದಿಯ ಮೂಲಕ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಷಬೇಕೆಂದು, ಶಾಲಾ ಶಿಕ್ಷಣದ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕೆಂದು ಭಿನ್ನವಿಸಿಕೊಳ್ಳುತ್ತಾರೆ. 80ರ ದಶಕದಲ್ಲಿ ಈ ಗೋಕಾಕ್ ವರದಿ ಭಾರಿ ಸದ್ದು ಮಾಡಿತು. ಆಗೆಲ್ಲ ಈಗಿನಷ್ಟು ಶರವೇಗದಲ್ಲಿ ಸುದ್ದಿಗಳು ಜನರನ್ನು ತಲುಪುತ್ತಿರಲಿಲ್ಲ. ಕೇವಲ ಆಕಾಶವಾಣಿ, ಸುದ್ದಿಪತ್ರಿಕೆಗಳಿಗಷ್ಟೇ ಜನರತ್ತ ಸುದ್ದಿ ಕೊಂಡೊಯ್ಯುವ ಸಾಮರ್ಥ್ಯವಿತ್ತು. ಗೋಕಾಕರ ಪ್ರಯತ್ನದಿಂದ ಗೋಕಾಕ್ ವರದಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ತಲುಪಿತು. ಜನರಲ್ಲಿ ಕನ್ನಡಾಭಿಮಾನ ಜಾಗೃತವಾಯಿತು. ಕನ್ನಡ ಅನುಭವಿಸುತ್ತಿದ್ದ ಮಲತಾಯಿ ಧೋರಣೆ, ರಾಜ್ಯದಲ್ಲಿ ಪ್ರಬಲವಾಗುತ್ತಿದ್ದ ವಲಸಿಗ ಭಾಷೆಗಳ ಮಧ್ಯೆ ನಶಿಸುತ್ತಿದ್ದ ಕನ್ನಡವನ್ನು ಮತ್ತೆ ಎತ್ತಿ ಹಿಡಿಯಬೇಕೆಂದು ಹಲವಾರು ಗಣ್ಯರು ಮುಂದೆ ಬಂದರು.
ಇಲ್ಲಿಯೂ ಎರಡು ಬಣಗಳಿದ್ದವು. ಒಂದು ಪರ ಮತ್ತೊಂದು ವಿರೋಧ. ಕರ್ನಾಟಕ ಸರಕಾರದಿಂದಲೇ ಈ ಚಳುವಳಿಗೆ ಬೇಕಾದ ಬೆಂಬಲ ಸಿಗಲಿಲ್ಲ. ಗೋಕಾಕರ ವರದಿ ಸಂಸ್ಕೃತ ಭಾಷೆಯನ್ನು ಇನ್ನಷ್ಟು ಪ್ರಬಲಗೊಳಿಸುವ ಅನ್ಯ ಮಾರ್ಗ ಎಂದು ಹಲವರು ಭಾವಿಸಿದ್ದರಿಂದ ಚಂಪಾ ಬಣದಿಂದ ಗೋಕಾಕರಿಗೆ ವಿರೋಧವುಂಟಾಯಿತು. ಶಾಲಾ ಶಿಕ್ಷಣದ ಭಾಷಾ ನೀತಿ ಮರುಯೋಜನೆಗೆ ಸಮಿತಿ ರಚಿಸಿ, ಆ ಸಮಿತಿಗೆ ವಿ,ಕೃ.ಗೋಕಾಕರನ್ನು ಅಧ್ಯಕ್ಷರನ್ನಾಗಿ ಸರಕಾರ ಯೋಜಿಸಿತಾದರೂ ಸಮಿತಿಯ ವರದಿಯನ್ನು ನಿರ್ಲಕ್ಷಿಸಿತು. ಇಷ್ಟಕ್ಕೂ ಯಾರಿಗೂ ಇದು ಬೇಕಾಗಿರಲಿಲ್ಲ. ಇತರೆ ಪ್ರಬಲ ಭಾಷೆಗಳಿಂದ ವಿರೋಧವಂತೂ ಇದ್ದೇ ಇತ್ತು.
ಎಷ್ಟೋ ಜನ ಸಾಹಿತಿಗಳು, ಕನ್ನಡ ಭೋದಕ ವರ್ಗ, ಭಾಷಾಭಿವೃದ್ದಿ ಹಿತಾಸಕ್ತರು ಮಾಡಿದ ಧರಣಿ, ಚಳುವಳಿಗಳಿಗೆ ಆಗಿನ ಮುಖ್ಯ ಮಂತ್ರಿಗಳಾಗಿದ್ದ ಗುಂಡೂರಾಯರು ಲಕ್ಶ್ಯ ವಹಿಸಲಿಲ್ಲ. ದಿನೇ ದಿನೇ ಚಳುವಳಿಯ ಕಾವು ಕಡಿಮೆಯಾಗುತ್ತಿತ್ತು, ಚಳುವಳಿಯಲ್ಲಿ ಪಾಲ್ಗೊಂಡಿದ್ದ ಜನರ ಉತ್ಸಾಹ ನಶಿಸುತ್ತಿತ್ತು. ಆಗಿನ್ನೂ ಮಾಧ್ಯಮ ಪ್ರಬಲವಾಗಿರಲಿಲ್ಲ. ಜನರಿಗೆ ಈ ಚಳುವಳಿಯ ಉದ್ದೇಶವನ್ನು, ಲಾಭಗಳನ್ನು ತಲುಪಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಮನೆ ಮನೆಗಳನ್ನು ತಲುಪಲು ಪ್ರಬಲ ಧ್ವನಿಯೊಂದು ಬೇಕಾಗಿತ್ತು. ಆಗ ಪಾಟೀಲ ಪುಟ್ಟಪ್ಪನವರು ರಾಜಕುಮಾರ ಅವರ ಬಳಿ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳುತ್ತಾರೆ.
ಮೊದಲೇ ಹೇಳಿದಂತೆ ಕನ್ನಡ ಮೆಲ್ಲ ಮೆಲ್ಲನೆ ಮರೆಯಾಗುತ್ತಿದ್ದ ಆ ಕಾಲದಲ್ಲಿ ಕನ್ನಡ ಸಿನಿಮಾಗಳಿಗೂ ಹೇಳಿಕೊಳ್ಳುವಂತಹ ಹೆಸರಿರಲಿಲ್ಲ. ಭರ್ಜರಿಯಾಗಿ ಓಡುತ್ತಿದ್ದ ಚಿತ್ರಗಳೆಂದರೆ ಕೇವಲ ರಾಜಕುಮಾರ ಅವರ ಚಿತ್ರಗಳು. ರಾಜಕೀಯದಿಂದ ದೂರವೇ ಉಳಿದಿದ್ದ ರಾಜಕುಮಾರ ಕನ್ನಡದ ಹಿತಾಸಕ್ತಿಯ ಉದ್ದೇಶದಿಂದ ಪುಟ್ಟಪ್ಪನವರ ಆಹ್ವಾನವನ್ನು ಒಪ್ಪಿಕೊಳ್ಳುತ್ತಾರೆ. ಅಲ್ಲಿಂದ ಶುರುವಾಯಿತು ನೋಡಿ ಶುಕ್ರದೆಸೆ.
ರಾಜಕುಮಾರ್ ಅವರು ಇತರೆ ಚಿತ್ರ ಕಲಾವಿದರೊಂದಿಗೆ ‘ಜೈತ್ರ ಯಾತ್ರೆ’ ಹೆಸರಿನಲ್ಲಿ ಊರೂರಿಗೆ ತೆರಳಿ ಗೋಕಾಕ ಚಳುವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಇಡೀ ರಾಜ್ಯವೇ ಬೇರೆ ಭಾಷೆಗಳಲ್ಲಿ ಹಂಚಿ ಹೋಗಿ ಕನ್ನಡಿಗರು ಅಸ್ತಿತ್ವ ಕಳೆದುಕೊಳ್ಳಬಹುದೆಂದು ತಿಳಿ ಹೇಳುತ್ತಾರೆ. ರಾಜಕುಮಾರ ಅವರ ಪಾತ್ರಗಳನ್ನೇ ಅನುಸರಿಸುತ್ತಿದ್ದ ಕಾಲ ಅದು. ಇನ್ನು ಸ್ವತಃ ರಾಜಕುಮಾರ ಅವರೇ ಚಳುವಳಿಯಲ್ಲಿ ಭಾಗವಹಿಸುವಂತೆ ಹೇಳಿದರೆ ಜನ ಕೇಳದೆ ಇರುತ್ತಾರೆಯೇ.
ದೊಡ್ಡ ಮಟ್ಟದಲ್ಲಿ ಚಳುವಳಿಯಾಯಿತು. ಜನ ದಂಗೆ ಎದ್ದರು. ಸರಕಾರದ ಮೇಲೆ ಒತ್ತಡ ಹೇರಿದರು. ಚೆನ್ನವೀರ ಕಣವಿ, ಗೀತಾ ಕುಲಕರ್ಣಿ, ರಾ.ಯ.ಧಾರವಾಡಕರ, ಶಾಂತಾದೇವಿ ಮಾಳವಾಡ, ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಮುಂತಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಪತ್ರಿಕಾ ರಂಗದಿಂದ ಅಭೂತ ಪೂರ್ವ ಬೆಂಬಲ ದೊರೆಯಿತು. ‘ಗೋಕಾಕ್ ವರದಿ ಜಾರಿಗೆ ಬರಲಿ’, ‘ಏನೇ ಬರಲಿ, ಕನ್ನಡ ಇರಲಿ’, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ‘ಕರ್ನಾಟಕ ಮಾತೆಗೆ ಜಯವಾಗಲಿ’ ಎಂದೆಲ್ಲ ಘೋಷಣೆಗಳನ್ನು ಕೂಗುತ್ತ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವರನ್ನು ಆಗಿನ ಸರಕಾರ ಬಂಧಿಸಿ ಕೆಲ ದಿನಗಳ ಕಾಲ ಜೈಲಿನಲ್ಲಿ ಕೂಡಿ ಹಾಕಿತು. ದಿನ ಬೆಳಗಾದರೆ ‘ಕನ್ನಡ ಪ್ರಭ’ ದಲ್ಲಿ ಬರುತ್ತಿದ್ದ ಖಾದ್ರಿ ಶಾಮಣ್ಣನವರ ಲೇಖನಗಳು, ಸಂಯುಕ್ತ ಕರ್ನಾಟಕದಲ್ಲಿ ಬರುತ್ತಿದ್ದ ಚಿದಾನಂದ ಮೂರ್ತಿ ಮತ್ತಿತರರ ಲೇಖನಗಳು ಜನರಲ್ಲಿ ಚಳುವಳಿಯ ಕಾವು ನಂದದಂತೆ ನೋಡಿಕೊಂಡವು.
ಇಷ್ಟೆಲ್ಲ ನಡೆದರೂ ಸರಕಾರದಿಂದ ಕನ್ನಡ ಭಾಷೆಗೆ ಬೇಕಾಗಿದ್ದ ಮಾನ್ಯತೆ ದೊರಕಲಿಲ್ಲ. ರೈತರ ಮೇಲೆ ಗೋಲಿಬಾರ್ ನಡೆಯಿತು. ಈ ಸಂದರ್ಭದಲ್ಲಿ ರಾಜಕುಮಾರ್ ಅವರು ನಡೆದುಕೊಂಡ ರೀತಿ ಬಹಳ ಹಿರಿದಾದದ್ದು. ಚುನಾವಣಾ ಹತ್ತಿರವಾದ್ದರಿಂದ ಜನರೆಲ್ಲಾ ರಾಜಕುಮಾರ್ ಅವರೇ ಮುಂದಿನ ಮುಖ್ಯ ಮಂತ್ರಿ ಎಂದು ನಿರ್ಧರಿಸಿಕೊಂಡು ಬಿಟ್ಟಿದ್ದರು. ವಿರೋಧ ಪಕ್ಷಗಳಿಗೆ ಇದೇ ಹರಿತ ಅಸ್ತ್ರ. ಇದರಿಂದ ಹೆದರಿದ ಗುಂಡೂರಾಯರ ಸರಕಾರ ಗೋಕಾಕ್ ವರದಿಯ ಶಿಫಾರಸುಗಳನ್ನು ಆಧರಿಸಿದ ಗೊತ್ತುವಳಿಯನ್ನು ಸ್ವೀಕಾರ ಮಾಡಿತು. ಅಲ್ಲಿಗೆ ಗೋಕಾಕ ಚಳುವಳಿಗೆ ಜಯ ಲಭಿಸಿತೆಂದು ಹೇಳಬಹುದು.
ಗೋಕಾಕ ಚಳುವಳಿ ನಡೆದು 38 ವರ್ಷಗಳೇ ಕಳೆದಿವೆ. ಕನ್ನಡದ ಅಂದಿನ ಮತ್ತು ಇಂದಿನ ಪರಿಸ್ಥಿತಿ ಹಾಗೆ ಇದೇ ಎಂದು ಹೇಳಿದರೆ ಅತಿಶಯವಾಗಲಿಕ್ಕಿಲ್ಲ. ಖಾಸಗಿ ಶಾಲೆಗಳ ದಬ್ಬಾಳಿಕೆಯಲ್ಲಿ ಸರಕಾರೀ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಸರಕಾರೀ ಸಂಸ್ಥೆಗಳಾಗಲಿ, ಖಾಸಗಿ ಒಡೆತನದ ಉದ್ಯಮಗಳಾಗಲಿ ಕರ್ನಾಟಕದಲ್ಲಿ ಕನ್ನಡ ಬೇಕೇ ಬೇಕು ಎಂದೇನೂ ಇಲ್ಲ. ಕನ್ನಡ ಲಿಪಿ ಸುಧಾರಕರು ಹುಟ್ಟಿಕೊಂಡಿದ್ದಾರೆ. ಕನ್ನಡ ಪರ ಸಂಘಟನೆಗಳು ಈಗಲೂ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವಲ್ಲಿ ನಿರತವಾಗಿವೆ.
80ರ ದಶಕದ ಅದೇ ಪಾಡು ಮುಂದುವರೆಯುವುದಾದಲ್ಲಿ ನಮಗೆ ಗೋಕಾಕ್ ಚಳುವಳಿಯ ಅವಶ್ಯವೇನಿತ್ತು? ಜೈಲುವಾಸ ಅನುಭವಿಸಿದ ಆ ಹೋರಾಟಗಾರರ ಕಷ್ಟ, ಉಪವಾಸ ಸತ್ಯಗಾರ ನಡೆಸಿದ ಮಹನೀಯರ ದಿಟ್ಟ ಸಂಕಲ್ಪ, ಪ್ರಾಣ ತೆತ್ತ ರೈತರ ಬಲಿದಾನ ಇದೆಲ್ಲ ಬೇಕಾಗೇ ಇರಲಿಲ್ಲ. ನಾವು ಮತ್ತದೇ ಪರಿಸ್ಥಿತಿಗೆ ನಮ್ಮನ್ನು ನಾವು ದೂಡಿಕೊಳ್ಳುತ್ತಿದ್ದೇವೆ. ಎಕ್ಕಡ ಎನ್ನಡ ಗಳ ಮಧ್ಯೆ ಕನ್ನಡ ಸೊರಗುತ್ತಿದೆ. ನಮ್ಮ ನಾಡಿನಲ್ಲೇ ಕನ್ನಡ ಫಲಕಗಳನ್ನು ಹಾಕಬೇಕೆಂದೋ, ಶಾಲೆಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕೆಂದೋ ಇನ್ನು ಹೋರಾಡುತ್ತಲೇ ಇದ್ದೇವೆ.
ಹಾಗಿದ್ದಲ್ಲಿ ನಾವು ಮಾಡಬೇಕಾದುದೇನು?
ಜಯಂತ ಕಾಯ್ಕಿಣಿಯವರು ಹೇಳುವಂತೆ ಕನ್ನಡ ನಮ್ಮನ್ನು ಉಳಿಸುತ್ತದೆ. ಆದರೆ ನಮ್ಮತನವನ್ನು ನಾವು ಕಾಪಾಡ್ಕೊಳ್ಳದೇ ಹೋದಲ್ಲಿ ಇನ್ನೊಂದು ಗೋಕಾಕ್ ಚಳುವಳಿ ನಡೆಸುವ ಅನಿವಾರ್ಯತೆ ಬಹಳ ದೂರವೇನಿಲ್ಲ. ಅನ್ಯ ಭಾಷಿಗರೊಂದಿಗೆ ಅವರ ಭಾಷೆಯಲ್ಲಿಯೇ ಸಂವಹಿಸಲು ಯತ್ನಿಸಿ ಅವರನ್ನು ನಮ್ಮಲ್ಲಿ ಒಬ್ಬರಂತೆ ಕಂಡಿದ್ದು ನಮ್ಮ ಔದಾರ್ಯ , ವಿಶಾಲ ಹೃದಯ ಎಲ್ಲವು ಸರಿ. ಆದರೆ ಇನ್ನು ಮೇಲಾದರೂ ನಮ್ಮ ಭಾಷೆಯನ್ನು ಅವರು ಕಲಿತುಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಬೇಕಾಗಿದೆ.
ಹೊಸ ಅವಿಷ್ಕಾರಗಳಾಗಿ ದೇಶದ ಮೂಲೆ ಮೂಲೆಗೆ ಕನ್ನಡದ ಘಮಲು ಹರಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ದಿನೇ ದಿನೇ ನಮ್ಮಲ್ಲೇ ಹಲವು ಗುಂಪುಗಳಾಗುತ್ತಿವೆ. ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಎಂದೋ, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪಸರಿಸುತ್ತಿರುವ ಜಾತಿ ವೈಷಮ್ಯವಾಗಿರಬಹುದು, ಕನ್ನಡ ಸಂಘಗಳ ನಡುವಿನ ಭಿನ್ನಾಭಿಪ್ರಾಯಗಳು, ಡಬ್ಬಿಂಗ್ ಬೇಕು ಬೇಡ ಎಂಬ ಬಣಗಳು ಹೀಗೆ ಹಲವಾರು ಭೇದ ಭಾವಗಳು. ಒಡೆದು ಆಳುವ ಬ್ರಿಟಿಷರ ನೀತಿಯನ್ನೇ ರಾಜಕಾರಣಿಗಳು ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಇಂಗ್ಲಿಷ್ ಶಾಲೆಗಳ ಭರಾಟೆಯಲ್ಲಿ ನಮ್ಮ ಮಕ್ಕಳಿಗೆ ಕನ್ನಡದ ವಾತಾವರಣ ಕಡಿಮೆಯಾಗುತ್ತಿದೆ. ಪೋಷಕರು ಏನು ಮಾಡಲಾಗದ ನಿಸ್ಸಹಾಯಕ ಸ್ಥಿತಿಯಲ್ಲಿದ್ದಾರೆ. ಎಲ್ಲ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವುದು ಸಾಧ್ಯವಿಲ್ಲ. ಹಾಗೆ ಶಾಲೆಯ ಎಲ್ಲ ಮಕ್ಕಳಿಗೂ ಕನ್ನಡದಲ್ಲೇ ಕಲಿಸಿ ಎಂದು ಹೇಳಲೂ ಸಹ ಸಾಧ್ಯವಿಲ್ಲ. ಕನ್ನಡದ ಕಲಿಕೆ ಮನೆಯಿಂದ ಶುರುವಾಗಲಿ. ಮಕ್ಕಳಲ್ಲಿ ಒತ್ತಡ ಹೇರುವುದರ ಬದಲು ಅರಿವು ಮೂಡಿಸೋಣ.
ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಕನ್ನಡದಲ್ಲಿ ಬರುವ ಒಳ್ಳೆಯ ಚಿತ್ರಗಳನ್ನು ಬೆಂಬಲಿಸೋಣ. ಅನ್ಯ ಭಾಷೆಗೆ ಗೌರವ ಕೊಡುವುದರ ಜೊತೆಗೆ ನಮ್ಮತನವನ್ನು ಕಾಪಾಡಿಕೊಳ್ಳೋಣ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಮಹತ್ವ, ಶ್ರೀಮಂತಿಕೆಯನ್ನು ಅರಿವು ಮಾಡಿ ಕೊಡೋಣ. ಕನ್ನಡ ಬದುಕಾಗಲಿ, ಉಸಿರಾಗಲಿ, ಬಾಳಿಗೆ ಬೆಳಕಾಗಲಿ, ನಮ್ಮ ಹೆಮ್ಮೆಯಾಗಲಿ.