ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು….
ಹೆಣ್ಣು ಗಂಡಿಗೆ ಸರಿ ಸಮಾನ, 21 ನೇ ಶತಮಾನದಲ್ಲಿ ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ, ಇನ್ಫ್ಯಾಕ್ಟ್ ಹೆಣ್ಣು ಗಂಡಿಗಿಂತ ತುಸು ಹೆಚ್ಚೇ … ಹೀಗೆ ಹಲವು ಫೆಮಿನಿಸಂ ಅಭಿಪ್ರಾಯಗಳು ನನ್ನವು ಕೂಡ. ಆದರೆ ಈ ಪದಗಳ ಎಳೆ ಎಳೆ ಭಾವಾರ್ಥದ ಅರಿವಾದದ್ದು ಮದುವೆಯಾದ ಮೇಲೆ. ಹಾಗಂತ ಇಲ್ಲಿ ಬರೀತಾ ಇರುವುದೆಲ್ಲ ನನ್ನ ಶೋಕ ಗೀತೆ ಅಂತ ಅನ್ಕೊಂಡ ಬಿಡಬೇಡಿ. ನನ್ನಮ್ಮನಿಗಿಂತಲೂ ಹೆಚ್ಚು ಸದರ ಕೊಟ್ಟ ಅತ್ತೆ, ನನ್ನದೇ ಆಡಳಿತ ನಡೆಸೋಕೆ ರಾಜ್ಯ ಕಟ್ಟಿ ಕೊಟ್ಟಿರೋ ಗಂಡ, ನನ್ನ ಜೀವನದಲ್ಲಿ ಬೇಡದೆ ಒಲಿದ ವರಗಳು.
ಇಲ್ಲಿ ಬರೀತಾ ಇರುವುದೆಲ್ಲ ನಮ್ಮ ಸುತ್ತಲಿನ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವಂತದ್ದು….
ಮದುವೆಯಾದ ತಕ್ಷಣ ಹುಡುಗಿಯಾಗಿದ್ದವಳು ಶಾರೀರಿಕವಾಗಿ, ಮಾನಸಿಕವಾಗಿ ಹೆಣ್ಣಾಗಿ ಪರಿವರ್ತನೆಯಾಗೋದು ಎಲ್ಲರಿಗು ಗೊತ್ತಿರುವಂತಹ ವಿಚಾರ. ಆದರೆ ಸುತ್ತಲಿದ್ದವರು ಒಮ್ಮೆಲೇ ಆಕೆಯ ಮೇಲೆ ಜವಾಬ್ದಾರಿ ಹೊರೆಸುವುದಿದೆಯಲ್ಲ್ವಾ ಅದು ಬಗ್ಗಿದವನಿಗೆ ಮಣ ಭಾರ ಹೊರೆಸಿದಂತಹ ಲೆಕ್ಕ. ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಅನ್ಯರ ಜೊತೆ ಹೊಂದಿಕೊಂಡು ಇರುವುದಲ್ಲದೆ ಎಲ್ಲರ ನೀರಿಕ್ಷೆಗಳಿಗೆ ತಕ್ಕಂತೆ ಬದುಕುವುದು ಅವಳ ವ್ಯಕ್ತಿತ್ವವನ್ನು ಇಂಚಿಂಚಾಗಿ ಕೊಲ್ಲುತ್ತ ಹೋಗುತ್ತದೆ. ತನ್ನ ಮನೆ, ಪ್ರೀತಿಸುವ ಗಂಡ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ, ಇನ್ನೊಂದು ಕುಟುಂಬದ ಪ್ರೀತಿ ಬಾಂಧವ್ಯಗಳನ್ನೆಲ್ಲ ಒಂದು ತಕ್ಕಡಿಯಲ್ಲಿಟ್ಟು ಜವಾಬ್ದಾರಿ, ಸಂಸಾರ ತೂಗಿಸಿಕೊಂಡು ಹೋಗುವ ಜಾಣ್ಮೆ,ಗಂಡನ ಮನೆ ತವರು ಮನೆಗಳ ಮಧ್ಯೆ ಓಲಾಡುವ ಜೀವನವನ್ನು ಇನ್ನೊಂದು ತಕ್ಕಡಿಯಲ್ಲಿಟ್ಟು ತೂಗಿದರೆ ಮೊದಲೆನೆಯದ್ದರ ತೂಕ ತುಸು ಕಡಿಮೆಯೇ.
ನಂಗೆ ಪದೇ ಪದೇ ನೆನಪಾಗೋ ಹಾಡು ವಿ.ಸೀತಾರಾಮನ್ ರವರ ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿಹೆವು’. ಅವರು ಯಾವ ಸಂದರ್ಭದಲ್ಲಿ ಇಷ್ಟು ಅರ್ಥಗರ್ಭಿತವಾದ ಹಾಡನ್ನು ಬರೆದರೋ ನಂಗೊತ್ತಿಲ್ಲ. ಪ್ರತಿ ಶಬ್ದವು ಮನಕ್ಕೆ ನಾಟುತ್ತದೆ, ಅಚ್ಚಳಿಯದೆ ಉಳಿಯುತ್ತದೆ. ತವರಿನ ಭಾಂದವ್ಯ ಮೊದಲಿನ ಹಾಗೆಯೇ ಇದ್ದರು ‘ಇದು ನನ್ನ ಮನೆಯಲ್ಲ’ ಎಂಬ ಸಣ್ಣ ಮಂತ್ರ ಮನದ ಮೂಲೆಯಲ್ಲಿ ಪಠಿಸುತ್ತಲೇ ಇರುತ್ತದೆ. ಕೇಳಿಸಿಕೊಳ್ಳದೆ ಇರುವವರು ಪುಣ್ಯವಂತರು.
ಹಾಗೆ ನೋಡಿದರೆ ಮದುವೆಯಾದ ಮೇಲೆ ಎರಡು ಮನೆಯ ಚಿಂತೆ ಅವಳಿಗೆ ಶುರು. ಈ ಕಡೆ ಏನಾದರೂ ದ್ರವಿಸುವ ಮನ ಆ ಕಡೆ ಏನಾದರೂ ಅಷ್ಟೇ ಮೌಲ್ಯದಲ್ಲಿ ದ್ರವಿಸುತ್ತದೆ. ಗಂಡಿಗೆ ಈ ತಾಪತ್ರಯವಿಲ್ಲ. ‘ಏನಪ್ಪಾ ನಿನ್ನ ಹೆಂಡತಿ ಹೊಂದಿಕೊಂಡಿದ್ದಾಳಾ’ ಎಂದು ಕೇಳಿದಾಗ ಹೂ ಎಂದು ಬಿಟ್ಟರೆ ಮುಗಿಯಿತು. ಹೊಂದಿಕೊಳ್ಳುವುದು, ಹೊಂದಿಸಿಕೊಳ್ಳುವುದು ಅನ್ಯರಿಗೆ ಬಿಟ್ಟ ವಿಚಾರ. ‘ಗಂಡ ಪಕ್ಕ ಬಂದಾಯ್ತು, ಇನ್ನು ನಾವೆಲ್ಲಾ ಎಲ್ಲಿ ನೆನಪಿರ್ತೀವಿ’ ಎಂದು ಮೂದಲಿಸೋ ಕಸಿನ್ಸ್ ಗಳಿಗೆಲ್ಲ ಅವಳ ನೋವಿನ ಮಿತಿ ಅರ್ಥವಾಗುವುದೇ ಇಲ್ಲ.
ಒಮ್ಮೆಲೇ ಪರಿಚಿತರೇ ಅಪರಿಚಿತರಂತೆ ಕಂಡಂತೆ.. ಅಪರಿಚಿತರೇ ಆತ್ಮೀಯರಾದಂತೆ… ಯಾರೋ ಬಂದು ಮಗಳೇ ಅಂದಂತೆ… ಇನ್ನ್ಯಾರಿಗೋ ಅಮ್ಮ ಎಂದಂತೆ… ತನ್ನದೆಲ್ಲವು ಇಂಚಿಂಚಾಗಿ ಸವೆದಂತೆ… ಇನ್ನೆಲ್ಲವೂ ತನ್ನವಾದಂತೆ…
ಹೀಗೆ ಎಷ್ಟೇ ಶತಮಾನಗಳು ಕಳೆದರು ಈ ಪರಿತಾಪ, ಬಂಧ ಖಾಯಂ…. ಎಲ್ಲವನ್ನು ಮನಸಿಗೆ ಹಿತವೆನಿಸುವ ಹಾಗೆ ನಡೆಸಿಕೊಂಡು ಹೋಗುವ ಶಕ್ತಿ ಹೆಣ್ಣಿಗಿರದಿದ್ದರೆ ಈ ಮೇಲೆ ಬರೆದ ಎಲ್ಲವು ಸಂಕೋಲೆಯಾಗಿ ಎಲ್ಲಿಗೆ ಕೊನೆಯಾಗುತ್ತಿದ್ದವೋ…
ಇವತ್ತೇ ಮದುವೆಯಾಗಿರೋ ಅನುಷ್ಕಾ ಹಾಗು ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ಅವರ ಚಿತ್ರಪಟವೇ ಸೂಕ್ತ ಎನಿಸಿತು ಈ ಪೋಸ್ಟಿಗೆ.. ತಪ್ಪು ನನ್ನದಲ್ಲ!
ಹೆಣ್ಣು ತನ್ನೊಳಗಿನ ಹಾಗೂ ಹೊರಗಿನ ಸಂಗತಿಗಳನ್ನು ಸಮರ್ಥವಾಗಿ ನಿಭಾಯಿಸುವ ಪರಿ ಅದ್ಭುತ.. ನಾರಿಶಕ್ತಿಗೆ ಜಯವಾಗಲಿ..
ಜಯವಾಗಲಿ 🙂
ಸಂಜೋತಾ……ನೀ ಬರೆದಿರುವದೆಲ್ಲ.. ಮದುವೆ ಆದ ಎಲ್ಲ ಹೆಣ್ಣು ಮಕ್ಕಳ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ….ಅದರಲ್ಲಿ …ನಂಗೆ..ತುಂಬಾ ಮನಸ್ಸಿಗೆ ತಟ್ಟಿದ್ದು… ಪರಿಚಿತರೇ ಅಪರಿಚಿತರಾಗಿ ಕಂಡತೆ..ಅಪರಿಚಿತರೇ ಆತ್ಮೀಯರಾದಂತೆ ಅನ್ನೊ ವಾಕ್ಯ (ಅಕ್ಷರಶಃ ಸತ್ಯ)….ಖುಷಿ ಆಗತ್ತೆ ನೀ ಬರೆದಿರೊದನ್ನ ಓದೊಕ್ಕೆ….( ನನ್ನ ಗೆಳತಿ ಅನ್ನೊ ಖುಶಿನು ಇದೆ)
Thank you so much Kane 🙂
Thank you so much, Kane 🙂